Homeಪುಸ್ತಕ ವಿಮರ್ಶೆಪುಸ್ತಕ ವಿಮರ್ಶೆ; ಬದಿಕಿರುವುದೇ ಕಥೆ ಹೇಳಲಿಕ್ಕೆ ಎಂದು ಬರೆದು ಬದುಕಿದ ಲ್ಯಾಟಿನ್ ಅಮೆರಿಕನ್ ಲೇಖಕ ಮಾರ್ಕ್ವೆಜ್

ಪುಸ್ತಕ ವಿಮರ್ಶೆ; ಬದಿಕಿರುವುದೇ ಕಥೆ ಹೇಳಲಿಕ್ಕೆ ಎಂದು ಬರೆದು ಬದುಕಿದ ಲ್ಯಾಟಿನ್ ಅಮೆರಿಕನ್ ಲೇಖಕ ಮಾರ್ಕ್ವೆಜ್

- Advertisement -
- Advertisement -

ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್ (1927-2014) ಲ್ಯಾಟಿನ್ ಅಮೆರಿಕಾದ ಮಹಾನ್ ಲೇಖಕ. ಹುಟ್ಟೂರು ದಕ್ಷಿಣ ಅಮೆರಿಕಾದ ಒಂದು ಸಣ್ಣ ಪಟ್ಟಣ ಅರಕಾಟಕಾ. ಅದು ಕೆರೆಬಿಯನ್ ಜೌಗು ಪ್ರದೇಶ. ಬಾಳೆಯ ತೋಟಗಳಿಂದ ಸಮೃದ್ಧವಾಗಿದ್ದ ಅದರ ನೆರೆ ಹೊರೆಯ ಊರುಗಳೂ ಸೇರಿದಂತೆ ಆ ಪ್ರದೇಶವನ್ನು ಮಕ್ಯಾಂಡೋ ಪ್ಲಾಂಟೇಶನ್ ಎಂದು ಕರೆಯಲಾಗಿತ್ತು. ನಂತರ ಮಾರ್ಕ್ವೆಜ್ ಅದನ್ನೇ ತನ್ನ ಒನ್ ಹಂಡ್ರಡ್ ಇಯರ್‍ಸ್ ಆಫ್ ಸಾಲಿಟ್ಯೂಡ್ ಕಾದಂಬರಿ ಬರೆಯುವ ಕಾಲಕ್ಕೆ ನೆಲೆಗಟ್ಟಾನ್ನಾಗಿ ಪರಿವರ್ತಿಸಿಕೊಂಡ. ಯಾವಾಗ ಮಾರ್ಕ್ವೆಜ್ ಆ ಮಕ್ಯಾಂಡೋ ಪ್ರದೇಶವನ್ನು ತನ್ನ ಕಾದಂಬರಿಗೆ ರಂಗಸ್ಥಲವನ್ನಾಗಿ ನಿರ್ಮಿಸಿಕೊಂಡನೋ ಆಗ ಅಲ್ಲಿನ ಆ ಹತ್ತೂ ಸಮಸ್ತರೂ ಕಾದಂಬರಿ ಲೋಕಕ್ಕೆ ಒಳನುಗ್ಗಿ ನನ್ನ ಬಗ್ಗೆ ತನ್ನ ಬಗ್ಗೆ ಕಥೆ ಹೇಳಪ್ಪಾ ಎಂದು ದುಂಬಾಲು ಬಿದ್ದಂತೆ ಕಾಣುತ್ತದೆ. ಇವರೇ ಅವನ ಕೃತಿಯ ಮೂಲ ಮಾತೃಕೆಗಳು. ಹಾಗಾಗಿ ಒನ್ ಹಂಡ್ರಡ್ ಇಯರ್‍ಸ್ ಆಫ್ ಸಾಲಿಟ್ಯೂಡ್ ಕಾದಂಬರಿಯಲ್ಲಿ ಆ ಧೀರೋದಾತ್ತ ಕೆರೇಬಿಯನ್ ಸಂಸ್ಕೃತಿ ಮೈದೋರಿ ಹರಳುಗಟ್ಟುತ್ತದೆ. ಇಡೀ ಲ್ಯಾಟಿನ್ ಅಮೆರಿಕಾವು ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್‌ನನ್ನು ಇವ ನಮ್ಮವ ಎಂದು ಅಂಗೀಕರಿಸಿತು. ಡಾನ್ ಗ್ಯಾಬೋ ಗೇಬ್ರಿಯೋ ಎಂಬ ಹೆಸರು ಈಗ ಮನೆಮಾತು. ಆರ್ ಅಂಕುಶವಿಟ್ಟರೂ ನೆನೆವುದವನ ಮನಂ ಕೆರೆಬಿಯನ್ ಕರಾವಳಿಯ. ಮಾರ್ಕ್ವೆಜ್ ತನ್ನ ಬಾಲ್ಯದ ಎಂಟೊಂಬತ್ತು ವರ್ಷಗಳನ್ನು ಅವನ ಅಜ್ಜಿತಾತಂದಿರ ಜೊತೆ ಅರಕಾಟಕಾ ಊರಿನಲ್ಲಿ ಕಳೆದವನು. ಅವರ ಬಗ್ಗೆ ತನ್ನ ಆತ್ಮಚರಿತ್ರೆ ‘ಲಿವಿಂಗ್ ಟು ಟೆಲ್ ದಿ ಟೇಲ್’ನಲ್ಲಿ ಎದೆತುಂಬಿ ಹಾಡಿಕೊಳ್ಳುತ್ತಾನೆ. ಅಜ್ಜಿತಾತಂದಿರು ಹೇಳುತ್ತಿದ್ದ ಕಥೆಗಳ ಮಾಂತ್ರಿಕತೆಯ ಮೋಡಿಗೆ (ಮ್ಯಾಜಿಕಲ್ ಮೆಲೋಡಿ) ಮರುಳಾಗಿದ್ದವನು. ಆತನ ಹಲವಾರು ಕಥೆಕಾದಂಬರಿಗಳಿಗೆ ಇವರೇ ಕಾರಣ-ಪ್ರೇರಣೆಯಾಗಿದ್ದಾರೆ.

