Homeಮುಖಪುಟಬಿಜೆಪಿ ಸೋತಿತು ಸಮ್ಮಿಶ್ರ ಗೆಲ್ಲಲಿಲ್ಲ

ಬಿಜೆಪಿ ಸೋತಿತು ಸಮ್ಮಿಶ್ರ ಗೆಲ್ಲಲಿಲ್ಲ

- Advertisement -
- Advertisement -

ಬಿಜೆಪಿಯ ಬಾಡಿಗೆ ಚಾನೆಲ್‍ಗಳ ಹಾವಳಿಯು ಬಹಳ ಹಿಂದೆಯೇ ಶುರುವಾಗಿದೆಯಾದರೂ, ಕಳೆದ ವಾರ ಅತಿರೇಕ ತಲುಪಿತ್ತು. ಯಾವ ಪ್ರಮಾಣಕ್ಕೆಂದರೆ, ಬಿಜೆಪಿಯ ಮೈಸೂರು ಕಡೆಯ ನಾಯಕರೊಬ್ಬರನ್ನು ಆಂಕರ್ ‘ನಿಮ್ಮ ಕಡೆ ಈಗ 20 ಎಂಎಲ್‍ಎಗಳಿದ್ದಾರೆನ್ನುವುದಕ್ಕೆ ಏನು ಆಧಾರ?’ ಎಂದು ಪ್ರಶ್ನಿಸಿದರು. ಅದಕ್ಕೆ ಬಿಜೆಪಿಯ ವಕ್ತಾರ, ‘ನನಗೇನು ಗೊತ್ತು; ನಾನೂ ನಿಮ್ಮ ಚಾನೆಲ್‍ಗಳಲ್ಲೇ ನೋಡಿದ್ದು’ ಎಂದು ಉತ್ತರಿಸಿದರು.
ಇಂಗ್ಲಿಷಿನಲ್ಲೊಂದು ಮಾತಿದೆ. Loyal than the king ಎಂದು. ‘ರಾಜನಿಗಿಂತ ಹೆಚ್ಚು ನಿಷ್ಠನಾಗಿರುವುದು’ ಎಂದು ಅದರರ್ಥ. ಸ್ವತಃ ಬಿಜೆಪಿಯವರೇ ಆಶ್ಚರ್ಯಪಡುವಷ್ಟು ನಿಷ್ಠೆಯನ್ನು ಕನ್ನಡದ ಹಲವು ಚಾನೆಲ್‍ಗಳು ಮತ್ತು ಪತ್ರಿಕೆಗಳು ಅದಕ್ಕೆ ತೋರುತ್ತಿವೆ. ತಾವೇ ಬುದ್ಧಿವಂತರೆಂದು ಬಗೆದಿರುವ ಬಾಡಿಗೆ ಚಾನೆಲ್‍ಗಳ ಪತ್ರಕರ್ತರಿಗಿಂತ ರಾಜಕಾರಣಿಗಳು ಬುದ್ಧಿವಂತರಾಗಿರುತ್ತಾರೆ. ಅವರಿಗೂ ಈ ಪರಿಯ ಅತಿರೇಕವು ತಮಗೆ ನಂತರ ಉಲ್ಟಾ ಹೊಡೆಯಬಹುದು ಎಂದೆನಿಸಿರಬಹುದು.
ಲೋಕಸಭಾ ಚುನಾವಣೆಯ ನಂತರ ತನ್ನ ಅಗತ್ಯ  ಬಿಜೆಪಿಗೆ ಇಲ್ಲವಾಗುವುದರಿಂದ, ನಿವೃತ್ತನಾಗಬೇಕಾಗುತ್ತದೆ; ಅಷ್ಟರೊಳಗೆ ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಿಬಿಟ್ಟರೆ ಒಳ್ಳೆಯದು ಎಂಬ ಹಪಾಹಪಿ ಯಡಿಯೂರಪ್ಪನವರಿಗೆ ಇರುವುದು ಸತ್ಯ. ಒಂದು ವೇಳೆ ಕರ್ನಾಟಕದ ಸಮ್ಮಿಶ್ರ ಸರ್ಕಾರ ಬಿದ್ದರೆ ಬೀಳಲಿ ಎಂಬ ಅಭಿಪ್ರಾಯ ಮೋದಿ-ಷಾಗೆ ಇರುವುದೂ ವಾಸ್ತವ. ಹಾಗಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಯಾವ ಪುರಾವೆಯೂ ಇಲ್ಲದೇ ತಳಬುಡವಿಲ್ಲದ ವದಂತಿಗಳನ್ನು ‘ಪ್ರಮಾಣವಚನಕ್ಕೆ ಜ್ಯೋತಿಷಿಗಳ ಹತ್ತಿರ ಆಗಲೇ ಶುಭಘಳಿಗೆಯನ್ನು ನಿಗದಿಪಡಿಸಲಾಗಿದೆ’ ಎಂಬ ಮಟ್ಟಕ್ಕೆ ಕೆಲವು ಚಾನೆಲ್‍ಗಳು ಬಿತ್ತರಿಸಿದವು.
