Homeಮುಖಪುಟಮಣಿಪುರದ ಗಾಯಗಳ ಮೇಲೆ ಕುತರ್ಕಗಳನ್ನು ಹೇರಬೇಡಿ

ಮಣಿಪುರದ ಗಾಯಗಳ ಮೇಲೆ ಕುತರ್ಕಗಳನ್ನು ಹೇರಬೇಡಿ

- Advertisement -
- Advertisement -

“ಮಣಿಪುರದ್ದಂತೂ ಅತ್ಯಂತ ನಾಚಿಕೆಗೇಡಿನ ಘಟನೆ. ಆದರೆ ಕೊಲೆ ಮತ್ತು ರೇಪ್ ಇತರ ಜಾಗಗಳಲ್ಲೂ ಆಗುತ್ತವೆ, ಎಲ್ಲದರ ಬಗ್ಗೆ ಯಾಕೆ ಮಾತನಾಡುವುದಿಲ್ಲ ನೀವು?”

ವಿಷಯ ಯಾವ ಕಡೆ ಹೋಗುತ್ತಿದೆ ಎಂಬುದು ನನಗೆ ಗೊತ್ತಿತ್ತು ಆದರೂ ತಳ್ಳಿಹಾಕಬಾರದೆಂದು ಹೇಳಿದೆ: “ಪ್ರತಿಯೊಂದು ಕೊಲೆ ಮತ್ತು ಬಲಾತ್ಕಾರದ ಬಗ್ಗೆ ಎಲ್ಲರೂ ಮಾತನಾಡುವುದಕ್ಕೆ ಸಾಧ್ಯವಿಲ್ಲ. ನೀವೂ ಮಾತನಾಡಲು ಸಾಧ್ಯವಿಲ್ಲ. ಈ ದೇಶದಲ್ಲಿ ಪ್ರತಿನಿತ್ಯ 80 ಕೊಲೆಗಳು ಆಗುತ್ತವೆ ಹಾಗೂ 85 ಬಲಾತ್ಕಾರದ ಪ್ರಕರಣ ದಾಖಲಾಗುತ್ತವೆ, ದಾಖಲಾಗದ ಪ್ರಕರಣಗಳೆಷ್ಟೋ.. ನಮಗೆಲ್ಲರಿಗೂ ಎಲ್ಲದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ, ಮಾತನಾಡುವುದೂ ಸಾಧ್ಯವಿಲ್ಲ ಹಾಗೂ ಎಲ್ಲದರ ಬಗ್ಗೆ ಮಾತನಾಡುವುದು ಅವಶ್ಯಕವೂ ಇಲ್ಲ. ನಾವು ಕೆಲವು ಆಯ್ದ ಘಟನೆಗಳ ಬಗ್ಗೆಯೇ ಮಾತನಾಡಬಹುದು.”

ಆದರೆ ಆತ ಈ ವಿಷಯವನ್ನು ಕೈಬಿಡುವ ಮೂಡಿನಲ್ಲಿರಲಿಲ್ಲ; “ಹೌದು ಆಯ್ಕೆ ಮಾಡಲೇಬೇಕಾಗುತ್ತದೆ, ಆದರೆ ಈ ಆಯ್ಕೆಗೆ ನಿಮ್ಮ ಮಾನದಂಡವೇನು? ನೀವು ಪ್ರತಿಯೊಂದು ಅಮಾನುಷ ಘಟನೆಯ ಬಗ್ಗೆ ಯಾಕೆ ಮಾತನಾಡುವುದಿಲ್ಲ?”

