Homeಕರ್ನಾಟಕಮೋದಿಯ ಕೋಮುವಾದಿ ಒಬಿಸಿ ರಾಜಕಾರಣಕ್ಕೆ, ಸಿದ್ದರಾಮಯ್ಯ ಎಂಬ ವೈಚಾರಿಕ ಒಬಿಸಿಯ ಕೌಂಟರ್‌‌

ಮೋದಿಯ ಕೋಮುವಾದಿ ಒಬಿಸಿ ರಾಜಕಾರಣಕ್ಕೆ, ಸಿದ್ದರಾಮಯ್ಯ ಎಂಬ ವೈಚಾರಿಕ ಒಬಿಸಿಯ ಕೌಂಟರ್‌‌

ಮೋದಿಯವರ ನಗರ ಕೇಂದ್ರೀತ ಕೋಮುವಾದಿ ಒಬಿಸಿ ರಾಜಕಾರಣಕ್ಕೂ ಸಿದ್ದರಾಮಯ್ಯನವರ ಕೃಷಿ ಕೇಂದ್ರಿತ ಶೂದ್ರತ್ವಕ್ಕೂ ಇರುವ ವ್ಯತ್ಯಾಸವನ್ನು ಈ ಲೇಖನ ತೆರೆದಿಟ್ಟಿದೆ

- Advertisement -
- Advertisement -

(ರಾಜಕೀಯ ಚಿಂತಕರು, ಸಾಮಾಜಿಕ ಕಾರ್ಯಕರ್ತರು ಆಗಿರುವ ಬರಹಗಾರ ‘ಕಾಂಚ ಐಲಯ್ಯ ಶೆಫರ್ಡ್’ ಅವರು ‘ದಿ ವೈರ್‌’ ಜಾಲತಾಣಕ್ಕೆ ಬರೆದ ಇಂಗ್ಲಿಷ್‌ ಲೇಖನದ ಅನುವಾದ ಇದಾಗಿದೆ. ಸಿದ್ದರಾಮಯ್ಯನವರ ರಾಜಕೀಯ ಮಾದರಿಯ ಕುರಿತು ಈ ಬರಹ ಗಂಭೀರ ಒಳನೋಟಗಳನ್ನು ನೀಡಿದೆ.)

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯೇ ಕಾರಣ ಎಂಬುದು ಒಂದು ದೃಷ್ಟಿಕೋನವಷ್ಟೇ. ಯಾತ್ರೆ ಪ್ರಮುಖ ಪಾತ್ರ ವಹಿಸಿದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ರಾಜ್ಯ ಮಟ್ಟದಲ್ಲಿ ಪ್ರಬಲ ಮಾಸ್ ಲೀಡರ್ ಇಲ್ಲದೆ, ಯಾವುದೇ ರಾಷ್ಟ್ರೀಯ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ.

ಬಿಜೆಪಿ ನಾಯಕತ್ವವನ್ನು ಕಾಡಿದ, ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ ಮತ್ತು ಉತ್ತಮ ಆಡಳಿತಗಾರ ಎಂದೂ ಖ್ಯಾತಿಯನ್ನು ಗಳಿಸಿರುವ ಸಿದ್ದರಾಮಯ್ಯನವರಂತಹ ಮಾಸ್ ಲೀಡರ್‌ ಇಲ್ಲದಿದ್ದರೆ 2023ರಲ್ಲಿ ಕಾಂಗ್ರೆಸ್ ಗೆಲ್ಲುವುದು ಅಸಾಧ್ಯವಾಗಿತ್ತು. ಆದರೂ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ರಾಜ್ಯದಲ್ಲಿ ಗಮನಾರ್ಹವಾದ ಜನ ಬೆಂಬಲವಿಲ್ಲ. ಸಿದ್ಧರಾಮಯ್ಯನವರ ಪ್ರಬುದ್ಧ ಮತ್ತು ಅಚಲವಾದ ಜಾತ್ಯತೀತ ನಾಯಕತ್ವ, ಜನರನ್ನು ಒಟ್ಟುಗೂಡಿಸುವ ಅವರ ಸಾಮರ್ಥ್ಯ- ಇವು ಕಾಂಗ್ರೆಸ್‌ನ ಗೆಲುವಿಗೆ ಕಾರಣವೆಂದು ಎಲ್ಲಕ್ಕಿಂತ ಹೆಚ್ಚಾಗಿ ಪ್ರಶಂಸಿಸಬೇಕಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಮಟ್ಟದ ನಾಯಕರು ಪ್ರತಿ ರಾಜ್ಯದಲ್ಲೂ ಅದೇ ಮಾದರಿಯನ್ನು ಪುನರಾವರ್ತಿಸಿ ಪ್ರಯೋಜನ ಪಡೆಯುವುದನ್ನು ನೋಡಬೇಕು.

ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗುತ್ತಿರುವುದು ಇಡೀ ಭಾರತಕ್ಕೆ ಒಳ್ಳೆಯ ಸುದ್ದಿ. ಬಿಜೆಪಿಯನ್ನು ನಿಯಂತ್ರಿಸುವ ಮತ್ತು ಜನರ ನೆಮ್ಮದಿಗಾಗಿ ಆಡಳಿತವನ್ನು ನಡೆಸುವ ಸವಾಲುಗಳನ್ನು ಇವರ ಎರಡನೇ ಅವಧಿ ಹೊಂದಿದೆ.

ಸಿದ್ದರಾಮಯ್ಯನವರು ಬಿಜೆಪಿಗೆ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಸೋಲುಣಿಸಿದ್ದಾರೆ. ಸಿದ್ದರಾಮಯ್ಯನವರ ಜನಕಲ್ಯಾಣ ರಾಜಕಾರಣ ಮತ್ತು ಮೋದಿಯವರ ‘ಜೈ ಬಜರಂಗ ಬಲಿ’ ಕೋಮುವಾದಿ ರಾಜಕಾರಣದ ನಡುವಿನ ಚುನಾವಣೆ ಇದಾಗಿತ್ತು. ಸಿದ್ದರಾಮಯ್ಯನವರ ತಳಮಟ್ಟದ ಜನಪ್ರಿಯತೆ ಮತ್ತು ಅವರ ನಿರಂತರ ಜಾತ್ಯತೀತ ಪ್ರಜಾಸತ್ತಾತ್ಮಕ ಕಾರ್ಯತಂತ್ರಗಳು ಅವರನ್ನು ನಿಜವಾದ ಜನನಾಯಕನನ್ನಾಗಿ ರೂಪಿಸಿವೆ. ಕೋಮುವಾದ ಮತ್ತು ಪ್ರಜಾಪ್ರಭುತ್ವದ ಕಲ್ಯಾಣವಾದದ ನಡುವಿನ ಕವಲುದಾರಿಯಲ್ಲಿ ದೇಶವು ಇರುವ ಈ ಕ್ಷಣದಲ್ಲಿ ಕರ್ನಾಟಕದ ಈ ಚುನಾವಣೆಯು ಮಹತ್ವದ ಪಾಠವನ್ನು ಹೇಳಿದೆ. ಈ ಬದಲಾವಣೆಯು ಹಿಂದುತ್ವದ ಸೈದ್ಧಾಂತಿಕ ಯಂತ್ರಾಂಗಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ.

ಇದನ್ನೂ ಓದಿರಿ: ಸಿದ್ದರಾಮಯ್ಯ 24 ಹಿಂದೂಗಳನ್ನು ಕೊಂದಿದ್ದಾರೆಂದ ಹರೀಶ್‌ ಪೂಂಜಾ ವಿರುದ್ಧ ಎಫ್‌ಐಆರ್‌

