Homeಅಂಕಣಗಳುಮಣಿಪುರದ ಬೆಂಕಿ ಆರುವುದೆಂದು?

ಮಣಿಪುರದ ಬೆಂಕಿ ಆರುವುದೆಂದು?

- Advertisement -
- Advertisement -

’ಮಣಿಪುರ’ ಪುರಾಣ ಪ್ರಸಿದ್ಧ ರಾಜ್ಯ. ಮಣಿಪುರದ ರಾಜ ಬಭ್ರುವಾಹನ. ಚಿತ್ರವಾಹನನ ಮಗಳಾದ ಚಿತ್ರಾಂಗದೆಯ ಮತ್ತು ಪಾಂಡುಪುತ್ರ ಅರ್ಜುನನ ಮಗನಾಗಿ ಜನಿಸಿದವ. ಪಾಂಡವರ ಅಶ್ವಮೇಧ ಯಾಗ ಸಮಯದಲ್ಲಿ ಯಜ್ಞಾಶ್ವವನ್ನು ತಡೆದು ಬೆಂಗಾವಲಿನ ಅರ್ಜುನನನ್ನು ಕೊಂದು ನಂತರ ತಂದೆ ಎಂದು ತಿಳಿದು ’ಸಂಜೀವಕಮಣಿ’ಯಿಂದ ಆತನನ್ನು ಬದುಕಿಸಿದ.

ಈ ಪುರಾಣ ಪ್ರಸಿದ್ಧ ಕಥೆಯನ್ನು ಆಧರಿಸಿದ ಕನ್ನಡ ಚಿತ್ರ ಬಭ್ರುವಾಹನ. ವರನಟ ಡಾ. ರಾಜಕುಮಾರ್ ತಂದೆ ಮತ್ತು ಮಗನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯ ಕನ್ನಡಿಗರ ಮನೆ ಮಾತು. ಯಾಗದ ಕುದುರೆಯನ್ನು ಕಟ್ಟಿ ಹಾಕಿದ ಬಭ್ರುವಾಹನನಿಗೆ ಅರ್ಜುನ ’ಯಾರೋ ನೀನು ಅನಾಮಿಕ? ನಾನು ವಿಕ್ರಮಾರ್ಜುನ. ಪಾಂಡವರ ಯಜ್ಞಾಶ್ವವನ್ನು ಕಟ್ಟುವ ಪೊಗರೆ ನಿನಗೆ’ ಎಂದು ಹಂಗಿಸುತ್ತಾನೆ. ಆಗ ಬಭ್ರುವಾಹನ, ’ಯಾರು ಅರಿಯರು ನಿನ್ನ ಭುಜಬಲದ ಪರಾಕ್ರಮ?’ ಎಂದು ತಿರುಗೇಟು ಕೊಟ್ಟು ಸೆಡ್ಡುಹೊಡೆದು ನಿಲ್ಲುತ್ತಾನೆ! ಅದಿರಲಿ.