ಮಾರ್ಕ್ವೆಜ್ ಲಾ ಓದನ್ನು ಅರ್ಧಕ್ಕೆ ಬಿಟ್ಟು ಪತ್ರಿಕಾರಂಗಕ್ಕೆ ಬಂದವನು. ಅವನ ಆರಂಭದ ಬರಹಗಳು ಪತ್ರಿಕೋದ್ಯಮಕ್ಕೆ ಸಂಬಂಧಿಸಿದವು. ರಾಜಧಾನಿ ಬೊಗೊಟಾದಿಂದ ಪ್ರಕಟವಾಗುತ್ತಿದ್ದ ಎಲ್ ಎಸ್ಪೆಕ್ಟಾದಾರ್ ಎಂಬ ದೈನಿಕದಲ್ಲಿ ಅವು ಮೊದಮೊದಲು ಬೆಳಕು ಕಾಣುತ್ತಿದ್ದವು. ಅದೂ ಅವನ ಸಹೋದ್ಯೋಗಿ ಸ್ನೇಹಿತರ ಒತ್ತಾಯದ ಮೇರೆಗೆ. ನಂತರ ಪುಸ್ತಕ ರೂಪ ಪಡೆಯುತ್ತಿದ್ದವು. ಅವನ ಪತ್ರಿಕಾ ವರದಿಗಳು ಒಣ ರಿಪೋರ್ಟ್ ಆಗಿರದೆ ಕಥಾನಕಗಳೆಂಬಂತಿರುತ್ತಿದ್ದವು. ಅದಕ್ಕೆ ಕಾರಣ ಅವನು ಘಟನೆಗಳನ್ನು ಪ್ರತ್ಯಕ್ಷ ಕಂಡ ಅನುಭವ ವಿಶ್ಲೇಷಣೆ ಮಾಡುತ್ತಿದ್ದುದು. ನ್ಯೂಸ್ ರೂಮಿನ ಬೇರೆ ಬೇರೆ ಕೆಲಸಗಾರರು ಹೊರಟು ಹೋದಮೇಲೆ ರಾತ್ರಿ ವೇಳೆ ಅಲ್ಲೇ ಕುಳಿತು ಮಾರ್ಕ್ವೆಜ್ ಸಣ್ಣ ಕಥೆಗಳನ್ನು ಬರೆಯುತ್ತಿದ್ದ.

PC : Amazon.com

ಪ್ರಸ್ತುತ ಮಾರ್ಕ್ವೆಜ್‌ನ ಕಥನ ಸಾಹಿತ್ಯ ಸುಮಾರು ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡಿದೆ. ಅವನೊಬ್ಬ ಸಣ್ಣ ಕಥೆಗಾರ, ಕಾದಂಬರಿಕಾರ, ಪತ್ರಿಕೋದ್ಯಮಿ, ಚಲನಚಿತ್ರ ಸಂಭಾಷಣೆಕಾರ ಹಾಗೂ ನಿರ್ದೇಶಕ. ಎಲ್ಲಕ್ಕೂ ಮಿಗಿಲಾಗಿ ಅವನೊಬ್ಬ ಲ್ಯಾಟಿನ್ ಅಮೆರಿಕದ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಲ್ಯಾಟಿನ್ ಅಮೆರಿಕದಲ್ಲಿ ದಂತಕಥೆಯಾದ ಲೇಖಕ. ಜಾಗತಿಕ ಬರಹಗಾರರ ಸಾಲಿನಲ್ಲಿ ಅಗ್ರಪಂಕ್ತಿಗೆ ಸೇರಬಲ್ಲ ಪ್ರತಿಭಾಸಂಪನ್ನ.

1982ರಲ್ಲಿ ಮಾರ್ಕ್ವೆಜ್ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಪಡೆದಾಗ, ಆತನ ಒನ್ ಹಂಡ್ರಡ್ ಇಯರ್‍ಸ್ ಆಫ್ ಸಾಲಿಟ್ಯೂಡನ್ನು ವಿಶೇಷವಾಗಿ ಉಲ್ಲೇಖಿಸಲಾಗಿತ್ತು. ಆತನ ಮೇಲೆ ಪ್ರಭಾವ ಬೀರಿದ ಲೇಖಕರೆಂದರೆ ಡೇನಿಯಲ್ ಡೆಫೋ, ಕಾಫ್ಕಾ, ಜೇಮ್ಸ್ ಜಾಯ್ಸ್, ಫಾಲ್ಕ್ನರ್, ಹೆಮ್ಮಿಂಗ್‌ವೇ, ಗ್ರೀಕ್‌ನ ಸೋಫೋಕ್ಲಿಸ್, ಬ್ರಾಮ್ ಸ್ಟೋಕರ್ (ಡ್ರಾಕುಲಾ), ಬರ್ನಾಡ್‌ಶಾ ಇನ್ನೂ ಅನೇಕರು. ಗಾರ್ಸಿಯಾ ದೃಷ್ಟಿಯಲ್ಲಿ ಪತ್ರಿಕೋದ್ಯಮ ಹಾಗೂ ಸಾಹಿತ್ಯ ರಚನೆ ಎರಡರಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲ. ಪತ್ರಿಕೋದ್ಯಮಿ ಹಾಗೂ ಕಾದಂಬರಿಕಾರ ಇಬ್ಬರಿಗೂ ಸಮಾನ ಸಾಮಾಜಿಕ ಜವಾಬ್ದಾರಿಗಳಿವೆ. ಎಲ್ಲಿಯವರೆಗೆ ಜನರು ನಂಬುವ ಹಾಗೆ ಬರೆಯಬಲ್ಲನೋ ಅಲ್ಲಿಯವರೆಗೆ ಅವನು ಇಚ್ಛಿಸಿದ್ದನ್ನೆಲ್ಲಾ ಬರೆಯಬಹುದಾಗಿದೆ ಎಂದು ಹೇಳುತ್ತಾನೆ.