ಆರ್‌ಎಸ್‌ಎಸ್‌ನ ಮುಂದಿನ ಮುಖ್ಯಸ್ಥ ಎಂದೇ ಗುರುತಿಸಿಕೊಂಡಿರುವ ದತ್ತಾತ್ರೇಯ ಹೊಸಬಾಳೆ ಅವರ ತವರು ರಾಜ್ಯ ಕರ್ನಾಟಕ. ಸಾಧ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಬಹುಮತ ಪಡೆಯಲು ಅವರು ಬಯಸಿದ್ದರು. 2013ರಲ್ಲಿ ಮೋದಿಯವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿಸಬೇಕು ಎಂದು ಒತ್ತಾಯಿಸಿದವರಲ್ಲಿ ಹೊಸಬಾಳೆ ಕೂಡ ಒಬ್ಬರು ಎಂದು ಹೇಳಲಾಗುತ್ತದೆ. ಆದ್ದರಿಂದಾಗಿ ಒಬಿಸಿ ಕಾರ್ಡ್ ಬಳಸಿ ಮತ್ತು ಕೋಮು ವಿಭಜನೆಯನ್ನು ತೀಕ್ಷ್ಣಗೊಳಿಸಿ ಕರ್ನಾಟಕವನ್ನು ಗೆಲ್ಲಲು ಮೋದಿ ಮುಂದಾದರು. ತಮ್ಮ ಸರ್ಕಾರದ ಶಕ್ತಿ, ಸಮಯ ಮತ್ತು ಸಾಮಾರ್ಥ್ಯವನ್ನು ಬಳಸಿದರು. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೊಸಬಾಳೆ ಮತ್ತು ಬಿ.ಎಲ್‌.ಸಂತೋಷ್ ಥರದ ಆರ್‌ಎಸ್‌ಎಸ್‌ ನಾಯಕರನ್ನು ಸಮಾಧಾನಪಡಿಸಲು ಕೆಲವು ಮುಸ್ಲಿಂ ವಿರೋಧಿ ನಿರ್ಧಾರಗಳನ್ನು ಕೈಗೊಂಡರು. ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸುವುದು ಮತ್ತು ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸುವುದು- ಬಿಜೆಪಿ ಸರ್ಕಾರ ಕೈಗೊಂಡ ನಿರ್ಣಾಯಕ ಮುಸ್ಲಿಂ ವಿರೋಧಿ ನೀತಿಗಳು.

ಆದರೆ ಸಿದ್ದರಾಮಯ್ಯನವರು 2013 ಮತ್ತು 2018ರ ನಡುವೆ ಮುಖ್ಯಮಂತ್ರಿಯಾಗಿದ್ದಾಗ ಸಾಮೂಹಿಕ ಸಂಪರ್ಕದಿಂದ ಎಲ್ಲವನ್ನೂ ಎದುರಿಸಿದರು. ಬಡವರು, ಶೂದ್ರರು, ಒಬಿಸಿಗಳು, ದಲಿತರು ಮತ್ತು ಆದಿವಾಸಿಗಳು ಸಿದ್ದರಾಮಯ್ಯನವರನ್ನು ಮರಳಿ ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದರು. ಟಿಪ್ಪು ಸುಲ್ತಾನ್ ಕುರಿತು ಸಕಾರಾತ್ಮಕವಾಗಿ ಮತ್ತು ಸ್ಪಷ್ಟ ದನಿಯಲ್ಲಿ ಸಿದ್ದರಾಮಯ್ಯನವರು ಪ್ರತಿಕ್ರಿಯಿಸುತ್ತಿದ್ದರಿಂದ ಸಹಜವಾಗಿ ಮುಸ್ಲಿಮರೂ ಅವರೊಂದಿಗೆ ಇದ್ದರು.

ಸಿದ್ದರಾಮಯ್ಯ ಅವರು ಜನಪ್ರಿಯರಾದರೂ ನಗರ ಕೇಂದ್ರಿತ ಉದ್ಯಮದ ಹಿನ್ನೆಲೆಯವರೇನೂ ಅಲ್ಲ. ರಾಜಕೀಯ ಉದ್ದೇಶಗಳಿಗಾಗಿ ಒಬಿಸಿ ಸ್ಥಾನಮಾನವನ್ನು ಪಡೆದ ಸಮುದಾಯದಿಂದಲೂ ಬಂದವರಲ್ಲ. ಪ್ರಾಚೀನ ಹಿಂದೂ ಗ್ರಂಥಗಳ ಕಾಲದಿಂದಲೂ ಶಿಕ್ಷಣ ಮತ್ತು ಮಾನವ ಘನತೆಯ ಹಕ್ಕನ್ನು ಕಳೆದುಕೊಂಡ ಐತಿಹಾಸಿಕ ಶೂದ್ರ ಕುರುಬ ಕುಟುಂಬದಿಂದ ಬಂದವರು ಸಿದ್ದರಾಮಯ್ಯ.