ಒಂದು ವೇಳೆ ಆ ವಿಚಾರದಲ್ಲಿ ಎಳ್ಳಷ್ಟಾದರೂ ನಿಜವಿದ್ದಿದ್ದರೆ, ಬಿಜೆಪಿಯು ವಿಧಾನಪರಿಷತ್ ಚುನಾವಣೆಗೆ ಒಬ್ಬ ಅಭ್ಯರ್ಥಿಯನ್ನಾದರೂ ಕಣಕ್ಕಿಳಿಸುತ್ತಿತ್ತು. ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಆಗದಿದ್ದರೂ, ಉಳಿದೆರಡು ಪಕ್ಷಗಳಿಗೆ ಹೆದರಿಕೆ ಹುಟ್ಟಿಸುವುದು ಸಾಧ್ಯವಿತ್ತು. ಆದರೂ ಅಭ್ಯರ್ಥಿಯನ್ನು ಹಾಕಲಿಲ್ಲ; ಅಥವಾ ಯಾವುದಾದರೂ ದುಡ್ಡಿನ ಕುಳಕ್ಕೆ ಹೊರಗಿನ ಬೆಂಬಲ ಕೊಟ್ಟು ಆ ರೀತಿಯಲ್ಲಾದರೂ ಜೆಡಿಎಸ್-ಕಾಂಗ್ರೆಸ್‍ಗಳ ಸಂಕಟ ನೋಡಿ ಸಂತಸ ಪಡುವುದಕ್ಕೂ ಹೋಗಲಿಲ್ಲ. ಏಕೆಂದರೆ, ಆ ರೀತಿ ಸೋಲುವುದೂ ಮುಖಭಂಗ ಎನ್ನುವ ಸ್ಥಿತಿಯಲ್ಲಿ ಬಿಜೆಪಿ ಸಿಕ್ಕಿಕೊಂಡಿದೆ.
ಅಸ್ಥಿರತೆಯ ಆಟಕ್ಕೆ ಯಾವ ರೀತಿಯ ಸಂಖ್ಯಾಬಲವೂ ಇಲ್ಲ ಎಂಬುದು ಮೊದಲ ದಿನದಿಂದಲೇ ಖಚಿತವಾಗಿತ್ತು. ಆದರೆ, ತಾವು ನಡೆಸುವ ಕೊಚ್ಚೆ ಆಟಕ್ಕೆ ಮಾಧ್ಯಮಗಳಿಂದ ವಿರೋಧ ಬರುವುದಿಲ್ಲ, ಬದಲಿಗೆ ಅದೊಂದು ಸಾಧನೆ ಎಂಬಂತೆ ಬಿಂಬಿಸಲಾಗುತ್ತದೆ ಎಂಬ ಧೈರ್ಯದಿಂದಲೋ ಏನೋ, ‘ಒಂದು ಕೈ ನೋಡೇ ಬಿಡೋಣ’ ಎಂದು ಯಡ್ಡಿ ಬಣ ಕೈ ಹಾಕಿತ್ತು. ಜಾರಕಿಹೊಳಿ ಸಹೋದರರು ಯಾವ ಕಾರಣಕ್ಕೂ ಕಾಂಗ್ರೆಸ್ ಬಿಡುವ ಸ್ಥಿತಿಯಲ್ಲಿರಲಿಲ್ಲ. ಸತೀಶ ಜಾರಕಿಹೊಳಿ ಒಂದು ವೇಳೆ ಕಾಂಗ್ರೆಸ್ ಬಿಟ್ಟರೆ ಜೆಡಿಎಸ್ ಅಥವಾ ಬಿಎಸ್‍ಪಿ ಸೇರಬೇಕು, ಇಲ್ಲವಾದರೆ ತಮ್ಮದೇ ಪಕ್ಷ ಕಟ್ಟಬೇಕು, ಅದೂ ಇಲ್ಲವೆಂದರೆ ಬೇರೆ ರಾಜ್ಯಗಳಲ್ಲಿ ಪ್ರಬಲವಾಗಿರುವ ಯಾವುದಾದರೂ ಪಕ್ಷವನ್ನು ಇಲ್ಲಿ ಕಟ್ಟಬೇಕು. ಆ ಪ್ರಮಾಣದ ಸೈದ್ಧಾಂತಿಕ ವಿರೋಧವನ್ನು ಅವರು ಬಿಜೆಪಿಯೊಂದಿಗೆ ಹೊಂದಿದ್ದಾರೆ.