ಮಾರ್ಕ್ವೆಜ್ ಓದು ಬರಹ ಕಲಿಯುವ ಮುನ್ನವೇ ತಾತನ ರೂಮ್ ಗೋಡೆಮೇಲೆ ಕಾಮಿಕ್ಸ್ ಬರೆಯಬಲ್ಲವನಾಗಿದ್ದ. ಹೈಸ್ಕೂಲ್ ಬಾಲಕ ಪಾಂಪ್ಲೇಟ್ಸ್ ಬರೆದು ಸಾಹಿತಿಯಾಗಿ ಕರೆಯಲ್ಪಟ್ಟ. ಆತ ಪತ್ರಿಕೋದ್ಯಮಿಯಾಗಿದ್ದ ಸಂದರ್ಭ ಎಂದರೆ ಕೊಲಂಬಿಯಾವು ಕನ್ಸರ್ವೇಟಿವ್ ಮತ್ತು ಲಿಬರಲ್ ಪಕ್ಷ ಸಿದ್ಧಾಂತಗಳಿಂದ ಕುದ್ದುಕೊಳ್ಳತೊಡಗಿತ್ತು. 1948ರಲ್ಲಿ ಕನ್ಸರ್ವೇಟೀವ್ ಪಕ್ಷ ಅಧಿಕಾರಕ್ಕೆ ಬಂತು. ಆದರೆ ಅದೇ ಏಪ್ರಿಲ್ 9ರಂದು ಬೊಗೋಟದಲ್ಲಿ ಲಿಬರಲ್ ಪಕ್ಷದ ನಾಯಕ ಗೈತಾನ್ ಎಂಬಾತನ ಹತ್ಯೆ ನಡೆದುಹೋಯಿತು. ಚಿಲಿಯ ಹೆಸರಾಂತ ಕವಿ ನೆರೂಡಾ ಎಂದಂತೆ, ರಕ್ತ ಚೆಲ್ಲಿದೆ ಬೀದಿಯಲ್ಲಿ; ಬೀದಿಯಲ್ಲಿ ರಕ್ತ ಚೆಲ್ಲಿದೆ ಎಂಬಂತ ದೃಶ್ಯಕ್ಕೆ ಪ್ರತ್ಯಕ್ಷದರ್ಶಿಯಾದ ಮಾರ್ಕ್ವೆಜ್. ಊರು ಸೂರೆ ಹೋಯಿತು, ಆಗಂತುಕರು ಕೊಳ್ಳೆಹೊಡೆದರು. ಪತ್ರಿಕಾ ವರದಿಗಾರ ಮಾರ್ಕ್ವೆಜ್ ನೆತ್ತರ ಬೀದಿಯಲ್ಲಿ ನಡೆದು ವಸತಿಗೃಹ ಸೇರಿಕೊಂಡಿದ್ದ. ಆ ಭಯಂಕರ ಘಟನೆ ಅವನ ನೆನಪಲ್ಲಿ ಕೆಂಪಾಗಿ ಉಳಿದುಹೋಗಿದೆ.

ಹಾಗೆಯೇ ಮತ್ತೊಂದು ಘಟನೆ ಮಾರ್ಕ್ವೆಜ್ ತನ್ನ ತಾಯಿ ಲೂಯಿಸ್ ಸಾಂಟಿಯಾನಳ ಜೊತೆ ಅರಕಾಟಕಾಕ್ಕೆ ಹೋಗಿಬಂದದ್ದು. 1950ರಲ್ಲಿ ಅವನ ತಾಯಿಯು ಅವರಮ್ಮನ ಮನೆಯನ್ನು ಮಾರಾಟ ಮಾಡಲು ಹೊರಟು ಮಗನನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ಲಿವಿಂಗ್ ಟು ಟೆಲ್ ದ ಟೇಲ್ ಆತ್ಮಕಥೆಯ ಆರಂಭ ಇಲ್ಲಿಂದಲೇ. ಇಪ್ಪತ್ತೆರಡರ ಹರೆಯದ ಮಾರ್ಕ್ವೆಜ್‌ಗೆ ಅವನತಿಯ ಹಾದಿ ಹಿಡಿದಿದ್ದ ಅರಕಾಟಕಾದ ಅವನ ಬಾಲ್ಯದ ನೆನಪುಗಳು ಆಗ ನುಗ್ಗಿ ಬರುತ್ತವೆ. ಆ ಊರು ಅವರಿದ್ದ ಬಾರಂಕ್ವಿಲ್ಲಾ ಎಂಬ ಪಟ್ಟನಕ್ಕೆ 183 ಮೈಲಿ ದೂರ. ಮೊದಲು ರಸ್ತೆ ಪ್ರಯಾಣ ನಂತರ ಮ್ಯಾಗ್ಡಲೀನ್ ಎಂಬ ನದಿಯನ್ನು ಲಾಂಚ್ ಮೂಲಕ ದಾಟಬೇಕು. ನಂತರ ರೈಲು ಹಿಡಿದು ಆ ಊರಿಗೆ ತಲುಪಬೇಕು. ಆತ್ಮಕಥೆಯಲ್ಲಿ ವರ್ಣಿತವಾಗಿರುವಂತೆ ಇದೊಂದು ಮಹಾಪ್ರಯಾಣವೇ. ಬಾಲ್ಯಕಾಲದ ಅನುಭವಗಳೊಂದಿಗೆ ಪ್ರಸ್ತುತ ಬದುಕಿನ ಅನುಭವಗಳನ್ನು ತಾಳೆಹಾಕಿ ನೋಡಲಾಗುತ್ತದೆ. ಕುವೆಂಪು ಇದೇ ವಯಸ್ಸಿನಲ್ಲಿ ರಚಿಸಿದ ಹಾಳೂರು ಕವನವು ನೆನಪಾಗುತ್ತದೆ ನಮಗೆ. ಬಾ ಪುರದ ಗೆಳೆಯನೇ.. ಹಳ್ಳಿಗರು ಪುರಮಾರಿ ಗುಣಿಸಾದರಲ್ಲಾ ಎಂಬಂತ ಅನುಭವವೇ ಮಾರ್ಕ್ವೆಜ್‌ನ ಅನುಭವವೂ ಸಹ. ಮಾರ್ಕ್ವೆಜ್ ತನ್ನ ಹುಟ್ಟೂರು ಅರಕಾಟಕಾಕ್ಕೆ ಹೋಗಿಬಂದ ಅನುಭವದ್ರವ್ಯವನ್ನು ಬೊಗಸೆ ಬೊಗಸೆ ಬಾಚಿ ಒನ್ ಹಂಡ್ರಡ್ ಇಯರ್‍ಸ್ ಆಫ್ ಸಾಲಿಟ್ಯೂಡ್ ಕಾದಂಬರಿಗೆ ಜೀವನಾಮೃತ ಧಾರೆ ಎರೆದಿರುತ್ತಾನೆ. ಅದು ಒಂದು ಶತಮಾನದ ಹಿಂದಿನ ಕೆರೆಬಿಯನ್ ಸಮಾಜದ ಪುನರ್‌ಸೃಷ್ಟಿ. ಕಲೆಯನ್ನಲ್ಲದೆ ಶಿಲ್ಪಿ ಶಿಲೆಯನೇನ್ ಸೃಷ್ಟಿಸನೆ ಎಂಬಂತೆ!

