Homeದಲಿತ್ ಫೈಲ್ಸ್ಎರಡು ಬಾರಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ನಿರ್ಲಕ್ಷ್ಯ ತಾಳಿದ್ದ ಯುಪಿ ಪೊಲೀಸರು

ಎರಡು ಬಾರಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ನಿರ್ಲಕ್ಷ್ಯ ತಾಳಿದ್ದ ಯುಪಿ ಪೊಲೀಸರು

- Advertisement -
- Advertisement -

2021, ಡಿಸೆಂಬರ್ 31. ಸಂಜೆ 5:30ರ ಸಮಯ. ಬಾಲಕಿಯು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಗ್ರಾಮದ ನಿವಾಸಿ ಸತೀಶ್ ಅಲ್ಲಿಗೆ ಬಂದನು. “ನಿನ್ನ ತಂದೆ ನಿನ್ನನ್ನು ಅರುಣ್ ಅವರ ಮನೆಗೆ ಬರುವಂತೆ ಕರೆಯುತ್ತಿದ್ದಾರೆ” ಎಂದು ನಂಬಿಸಿ ಕರೆದೊಯ್ದನು ಎಂದು ಎಫ್‌ಐಆರ್‌ ಉಲ್ಲೇಖಿಸುತ್ತದೆ.

ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆದಿರುವ ಭೀಕರ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಉನ್ನಾವೋದಲ್ಲಿನ ಮೌರವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯು ಸತೀಶ್‌ನ ಮಾತನ್ನು ನಂಬಿ ಅರುಣ್ ಮನೆಗೆ ಹೋದಳು. ಅಲ್ಲಿ ರೋಷನ್, ಸುಖ್ದಿನ್, ಅರುಣ್, ರಂಜಿತ್ ಮತ್ತು ಸತೀಶ್ ಇದ್ದರು. ಮೊದಲು ರೋಷನ್ ಆಕೆಯ ಮೇಲೆ ಅತ್ಯಾಚಾರ ಎಸಗಿದನು. ನಂತರ ಸತೀಶ್. ನಂತರ ಎಲ್ಲರೂ ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದರು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಬಾಲಕಿಯು ನಿರ್ಜೀವವಾದಾಗ, ಆಕೆಗೆ ಜ್ಯೂಸ್ ಮತ್ತು ಗ್ಲೂಕೋಸ್ ನೀಡಿದರು. ರಂಜಿತ್ ಇಡೀ ಘಟನೆಯನ್ನು ವಿಡಿಯೋ ಮಾಡಿಕೊಂಡನು. ಆಕೆ ಚೇತರಿಸಿಕೊಂಡಿದ್ದನ್ನು ಕಂಡು ಸುಖ್ದಿನ್ ಆಕೆಗೆ ಆಯುಧ ತೋರಿಸಿ, “ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು, ನಿನ್ನ ಮನೆಯವರನ್ನು ಕೊಂದು ಹಾಕುತ್ತೇವೆ. ರಂಜಿತ್ ವಿಡಿಯೋ ಮಾಡಿಕೊಂಡಿದ್ದಾನೆ. ಜಾಲತಾಣಗಳಲ್ಲಿ ಹಾಕಲಾಗುತ್ತದೆ” ಎಂದು ಬೆದರಿಸಿದನು.

2023ರ ಮೇ 2ರಂದು ಉತ್ತರ ಪ್ರದೇಶದ ಪೋಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದು ಒಂದು ವರ್ಷ ನಾಲ್ಕು ತಿಂಗಳ ನಂತರ ಎಫ್‌ಐಆರ್‌ ಆಗಿದೆ. ದಲಿತ ಸಮುದಾಯದ ನಾಲ್ವರು ಮತ್ತು ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ಒಬ್ಬಾತ ದಲಿತ ಬಾಲಕಿ ಮೇಲಿನ ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆ.