ಪ್ರಸ್ತುತ ಮಣಿಪುರದ ಹಿಂಸಾಚಾರ ಪ್ರಧಾನಿ ಮೋದಿಯವರ ಪ್ರಜಾಪ್ರಭುತ್ವ ಜೈತ್ರಯಾತ್ರೆಯ ಬಿಜೆಪಿ ರಥಕ್ಕೆ ಸೆಡ್ಡುಹೊಡೆದು ಅಡ್ಡಗಟ್ಟಿ ನಿಂತಿದೆ. ಕುಕಿ ಮತ್ತು ಮೈತ್‌ಯಿ ಸಮುದಾಯಗಳ ನಡುವೆ ಸಂಘರ್ಷ ಭುಗಿಲೆದ್ದು ಹಿಂಸಾಚಾರ ತೀವ್ರ ಸ್ವರೂಪ ಪಡೆದಿದೆ. ಎರಡು ತಿಂಗಳಾದರೂ ಮಣಿಪುರಕ್ಕೆ ಬಿದ್ದ ಬೆಂಕಿ ಆರಿಲ್ಲ. ಆ ಬೆಂಕಿಯಲ್ಲಿ ಮೈ-ಕೈಕಾಯಿಸಿಕೊಳ್ಳುತ್ತಿರುವವರೇ ಎಲ್ಲಾ. ಈ ನಡುವೆ ಪ್ರಧಾನಿ ಮೋದಿ ಕಳೆದ ಜೂನ್‌ನಲ್ಲಿ ಆರು ದಿನಗಳ ಕಾಲ ವಿದೇಶಿ ಪ್ರವಾಸ ಕೈಗೊಂಡಿದ್ದರು. ಅದೇ ಜೂನ್ 21ರಂದು ’ಅಂತಾರಾಷ್ಟ್ರೀಯ ಯೋಗ ದಿನ’ದಂದು ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ವಿಶಾಲ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು: ’ಯೋಗ ಎಂದರೆ ಕೂಡಿಸುವುದು; ದೇಹ, ಮನಸ್ಸು ಮತ್ತು ಪರಿಸರದೊಂದಿಗೆ ಅನುಸಂಧಾನ ಮಾಡುವುದು; ಯೋಗ ವಿಶ್ವ ರಾಷ್ಟ್ರಗಳನ್ನು ಪರಸ್ಪರ ಹತ್ತಿರ ತರುವುದು’ ಎಂದು ಮುಂತಾಗಿ ಪ್ರವಚನಗೈದರು. ವಿಶ್ವಸಂಸ್ಥೆಯ ಪ್ರತಿನಿಧಿಗಳೊಂದಿಗೆ ಶವಾಸನ ಹಾಕಿದರು! ಅಮೆರಿಕದ ಶ್ವೇತಭವನದ ಮುಂದಿನ ಗಾಂಧಿ ಪ್ರತಿಮೆಗೆ ಹೂಗುಚ್ಛ ಅರ್ಪಿಸಿ ನಮಿಸಿ ’ಧನ್ಯರಾದರು! ಅಧ್ಯಕ್ಷ ಜೊ ಬೈಡೆನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. ಪ್ರಧಾನಿಯಾದ ಒಂಭತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ (ಅಥವಾ ಎರಡನೆಯದ್ದಾ?) ಭಾಗವಹಿಸಿದ ಸುದ್ದಿ ಗೋಷ್ಠಿಯಲ್ಲಿ ಕೆಲವು ಪ್ರಶ್ನೆಗಳನ್ನು ಎದುರಿಸಿದರು. ಅವರಿಗೆ ಎದುರಾದ ಪ್ರಶ್ನೆ ಮುಖ್ಯವಾಗಿ ಭಾರತದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರು ಬಲಿಪಶುಗಳಾಗುತ್ತಿದ್ದಾರೆ; ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ; ಮತ್ತು ಅವರ ಆಡಳಿತದ ಬಗ್ಗೆ ಭಿನ್ನಾಭಿಪ್ರಾಯ ಮತ್ತು ಟೀಕೆಗಳನ್ನು ದಮನಿಸಲಾಗುತ್ತಿದೆ ಕುರಿತಾಗಿದ್ದವು. ಆದರೆ ಆ ಎಲ್ಲ ಪ್ರಶ್ನೆಗಳಿಗೂ ಮೋದಿ ’ಮಂತ್ರವೊಂದೇ ಮಂತ್ರವು ಎಂಬಂತೆ’ ನಮ್ಮದು ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ; ಅದು ಪ್ರಜಾಪ್ರಭುತ್ವದ ತಾಯಿ’ ಎಂದು ಮೇಲಿಂದಮೇಲೆ ಹೇಳುತ್ತಾ ನಾವು ಕೈಗೊಂಡಿರುವ ಕಲ್ಯಾಣ ಯೋಜನೆಗಳು ನಂಬಿಕೆ, ಜಾತಿ ಮತ್ತು ಮತ ಪಂಥಭೇದ ಭಾವನೆಗೆ ಎಡೆ ಇಲ್ಲದೆ ಎಲ್ಲರಿಗೂ ಲಭ್ಯ; ಹಾಗೇನಾದರೂ ಮಾನವ ಹಕ್ಕುಗಳ ದಮನವಾಗಿದ್ದರೆ, ಜಾಗತಿಕ ಸಂವಿಧಾನಿಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತ ಒಂದಾಗಿರಲು ಹೇಗೆ ಸಾಧ್ಯ? ಎಂದು ಅದೇ ಮಂತ್ರವನ್ನು ಪುನರುಚ್ಛರಿಸಿ, ಮುಖ್ಯ ಪ್ರಶ್ನೆಯನ್ನು ಯಾಮಾರಿಸಿಬಿಟ್ಟರು.

