Homeಮುಖಪುಟಎನ್‌ಸಿಇಆರ್‌ಟಿಯ ಆಘಾತಕಾರಿ ಕ್ರಮದ ಹೊರತಾಗಿಯೂ, ಜೀವಂತವಾಗಿರುವ ಗಾಂಧಿ

ಎನ್‌ಸಿಇಆರ್‌ಟಿಯ ಆಘಾತಕಾರಿ ಕ್ರಮದ ಹೊರತಾಗಿಯೂ, ಜೀವಂತವಾಗಿರುವ ಗಾಂಧಿ

- Advertisement -
- Advertisement -

ಗಾಂಧಿ ಹತ್ಯೆಯ ವಿಷಯವನ್ನು ಎನ್‌ಸಿಇಆರ್‌ಟಿಯ ಇತಿಹಾಸ ಪಠ್ಯ ಪುಸ್ತಕದಿಂದ ತೆಗೆದುಹಾಕುವ ನಿರ್ಧಾರದಿಂದಷ್ಟೇ ಮಹಾತ್ಮರ ನೆನಪನ್ನು ಅಳಿಸಲಾಗದು.

ಕಾಲು ಶತಮಾನಕ್ಕೆ ಮೊದಲು ನಾನು ಗುಜರಾತಿನ ಬರೋಡದಲ್ಲಿ ಭಿಕ್ಷುಕರ ವಿಷಯದಲ್ಲಿ ಅವರ ಜೊತೆಗೆ ಕೆಲಸ ಮಾಡುತ್ತಿದ್ದೆ. ಆರಂಭದಲ್ಲಿ ನಾನು ನಗರದಲ್ಲಿ ಎಷ್ಟು ಮಂದಿ ಭಿಕ್ಷುಕರು ಇದ್ದಾರೆ ಮತ್ತು ಅವರು ಒಂದು ಸಮುದಾಯವಾಗಿ ಹೇಗೆ ರೂಪುಗೊಂಡಿದ್ದಾರೆ ಎಂದು ತಿಳಿದುಕೊಳ್ಳಲು ಯತ್ನಿಸುತ್ತಿದ್ದೆ. ಇದರಿಂದಾಗಿ ನನಗೆ ಅವರಲ್ಲಿ ಹಲವರ ಜೊತೆಗೆ ಆಳವಾದ ಗೆಳೆತನ ಹೊಂದುವುದು ಸಹಜವಾಗಿತ್ತು. ಬೇಸಿಗೆಯಲ್ಲಿ ಬಿಸಿಲಿನ ಝಳ ತಡೆಯಲಾಗದೇ ಸಮಯ ಕಳೆಯಲೆಂದು ಅವರು ಆಗಾಗ ನನ್ನ ಕಚೇರಿಗೆ ಬಂದು, ಅಂಚೆಯ ಲಕೋಟೆಗೆ ಗೋಂದು ಅಂಟಿಸುವುದು, ಕುರ್ಚಿ ಮೇಜು ಒರೆಸುವುದು ಮುಂತಾದ ಚಿಕ್ಕಪುಟ್ಟ ಕೆಲಸಗಳಲ್ಲಿ ನನಗೆ ನೆರವಾಗುತ್ತಿದ್ದರು.