ಸಂದರ್ಶನವೊಂದರಲ್ಲಿ ಮಾರ್ಕ್ವೆಜ್ ವಾಸ್ತವತೆಯ ಆಧಾರವೇ ಇಲ್ಲದ ಒಂದೇ ಒಂದು ಸಾಲೂ ಕೂಡ ನನ್ನ ಕೃತಿಯಲ್ಲಿ ಇರುವುದಿಲ್ಲ ಎಂದೂ ಆದರೆ ಈ ಕೆರೇಬಿಯನ್ ವಾಸ್ತವತೆ ಎನ್ನುವುದು ಪಳಗಿಸುವಿಕೆಗೆ ಒಳಗಾಗಿರುವ ವಾಸ್ತವತೆ ಎಂದೂ ಹೇಳುತ್ತಾನೆ. ಕಾದಂಬರಿ ಅವನ ಅಜ್ಜಿಯು ಹೇಳುತ್ತಿದ್ದ ಧಾಟಿಯನ್ನೇ ಅನುಸರಿಸಿದೆ. ಆಕೆ ಹೇಳುತ್ತಿದ್ದ ವಿಷಯಗಳು ಅಸ್ವಾಭಾವಿಕವಾಗಿ ಮತ್ತು ಅದ್ಭುತವಾದವುಗಳಾಗಿ ಧ್ವನಿಸುತ್ತಿದ್ದವಾದರೂ ಅವಳು ಅವುಗಳನ್ನು ಹೇಳುತ್ತಿದ್ದುದು ಮಾತ್ರ ಸಂಪೂರ್ಣವಾಗಿ ಸಹಜತೆಯನ್ನೊಳಗೊಂಡಿರುತ್ತಿದ್ದವು. [ಬದುಕಿರುವುದೇ ಕಥೆ ಹೇಳಲಿಕ್ಕೆ ಪುಟ-24]

PC : BeLatina

ಬರಹಗಾರನಿಗೆ ಮುಖ್ಯವಾಗಿ ನಂಬಿಕೆ ಇರಬೇಕು. ನನ್ನ ಅಜ್ಜಿಯು ಆ ವಿಷಯಗಳನ್ನು ಹೇಳುವಾಗ ಇಟ್ಟಿಗೆಯ ಹಾಗೆ ನಿರ್ಲಿಪ್ತ ಮುಖಭಾವದಿಂದ ಹೇಳುತ್ತಿದ್ದಳು. ನಂಬಿಕೆ ಎಂದರೆ ಹಾಗೆ. ಕಲಾಜಗತ್ತು ಇದನ್ನೇ ಸಂಭಾವ್ಯತೆ ಎಂದು ಕರೆಯುವುದು ಅಷ್ಟೆ. ‘ಆಂಡೀಸ್ ಮತ್ತು ಹಿಮಾಲಯಗಳು ಬೇರೆಬೇರೆ’ ನಿಜ. ಆದರೆ ಅಲ್ಲಿ ಮತ್ತು ಇಲ್ಲಿ ಬದುಕುವ ಜನಜೀವನ ಮನುಷ್ಯಜಾತಿ ತಾನೊಂದೇ ವಲಂ ಎಂಬಂತಿರಬೇಕು ಅಲ್ಲವೆ? ಒಟ್ಟಾರೆ ವಿಶ್ವಾಸಾರ್ಹತೆಯೇ ಬರಹಗಾರನ ಸಮಸ್ಯೆ. ಅಂಥ ವಿಶ್ವಾಸಾರ್ಹತೆ ಹುಟ್ಟುವುದಿರಿಂದಲೇ ಮಾರ್ಕ್ವೆಜ್‌ನ ಒನ್ ಹಂಡ್ರಡ್ ಇಯರ್‍ಸ್ ಆಫ್ ಸಾಲಿಟ್ಯೂಡ್ ನಮ್ಮಂತ ದೂರ ದೇಶದ ಓದುಗರಿಗೂ ಇದು ನಮ್ಮದೆಂಬ ಭಾವನೆ ಹುಟ್ಟುವುದು. ಆದ್ದರಿಂದಲೇ ಇದೊಂದು ಅಮೇರಿಕಾದ ಮಹಾಭಾರತವಯ್ಯಾ ಎಂದು ಕವಿ ಗೋಪಾಲ ಕೃಷ್ಣ ಅಡಿಗರು ಉದ್ಗರಿಸಿದ್ದು. [ಉಲ್ಲೇಖ ಎಸ್. ದಿವಾಕರ ಮುನ್ನುಡಿ. ಒಂದು ನೂರು ವರ್ಷಗಳ ಏಕಾಂತ ಪುಟ-8].

ಮಾರ್ಕ್ವೆಜ್‌ನ ಆತ್ಮಚರಿತ್ರೆಯಲ್ಲಿ ನಿರೂಪಿಸಲಾಗಿರುವಂತೆ ಎಲ್ ಎಸ್ಪೆಕ್ಟಾದರ್ ಪತ್ರಿಕೆಗೆ ಆತ ಮೆದಲಿನ್ ಎಂಬಲ್ಲಿಂದ ಯೋನೆಗ್ರೋಗೆ ಹೋಗುವ ಹೆದ್ದಾರಿ ಆಚೆಯ ಭೂಕುಸಿತ ಕುರಿತ ವರದಿ ಕೇವಲ ಒಂದು ಘಟನೆ ಆಗಿರದೆ ಅದೊಂದು ಬದುಕಿನ ಭಯಾನಕ ಕಥನವೇ ಆಗಿದೆ. ಆ ವರದಿಯು ಸಾಹಿತ್ಯ ಮತ್ತು ಚರಿತ್ರೆಯ ನಡುವಿನ ಗೆರೆಯನ್ನು ಅಳಿಸಿಹಾಕುವಂತಿದೆ. ಮಾರ್ಕ್ವೆಜ್‌ನ ಕೃತಿಗಳ ಪಾತ್ರಗಳು ರೂಪಾಂತರಗೊಂಡ ಅದೇ ಚಾರಿತ್ರಿಕ ವ್ಯಕ್ತಿಗಳು, ಅದೇ ಸರ್ವಾಧಿಕಾರಿಗಳು. ಸ್ಪೇನಿನ ಜನರಲ್ ಫ್ರಾಂಕೋನ ಆಳ್ವಿಕೆಗಿಂತ ಕೆರೆಬಿಯನ್ ದ್ವೀಪಾಂತರಗಳಿಗೆ ಭೇಟಿ ಕೊಡುವುದೇ ನೆಮ್ಮದಿ ನೀಡುತ್ತದೆ ಎನ್ನುವಾತ ಮಾರ್ಕ್ವೆಜ್.