ರಮೇಶ ಜಾರಕಿಹೊಳಿಗೆ ಅಂತಹ ಯಾವ ಸೈದ್ಧಾಂತಿಕ ಬದ್ಧತೆ ಇಲ್ಲವಾದರೂ, ಅವರಿಗೆ ಬೆಳಗಾವಿ ಕಾಂಗ್ರೆಸ್‍ನಲ್ಲಿರುವ ಪ್ರಭಾವ ಬಿಜೆಪಿಯಲ್ಲಂತೂ ಸಿಗಲು ಸಾಧ್ಯವೇ ಇಲ್ಲ. ಅಲ್ಲಿ ಕತ್ತಿ, ಕೋರೆಗಳು ಮತ್ತು ಸಂಸದ ಅಂಗಡಿ ಈಗಾಗಲೇ ಪ್ರತಿಷ್ಠಾಪನೆಗೊಂಡಿದ್ದಾರೆ. ಇನ್ನು ಬಿಜೆಪಿಯ ರಾಜ್ಯ ಮಟ್ಟದ ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲುವೇ ಹೊರತು ಬೇರೆಯವರಾಗಲು ಸಾಧ್ಯವಿಲ್ಲ. ಹೀಗಾಗಿ ಯಾವುದಕ್ಕಾಗಿ ಕಾಂಗ್ರೆಸ್‍ನಲ್ಲಿ ಬಡಿದಾಡುತ್ತಿದ್ದಾರೋ, ಅದು ಬಿಜೆಪಿಗೆ ಹೋದರೂ ಸಿಗುವುದಿಲ್ಲ; ಬಿಜೆಪಿಗೆ ಹೋಗುತ್ತೇವೆಂದು ಹೆದರಿಸುವುದು ಕಾಂಗ್ರೆಸ್‍ನಲ್ಲಿ ಚೌಕಾಶಿ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಮಾತ್ರವೇ. ಹೀಗಿರುವಾಗ ತರ್ಕಹೀನ ಬಾಲಿಶ ಸುದ್ದಿಗಳು ಹಾಗೂ ಹೆಡ್‍ಲೈನ್‍ಗಳಿಂದ ತಮ್ಮ ಹತಾಶೆಯನ್ನು ತೋರಿದ ಮಾಧ್ಯಮಗಳು ಬಿಜೆಪಿಗೂ ಡ್ಯಾಮೇಜ್ ಮಾಡಿದವು.
ಇನ್ನೂ ಎರಡು ಸಾರಿ ಇಂಥದ್ದೇ ಮಾಡಿದರೆ, ಸಮ್ಮಿಶ್ರ ಸರ್ಕಾರವು ಮತ್ತಷ್ಟು ಗಟ್ಟಿಯಾಗುವುದಲ್ಲದೇ ಬೇರೇನೂ ಪರಿಣಾಮವಿರದ ನಾನ್‍ಸೆನ್ಸ್ ಅಷ್ಟೇ ನಡೆಯಿತು. ಹಾಗಾಗಿಯೇ ದುನಿಯಾ ವಿಜಿ ನಡೆಸಿದ ಹಲ್ಲೆ ಹಾಗೂ ದರ್ಶನ್, ಪ್ರಜ್ವಲ್, ದೇವರಾಜ್ ಅಪಘಾತದ ಸುದ್ದಿಯ ಹಿಂದೆ ಹೋಗಿ ಸರ್ಕಾರದ ಪತನದ ಸುದ್ದಿಯನ್ನು ಇದ್ದಕ್ಕಿದ್ದಂತೆ ಮರೆತೇಬಿಟ್ಟವು. ‘ಸರ್ಕಾರ ಉಳಿಸಿದ ದುನಿಯಾ ವಿಜಿ & ದರ್ಶನ್’ ಎಂದು ಜನರು ಆಡಿಕೊಳ್ಳುವ ಮಟ್ಟಿಗೆ ಈ ಮಾಧ್ಯಮಗಳ ವಿಶ್ವಾಸಾರ್ಹತೆ ಕುಸಿದಿದೆ.