ಅವರಲ್ಲಿ ಮೂಲತಃ ಆಂಧ್ರಪ್ರದೇಶದವರಾದ ವಯಸ್ಸಾದ ಮಹಿಳೆಯೊಬ್ಬರು ಇದ್ದರು. ಕೆಲಸ ಮಾಡುತ್ತಿದ್ದ ಅವರ ಗಂಡುಮಕ್ಕಳು ಅವರನ್ನು ತೊರೆದುಬಿಟ್ಟಿದ್ದರು. ಆಕೆಗೆ ಓದು ಬರಹ ಗೊತ್ತಿರಲಿಲ್ಲ ಮತ್ತು ದೀರ್ಘ ಸಂಭಾಷಣೆಯೂ ಆಕೆಗೆ ಇಷ್ಟವಿರಲಿಲ್ಲ. ಒಂದು ದಿನ ಆಕೆ ಕುರ್ಚಿಯಲ್ಲಿ ಕುಳಿತಿದ್ದಾಗ, ನಾನು ಗೋಡೆಯಲ್ಲಿದ್ದ ಒಂದು ಚಿತ್ರವನ್ನು ತೋರಿಸಿ, “ಈ ಮನುಷ್ಯ ಯಾರೆಂದು ಗೊತ್ತೆ?” ಎಂದು ಕೇಳಿದೆ. ಒಂದು ಕ್ಷಣವೂ ತಡವರಿಸದೇ ಆಕೆ ಹೇಳಿದರು: “ಮಹಾತ್ಮಾ ಗಾಂದಿ.” ನಿಜವಾಗಿಯೂ ಹೇಳುತ್ತೇನೆ: ಆಕೆಗೆ ಅವರ್‍ಯಾರೆಂದು ಗೊತ್ತಿರಬಹುದು ಎಂದು ನಾನು ನಿರೀಕ್ಷಿಸಿಯೇ ಇರಲಿಲ್ಲ; ಯಾಕೆಂದರೆ, ಆಕೆ ಶಾಲೆಯ ಮೆಟ್ಟಲೇ ಹತ್ತಿದವರಲ್ಲ. ನನಗೆ ಆಶ್ಚರ್ಯವಾಗಿತ್ತು. ಆದರೆ, ನನಗೆ ಹೆಚ್ಚು ಆಶ್ಚರ್ಯ ಆದದ್ದು ಯಾವಾಗೆಂದರೆ, ಆಕೆ ಆ ವ್ಯಕ್ತಿ ಹತ್ತಿರದ ವ್ಯಕ್ತಿ ಎಂಬಂತೆ ವಿವರವಾಗಿ ಉದ್ದಕ್ಕೆ ಮಾತನಾಡಿದಾಗ- ಆಕೆ ಗಾಂಧಿ ಬಗ್ಗೆ ಮಾತುಗಳನ್ನು ಕೊನೆಗೊಳಿಸಿದ್ದು ಹೀಗೆ: “ಒಬ್ಬ ನಿಜವಾದ ಮನುಷ್ಯ, ಬೇರೆಯವರೆಲ್ಲ ನಕಲಿ.”

ಮಹಾತ್ಮ ಗಾಂಧಿ

ಗಾಂಧಿಯೊಳಗೆ ಇದ್ದಿದ್ದಾದರೂ ಏನು- ಭಾರತದ ಆತ್ಮವನ್ನೇ ತಟ್ಟುವಂತದ್ದು?- ಪ್ರತೀ ಭಾರತೀಯನೊಳಗಿನ ಅರೆ ಪ್ರಜ್ಞೆ ತಾನೇ ಎಂಬಂತೆ ನೆಲೆಯಾಗಿ ಉಳಿದಿರುವಂತದ್ದು? ಈ ಘಟನೆ ಗಾಂಧಿ ಮರಣವಾಗಿ 55 ವರ್ಷಗಳ ನಂತರ ನಡೆದದ್ದು. ಇಷ್ಟು ಕಾಲಾನಂತರದಲ್ಲಿಯೂ, ಆ ಗುಜರಾತಿನಲ್ಲಿ ಬದುಕುತ್ತಿರುವ ಆಂಧ್ರದ ಹೆಣ್ಣು ಮತ್ತು ಆತನ ಸಾಮಾಜಿಕ ಅಂತರಗಳ ನಡುವೆಯೂ- ಯಾವುದೇ ಪರಿಚಯ ಮಾಡಿಕೊಡುವ ನೆಲೆ ಅಥವಾ ಆಂಕರ್ ಅಗತ್ಯ ಇಲ್ಲದೇ, ನಡುವೆ ಒಬ್ಬ ಅರ್ಥ ಮಾಡಿಸುವ ಮಧ್ಯವರ್ತಿ ಇಲ್ಲದೇ, ಅವರನ್ನು ಎತ್ತಿ ಕೊಂಡಾಡುವ ಒಂದು ವಾಟ್ಸಪ್ ಕಾರ್ಖಾನೆ ಇಲ್ಲದೇ, ಅವನ್ಯಾಕೆ ಆಕೆಯ ಎದೆಯಲ್ಲಿ ಅಂಟಿಕೊಂಡ?