ಕೆಲವು ಲೇಖಕರ ಮಾದಕ ವ್ಯಸನದ ಬಗ್ಗೆ ಪ್ರತಿಕ್ರಿಯಸುವ ಗಾರ್ಸಿಯಾ ಯಾರೇ ಆಗಲಿ ಕುಡಿದಿದ್ದಾಗ ಒಂದು ಸಾಲನ್ನೂ ಬರೆಯಲು ಸಾಧ್ಯವಿಲ್ಲ. ಹಾಗೇನಾದರೂ ಯಾರಾದರೂ ಮಾದಕ ದ್ರವ್ಯ ಸೇವಿಸಿದ ಹೊತ್ತಿನಲ್ಲಿ ಕೃತಿ ರಚನೆ ಮಾಡಿದ್ದೇನೆಂದರೆ ಅಂಥವರಿಗೆ ಸಾಹಿತ್ಯವೂ ಗೊತ್ತಿಲ್ಲ, ಮಾದಕ ದ್ರವ್ಯಗಳೂ ತಿಳಿದಿಲ್ಲ ಎಂದೇ ಅರ್ಥ ಎನ್ನುತ್ತಾನವನು. ಸಾಹಿತ್ಯ ಸೃಷ್ಟಿಕರ್ತನಿಗೆ ದೇಹಾರೋಗ್ಯವೆಂಬುದು ಅತ್ಯಗತ್ಯ ಎನ್ನುವ ಮಾರ್ಕ್ವೆಜ್, ಹಿಂದಿನ ತಲೆಮಾರಿನ ಜನ ಬದುಕನ್ನು ಪ್ರೀತಿಸುವವರಾಗಿದ್ದರು, ದಂತಗೋಪುರದಲ್ಲಿದ್ದವರಲ್ಲ. ಪೈಲೆಟ್ ಕೆಲಸ ಇರಲಿ ಸಾಹಿತ್ಯ ಇರಲಿ ಯಾವುದೂ ಹೆಚ್ಚಲ್ಲ ಯಾವುದೂ ಕಡಿಮೆ ಅಲ್ಲ, ಎರಡೂ ಸರಿಸಮಾನ ಎನ್ನುವನು. ಮಾರ್ಕ್ವೆಜ್ ಪ್ರಕಾರ ಎಲ್ಲಕ್ಕಿಂತ ಕಷ್ಟವಾದ ಕೆಲಸವೆಂದರೆ ಮೊದಲ ಪ್ಯಾರಾಗ್ರಾಫ್ ಬರೆಯುವುದು. ಅದಕ್ಕಾಗಿ ತಿಂಗಳುಗಳನ್ನೇ ಕಳೆದಿದ್ದೇನೆ. ಆ ಮೊದಲ ಪ್ಯಾರಾಗ್ರಾಫ್‌ನಲ್ಲೇ ಆ ಕೃತಿಯ ವಸ್ತು ವಿಷಯ ಶೈಲಿ ಧಾಟಿ ಧೋರಣೆ ಎಲ್ಲವೂ ನಿರ್ಧಾರಿತವಾಗಿಬಿಡುತ್ತದೆ. ಮೊದಮೊದಲು ಕನಸು ಮುಖ್ಯ ಎಂದುಕೊಂಡಿದ್ದ ಮಾರ್ಕ್ವೆಜ್ ಆಮೇಲೆ ಎಲ್ಲಕ್ಕಿಂತ ಬದುಕೇ ಮುಖ್ಯ ಎಂಬ ನಿಲುವಿಗೆ ಬರುತ್ತಾನೆ.

ಭಾಷಾಂತರದ ಬಗ್ಗೆ ಮಾತನಾಡುವ ಗಾರ್ಸಿಯಾ ಮಾರ್ಕ್ವೆಜ್ ಒಂದು ಒಳ್ಳೆಯ ಭಾಷಾಂತರವೆಂನ್ನುವುದು ಆ ಭಾಷೆಯಲ್ಲಿ ಪುನರ್‌ಸೃಷ್ಟಿಯೂ ಆಗಿರುತ್ತದೆ. ಈ ಕಾರಣಕ್ಕಾಗಿಯೇ ಅವನ ಇಂಗ್ಲೀಷ್ ಕೃತಿಗಳ ಅನುವಾದಕ ಗ್ರೆಗರಿ ರಬಸ್ಸಾನನ್ನು ಮೆಚ್ಚಿಕೊಳ್ಳುವನು. ಇವರಿಂದಾಗಿ ಮಾರ್ಕ್ವೆಜ್ ಸಾಹಿತ್ಯ ಇಂಗ್ಲೀಷ್‌ನಲ್ಲಿ ಮರುಸೃಷ್ಟಿಗೊಂಡಿತು. ಕೀರ್ತಿ ವಿಚಾರಕ್ಕೆ ಬಂದರೆ ಮಾರ್ಕ್ವೆಜ್ ಇದು ಲೇಖಕನಿಗೆ ವಿನಾಶಕಾರಿ ಎಂದೆನ್ನುತ್ತಾನೆ. ಅದು ಲೇಖಕನ ಖಾಸಗಿ ಬದುಕನ್ನೇ ಬಲಿ ತೆಗೆದುಕೊಳ್ಳುತ್ತದೆ. [ನಮ್ಮ ಕುವೆಂಪು ಕೀರ್ತಿ ಶನಿ ತೊಲಗಾಚೆ ಎಂದು ಗದರಿದರು]. ಮಾರ್ಕ್ವೆಜ್‌ನ 8000 ಕಾದಂಬರಿಯ ಪ್ರತಿಗಳು ಒಂದೇ ವಾರದಲ್ಲಿ ಬ್ಯೂನೋ ಐರಿಸ್ ನಗರದಲ್ಲಿ ಮಾರಾಟವಾಗುತ್ತವೆ. ಇದಕ್ಕೆ ಕಾರಣ ಏನಿರಬಹುದು ಎಂದು ಸಂದರ್ಶಕ ಕೇಳಿದ್ದಕ್ಕೆ ಮಾರ್ಕ್ವೆಜ್ ಕೊಟ್ಟ ಉತ್ತರ ಆ ಕಾದಂಬರಿಯಲ್ಲಿ ಇಡೀ ಲ್ಯಾಟಿನ್ ಅಮೇರಿಕನ್ನರ ಒಳಗಿನ ಬದುಕಿನ ಚಿತ್ರಣ ಬಂದಿದೆ ಅದಕ್ಕಾಗಿ ಎಂದು ಹೇಳಿದನು.