ಆದರೆ ಪ್ರಧಾನಿ ಮೋದಿ ಶ್ವೇತಭವನದಲ್ಲಿ ನಿಂತು ಮಾತಾಡಿದುದಕ್ಕೂ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ವಾಸ್ತವ ವಿದ್ಯಮಾನಗಳಿಗೂ ದೊಡ್ಡ ವಿರೋಧಾಭಾಸವಿದೆ. ಇಲ್ಲಿ ಅಲ್ಪಸಂಖ್ಯಾತ ಮುಸಲ್ಮಾನ ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಮೇಲಿನ ಕಟ್ಟಾ ಹಿಂದುತ್ವವಾದಿಗಳು ದಾಳಿ ನಿರಂತರವಾಗಿದೆ. ಲವ್ ಜಿಹಾದ್, ಗೋರಕ್ಷಣೆ, ಹಿಜಾಬ್ ಆಜಾನ್ ಎಂದು ಕೋಮುಸೌಹಾರ್ದವನ್ನು ಕದಡಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗಲಭೆಗಳನ್ನು ಎಬ್ಬಿಸುವುದು ಸಾಮಾನ್ಯವಾಗಿದೆ. ಇವು ಸಮಾಜದಲ್ಲಿ ಅಷ್ಟೋ ಇಷ್ಟೋ ಉಳಿದುಕೊಂಡಿರುವ ಶಾಂತಿ ಸುವ್ಯವಸ್ಥೆಯನ್ನು ಕದಡುತ್ತಿವೆ. ಬಿಜೆಪಿ ನಾಯಕರು ಇಸ್ಲ್ಲಮಫೋಬಿಕ್ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಮತ್ತು ದಲಿತರ ಮೇಲೆ ಅತ್ಯಾಚಾರ, ಹಿಂಸೆ ದೌರ್ಜನ್ಯಕ್ಕೆ ಕೊನೆಯೇ ಇಲ್ಲ. ಉತ್ತರ ಪ್ರದೇಶ ಈ ನಿಟ್ಟಿನಲ್ಲಿ ಕುಖ್ಯಾತಿ ಪಡೆದಿದೆ.

ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬಂತೆ ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಎಂಬ ಬಿಜೆಪಿ ಸಂಸದನ ವಿರುದ್ಧ ಎಫ್‌ಐಆರ್ ಹಾಕಿ ವಿಚಾರಣೆ ನಡೆಸುವಂತೆ ಮಾಡಲು ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಬೇಕಾಯ್ತು. ಆತನನ್ನು ಬಂಧಿಸಲು ಇನ್ನೂ ಮೀನಮೇಷ ಎಣಿಸಲಾಗುತ್ತಿದೆ. ಆದರೆ ’ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮೋದಿ ’ಭೇಟಿ ಪಡಾವೋ ಭೇಟಿ ಬಚಾವೋ’ ಎಂದು ಮೇಲಿಂದಮೇಲೆ ಹೇಳುತ್ತಲೇ ಬಂದಿದ್ದಾರೆ. ಪ್ರಧಾನಿ ಒಂದೆಡೆ ಭಾರತದಲ್ಲಿನ ಉನ್ನತ ಪ್ರಜಾಸತ್ತಾತ್ಮಕ ಮಾನದಂಡಗಳ ಬಗ್ಗೆ ಮಾತನಾಡುತ್ತಾರೆ; ಇನ್ನೊಂದೆಡೆ ಅವರ ಸರ್ಕಾರ ಸ್ವತಂತ್ರ ತನಿಖಾ ಸಂಸ್ಥೆಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಕೇವಲ ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ಮಾಡಲು ಅನುವು ಮಾಡಿಕೊಡುತ್ತಿದೆ ಎಂಬ ಗಂಭೀರ ಆರೋಪವನ್ನು ಎದುರಿಸುತ್ತಿದ್ದಾರೆ. ಆದರೆ ಹಲವಾರು ಜನ ಕಳಂಕಿತ ಬಿಜೆಪಿ ನಾಯಕರು, ಸಂಸದರು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಬಿಜೆಪಿ ಆಡಳಿತದ ನ್ಯೂನತೆಗಳನ್ನು ಬೊಟ್ಟುಮಾಡಿ ತೋರಿಸಿದ ಹಲವಾರು ಪ್ರಗತಿಪರ ಸಾಹಿತಿಗಳು, ಸುಧಾರಕರು ಮಾನವ ಹಕ್ಕು ಹೋರಾಟಗಾರರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಉದಾಹರಣೆಗೆ ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿಗಳು. ಇಂದಿರಾಗಾಂಧಿ (1975-77) ತುರ್ತು ಪರಿಸ್ಥಿತಿ ಹೇರಿ ದೇಶವನ್ನು ಘಾಸಿಗೊಳಿಸಿದರು ಎಂದು ಪದೇಪದೇ ಹೇಳುವ ಈ ಬಿಜೆಪಿ ಆಡಳಿತವು ತಾನೇ ಅನಧಿಕೃತ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದಂತೆ ಕಾಣುತ್ತದೆ. ಆದರೆ ನಮ್ಮ ಪ್ರಧಾನಿ ಮಾತ್ರ ಜಾಗತಿಕ ಜಗಲಿಯಲ್ಲಿ ನಿಂತು ’ಭಾರತ ಪ್ರಜಾಪ್ರಭುತ್ವದ ತಾಯಿ’ ಎಂದು ಸಮರ್ಥಿಸಿಕೊಳ್ಳುತ್ತಲೇ ಬರುತ್ತಿದ್ದಾರೆ.

ಈಗ ಈಶಾನ್ಯ ಭಾರತದ ಸಪ್ತ ಸೋದರಿಯರು ಎಂದು ಕರೆಯಲಾಗಿರುವ ರಾಜ್ಯಗಳಲ್ಲೊಂದಾದ ಮಣಿಪುರದ ಸೆರಗಿಗೆ ಬೆಂಕಿ ಬಿದ್ದಿದೆ. ಕಳೆದ ಎರಡು ತಿಂಗಳುಗಳಿಂದ ಹತ್ತಿದ ಬೆಂಕಿ ಆರಿಯೇ ಇಲ್ಲ. ನಿಸರ್ಗ ಸುಂದರ ನಾಡು ಇನ್ನೂ ಹತ್ತಿ ಉರಿಯುತ್ತಲೇ ಇದೆ. ಹಿಂಸಾಚಾರ ನಿಂತಿಲ್ಲ; ಗಲಭೆ ಪ್ರತಿಭಟನೆಗಳಿಗೆ ಕೊನೆಯೇ ಇಲ್ಲ. ಅದರಲ್ಲಿ ಕೈ ಕಾಯಿಸಿಕೊಳ್ಳುವವರೇ ಎಲ್ಲ. ಅಗ್ನಿಸ್ಪರ್ಶಗಳು, ಲೂಟಿಗಳು, ಕೊಲೆಗಳು, ಹತ್ಯೆಗಳಿಗೆ ವಿರಾಮವಿಲ್ಲ. ಕಂಡಲ್ಲಿ ಗುಂಡು, ಕರ್ಫ್ಯೂ ಜಾರಿಯಲ್ಲಿದೆ. ಜನರು ಭಯಚಕಿತ ಪರಿಸರದಲ್ಲಿ ಜೀವಹಿಡಿಯಬೇಕಾಗಿ ಬಂದಿದೆ. ಸಾವಿರಾರು ಸಂಖ್ಯೆಯಲ್ಲಿ ನಿರಾಶ್ರಿತರ ಶಿಬಿರದಲ್ಲಿ ಪಾಡು ಬೀಳುತ್ತಿದ್ದಾರೆ. ಸಂಪರ್ಕ ಜಾಲವನ್ನು ತುಂಡರಿಸಲಾಗಿದೆ; ರಾಜ್ಯವನ್ನು ಸೇನೆಗೆ ಒಪ್ಪಿಸಲಾಗಿದೆ. ಬಂಡುಕೋರರು, ಉಗ್ರರು ಪೊಲೀಸ್ ಠಾಣೆಗಳಿಗೆ ನುಗ್ಗಿ ಬಂದೂಕುಗಳನ್ನು ಅಪಹರಿಸುತ್ತಿದ್ದಾರೆ. ಮಣಿಪುರದ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ಪಡೆ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ಅರಾಜಕತೆ ಎಲ್ಲೆಲ್ಲು! ಸಾಂವಿಧಾನಿಕ ಆಡಳಿತ ಗೈರು ಹಾಜರು! ಆದರೆ ಮಣಿಪುರ ನಮ್ಮ ದೇಶದ ರಾಜ್ಯವೋ ಅಲ್ಲವೋ ಎಂಬ ಸಂಶಯ ಹುಟ್ಟುವಂತೆ ನಮ್ಮ ಪ್ರಧಾನಿ ಮೌನ ಮುನಿಯಾಗಿದ್ದಾರೆ! (ಒಂದೆರಡು ಹಿಂದೆ ಮಣಿಪುರದ ಸಾಮೂಹಿಕ ಅತ್ಯಾಚಾರದ ವಿಡಿಯೋ ವೈರಲ್ ಆದ ನಂತರವಷ್ಟೇ ಪ್ರಧಾನಿ ಒಂದು ಚುಟುಕು ಹೇಳಿಕೆಯನ್ನು ನೀಡಿದ್ದಾರೆ..)