ನೈತಿಕ ಮೌಲ್ಯಗಳು

“ಒಬ್ಬ ಮನುಷ್ಯ ಮಾತಾಡುತ್ತಾನೆ; ಮತ್ತೆ ಮತ್ತೆ ಮಾತಾಡುತ್ತಾನೆ ಎಂಬ ಕಾರಣಕ್ಕೇ ಆತನನ್ನು ವಿವೇಕಿ ಎಂದು ಕರೆಯಲಾಗದು. ಆದರೆ, ಆತ ಶಾಂತಿಯುತನಾಗಿ ಇದ್ದರೆ, ಪ್ರೀತಿಸುವವನಾಗಿ ಇದ್ದರೆ, ಆಗ ಮಾತ್ರವೇ ಆತನನ್ನು ನಿಜವಾಗಿಯೂ ವಿವೇಕಿ ಎಂದು ಕರೆಯಬಹುದು” ಎಂಬುದು ಗೌತಮಬುದ್ಧರ ಎಲ್ಲರಿಗೂ ಗೊತ್ತಿರುವ ಮಾತುಗಳು. ಈ ಮಾತುಗಳ ಶಾಶ್ವತತೆಗೆ ಒಂದು ಅತ್ಯಂತ ಅಪೂರ್ವ ಉದಾಹರಣೆ ಎಂದರೆ, ಮೋಹನದಾಸ ಗಾಂಧಿಯ ಜೀವನ- ಮತ್ತು ಬುದ್ಧನ ನಂತರದ ಎರಡೂವರೆ ಸಹಸ್ರಮಾನದ ಬಳಿಕ- ಆತ ಭಾರತೀಯ ಉಪಖಂಡದಲ್ಲಿ ಸ್ಥಾಪಿಸಿದ ನೈತಿಕ ಮೌಲ್ಯಗಳು. ಗಾಂಧಿ ಭಾರತೀಯ ರಾಜಕೀಯ ಚಿತ್ರಣಕ್ಕೆ ಕಾಲಿಡುವ ಮೊದಲೇ ಒಂದು ದಂತಕತೆಯಾಗಿದ್ದರು- ಅವರನ್ನು ಕ್ರೂರವಾಗಿ ಕೊಲೆ ಮಾಡುವ ಸಮಯಕ್ಕೆ ಜೀವಂತ ಪುರಾಣವಾಗಿಹೋಗಿದ್ದರು. ಅವರು ರಾಜಕೀಯ ಸಿದ್ಧಾಂತ ಅಥವಾ ನೈತಿಕತೆಗಳ ಬಗ್ಗೆ ಭಾರೀ ಪುಸ್ತಕಗಳನ್ನು ಬರೆದರೆಂದರಲ್ಲ- ಆದರೂ ಅವರ ಚಿಂತನೆಗಳು ಕೋಟ್ಯಂತರ ಜನರನ್ನು ಮುಟ್ಟಿವೆ ಮತ್ತು ಆಗಣಿತ ಜನರ ಜೀವನವನ್ನು ಬದಲಾಯಿಸಿದೆ.

ಗಾಂಧಿಯವರ ಮಾಂತ್ರಿಕತೆ ಎಂದರೆ, ಅದು ಅವರ ಅಗಾಧ ನೈತಿಕ ಅಧಿಕಾರದಿಂದ ಹುಟ್ಟಿರಲಿ, ಅಥವಾ ಆಕಸ್ಮಿಕವಾದ ಅವರ ಐತಿಹಾಸಿಕ ಸ್ಥಾನದ ಕಾರಣದಿಂದಲೇ ಇರಲಿ- ಅದು ಆವರ ಜೀವನ ಚರಿತ್ರಕಾರರ, ವಿಮರ್ಶಕರ, ಹಿಂಬಾಲಕರ ಮತ್ತವರ ವಿಷಕಾರಿ ಟೀಕಾಕಾರರು, ನಿಂದಕರನ್ನೂ ತಟ್ಟದೇ ಬಿಟ್ಟಿಲ್ಲ. ಖಂಡಿತವಾಗಿಯೂ ಅವರ ಹೆಸರನ್ನು ಕಳೆದ ನೂರು ವರ್ಷಗಳಲ್ಲಿ ಎಷ್ಟು ವಿದ್ವಾಂಸರ ಪುಸ್ತಕಗಳಲ್ಲಿ, ಪ್ರಬಂಧಗಳಲ್ಲಿ, ಸಾರ್ವಜನಿಕ ಉಪನ್ಯಾಸ, ಭಾಷಣಗಳಲ್ಲಿ, ರಾಜಕೀಯ ಬೋಧನೆಗಳಲ್ಲಿ, ನಾಟಕೀಯ ಚಿತ್ರಣಗಳಲ್ಲಿ, ಚಲನಚಿತ್ರಗಳಲ್ಲಿ, ಕಲಾಕೃತಿಗಳಲ್ಲಿ, ಕೌಟುಂಬಿಕ ಮಾತುಕತೆಗಳಲ್ಲಿ ಮತ್ತು ಕೋಟ್ಯಂತರ ಜನರ ಯೋಚನೆಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಲೆಕ್ಕಹಾಕಲೇ ಸಾಧ್ಯವಿಲ್ಲ.

ಇದನ್ನೂ ಓದಿ: ಕಂಗೆಡುತ್ತಿರುವ ಪ್ರಜಾಪ್ರಭುತ್ವ ಮತ್ತು ಬೆದರಿದ ರಾಜಕೀಯಕ್ಕೆ ಬಲಿಪಶುಗಳಾದ ಪಠ್ಯಪುಸ್ತಕಗಳು

ಯಾವುದೇ ನಾಯಕ, ಚಿಂತಕ, ಕಾರ್ಯಕರ್ತ, ಸಂತ, ಕಲಾವಿದ, ಕ್ರೀಡಾಳು, ವಿಜ್ಞಾನಿ, ರಾಜಮಹಾರಾಜರು ಅಥವಾ ಬರಹಗಾರರ ಗಾಂಧಿಯವರ ಹಲವು ಆಯಾಮಗಳು ಪಡೆದ ಪ್ರಸಿದ್ಧಿಯ ಮಟ್ಟಕ್ಕೆ ತಲುಪಲು ಸಾಧ್ಯವಾಗಿಲ್ಲ.

ಒಬ್ಬ ಕೊಲೆಗಾರನ ಗುಂಡುಗಳಿಂದ ಗಾಂಧಿ ಸತ್ತ ಬಳಿಕ ಇಡೀ ಪ್ರಪಂಚವೇ ಈ ಕೃತ್ಯದ ಕ್ರೌರ್ಯದಿಂದ ಸ್ಥಂಭೀಭೂತವಾಯಿತು. ಹಲವಾರು ಸಂಪುಟಗಳಲ್ಲಿ ಮುದ್ರಿಸಬಹುದಾದಷ್ಟು ಶ್ರದ್ಧಾಂಜಲಿ ಪ್ರತಿಕ್ರಿಯೆಗಳು ವ್ಯಕ್ತವಾದವು. ಅವುಗಳಲ್ಲಿ ಅತ್ಯುತ್ತಮವಾದುದು ಎಂದರೆ, 20ನೇ ಶತಮಾನದ ಅಪ್ರತಿಮ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರಿಂದ ಬಂದದ್ದು. ಇಂತಹ ಒಬ್ಬ ಮನುಷ್ಯ ರಕ್ತ ಮಾಂಸಗಳ ಜೊತೆ ಈ ಭೂಮಿಯಲ್ಲಿ ನಡೆದಾಡುತ್ತಿದ್ದ ಎಂದು ಹೇಳಿದರೆ, ಮುಂದಿನ ಹಲವಾರು ತಲೆಮಾರುಗಳವರು ನಂಬುವುದು ಕಷ್ಟ ಎಂದು ಐನ್‌ಸ್ಟೀನ್ ಬರೆದರು.

ಗಾಂಧಿಯವರ ಹತ್ಯೆಯಾದ ಬಿರ್ಲಾ ಹೌಸಿನ ಹಿತ್ತಿಲ ಉದ್ಯಾನದ ರಸ್ತೆಗೆ ಅವರ ಕೊಲೆಯಾದ ದಿನದ ಹೆಸರಿನಲ್ಲಿ “ತೀಸ್ ಜನವರಿ ರೋಡ್” (ಮೂವತ್ತು ಜನವರಿ ರಸ್ತೆ) ಎಂಬ ಹೆಸರಿಡಲಾಗಿದೆ. ಕಲ್ಲಿನಲ್ಲಿ ಕೆತ್ತಲಾಗಿರುವ ಈ ಪ್ರಸಿದ್ಧ ಸಮಾಧಿ ಬರಹವು ಗಾಂಧಿ ಎಂಬ ಅದ್ಭುತ ದಂತಕತೆಯ ಆಯಾಮಗಳನ್ನು ಮತ್ತೆಮತ್ತೆ ನೆನಪಿಸುತ್ತದೆ. ಅದಕ್ಕಿಂತಲೂ ಅತಿ ಮುಖ್ಯ ವಿಷಯವೆಂದರೆ, ಕಣ್ಣಿಗೆ ರಾಚುವ ಈ ಸ್ಮಾರಕದ ಸರಳತೆ. ಗಾಂಧಿಯವರು ಗುಂಡುಗಳಿಗೆ ಎದೆಯೊಡ್ಡಿದ ಆ ನಿರ್ದಿಷ್ಟ ಸ್ಥಳಕ್ಕೆ ಯಾರು ಬೇಕಾದರೂ ನಡೆದು ಹೋಗಬಹುದು ಮತ್ತು ಕ್ಷಣಮಾತ್ರವಾದರೂ ಅವರ ಜೊತೆಗೆ ಇದ್ದ, ಅಥವಾ ಅವರೇ ಆಗಿದ್ದ ಕಲ್ಪನೆಯನ್ನು ಮಾಡಿಕೊಳ್ಳಬಹುದು.

