Homeಪುಸ್ತಕ ವಿಮರ್ಶೆ’ದ ಇಂಡಿಯನ್ಸ್- ಹಿಸ್ಟರೀಸ್ ಆಫ್ ಸಿವಿಲೈಸೇಶನ್' ಪುಸ್ತಕದ ಪರಿಚಯ ಪ್ರಬಂಧದ ಆಯ್ದ ಭಾಗ

’ದ ಇಂಡಿಯನ್ಸ್- ಹಿಸ್ಟರೀಸ್ ಆಫ್ ಸಿವಿಲೈಸೇಶನ್’ ಪುಸ್ತಕದ ಪರಿಚಯ ಪ್ರಬಂಧದ ಆಯ್ದ ಭಾಗ

- Advertisement -
- Advertisement -

ಕಾಲವು ನಿಜವಾಗಿಯೂ ಅಸ್ತಿತ್ವದಲ್ಲಿ ಇದೆಯೇ ಅಥವಾ ಅದು ಕಾಲ್ಪನಿಕ ಪೂರ್ಣತೆಯೇ ಎಂದು ನಿರ್ಧರಿಸಲು ಕಷ್ಟ. ತತ್ವ ಮೀಮಾಂಸೆಯ ಅನಿಶ್ಚಿತತೆಯನ್ನು ಬದಿಗಿಟ್ಟು, ಮಾನವ ವ್ಯವಹಾರಗಳು- ಅವುಗಳ ಮೇಲೆ, ವ್ಯಕ್ತಿಗಳು ಮತ್ತು ಕುಟುಂಬಗಳಾಗಿರಲಿ, ಸಮಾಜಗಳಾಗಿರಲಿ ಅಥವಾ ದೇಶಗಳೇ ಆಗಿರಲಿ- ಅವರ ಎಲ್ಲಾ ಸಾಮೂಹಿಕ ರೂಪಗಳ ಭೂತ ಮತ್ತು ವರ್ತಮಾನದ ನಡುವಿನ ನಿರಂತರವಾದ ಅನ್ಯೋನ್ಯ ಸಂಬಂಧದ ಆಳವಾದ ಛಾಪನ್ನು ಹೊತ್ತುಕೊಂಡು ನಡೆಯುತ್ತವೆ. ಸದ್ಯದ ವರ್ತಮಾನದ ವಸ್ತು, ಸಂಸ್ಕೃತಿ, ಮತ್ತು ಸೈದ್ಧಾಂತಿಕ ವಸ್ತುಸ್ಥಿತಿಗಳ ಆಧಾರದ ಮೇರೆಗೆ, ಸಮಾಜಗಳು ತಮ್ಮ ಭೂತಕಾಲವನ್ನು, ಅಥವಾ ಹೀಗೆ ಹೇಳುವುದಾದರೆ ವಿವಿಧ ಹಾಗೂ ನಿರಂತರವಾಗಿ ಬದಲಾಗುವ ಭೂತಕಾಲವನ್ನು ಪರಿಕಲ್ಪಿಸುತ್ತವೆ, ಒಳಗೊಳ್ಳುತ್ತವೆ, ನೆಲೆಗೊಳಿಸಿರುತ್ತವೆ ಮತ್ತು ಪ್ರತಿನಿಧಿಸುತ್ತವೆ. ಇದು ನಿರಂತರವಾಗಿ ಪುನರ್‌ರಚನೆಗೊಳ್ಳುವ ಪ್ರಕ್ರಿಯೆಯಲ್ಲಿ ಇರುವುದರಿಂದಾಗಿ ಭೂತಕಾಲದ ಯಾವುದೇ ಒಂದು ಆವೃತ್ತಿ ಮಾತ್ರವೇ ಸಂಪೂರ್ಣ ಅಪ್ಪಟತನದ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಸಾಧ್ಯವಿಲ್ಲ. ಈ ಪರಿಚಿತವಾದ ಅನಿಶ್ಚಿತತೆಗಳ ಹೊರತಾಗಿಯೂ ಇತಿಹಾಸದ ಸ್ಥಾಪಿತವಾದ ವೈಜ್ಞಾನಿಕ ಸಿದ್ಧಾಂತದ ನಿಯಮಗಳು- ಒಂದು ಸಮಾಜದ ಭೂತದ ಬಗೆಗಿನ ಮಾತುಕತೆಗಳು ಪುರಾಣ, ಕಲ್ಪನೆ, ಭ್ರಮೆ ಮತ್ತು ಹಳೆಯದರ ಬಯಕೆಯ ಕನವರಿಕೆಗಳಿಂದ ದೂರ ಇರಬೇಕೆಂದು ನಿರೀಕ್ಷಿಸುತ್ತವೆ.

