Homeಮುಖಪುಟಭಾರತೀಯರಿಗೆ ಸುಲಭಕ್ಕೆ ಒಗ್ಗಿಹೋಗಿರುವ ಅನುವಾದ ಮತ್ತು ಬಹುಭಾಷೀಯತೆ

ಭಾರತೀಯರಿಗೆ ಸುಲಭಕ್ಕೆ ಒಗ್ಗಿಹೋಗಿರುವ ಅನುವಾದ ಮತ್ತು ಬಹುಭಾಷೀಯತೆ

- Advertisement -
- Advertisement -

ಪ್ರತಿಯೊಬ್ಬ “ಇತರ ವ್ಯಕ್ತಿ”ಯನ್ನು ಒಳಗಿನ ಶತ್ರು ಎಂದು ಭಾವಿಸುವ ಸಿದ್ಧಾಂತದಿಂದ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ನಾನು ಪುಣೆ ಜಿಲ್ಲೆಯ ಭೋರ್ ಎಂಬ ಚಿಕ್ಕ ಪಟ್ಟಣದಲ್ಲಿ ಬೆಳೆದೆ. ಭೋರ್ ಒಂದು ಕಾಲದಲ್ಲಿ ರಾಜಾಡಳಿತದ ಸಂಸ್ಥಾನವಾಗಿತ್ತು. ಆದರೆ, ಆ ರಾಜ ಮಾತ್ರ ತುಂಬಾ ಸಣ್ಣ ರಾಜ. ಅಲ್ಲಿ ಆತ ತನ್ನ ಅಲ್ಪ ಆದಾಯದಿಂದ ಕಟ್ಟಿಸಿದ, ವಾಸ್ತುಶಿಲ್ಪದ ದೃಷ್ಟಿಯಿಂದ ಕುತೂಹಲಕಾರಿಯಾದ ’ಸ್ಮಾರಕಗಳು’ ಎಂದರೆ, ಒಂದು ಚಿಕ್ಕ ಅರಮನೆ, ಒಂದು ದೇವಸ್ಥಾನ, ಒಂದು ಹೈಸ್ಕೂಲು, ಮತ್ತೊಂದು ಪುಸ್ತಕ ಭಂಡಾರ. ಮಿಡಲ್ ಸ್ಕೂಲ್ ವಿದ್ಯಾರ್ಥಿಯಾಗಿ ನಾನು ಆಗಾಗ ಈ ಪುಸ್ತಕ ಭಂಡಾರಕ್ಕೆ ಹೋಗುತ್ತಿದ್ದೆ. ಅದು ಕೆಲವು ಸಾವಿರ ಪುಸ್ತಕಗಳನ್ನು ಹೊಂದಿತ್ತು. ಹೆಚ್ಚಿನವು ಮರಾಠಿಯಲ್ಲಿದ್ದು, ಅವುಗಳಲ್ಲಿ ಹಲವಾರು ಇಂಗ್ಲಿಷ್, ಯುರೋಪಿಯನ್ ಮತ್ತು ಬಂಗಾಳಿ ಪುಸ್ತಕಗಳ ಅನುವಾದಗಳು ಸೇರಿದ್ದವು. ಅನುವಾದಗಳಲ್ಲಿ ಅಬ್ರಹಾಂ ಲಿಂಕನ್ ಜೀವನ ಚರಿತ್ರೆಯ ಒಂದು ಪುಸ್ತಕ, ವಿಕ್ಟರ್ ಹ್ಯೂಗೋನ ’ಲೆಸ್ ಮಿಸರೇಬಲ್ಸ್’ (ಫ್ರೆಂಚ್ ಉಚ್ಚಾರ: ಲೀ ಮಿಸರಾಬ್ಲ- Les Miserables)ನ ಅನುವಾದ, ಆಲ್ಫ್ರೆಡ್ ಟೆನ್ನಿಸನ್‌ನ ಕವನದ ಗದ್ಯ ನಿರೂಪಣೆ, ಟಾರ್ಝಾನ್ ಕತೆಗಳು ಇದ್ದವು. ಇವು ಅನುವಾದಗಳೆಂದು ನನಗೆ ಗೊತ್ತಿರಲಿಲ್ಲ. ಆ ಪ್ರಾಯದಲ್ಲಿ ನನಗದು ಹೊಳೆದಿರಲಿಲ್ಲ. ಆದರೆ, ತಮ್ಮ ರಾಜ್ಯದ ಗಡಿಯನ್ನು ಅಪರೂಪಕ್ಕಷ್ಟೇ ದಾಟಿರಬಹುದಾದ ಜನರು ವಾಸಿಸುವ ಒಂದು ಪುಟ್ಟ ಪಟ್ಟಣದ, ಒಂದು ಭಾಷೆ ಮಾತ್ರ ಗೊತ್ತಿರುವ ಓದುಗರಿಗಾಗಿ ಯುಎಸ್‌ಎ ಆಥವಾ ಫ್ರಾನ್ಸ್ ಅಥವಾ ಆಫ್ರಿಕಾದ ಒಂದು ಪುಸ್ತಕವನ್ನು ಒದಗಿಸುವುದು ಒಂದು ಪವಾಡವೇ ಆಗಿತ್ತು.