ನಾನು ಬಹಳ ಸಮಯದಿಂದ ಈ ಪ್ರಶ್ನೆಗಾಗಿ ಕಾಯುತ್ತಿದ್ದೆ. ಹಾಗಾಗಿ ತಕ್ಷಣವೇ ತಿಳಿಸಿ ಹೇಳಲು ಕುಳಿತುಕೊಂಡೆ. “ನೋಡಿ, ಪ್ರತಿಯೊಂದು ಕೊಲೆ, ಪ್ರತಿಯೊಂದು ಹಿಂಸೆಯ ಘಟನೆ, ಪ್ರತಿಯೊಂದು ಬಲಾತ್ಕಾರವೂ ಸಂಕಟ ತರುವಂಥದ್ದೇ ಮತ್ತು ಖಂಡನೀಯವೂ ಆಗಿರುತ್ತದೆ. ಯಾವ ಘಟನೆಯ ಬಗ್ಗೆ ಯಾವ ಪ್ರತಿಕ್ರಿಯೆ ನೀಡಬೇಕು ಎಂಬುದು ನಾಲ್ಕು ವಿಷಯಗಳ ಮೇಲೆ ನಿಂತಿರುತ್ತದೆ. ಮೊದಲನೆಯದು, ಆ ಘಟನೆಯೊಂದಿಗೆ ನಮ್ಮ ನಿಕಟತೆ ಏನಿದೆ? ಒಂದು ವೇಳೆ ನನ್ನ ನೆರೆಹೊರೆಯಲ್ಲಿ ಅಥವಾ ನನ್ನ ಎದುರಿಗೆ ಕಿರುಕುಳದ ಘಟನೆ ಆಗುತ್ತದೆ ಎಂದಾಗ ನಾನು ಆಗ ಮುಖ ಬೇರೆ ಕಡೆ ತಿರುಗಿಸಿ, ಎಲ್ಲೋ ದೂರದಲ್ಲಿ ಆದ ಕೊಲೆ ಅಥವಾ ಬಲಾತ್ಕಾರದ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ; ಆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡುವುದು ನನ್ನ ಮೊದಲ ಕರ್ತವ್ಯವಾಗಿರುತ್ತದೆ. ಎರಡನೆಯದ್ದು, ಆ ಘಟನೆಯ ಸ್ವರೂಪದ್ದು. ಸ್ವಾಭಾಬಿಕವಾಗಿಯೇ ಕೆಲವು ರೀತಿಯ ಹಿಂಸಾತ್ಮಕ ಘಟನೆಗಳು ಅವುಗಳ ಅಮಾನುಷತೆಯ ಕಾರಣಕ್ಕಾಗಿ ಮಾನವೀಯ ಸಂವೇದನೆಗಳಿಗೆ ಹೆಚ್ಚು ತಟ್ಟುತ್ತವೆ, ನಮ್ಮಿಂದ ಪ್ರತಿಕ್ರಿಯೆ ಕೇಳುತ್ತವೆ. ದೆಹಲಿಯ ನಿರ್ಭಯ ಪ್ರಕರಣ ಅಥವಾ ಜಮ್ಮುವಿನಲ್ಲಿ ಆದ ಆಸಿಫಾ ಪ್ರಕರಣಗಳು, ಇಂತಹ ಕೆಲವು ಪ್ರಕರಣಗಳಾಗಿವೆ. ಮೂರನೆಯದ್ದು, ಆಯಾ ಹಿಂಸೆಯ ಸಂದರ್ಭ; ಈ ಒಂದು ಹಿಂಸೆಯ ಘಟನೆ, ಒಂದು ವ್ಯಾಪಕವಾದ ಸರಣಿಯ ಉದಾಹರಣೆಯಾಗಿದೆಯೇ? ಅದು ಒಂದು ಸಾಮಾಜಿಕ ಸಮೂಹದ ವಿರುದ್ಧ ಅನ್ಯಾಯ ಮತ್ತು ಹಿಂಸೆಯ ವ್ಯಾಪಕ ಚಕ್ರದ ಭಾಗವಾಗಿದೆಯೇ? ಎಲ್ಲಿ ಹಾಗೆ ಆಗುವುದೋ, ಅಲ್ಲಿ ನಮ್ಮ ಪ್ರತಿಕ್ರಿಯೆ ತಕ್ಷಣಕ್ಕೆ ಮತ್ತು ತೀವ್ರವಾಗಿ ಇರಬೇಕಾಗುತ್ತದೆ. ಹಾಗಾಗಿ ಮಹಿಳೆಯರ ಮೇಲೆ ಆಗುವ ಹಿಂಸೆ ಅಥವಾ ಅಮೆರಿಕದಲ್ಲಿ ಆಫ್ರಿಕನ್ ಅಮೆರಿಕನ್ನರ ಮೇಲೆ ಆಗುವ ಹಿಂಸೆ ಹೆಚ್ಚು ಗಮನ ಸೆಳೆಯುತ್ತವೆ. ಅದೇ ಕಾರಣಕ್ಕಾಗಿ ನಿರಂತರವಾಗಿ ಮುಸಲ್ಮಾನರ ಮೇಲೆ ಆಗುತ್ತಿರುವ ಲಿಂಚಿಂಗ್‌ನ ಸುದ್ದಿಗಳು ಪ್ರತಿಯೊಬ್ಬ ಭಾರತೀಯನ ಪ್ರತಿಕ್ರಿಯೆ ಕೇಳುತ್ತವೆ. ನಾಲ್ಕನೆಯ ಮತ್ತು ಕೊನೆಯ ವಿಷಯ, ಆ ಹಿಂಸೆಯ ಘಟನೆಯಲ್ಲಿ ಪೊಲೀಸ್, ಆಡಳಿತ, ಸರಕಾರ ಮತ್ತು ಆಳ್ವಿಕೆ ನಡೆಸುತ್ತಿರುವವರ ಪಾತ್ರ. ಆ ಘಟನೆಗಳನ್ನು ತಡೆಯುವುದು ಅವರ ಜವಾಬ್ದಾರಿ ಆಗಿರುತ್ತದೆ, ಹಾಗಾಗಿ ಸ್ವಾಭಾವಿಕವಾಗಿಯೇ ಅವರ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ಅಸಫಲರಾದಾಗ ಅಥವಾ ಸಂತ್ರಸ್ತರ ಬದಲಿಗೆ ಅಪರಾಧಿಯ ಪರ ನಿಂತಾಗ ನಾವು ನಮ್ಮ ಧ್ವನಿಯನ್ನು ಗಟ್ಟಿಗೊಳಿಸುವುದು ನಮ್ಮ ಜವಾಬ್ದಾರಿ ಆಗುತ್ತದೆ. ಅದು 1984ರ ಸಿಖ್ ನರಮೇಧವೇ ಆಗಿರಲಿ ಅಥವಾ ಗುಜರಾತಿನಲ್ಲಿ 2002ರಲ್ಲಿ ಆದ ಮುಸ್ಲಿಮರ ನರಮೇಧವೇ ಆಗಿರಲಿ. ಎಲ್ಲಿ ಅಧಿಕಾರಶಾಹಿ ಅಪರಾಧಿಯ ಜೊತೆಗೆ ನಿಲ್ಲುತ್ತದೆಯೋ, ಆಗ ಸಂತ್ರಸ್ತರ ಜೊತೆಗೆ ನಿಲ್ಲುವುದು ಪ್ರತಿಯೊಬ್ಬ ನಾಗರಿಕಳ/ನ ಮೊದಲ ಕರ್ತವ್ಯವಾಗುತ್ತದೆ.” ನನ್ನ ವಾದವನ್ನು ಸ್ಪಷ್ಟಗೊಳಿಸುತ್ತ ಕೊನೆಗೆ ಹೀಗೆ ಹೇಳಿದೆ: “ಯಾವುದೇ ವ್ಯಕ್ತಿಗೆ ಅವನು/ಳು ಎಲ್ಲಾ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಸಾಧ್ಯವೂ ಇಲ್ಲ ಹಾಗೂ ಸೂಕ್ತವೂ ಅಲ್ಲ. ಆದರೆ ನಾನು ಯಾವುದೇ ಪ್ರತಿಕ್ರಿಯೆ ನೀಡುವಾಗ ಈ ನಾಲ್ಕು ವಿಷಯಗಳ ಬಗ್ಗೆ ಗಮನವಿಡಲು ಪ್ರಯತ್ನಿಸುತ್ತೇನೆ, ಇಬ್ಬಗೆ ನೀತಿ ಅಳವಡಿಸಿಕೊಳ್ಳುವುದನ್ನು ತಪ್ಪಿಸಲು ಪ್ರಯತ್ನಿಸುತ್ತೇನೆ.”

