Homeಮುಖಪುಟಕರ್ನಾಟಕ ಫಲಿತಾಂಶ ಮಧ್ಯಪ್ರದೇಶದ ಚುನಾವಣೆ ಮೇಲೆ ಪ್ರಭಾವಿಸಲಿದೆಯೇ?

ಕರ್ನಾಟಕ ಫಲಿತಾಂಶ ಮಧ್ಯಪ್ರದೇಶದ ಚುನಾವಣೆ ಮೇಲೆ ಪ್ರಭಾವಿಸಲಿದೆಯೇ?

ಕರ್ನಾಟಕ ಗೆಲುವಿನ ಬಳಿಕ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪುಟಿದೆದ್ದಿದೆ. ಮತ್ತೊಂದೆಡೆ ಬಿಜೆಪಿಯೊಳಗೆ ಆಂತರಿಕ ಕಲಹ, ಒಗ್ಗಟ್ಟಿನ ಕೊರತೆ ಎದ್ದುಕಾಣುತ್ತಿದೆ

- Advertisement -
- Advertisement -

(ಕರ್ನಾಟಕದಲ್ಲಿ ಕಾಂಗ್ರೆಸ್ ಪಡೆದಿರುವ ದಿಗ್ವಿಜಯವು, ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆಯೇ? ಈ ಕುರಿತು ‘ದಿ ವೈರ್‌’ ಜಾಲತಾಣಕ್ಕೆ ಪತ್ರಕರ್ತ ‘ದೀಪಕ್‌ ಗೋಸ್ವಾಮಿ’ಯವರು ಮಾಡಿರುವ ವರದಿಯ ಅನುವಾದ ಇಲ್ಲಿದೆ.)

ಇತ್ತೀಚೆಗಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾರಿ ಸೋಲು ಕಂಡಿದೆ. ಕಟು ಹಿಂದುತ್ವದ ಬೆನ್ನೇರಿ ಚುನಾವಣಾ ಪ್ರಚಾರವನ್ನು ಪ್ರಧಾನಿ ನರೇಂದ್ರ ಮೋದಿ ನಡೆಸಿದರು. ಇವರ ಉಪಸ್ಥಿತಿಯಲ್ಲಿ ಸ್ಥಳೀಯ ಸಮಸ್ಯೆಗಳು ಮುಚ್ಚಿಹಾಕಲ್ಪಟ್ಟವು. ಆದರೆ ಬಿಜೆಪಿ ಉರುಳಿಸಿದ ಹಿಂದೂ-ಪರ ರಾಷ್ಟ್ರೀಯತಾವಾದಿ ನೀತಿ ಮತದಾರರನ್ನು ಪ್ರಭಾವಿಸಲಿಲ್ಲ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಗಳಿಸುವ ಮೂಲಕ ಆರಾಮವಾಗಿ ಅಧಿಕಾರಕ್ಕೆ ಮರಳಿತು, ಆದರೆ ಬಿಜೆಪಿ ಕೇವಲ 66 ಸ್ಥಾನಗಳಿಗೆ ಕುಸಿಯಿತು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸಾಧಿಸಿದ ಬೃಹತ್ ವಿಜಯವು ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಮರಳುವ ಭರವಸೆಯನ್ನು ಪುನರುಜ್ಜೀವನಗೊಳಿಸಿದೆ, ಏಕೆಂದರೆ ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶವು ಚುನಾವಣೆಗೆ ಹೋಗಲಿದೆ. ಮೇ 22ರಂದು ಕಾಂಗ್ರೆಸ್ ಹೈಕಮಾಂಡ್ ತನ್ನ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಪ್ರತಿಕ್ರಿಯಿಸಿ, “ಮಧ್ಯಪ್ರದೇಶದ ಜನರಿಗೆ ಕಾಂಗ್ರೆಸ್ ನೀಡುವ ಭರವಸೆ ಇದು. ಕರ್ನಾಟಕದಲ್ಲಿ ನಮ್ಮ ಭರವಸೆಗಳನ್ನು ಈಡೇರಿಸಿದ್ದೇವೆ, ಈಗ ಮಧ್ಯಪ್ರದೇಶದಲ್ಲೂ ಈಡೇರಿಸುತ್ತೇವೆ” ಎಂದಿದೆ.

ಕರ್ನಾಟಕದ ಗೆಲುವು ಕಾಂಗ್ರೆಸ್ ಪಕ್ಷದ ಮನೋ ಸ್ಥೈರ್ಯವನ್ನು ಹೆಚ್ಚಿಸಿದ್ದರೆ, ಮಧ್ಯಪ್ರದೇಶ ಮತ್ತು ಕೇಂದ್ರದ ಬಿಜೆಪಿ ಉನ್ನತ ನಾಯಕರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ. ಇದರ ನಡುವೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, “ಕರ್ನಾಟಕದ ಫಲಿತಾಂಶಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ? ಇದು ಮಧ್ಯಪ್ರದೇಶ. ಇಲ್ಲಿ, ನಾವು ಭಾರಿ ಅಬ್ಬರದೊಂದಿಗೆ ದಾಖಲೆಯ ವಿಜಯವನ್ನು ದಾಖಲಿಸುತ್ತೇವೆ. ಅವರ ಬಳಿ (ಕಾಂಗ್ರೆಸ್) ಏನಿದೆ? ನಮ್ಮಲ್ಲಿ ನರೇಂದ್ರ ಮೋದಿ ಇದ್ದಾರೆ. ಹಗಲಿರುಳು ಶ್ರಮಿಸುವ ಪಕ್ಷದ ಕಾರ್ಯಕರ್ತರು ಇದ್ದಾರೆ. ಕಾಂಗ್ರೆಸ್ ಗೆಲುವಿನ ಹತ್ತಿರಕ್ಕೂ ಬರುವುದಿಲ್ಲ. ನನ್ನ ಕೈಯಲ್ಲಿ ಇನ್ನೂ ಅನೇಕ ಕಾರ್ಡ್‌ಗಳಿವೆ” ಎಂದಿದ್ದಾರೆ.