ಕೆಲವು ವರ್ಷಗಳ ನಂತರ, ನಾನು ವೃತ್ತಪತ್ರಿಕೆಗಳನ್ನು ಓದಲು ಆರಂಭಿಸಿದಾಗ, ಮರಾಠಿ ಪತ್ರಕರ್ತರಿಗೆ ಜಗತ್ತಿನಾದ್ಯಂತ ನಡೆಯುವ ಎಲ್ಲಾ ವಿದ್ಯಮಾನಗಳು ಅಷ್ಟು ಬೇಗನೇ ಹೇಗೆ ಸಿಗುತ್ತವೆ ಎಂದು ಅಚ್ಚರಿಪಡುತ್ತಿದ್ದೆ. ಸಂಪಾದಕೀಯ ಡೆಸ್ಕುಗಳು ಇಂತಹ ಸುದ್ದಿಗಳಿಗಾಗಿ ಬೇರೆ ಭಾಷೆಗಳಲ್ಲಿ, ಮುಖ್ಯವಾಗಿ ಇಂಗ್ಲಿಷಿನಲ್ಲಿರುವ ಸುದ್ದಿಗಳ ಅನುವಾದವನ್ನು ಅವಲಂಬಿಸಬೇಕಾಗಿತ್ತು ಎಂದೂ ನನಗೆ ಗೊತ್ತಿರಲಿಲ್ಲ. ಮಾಹಿತಿ ಮತ್ತು ಸಂಸ್ಕೃತಿಯ ಹರಡುವಿಕೆಯಲ್ಲಿ ಕಣ್ಣಿಗೆ ಕಾಣದ ಈ ಅನುವಾದಕರು ವಹಿಸುವ ಪಾತ್ರವು ಎಷ್ಟು ಮುಖ್ಯವಾದುದು ಎಂದು ನನ್ನ ಅರಿವಿಗೆ ಬಂದಿರಲಿಲ್ಲ. ಅವರು ಪ್ರಮುಖ ಪಾತ್ರ ವಹಿಸುವುದು ಕೇವಲ ಮಾಹಿತಿಯ ಹರಡುವಿಕೆಯಲ್ಲಿ ಮಾತ್ರವೇ ಅಲ್ಲ; ಸಾಮ್ರಾಜ್ಯಗಳ ವಿಸ್ತರಣೆಯಲ್ಲಿ ಕೂಡಾ.

ದುಭಾಷಿಗಳು

ಸೂರತ್‌ನಲ್ಲಿ ವ್ಯಾಪಾರ ಚಟುವಟಿಕೆ ಆರಂಭಿಸಲು ಬಯಸಿದ್ದ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳು ಮತ್ತು ಅಲ್ಲಿನ ಜನರ ನಡುವಿನ ಮೊದಲ ಮುಖಾಮುಖಿಯ ಕುರಿತು ನಾನು ಕೇಳಿರುವ ಕತೆಗಳನ್ನು ಸಮರ್ಥಿಸಲು ಸಾಕಷ್ಟು ದಾಖಲೆಗಳ ಸಾಕ್ಷ್ಯಾಧಾರಗಳಿವೆಯೇ ಎಂಬುದು ನನಗೆ ಗೊತ್ತಿಲ್ಲ. ಸ್ಪಷ್ಟವಾಗಿಯೇ ಗುಜರಾತಿ ಅಥವಾ ಪರ್ಷಿಯನ್ ಭಾಷೆ ಗೊತ್ತಿಲ್ಲದ ಇಂಗ್ಲಿಷರು, ಅರ್ಮೇನಿಯನ್ ಅನುವಾದಕರನ್ನು ಬಳಸಬೇಕಾಯಿತು ಎಂದು ಹೇಳಲಾಗುತ್ತದೆ.