ನನ್ನ ದೀರ್ಘವಾದ ವ್ಯಾಖ್ಯೆಯನ್ನು ಕೇಳಿ ಅವನಿಗೆ ಕೊಂಚ ಬೋರಾಯಿತು ಆದರೆ ನನ್ನ ಕೊನೆಯ ವಾಕ್ಯವನ್ನು ಹಿಡಿದುಕೊಂಡು ಹೇಳಿದ: “ನಾನು ಯಾವುದೇ ಫಿಲಾಸಫಿಯ ಬಗ್ಗೆ ಮಾತನಾಡುತ್ತಿಲ್ಲ. ಆದರೆ ನೀವು ಮಣಿಪುರದ ಬಗ್ಗೆ ಮಾತನಾಡುತ್ತೀರಿ ಆದರೆ ಬಂಗಾಲ, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಆದ ಹಿಂಸೆಯ ಬಗ್ಗೆ ಯಾಕೆ ಮಾತನಾಡುವುದಿಲ್ಲ?”

ಆಗ ನನಗೆ ಈ ಅನುಮಾನವನ್ನು ಖುಲಾಸೆ ಮಾಡಬೇಕಾಯಿತು; “ನಿಮ್ಮ ಪ್ರಶ್ನೆಗೆ ಉತ್ತರ ನೀಡಿದ್ದೇನೆ ಎಂದುಕೊಂಡಿದ್ದೆ, ಆದರೆ ನೀವು ಇನ್ನೂ ಸ್ಪಷ್ಟವಾದ ಉತ್ತರ ಕೇಳುತ್ತೀರಿ ಎಂದರೆ, ಕೇಳಿಸಿಕೊಳ್ಳಿ. ಮಣಿಪುರದಲ್ಲಿ ಆದ ಹಿಂಸೆ ನಾನು ಮುಂಚೆ ಹೇಳಿದ ಆ ನಾಲ್ಕೂ ಮಾನದಂಡಗಳನ್ನು ಸಂಪೂರ್ಣವಾಗಿ ನಿಜಗೊಳಿಸುತ್ತದೆ. ಮೊದಲನೆಯದಾಗಿ ಮಣಿಪುರ ನಮ್ಮ ದೇಶದ ಅವಿಭಾಜ್ಯ ಅಂಗವಾಗಿದೆ. ಅಲ್ಲಿ ನಡೆಯುತ್ತಿರುವ ನಿರಂತರ ಹಿಂಸೆಯ ಬಗ್ಗೆ ಮಾತನಾಡದೇ ಇರುವುದು, ನಿಜವಾಗಿಯೂ ಈಶಾನ್ಯ ಭಾರತದ ಜನರು ತಮ್ಮನ್ನು ತಾವು ಬೇರೆಯವರು ಎಂದು ಅನ್ನಿಸಲು ವ್ಯಾಪಕವಾಗಿ ಇರುವ ಮನೋಭಾವನೆಯ ಭಾಗವಾಗುತ್ತದೆ. ಯಾವ ಟಿವಿ ಆಂಕರ್‌ಗಳು ಫ್ರಾನ್ಸ್‌ನ ಹಿಂಸೆಯ ಬಗ್ಗೆ ತೋರಿಸುತ್ತ, ಮಾತನಾಡುತ್ತ ಇದ್ದು, ಆದರೆ ಮಣಿಪುರದ ಬಗ್ಗೆ ಏನೂ ತೋರಿಸುವುದಿಲ್ಲವೋ, ಆ ಪಾಖಂಡಿಗಳು ದೇಶದೊಂದಿಗೆ ಯಾವುದೇ ಪ್ರೀತಿ ಇಟ್ಟುಕೊಂಡಿಲ್ಲ. ಎರಡನೆಯದಾಗಿ, ಮಣಿಪುರದ ಘಟನೆಗಳ ಕ್ರೂರತೆ ಈಗಾಗಲೇ ವೀಡಿಯೋದಲ್ಲಿ ಮುಂದೆ ಬಂದಿದೆ; ಆದರೆ ಕಳೆದ 2 ತಿಂಗಳಿಂದ ಅದರ ಡಜನ್‌ಗಟ್ಟಳೆ ಪುರಾವೆಗಳು ನಮ್ಮ ಬಳಿಗೆ ಬಂದಿದ್ದವು. ಮೂರನೆಯದಾಗಿ, ವಿಡಿಯೋದಲ್ಲಿ ಕಂಡ ಈ ಘಟನೆ ಯಾವುದೇ ಒಂದು ಅಪವಾದದ ಘಟನೆಯಲ್ಲ, ಕೆಲವು ಸ್ಥಳೀಯ ಜನರ ಪರಸ್ಪರ ದ್ವೇಷದ ಪರಿಣಾಮವಾಗಿದ್ದಲ್ಲ. ಖುದ್ದು ಮುಖ್ಯಮಂತ್ರಿಗಳೇ ಹೇಳಿದ್ದೇನೆಂದರೆ ರಾಜ್ಯದಲ್ಲಿ ಇಂತಹ ನೂರಾರು ಘಟನೆಗಳು ನಡೆದಿವೆ ಎಂದು. ಇಲ್ಲಿ ಬಹುಸಂಖ್ಯಾತ ಸಮುದಾಯದ ಜನರು ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಮೇಲೆ ನಿರ್ಲಜ್ಜತೆಯಿಂದ ಹಿಂಸೆ ಎಸಗುತ್ತಿದ್ದಾರೆ ಹಾಗೂ ಹೃದಯಕಲಕುವ ನಾಲ್ಕನೆಯ ವಿಷಯವೇನೆಂದರೆ, ಈ ಘಟನಾವಳಿಗಳಲ್ಲಿ ಪೊಲೀಸ್ ಆಡಳಿತ ಮತ್ತು ಸರಕಾರ ಸಂಪೂರ್ಣವಾಗಿ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿವೆ. ಈ ಘಟನೆ ಪೊಲೀಸರ ಸಮ್ಮುಖದಲ್ಲಿ ಆಗಿದ್ದು, ಆದರೆ ಅವರು ಅದನ್ನು ತಡೆಯಲೂ ಇಲ್ಲ ಹಾಗೂ ಅದರ ವರದಿಯನ್ನೂ ಮಾಡಲಿಲ್ಲ. ಎಫ್‌ಐಆರ್ ದಾಖಲಾದ ನಂತರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಮುಖ್ಯಮಂತ್ರಿ ಬಹಿರಂಗವಾಗಿ ಬಹುಸಂಖ್ಯಾತ ಸಮುದಾಯದ ಪ್ರತಿನಿಧಿಯ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: ಮಣಿಪುರದ ಬೆಂಕಿ ಆರುವುದೆಂದು?