ಮುಖ್ಯಮಂತ್ರಿ ಶಿವರಾಜ್‌ ಇಂತಹ ಹೇಳಿಕೆಗಳನ್ನು ನೀಡಿದರೂ ಬಿಜೆಪಿ ಎದುರಿಗೆ ಕಹಿ ಸತ್ಯಗಳಿವೆ. ಕರ್ನಾಟಕದಲ್ಲಿ ಮೋದಿಯವರು ಇದ್ದರು. ಮತಾಂಧ ಹಿಂದುತ್ವ ಮತ್ತು ಹಿಂದೂ ರಾಷ್ಟ್ರೀಯತೆಯ ಅಲೆಯ ಮೇಲೆ ಸವಾರಿ ಮಾಡಿದರೂ ಬಿಜೆಪಿ ಸೋತಿತು. ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ರೀತಿ ಆಗಿರುವುದರಿಂದ, ಕರ್ನಾಟಕದ ಫಲಿತಾಂಶವು ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಚಿಂತೆಗೀಡುಮಾಡಿವೆ. ಮುಂಬರುವ ರಾಜ್ಯ ಚುನಾವಣೆಗಳ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದು ಸದ್ಯದ ಪ್ರಶ್ನೆ.

ಇದನ್ನೂ ಓದಿರಿ: ಕುಸ್ತಿಪಟುಗಳಿಗೆ ಸವಾಲಾಗಿರುವ ‘ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌’ ಯಾರು? ಆತನ ಹಿನ್ನಲೆ, ಪ್ರಭಾವವೇನು?

ಮಧ್ಯಪ್ರದೇಶ ಮೂಲದ ರಾಜಕೀಯ ವಿಮರ್ಶಕ ಮತ್ತು ಶಿಕ್ಷಣ ತಜ್ಞ ಜಯಂತ್ ಸಿಂಗ್ ತೋಮರ್ ಪ್ರತಿಕ್ರಿಯಿಸಿ, “ಈ ಫಲಿತಾಂಶದಿಂದಾಗಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಉತ್ಸುಕವಾಗಿದೆ, ಒಗ್ಗಟ್ಟು ಪ್ರದರ್ಶಿಸುತ್ತಿದೆ. ಇನ್ನೊಂದೆಡೆ ಬಿಜೆಪಿಯಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಆಂತರಿಕ ಕಚ್ಚಾಟ ಶುರುವಾಗಿದೆ. ಉದಾಹರಣೆಗೆ, ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಸಾಗರ ಜಿಲ್ಲೆಯ ಕೆಲವು ಸಚಿವರು, ಶಾಸಕರು ಅಸಮಾಧಾನಗೊಂಡು ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಹೋಗಿದ್ದರು. ಮುಖ್ಯವಾಗಿ ಜ್ಯೋತಿರಾದಿತ್ಯ ಸಿಂಧ್ಯಾ ಫ್ಯಾಕ್ಟರ್‌ ಕೂಡ ಇದೆ. ಸಿಂಧಿಯಾ ಮೇಲೆ ಕಾಂಗ್ರೆಸ್ ಮಾತ್ರ ದಾಳಿ ಮಾಡುತ್ತಿಲ್ಲ, ಬಿಜೆಪಿಯೊಳಗಿನವರೂ ಅಸಮಾಧಾನ ಹೊಂದಿದ್ದಾರೆ” ಎಂದಿದ್ದಾರೆ.

“ಮಾಜಿ ಸಚಿವರಾದ ಅಜಯ್ ಬಿಷ್ಣೋಯ್ ಅಥವಾ ಭನ್ವರ್ ಸಿಂಗ್ ಶೇಖಾವತ್ ಸೇರಿದಂತೆ ಹಲವರು ಮತ್ತು ಎಲ್ಲ ಕಡೆಯಿಂದಲೂ ಮುಖ್ಯಮಂತ್ರಿ ದಾಳಿ ನಡೆಸುತ್ತಿದ್ದಾರೆ. ಸಿಎಂ ಶಿವರಾಜ್ ತನ್ನ ಹಿಡಿತವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ, ಜೈ ಆದಿವಾಸಿ ಯುವ ಶಕ್ತಿ ಸಂಘಟನೆ (JAYS) ಮಾಲ್ವಾದಲ್ಲಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಎಷ್ಟರ ಮಟ್ಟಿಗೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದು ಖಂಡಿತವಾಗಿಯೂ ಕೆಲವು ಸ್ಥಾನಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಅಭಿಪ್ರಾಯಪಡುತ್ತಾರೆ ತೋಮರ್‌.

ಇನ್ನು ಬಿಜೆಪಿಯು ವಿಂಧ್ಯಾ ಭಾಗದಲ್ಲಿ ಹಲವು ಸ್ಥಾನಗಳನ್ನು ಗೆದ್ದರೂ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದ ಕಾರಣ ಬಿಜೆಪಿಯಲ್ಲಿ ಅಸಮಾಧಾನವಿದೆ. ಈ ಎಲ್ಲ ಕಾರಣಗಳಿಂದ ಬಿಜೆಪಿಯಲ್ಲಿ ಕೊಂಚ ಭಿನ್ನಾಭಿಪ್ರಾಯ, ಒಡಕು ಮೂಡಿದೆ. ಹೀಗೆ ಬಿಜೆಪಿ ತತ್ತರಿಸುತ್ತಿರುವಾಗ, ಕರ್ನಾಟಕದ ಫಲಿತಾಂಶಗಳು ಬೆಂಕಿಗೆ ಪೆಟ್ರೋಲ್ ಸುರಿದಂತೆ ಆಗಿದೆ. ಕಾಂಗ್ರೆಸ್‌ನಲ್ಲಿ ಹೆಚ್ಚಿದ ಉತ್ಸಾಹವು ಬಿಜೆಪಿಗೆ ಹೊಸ ಸವಾಲನ್ನು ತಂದೊಡ್ಡಿದೆ.