ಗಾರ್ಸಿಯಾ ಮಾರ್ಕ್ವೆಜ್ ಕೂಡಾ ಒಬ್ಬ ಮಗ, ವಿದ್ಯಾರ್ಥಿ, ಪತ್ರಕರ್ತ, ಪ್ರೇಮಿ, ವಿಟ, ಪತಿ, ಬುದ್ಧಿಜೀವಿ, ನೊಬೆಲ್ ಪಡೆದ ಖ್ಯಾತಿವಂತ, ಸಿರಿವಂತ ಆಗಿದ್ದವನು, ಹಾಗೂ ಕಾದಂಬರಿ ಸೃಷ್ಟಿಯಲ್ಲಿ ಅಸಲು ಕಸುಬುದಾರ. ಅವನ ಲಿವಿಂಗ್ ಟು ಟೆಲ್ ದ ಟೇಲ್ ಓದುತ್ತಿದ್ದರೆ ಶಹಜಾದೆಯ ಅರೇಬಿಯನ್ ನೈಟ್ಸ್ ಕತೆಗಳು ನೆನಪಾಗುತ್ತವೆ. ಶಹಜಾದೆಗಿದ್ದ ಬದುಕುವ ಅನಿವಾರ್ಯತೆಯಂತೆಯೇ ಸಾಹಿತ್ಯ ರಚನೆಯ ಅನಿವಾರ್ಯತೆಯೂ ಕೂಡ. ಈ ಒಂದು ಅನಿವಾರ್ಯತೆಯಿಂದ ಬರೆದದ್ದರಿಂದಲೇ ಮಾರ್ಕ್ವೆಜ್‌ನ ಸಾಹಿತ್ಯ ಜೀವಂತ ಜನಪ್ರಿಯವಾದದ್ದು. ಒಮ್ಮೆ ಲಿವಿಂಗ್ ಟು ಟೆಲ್ ದ ಟೇಲ್ ಕೃತಿಯ ಇಂಗ್ಲಿಷ್ ಅವೃತ್ತಿಯ ಪ್ರತಿಗಳನ್ನು ನಾಲ್ಕಾರು ಟ್ರಕ್ಕುಗಳಲ್ಲಿ ತುಂಬಿ ಕೊಂಡೊಯ್ಯಲಾಗುತ್ತಿತ್ತು. ಈ ವಿಷಯ ತಿಳಿದ ಲ್ಯಾಟಿನ್ ಅಮೆರಿಕನ್ ರಾಜ್ಯದ ಓದುಗ ಜನ ಬಂದೂಕುಧಾರಿಗಳಾಗಿ ಅಡ್ಡಗಟ್ಟಿ ಆ ಪುಸ್ತಕಗಳನ್ನು ಅಲ್ಲಲ್ಲೇ ಕೊಂಡೊಯ್ದರಂತೆ. ಆ ವಿಷಯ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದನ್ನು ಓದಿದ ಜರ್ಮನ್ ಲೇಖಕ ಮೈಕೇಲ್ ಝೆಲ್ಲರ್, ಮಾರ್ಕ್ವೆಜ್‌ನ ಬಗ್ಗೆ ನನಗೆ ಹೊಟ್ಟೆಕಿಚ್ಚು ಎಂದ.

PC : Goodreads

ಅದಕ್ಕೆ ಕೊಲಂಬಿಯಾದ ಕವಿ ಚಪ್ಪಾರ್ರೋವಾಲ್ದೆರ್ರಮ್ ಹೊಟ್ಟೆಕಿಚ್ಚೇಕೆ? ನಾವೆಲ್ಲಾ ಬರೆಯಲಾಗದ್ದನ್ನು ಅವನಾದರೂ ಬರೆದನಲ್ಲ ಅಂತ ಸಂತೋಷಪಡಬೇಕಲ್ಲವೆ ಎಂದ. [ನೋಡಿ: ಡಾ. ವಿಜಯ ಸುಬ್ಬರಾಜ್ ಅನುವಾದ. ಒಂದು ನೂರು ವರ್ಷಗಳ ಏಕಾಂತ, ಮುನ್ನುಡಿ ಪುಟ-9]. ಗಾರ್ಸಿಯ ಮಾರ್ಕ್ವೆಜ್‌ನ ಹೆಗ್ಗಳಿಕೆಗೆ ಇಷ್ಟು ಸಾಕಲ್ಲವೆ?

ಒನ್ ಹಂಡ್ರಡ್ ಇಯರ್‍ಸ್ ಆಫ್ ಸಾಲಿಟ್ಯೂಡ್ ಕಾದಂಬರಿಯು ಬುಯೆಂದಿಯಾ ಮನೆತನದ ಆರು ತಲೆಮಾರುಗಳ ಕಥೆಯನ್ನೊಳಗೊಂಡಿರುತ್ತದೆ. ಮಾರ್ಕ್ವೆಜ್ ಸೃಷ್ಟಿಸಿರುವುದು ಮಕ್ಯಾಂಡೋ ಕಾಡಿನ ನಡುವಿನ ಒಂದು ಸಣ್ಣ ಊರು. ಆದರೆ ಕಾದಂಬರಿಯಲ್ಲಿ ಈ ಊರು ಇಡೀ ಪ್ರಪಂಚವನ್ನೇ ಪ್ರತಿನಿಧಿಸುವ ಒಂದು ಸಂಕೇತ. ಬುಯೆಂದಿಯ ಕುಟುಂಬ ಮನುಕುಲದ ಮೊದಲ ಕುಟುಂಬ. ಅದೇ ಈಡನ್ನಿನ ಜನ್ಮ ಜಗತ್ತು. ಮಕ್ಯಾಂಡೋ ಕನ್ನಡಿಗಳ ಊರು. ಅಲ್ಲಿ ಕಾಲ ಸರಿಯುತ್ತಿಲ್ಲ; ಆದರೆ ಒಂದು ವೃತ್ತಾಕಾರದಲ್ಲಿ ತಿರುಗುತ್ತದೆ ಎನ್ನುವ ಉರ್ಸುಲಾ ಪಾತ್ರದ ಮಾತು ನಮ್ಮ ಕವಿ ದ. ರಾ. ಬೇಂದ್ರೆಯವರ ಅನಂತ ಪ್ರಣಯ ಕವನದ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ ಎಂಬ ಸೂರ್ಯ ಚಂದ್ರರ ಅನಂತ ಪ್ರಣಯದ ನಿಸರ್ಗ ತತ್ವವನ್ನೇ ಪ್ರತಿಮಿಸುತ್ತಿರುವಂತಿದೆ.