ಇಂಗ್ಲಿಷರಿಗೆ ಸ್ವಲ್ಪಮಟ್ಟಿಗೆ ಪೋರ್ಚುಗೀಸ್ ಭಾಷೆ ಗೊತ್ತಿತ್ತು. ಅರ್ಮೇನಿಯನರಿಗೆ ಕೂಡಾ ಪೋರ್ಚುಗೀಸ್ ಅರ್ಥವಾಗುತ್ತಿತ್ತು. ಹೀಗೆ ಪೋರ್ಚುಗೀಸ್ ಭಾಷೆಯನ್ನು ಮೊದಲಿಗೆ ಅರ್ಮೇನಿಯನ್ ಭಾಷೆಗೆ ಅನುವಾದಿಸಲಾಯಿತು. ಅದನ್ನು ನಂತರ ಪರ್ಷಿಯನ್ ಭಾಷೆಗೆ ಮತ್ತು ಅಲ್ಲಿಂದ ಗುಜರಾತಿ ಭಾಷೆಗೆ ಅನುವಾದಿಸಲಾಯಿತು. ಈ ಸಂವಹನಕ್ಕೆ ಉತ್ತರವಾಗಿ ಈ ಭಾಷಾಂತರ ಸರಣಿಯನ್ನು ತಿರುವುಮುರುವಾಗಿ ಅನುಸರಿಸಲಾಯಿತು. ಹೀಗಿದ್ದರೂ, ಈ ದೀರ್ಘವಾದ ಭಾಷಾಂತರ ಸರಣಿಯ ಬಳಿಕವಷ್ಟೇ ಈ ಸಂವಹನ ಸಾಧ್ಯವಾಯಿತು. ಈ ಅನಾಮಧೇಯ ಅನುವಾದಕರು ನೆರವಿಗೆ ಬರದಿದ್ದಲ್ಲಿ ಯುರೋಪಿಯನ್ ಶಕ್ತಿಗಳು ತಮ್ಮ ವಸಾಹತುಶಾಹಿ ಸಾಮ್ರಾಜ್ಯಗಳನ್ನು ಕಟ್ಟಲು ಸಾಧ್ಯವಿತ್ತೆ ಎಂದು ನಾನು ಯಾವತ್ತೂ ಅಚ್ಚರಿಪಡುತ್ತೇನೆ.

ನಂತರ ಕಂಪನಿಯು ದುಭಾಷಿ ಎಂದರೆ ಒಂದಕ್ಕಿಂತ ಹೆಚ್ಚು ಭಾಷೆ ಮಾತನಾಡುವ ನೌಕರರ ಅಧಿಕೃತ ಹುದ್ದೆಯನ್ನೇ ಸೃಷ್ಟಿಸಿತು. ಎರಡು ಶತಮಾನಗಳ ನಂತರ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳಿಗೆ ಭಾರತದಲ್ಲಿ ಹುದ್ದೆ ನೀಡುವ ಮೊದಲು ಕೆಲವು ಭಾರತೀಯ ಭಾಷೆಗಳಲ್ಲಿ ತರಬೇತಿ ನೀಡುವುದು ಆರಂಭವಾಯಿತು. 18ನೇ ಶತಮಾನದ ಕೊನೆಯ ಭಾಗದ ಹೊತ್ತಿಗೆ ಅವರಲ್ಲಿ ಅನೇಕರು ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯ ಕೃತಿಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದರು. ಸರ್ ವಿಲಿಯಂ ಜೋನ್ಸ್ (1746-1794) ಮತ್ತು ಚಾರ್ಲ್ಸ್ ವಿಲ್ಕಿನ್ಸ್ (1749-1836) ಅವರಂತವರು ವಿಶ್ವಪ್ರಸಿದ್ಧರೂ ಆದರು.