ಒಬಿಸಿ ಮತಗಳು ದೆಹಲಿಯ ಅಧಿಕಾರ ಸಮೀಕರಣವನ್ನು ನಿರ್ಧರಿಸಲಿವೆ ಎಂದು ಅರಿತುಕೊಂಡ ಆರ್‌ಎಸ್‌ಎಸ್/ಬಿಜೆಪಿ ಮತ್ತು ಅಂಗಸಂಸ್ಥೆಗಳು ಶೂದ್ರರಲ್ಲದ ಅನೇಕ ನಾಯಕರನ್ನು ಒಬಿಸಿ ಎಂದು ಬಿಂಬಿಸುತ್ತವೆ. ಇವುಗಳು (ಆರ್‌ಎಸ್‌ಎಸ್‌/ಬಿಜೆಪಿ) ಮಂಡಲ್ ಮೀಸಲಾತಿಯನ್ನು ವಿರೋಧಿಸಿದ್ದವು. ಹೀಗಾಗಿ ಒಬಿಸಿ ಮತಗಳಿಲ್ಲದೆ ದೆಹಲಿಯ ಅಧಿಕಾರ ಹಿಡಿಯುವುದು ಅಸಾಧ್ಯವೆಂಬ ಅರಿವು ಇವರಿಗಿತ್ತು. ಈಗ ಒಬಿಸಿ ನಾಯಕರೆಂದು ಬಿಂಬಿಸಲ್ಪಷ್ಟ ಬಿಜೆಪಿ ನಾಯಕರಾದ ನರೇಂದ್ರ ಮೋದಿ ಮತ್ತು ಸುಶೀಲ್ ಮೋದಿ ಅವರು ಮಂಡಲ ಮೀಸಲಾತಿಯನ್ನು ವಿರೋಧಿಸಿದವರು. ಕಮಂಡಲ ಚಳವಳಿಯ ನಾಯಕರಾಗಿ ಕೆಲಸ ಮಾಡಿದವರು.

ಸಿದ್ದರಾಮಯ್ಯ ಇವರ ಶತ್ರು. ಸಿದ್ದರಾಮಯ್ಯ ಮಂಡಲ್ ಚಳವಳಿಯ ಪ್ರಬಲ ನಾಯಕರಾಗಿದ್ದವರು. ಕುರುಬ ಕುಟುಂಬದಿಂದ ಬಂದವರು. ಕೃಷಿ ಮತ್ತು ಪಶುಪಾಲನೆ ಕೇಂದ್ರಿತ ಆರ್ಥಿಕತೆಯನ್ನು ಅವಲಂಬಿಸಿದ ಕುಟುಂಬದವರು. 10ನೇ ವರ್ಷದಲ್ಲಿ ಇವರನ್ನು ಶಾಲೆಗೆ ಸೇರಿಸಲಾಗಿತ್ತು. ನಂತರ ಬಿಎಸ್ಸಿ ಮತ್ತು ಎಲ್ಎಲ್‌ಬಿ ಪದವಿಗಳನ್ನು ಪಡೆದರು. ಆ ದಿನಗಳಲ್ಲಿ ಒಬ್ಬ ಕುರುಬ ಹುಡುಗನಿಗೆ ಇದು ಅನಿರೀಕ್ಷಿತವಾಗಿತ್ತು. ಎಲ್‌ಎಲ್‌ಬಿ ಮುಗಿಸಿದ ನಂತರ ಮೈಸೂರು ಭಾಗದಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಲೇ ವಕೀಲಿ ವೃತ್ತಿ ಆರಂಭಿಸಿದರು. ಯುವ ವಕೀಲರಾಗಿದ್ದ ಸಿದ್ದರಾಮಯ್ಯನವರು, 1980ರ ದಶಕದ ಆರಂಭದಲ್ಲಿ ರೈತ ಚಳವಳಿಯ ಖ್ಯಾತ ನಾಯಕ ಎಂ.ಡಿ.ನಂಜುಂಡಸ್ವಾಮಿ ಅವರ ಕಣ್ಣಿಗೆ ಬಿದ್ದರು. ರೈತ ಸಂಘಟನೆಯಾದ ಕರ್ನಾಟಕ ರಾಜ್ಯ ರೈತ ಸಂಘದ ಪ್ರತಿನಿಧಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಸಿದ್ದರಾಮಯ್ಯನವರಿಗೆ ಕಲ್ಪಿಸಿಕೊಟ್ಟರು. ಮೊದಲ ಬಾರಿಗೆ ಗೆದ್ದು 1983ರಲ್ಲಿ ರಾಜ್ಯ ವಿಧಾನಸಭೆಗೆ ಕಾಲಿಟ್ಟರು. ನಂತರ ಅವರು ಜನತಾ ಪಕ್ಷಕ್ಕೆ ಸೇರಿದರು. ಬಡವರ ಬಣದ ನಾಯಕರಾಗಿ ಹೊರಹೊಮ್ಮಿದರು. ಅವರು ಚುನಾವಣೆಯ ನಂತರ ಚುನಾವಣೆಗಳನ್ನು ಎದುರಿಸಿ ಗೆದ್ದರು ಮತ್ತು ಮಂತ್ರಿಯೂ ಆದರು.