ಮಧ್ಯಪ್ರದೇಶ ಮೂಲದ ಹಿರಿಯ ಪತ್ರಕರ್ತ ಪ್ರಕಾಶ್ ಹಿಂದೂಸ್ತಾನಿ, “ಕರ್ನಾಟಕ ಚುನಾವಣಾ ಫಲಿತಾಂಶಗಳು ಮಧ್ಯಪ್ರದೇಶದ ರಾಜಕೀಯದ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ, ಆದರೆ ಇಬ್ಬರೂ ಮುಖ್ಯ ಸ್ಪರ್ಧಿಗಳ ಆತ್ಮಸ್ಥೈರ್ಯದ ಮೇಲೆ ಖಂಡಿತವಾಗಿ ಪರಿಣಾಮ ಬೀರುತ್ತವೆ. ಇದರಿಂದ ವ್ಯತ್ಯಾಸವಾಗುತ್ತದೆ. ಕಾಂಗ್ರೆಸ್ಸಿನ ಮನೋಸ್ಥೈರ್ಯ ಏರಿದರೆ, ಬಿಜೆಪಿಯ ಸ್ಥೈರ್ಯ ಕುಸಿದಿದೆ. ಮೊದಲು ಬಿಜೆಪಿ ತಾನು ಅಜೇಯ ಎಂದು ಭಾವಿಸಿತ್ತು, ಆದರೆ ಈಗ ಅವರು (ಬಿಜೆಪಿಯವರು) ತಾವು ಸೋಲಬಹುದು ಎಂದು ಅರಿತುಕೊಂಡಿದ್ದಾರೆ” ಎನ್ನುತ್ತಾರೆ.

“ರಾಹುಲ್ ಗಾಂಧಿಯವರು ತಮ್ಮ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಸಮುದಾಯಗಳು ಹೆಚ್ಚಿರುವ ಬುರ್ಹಾನ್‌ಪುರ್, ಖಾರ್ಗೋನ್, ಖಾಂಡ್ವಾ ಮತ್ತು ಬರ್ವಾನಿಯಂತಹ  ಜಿಲ್ಲೆಗಳಿಗೆ ಭೇಟಿ ನೀಡಿ ಎಸ್‌ಟಿ ಸಮುದಾಯವನ್ನು ಸಂಪರ್ಕಿಸಿದ್ದಾರೆ. ಕರ್ನಾಟಕದ 15 ಎಸ್‌ಟಿ ಸ್ಥಾನಗಳ ಪೈಕಿ ಒಂದರಲ್ಲಿಯೂ ಬಿಜೆಪಿ ಗೆಲ್ಲಲು ಸಾಧ್ಯವಾಗಿಲ್ಲ. ಅದು ಬಿಜೆಪಿಯ ಚಿಂತೆಗೆ ಕಾರಣವಾಗಿದೆ.”

230 ಸದಸ್ಯರ ಮಧ್ಯಪ್ರದೇಶ ವಿಧಾನಸಭೆಯಲ್ಲಿ, 20% ಅಂದರೆ 47 ಸ್ಥಾನಗಳನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ. ತಜ್ಞರ ಪ್ರಕಾರ, ರಾಜ್ಯದ ಸುಮಾರು 70 ರಿಂದ 80 ಕ್ಷೇತ್ರಗಳಲ್ಲಿ ಎಸ್‌ಟಿ ಮತದಾರರ ಪ್ರಾಬಲ್ಯವಿದೆ.

2003ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಲು ಎಸ್‌ಟಿ ಸಮುದಾಯದ ಪಾತ್ರ ದೊಡ್ಡದಿತ್ತು. ನಂತರದ ಎರಡು ಚುನಾವಣೆಗಳಲ್ಲಿ ಎಸ್‌ಟಿ ಸಮುದಾಯದ ಬೆಂಬಲವನ್ನು ಬಿಜೆಪಿ ಮುಂದುವರೆಸಿತು ಮತ್ತು ಅಧಿಕಾರದಲ್ಲಿ ಉಳಿಯಿತು. ಆದರೆ 2018ರಲ್ಲಿ ಪಲ್ಲಟಗಳಾದವು. 2013ರಲ್ಲಿ 31 ಎಸ್‌ಟಿ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2018ರಲ್ಲಿ 16 ಸ್ಥಾನಗಳಿಗೆ ಕುಸಿಯಿತು. ಕಾಂಗ್ರೆಸ್‌ನ ಗೆಲುವು 15 ರಿಂದ 30ಕ್ಕೆ ಏರಿಕೆಯಾಯಿತು. ಹೀಗಾಗಿ ಕಾಂಗ್ರೆಸ್ ಸರ್ಕಾರ ರಚಿಸಲು ‌ಅವಕಾಶ ದೊರಕಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿ 109 ಮತ್ತು ಕಾಂಗ್ರೆಸ್ 114 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಗೆಲುವಿನ ಅಂತರ ತೀರಾ ಕಡಿಮೆಯಾಗಿದ್ದು, ಎಸ್‌ಟಿ ಮತದಾರರು ಬಿಜೆಪಿ ಪರ ಒಲವು ತೋರಿದ್ದರೆ ಸರ್ಕಾರ ರಚನೆ ಬಿಜೆಪಿಗೆ ಸುಲಭವಾಗುತ್ತಿತ್ತು.

ಎಸ್‌ಟಿ ಮತದಾರರು ಎಷ್ಟು ನಿರ್ಣಾಯಕ ಎಂಬುದನ್ನು ಬಿಜೆಪಿ ಈಗ ಅರಿತುಕೊಂಡಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದಲೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ರಾಜಕೀಯವು ಎಸ್‌ಟಿ ಕೇಂದ್ರಿತವಾಗಿದೆ. ಪರಿಶಿಷ್ಟ ಪಂಗಡ ಸಮುದಾಯಗಳು ಆಯೋಜಿಸುವ ವಿವಿಧ ಹಬ್ಬಗಳಲ್ಲಿ ಕೇಂದ್ರದ ಮೂರು ಪ್ರಮುಖ ನಾಯಕರು (ಪ್ರಧಾನಿ, ಗೃಹ ಸಚಿವರು ಮತ್ತು ರಾಷ್ಟ್ರಪತಿ) ಈ ಅವಧಿಯಲ್ಲಿ  ಭಾಗವಹಿಸಿದ್ದಾರೆ.