ಶೋಧನೆಯ ಒಂದು ಕ್ಷೇತ್ರವಾಗಿ ಬಹುಮುಖಿಯಾದ ಇತಿಹಾಸದ ಮುಕ್ತತೆಯು- ಇತಿಹಾಸದ ಕಥನವನ್ನು ಅತಾರ್ಕಿಕವಾದ ಮತ್ತು ಅಸಮರ್ಥನೀಯ ಪ್ರತಿಪಾದನೆಗಳಿಂದ ಬದಲಿಸಿ ಕೂರಿಸಲು ಬಹುಸಂಖ್ಯಾತವಾದಿ ರಾಜಕಾರಣ ಮತ್ತು ಸರ್ವಾಧಿಕಾರಿ ಪ್ರಭುತ್ವಗಳಿಗೆ ಅವಕಾಶ ಮಾಡಿಕೊಡುತ್ತದೆ. ಅವು- ತಾವು ದ್ವೇಷಕ್ಕೆ ಗುರಿಪಡಿಸಲು ಬಯಸುವ ಜನರ ಪೂರ್ವಜರಿಂದ ಆಗಿದೆ ಎಂದು ಗ್ರಹಿಸಲಾಗುವ ಅನ್ಯಾಯದ ವಿರುದ್ಧ ದ್ವೇಷದ ಭಾವನೆಯನ್ನು ತಾರಕಕ್ಕೆ ಏರಿಸುವಂತವುಗಳಾಗಿರುತ್ತವೆ. ಸಮಾಜದ ಪ್ರಬಲ ವರ್ಗಗಳ ಆತ್ಮ ಸನ್ಮಾನವನ್ನು ಉಬ್ಬಿಸಲು ಇಂತಾ ಪ್ರಭುತ್ವಗಳು, ಭವ್ಯವಾದ ಕಾಲ್ಪನಿಕ ಭೂತಕಾಲದ ಯುಗವನ್ನು- ಅವು ನಿಯಂತ್ರಿಸಲು ಮತ್ತು ಮುನ್ನಡೆಸಲು ಬಯಸುವ ಜನರ ಒಂದು “ಅಗತ್ಯ” ಎಂಬಂತೆ ಹುಟ್ಟುಹಾಕುತ್ತವೆ; ಇಂಥ ಕಾಲ್ಪನಿಕ ಕಥಾನಕಗಳು ಮತ್ತು ದಾವೆಗಳು ಹಿಂದಿನ ವೃತ್ತಿಪರ ವಿಜ್ಞಾನಿಗಳು, ಪುರಾತತ್ವ ಶಾಸ್ತ್ರಜ್ಞರು ಮತ್ತು ಇತಿಹಾಸಕಾರರು ಜಾಗರೂಕತೆಯಿಂದ ರಚಿಸಿದ ಸತ್ಯಕಥಾನಕಗಳಿಗಿಗಿಂತ ಎಷ್ಟೊಂದು ದೂರವಿದ್ದರೂ ಪರವಾಗಿಲ್ಲ; ಅವು ಹೇಗೆ ಹಿಂದಿನ ನಿಜವಾದ ಸಾಧನೆಗಳನ್ನು ಬದಿಗೆ ಸರಿಸುತ್ತವೆ ಎಂಬುದೂ ಗಣನೆಗೆ ಬರುವುದಿಲ್ಲ. ಪ್ರಸ್ತುತ ಭಾರತದಲ್ಲಿ ಶೈಕ್ಷಣಿಕವಾಗಿ ಬಹಳ ಪರಿಶ್ರಮದಿಂದ ರಚಿಸಲಾದ ಸ್ಥಾಪಿತ ಕಥಾನಕಗಳಿಂದ ದೂರವಾಗಿ, ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಪುನರ್‌ರಚಿಸಲಾಗುತ್ತಿರುವ ಜೀವಂತ ಉದಾಹರಣೆಯನ್ನು ನಾವು ನೋಡುತ್ತಿದ್ದೇವೆ. ಈ ಪುಸ್ತಕದ ಉಗಮಕ್ಕೆ- ಇತ್ತೀಚಿನ ವರ್ಷಗಳಲ್ಲಿ ಇತಿಹಾಸದ ಕುರಿತ ವೈಜ್ಞಾನಿಕ ದೃಷ್ಟಿಕೋನ ಮತ್ತು ಸಿದ್ಧಾಂತದಿಂದ ಪ್ರೇರಿತವಾದ ಇತಿಹಾಸವನ್ನು ತಿರುಚಲು ಮಾಡಲಾಗುತ್ತಿರುವ ಉದ್ದೇಶಪೂರ್ವಕ ಪ್ರಯತ್ನಗಳ ನಡುವಿನ ವಾಗ್ವಾದಗಳು ಕಾರಣವಾಗಿದೆ.

ಸೆಪ್ಟೆಂಬರ್ 14, 2020ರಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ (ಪಿಐಬಿ) ಒಂದು ಪತ್ರಿಕಾ ಪ್ರಕಟಣೆಯು- ಭಾರತೀಯ ಸಂಸ್ಕೃತಿಯ ಮೂಲ ಮತ್ತು ವಿಕಾಸದ ಸಮಗ್ರ ಐತಿಹಾಸಿಕ ಅಧ್ಯಯನವನ್ನು ಮಾಡಲು ಭಾರತ ಸರಕಾರದ ಪರವಾಗಿ ಸಂಸ್ಕೃತಿ ಸಚಿವರು ಒಂದು ತಜ್ಞರ ಸಮಿತಿಯನ್ನು ರಚಿಸಿದ್ದಾರೆ ಎಂದು ಹೇಳಿತ್ತು; “12,000 ವರ್ಷಗಳ ಹಿಂದಿನಿಂದ ಈಗಿನ ತನಕದ ಭಾರತೀಯ ಸಂಸ್ಕೃತಿಯ ಮೂಲ ಹಾಗೂ ವಿಕಾಸ ಮತ್ತು ಜಗತ್ತಿನ ಇತರ ಸಂಸ್ಕೃತಿಗಳ ಜೊತೆಗೆ ಅದರ ಅಂತರ್ ಸಂಬಂಧಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು” ಈ ಸಮಿತಿಯನ್ನು ರಚಿಸಲಾಗಿತ್ತು.

ಈ ಸಮಿತಿಯು ಮೊದಲನೆಯದೇನಲ್ಲ. ಹೆಚ್ಚು ಕಡಿಮೆ ಇದೇ ಸದಸ್ಯರನ್ನು ಒಳಗೊಂಡಂತಾ ಇಂತದ್ದೇ ಸಮಿತಿಯನ್ನು 2017ರಲ್ಲೂ ರಚಿಸಲಾಗಿತ್ತು. ಈ ಸಮಿತಿಯಲ್ಲಿ ಯಾವುದೇ ಮಹಿಳೆ ಇರಲಿಲ್ಲ; ಮಾತ್ರವಲ್ಲದೇ ಈಶಾನ್ಯ ರಾಜ್ಯಗಳ ಯಾವುದೇ ತಜ್ಞರಾಗಲೀ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಯಾವುದೇ ಪ್ರತಿನಿಧಿಗಳಾಗಲೀ ಇರಲಿಲ್ಲ. ಒಬ್ಬರೂ ಇರಲಿಲ್ಲ. ಹಿಂದೂ ಹೊರತಾಗಿ ಬೇರಾವುದೇ ಧರ್ಮದವರ್‍ಯಾರೂ ಇರಲಿಲ್ಲ. ಈ ಸಮಿತಿಯ ಸಂರಚನೆಯಿಂದಲೇ, ಈ ಸಮಿತಿಯು ರಚಿಸುವ ಇತಿಹಾಸವು- ಪುರುಷ ಪ್ರಧಾನವಾದ, ಉತ್ತರ ಭಾರತೀಯ, ಮೇಲ್ಜಾತಿಯ, ಹಿಂದುತ್ವದ ಪಕ್ಷಪಾತ ಹೊಂದಿರುವ ಸಾಧ್ಯತೆಯನ್ನು ಸ್ಪಷ್ಟವಾಗಿ ಸೂಚಿಸುತ್ತಿತ್ತು. ಆ ಮಟ್ಟಿಗೆ ಅದು ಭಾರತದ ಭೂತಕಾಲವನ್ನು ಅದರ ಸಂಪೂರ್ಣತೆಯೊಂದಿಗೆ ಪ್ರತಿಫಲಿಸುವುದಕ್ಕೆ ಸಾಧ್ಯವಾಗದಿರುವ ಕೊರತೆಯನ್ನು ಹೊಂದಿತ್ತು.