ಜನತಾ ದಳದ ವಿಭಜನೆಯ ನಂತರ, ಸಿದ್ದರಾಮಯ್ಯನವರು ದೇವೇಗೌಡರ ಜಾತ್ಯತೀತ ಜನತಾ ದಳ (ಜೆಡಿಎಸ್‌) ಸೇರಿದರು. ಬಡವರ ಪರ ಧ್ವನಿ ಎತ್ತಿದರು ಮತ್ತು ಒಬಿಸಿ, ಎಸ್‌ಸಿ, ಆದಿವಾಸಿಗಳ ಪ್ರತಿನಿಧಿಯಾಗಿ ಗುರುತಿಸಿಕೊಂಡರು. ದೇವೇಗೌಡರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದ ಅವರು ಮುಂದಿನ ಮುಖ್ಯಮಂತ್ರಿ ಆಗುವ ಭರವಸೆ ಇಟ್ಟುಕೊಂಡಿದ್ದರು. ಆದರೆ ದೇವೇಗೌಡರು ತಮ್ಮ ಮಗನನ್ನೇ ಆಯ್ಕೆ ಮಾಡಿಕೊಂಡರು.

ಸಿದ್ದರಾಮಯ್ಯನವರು ನಂತರ ಜೆಡಿಎಸ್ ತೊರೆದು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಹೋರಾಟ ಕಟ್ಟಿದರು. ಬೇರೊಂದು ಪಕ್ಷ ಕಟ್ಟುವ ಬದಲಿಗೆ ಕಾಂಗ್ರೆಸ್ ಪ್ರವೇಶಿಸಿದರು. ಜಾತ್ಯತೀತತೆ ಮತ್ತು ವೈಚಾರಿಕತೆಗೆ ತಮ್ಮ ಬಲವಾದ ಬದ್ಧತೆಯನ್ನು ತಂದುಕೊಂಡರು. ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಸಿದ್ದರಾಮಯ್ಯನವರು ನೀಡಿದ ಎಲ್ಲಾ ಹೇಳಿಕೆಗಳಲ್ಲಿಯೂ ಜಾತ್ಯತೀತತೆ ಮತ್ತು ವೈಚಾರಿಕತೆಯ ಬದ್ಧತೆ ಕಾಣಬಹುದು. ಕೇಸರಿ (ಹಿಂದುತ್ವ) ವಾದದೊಂದಿಗೆ ಅವರು ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಣಿಕಟ್ಟಿನಲ್ಲಿ ಕೇಸರಿ ದಾರಗಳು ರಾರಾಜಿಸುವುದನ್ನು  ಕಾಣಬಹುದು, ಆದರೆ ಸಿದ್ದರಾಮಯ್ಯ ಹಾಗೆ ಅಲ್ಲ.

ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ದೇವಸ್ಥಾನಗಳಿಗೆ ಹೋಗುವ ಮೂಲಕ ತಮ್ಮ ಹಿಂದೂ ನಂಬಿಕೆಯನ್ನು ಪ್ರದರ್ಶಿಸುತ್ತಾರೆ. ಆದರೆ ಸಿದ್ದರಾಮಯ್ಯ ಹಾಗಿಲ್ಲ. “ಬಸವಣ್ಣ ಮತ್ತು ಅಕ್ಕ ಮಹಾದೇವಿ ಅವರು ನನ್ನ ಆಧ್ಯಾತ್ಮಿಕ ನಾಯಕರು, ಅವರ ಸಂಪ್ರದಾಯದವನು ನಾನು” ಎಂದು ಹೇಳುತ್ತಾರೆ.