ಕುವೆಂಪು ಅವರ ನೆನಪಿನ ದೋಣಿಯಲ್ಲಿ ಆತ್ಮಕಥೆಯಂತೆ ಮಾರ್ಕ್ವೆಜ್‌ನ ಲಿವಿಂಗ್ ಟು ಟೆಲ್ ದ ಟೇಲ್ ಕೂಡ ಅವನ ಉಳಿದ ಸಾಹಿತ್ಯ ಕೃತಿಗಳ ಅಧ್ಯಯನಕ್ಕೆ ಹಾಗೂ ಅರ್ಥೈಸುವುದಕ್ಕೆ ಪೂರಕವಾಗಿ ನಿಲ್ಲುತ್ತದೆ. ಮುಖ್ಯವಾಗಿ ಮಾರ್ಕ್ವೆಜ್ ತನ್ನ ಅಮ್ಮನ ಜೊತೆ ಹುಟ್ಟೂರು ಅರಕಾಟಕಾಕ್ಕೆ ಹೋದದ್ದು ಮತ್ತು ಅಲ್ಲಿ ಅವನ ಬಾಲ್ಯದ ನೆನಪುಗಳು ತುಂಬಿಕೊಳ್ಳುತ್ತವೆ. ಅವುಗಳಲ್ಲಿ ಕೆಲವನ್ನು ಪ್ರಸ್ತಾಪಿಸಬಹುದು. ಅವನ ಅಜ್ಜ ಕರ್ನಲ್ ನಿಕೋಲಸ್ ಮಾರ್ಕ್ವೆಜ್ ಮತ್ತು ಕರ್ನಲ್ ಮೆದರದೋ ಪಾಚೆಕೊ ಎಂಬುವರಿಬ್ಬರೂ ಸಾವಿರ ದಿನಗಳ ಯುದ್ಧದಲ್ಲಿ ಭಾಗವಹಿಸಿದ ವೀರ ಸೈನಿಕರು. ಆದರೆ ಅವರಲ್ಲೀಗ ಸಣ್ಣ ಮನಸ್ತಾಪ. ಟೀಕೆ, ಕೆಟ್ಟಮಾತು ಕಾರಣವಾಗಿ ಪರಸ್ಪರ ದ್ವಂದ್ವಕಾಳಗ ಕೈಗಟ್ಟುತ್ತದೆ. ಅದರಲ್ಲಿ ಮೆದರದೋ ಸಾಯುತ್ತಾನೆ. ವಿಚಿತ್ರವೆಂದರೆ ಈ ಮನೆತನಗಳ ಮೂರನೇ ತಲೆಮಾರಿನವನಾದ ಮಾರ್ಕ್ವೆಜ್ ಎಷ್ಟೋ ವರ್ಷಗಳಾದಮೇಲೆ ಕಾರಣಾಂತರಗಳಿಂದ ಸಿಯೆರ್ರಾ ಎಂಬ ಊರಿಗೆ ಭೇಟಿ ನೀಡಬೇಕಾಗಿ ಬಂದಿದೆ. ಅಲ್ಲಿ ತನ್ನ ಅಜ್ಜನು ದ್ವಂದ್ವಕಾಳಗದಲ್ಲಿ ಕೊಂದಿದ್ದ ಆ ಮೆದರದೋನನ ಮೊಮ್ಮಗನ ಭೇಟಿಯಾಗುತ್ತದೆ. ಅವನ ಹೆಸರು ಜೋಸ್ ಪ್ರುಡೆನ್ಸಿಯೋ ಅಗ್ವಿಲಾರ್. ಆದರೆ ಅವರಿಬ್ಬರ ಸಮಾಗಮ ಸೌಹಾರ್ದಯುತ ಪಾನ ಗೋಷ್ಠಿಯಾಗಿ ಪರಿಣಮಿಸುವುದು.

ಇನ್ನೊಂದು ಮಾರ್ಕ್ವೆಜ್‌ನ ಆಂಟ್ ಮಾಮ ಫ್ರಾನ್ಸಿಸ್ಕೋ ಎಂಬ 90 ವರ್ಷದ ಮುಪ್ಪಿನ ಮುದುಕಿ ತಾನಿದ್ದ ಊರಿನಿಂದ ಇವರಿದ್ದ ಪಟ್ಟಣದವರೆಗೂ ಬಾಡಿಗೆ ವಾಹನದಲ್ಲಿ ಬಂದದ್ದು, ಇವರ ಮನೆಯ ಮಕ್ಕಳು ಮರಿ ಆದಿಯಾಗಿ ಎಲ್ಲರನ್ನೂ ಮಾತಾಡಿಸಿ ಆಲಂಗಿಸಿ ಅಂತಿಮ ವಿದಾಯ ಹೇಳಿ ಶವದ ಪೆಟ್ಟಿಗೆಯಲ್ಲಿ ಮಲಗಿ ಜೀವತ್ಯಾಗ ಮಾಡಿದ್ದು; ಮತ್ತೊಂದು ಅವರ ಅಜ್ಜಿ ಮಿನಾ ಹಣವೆನ್ನುವುದು ಸಗಣಿಯಿದ್ದಂತೆ ಎನ್ನುತ್ತಿದ್ದುದು;

ಮಾರ್ಕ್ವೆಜ್ ತೀವ್ರವಾದ ರಾಜಕೀಯ ಪ್ರಜ್ಞೆಯುಳ್ಳ ಬರಹಗಾರ. ಎಡಪಂಥೀಯ ತತ್ವಗಳಿಗೆ ಬದ್ಧವಾಗಿದ್ದವನು. ಮಾರ್ಕ್ವೆಜ್ ಕ್ಯೂಬಾದ ಫಿಡೆಲ್ ಕಾಸ್ಟ್ರೋ ಜೊತೆ ಬಹಳ ಆಪ್ತ ಸ್ನೇಹ ಹೊಂದಿದ್ದನು. ಆದರೆ ಕಾಸ್ಟ್ರೋನ ಆಪ್ತ ಕ್ರಾಂತಿಕಾರಿ ಹೋರಾಟಗಾರ ಚೆಗುವೆರಾನ ಬಗ್ಗೆ ಎಲ್ಲೂ ಪ್ರಸ್ತಾಪ ಇಲ್ಲದಿರುವುದೇ ಆಶ್ಚರ್ಯ. ಎಲ್ ಎಸ್ಪೆಕ್ಟಾದರ್ ಪತ್ರಿಕೆಗೆ ಮಾರ್ಕ್ವೆಜ್ ನೈಜ ಘಟನೆ ಆಧರಿಸಿ ಬರೆದ ನಾವಿಕನೊಬ್ಬನ ನೌಕಾಘಾತದ ಕಥೆ ದ ಸ್ಟೋರಿ ಆಫ್ ಶಿಪ್‌ರೆಕೆಡ್ ಸೇಲರ್; ಎನ್ನುವ ಧಾರಾವಾಹಿ ಕೊಲಂಬಿಯಾ ನೌಕಾ ವಿಭಾಗಕ್ಕೆ ಸಂಬಂಧಿಸಿದಂತೆ ಒಂದು ಭಾರೀ ವಿವಾದವನ್ನೇ ಹುಟ್ಟುಹಾಕಿತು. ಕಡೆಗೆ ಅದು ಪುಸ್ತಕರೂಪ ಪಡೆದು ಅದರಿಂದ ಬಂದ ಗಳಿಕೆಯನ್ನು ಸಂತ್ರಸ್ತ ನಾವಿಕನಿಗೆ ಬಿಟ್ಟುಕೊಟ್ಟ ಉದಾರಿ ಮಾರ್ಕ್ವೆಜ್. ಒನ್ ಹಂಡ್ರಡ್ ಇಯರ್‍ಸ್ ಆಫ್ ಸಾಲಿಟ್ಯೂಡ್ ಬರೆಯುವ ಹೊತ್ತಿನಲ್ಲಿ ಕುಟುಂಬ ನಿರ್ವಹಿಸಲು ಹಣ ಒದಗದೆ ಕಾರನ್ನು ಮಾರಿದ್ದ. ಆದರೆ ಈ ಕೃತಿ 18 ತಿಂಗಳಾದರೂ ಮುಗಿಯಲಿಲ್ಲ. 9 ತಿಂಗಳು ಮನೆ ಬಾಡಿಗೆ ಕೊಡಲಾಗಿರಲಿಲ್ಲ, ಕಡೆಗೆ 1967ರಲ್ಲಿ ಕಾದಂಬರಿ ಪ್ರಕಟವಾಗಿ 30 ಮಿಲಿಯನ್ ಪ್ರತಿಗಳು ಮಾರಾಟವಾಗಿ ಅವನ ಎಲ್ಲಾ ತಾಪತ್ರಯಗಳೂ ಒಮ್ಮೆಗೆ ನೀಗಿದವು.