ಮಣಿಪುರದಲ್ಲಿ ಮೈತ್‌ಯಿ ಹಾಗೂ ಕುಕಿ ಎಂಬ ಎರಡು ಸಮುದಾಯಗಳಿವೆ. ಮೈತ್‌ಯಿಗಳು ಬಹುಸಂಖ್ಯಾತರು. ಹಿಂದೂ ಧಾರ್ಮಿಕ ಪಂಥಕ್ಕೆ ಸೇರಿದ ವೈಷ್ಣವಿಗಳು. ಕುಕಿಗಳು ಮತ್ತು ನಾಗಾಗಳು ಬಹುಮಟ್ಟಿಗೆ ಕ್ರೈಸ್ತ ಧರ್ಮಕ್ಕೆ ಸೇರಿದ ಬುಡಕಟ್ಟು ಜನಾಂಗದವರಾಗಿದ್ದಾರೆ. ಸುಮಾರು ಶೇ.35ರಷ್ಟಿರುವ ಇವರ ಒಡೆತನದಲ್ಲಿ ಸಾಗುವಳಿ ಭೂಮಿ ಹೆಚ್ಚು ಇದೆ. ಆದರೆ ಬುಡಕಟ್ಟು ಕಾನೂನಿನ ಪ್ರಕಾರ ಅದನ್ನು ಬೇರೆಯವರು ಖರೀದಿಸುವಂತಿಲ್ಲ. ಮೈತ್‌ಯಿಗಳ ಜಮೀನನ್ನು ಕುಕಿಗಳು ಬೇಕಾದರೆ ಖರೀದಿಸಬಹುದು. ಕುಕಿಗಳು ಮತ್ತು ಮೈತ್‌ಯಿಗಳ ನಡುವಿನ ಬೇಗುದಿಗೆ ಭೂಮಿಯೇ ಮೂಲ ಕಾರಣ. ಆದುದರಿಂದ ಮೈತ್‌ಯಿಗಳು ನಮ್ಮನ್ನೂ ಪರಿಶಿಷ್ಟ ಪಂಗಡಗಳಿಗೆ ಸೇರಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಕುಕಿಗಳು ಅದನ್ನು ವಿರೋಧಿಸುತ್ತಿದ್ದಾರೆ. ರಾಜಕಾರಣಿಗಳು ಮತ್ತು ದಂಗೆಕೋರರ ನಡುವೆ ಅಪವಿತ್ರ ಮೈತ್ರಿ ಏರ್ಪಟ್ಟು ಉರಿಯುವ ಬೆಂಕಿಗೆ ಎಣ್ಣೆ ಸುರಿಯುತ್ತಿದ್ದಾರೆ. ಕುಕಿಗಳ ಪ್ರಾಬಲ್ಯ ಇರುವ ಪ್ರದೇಶದಲ್ಲಿ ಅಫೀಮು ಬೆಳೆಯುತ್ತಿರುವುದನ್ನು ಮೈತ್‌ಯಿಗಳು ವಿರೋಧಿಸುತ್ತಾರೆ. ಆ ಗುಡ್ಡಗಾಡು ಪ್ರದೇಶ ನಮ್ಮ ಹಿರೀಕರಿಗೆ ಸೇರಿದ್ದು ಎಂದು ಕುಕಿಗಳು ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಕುಕಿಗಳು ಮತ್ತು ಮೈತ್‌ಯಿಗಳ ನಡುವಿನ ಈ ಸಂಘರ್ಷ ಕಳೆದ ಐದು ವರ್ಷದಿಂದ ಉಲ್ಬಣಗೊಂಡಿದೆ. ಪ್ರಸ್ತುತ ಅದು ಆಸ್ಫೋಟಗೊಂಡಿದೆ. ಆದರೆ ದೆಹಲಿ ಆಡಳಿತ ತಟಸ್ಥವಾಗಿದೆ. ದೇಶವಿದೇಶಗಳನ್ನು ಸುತ್ತಿ, ’ಭಾರತ ಪ್ರಜಾಪ್ರಭುತ್ವದ ತವರು’ ಎಂದು ಹೇಳುತ್ತ ಪ್ರವಾಸ ಮಾಡಿ ಬಂದ ಪ್ರಧಾನಿ ಮೋದಿಯವರ ಪ್ರಜಾತಂತ್ರದ ರಥ ಮಣಿಪುರದ ಹೆಬ್ಬಾಗಿಲಿಗೆ ಬಂದು ನಿಂತಿದೆ. ಆದರೆ ಮುಂದೇನು?