ಸಿದ್ದರಾಮಯ್ಯನವರು ಹೇಗೆ ನಿಜವಾದ ಒಬಿಸಿ ನಾಯಕ?

ಪ್ರಸ್ತುತವಾಗಿ ಜನಸಂಖ್ಯೆಯ ಸುಮಾರು 52%ರಷ್ಟಿರುವ ಶೂದ್ರರು- ಇತರೆ ಹಿಂದುಳಿದ ವರ್ಗಗಳಲ್ಲಿಯೂ ಮತ್ತು ಸಾಮಾನ್ಯ ವರ್ಗದಲ್ಲಿಯೂ (ಜಾಟ್‌ಗಳು, ಪಟೇಲ್‌ಗಳು, ಮರಾಠರು, ರೆಡ್ಡಿಗಳು, ಕಮ್ಮಗಳು, ನಾಯರ್‌ಗಳು ಮತ್ತು ಮುಂತಾದವು) ಸೇರಿದ್ದಾರೆ. ಜಾಟರು ಮತ್ತು ರೆಡ್ಡಿಗಳಂತೆ ಇರುವ ಲಿಂಗಾಯತರು, ಒಕ್ಕಲಿಗರು ಮೇಲ್ವರ್ಗದ ರೈತ ಶೂದ್ರರಾಗಿದ್ದರೂ ಕರ್ನಾಟಕದಲ್ಲಿ ಮೀಸಲಾತಿ ಹೊಂದಿದ್ದಾರೆ. ಅವರನ್ನು ಇತರೆ ಹಿಂದುಳಿದ ವರ್ಗಗಳು ಅಥವಾ ಒಬಿಸಿ ಎಂದೂ ಗುರುತಿಸಲಾಗಿದೆ. ಕುರುಬ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯನವರು ಕೃಷಿ ಮೂಲದವರು. ಆ ಮೂಲಕ ಜೀವನದ ನಡೆಸಿದ ಸಮುದಾಯದವರು. ಲಿಂಗಾಯತರು ಮತ್ತು ಒಕ್ಕಲಿಗರೊಂದಿಗೆ ಇವರ ಸಾಮ್ಯತೆ ಇದೆ. ಮಾಂಸ, ಹಾಲು ಮತ್ತು ಧಾನ್ಯ ಉತ್ಪಾದಕರೊಂದಿಗೆ ಸಿದ್ದರಾಮಯ್ಯನವರ ಸಂಬಂಧವು ಆಳವಾದದ್ದು ಮತ್ತು ನಿಕಟವಾದದ್ದು.

ನಗರ ವ್ಯಾಪಾರ ಕೇಂದ್ರೀತ ‘ಮಾಡ್-ಗಾಂಚಿ’ ಸಮುದಾಯದ ಹಿನ್ನೆಲೆಯಿಂದ ಬಂದಿರುವ ಮೋದಿಯವರು, ಸಿದ್ದರಾಮಯ್ಯನವರನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಆಗಾಗ್ಗೆ ಪ್ರಯತ್ನಿಸಿದ್ದಾರೆ. ಆದರೆ ಸಿದ್ದರಾಮಯ್ಯ ಒಬಿಸಿಗಳ ನಿಜವಾದ ಪ್ರತಿನಿಧಿ, ಕರ್ನಾಟಕದ ಶೂದ್ರರಿಗೆ ಮೀಸಲಾತಿ ದೊರಕಿಸಬೇಕೆಂದು ಹೋರಾಡಿದವರು. ಅದು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಗೊತ್ತು. ಆ ಜಾತಿಗಳ ಬಡವರು ಸಂಪೂರ್ಣವಾಗಿ ಅವರೊಂದಿಗಿದ್ದಾರೆ. ದೇವರಾಜ ಅರಸು ನಂತರ ಕರ್ನಾಟಕ ರಾಜ್ಯದಲ್ಲಿ ಇಷ್ಟೊಂದು ಜನಪ್ರಿಯತೆ ಹೊಂದಿರುವ ಏಕೈಕ ನಾಯಕ ಸಿದ್ದರಾಮಯ್ಯ.