ಈ ಪ್ರಕರಣದಲ್ಲಿ ಮತ್ತು ಪರಿಷತ್ ಚುನಾವಣೆಯಲ್ಲಿ ಸಾಂಕೇತಿಕ ಸ್ಪರ್ಧೆಯನ್ನೂ ಒಡ್ಡಲಾಗದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೇ, ಬಿಜೆಪಿಯು ಸೋತಿತು. ಜಿ.ಪರಮೇಶ್ವರ್, ವಿ.ಸೋಮಣ್ಣ ಮತ್ತು ಕೆ.ಎಸ್.ಈಶ್ವರಪ್ಪ ತೆರವು ಮಾಡಿದ್ದ ಮೂರು ಖಾಲಿ ಸ್ಥಾನಗಳಲ್ಲಿ ಎರಡು ಬಿಜೆಪಿಯ ಕೈನಲ್ಲೇ ಇತ್ತು ಎಂಬುದನ್ನು ಮರೆಯಲಾಗದು. ಸಂಖ್ಯಾಬಲದ ಅನುಕೂಲ ಸಮ್ಮಿಶ್ರ ಪಕ್ಷಗಳಿಗೆ ಇದ್ದರೂ, ವಿರೋಧಪಕ್ಷವೊಂದು ತನ್ನ ಅಸ್ತಿತ್ವವನ್ನು ಸಾಬೀತುಪಡಿಸುವುದೂ ಆಗಲಿಲ್ಲ.
ಆದರೆ, ಈ ಸಂದರ್ಭದಲ್ಲಿ ಉಳಿದೆರಡು, ಆಡಳಿತಾರೂಢ, ಪಕ್ಷಗಳು ಗೆದ್ದವೆಂದು ಹೇಳಲಾಗದು. 15 ದಿನಗಳ ಒಟ್ಟಾರೆ ವಿದ್ಯಮಾನವನ್ನು ನಿಭಾಯಿಸಿದ ರೀತಿ, ‘ಭಿನ್ನಮತ’ವನ್ನು ನಿಭಾಯಿಸಿದ ರೀತಿ ಮತ್ತು ಪರಿಷತ್‍ಗೆ ಅಭ್ಯರ್ಥಿಗಳ ಆಯ್ಕೆ ಮೂರರಲ್ಲೂ ಅವು ಸೋತವು. ಸಮ್ಮಿಶ್ರ ಸರ್ಕಾರವನ್ನು ನಿಭಾಯಿಸುವ ಕುರಿತು ಕಾಂಗ್ರೆಸ್ ಪಕ್ಷವು ತನ್ನ ರಾಷ್ಟ್ರೀಯ ನಾಯಕರಿಂದ ಪಾಠ ಕಲಿಯುವುದೊಳಿತು. 1977ರ ಜನತಾ ಸರ್ಕಾರ, ವಿ.ಪಿ.ಸಿಂಗ್ ಹಾಗೂ ದೇವೇಗೌಡ, ಗುಜ್ರಾಲ್‍ರ ನೇತೃತ್ವದ ಜನತಾಪರಿವಾರದ ಸರ್ಕಾರಗಳಲ್ಲದೇ ಕಾಂಗ್ರೆಸ್‍ನ ಪಿ.ವಿ.ನರಸಿಂಹರಾವ್ ಸಹಾ ಆತಂಕದಲ್ಲೇ ಸರ್ಕಾರಗಳನ್ನು ಮುನ್ನಡೆಸಿದ್ದರು. ಆದರೆ, 5 ವರ್ಷಗಳ ವಾಜಪೇಯಿ ನೇತೃತ್ವದ ಎನ್‍ಡಿಎ ಹಾಗೂ 10 ವರ್ಷಗಳ ಸೋನಿಯಾ-ಮನಮೋಹನ್‍ರ ನೇತೃತ್ವದ ಯುಪಿಎ ಸರ್ಕಾರಗಳಲ್ಲಿ ಅಸ್ಥಿರತೆಯ ಸಮಸ್ಯೆಯಿರಲಿಲ್ಲ. ಎಡಪಕ್ಷಗಳು ಸರಿಯಾದ ಕಾರಣಕ್ಕೇ ಬೆಂಬಲ ಕೊಡದೇ ಹೋದಾಗಲೂ ಅದನ್ನು ಕಾಂಗ್ರೆಸ್ ನಿಭಾಯಿಸಿತ್ತು.