ಕಳೆದ ಐದು ದಶಕಗಳಲ್ಲಿ ನಾನು ತಮ್ಮ ಭಾಷೆಯಿಂದ ಅಥವಾ ತಮ್ಮ ಭಾಷೆಗೆ ಅನುವಾದ ಮಾಡಿರುವ ಲೆಕ್ಕವಿಲ್ಲದಷ್ಟು ವಿದ್ವಾಂಸರು ಮತ್ತು ಉತ್ಸಾಹಿಗಳನ್ನು ನೋಡಿದ್ದೇನೆ. ಇದಕ್ಕೆ ಹೋಲಿಸಿದರೆ ಇಂಗ್ಲೆಂಡ್ ಅಥವಾ ಇತರ ಇಂಗ್ಲಿಷ್ ಮಾತನಾಡುವ ದೇಶಗಳಲ್ಲಿ ಅನುವಾದದಲ್ಲಿ ಆಸಕ್ತರಾಗಿರುವವರ ಸಂಖ್ಯೆ ತುಂಬಾ ಕಡಿಮೆ. ನಾನು ಆಗಾಗ ಎ.ಕೆ. ರಾಮಾನುಜನ್, ದಿಲೀಪ್ ಚಿತ್ರೆ ಮತ್ತು ಅರುಣ್ ಕೊಲಾತ್ಕರ್ ಆವರಂತ ಕವಿಗಳ ಕುರಿತು ಯೋಚಿಸುತ್ತೇನೆ. ಬಹುಭಾಷೆಗಳಲ್ಲಿ ಅವರ ಪರಿಣತಿ ಗಮನಾರ್ಹವಾದುದು. ಇದು ಭಾಷೆಗಳು ಮತ್ತು ಸಾಹಿತ್ಯದ ಕುರಿತು ಭಾರತೀಯರ ಗುಣಸ್ವಭಾವಕ್ಕೆ ಅನುಗುಣವಾಗಿದೆ. ರಾಮಾನುಜನ್ ಅವರು ಕನ್ನಡ ಮತ್ತು ತಮಿಳಿನಿಂದ ಇಂಗ್ಲಿಷಿಗೆ ಅನುವಾದ ಮಾಡಿದರು. ಚಿತ್ರೆ ಅವರಿಗೆ ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿ ಬರೆಯುವುದು ಮತ್ತು ಅನುವಾದ ಮಾಡುವುದು ಸುಲಭದ ಕೆಲಸವಾಗಿತ್ತು. ನಾನು ಗುಜರಾತಿನಲ್ಲಿ ಇದ್ದಾಗ ಕೆಲವು ಸಂಕೀರ್ಣ ಗುಜರಾತಿ ಗದ್ಯವನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದೇನೆ. ನಾನು ಮರಾಠಿಯಿಂದ ಇಂಗ್ಲಿಷಿಗೆ ಮತ್ತು ಇಂಗ್ಲಿಷಿನಿಂದ ಮರಾಠಿಗೆ ಅನುವಾದವನ್ನು ಹೆಚ್ಚೇನೂ ವಿಚಲಿತನಾಗದೇ ಮಾಡಿದ್ದೇನೆ. ಜೊತೆಗೆ ಗುಜರಾತಿ, ಇಂಗ್ಲಿಷ್ ಮತ್ತು ಮರಾಠಿಯಲ್ಲಿ ನೇರವಾಗಿ ಬರೆಯುವಾಗ ನನಗೆ ದೊಡ್ಡ ಅಡೆತಡೆಯೇನೂ ಅನುಭವಕ್ಕೆ ಬಂದಿಲ್ಲ.

ಒಬ್ಬ ವ್ಯಕ್ತಿಗೆ ಈ ಎಲ್ಲಾ ಭಾಷೆಗಳಲ್ಲೂ ಸಂಪೂರ್ಣ ಪಾಂಡಿತ್ಯ ಇರುತ್ತದೆ ಎಂದು ಹೇಳುವುದು ಇದರ ಉದ್ದೇಶವಲ್ಲ. ನಾನೀಗ ನೀಡಿರುವ ಕೆಲವು ಉದಾಹರಣೆಗಳು- ಭಾರತೀಯರು ಹಲವಾರು ಭಾಷೆಗಳಲ್ಲಿ ಹೇಗೆ ಸುಲಭವಾಗಿ ವ್ಯವಹರಿಸಬಲ್ಲರು ಎಂಬುದನ್ನು ತೋರಿಸುವುದಕ್ಕೆ. ಭಾರತದಲ್ಲಿ ಲಕ್ಷಾಂತರ ಕಾರ್ಮಿಕರು ಮತ್ತು ವ್ಯಾಪಾರಿಗಳು ತಮ್ಮದಲ್ಲದ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಭಾಷೆಯ ಜೊತೆಗೆಯೇ ಹಲವಾರು ಬೇರೆ ಭಾಷೆಗಳನ್ನು ಮೀನು ನೀರಿನಲ್ಲಿ ಈಜಿದಷ್ಟೇ ಸುಲಭವಾಗಿ ಮಾತನಾಡುತ್ತಾರೆ. ಭಾರತೀಯರ ಪ್ರಜ್ಞೆಯು ಒಂದು ಅನುವಾದಿಸಬಲ್ಲ ಪ್ರಜ್ಞೆ ಎಂದು ಬಹುಶಃ ನಾವು ಹೇಳಲು ಸಾಧ್ಯವಿದೆ.