ಮೋದಿಯವರನ್ನು ಮುಂದಿಟ್ಟುಕೊಂಡು, ಒಬಿಸಿ ತಂತ್ರಗಾರಿಕೆ ಮಾಡುವ ಬಿಜೆಪಿ ಎರಡು ಲೋಕಸಭಾ ಚುನಾವಣೆಗಳನ್ನು ಗೆದ್ದಿದೆ. ರಾಷ್ಟ್ರದ ಶೂದ್ರ ಕೃಷಿಕ ಒಬಿಸಿ ನಾಯಕರು ಕೈಜೋಡಿಸಿದರೆ ಮಾತ್ರ ಅವರನ್ನು (ಮೋದಿಯವರನ್ನು) ಸೋಲಿಸಬಹುದು ಎಂದು ನಾನು ನಂಬುತ್ತೇನೆ. ದಕ್ಷಿಣ ಭಾರತದಲ್ಲಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಪಿಣರಾಯಿ ವಿಜಯನ್, ಎಂ.ಕೆ.ಸ್ಟಾಲಿನ್, ಕೆ.ಚಂದ್ರಶೇಖರ್ ರಾವ್, ಜಗನ್ ಮೋಹನ್ ರೆಡ್ಡಿ ಅವರು ಶೂದ್ರ ಕೃಷಿಕ ಮತ್ತು ಕುಶಲಕರ್ಮಿಗಳ ಹಿನ್ನೆಲೆಯಿಂದ ಬಂದವರು. ಉತ್ತರ ಭಾರತದಲ್ಲಿನ ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ನಿತೀಶ್ ಕುಮಾರ್, ಭೂಪೇಶ್ ಭಾಗೇಲ್ ಮತ್ತು ಅಶೋಕ್ ಗೆಹ್ಲೋಟ್ ಕೂಡ ಶೂದ್ರ ಕೃಷಿ ಹಿನ್ನೆಲೆಯಿಂದ ಬಂದವರು. 2024ರಲ್ಲಿ ಅವರು ತಮ್ಮ ಪಕ್ಷಗಳನ್ನು ಮುನ್ನೆಡೆಸಿದರೆ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ. ಬಿಜೆಪಿಯ ನಗರ ವ್ಯಾಪಾರ ಒಬಿಸಿ ಅಜೆಂಡಾವನ್ನು ಐತಿಹಾಸಿಕ ಶೂದ್ರ ಕೃಷಿಕ-ರೈತ ಒಬಿಸಿ ಅಜೆಂಡಾದ ಮೂಲಕ ಎದುರಿಸಬೇಕು ಎಂಬುದನ್ನು ದೆಹಲಿಯ ಕಾಂಗ್ರೆಸ್ ಅರಿತುಕೊಳ್ಳಬೇಕು. ಸಿದ್ದರಾಮಯ್ಯನವರ ಮಾದರಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತದೆ.

ಪ್ರಧಾನಿಯಾಗಿರುವ ಮೋದಿಯವರು ‘ಜೈ ಬಜರಂಗ ಬಲಿ’ ಎಂಬ ಧಾರ್ಮಿಕ ಘೋಷಣೆಯನ್ನು ಒಮ್ಮೆ (ಚುನಾವಣೆಯಲ್ಲಿ) ಬಳಸಿದರು. ಚುನಾವಣಾ ಬೂತ್‌ಗಳಿಗೆ ಹೋಗಿ ಮತ ಚಲಾಯಿಸುವ ಮೊದಲು ಈ ಘೋಷಣೆಯನ್ನು ಜಪಿಸುವಂತೆ ಜನರನ್ನು ಒತ್ತಾಯಿಸಿದರು. ತಮ್ಮ ಆಕ್ರಮಣಕಾರಿ ಕೋಮುವಾದಿತ್ವವನ್ನು ಚುನಾವಣೆಯಲ್ಲಿ ಸ್ಪಷ್ಟವಾಗಿ ತೋರಿಸಿದರು. ನೈತಿಕವಾಗಿ, ಅವರು ಸಾಕಷ್ಟು ಕುಸಿದರು.