ಗಾಂಧಿ ಅಥವಾ ಅವರಿಗೆ ಸಂಬಂಧಿಸಿದ ಎಲ್ಲವನ್ನೂ ಸಮೀಪಿಸುವ ಸರಳತೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಒಂದು ದಶಕದ ಕಾಲ ಗಾಂಧಿಯವರು ಜೀವನ ಕಳೆದ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದವರಿಗೂ ಅದೇ ಅನುಭವ. ಅವರು ಬದುಕಿದ್ದ ಆ ಮನೆ ಅವರೇ ವಿನ್ಯಾಸ ಮಾಡಿದ್ದು. ಅದರೊಳಗಿನ ಜಾಗವು ನಿರ್ಮಲ, ಪ್ರಶಾಂತ ಮತ್ತು ಸುಂದರ. ಅದನ್ನು “ಹೊರಗಡೆ” ಮತ್ತು “ಒಳಗಡೆ” ಎಂದು ವಿಭಜಿಸಲು ಸಾಧ್ಯವಿಲ್ಲ. ಅವು ಒಂದು ಇನ್ನೊಂದರ ಒಳಗೆ ಸಂಪೂರ್ಣವಾಗಿ ವಿಲೀನವಾಗಿವೆ. ಅದು ಗಾಂಧಿಯವರು ಬದುಕಿದ ಜೀವನವನ್ನಲ್ಲದೆ ಇನ್ನೇನನ್ನೂ ಪ್ರತಿಫಲಿಸುವುದಿಲ್ಲ. ಆ ಮಹಾತ್ಮರು ಬದುಕಿದ್ದರು ಮತ್ತು ಯುಗಮಾನಗಳ ಕಾಲ ಬದುಕಿರುತ್ತಾರೆ- ನೀವು ಅವರಿಗೆ ಹತ್ತಿರವಾಗುವಂತೆ ಮಾಡಬಲ್ಲ ಅವರ ಸಾಮರ್ಥ್ಯ ಮತ್ತು ಅವರಿಗೆ ಅತಿಮಾನವ, ದಂತಕತೆಯ ಆಯಾಮ ನೀಡಬಲ್ಲ ಅಗಾಧ ಚಿಂತನೆ ಮತ್ತು ಕಾರ್ಯಗಳ ಸಂಗಮದಿಂದ.