ಪ್ರಕರಣ ಬೆಳಕಿಗೆ ಬಂದಾಗ ಮತ್ತಷ್ಟು ವಿವರಗಳು ತಿಳಿದವು. ಇದೇ ಆರೋಪಿಗಳು 2021ರ ಡಿಸೆಂಬರ್‌ ಮತ್ತು 2022ರ ಫೆಬ್ರುವರಿಯಲ್ಲಿ ಸಾಮೂಹಿಕವಾಗಿ ಅತ್ಯಾಚಾರವನ್ನು ಈ ಬಾಲಕಿ ಮೇಲೆ ಎಸಗಿದ್ದರು. ಒಂದು ವರ್ಷದ ಹಿಂದೆ ಮೊದಲ ಬಾರಿಗೆ ಅತ್ಯಾಚಾರವಾದಾಗ ಎಫ್‌ಐಆರ್ ದಾಖಲಿಸಲು ಯುಪಿ ಪೊಲೀಸರ ಬಳಿ ಪುರಾವೆಗಳಿದ್ದರೂ, ಅವರು ನಿರ್ಲಕ್ಷಿಸಿದ್ದಾರೆ ಎಂಬುವುದು ಬೆಳಕಿಗೆ ಬಂದಿದೆ. ಸಂತ್ರಸ್ತ ಕುಟುಂಬವು ನ್ಯಾಯಾಲಯಕ್ಕೆ ಹೋಗುವವರೆಗೂ ಪ್ರಕರಣ ದಾಖಲಾಗಿರಲಿಲ್ಲ.

2022, ಸೆಪ್ಟೆಂಬರ್ 22ರಂದು ಅಪ್ರಾಪ್ತ ಬಾಲಕಿಯು ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಕರಣ ತೀವ್ರತೆ ಪಡೆದುಕೊಂಡಿತು. ಎರಡನೇ ಬಾರಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಬಂಧಿತನಾಗಿದ್ದ ವ್ಯಕ್ತಿಯೊಬ್ಬ ಜಾಮೀನಿನ ಮೇಲೆ ಹೊರಬಂದಾಗ 2023ರ ಎಪ್ರಿಲ್‌ನಲ್ಲಿ ಸಂತ್ರಸ್ತಯ ಮನೆಗೆ ಬೆಂಕಿ ಹಚ್ಚಿದ್ದನು.

ಸಂತ್ರಸ್ತೆಯ ಆರು ತಿಂಗಳ ಮಗು (ಮೊದಲ ಬಾರಿಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಾಗ ಗರ್ಭಿಣಿಯಾಗಿದ್ದರಿಂದ ಜನಿಸಿದ ಮಗು) ಮತ್ತು ಆಕೆಯ ಮೂರು ವರ್ಷದ ಸಹೋದರಿಯ ಮೇಲೆ ದಾಳಿ ಮಾಡಲಾಯಿತು. ಸುಟ್ಟ ಗಾಯಗಳಾದವು.

ಪೊಲೀಸ್‌ ನಿರ್ಲಕ್ಷ್ಯ

2021, ಡಿಸೆಂಬರ್ 31ರಂದು ನಡೆದ ಮೊದಲ ಸಾಮೂಹಿಕ ಅತ್ಯಾಚಾರದ ಬಗ್ಗೆ ಅಪ್ರಾಪ್ತ ಬಾಲಕಿ ತನ್ನ ಕುಟುಂಬಕ್ಕೆ ತಿಳಿಸಿರಲಿಲ್ಲ ಎಂದು ಸಂತ್ರಸ್ತೆಯ ಪರ ವಕೀಲ ಸಂಜೀವ್ ತ್ರಿವೇದಿಯವರು ‘ಆರ್ಟಿಕಲ್ 14’ ಜಾಲತಾಣಕ್ಕೆ ತಿಳಿಸಿದ್ದಾರೆ.

ಆದರೆ ಫೆಬ್ರವರಿ 13 ರಂದು ಎರಡನೇ ಬಾರಿಗೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ನಂತರ ಫೆಬ್ರವರಿ 14 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಫೆಬ್ರವರಿ 15ರಂದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಸಂತ್ರಸ್ತೆಯು ಆರು ವಾರಗಳ ಗರ್ಭಿಣಿ ಎಂಬುದು ಬೆಳಕಿಗೆ ಬಂದಿತು.