ದೇಶದಾದ್ಯಂತ ಇರುವ ವಿವಿಧ ಎಸ್‌ಟಿ ಸಮುದಾಯಗಳನ್ನು ಒಲಿಸಿಕೊಳ್ಳಲು ಬುಡಕಟ್ಟು ಮಹಿಳೆಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ಕೂಡ ಒಂದು ಮಹತ್ವದ ಹೆಜ್ಜೆ ಎಂದು ತಜ್ಞರು ಊಹಿಸುತ್ತಾರೆ. ಇಂತಹ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಕರ್ನಾಟಕದ ಎಲ್ಲಾ ಪರಿಶಿಷ್ಟ ಪಂಗಡದ ಮೀಸಲು ಸ್ಥಾನಗಳಲ್ಲಿ ಬಿಜೆಪಿ ಸೋತಿತು. ಹೀಗಾಗಿ ಅತಿ ಹೆಚ್ಚು ಎಸ್‌ಟಿ ಜನಸಂಖ್ಯೆಯನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಸ್ವಾಭಾವಿಕವಾಗಿ ಬಿಜೆಪಿ ಆತಂಕಗೊಳ್ಳಲು ಕಾರಣವಾಗಿದೆ.

“ಆದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸೋತರೆ ಅದು ಅವರದೇ ತಪ್ಪು” ಎಂದು ಪತ್ರಕರ್ತ ಪ್ರಕಾಶ್ ಹಿಂದೂಸ್ತಾನಿ ಅಭಿಪ್ರಾಯ ತಾಳುತ್ತಾರೆ.

ಕಾಂಗ್ರೆಸ್ ಪ್ರಭಾವದ ಬಗ್ಗೆ, ಆರ್‌ಎಸ್‌ಎಸ್ ಪರ ರಾಜಕೀಯ ವಿಶ್ಲೇಷಕ ಲೋಕೇಂದ್ರ ಸಿಂಗ್ ಮಾತನಾಡಿದ್ದಾರೆ. “ಕಾಂಗ್ರೆಸ್ ಎಲ್ಲಾ ಮಾನಸಿಕ ಸಿದ್ಧತೆಯಲ್ಲಿದೆ ಎಂಬುದಲ್ಲಿ ಸಂದೇಹವಿಲ್ಲ. ಪಕ್ಷದಾದ್ಯಂತ ಶಕ್ತಿ ಮತ್ತು ಉತ್ಸಾಹದ ಹರಿವು ಕಂಡುಬಂದಿದೆ. ಅವರು ಶ್ರದ್ಧೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಅರ್ಥದಲ್ಲಿ ಕಾಂಗ್ರೆಸ್‌ಗೆ ಮೇಲುಗೈ ಇದೆ” ಎನ್ನುತ್ತಾರೆ ಲೋಕೇಂದ್ರ.

ಮುಂದುವರಿದು, “ಕಾಂಗ್ರೆಸ್‌ನ ವರಿಷ್ಠರು ತಳಮಟ್ಟದವರೆಗೂ ಕಾರ್ಯಕರ್ತರ ಮನವೊಲಿಸಿ ಒಗ್ಗೂಡಿಸುತ್ತಿದ್ದಾರೆ. ದಿಗ್ವಿಜಯ್ ಸಿಂಗ್ ಅವರು ನಿರಂತರವಾಗಿ ಮಂಡಲ ಮಟ್ಟದಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ಪಕ್ಷದಲ್ಲಿ ಸಮನ್ವಯ ಸಾಧಿಸುವ ಕೆಲಸದಲ್ಲಿ ಸಕ್ರಿಯವಾಗಿದ್ದಾರೆ, ಆದರೆ ಬಿಜೆಪಿ ಇನ್ನೂ ಈ ಕಸರತ್ತನ್ನು ಪ್ರಾರಂಭಿಸಿಲ್ಲ. ಬಿಜೆಪಿಯು ಅದನ್ನು ಮಾಡಬೇಕಾಗಿದೆ. ಏಕೆಂದರೆ ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹೆಚ್ಚಿನ ಅಸಮಾಧಾನವಿದೆ. ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯ ಮುಖಂಡರು, ಕಾರ್ಯಕರ್ತರು ಮತ್ತು ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳಿರುವುದನ್ನು ಪರಿಗಣಿಸಿ, ಬಿಜೆಪಿಯು ತಳಮಟ್ಟದಲ್ಲಿ ಸಮನ್ವಯ ಸಾಧಿಸುವ ಕಾರ್ಯವನ್ನು ಪ್ರಾರಂಭಿಸಬೇಕಾಗಿತ್ತು. ಆದರೆ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಈಗ ಅವರು (ಕಾಂಗ್ರೆಸ್‌ನವರು) ಕಾರ್ಯಕರ್ತರಲ್ಲಿ ಶಕ್ತಿ ತುಂಬಲು ಮತ್ತು ಮಧ್ಯಪ್ರದೇಶದಲ್ಲೂ ಗೆಲುವು ಪಡೆಯಲು ಕರ್ನಾಟಕದ ಉದಾಹರಣೆಯನ್ನು ನೀಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಮಧ್ಯಪ್ರದೇಶದ ಆಡಳಿತ ವಿರೋಧಿ ಅಲೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತ ಶಮ್ಸ್ ಉರ್ ರೆಹಮಾನ್ ಅಲ್ವಿ, “ಕರ್ನಾಟಕದಲ್ಲಿ ಬಿಜೆಪಿಯ ಸೋಲು ಮಧ್ಯಪ್ರದೇಶದ ಪ್ರತಿಪಕ್ಷಗಳಿಗೆ ಭರವಸೆ ಮೂಡಿಸಿದೆ, ಮತದಾರರಲ್ಲಿ ಮಾಮಾ ಜಿ ಎಂದು ಜನಪ್ರಿಯವಾಗಿರುವ ಶಿವರಾಜ್ ಸಿಂಗ್ ಅವರ ವ್ಯಕ್ತಿತ್ವವು ಸೋತಿರಬಹುದು” ಎಂದು ಹೇಳಿದ್ದಾರೆ.