ಮೊದಲು ರಾಜಕಾರಣಿಗಳ ಮತ್ತು ಬಂಡುಕೋರರ ಅಪವಿತ್ರ ಮೈತ್ರಿ ಕೊನೆಗೊಳ್ಳಬೇಕು. ಸಶಸ್ತ್ರ ಬಂಡುಕೋರರ ಗುಂಪುಗಳನ್ನು ನಿಷ್ಕ್ರಿಯಗೊಳಿಸಬೇಕು. ಅಲ್ಲಿ ನಾನಾ ಬುಡಕಟ್ಟು ಸಮುದಾಯಗಳ ನಡುವೆ ಕಾಡುತ್ತಿರುವ ಸಮಸ್ಯೆಗೆ ಕೇಂದ್ರಾಡಳಿತ ಎದುರಾಗಬೇಕು. ಸಾಗುವಳಿ ಜಮೀನನ್ನು ಮತ್ತು ಅರಣ್ಯ ಸಂಪನ್ಮೂಲಗಳನ್ನು ಅಲ್ಲಿನ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಆಧಾರದ ಮೇಲೆ, ಪರಿಸರಕ್ಕೆ ಮಾರಕವಾಗದಂತೆ ’ಸರ್ವರಿಗೆ ಸಮಪಾಲು ಸರ್ವರಿಗೆ ಸಮ ಬಾಳು’ ಎಂಬ ಸೂತ್ರದ ಅನ್ವಯ ಹಂಚಿಕೆಯಾಗಲು ಅನುವು ಮಾಡಿಕೊಡಬೇಕು. ಸಮುದಾಯಗಳ ನಡುವಿನ ಅನುಮಾನಗಳನ್ನು ಶಂಕೆಗಳನ್ನು ನಿವಾರಿಸಿ ಸಂಧಾನವನ್ನು ಏರ್ಪಡಿಸಿ ಜನರಲ್ಲಿ ವಿಶ್ವಾಸವನ್ನು ತುಂಬಬೇಕು. ಇದಕ್ಕೂ ಮೊದಲು ಅಲ್ಲಿನ ಸರ್ಕಾರ ಹಿಂಸೆಯನ್ನು ನಿಯಂತ್ರಿಸಲು ಅಸಮರ್ಥವಾಗಿರುವುದರಿಂದ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಬೇಕು. ಇದಕ್ಕೆಲ್ಲ ಮುಖ್ಯವಾಗಿ ಬೇಕಾದ್ದು ರಾಜಕೀಯ ಇಚ್ಛಾಶಕ್ತಿ!