“ಪುರಾಣಗಳು ಏನನ್ನು ಪರಕಾಯಪ್ರವೇಶ ಎಂದು ಕರೆಯುತ್ತೇವೆಯೋ ಅದು ನಾವು ಭಾರತೀಯರ ಜೀವನ ವಿಧಾನವಾಗಿದೆ.”

ರೂಪಾಂತರ ಅಥವಾ ಪುರಾಣಗಳು ಬಣ್ಣಿಸುವಂತ ಪರಕಾಯಪ್ರವೇಶವನ್ನು, ಬಹುಭಾಷೀಯತೆಯು ಅಭ್ಯಾಸವೇ ಆಗಿರುವ ಭಾರತೀಯರು ದೊಡ್ಡ ವಿಷಯ ಎಂಬಂತೆ ಕಾಣುವುದಿಲ್ಲ. ಅದು ನಮ್ಮ ಜೀವನ ವಿಧಾನವಾಗಿದೆ. ಇದು ಭಾರತವು ಬಳುವಳಿಯಾಗಿ ಪಡೆದಿರುವ ಸೂಕ್ಷ್ಮ ಶಕ್ತಿ. ಆದರೆ, ಇದರ ಮಹತ್ವವನ್ನು ನಾವಿನ್ನೂ ಪೂರ್ಣವಾಗಿ ಅಂದಾಜು ಮಾಡಿಲ್ಲ.

ಅದೃಷ್ಟವಶಾತ್ ನಾವು ಅನುವಾದಗಳನ್ನೂ ಮೂಲ ಕೃತಿಗಳಷ್ಟೇ ಪವಿತ್ರವಾಗಿ ಪರಿಗಣಿಸುವ ದೀರ್ಘಕಾಲೀನ ಸಂಪ್ರದಾಯವನ್ನು ಹೊಂದಿದ್ದೇವೆ. ಅದಲ್ಲದೇ ನಾವು ಅಮೋಘವಾದ ಭಾಷಾ ವೈವಿಧ್ಯವನ್ನೂ ಹೊಂದಿರುವುದು- ಬಹುಭಾಷೀಯತೆಯನ್ನು ಒಂದು ಸಾಂಸ್ಕೃತಿಕ ಅಭ್ಯಾಸವನ್ನಾಗಿ ಮಾಡಿದೆ. ನಮ್ಮ ಹಲವಾರು ಆಧುನಿಕ ಭಾಷೆಗಳು ಹುಟ್ಟಿಕೊಂಡಂಥ ಸಂದರ್ಭಗಳಲ್ಲಿಯೇ ಅನುವಾದಗಳಿಗೂ ಒಂದು ಪವಿತ್ರ ಸ್ಥಾನ ಕಲ್ಪಿಸುವಂತಹ ಪರಂಪರೆ ಬೆಳೆದುಬಂತು.

ಇದನ್ನೂ ಓದಿ: ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಅವುಗಳಲ್ಲಿ ಮೊದಲ ಅಥವಾ ಪುರಾತನ ಹಂತದಲ್ಲಿ ಹೆಚ್ಚಿನವು ರಾಮಾಯಣ ಅಥವಾ ಮಹಾಭಾರತದ ಅನುವಾದಗಳಾಗಿದ್ದವು. ಮರಾಠಿಗೆ ಜ್ಞಾನೇಶ್ವರಿ, ಒಡಿಯಾಕ್ಕೆ ಗೀತಗೋವಿಂದ, ಅಸ್ಸಾಮಿಯಕ್ಕೆ ಚರ್ಯಾಸ್, ಕನ್ನಡ ಮತ್ತು ತೆಲುಗಿಗೆ ಮಹಾಭಾರತ, ರಾಮಾಯಣ ಅನುವಾದಗಳು, ಹಿಂದಿಗೆ ರಾಮಚರಿತ ಮಾನಸ ಬಂದದ್ದು, ಈ ವಿಶಿಷ್ಟ ಪ್ರತಿಕ್ರಿಯೆಗೆ ನಿದರ್ಶನಗಳನ್ನು ನೀಡುತ್ತದೆ. ಬೈಬಲಿನ ಕಿಂಗ್ ಜೇಮ್ಸ್ ಆವೃತ್ತಿಯು ಇಂಗ್ಲಿಷರಿಗೆ ಎಷ್ಟು ಪವಿತ್ರವಾಗಿದೆಯೋ- ಮೇಲಿನ ಈ ಕೃತಿಗಳು ಕೂಡ ಆಯಾ ಭಾಷೆ ಮಾತನಾಡುವವರಿಗೆ ಅಷ್ಟೇ ಪವಿತ್ರವಾಗಿವೆ.