ಮಾರ್ಚ್ 6, 2018ರ ರಾಯಿಟರ್ಸ್ ಸುದ್ದಿಸಂಸ್ಥೆಯ ವರದಿಯೊಂದು 2017ರ ಈ ಸಮಿತಿಯ ಉದ್ದೇಶಗಳನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಿದೆ. ಅದರ ಭಾಗಗಳನ್ನು ಇಲ್ಲಿ ಕೊಡಲಾಗಿದೆ:

“ಕಳೆದ ವರ್ಷದ ಜನವರಿಯ ಮೊದಲ ವಾರದಲ್ಲಿ ಭಾರತೀಯ ವಿದ್ವಾಂಸರ ಗುಂಪೊಂದು ಕೇಂದ್ರ ಹೊಸದಿಲ್ಲಿಯಲ್ಲಿನ ಒಂದು ಹಸಿರು ತೋಟದಲ್ಲಿರುವ ಬಿಳಿ ಬಂಗಲೆಯೊಂದರಲ್ಲಿ ಸೇರಿತ್ತು. ಅವರ ಚರ್ಚೆಯ ಕೇಂದ್ರಬಿಂದು: ದೇಶದ ಇತಿಹಾಸವನ್ನು ಮತ್ತೆ ಬರೆಯುವುದು ಹೇಗೆ.

ಇದನ್ನೂ ಓದಿ: ಬ್ರಿಟನ್ ಕವಿ ಬ್ರಯಾನ್ ಪ್ಯಾಟನ್ ಅವರ ಹತ್ತು ಪದ್ಯಗಳು

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹಿಂದೂ ರಾಷ್ಟ್ರೀಯವಾದಿ ಸರಕಾರ ಸದ್ದಿಲ್ಲದೆಯೇ ಸುಮಾರು ಆರು ತಿಂಗಳುಗಳ ಹಿಂದೆ ಈ ಸಮಿತಿಯನ್ನು ರಚಿಸಿದೆ. ಅದರ ಅಸ್ತಿತ್ವದ ವಿವರಗಳನ್ನು ಇಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿದೆ.

ರಾಯಿಟರ್ಸ್ ವಿಶ್ಲೇಷಿಸಿರುವ ಸಭೆಯ ಕಾರ್ಯಕ್ರಮದ ದಾಖಲೆಗಳು, ಸಮಿತಿಯ ಸದಸ್ಯರ ಜೊತೆಗೆ ನಡೆಸಿದ ಸಂದರ್ಶನಗಳ ಆಧಾರಗಳ ಪ್ರಕಾರ ಸಮಿತಿಗೆ ನಿಗದಿಪಡಿಸಲಾದ ಗುರಿಗಳೆಂದರೆ: ಇಂದಿನ ಹಿಂದೂಗಳು ಹಲವು ಸಾವಿರ ವರ್ಷಗಳ ಹಿಂದಿನ, ಭಾರತದ ಮೊದಲ ನಿವಾಸಿಗಳ ನೇರ ವಂಶಜರು ಎಂದು ಸಾಬೀತುಪಡಿಸುವುದಕ್ಕೆ ಪುರಾತತ್ವ ಶೋಧನೆಗಳು ಮತ್ತು ಡಿಎನ್‌ಎಯನ್ನು ಬಳಸಿಕೊಳ್ಳುವುದು ಮತ್ತು ಪುರಾತನವಾದ ಹಿಂದೂ ಧಾರ್ಮಿಕ ಗ್ರಂಥಗಳು ಮಿಥ್ಯೆಯಾಗಿರದೇ ವಾಸ್ತವಿಕವಾದವುಗಳು ಎಂಬುದಕ್ಕೆ ವಾದಗಳನ್ನು ಹುಟ್ಟಿಹಾಕುವುದು.

ಹಲವು ಧರ್ಮಗಳ ಸಂಗಮವಾಗಿರುವ 130ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ, ರಾಜಕೀಯ ಅಧಿಕಾರವನ್ನು ಪಡೆಯುವುದಕ್ಕೂ ಮೀರಿ ಹಿಂದೂ ರಾಷ್ಟ್ರೀಯವಾದಿಗಳ ಮಹತ್ವಾಕಾಂಕ್ಷೆಯು ವಿಸ್ತರಿಸುತ್ತದೆ ಎಂದು ಈ 14 ಸದಸ್ಯರ ಸಮಿತಿಯ ಸದಸ್ಯರು ಮತ್ತು ಮೋದಿ ಸರಕಾರದ ಸಚಿವರ ಜೊತೆಗಿನ ಸಂದರ್ಶನಗಳು ಸೂಚಿಸುತ್ತವೆ. ಅಂತಿಮವಾಗಿ ಅವರು ಭಾರತವು ಹಿಂದೂಗಳ ಮತ್ತು ಹಿಂದೂಗಳಿಗಾಗಿಯೇ ಇರುವ ರಾಷ್ಟ್ರ ಎಂಬ ತಮ್ಮ ಧಾರ್ಮಿಕ ದೃಷ್ಟಿಕೋನಗಳಿಗೆ ಸರಿಹೊಂದುವಂಥ ರಾಜಕೀಯ ಅಸ್ಮಿತೆಯನ್ನು ರೂಪಿಸಲು ಬಯಸುತ್ತಾರೆ.”

ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಪೋಷಕನಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) ಭಾರತದ ಭೂತಕಾಲವನ್ನು ಮರುರೂಪಿಸುವ ಸಲುವಾಗಿ ಬಳಸಲುದ್ದೇಶಿಸಿರುವ ವಿಜ್ಞಾನದ ಎರಡು ಶಾಖೆಗಳೆಂದರೆ, ಒಂದನೆಯದು ತಳಿಶಾಸ್ತ್ರ (Genetics)- ಜನಸಂಖ್ಯಾ ತಳಿಶಾಸ್ತ್ರದ ಸಂಶೋಧನಾ ಪ್ರಬಂಧಗಳು ಹಲವಾರು ವರ್ಷಗಳ ಭಾರತೀಯ ಇತಿಹಾಸದ ಕುರಿತ ಆರೆಸ್ಸೆಸ್ಸಿನ ತಿಳಿವಳಿಕೆಗೆ ಯಾವುದೇ ರೀತಿಯ ಆಧಾರ ಒದಗಿಸದೇ ಇದ್ದರೂ ಕೂಡಾ- ಮತ್ತು ಎರಡನೆಯದು ಪುರಾತತ್ವ ಶಾಸ್ತ್ರ. ತಾನು ಈಗಾಗಲೇ ರೂಪಿಸಿರುವ ಸಿದ್ಧ ತೀರ್ಮಾನಗಳಿಗೆ ಆಧಾರವಾಗಿ ಈ ಎರಡು ವಿಜ್ಞಾನ ಶಾಖೆಗಳ ಹಳತಾಗಿರುವ, ತಪ್ಪಾಗಿ ಅನ್ವಯಿಸಲಾಗಿರುವ ಮತ್ತು ಕಪೋಲಕಲ್ಪಿತವಾದ, ಯದ್ವಾತದ್ವಾ ಆಯ್ಕೆ ಮಾಡಲಾದ ಫಲಿತಾಂಶಗಳನ್ನು ಪ್ರಚಾರ ಮಾಡಿ ಹರಡುವ ಕಲೆಯಲ್ಲಿ ಆರೆಸ್ಸೆಸ್ ಈಗಾಗಲೇ ನಿಷ್ಣಾತವಾಗಿದೆ. ಇಂತಾ ವಿಷಯಗಳನ್ನು ಸುಲಭವಾಗಿ ಬಲಿಬೀಳುವ ಗಿರಾಕಿಗಳಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡಲಾಗುತ್ತಿದೆ.

ಸೆಪ್ಟೆಂಬರ್ 2019ರಲ್ಲಿ ಸುಪ್ರಸಿದ್ಧ ತಳಿಶಾಸ್ತ್ರಜ್ಞ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಪ್ರಾಧ್ಯಾಪಕ ಡೇವಿಡ್ ರೈಖ್ (David Reich) ಹಾಗೂ ವಿಶ್ವದಾದ್ಯಂತದ ಕೆಲವು ಅತ್ಯಂತ ಗೌರವಾನ್ವಿತ ವಿಶ್ವವಿದ್ಯಾಲಯಗಳ ವಿಜ್ಞಾನಿಗಳ ಸಹಕಾರಿ ಗುಂಪು ಜೊತೆಗೆ ಬಂದು ದಕ್ಷಿಣ ಏಷ್ಯಾದ ಇತಿಹಾಸಪೂರ್ವದ ಜನಸಮುದಾಯಗಳ ಕುರಿತು ಖಚಿತವಾದ ವರದಿಯೊಂದನ್ನು ರಚಿಸಿದರು. ಅವರ ಪ್ರಬಂಧವು “ಸೈನ್ಸ್” ಜರ್ನಲ್‌ನಲ್ಲಿ ಪ್ರಕಟವಾಗಿ, ಅದನ್ನು ಭಾಗವಹಿಸಿದ ವಿಶ್ವವಿದ್ಯಾಲಯಗಳ ವೆಬ್ ಪೋರ್ಟಲ್‌ಗಳಲ್ಲಿ ಹಾಕಲಾಯಿತು. ಈ ಎಲ್ಲಾ ತಜ್ಞರ ಸಾಮೂಹಿಕ ಕೆಲಸವು ಸಂಸ್ಕೃತದ ಹುಟ್ಟಿನ ಕಾಲವು ಸಿಂಧೂ ನಾಗರಿಕತೆಗೆ ಮುಂಚಿನದ್ದಲ್ಲ ಎಂದು ತೋರಿಸಿಕೊಟ್ಟಿತು.

ಡೇವಿಡ್ ರೈಖ್

ಹರಪ್ಪದ ಜನರ ಮುಂದುವರಿಕೆಯಾಗಿ ವೇದಕಾಲದ ಜನರು ಬಂದರು ಎಂಬ ಆರೆಸ್ಸೆಸ್ ವಾದ ತಪ್ಪಾಗಿದೆ. ಯಾಕೆಂದರೆ, ಇಂಡೋ-ಆರ್ಯನ್ ಜನರು ಯುರೇಷಿಯಾದ ಸ್ಟೆಪ್ಪಿಸ್ ಹುಲ್ಲುಗಾವಲುಗಳಿಂದ ಸಿಂಧೂ ನಾಗರಿಕತೆಯು ಅವನತಿಯ ನಂತರವಷ್ಟೇ ಬಂದರು ಎಂದು ಡೇವಿಡ್ ರೈಖ್ ಅವರ ಅಧ್ಯಯನವು ತೋರಿಸಿಕೊಟ್ಟಿದೆ. ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ, ಭಾರತದ ಇತಿಹಾಸಪೂರ್ವ ಜನರು- ಸಿಂಧೂ ನಾಗರಿಕತೆಗೂ ಮೊದಲಿನಿಂದಲೇ ಸಂಸ್ಕೃತ ಮಾತನಾಡುತ್ತಿದ್ದ, ಆ ನಾಗರಿಕತೆಯ ಮುಂದುವರಿಕೆಯ ಜನರಾಗಿದ್ದರು ಎಂಬುದು ಆರೆಸ್ಸೆಸ್ಸಿನ ವಾದವಾಗಿದೆ. ಹದಿನೆಂಟನೇ ಶತಮಾನದಲ್ಲಿ ಯುರೋಪಿನ ವಿವಿಧ ಒಳನಾಡುಗಳಲ್ಲಿ “ಆರ್ಯ”ರ ಪುರಾತನ ತಾಯ್ನಾಡಿನ (ಪಿತೃಭೂಮಿ) ಬಗ್ಗೆ ಸಕ್ರಿಯ ಚರ್ಚೆ ನಡೆದಿತ್ತು.

ಈ ಚರ್ಚೆಗೆ ಈಗ ವಿದಾಯ ಹಾಡಲಾಗಿದೆ. ಆದರೆ, ಆರ್ಯರು ಮೂಲತಃ ಸಿಂಧೂ-ಸರಸ್ವತಿ ಪ್ರದೇಶಕ್ಕೆ ಸೇರಿದವರು ಮತ್ತು ತಮಗೆ ಗೊತ್ತಿದ್ದ ಜಗತ್ತಿನ ವಿವಿಧ ಭಾಗಗಳಿಗೆ ಹರಡಿಕೊಂಡು ತಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಪಸರಿಸಿ “ವಿಶ್ವಗುರು”ಗಳಾದರು ಎಂದು ಕಲ್ಪಿಸಿಕೊಳ್ಳಲು ಆರೆಸ್ಸೆಸ್ಸಿನ “ಇತಿಹಾಸ”ವು ಬಯಸುತ್ತದೆ. ಈ ನಿಲುವು ತೀರಾ ನಂಬಲಸಾಧ್ಯವಾದ, ಅವಾಸ್ತವಿಕ, ಭ್ರಮಾಧೀನ ಕಲ್ಪನೆಯಾಗಿದೆ. ಈ ಊಹೆಗೆ ಪುರಾತತ್ವ ಶಾಸ್ತ್ರದಲ್ಲಾಗಲೀ, ತಳಿಶಾಸ್ತ್ರದಲ್ಲಾಗಲೀ ಕಿಂಚಿತ್ತೂ ಆಧಾರವಿಲ್ಲ. ರೈಖ್ ಅವರ ಮಹತ್ವದ ಪ್ರಬಂಧದ ಸಾರಾಂಶವು ಇದಕ್ಕೆ ತದ್ವಿರುದ್ಧವಾದುದನ್ನು ಹೇಳುತ್ತದೆ.

“ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಮಾನವ ಸಮುದಾಯದ ಉಗಮ”

“ಪರಿಚಯ ಮತ್ತು ತರ್ಕ: ಯುರೇಶಿಯಾದಲ್ಲಿ ಬೇಸಾಯ, ಪಶುಪಾಲನೆ, ಭಾಷೆಗಳ ಹಂಚಿಕೆ ಮತ್ತು ಪರಿವರ್ತನೆಗಳ ಪ್ರಮಾಣಗಳ ಜೊತೆಗೆ ಜನರ ಚಲನೆ ಅಥವಾ ವಲಸೆಯನ್ನು ಸ್ಪಷ್ಟಗೊಳಿಸಲು ನಾವು ಕಳೆದ 8,000 ವರ್ಷಗಳ, ಮುಖ್ಯವಾಗಿ ಮಧ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಅತ್ಯಂತ ಉತ್ತರ ಭಾಗದ 523 ವ್ಯಕ್ತಿಗಳ ಡಿಎನ್‌ಎ ಮೂಲಕ ವಂಶವಾಹಿ ವಿನ್ಯಾಸವನ್ನು (genome) ವರದಿ ಮಾಡುತ್ತಿದ್ದೇವೆ.

ಫಲಿತಾಂಶ: ಬೇಸಾಯದ ಉಗಮದ ನಂತರ ಜನರ ಚಲನೆ ಅಥವಾ ವಲಸೆಯ ಪರಿಣಾಮವಾಗಿ ಯುರೇಷಿಯಾದ ಉದ್ದಗಲಕ್ಕೂ ತಳಿಯ ವೈವಿಧ್ಯಗಳು ಉಂಟಾದವು ಮತ್ತು ಅವುಗಳನ್ನು ಏಳು ಅತ್ಯಂತ ವೈವಿಧ್ಯಮಯವಾದ ಜನಸಮುದಾಯಗಳ ಮಿಶ್ರಣವಾಗಿ ಗುರುತಿಸಬಹುದು. ಒಂದು ಪ್ರಮುಖ ತಳಿ ವೈವಿಧ್ಯ ಎಂದರೆ, ಹೆಚ್ಚು ಅನಾತೊಲಿಯನ್ ರೈತ ಸಂಬಂಧಿ ಪೂರ್ವಜರು ಮತ್ತು ಪೂರ್ವದಲ್ಲಿ ಹೆಚ್ಚು ಇರಾನಿಯನ್ ರೈತ ಸಂಬಂಧಿ ಪೂರ್ವಜರಿಂದ ವಾಯುವ್ಯ ಏಷ್ಯಾದಲ್ಲಿ ರೂಪುಗೊಂಡು ನವಶಿಲಾಯುಗದಲ್ಲಿ ಆರಂಭಗೊಂಡು ನಂತರ ಕಂಚಿನ ಯುಗಕ್ಕೆ ಮುಂದುವರಿದಂತದ್ದು. ಈ ಶ್ರೇಣಿಯು ಮಧ್ಯ ಏಷ್ಯಾದ ಮರುಭೂಮಿ ಓಯೆಸಿಸ್‌ಗಳಿಗೆ ವಿಸ್ತರಿಸಿತು ಮತ್ತು ಇದುವೇ ಕಂಚಿನ ಯುಗದ ಬ್ಯಾಕ್ಟ್ರಿಯಾ ಮಾರ್ಜಿಯಾನಾ ಆರ್ಕಿಯಲಾಜಿಕಲ್ ಕಾಂಪ್ಲೆಕ್ಸ್ (ಬಿಎಎಂಸಿ)ನ ಜನರ ಪೂರ್ವಜರ ಪ್ರಾಥಮಿಕ ಮೂಲ. ಇದು ನೆಲೆನಿಂತ ಜನರ (domesticates) ಹರಡುವಿಕೆಯನ್ನು, ಪುರಾತತ್ವ ಶಾಸ್ತ್ರದಂತೆ ದಾಖಲಿಸಲಾದ ವಲಸೆಯ ಕಲ್ಪನೆಗೆ ಮತ್ತು ಇಂಥ ವಲಸೆ ವಿವಿಧ ನೆಲೆಗಳಿಂದ ನಡೆಯಿತು ಎಂಬ ಕಲ್ಪನೆಗೆ ಆಧಾರ ಒದಗಿಸುತ್ತದೆ.