ಉದಾಹರಣೆಗೆ ಎಚ್.ಡಿ.ದೇವೇಗೌಡರು 1996ರಲ್ಲಿ ಪ್ರಧಾನಿಯಾಗಿದ್ದುದು ಕೇವಲ 11 ತಿಂಗಳು ಮಾತ್ರ. ಆದರೆ ಅಷ್ಟು ಅಲ್ಪಾವಧಿಯಲ್ಲಿ ಅವರು ದೇಶದ ಉದ್ದಗಲಕ್ಕೆ ಪ್ರವಾಸ ಕೈಗೊಂಡು ಜನರ ಸಮಸ್ಯೆಗಳನ್ನು ತಿಳಿಯಲು ಉತ್ಸುಕರಾಗಿದ್ದರು. ಕಾಶ್ಮೀರವೂ ಒಳಗೊಂಡಂತೆ ಉತ್ತರದ ಗಡೀ ರಾಜ್ಯಗಳಿಗೆ ಪ್ರವಾಸ ಕೈಗೊಂಡರು. ಅದೇ ಅಕ್ಟೋಬರ್‌ನಲ್ಲಿ ಈಶಾನ್ಯ ರಾಜ್ಯಗಳಿಗೆ ಏಳು ದಿನಗಳ ಪ್ರವಾಸ ಕೈಗೊಂಡರು. ಪ್ರತಿಯೊಂದು ರಾಜ್ಯ ರಾಜಧಾನಿಯಲ್ಲೂ ಒಂದೊಂದು ರಾತ್ರಿ ಕಳೆದು ಸ್ಥಳೀಯ ಸಮಸ್ಯೆಗಳಿಗೆ ಓಗೊಟ್ಟರು. ಸಾಧ್ಯವಾದ ಪರಿಹಾರ ಸೂಚಿಸಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪನೆಗೆ ಮುಂದಾಗಿದ್ದರು.

ಆದರೆ ಪ್ರಸ್ತುತ ನರೇಂದ್ರ ಮೋದಿಯವರಲ್ಲಿ ಈ ಬಗೆಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಮಣಿಪುರಕ್ಕೆ ಇಷ್ಟರಲ್ಲಿ ಒಮ್ಮೆಯಾದರೂ ಅವರು ಭೇಟಿ ಕೊಡಬಹುದಾಗಿತ್ತು. ಶಾಂತಿ ಮತ್ತು ಸುವ್ಯವಸ್ಥೆಗೆ ಮನವಿ ಮಾಡಬಹುದಿತ್ತು. ಆದರೆ ಅವರು ದಿವ್ಯ ಮೌನಿಯಾಗಿದ್ದಾರೆ. ಒಕ್ಕೂಟ ಸರ್ಕಾರದ ಈ ನಿಷ್ಕ್ರಿಯತೆ ಭಾರತದ ಘನತೆಗೆ ತಕ್ಕುದಲ್ಲ.

ಪ್ರೊ.ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-೧ &೨ (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್-ಯುಜಿ ಪರಿಷ್ಕೃತ ಫಲಿತಾಂಶ ಇನ್ನೂ ಬಿಡುಗಡೆಯಾಗಿಲ್ಲ, ಹಳೆಯ ಲಿಂಕ್ ಅನ್ನು ಹಂಚಿಕೊಳ್ಳಲಾಗುತ್ತಿದೆ: ಕೇಂದ್ರ

0
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯು ಇಂದು ಪರಿಷ್ಕೃತ ನೀಟ್ ಯುಜಿ 2024 ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ ಎಂಬ ಊಹಾಪೋಹದ ನಂತರ, ಆರಂಭದಲ್ಲಿ ನೀಡಲಾದ ಪರಿಹಾರದ ಅಂಕಗಳನ್ನು ಹಿಂತೆಗೆದುಕೊಳ್ಳುವ ಸುಪ್ರೀಂ ಕೋರ್ಟ್ ತೀರ್ಪಿನ ನಂತರ,...