ಭಾಷಾ ವೈವಿಧ್ಯ

ಭಾರತದ ಭಾಷಾ ವೈವಿಧ್ಯ ತಿಳಿಯಲು ಕಾಲಕಾಲದ ಜನಗಣತಿಯ ’ಮಾತೃಭಾಷೆ’ ಕುರಿತ ಅಂಕಿಅಂಶಗಳು ಸಾಕಾಗುತ್ತವೆ. 1961ರ ಜನಗಣತಿಯು ಭಾರತೀಯ ನಾಗರಿಕರೇ ತಿಳಿಸಿದಂತೆ 1,652 ತಾಯಿ ನುಡಿಗಳನ್ನು ಪಟ್ಟಿ ಮಾಡಿದೆ. 2011ರಲ್ಲಿ 1,369 ತಾಯಿ ನುಡಿಗಳನ್ನು ಪಟ್ಟಿ ಮಾಡಲಾಗಿತ್ತು. ಭಾರತದಲ್ಲಿ ಭಾಷೆಗಳ ತೀವ್ರ ಸಾಂದ್ರತೆಯು ಯಾರಿಗಾದರೂ ಒಂದು ಜೀವನ ವಿಧಾನವಾಗಿ ದ್ವಿಭಾಷೀಯತೆ ಅಥವಾ ಬಹುಭಾಷೀಯತೆಯನ್ನು ಕೂಡಾ ಸ್ವೀಕರಿಸಲು ಅನುಕೂಲಕರವಾದ ಸಾಮಾಜಿಕ ಸಂದರ್ಭವನ್ನು ಒದಗಿಸುತ್ತದೆ. ಇದರಿಂದಾಗಿ ಬಹುಭಾಷೀಯತೆಯು ಅನುವಾದವನ್ನು ದಿನನಿತ್ಯದ ಒಂದು ಅಭ್ಯಾಸವನ್ನಾಗಿ ಮಾಡುತ್ತದೆ. ಶುದ್ಧವಾಗಿ ಒಂದೇ ಭಾಷೆಯನ್ನು ಮಾತ್ರ ಮಾತನಾಡಬಲ್ಲ ಸಮಾಜಕ್ಕೆ ಹೋಲಿಸಿದಾಗ ಇಂತಹ ಬಹುಭಾಷಾ ಸಮಾಜವು ಹೊಂದಿರುವ ಭಾರೀ ಅನುಕೂಲಗಳನ್ನು ಕಡೆಗಣಿಸಲಾಗದು.

ನಾನು ಹಲವಾರು ದೇಶಗಳ ಪುಸ್ತಕಗಳ ಮರಾಠಿ ಅನುವಾದಗಳನ್ನು ಓದುತ್ತಾ ಬೆಳೆದೆ. ಮಹಾರಾಷ್ಟ್ರದಲ್ಲಿ ಹಿಂದಿಯು ಸುಲಭವಾಗಿ ಅರ್ಥವಾಗುವ ಭಾಷೆಯಾಗಿರಲಿಲ್ಲ. ನಂತರದಲ್ಲಿ ಹಿಂದಿ ಚಲನಚಿತ್ರಗಳು ಮತ್ತು ಚಿತ್ರಗೀತೆಗಳ ಜನಪ್ರಿಯತೆಯು ಹಿಂದಿಯನ್ನು ಮರಾಠಿ ಮಾತನಾಡುವ ಜನರಿಗೆ ಹತ್ತಿರ ತಂದಿತು. ಅದೇ ಅವಧಿಯಲ್ಲಿ ಮರಾಠಿಯು ಮಹಾರಾಷ್ಟ್ರದ ಹಲವಾರು ಆದಿವಾಸಿ ಭಾಷೆಗಳಿಂದ ತನ್ನನ್ನು ದೂರ ಇಟ್ಟುಕೊಳ್ಳುತ್ತಾಹೋಯಿತು. ಅದು ಅವುಗಳನ್ನು ಒಂದೋ ಬದಿಗೆ ಸರಿಸಿತು ಅಥವಾ ನೇರವಾಗಿ ಮುಗಿಸಿಯೇಬಿಟ್ಟಿತು. ನಾನು ಗುಜರಾತಿನಲ್ಲಿಯೂ ಕಳೆದ ಆರು ದಶಕಗಳಲ್ಲಿ ಇದೇ ಪ್ರಕ್ರಿಯೆಯನ್ನು ನೋಡಿದ್ದೇನೆ.