ಇದನ್ನೂ ಓದಿ: ಪ್ರೊ. ಕಾರ್ಲೋಸರ ‘ಶಂಬಾಲ’ ಎಂಬ ರಾಜಕೀಯ ಕಾದಂಬರಿ

ಈ ಬಿಎಎಂಸಿಯ ಮುಖ್ಯ ಜನಸಮುದಾಯವು ಸ್ಟೆಪ್ಪಿ ಪಶುಪಾಲಕ ಪೂರ್ವಜರನ್ನು ಹೊಂದಿರಲಿಲ್ಲ ಮತ್ತು ನಂತರದ ದಕ್ಷಿಣ ಏಷ್ಯನ್ನರ ಬೆಳವಣಿಗೆಯಲ್ಲಿ ಗಮನಾರ್ಹ ಪಾಲು ಸಲ್ಲಿಸಲಿಲ್ಲ. ಆದರೆ, ಬಿಎಎಂಸಿ ಸೈಟುಗಳ ಹೊರಭಾಗದ (outlier) ವ್ಯಕ್ತಿಗಳಲ್ಲಿ ಸ್ಟೆಪ್ಪಿ ಪಶುಪಾಲಕರ ಪೂರ್ವಜತ್ವವು ಕ್ರಿಸ್ತಪೂರ್ವ ಎರಡನೇ ಶತಮಾನದ ಹೊತ್ತಿಗೆ, ಅಂದರೆ ಅದು ದಕ್ಷಿಣ ಸ್ಟೆಪ್ಪಿಯಲ್ಲಿ ಕಾಣಿಸಿಕೊಂಡ ಹೊತ್ತಿನಲ್ಲೇ ಕಾಣಿಸಿಕೊಂಡಿತು. ದಕ್ಷಿಣ ಏಷ್ಯಾದ ಅತ್ಯಂತ ಉತ್ತರ ಭಾಗದ ಸ್ವಾಟ್ ಕಣಿವೆಯ ಪುರಾತನ ವ್ಯಕ್ತಿಗಳ ದತ್ತಾಂಶವನ್ನು ಬಳಸಿಕೊಂಡು- ಸ್ಟೆಪ್ಪಿ ಪೂರ್ವಜತ್ವವು ನಂತರ ಕ್ರಿಸ್ತಪೂರ್ವ ಎರಡನೇ ಶತಮಾನದ ಮೊದಲ ಅರ್ಧದಲ್ಲಿ ಇನ್ನಷ್ಟು ದಕ್ಷಿಣ ಭಾಗದಲ್ಲಿ ಸೇರಿಕೊಂಡಿತು ಮತ್ತು ಅದು ಆಧುನಿಕ ಜನಸಮುದಾಯಗಳಲ್ಲಿ 30 ಶೇಕಡಾದಷ್ಟು ಪಾಲು ಹೊಂದಿದೆ ಎಂದು ನಾವು ತೋರಿಸುತ್ತೇವೆ. ದಕ್ಷಿಣ ಏಷ್ಯಾದ ಸ್ಟೆಪ್ಪಿ ಪೂರ್ವಜತ್ವವು ಕಂಚಿನ ಯುಗದ ಪೂರ್ವ ಯುರೋಪಿನ ಜನರದ್ದೇ ಚಿತ್ರಣ (profile) ಹೊಂದಿದ್ದು, ಇಂಡೋ ಇರಾನಿಯನ್ ಮತ್ತು ಬಾಲ್ಟೋ ಸ್ಲಾವಿಕ್ ಭಾಷೆಗಳ ನಡುವೆ ಹಂಚಿಕೊಂಡ ವಿಶಿಷ್ಟ ಗುಣಲಕ್ಷಣಗಳು ಮತ್ತು ಎರಡೂ ಪ್ರದೇಶಗಳ ಮೇಲೆ ಪ್ರಭಾವ ಬೀರಿದ ಜನರ ಚಲನೆಯನ್ನು ಗುರುತಿಸಬಹುದು.

ಸಿಂಧೂ ನಾಗರಿಕತೆಯ ಜೊತೆ ಸಾಂಸ್ಕೃತಿಕ ಸಂಬಂಧ ಹೊಂದಿದ್ದ ಎರಡು ಸೈಟ್‌ಗಳಲ್ಲಿ ನಾವು ಗುರುತಿಸುವ ಹೊರವಲಯದ (outlier) ವ್ಯಕ್ತಿಗಳಲ್ಲಿ ನಾವು ಪತ್ತೆ ಹಚ್ಚುವ ಆಧುನಿಕ ದಕ್ಷಿಣ ಏಷ್ಯನ್ನರ ಪ್ರಾಥಮಿಕ ಪೂರ್ವಜತ್ವದ ಜನಸಮುದಾಯವು, ಇರಾನ್ ಹಾಗೂ ದಕ್ಷಿಣ ಏಷ್ಯಾದ ಹೊಲೋಸಿನ್ ಜನಸಮುದಾಯಗಳ ಮಿಶ್ರಣವಾಗಿದ್ದು, ಇದುವೇ ಸಿಂಧೂ ನಾಗರಿಕತೆಯ ಗುಣಸ್ವಭಾವವಾಗಿತ್ತು ಎಂದು ತರ್ಕಿಸುವುದನ್ನು ಸಾಧ್ಯಮಾಡಿಕೊಡುತ್ತದೆ. ಸಿಂಧೂ ನಾಗರಿಕತೆಯ ಅವನತಿಯ ನಂತರ ಈ ಜನಸಮುದಾಯವು ಸ್ಟೆಪ್ಪಿ ಪೂರ್ವಜತ್ವದ ವಾಯವ್ಯ ಗುಂಪುಗಳ ಜೊತೆ ಬೆರೆತು, ಪುರಾತನ ಉತ್ತರ ಭಾರತೀಯರ (“Ancestral North Indians”- ANI) ಮತ್ತು ಆಗ್ನೇಯ ಗುಂಪುಗಳ ಜೊತೆ ಬೆರೆತು ಪುರಾತನ ದಕ್ಷಿಣ ಭಾರತೀಯರ (“Ancestral North Indians”- ANI) ಉಗಮಕ್ಕೆ ಕಾರಣವಾಯಿತು. ಇವರ ನೇರ ಪೀಳಿಗೆಯನ್ನು ಇಂದು ದಕ್ಷಿಣ ಭಾರತದ ಆದಿವಾಸಿ ಗುಂಪುಗಳಲ್ಲಿ ಕಾಣಬಹುದು. ಈ ಎರಡು ಸಿಂಧೂ ಕಣಿವೆ ನಾಗರಿಕತೆ (ಐವಿಸಿ)ಯ ನಂತರದ ಗುಂಪುಗಳಾದ ಎಎನ್‌ಐ ಮತ್ತು ಎಎಸ್‌ಐಗಳ ಮಿಶ್ರಣವೇ ಇಂದು ದಕ್ಷಿಣ ಏಷ್ಯಾದ ಮುಖ್ಯ ತಳಿ ವೈವಿಧ್ಯದ ಮುಖ್ಯ ತಳಿಯನ್ನು ಮುಂದುವರಿಸುತ್ತಿವೆ.