ನೀವೇ ಹೇಳಿ, ಈ ನಾಲ್ಕೂ ಅಂಶಗಳು ಇಷ್ಟು ಸ್ಪಷ್ಟ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಬೇರಾವುದೇ ಘಟನೆಗಳು ಇವೆಯೇ?” “ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದಂತೆ ಅಲ್ಲಿ ಎರಡು ಘಟನೆಗಳ ಬಗ್ಗೆ ಆರೋಪ ಬಂದಿವೆ. ಮಹಿಳೆಯನ್ನು ನಗ್ನಗೊಳಿಸಿದ ಒಂದು ಘಟನೆ ಪ್ರಮಾಣಿತವಾಗಿದೆ, ಅದು ಖಂಡನಾರ್ಹವಾಗಿದೆ, ಆದರೆ ಅದಕ್ಕೆ ಯಾವುದೇ ಸಾಮಾಜಿಕ ಸಮೂಹ ಅಥವಾ ರಾಜಕೀಯದೊಂದಿಗೆ ಯಾವ ರೀತಿಯ ಸಂಬಂಧವೂ ಕಾಣಿಸಿಕೊಂಡಿಲ್ಲ. ಹಾಗೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕ್ರಮ ತೆಗೆದುಗೊಂಡಿದ್ದಾರೆ. ಬಿಜೆಪಿಯ ಅಭ್ಯರ್ಥಿಯ ಜೊತೆಗಾಗಿದೆ ಎನ್ನಲಾದ ಇಂತಹ ದುರ್ವ್ಯಹಾರದ ಎರಡನೆಯ ಆರೋಪದ ಬಗ್ಗೆ ಇಲ್ಲಿಯವರೆಗೆ ಯಾವುದೇ ಪ್ರಮಾಣ ಕಾಣಿಸಿಲ್ಲ. ಇಂತಹದ್ದೇನೂ ಆಗಿಲ್ಲ ಎಂದು ಪ. ಬಂಗಾಳದ ಡಿಜಿಪಿ ಹೇಳಿದ್ದಾರೆ; ರಾಜ್ಯಪಾಲರ ಕಚೇರಿಯಿಂದ ಬಂದ ದೂರುಗಳಲ್ಲಿ ಇದರ ಉಲ್ಲೇಖವಿಲ್ಲ, ಖುದ್ದು ಸಂತ್ರಸ್ತೆಯೂ ಯಾವ ಹೇಳಿಕೆಯನ್ನೂ ನೀಡಿಲ್ಲ. ಇದರರ್ಥ ಪಶ್ಚಿಮ ಬಂಗಾಳದ ಸರಕಾರ ದೋಷಮುಕ್ತವಾಗುತ್ತೆ ಅಂತಲ್ಲ, ಆದರೆ ಈ ಘಟನೆಯನ್ನು ಯಾವುದೇ ರೀತಿಯಲ್ಲಿ ಮಣಿಪುರದ ಘಟನೆಗೆ ಹೋಲಿಸಲಾಗುವುದಿಲ್ಲ. ರಾಜಸ್ಥಾನದಲ್ಲಿ ದಲಿತ ಬಾಲಕಿಯ ಬಲಾತ್ಕಾರದಲ್ಲಿ ಜಾತೀಯ ಹಿಂಸೆಯ ಅನುಮಾನವಿದೆ, ಹಾಗಾಗಿ ಇದು ಕಳವಳಕಾರಿ ವಿಷಯವಾಗಿದೆ, ಆದರೆ ಇಲ್ಲಿಯೂ ಕೂಡ ಪೊಲೀಸ್ ವ್ಯವಸ್ಥೆಯ ಮುಖಾಂತರ ಅಪರಾಧಿಗೆ ಆಶ್ರಯ ನೀಡಿದ ಪ್ರಶ್ನೆಯೇ ಹುಟ್ಟಿಲ್ಲ, ವಾಸ್ತವದಲ್ಲಿ ಒಬ್ಬ ಆರೋಪಿಯಂತೂ ಬಿಜೆಪಿಗೆ ಸಂಬಂಧಿಸಿದ ವಿದ್ಯಾರ್ಥಿ ಸಂಘಟನೆಯೊಂದಿಗೆ ಸೇರಿಕೊಂಡಿದ್ದಾನೆ ಎಂಬ ವಿಷಯವೂ ಬೆಳಕಿಗೆ ಬಂದಿದೆ. ಛತ್ತೀಸಗಢದ ವಿಷಯಕ್ಕೆ ಬಂದರೆ, ಅದರ ಬಗ್ಗೆ ಬಿಜೆಪಿಯ ವಕ್ತಾರರಿಗೇ ಇಂತಹ ಯಾವುದೇ ಘಟನೆಗಳ ಬಗ್ಗೆ ಮಾತನಾಡಲು ಸಾಧ್ಯವಾಗಿಲ್ಲ. ಈ ರಾಜ್ಯಗಳ ಹೋಲಿಕೆಯನ್ನು ಮಣಿಪುರದೊಂದಿಗೆ ಮಾಡುವುದು ಹಾಸ್ಯಾಸ್ಪದವಷ್ಟೇ ಅಲ್ಲ, ಕ್ರೂರತೆಯೂ ಆಗುತ್ತದೆ.”