ನಾನು ಆಂಧ್ರದ ಆ ಮಹಿಳೆಯನ್ನು ಭೇಟಿಯಾದದ್ದು 2002ರಲ್ಲಿ- ಭವಿಷ್ಯದ ಗುಜರಾತಿ ತಲೆಮಾರುಗಳು ನಾಚಿಕೆಯಿಂದ ತಲೆ ಬಗ್ಗಿಸಬೇಕಾಗುವಂತೆ ಮಾಡಿದ ನರಮೇಧ ನಡೆದ ವರ್ಷ. ಹದಿನೇಳು ವರ್ಷಗಳ ನಂತರ ಮೋಹನದಾಸ ಗಾಂಧಿಯವರ 150ನೇ ಜನ್ಮದಿನಾಚರಣೆ ನಡೆಯಲಿತ್ತು. ಆ 17 ವರ್ಷಗಳು ಗಾಂಧಿಯವರ ಇಮೇಜನ್ನು ಮಲಿನಗೊಳಿಸಲು ಬಿಜೆಪಿಯ ಅಪಪ್ರಚಾರ ಯಂತ್ರಕ್ಕೆ ಸಾಕಾಗಿದ್ದವು. ಈ ಅದ್ಭುತ ಬ್ಯಾರಿಸ್ಟರ್ ಅವರ ಇಮೇಜನ್ನು ಸರಕಾರಿ ಪ್ರಚಾರದ ಪೋಸ್ಟರುಗಳಲ್ಲಿ ಕಾಣಿಸಲಾಯಿತು- ಅವರ ಕನ್ನಡಕ ಮತ್ತು ಹಿನ್ನೆಲೆಯಲ್ಲಿ ಶೌಚಾಲಯದ ಚಿತ್ರದ ಮೂಲಕ ಮಾತ್ರ. ಆ ಹೊತ್ತಿಗೆ ಆ ಆಡಳಿತವು ಧರ್ಮದ ಹೆಸರಿನಲ್ಲಿ ಭಾರತೀಯ ಜನತೆಯನ್ನು ವಿಭಜಿಸಲು ಯಶಸ್ವಿಯಾಗಿತ್ತು. ಮುಸ್ಲಿಮರು ಮತ್ತು ದಲಿತರನ್ನು ಗುಂಪು ಹಲ್ಲೆಗಳಿಂದ ಕೊಲ್ಲುವುದು ಆ ದಿನಗಳ ಕಾನೂನಾಗಿತ್ತು. ಗೋರಕ್ಷಕರು ಅಮಾಯಕ ಜನರನ್ನು ಬೆದರಿಸಲು ಅನಿಯಂತ್ರಿತ ಪರವಾನಗಿ ಪಡೆದಿದ್ದರು. ಸ್ವತಃ ಬೆದರಿಕೆಗೆ ಒಳಗಾಗಿದ್ದ ರಾಷ್ಟ್ರೀಯ ಮಾಧ್ಯಮಗಳಿಗೆ, ಮುಖ್ಯವಾಗಿ ಟಿವಿಗಳಿಗೆ ಇದುವೇ ನಿತ್ಯದ ಆಹಾರವಾಗಿತ್ತು. ಪ್ರಸಿದ್ಧ ವಿಚಾರವಾದಿ ಚಿಂತಕರಾದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಮುಂತಾದವರನ್ನು ಗುಂಡಿನಿಂದಲೇ ಕೊಲ್ಲಲಾಯಿತು.

ಕಾನೂನು ಮತ್ತು ಶಿಸ್ತು ಕಾಪಾಡಬೇಕಾದ ಸಂಸ್ಥೆಗಳು ಯಾವುದೇ ಮತ್ತು ಎಲ್ಲ ಭಿನ್ನಮತವನ್ನು ದಮನಿಸುವುದರಲ್ಲೇ ವ್ಯಸ್ತವಾಗಿದ್ದವು. ಪ್ರತಿರೋಧ ವ್ಯಕ್ತಪಡಿಸುವವರನ್ನು ಟ್ರೋಲ್ ಮಾಡಲು ಸಾಮಾಜಿಕ ಮಾಧ್ಯಮವನ್ನು ಕೈಗಾರಿಕೆಯ ಪ್ರಮಾಣದಲ್ಲಿ ಬಳಸಲಾಯಿತು.

ಇದು ಭಾರತದಲ್ಲಿ ಸಾಮಾನ್ಯ ಪರಿಸ್ಥಿತಿ ಆಗಿದ್ದರೆ, ಅಂತಾರಾಷ್ಟ್ರೀಯ ಪರಿಸ್ಥಿತಿ ಬೇರೆಯೇನೂ ಆಗಿರಲಿಲ್ಲ. ಯುರೋಪಿನಲ್ಲಿ ತೀವ್ರ ಬಲಪಂಥವು ಏರುದಿಸೆಯಲ್ಲಿತ್ತು. ಟರ್ಕಿ, ಈಜಿಪ್ಟ್, ಬ್ರೆಝಿಲ್ ಮತ್ತು ಚೀನಾ ಸರ್ವಾಧಿಕಾರಿ ಆಡಳಿತದ ಅಡಿಗೆ ಬಂದವು. ಜರ್ಮನಿ, ಇಟಲಿ, ಸ್ಪೇನ್ ಮತ್ತು ಫ್ರಾನ್ಸಿನಂಥ ಪ್ರಜಾಸತ್ತಾತ್ಮಕ ಸರಕಾರಗಳು ಕೆಲಸ ಮಾಡಲು ಬಲಪಂಥೀಯರ ನೆರವು ಕೋರಬೇಕಾಯಿತು. ಯುಎಸ್‌ಯಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆ ಗೆದ್ದು “ಸತ್ಯೋತ್ತರ” (post-truth) ಎಂದು ಕರೆಯಲಾಗುವ ಯುಗವು ತ್ವರಿತವಾಗಿ ರೆಕ್ಕೆ ಬಿಚ್ಚುತ್ತಿತ್ತು.