ಉಪಸಂಹಾರ: ಹಿಂದಿನ ಸಂಶೋಧನೆಯು ಸ್ಟೆಪ್ಪಿಯಿಂದ ಯುರೋಪಿಗೆ ಕ್ರಿಸ್ತಪೂರ್ವ ಮೂರನೇ ಸಹಸ್ರಮಾನದ ಆರಂಭದಲ್ಲಿ ಭಾರೀ ಪ್ರಮಾಣದ ವಲಸೆಯನ್ನು ಮತ್ತು ಸಂಭಾವ್ಯ ಇಂಡೋ ಯುರೋಪಿಯನ್ ಭಾಷೆಗಳ ಹರಡುವಿಕೆಯನ್ನು ದಾಖಲಿಸಿತ್ತು. ನಾವು ಸ್ಟೆಪ್ಪಿ ಪೂರ್ವಜತ್ವವು ದಕ್ಷಿಣ ಏಷ್ಯಾಕ್ಕೆ ಹರಡುವುದಕ್ಕೆ ಕಾರಣವಾದ ಸಮಾನಾಂತರ ಘಟನಾ ಸರಣಿಯನ್ನು ಅನಾವರಣಗೊಳಿಸುತ್ತಾ, ಆ ಮೂಲಕ ಇಂಡೋ ಯುರೋಪಿಯನ್ ಭಾಷೆಗಳ ಹರಡುವಿಕೆಗೆ ಸಂಭಾವ್ಯ ವಾಹಕಗಳಾದ ಜನರ ವಲಸೆಯನ್ನು ದಾಖಲಿಸುತ್ತಿದ್ದೇವೆ.”

ಟೋನಿ ಜೋಸೆಫ್, ರವಿ ಕೋರಿಸೆಟ್ಟರ್ ಮತ್ತು ನಾನು ಈ ಪುಸ್ತಕವನ್ನು ಕುರಿತು ಕೆಲಸ ಮಾಡುತ್ತಿದ್ದಾಗ ತಳಿಶಾಸ್ತ್ರದ ಬಳಕೆಯ ಬಗ್ಗೆ ಸಾಕಷ್ಟು ವಿಚಲಿತಗೊಳಿಸುವ ಸುದ್ದಿಯೊಂದು ಇಂಗ್ಲಿಷ್ ಮಾಧ್ಯಮದ ಪತ್ರಿಕೆಯೊಂದರಲ್ಲಿ ಬಂತು. ಜೂನ್ 2022ರಲ್ಲಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ವರದಿಯೊಂದು- ಸಂಸ್ಕೃತಿ ಇಲಾಖೆಯು “ಶುದ್ಧ” ಸಮುದಾಯಗಳ ತಳಿಶಾಸ್ತ್ರದ ಪರಿಶೀಲನೆ ನಡೆಸಲು ಆಂಥ್ರೊಪೊಲಾಜಿಕಲ್ ಸರ್ವೇ ಆಫ್ ಇಂಡಿಯಾಕ್ಕೆ ಅನುದಾನ ಒದಗಿಸಿದೆ ಎಂದು ತಿಳಿಸಿತ್ತು. ಈ ಪ್ರಸ್ತಾಪವು- ಸುಜನನ (eugenics) ಮತ್ತು ಜನಾಂಗೀಯ ಪರಿಶುದ್ಧತೆಯ ಕುರಿತ ಭಯಾನಕವಾದ ನಾಜಿಗಳ ಭ್ರಮಾತ್ಮಕ ವ್ಯಾಮೋಹದ ನೆನಪುಗಳು ಮರುಕಳಿಸುವಂತೆ ಮಾಡಿತಲ್ಲದೆ, ಇದು ಎಷ್ಟೊಂದು ಆಘಾತಕಾರಿಯಾಗಿತ್ತೆಂದರೆ, ವಿಜ್ಞಾನಿಗಳ ಸಮುದಾಯವು ತಕ್ಷಣವೇ ಭಯ-ಆತಂಕದಿಂದ ಪ್ರತಿಕ್ರಿಯಿಸಿತು. ಕೆಲವೇ ದಿನಗಳಲ್ಲಿ ಅವರು ಸಂಸ್ಕೃತಿ ಸಚಿವಾಲಯಕ್ಕೆ ಒಂದು ಬಹಿರಂಗ ಪತ್ರವನ್ನು ಬರೆದರು. ಅದರಲ್ಲಿ ನೂರಕ್ಕೂ ಹೆಚ್ಚು ಸಹಿಗಳಿದ್ದವು. ಅವರಲ್ಲಿ ದೇಶದ ಅತ್ಯಂತ ಪ್ರಮುಖ ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆಗಳ ಶ್ರೇಷ್ಠ ಪ್ರಾಧ್ಯಾಪಕರು ಸೇರಿದ್ದರು.

ಆದರೆ, ಸಚಿವಾಲಯವು ಇದೊಂದು ಸುಳ್ಳು ಸುದ್ದಿ ಎಂದೇ ವಾದಿಸುತ್ತಾ ಬಂತು. ನಂತರ ಇನ್ನಷ್ಟು ತನಿಖೆ ಮಾಡಿದ ಮೇಲೆ, ಆಂಥ್ರೊಪೊಲಾಜಿಕಲ್ ಸರ್ವೇ ಆಫ್ ಇಂಡಿಯಾವು ನಿಜವಾಗಿಯೂ ಹಿಂದೆ “ಅತ್ಯಂತ ಪ್ರಾಚೀನ” ಎಂದು ಕರೆಯಲಾಗಿದ್ದ- ಎಂದರೆ, ಭಾರತದಲ್ಲಿ ಅವರ ದೀರ್ಘ ಪೂರ್ವಜತ್ವವನ್ನು ಸೂಚಿಸುವ ಕೆಲವು ಆದಿವಾಸಿ ಸಮುದಾಯಗಳ ಮೇಲೆ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಬಹಿರಂಗವಾಯಿತು.