ಹಿಂದಿರುಗುತ್ತ ನಾನು ಇನ್ನೊಂದು ಮಾತನ್ನು ಸೇರಿಸಿದೆ; “ನೈತಿಕತೆಯ ಇಬ್ಬಗೆ ನೀತಿಯನ್ನು ನಾನು ಅನುಸರಿಸುತ್ತಿಲ್ಲ, ವಾಸ್ತವದಲ್ಲಿ ಬೇರೆಲ್ಲ ಘಟನೆಗಳ ನೆಪದಲ್ಲಿ ಮಣಿಪುರದ ಘೋರ ಅಪರಾಧವನ್ನು ಮುಚ್ಚಿಹಾಕುತ್ತಿರುವವರು ಇಬ್ಬಗೆ ನೀತಿಯನ್ನು ಅನುಸರಿಸುತ್ತಿದ್ದಾರೆ. ಮಣಿಪುರ ವಿಷಯ ಉಲ್ಲೇಖಿಸುತ್ತ ರಾಜಸ್ಥಾನ ಮತ್ತು ಛತ್ತೀಸಗಢ ರಾಜ್ಯಗಳನ್ನು ಮಣಿಪುರದೊಂದಿಗೆ ಸಮೀಕರಿಸಿದ ಪ್ರಧಾನಮಂತ್ರಿ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದ್ದಾರೆ. ಮಣಿಪುರದಲ್ಲಿ ತಮ್ಮ ಪಕ್ಷ ಹಾಗೂ ತಮ್ಮ ಸರಕಾರದ ಅಪರಾಧೀ ನಿರ್ಲಕ್ಷ್ಯ ಮತ್ತು ಹಿಂಸೆಯಲ್ಲಿ ಶಾಮೀಲಾಗಿರುವುದನ್ನು ಮುಚ್ಚಿ ಹಾಕುವುದಕ್ಕೆ ಕುತರ್ಕಗಳನ್ನು ಬಳಸುವ ಸಮಯದಲ್ಲಿ ಮರೆತುಬಿಡುವ ವಿಷಯವೇನೆಂದರೆ, ಇಂದು ಮಣಿಪುರಕ್ಕಾಗಿ ಯಾವ ತರ್ಕಗಳನ್ನು ಬಳಸಲಾಗುತ್ತಿದೆಯೋ, ಅವುಗಳನ್ನು ನಾಳೆ ಇನ್ಯಾವ್ಯಾವ ಅಪರಾಧಗಳನ್ನು ಮುಚ್ಚಿಹಾಕಲು ಬಳಸಲಾಗುವುದೋ ಏನೋ. ಯಾವಾಗ ದೇಶವನ್ನು ಮುನ್ನಡೆಸಬೇಕಿರುವವರೇ ದೇಶದ ಬುದ್ಧಿಯನ್ನು ಭ್ರಷ್ಟಗೊಳಿಸುವ ಗುತ್ತಿಗೆ ತೆಗೆದುಕೊಳ್ಳುತ್ತಾರೋ, ಅವರ ಕೊನೆ ಯಾವಾಗ ಆಗುವುದೆಂಬುದು ಅವರಿಗೇ ಗೊತ್ತಿರುವುದಿಲ್ಲ.”

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...