ಸೈದ್ಧಾಂತಿಕ ಕಾರಣಗಳಿಂದ ಒಂದು ಪಕ್ಷವನ್ನು ಹೊರಗಿಟ್ಟು ಸಮ್ಮಿಶ್ರ ಸರ್ಕಾರ ರಚಿಸಿಕೊಳ್ಳುವುದೆಂದರೆ, ಜನರು ಮೆಚ್ಚುವ ರೀತಿಯಲ್ಲಿ ಅಧಿಕಾರ ನಡೆಸುವ ಜವಾಬ್ದಾರಿ ಇನ್ನೂ ಹೆಚ್ಚಿದೆ ಎಂದೇ ಅರ್ಥ. ಎಲ್ಲಾ ನೀತಿಗಳನ್ನೂ ಅದ್ಭುತವಾಗಿ ತರಲಾಗದೇ ಹೋದರೂ, ಅನೈತಿಕವಾದ, ಜನರು ಥೂ ಛೀ ಎನ್ನಬಹುದಾದ ಕೆಲಸಗಳಿಗೆ ಕೈ ಹಾಕಲೇಬಾರದು. ಆದರೆ, ಜಾರಕಿಹೊಳಿ ಸೋದರರ ಬಂಡಾಯದ ವಿಚಾರವಿರಲಿ ಅಥವಾ ಇನ್ನಾವುದೇ ಅಂತಹ ಸಂದರ್ಭ ಬಂದಾಗಲೂ ಕಟ್ಟುನಿಟ್ಟಾಗಿ ಅದನ್ನು ಎದುರಿಸುವಲ್ಲಿ ಕಾಂಗ್ರೆಸ್ ನಾಯಕತ್ವವು ಸೋತಿತು. ಈ ವಿಚಾರದಲ್ಲಿ ಸಿದ್ದರಾಮಯ್ಯನವರ ಪಾತ್ರವೂ ಪ್ರಶ್ನಾರ್ಹವೇ ಆಗಿತ್ತು.
ಇದೀಗ ಹಿರಿಯ ಗಣ್ಯರಿರಬೇಕಾದ ವಿಧಾನಪರಿಷತ್‍ಗೆ ಮೂವರನ್ನು ಈ ಎರಡು ಪಕ್ಷಗಳು ಆಯ್ಕೆ ಮಾಡಿಕೊಂಡಿವೆ. ಹಿರಿಯ ಕಾಂಗ್ರೆಸ್ ನಾಯಕ ನಜೀóರ್ ಅಹಮದ್ ಅವರ ಆಯ್ಕೆಗೆ ಹೆಚ್ಚಿನ ಅಪಸ್ವರಗಳಿರಲಾರವು. ಮೂಲತಃ ಕೆಜಿಎಫ್‍ನವರಾದ ನಜೀóರ್ ಅಹಮದ್ ಅವರು ಒಮ್ಮೆ ಬೆಂಗಳೂರಿನ ಬಿನ್ನಿಪೇಟೆ ಕ್ಷೇತ್ರದಿಂದ ಎಂಎಲ್‍ಎ ಆಗಿದ್ದರು. ಬಂಗಾರಪ್ಪನವರ ಜೊತೆ ಕೆಸಿಪಿಗೆ ಹೋಗಿ ಬಂದಿದ್ದು ಬಿಟ್ಟರೆ ಪಕ್ಷಕ್ಕೆ ನಿಷ್ಠರಾಗಿ ಉಳಿದಿದ್ದಾರೆ. ಸ್ವತಃ ಉದ್ಯಮಿಯಾಗಿರುವ ಅವರು ತಮ್ಮ ಸಮುದಾಯದ ಜೊತೆಗೆ ನಿಕಟ ಸಂಪರ್ಕ ಸಂಬಂಧ ಇಟ್ಟುಕೊಂಡಿದ್ದಾರೆ. ಕೋಲಾರದಲ್ಲೂ ಒಮ್ಮೆ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಾಗ ಸೋತಿದ್ದರು. ಪಕ್ಷಕ್ಕೆ ಒಂದಷ್ಟು ಕೆಲಸ ಮಾಡುವ ಸಾಮಥ್ರ್ಯವಿದ್ದು, ಆದಷ್ಟನ್ನು ಮಾಡುವ ವ್ಯಕ್ತಿಯಾಗಿ ನಜೀóರ್ ಅಹಮದ್ ಅವರು ತಮ್ಮ ಅರ್ಹತೆಯಿಂದ ಟಿಕೆಟ್ ಪಡೆದುಕೊಂಡಿದ್ದಾರೆ.