ಸತ್ಯೋತ್ತರ ವಾಸ್ತವಗಳು

’ಸತ್ಯೋತ್ತರ ಯುಗ ಮತ್ತು ಹಿಂಸಾಚಾರ’ದ ಕುರಿತು ಸತ್ಯ ಮತ್ತು ಅಹಿಂಸೆಯ ವಿರುದ್ಧವಾಗಿ ದೇಶದ ಒಳಗಡೆಯೂ, ಹೊರಗಡೆಯೂ ಜನರು ದೊಡ್ಡ ಮಟ್ಟದಲ್ಲಿ ಯೋಚಿಸಲು ಆರಂಭಿಸಿದುದರಲ್ಲಿ ಆಶ್ಚರ್ಯವೇನಿಲ್ಲ. ಆದುದರಿಂದ ಪ್ರಜಾಪ್ರಭುತ್ವ, ಸಾರ್ವಜನಿಕ ಜೀವನದಲ್ಲಿ ಸನ್ನಡತೆ, ಸಾಮಾಜಿಕ ಸಾಮರಸ್ಯ ಮುಂತಾದ ವಿಚಾರಗಳ ಬಗ್ಗೆ ಒಲವಿರುವವರ ಮನಗಳಲ್ಲಿ ಗಾಂಧಿಯವರ ನೆನಪು ಅಲೆಅಲೆಯಾಗಿ ಮತ್ತೆ ತೇಲಿಬಂತು. ಎಡಪಂಥೀಯರು, ಉದಾರವಾದಿ ಪ್ರಜಾಪ್ರಭುತ್ವವಾದಿಗಳು, ಕಾರ್ಮಿಕ ಸಂಘಟನೆಗಳ ನಾಯಕರು, ಕಲಾವಿದರು, ಬರಹಗಾರರು, ಹಾಡುಗಾರರು ಗಾಂಧಿಯವರ ಕಡೆಗೆ ಮರಳುವುದು ಸಾಮಾನ್ಯವಾಯಿತು. ಸಾಮಾನ್ಯವಾಗಿ ಗಾಂಧಿಯವರ ಕುರಿತು ಬೇಸರ ಹೊಂದಿರುವ ಅಂಬೇಡ್ಕರ್‌ವಾದಿಗಳು ಕೂಡಾ, ಗಾಂಧಿಯವರ ಕಡೆಗೆ ಕಡಿಮೆ ತಿರಸ್ಕಾರದಿಂದ ನೋಡಲಾರಂಭಿಸಿದರು. ಗಾಂಧಿವಾದವನ್ನು ಕೇವಲ ಆಚರಣೆಯ ಮಟ್ಟಕ್ಕೆ ಇಳಿಸಿದ್ದ ಗಾಂಧೀವಾದಿಗಳು ಕೂಡಾ ಗಾಂಧಿಯವರನ್ನು ಮತ್ತೆ ಕಂಡುಕೊಳ್ಳುವ ಅಗತ್ಯವನ್ನು ಮನಗಾಣಲು ಆರಂಭಿಸಿದರು. ಹಲವಾರು ಸಮಾನಮನಸ್ಕ ಸಾಮಾಜಿಕ ಮಾಧ್ಯಮ ಗುಂಪುಗಳು ಆರಂಭಗೊಂಡು ಗಾಂಧಿಯವರ ವಿಚಾರಧಾರೆಗಳ ಬಗ್ಗೆ ಚರ್ಚಿಸಲು ಆರಂಭಿಸಿದವು. ಈ ಎಲ್ಲರೂ ಬೇರೆಬೇರೆ ಮಟ್ಟಗಳಲ್ಲಿ ಹತ್ತಿರ ಬಂದು ಗಾಂಧಿ ಮತ್ತು ಅಂಬೇಡ್ಕರ್ ಪರಂಪರೆಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನದಾಗಿ ಅಪ್ರಾಪ್ರಿಯೇಟ್ ಮಾಡಿಕೊಳ್ಳುವ ಭಯವನ್ನು ವ್ಯಕ್ತಪಡಿಸಲು ಆರಂಭಿಸಿದರು. ವಿಪರ್ಯಾಸ ಎಂದರೆ ಗಾಂಧಿಯವರ ನೆನಪನ್ನು ಅಳಿಸಲು ಪ್ರಯತ್ನಿಸಿದಷ್ಟು ಅದು ಹೆಚ್ಚುಹೆಚ್ಚಾಗಿ ಪಡಿಮೂಡಲು ಆರಂಭಿಸಿತು.