ಈ ಸಂದರ್ಭದಲ್ಲಿ ವಿದ್ವಾಂಸರ ಒಂದು ಸಮುಚ್ಚಯವನ್ನು ಸ್ಥಾಪಿಸಿ, ಭಾರತದ ಇತಿಹಾಸಪೂರ್ವ, ಮೂಲ ಇತಿಹಾಸ (protohistory) ಮತ್ತು ಇತಿಹಾಸದ ಅವಧಿಯ ಭಾರತದ ಭೂತಕಾಲದ ಕುರಿತು ಒಂದು ಸಮಗ್ರವಾದ ಕಥಾನಕವನ್ನು ಪ್ರಸ್ತುತಪಡಿಸುವ ಅಗತ್ಯವಿದೆ ಎಂದು ನನಗನಿಸಿತು. ನಾನು ಯುಎಸ್‌ಎಯಲ್ಲಿ ಇತಿಹಾಸ ಕಲಿಸುವ ಪ್ರೊಫೆಸರ್ ರಾಜ್‌ಮೋಹನ್ ಗಾಂಧಿ ಮತ್ತು ಪ್ರೊಫೆಸರ್ ವಿನಯ್ ಲಾಲ್ ಅವರಿಗೆ ಬರೆದು, ಭಾರತದ ಭೂತಕಾಲದ ಬಗ್ಗೆ ವರದಿ ಮಾಡಲು ವಿವಿಧ ವಿದ್ವಾಂಸರನ್ನು ಜೊತೆಸೇರಿಸಿ ಒಂದು ಸಂಸ್ಥೇತರ ವೇದಿಕೆಯನ್ನು ಸ್ಥಾಪಿಸಲು ಸಾಧ್ಯವೇ ಎಂದು ಕೇಳಿದ್ದೆ. ಅದು 2022ರಲ್ಲಾಗಿತ್ತು. ಅವರ ಮೌಲ್ಯಮಾಪನದ ಆಧಾರದಲ್ಲಿ ನಾನು ವಿವಿಧ ಭಾರತಶಾಸ್ತ್ರ (Indology) ಮತ್ತು ಪುರಾತತ್ವ ಶಾಸ್ತ್ರದ ಸಂಸ್ಥೆಗಳು ಹಾಗೂ ಭಾರತದ ಭೂತಕಾಲದ ವಿವಿಧ ಅಂಶಗಳ ಬಗ್ಗೆ ಪುಸ್ತಕಗಳನ್ನು ಬರೆದಿರುವ ಲೇಖಕರನ್ನು ಸಂಪರ್ಕಿಸಲು ಆರಂಭಿಸಿದೆ. ಕಡಿಮೆ ಹೇಳಬೇಕೆಂದರೂ, ಈ ಕ್ಷೇತ್ರವು ಬಹಳಷ್ಟು ಅಗಾಧವಾಗಿದೆ. ಇತಿಹಾಸದಲ್ಲಿ ವಿವೇಕವನ್ನು ಮರುಸ್ಥಾಪಿಸುವ ಮನವಿಯೊಂದಕ್ಕೆ ಸಾಕಷ್ಟು ಪ್ರತಿಸ್ಪಂದನೆ ಸಿಗಬಹುದು ಎಂಬ ಆಶಾವಾದದೊಂದಿಗೆ ನಾನು ನನ್ನ ಪ್ರಯತ್ನ ಮುಂದುವರಿಸಿದೆ. ಅದು ಸಿಕ್ಕಿದೆ ಎಂದು ಸಂತೋಷಪಡುತ್ತೇನೆ.

ಈ ಪುಸ್ತಕಕ್ಕಾಗಿ ಸಂಪರ್ಕಿಸಿದ ಸುಮಾರು ನೂರಮೂವತ್ತು ವಿದ್ವಾಂಸರಲ್ಲಿ ತೊಂಭತ್ತು ಮಂದಿ ಲೇಖನಗಳನ್ನು ಬರೆಯಲು ಒಪ್ಪಿಕೊಂಡರು. ಸಲಹೆಗಾರರಲ್ಲಿ-ಸಹ ಸಂಪಾದಕರಲ್ಲಿ ಒಬ್ಬರಾದ ಟೋನಿ ಜೋಸೆಫ್ ಅವರು ತಮ್ಮ ಪ್ರಸಿದ್ಧ ಕೃತಿ “ಅರ್ಲಿ ಇಂಡಿಯನ್ಸ್”ಗಾಗಿ (2018) ವಿಶ್ವಖ್ಯಾತರಾಗಿದ್ದಾರೆ ಮತ್ತು ಸಮಕಾಲೀನ ಭಾರತದ ಹರಿತವಾದ ವಿಶ್ಲೇಷಕರಾಗಿದ್ದಾರೆ. ಮತ್ತೊಮ್ಮೆ ಸಹ ಸಂಪಾದಕ ರವಿ ಕೋರಿಸೆಟ್ಟರ್ ಅವರ “ಬಿಯಾಂಡ್ ಸ್ಟೋನ್ಸ್ ಎಂಡ್ ಮೋರ್ ಸ್ಟೋನ್ಸ್: ಡಿಸೈನಿಂಗ್ ಪ್ರಿ ಹಿಸ್ಟಾರಿಕ್ ಆರ್ಕಿಯಲಾಜಿ” (2017) ಕೃತಿಯು ನಮ್ಮ ಕಾಲದ ಅತ್ಯಂತ ಉತ್ಕೃಷ್ಟ ಕೃತಿಗಳಲ್ಲಿ ಒಂದೆಂದು ಪ್ರಸಿದ್ಧವಾಗಿದೆ. ಈ ಜಂಟಿ ಅಭಿಯಾನದಲ್ಲಿ ಸಹ ಸಂಪಾದಕರಾಗಿ ಅವರಿಬ್ಬರ ದೇಣಿಗೆಯು ಈ ಪುಸ್ತಕಕ್ಕೆ ಅಗತ್ಯವಾದ ಹರವು ಮತ್ತು ಸ್ಫುಟತೆಯನ್ನು ತಂದುಕೊಟ್ಟಿದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಇದು ಜುಲೈ 2023ರಲ್ಲಿ ಬಿಡುಗಡೆಯಾದ ’ದ ಇಂಡಿಯನ್ಸ್- ಹಿಸ್ಟರೀಸ್ ಆಫ್ ಸಿವಿಲೈಸೇಶನ್’ ಪುಸ್ತಕದ ಪರಿಚಯ ಪ್ರಬಂಧದ ಆಯ್ದ ಭಾಗ. ಅಲೆಫ್ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ ಸುಮಾರು 101 ಪ್ರಬಂಧಗಳ ಈ ಪುಸ್ತಕವನ್ನು ಜಿ. ಎನ್ ದೇವಿ, ಟೋನಿ ಜೋಸೆಫ್ ರವಿ ಕೋರಿಸೆಟ್ಟರ್ ಸೇರಿ ಸಂಪಾದಿಸಿದ್ದಾರೆ.

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. This writeup and may be the writer himself and of course this book seems to perpetuate a perticular ideology which is ( Romilla thapar and the kind)old wine in new bottle trying to propogate one perticular view of Indian History vouching to support and fecilitate leftist political interests. We are tired of such scholastic stuff. History ( call it by whatever name , Hindu or indian or world civilizations is millions of years old recording events that happened in the cosmos not just earth. If we look at it from only proletarian rich & poor struggle angle or Hindutwa and such recent agendas it doesnot fulfill the objective of history writing.it is another history !

LEAVE A REPLY

Please enter your comment!
Please enter your name here

- Advertisment -

Must Read

ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಪ್ರಕರಣ; ದಾಳಿಕೋರ ಥಾಮಸ್ ಮ್ಯಾಥ್ಯೂ ಗುರುತು ಪತ್ತೆ

0
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದಲ್ಲಿ ಭಾಗಿಯಾಗಿರುವ ಶಂಕಿತನನ್ನು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಎಫ್‌ಬಿಐ...