“ಕುಟುಂಬಕ್ಕೆ ಈ ಮಾಹಿತಿ ಇರಲಿಲ್ಲ…. ಏಪ್ರಿಲ್‌ನಲ್ಲಿ ಸಂತ್ರಸ್ತೆಯ ಹೊಟ್ಟೆ ಉಬ್ಬಲು ಶುರುವಾಯಿತು. ಏನೋ ಅನಾರೋಗ್ಯ ಇರಬಹುದು ಎಂದು ತಿಳಿದ ಕುಟುಂಬ ವೈದ್ಯರ ಬಳಿ ಕರೆದೊಯ್ದರು. ಬಾಲಕಿಗೆ ಆಂತರಿಕ ಊತ ಕಾಣಿಸಿಕೊಂಡಿದೆ ಎಂದು ತಿಳಿಸಿ, ಔಷಧಗಳನ್ನು ನೀಡಿದ್ದರು” ಎನ್ನುತ್ತಾರೆ ತ್ರಿವೇದಿ.

ಆದರೆ ಆಕೆಯ ಹೊಟ್ಟೆ ಬೆಳೆಯಿತು. ಮತ್ತೆ ಜುಲೈ-ಆಗಸ್ಟ್‌ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಏಳರಿಂದ ಎಂಟು ತಿಂಗಳ ಗರ್ಭಿಣಿ ಎಂದು ತಿಳಿದುಕೊಂಡರು. ಅದು ಎರಡನೇ ಸಾಮೂಹಿಕ ಅತ್ಯಾಚಾರದ ಪರಿಣಾಮವಾಗಿರಲಿಲ್ಲ. ಗರ್ಭ ತೆಗೆಸಲು ಸಾಧ್ಯವಿರಲಿಲ್ಲ. ಯಾಕೆಂದರೆ ಸಮಯ ಮೀರಿ ಹೋಗಿತ್ತು.

2021 ಡಿಸೆಂಬರ್ 31ರಂದು ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಾಲಕಿ ತನ್ನ ತಾಯಿಗೆ ತಿಳಿಸಿದಳು. ಅವರು ಮತ್ತೊಂದು ಎಫ್‌ಐಆರ್ ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದರು. ಆದರೆ ಎರಡನೇ ಬಾರಿ ಸಾಮೂಹಿಕ ಅತ್ಯಾಚಾರಕ್ಕೊಳದಾಗ ದಾಖಲಾಗಿರುವ ಎಫ್‌ಐಆರ್‌ ಒಂದೇ ಸಾಕಾಗುತ್ತದೆ ಎಂದು ಪೊಲೀಸರು ಹೇಳಿದರು.

2023, ಮೇ 2ರಂದು ದಾಖಲಾದ ಎಫ್‌ಐಆರ್‌ನಲ್ಲಿನ ಘಟನೆಗಳ ಸಾರಾಂಶವು ಪೊಲೀಸರು ಮೊದಲ ಸಲದ ಅತ್ಯಾಚಾರದ ಬಗ್ಗೆ ದಾಖಲಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. “ದೂರುದಾರರ ಅಪ್ರಾಪ್ತ ಮಗಳು ಮನೆಗೆ ಬಂದಾಗ, ಆಕೆ ಏನನ್ನೂ ಹೇಳಲಿಲ್ಲ. ಕೆಲವು ತಿಂಗಳುಗಳ ನಂತರ, ಕುಟುಂಬಕ್ಕೆ ತಿಳಿಯಿತು. ಅವರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಆದರೆ ಅವರ ದೂರಿನ ಮೇಲೆ ಯಾವುದೇ ತನಿಖೆ ನಡೆಸಲಿಲ್ಲ. ಕುಟುಂಬವು ವೈದ್ಯಕೀಯ ಸಮಸ್ಯೆಗಳಲ್ಲಿ ನಿರತರಾವಾಯಿತು. ಏಕೆಂದರೆ ಮಗಳ ಜೀವವನ್ನು ಉಳಿಸುವುದು ಅವರ ಮುಂದಿನ ಸವಾಲಾಗಿತ್ತು.”

“2022 ಫೆಬ್ರವರಿ 13ರಂದು ಸಂತ್ರಸ್ತೆಯು ಧರಿಸಿದ್ದ ಬಟ್ಟೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿದೆ. ರಕ್ತದ ಕಲೆಗಳು ಬಟ್ಟೆಯಲ್ಲಿ ಕಂಡುಬಂದಿವೆ” ಎಂದು ವಕೀಲ ತ್ರಿವೇದಿ ಹೇಳುತ್ತಾರೆ.

ಇದನ್ನೂ ಓದಿರಿ: ‘ಅಂಬೇಡ್ಕರ್‌ ಜಯಂತಿ ಮಾಡ್ತೀಯಾ?’: ದಲಿತ ಯುವಕನ ಭೀಕರ ಹತ್ಯೆ

“2021 ಡಿಸೆಂಬರ್ 31  ಮತ್ತು 2022 ಫೆಬ್ರವರಿ, 13ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ” ಎನ್ನುತ್ತಾರೆ ತ್ರಿವೇದಿ. ಆದರೂ ಮೊದಲ ಸಲದ ಅತ್ಯಾಚಾರದ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದಿದ್ದಾರೆ.

ಮೇ 9 ರಂದು ನಿಗದಿಯಾಗಿದ್ದ ವಿಚಾರಣೆಗೆ ಮೊದಲು, ಯುಪಿ ಪೊಲೀಸರು ಮೇ 2ರಂದು ಎಫ್‌ಐಆರ್ ದಾಖಲಿಸಿದ್ದಾರೆ. “ಪೊಲೀಸರು ಗೊಂದಲಕ್ಕೊಳಗಾದರು ಮತ್ತು ಮೇ 2 ರಂದು ಎಫ್ಐಆರ್ ದಾಖಲಿಸಿದರು” ಎಂದು ತ್ರಿವೇದಿ ಹೇಳಿದರು.

2023ರ ಮೇ 2ರಂದು ದಾಖಲಾದ ಎಫ್‌ಐಆರ್‌ನಲ್ಲಿ ರೋಷನ್ ಲೋಧಿ, ಸುಖ್ದಿನ್, ಅರುಣ್, ರಂಜಿತ್ ಮತ್ತು ಸತೀಶ್ ಎಂಬವರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಐಪಿಸಿ ಸೆಕ್ಷನ್‌ನ ಅಡಿಯಲ್ಲಿ ಹೊರಿಸಲಾಗಿದೆ. ಪೋಕ್ಸೋ ಮತ್ತು ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾ‌ಯ್ದೆಯಲ್ಲೂ ಪ್ರಕರಣ ದಾಖಲಿಸಲಾಗಿದೆ.

ಅಪ್ರಾಪ್ತರ ಮನೆಗೆ ಬೆಂಕಿ ಹಚ್ಚಿದ ನಂತರ 2023ರ ಏಪ್ರಿಲ್ 17 ರಂದು ಮುರವ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ರೋಷನ್, ಸತೀಶ್, ರಂಜಿತ್, ರಾಜ್ ಬಹದ್ದೂರ್, ಚಂದನ್, ಸುಖದಿನ್ ಮತ್ತು ಅಮನ್ ದೋಮ್ ಆರೋಪಿಗಳಲ್ಲಿ. ಆರೋಪಿಗಳಲ್ಲಿ ಅಪ್ರಾಪ್ತ ಬಾಲಕಿಯ ಅಜ್ಜ ಚಂದನ್, ಆಕೆಯ ಚಿಕ್ಕಪ್ಪ ರಾಜ್ ಬಹದ್ದೂರ್ ಸೇರಿದ್ದಾರೆ.

ವರದಿ ಕೃಪೆ: Article14.com

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...