ಗಾಂಧಿ ಹತ್ಯೆಯನ್ನು ಇತಿಹಾಸದ ಪಠ್ಯದಿಂದ ತೆಗೆದುಹಾಕುವ ಎನ್‌ಸಿಇಆರ್‌ಟಿ ನಡೆಯು ಲಕ್ಷಾಂತರ ಜನರಿಗೆ ಆಘಾತ ಉಂಟುಮಾಡಿದೆಯಾದರೂ, ಎಲ್ಲರೂ ಸಂಘಟಿತ ರೀತಿಯಲ್ಲಿ ತಮ್ಮ ದಿಗಿಲನ್ನು ವ್ಯಕ್ತಪಡಿಸಿಲ್ಲ. ನಾನು ಎನ್‌ಸಿಇಆರ್‌ಟಿ ನಡೆಯ ಕುರಿತು ಓದಿದ ದಿನ ಆಂಧ್ರದ ಆ ಮಹಿಳೆಯ ಉತ್ತೇಜಿತ ಮುಖವು ಧುತ್ತನೇ ಮನಸ್ಸಿನಲ್ಲಿ ಮೂಡಿತು. ಆ ಮುಖವು ಗಾಂಧಿಯವರ ಕುರಿತು ಆಡಿದ ಮೆಚ್ಚುಗೆಯ ಮಾತುಗಳನ್ನು ನೆನಪಿಸಿದ ಕೂಡಲೇ ನಾನು ನನಗೇ ಹೇಳಿಕೊಂಡೆ: “ಪಠ್ಯಪುಸ್ತಕ ಇರಲೀ, ಇಲ್ಲದೆಯೇ ಇರಲಿ, ಗಾಂಧಿ ಬದುಕಿಯೇ ಇರುತ್ತಾರೆ. ಆ ಮಹಿಳೆ ಹೇಳಿದಂತೆ ಅವರು ನಿಜ ಮನುಷ್ಯ. ಹಲವಾರು ನಕಲಿಗಳು ಅಪಪ್ರಚಾರವು ಎತ್ತಿಹಿಡಿದಷ್ಟು ದಿನ ಮಾತ್ರ ಚಲಾವಣೆಯಲ್ಲಿ ಇರುತ್ತಾರೆ. ನಾನು ಎನ್‌ಸಿಇಆರ್‌ಟಿ ಅಧಿಕಾರಸ್ಥರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ: ಮುಂದೆ ಪ್ರಪಂಚವು ಮನಗಾಣಲಿರುವಂತೆ, ಸುಮ್ಮನೇ ಹಾಗೆಯೇ ಮಹಾತ್ಮರ ನೆನಪನ್ನು ಅಳಿಸಲು ಸಾಧ್ಯವಿಲ್ಲ. ಅವರು ಮಹಾತ್ಮ ಏಕೆಂದರೆ, ಅವರ ಸತ್ಯ ಮತ್ತು ಅಹಿಂಸೆಯು ಪ್ರತಿಯೊಬ್ಬರ ಆತ್ಮವನ್ನು ತಟ್ಟಿದೆ. ಇದು ಆತ್ಮದ ಪ್ರಶ್ನೆ ಮತ್ತು ಅದು ಬೆದರಿಕೆಗೆ ಒಳಗಾಗಿರುವ ಅಥವಾ ಶಾಲೆಗೆ ಹೋಗುವ ಮಕ್ಕಳೂ ಎದ್ದುನಿಲ್ಲಬೇಕೆಂದು ಬಯಸುವಲ್ಲಿ, ತೆವಳುವ ಗುಲಾಮಿ ದೇಹಗಳ ಗ್ರಹಿಕೆಯಿಂದ ಸದ್ಯಕ್ಕೆ ಹೆಚ್ಚುಕಡಿಮೆ ಹೊರಗಿದೆ.”

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...