1958ರಲ್ಲಿ ಮಾರ್ಕ್ವೆಜ್ ಮೆರ್ಸಡೆಜ್ ಬರ್ಕಾ ಎಂಬ ಯುವತಿಯನ್ನು ಮದುವೆಯಾಗುತ್ತಾನೆ. ಅವರು ಶಾಲೆಯ ದಿನಗಳಲ್ಲೇ ಪರಸ್ಪರ ಭೇಟಿಯಾಗಿದ್ದವರು. ಅವರಿಗೆ ರೋಡ್ರಿಗೋ ಮತ್ತು ಗೊಂಜಾಲೋ ಎಂಬ ಇಬ್ಬರು ಗಂಡು ಮಕ್ಕಳು. ಆದರೆ ಒಬ್ಬಳು ಹೆಣ್ಣು ಮಗಳಿಲ್ಲ ಎಂಬ ಕೊರಗು ಆತನಿಗಿತ್ತು. ಬಹುಶಃ ತನ್ನ ಅಜ್ಜಿ, ಆಂಟ್ ಫ್ರಾನ್ಸಿಸ್ಕೋ, ಅಮ್ಮ ಲೂಯಿಸಾ, ಪತ್ನಿ ಬರ್ಕಾ ಮುಂತಾದ ಗಟ್ಟಿ ಸ್ತ್ರೀಕುಲದೊಂದಿಗೆ ಒಡನಾಡಿಯಾಗಿ ಬಾಳಿ ಬೆಳೆದ ಅವನಿಗೆ ಅಂಥ ಮಗಳೊಬ್ಬಳು ಬೇಕು ಅನ್ನಿಸಿದ್ದರೆ ಹೆಚ್ಚಲ್ಲ. ಮಾರ್ಕ್ವೆಜ್ ಬರೆದ ಪುಸ್ತಕಗಳಲ್ಲಿ ಒನ್ ಹಂಡ್ರಡ್ ಇಯರ್‍ಸ್ ಆಫ್ ಸಾಲಿಟ್ಯೂಡ್ ಅಲ್ಲದೆ, ಲೀಫ್ ಸ್ಟಾರ್ಮ್ (1955), ಆಟಮ್ ಆಫ್ ದಿ ಪೇಟ್ರಿಯಾರ್ಕ್ (1975), ಕ್ರಾನಿಕಲ್ ಆಫ್ ಎ ಡೆತ್ ಫೋರ್ ಟೋಲ್ಡ್ (1981), ಲವ್ ಇನ್ ದ ಟೈಮ್ ಆಫ್ ಕಾಲೆರಾ (1985), ಮೈ ಮೆಲಾನ್‌ಕಲಿ ವೋರ್ಸ್ (2004), ಲವ್ ಅಂಡ್ ಡೆಮೋನ್ಸ್ (1994), ಜತೆಗೆ ಆತ್ಮಚರಿತ್ರೆ ಲಿವಿಂಗ್ ಟು ಟೆಲ್ ದ ಟೇಲ್ (2002) ಸೇರಿವೆ. ಮಾರ್ಕ್ವೆಜ್ ತನ್ನ ಕೊನೆಯ ದಿನಗಳನ್ನು ಮೆಕ್ಸಿಕೋದ ಬಾರ್ಸಿಲೋನಾದಲ್ಲಿ ಕಳೆಯುತ್ತಾ, ತನ್ನ 87ನೇ ವಯಸ್ಸಿನಲ್ಲಿ ನ್ಯುಮೋನಿಯಾದಿಂದ 2014ರಲ್ಲಿ ತೀರಿಕೊಳ್ಳುತ್ತಾನೆ.

ಮಾರ್ಕ್ವೆಜ್‌ನ ಒನ್ ಹಂಡ್ರಡ್ ಇಯರ್‍ಸ್ ಆಫ್ ಸಾಲಿಟ್ಯೂಡನ್ನು ಡಾ. ವಿಜಯಸುಬ್ಬರಾಜ್ ಅವರು ಒಂದು ನೂರು ವರ್ಷಗಳ ಏಕಾಂತ’ (2015) ಎಂದೂ, ಲಿವಿಂಗ್ ಟು ಟೆಲ್ ದ ಟೇಲನ್ನು ಪ್ರೊ. ರಘುನಾಥ್ ಟಿ. ಎಸ್ ಅವರು. ಬದುಕಿರುವುದೇ ಕಥೆ ಹೇಳಲಿಕ್ಕೆ (2020) ಎಂದೂ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಎರಡನ್ನೂ ಸೃಷ್ಟಿ ನಾಗೇಶ್ ಅವರು ಪ್ರಕಟಿಸಿರುತ್ತಾರೆ.

ಕೊರೊನಾ ಕಠೋರತೆಯ ಈ ದುರಂತ ಕಾಲಘಟ್ಟವನ್ನು ಕೊಲ್ಲಲಿಕ್ಕೆ ಇಂಥ ಪುಸ್ತಕಗಳ ಓದೂ ಅವಶ್ಯಕ. ಅನುವಾದಿಸಿದವರಿಗೆ ಮತ್ತು ಪ್ರಕಾಶಕರಿಗೆ ಅಭಿನಂದನೆಗಳು ಸಲ್ಲುತ್ತವೆ.

  • ಪ್ರೊ. ಶಿವರಾಮಯ್ಯ

ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಪುಸ್ತಕ ಪರಿಚಯ: ಕಾವ್ಯದ ಗೆರೆಯ ಮೇಲೆ ನಡೆದುಬಂದ ಪಾತ್ರಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...