ನಮ್ಮ ರಾಷ್ಟ್ರೀಯ ಇತಿಹಾಸದ ಈ ಕಾಲಘಟ್ಟದಲ್ಲಿ ಹಿಂದಿಯನ್ನು ಭಾಷಾ ’ದೊಡ್ಡಣ್ಣ’ನಂತೆ ಬಿಂಬಿಸಲಾಗುತ್ತಿದೆ. ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ನಾಮಫಲಕಗಳನ್ನು ಪ್ರದರ್ಶಿಸುವ ಒತ್ತಾಯದ ಹೇರಿಕೆಯು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಮುಂತಾದ ಭಾಷೆಗಳನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದೆ. ರಾಷ್ಟ್ರೀಯ ಏಕತೆಯ ಹೆಸರಿನಲ್ಲಿ ಹಿಂದಿಯನ್ನು ಅಧಿಕೃತ ಅಂತರರಾಜ್ಯ ಸಂವಹನದ ಭಾಷೆಯನ್ನಾಗಿ ಮಾಡಬೇಕು ಎಂಬ ಭಾಷಾ ಸಮಿತಿಯ ಶಿಫಾರಸು ಭಾಷಾವಾರು ಸಾಮಾಜಿಕ ಇಂಜಿನಿಯರಿಂಗಿನ ಕಡೆಗೆ ಇಡಲಾದ ದುರುದ್ದೇಶದ ಹೆಜ್ಜೆಯಾಗಿದೆ. ಸಮೀಪದೃಷ್ಟಿಯ ರಾಷ್ಟ್ರೀಯತೆಗೆ ಇದೊಂದು ಅಪೇಕ್ಷಣೀಯ ಕ್ರಮವಾಗಿ ಕಾಣಲೂಬಹುದು. ಆದರೆ, ಇದು ಭಾರತದ ಬಹುಭಾಷೀಯತೆ ಮತ್ತು ಅದರಲ್ಲಿ ಅಂತರ್ಗತವಾದ ಅನುವಾದ ಸಾಮರ್ಥ್ಯದ ಅವನತಿಯ ಆರಂಭಕ್ಕೆ ಕಾರಣವಾಗಬಹುದು. ಸರಳವಾಗಿ ಹೇಳಬೇಕೆಂದರೆ ಅದು ನಮಗೆ ನಮ್ಮ ಹಿರಿಯರು ಬಳುವಳಿಯಾಗಿ ನೀಡಿದ, ಈಗಾಗಲೇ ನಾನು ವಿವರಿಸಿರುವ ಸೂಕ್ಷ್ಮಶಕ್ತಿಯನ್ನು ಕುಂದಿಸುತ್ತದೆ.