ಇದನ್ನೂ ಓದಿರಿ: ಅನಿಷ್ಟ ಸತಿ ಪದ್ದತಿ ಇನ್ನೂ ಜೀವಂತ: ಸತಿ ಹಾರಬೇಕೆಂಬ ಒತ್ತಡಕ್ಕೆ ಬೇಸೆತ್ತು ಇಂಜಿನಿಯರ್ ಮಹಿಳೆ ಆತ್ಮಹತ್ಯೆ

ರಾಷ್ಟ್ರದಾದ್ಯಂತ ಶೂದ್ರ-ಒಬಿಸಿ ನಾಯಕರು ಒಗ್ಗೂಡಿ ಸಕಾರಾತ್ಮಕ ಪ್ರಜಾಸತ್ತಾತ್ಮಕ ಕಲ್ಯಾಣದೊಂದಿಗೆ ದೇಶವನ್ನು ಮುನ್ನಡೆಸುವ ಸಮಯ ಬಂದಿದೆ. ಒಬಿಸಿ ರಾಜಕೀಯವು ಕೋಮುವಾದವನ್ನು ಕೊನೆಗಾಣಿಸುತ್ತದೆ. ನಗರೀಕೃತ ಕೋಮುವಾದಿ ಒಬಿಸಿ ರಾಜಕೀಯವು ಕೃಷಿ ಉತ್ಪಾದಕ ಶೂದ್ರ/ಒಬಿಸಿಯಿಂದ ಬಹಳವೇ ದೂರವಿದೆ.

ಕೃಷಿಕ ಕೇಂದ್ರೀತ ರಾಷ್ಟ್ರೀಯತೆಯನ್ನು ನಿರೂಪಿಸುವುದು ಮತ್ತು ಒಬಿಸಿಯೇತರ, ದಲಿತ, ಆದಿವಾಸಿ ಶಕ್ತಿಗಳನ್ನು ಬೃಹತ್ ಪ್ರಮಾಣದಲ್ಲಿ ಹೊಂದಿದ ಕ್ರೋನಿ ಕ್ಯಾಪಿಟಲ್ ಕ್ರೋಢೀಕರಣವನ್ನು ಪರಿಶೀಲಿಸುವುದು ನಿರ್ಣಾಯಕವಾಗಿದೆ. ಈ ಶಕ್ತಿಗಳು ಭಾರತದ ಪ್ರಜಾಸತ್ತಾತ್ಮಕ ಬಂಡವಾಳಶಾಹಿ ಮಾರ್ಗವನ್ನು ವಿರೂಪಗೊಳಿಸಿವೆ.

ಮಹಾತ್ಮ ಫುಲೆ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪೆರಿಯಾರ್ ಅವರು ರಾಜಕೀಯದಲ್ಲಿ ಧರ್ಮವನ್ನು ಒಳಗೊಳ್ಳದೆ ಸಕಾರಾತ್ಮಕವಾದ ಜನಪರ ಪ್ರಜಾಪ್ರಭುತ್ವವನ್ನು ಬಯಸಿದ್ದರು. ಸಿದ್ದರಾಮಯ್ಯ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಆ ಸಿದ್ಧಾಂತವನ್ನು ಪ್ರತಿನಿಧಿಸಿದ್ದಾರೆ. ಕಾಂಗ್ರೆಸ್ ಬುದ್ಧಿಜೀವಿಗಳು- ಯಾವುದು ಒಳ್ಳೆಯದು ಎಂದು ತಿಳಿದಿದ್ದರೆ, ಸಿದ್ದರಾಮಯ್ಯನವರ ಹಾದಿಯನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು ಮತ್ತು ರಾಷ್ಟ್ರ ಮಟ್ಟದಲ್ಲಿ ಅಧಿಕಾರ ಹಿಡಿಯುವ ತಂತ್ರವನ್ನು ರೂಪಿಸಬೇಕು.

ಲೇಖಕರು: ಕಾಂಚ ಐಲಯ್ಯ ಶಫರ್ಡ್‌

ಕೃಪೆ: ದಿ ವೈರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...