‘ಕರ್ನಾಟಕ ಫಲಿತಾಂಶ ಮಧ್ಯಪ್ರದೇಶದ ಮೇಲೆ ಯಾವುದೇ ಗೋಚರ ಪರಿಣಾಮ ಬೀರುವುದಿಲ್ಲ’ ಎನ್ನುತ್ತಾರೆ ಶಮ್ಸ್‌‌.

“ಸಾಮಾನ್ಯವಾಗಿ ಒಂದು ರಾಜ್ಯದ ಚುನಾವಣಾ ಫಲಿತಾಂಶ ಇನ್ನೊಂದು ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಿರಿಯ ಮಹಿಳಾ ಪತ್ರಕರ್ತೆ. “ಲೋಕಸಭಾ ಚುನಾವಣೆಯ ವೇಳೆ ಒಂದು ಸಂಗತಿ (ನಿರೂಪಣೆ) ಇಡೀ ದೇಶದ ಮೇಲೆ ಪರಿಣಾಮ ಬೀರಬಹುದು. ಆದರೆ ಅದು ವಿಧಾನಸಭೆ ಚುನಾವಣೆಗೆ ಅನ್ವಯಿಸುವುದಿಲ್ಲ. ಕರ್ನಾಟಕವು ದಕ್ಷಿಣ ಭಾರತದ ರಾಜ್ಯವಾಗಿದೆ. ಅಲ್ಲಿ ಜನರ ಸ್ಥಿತಿ, ಪರಿಸ್ಥಿತಿ, ಆರ್ಥಿಕತೆ, ಮನಸ್ಥಿತಿ ಮತ್ತು ಸಮಸ್ಯೆಗಳು ಮಧ್ಯಪ್ರದೇಶದ ಜನರಿಗಿಂತ ಭಿನ್ನವಾಗಿವೆ. ನಿರುದ್ಯೋಗ, ಮೂಲಸೌಕರ್ಯಗಳ ಕೊರತೆಯಂತಹ ಮೂಲಭೂತ ಸಮಸ್ಯೆಗಳು ಎಲ್ಲೆಡೆ ಬಹುತೇಕ ಒಂದೇ ಆಗಿದ್ದರೂ ಜನರ ಮನಸ್ಥಿತಿಯೇ ಬೇರೆ. ರಾಜಸ್ಥಾನ ಜನರಂತೆಯೇ ಕರ್ನಾಟಕದ ಜನರು ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರವನ್ನು ಬದಲಿಸುತ್ತಾ ಬಂದಿದ್ದಾರೆ. ಆದರೆ ಮಧ್ಯಪ್ರದೇಶದಲ್ಲಿ ಒಂದೇ ಪಕ್ಷವು ಸಾಮಾನ್ಯವಾಗಿ ದೀರ್ಘಕಾಲ ಅಧಿಕಾರದಲ್ಲಿ ಉಳಿಯುತ್ತಿದೆ. ಮೊದಲು ಕಾಂಗ್ರೆಸ್ ಇರುತ್ತಿತ್ತು, ಈಗ ಬಿಜೆಪಿ ಅಧಿಕಾರದಲ್ಲಿದೆ” ಎಂದಿದ್ದಾರೆ ಪತ್ರಕರ್ತೆ.

“ಎರಡೂ ರಾಜ್ಯಗಳ ಚುನಾವಣೆಗಳು ವಿಭಿನ್ನವಾಗಿರುತ್ತವೆ. ಮಧ್ಯಪ್ರದೇಶವು ಉತ್ತರ ಭಾರತ ಅಥವಾ ಹಿಂದಿ ಬೆಲ್ಟ್‌ನ ಅವಿಭಾಜ್ಯ ಅಂಗವಾಗಿದೆ. ಇಲ್ಲಿನ ಜನರ ಆಲೋಚನೆ ದಕ್ಷಿಣ ಭಾರತಕ್ಕಿಂತ ಭಿನ್ನವಾಗಿದೆ. ಇಲ್ಲಿ, ಜಾತಿ ಮತ್ತು ಧಾರ್ಮಿಕ ಸಮೀಕರಣಗಳು; ಧರ್ಮ ಮತ್ತು ರಾಷ್ಟ್ರೀಯತೆಯ ಬಗ್ಗೆ ಜನರ ವರ್ತನೆ ವಿಭಿನ್ನವಾಗಿದೆ. ಹಾಗಾಗಿ ಕರ್ನಾಟಕದ ಚುನಾವಣೆ ಮಧ್ಯಪ್ರದೇಶದ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎನ್ನುತ್ತಾರೆ.

“ಕರ್ನಾಟಕದ ಚುನಾವಣಾ ಫಲಿತಾಂಶಗಳು ಸ್ವಾಭಾವಿಕವಾಗಿ ಮಧ್ಯಪ್ರದೇಶದ ಮೇಲೆ ಕಡಿಮೆ ಪರಿಣಾಮ ಬೀರುತ್ತವೆ” ಎಂದು ಲೋಕೇಂದ್ರ ಒಪ್ಪಿಕೊಳ್ಳುತ್ತಾರೆ. “ಎರಡೂ ರಾಜ್ಯಗಳ ಸಮಸ್ಯೆಗಳು, ರಾಜಕೀಯ ಮತ್ತು ಜನಾಂಗೀಯ ಸಮೀಕರಣಗಳು, ಸಂದರ್ಭಗಳು ವಿಭಿನ್ನವಾಗಿವೆ. ಅಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳಿದ್ದವು, ಅದರಲ್ಲಿ ಒಂದು ಪಕ್ಷ (ಜೆಡಿಎಸ್) ತುಂಬಾ ದುರ್ಬಲವಾಗಿತ್ತು. ಜೆಡೆಸ್‌ನ ಮತ ಬ್ಯಾಂಕ್ ಸಂಪೂರ್ಣವಾಗಿ ಕಾಂಗ್ರೆಸ್ ಕಡೆಗೆ ಬದಲಾಯಿತು, ಇದರಿಂದಾಗಿ ಬಿಜೆಪಿ ಸೋಲನ್ನು ಅನುಭವಿಸಿತು” ಎಂದು ಗುರುತಿಸುತ್ತಾರೆ.

“ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ದರೂ ಬಿಜೆಪಿ ಮತ ಮತಬ್ಯಾಂಕ್‌ ಮಾತ್ರ ಭದ್ರವಾಗಿದೆ. ಬದಲಾಗಿ ಕಾಂಗ್ರೆಸ್‌ನ ಮತಗಳಿಕೆಯೇ ಹೆಚ್ಚಿದೆ. ಕರ್ನಾಟಕದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು, ಮಧ್ಯಪ್ರದೇಶದಲ್ಲಿ ಹಾಗಲ್ಲ” ಎಂದು ಶಮ್ಸ್ ಅಲ್ವಿ ಹೇಳುತ್ತಾರೆ.

ಅಂಕಿಅಂಶಗಳನ್ನು ಗಮನಿಸಿದರೆ- 2008 ರಿಂದಲೂ ಮಧ್ಯಪ್ರದೇಶದಲ್ಲಿ ಚುನಾವಣೆ ಕೆಲವು ತಿಂಗಳು ಇರುವ ಮೊದಲು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಾ ಬಂದಿದೆ. ಆದರೆ ಮಧ್ಯಪ್ರದೇಶದ ಚುನಾವಣಾ ಫಲಿತಾಂಶವು ಕರ್ನಾಟಕಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಉದಾಹರಣೆಗೆ, 2008 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ 110 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದ ಕೊರತೆಯನ್ನು ಎದುರಿಸಿತು. ಕಾಂಗ್ರೆಸ್ 80 ಮತ್ತು ಜೆಡಿಎಸ್‌ 28 ಸ್ಥಾನಗಳನ್ನು ಪಡೆದಿದ್ದವು. ಕೆಲವು ತಿಂಗಳ ನಂತರ ನಡೆದ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತು. 143 ಸ್ಥಾನಗಳನ್ನು ಬಿಜೆಪಿ ಪಡೆದರೆ, ಕಾಂಗ್ರೆಸ್ ಕೇವಲ 71 ಸ್ಥಾನಗಳನ್ನು ಪಡೆದುಕೊಂಡಿತ್ತು.

2013ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕೇವಲ 40 ಸ್ಥಾನಗಳನ್ನು ಪಡೆದುಕೊಂಡಿತು (ಭಾಗಶಃ ಬಿ.ಎಸ್. ಯಡಿಯೂರಪ್ಪನವರು ಕೆಜೆಪಿ ಕಟ್ಟಿದ್ದರಿಂದ) ಮತ್ತು ಕಾಂಗ್ರೆಸ್ 122 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸಿತು. ಆದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನ್ನು ಅನುಭವಿಸಿತು. ಕೇವಲ 58 ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು. ಆ ವರ್ಷ ಮಧ್ಯಪ್ರದೇಶದಲ್ಲಿ ಬಿಜೆಪಿ 165 ಸ್ಥಾನಗಳನ್ನು ಪಡೆದು ದಾಖಲೆ ನಿರ್ಮಿಸಿತು. 2018ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿತ್ತು ಹಾಗೂ ಸರ್ಕಾರಗಳನ್ನೂ ಇವು ರಚಿಸಿದವು.

ಇದನ್ನೂ ಓದಿರಿ: ಆರೋಪಿ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ

2013ರ ಅವಧಿಯಲ್ಲಿ ಎಂಪಿಪಿಇಬಿ ಹಗರಣ, ಡಂಪರ್ ಹಗರಣ, ನರ್ಮದಾದಲ್ಲಿ ಜಲ ಸತ್ಯಾಗ್ರಹ ಮತ್ತು 2018ರ ಅವಧಿಯಲ್ಲಿ ಮಂದಸೌರ್ ಗುಂಡಿನ ಘಟನೆಯಂತಹ ಪ್ರಮುಖ ವಿಷಯಗಳು ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಹೈಲೈಟ್ ಆಗಿದ್ದವು. ಆದರೂ ಬಿಜೆಪಿ, ಕರ್ನಾಟಕದ ಫಲಿತಾಂಶಗಳಿಂದ ಪ್ರಭಾವಿತವಾಗದೆ ಸರ್ಕಾರವನ್ನು ರಚಿಸಿತು. ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಈ ವರ್ಷ ಅಂತಹ ಯಾವುದೇ ದೊಡ್ಡ ಹಗರಣ ಕಾಡುತ್ತಿಲ್ಲ.