ಇತ್ತೀಚೆಗೆ ನಾನು ತಮಿಳುನಾಡು ಪಠ್ಯಪುಸ್ತಕ ಮತ್ತು ಶಿಕ್ಷಣ ಸೇವೆಗಳ ನಿಗಮವು ಆಯೋಜಿಸಿದ್ದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾಗವಹಿಸಲು ಚೆನ್ನೈಗೆ ಹೋಗಿದ್ದೆ. ಅದು ವಿವಿಧ ಖಂಡಗಳಿಂದ ದೊಡ್ಡ ಸಂಖ್ಯೆಯ ಭಾಗವಹಿಸುವಿಕೆಯನ್ನು ಆಕರ್ಷಿಸಿತ್ತು. ಹಲವಾರು ತಮಿಳು ಪುಸ್ತಕಗಳನ್ನು ಹಲವಾರು ಭಾರತೀಯ ಭಾಷೆಗಳು, ಇಂಗ್ಲಿಷ್ ಮತ್ತು ಇತರ ಜಾಗತಿಕ ಭಾಷೆಗಳಿಗೆ ಅನುವಾದಿಸುವ ಭಾರೀ ಯೋಜನೆಯೊಂದು ನಡೆಯುತ್ತಿದೆ ಎಂದು ನನಗೆ ತಿಳಿದುಬಂತು. ನನಗಿದೊಂದು ಅತ್ಯಂತ ಸೃಜನಶೀಲವಾದ ಸಾಂಸ್ಕೃತಿಕ ನಡೆ ಎಂಬಂತೆ ಕಾಣುತ್ತಿದೆ. ಇದು ತಮಿಳು ಭಾಷೆಯ ಪ್ರತಿಷ್ಟೆಯನ್ನು ಜಗತ್ತಿನಾದ್ಯಂತ ಹೆಚ್ಚಿಸಲಿದೆ. ಇದು ಪುರಾತನವಾದ ಅನುವಾದಕರ ಪರಂಪರೆಯನ್ನು ಸಾಂಸ್ಥಿಕವಾಗಿ ಬಲಪಡಿಸಲಿದೆ. ನನ್ನ ತಲೆಗೆ ಬಿಜೆಪಿಯ ಮೂರ್ಖತನದ ಹಿಂದಿ ಹೇರಿಕೆ ಮತ್ತು ತನ್ನ ಸೂಕ್ಷ್ಮಶಕ್ತಿಯನ್ನು ಹೆಚ್ಚಿಸುವ ಡಿಎಂಕೆಯ ಕಲ್ಪನಾಶೀಲ ಕಾರ್ಯತಂತ್ರದ ನಡುವೆ ಇರುವ ವ್ಯತ್ಯಾಸ ಕಣ್ಣಿಗೆ ರಾಚಿ ಹೊಳೆಯುತ್ತಿದೆ. ಒಂದು ತಾಳ್ಮೆಗೇಡಿತನ ಮತ್ತು ಭಾರತದ ಸಾಂಸ್ಕೃತಿಕ ಇತಿಹಾಸದ ತಿಳಿವಳಿಕೆಯ ಕೊರತೆಯನ್ನು ತೋರಿಸಿದರೆ, ಇನ್ನೊಂದು ಮುತ್ಸದ್ಧಿತನ ಮತ್ತು ಭಾರತದ ಸಾಂಸ್ಕೃತಿಕ ಸಂರಚನೆಯ ಅತ್ಯುತ್ತಮ ಗ್ರಹಿಕೆಯನ್ನು ತೋರಿಸುತ್ತದೆ. ಅಷ್ಟಲ್ಲದೆ, ಸಾಹಿತ್ಯಕ್ಕಾಗಿ ನೀಡಲಾದ ಒಂದೇ ಒಂದು ನೋಬೆಲ್ ಪ್ರಶಸ್ತಿಯು ಭಾರತದಲ್ಲಿ ರವೀಂದ್ರನಾಥ ಟಾಗೋರ್ ಅವರ ಬಂಗಾಳಿ ಕವನ ಸಂಕಲನ ಗೀತಾಂಜಲಿಯ ಇಂಗ್ಲಿಷ್ ಅನುವಾದಕ್ಕೆ ಸಿಕ್ಕಿತ್ತು.

ಅನುವಾದಿಸುವ, ರೂಪಾಂತರಿಸುವ, ದೇಹಾಂತರ ಮಾಡುವ ಸಾಮರ್ಥ್ಯ, ಸಂಪೂರ್ಣ ತಾದಾತ್ಮ್ಯದಿಂದ ಪರಕಾಯಪ್ರವೇಶ ಮಾಡುವ ಸಾಮರ್ಥ್ಯಗಳು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಹೃದಯದಲ್ಲಿ ಅಡಗಿದ್ದು, ಪ್ರತೀ “ಇನ್ನೊಬ್ಬನನ್ನು ಒಳಗಿನ ಶತ್ರು ಎಂದು ಯೋಚಿಸುವ ಸಿದ್ಧಾಂತಕ್ಕೆ ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಕೈಗಳಿರುವುದೇ ಲಾಠಿ ಹಿಡಿಯುವುದಕ್ಕೆ ಎಂದು ಭಾವಿಸಿರುವವರ ಗ್ರಹಿಕೆಗೆ ಅದೃಶ್ಯ ಕೈಗಳ ಕೆಲಸವು ಎಂದಿಗೂ ನಿಲುಕದು.

ಅನುವಾದ: ನಿಖಿಲ್ ಕೋಲ್ಪೆ

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...