“ಕರ್ನಾಟಕದ ಚುನಾವಣಾ ಫಲಿತಾಂಶವು ಎರಡೂ ಪಕ್ಷಗಳ ಕಾರ್ಯಕರ್ತರ ಮನೋಸ್ಥೈರ್ಯದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ” ಎಂದು ಹಿರಿಯ ಮಹಿಳಾ ಪತ್ರಕರ್ತೆ ಪುನರುಚ್ಚರಿಸಿದ್ದಾರೆ. “ರಾಜಕೀಯವಾಗಿ ಮಹತ್ವ ಪಡೆಯುವ ರಾಜ್ಯದಲ್ಲಿ ಗೆಲ್ಲುವುದರ ಬಗ್ಗೆ ಕಾಂಗ್ರೆಸ್‌ ಸಂತೋಷಪಡುತ್ತದೆ. ಈ ಕಾರಣದಿಂದಾಗಿ ಅವರು ಹೆಚ್ಚು ಶ್ರಮಿಸಲಿದ್ದಾರೆ. ಕರ್ನಾಟಕದಲ್ಲಿ ಯಾವುದೇ ಕಲ್ಲನ್ನೂ ಕಾಂಗ್ರೆಸ್ ಬಿಡಲಿಲ್ಲ. ಬಿಜೆಪಿಯ ಮನೋಸ್ಥೈರ್ಯ ಕುಸಿದಿತ್ತು. ಕೋಮುವಾದದಿಂದ ಹಿಡಿದು ಪ್ರಧಾನಿ ಮೋದಿಯವರಿಂದ ರ್‍ಯಾಲಿಗಳನ್ನು ನಡೆಸುವವರೆಗೆ, ರಾಷ್ಟ್ರೀಯತೆಯವರೆಗೆ ಪ್ರತಿಯೊಂದು ರಾಜಕೀಯ ತಂತ್ರವನ್ನು ಬಿಜೆಪಿ ಪ್ರಯೋಗಿಸಿದರೂ ಸೋತಿದೆ. ಇದು ಬಿಜೆಪಿ ಪಾಳಯದಲ್ಲಿ ತಲ್ಲಣ ಮೂಡಿಸಿದೆ. ಬಹುಶಃ ಈ ಹೆಚ್ಚುತ್ತಿರುವ ಆತಂಕದಿಂದಾಗಿ, ಬಿಜೆಪಿಯಲ್ಲಿ ಆಂತರಿಕ ಘರ್ಷಣೆಗಳು ಹೊರಹೊಮ್ಮಲು ಪ್ರಾರಂಭಿಸಿವೆ, ಇದು ಹಿಂದೆಂದೂ ಘಟಿಸಿರಲಿಲ್ಲ” ಎನ್ನುತ್ತಾರೆ.

ಕಾಂಗ್ರೆಸ್ ತನ್ನ ಮನೋಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ. “ಮೊದಲು 126-130 ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಿತ್ತು, ಈಗ 140-150 ಸೀಟುಗಳನ್ನು ಗೆಲ್ಲುತ್ತೇವೆ” ಎಂದು ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ಅವರ ಹೇಳಿಕೆ ನೀಡುತ್ತಿದ್ದಾರೆ. ಇದು ಕಾಂಗ್ರೆಸ್‌ನ ಮನೋಬಲವನ್ನು ಸ್ಪಷ್ಟಪಡಿಸುತ್ತದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಮಧ್ಯಪ್ರದೇಶದಲ್ಲಿ ನಿರ್ಣಾಯಕ ವ್ಯಕ್ತಿಯಾಗುತ್ತಾರೆಯೇ?

ಕರ್ನಾಟಕದಲ್ಲಿ ಬಿಜೆಪಿ ಸುಮಾರು ಮೂರೂವರೆ ವರ್ಷಗಳ ಕಾಲ ಆಡಳಿತ ನಡೆಸಿತು. ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಇದರರ್ಥ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಅವರಂತೆ ರಾಜ್ಯದಲ್ಲಿ ಶಾಶ್ವತ ಅಥವಾ ಜನಪ್ರಿಯ ಮುಖ ಬೇರೊಂದಿಲ್ಲ. ಇದು ಎರಡು ರಾಜ್ಯಗಳ ನಡುವಿನ ದೊಡ್ಡ ವ್ಯತ್ಯಾಸವನ್ನು ಸೂಚಿಸುತ್ತದೆ. ಆದರೆ ಪ್ರಕಾಶ್ ಹಿಂದೂಸ್ತಾನಿ ಬೇರೆಯೇ ಅಭಿಪ್ರಾಯಪಡುತ್ತಾರೆ. “ಮಧ್ಯಪ್ರದೇಶದಲ್ಲಾಗಲಿ, ಕರ್ನಾಟಕದಲ್ಲಾಗಲಿ ಬೇರೆ ಮುಖವಿಲ್ಲ; ಎಲ್ಲೆಲ್ಲೂ ಮೋದಿಯ ಮುಖವಷ್ಟೇ.”

“ಶಿವರಾಜ್ ಸಿಂಗ್ ಅವರ ಪ್ರತಿ ಭಾಷಣ, ಘೋಷಣೆ ಮತ್ತು ಯೋಜನೆಯಲ್ಲಿ ಮೋದಿಯವರ ಉಲ್ಲೇಖ ಕಂಡುಬರುತ್ತದೆ” ಎನ್ನುತ್ತಾರೆ ಹಿಂದೂಸ್ತಾನಿ. ಅವರು ಮೊದಲಿಗಿಂತ ಭಿನ್ನವಾಗಿ ಮೋದಿಯವರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಶಿವರಾಜ್ ಸಿಂಗ್ ಅವರು ಮೋದಿಯ ವ್ಯಕ್ತಿತ್ವದಲ್ಲಿ ಆಶ್ರಯ ಪಡೆಯುತ್ತಿದ್ದಾರೆ, ಅವರನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ.

ಪ್ರಕಾಶ್ ಹಿಂದೂಸ್ತಾನಿ ಅವರ ಅಭಿಪ್ರಾಯವು ತಾರ್ಕಿಕವಾಗಿದೆ, ಏಕೆಂದರೆ ಕಾಂಗ್ರೆಸ್ ವಿರುದ್ಧ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಂಡಾಯವೆದ್ದು ನಂತರ ಬಿಜೆಪಿ ಪಕ್ಷವು ಶಿವರಾಜ್ ಸಿಂಗ್ ನೇತೃತ್ವದ ಸರ್ಕಾರವನ್ನು ರಚಿಸಿದಾಗಿನಿಂದಲೂ ಶಿವರಾಜ್‌ ಅವರ ದನಿಯಲ್ಲಿ ಬದಲಾವಣೆ ಕಂಡು ಬಂದಿದೆ. ಒಂದು ಕಾಲದಲ್ಲಿ ಸ್ವತಃ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದ ಶಿವರಾಜ್ ಈಗ ಮೋದಿಗೆ ಋಣಿಯಾಗಿರುವಂತೆ ವರ್ತಿಸುತ್ತಿದ್ದಾರೆ.

ಇದನ್ನೂ ಓದಿರಿ: ಆರೋಪಿ ಬ್ರಿಜ್ ಬೆಂಬಲಕ್ಕೆ ನಿಂತ ಸ್ವಾಮೀಜಿಗಳು, ಬಿಜೆಪಿ ನಾಯಕರು; ಪೋಕ್ಸೋ ವಿರುದ್ಧ ವಾಗ್ದಾಳಿ

ಕರ್ನಾಟಕದ ಸೋಲು ಬಿಜೆಪಿಯ ಮನೋಸ್ಥೈರ್ಯಕ್ಕೆ ಧಕ್ಕೆ ಉಂಟು ಮಾಡಿರಬಹುದು ಎಂದು ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಡುತ್ತಾರೆ. ಆದರೆ ಕರ್ನಾಟಕ ಫಲಿತಾಂಶ ಶಿವರಾಜ್ ಸಿಂಗ್‌ಗೆ ವರದಾನವಾಗಿದೆ, ಏಕೆಂದರೆ ಪಕ್ಷದ ಹೈಕಮಾಂಡ್ ಪರ್ಯಾಯ ಮುಖ್ಯಮಂತ್ರಿಯ ಮುಖವನ್ನು ಮಧ್ಯಪ್ರದೇಶದಲ್ಲಿ ಹುಡುಕಲು ಹೋಗುತ್ತಿಲ್ಲ!

ಗುಜರಾತ್ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರ ಬದಲಾವಣೆ ಪ್ರಯೋಗ ಮಾಡಿತು. ಹಲವು ಶಾಸಕರು, ಸಚಿವರಿಗೆ ಟಿಕೆಟ್ ನಿರಾಕರಿಸಿತು. ವಯೋಮಿತಿ ನಿಯಮಗಳನ್ನು ಜಾರಿಗೆ ತಂದಿತು. ಇತರೆ ಬದಲಾವಣೆಗಳನ್ನು ಮಾಡಿತು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಇದನ್ನು ಪುನರಾವರ್ತಿಸುತ್ತದೆಯೇ ಎಂಬ ಬಗ್ಗೆ ರಾಜಕೀಯ ವಿಶ್ಲೇಷಕರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಮಧ್ಯಪ್ರದೇಶದಲ್ಲಿ ಹೊಸ ಪ್ರಯೋಗಗಳನ್ನು ನಡೆಸಲು ಅಥವಾ ಹೊಸ ಬದಲಾವಣೆಗಳನ್ನು ಮಾಡಲು ಬಿಜೆಪಿ ಹಿಂಜರಿಯಲಿದೆ ಎಂದು ಜಯಂತ್ ಸಿಂಗ್, ಶಮ್ಸ್ ಅಲ್ವಿ ಮತ್ತು ಪ್ರಕಾಶ್ ಹಿಂದೂಸ್ತಾನಿ ಹೇಳುತ್ತಾರೆ. ಮತ್ತೊಂದೆಡೆ, “ಶಾಸಕರು ಮತ್ತು ಸಚಿವರ ಕಾರ್ಯಕ್ಷಮತೆ ಕಳಪೆಯಾಗಿದ್ದರೆ, ಅವರಿಗೆ ಟಿಕೆಟ್ ನಿರಾಕರಿಸುವುದರಲ್ಲಿ ಸಂದೇಹವಿಲ್ಲ” ಎಂದು ಲೋಕೇಂದ್ರ ಅಭಿಪ್ರಾಯಪಡುತ್ತಾರೆ. ಈ ಬಗ್ಗೆ ಮಹಿಳಾ ಪತ್ರಕರ್ತೆ, “ಬಿಜೆಪಿಯು ಹಲವರಿಗೆ ಟಿಕೆಟ್ ನಿರಾಕರಿಸುತ್ತದೆ. ಇದು ಅಗತ್ಯವಿದೆ. ಬಿಜೆಪಿ ವಿರುದ್ಧ 18 ವರ್ಷಗಳ ಆಡಳಿತ ವಿರೋಧಿ ಅಲೆ. ಕ್ಷೇತ್ರ ಮಟ್ಟದ ಸಮೀಕ್ಷೆಯಲ್ಲಿ ಯಾವುದಾದರೂ ಶಾಸಕರ ವಿರುದ್ಧ ಜನಾಕ್ರೋಶವಿದೆ ಎಂದು ಕಂಡುಬಂದಾಗ, ಅಂಥವರಿಗೆ ಟಿಕೆಟ್‌ ನೀಡುವುದಾದರೂ ಹೇಗೆ?” ಎಂದು ಪ್ರಶ್ನಿಸುತ್ತಾರೆ.

ಕೃಪೆ: ದಿ ವೈರ್‌, ದೀಪಕ್ ಗೋಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯನ್ನು ಟೀಕಿಸಿದ್ದಕ್ಕೆ ಸ್ವಪಕ್ಷದ ನಾಯಕನ ಬಂಧನ: ಮೌನಕ್ಕೆ ಶರಣಾದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು

0
ರಾಜಸ್ಥಾನದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಉಸ್ಮಾನ್‌ ಘನಿ ಬಂಧನದ ಬಗ್ಗೆ ಮಾತನಾಡಲು ಸ್ವಪಕ್ಷದ ಅಲ್ಪಸಂಖ್ಯಾತ ಘಟಕದ ನಾಯಕರು ಮುಂದೆ ಬರುತ್ತಿಲ್ಲ. 'ಪ್ರಜಾಪ್ರಭುತ್ವ' ದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಅಪರಾಧವಲ್ಲ ಎಂದು ತಿಳಿದಿದ್ದರೂ ಈ...