ಆದರೆ, ಇದೇ ಮಾತುಗಳನ್ನು ಎಂ.ಸಿ.ವೇಣುಗೋಪಾಲ್ ಅವರ ಬಗ್ಗೆ ಹೇಳಲಾಗದು. ಸಾಕಷ್ಟು ಕಾಲದಿಂದ ಕಾಂಗ್ರೆಸ್‍ನಲ್ಲಿರುವ ಎಂ.ಸಿ.ವೇಣುಗೋಪಾಲ್ ಅತ್ಯಂತ ಹಿಂದುಳಿದ ಮತ್ತು ಶೋಷಿತ ಸವಿತಾ ಸಮಾಜದ ಹಿನ್ನೆಲೆಯವರು. ಈ ಹಿನ್ನೆಲೆಯ ಒಬ್ಬರನ್ನು ಆಯ್ಕೆ ಮಾಡುವುದೇ ಸರಿಯಾಗಿತ್ತು. ಆದರೆ, ವೇಣುಗೋಪಾಲ್ ನಿಜಕ್ಕೂ ಪಕ್ಷಕ್ಕೆ ಅಂತಹ ವಿಶೇಷ ಕೊಡುಗೆಯನ್ನೇನೂ ನೀಡಿಲ್ಲ. ಹಿಂದುಳಿದ ವರ್ಗಗಳ ಘಟಕದಲ್ಲಿ ಮತ್ತು ವಿವಿಧ ಜಿಲ್ಲೆಗಳಿಗೆ ಪಕ್ಷದ ವೀಕ್ಷಕರಾಗಿ ಹೋಗುವಲ್ಲಿ ನಿಯೋಜಿತವಾಗಿ ಪಕ್ಷೆದ ಕೆಲಸ ಮಾಡಿದ್ದೇನೆಂದು ಹೇಳಬಹುದಾದರೂ, ಸಮುದಾಯದ ಜೊತೆಗಾಗಲೀ ಅವರು ಕಣ್ಣಿಟ್ಟಿದ್ದ ಜಯನಗರ ಕ್ಷೇತ್ರದ ಜನರೊಂದಿಗಾಗಲೀ ನಿಕಟ ಬಾಂಧವ್ಯವಿಲ್ಲ. ಜಿ.ಪರಮೇಶ್ವರ್ ಅವರಿಗ ಆಪ್ತರು ಮತ್ತು ಕಳೆದ ಚುನಾವಣೆಯಲ್ಲಿ ಜಯನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‍ಗೆ ಅವರು ಆಕಾಂಕ್ಷಿಯಾಗಿದ್ದರು. ರಾಮಲಿಂಗಾರೆಡ್ಡಿಯವರ ಮಗಳು ಸೌಮ್ಯಾರೆಡ್ಡಿ ಗೆಲ್ಲಬಹುದು ಎಂಬ ಕಾರಣಕ್ಕೂ ತಂದೆಯ ಪ್ರಭಾವದ ಕಾರಣಕ್ಕೂ ಅವರಿಗೇ ಟಿಕೆಟ್ ಸಿಕ್ಕಿತು. ಆಗ ‘ನಂತರ ಎಂ.ಎಲ್.ಸಿ ಮಾಡ್ತೇವೆ’ ಎಂಬ ಮಾತುಕೊಟ್ಟಿದ್ದ ಕಾಂಗ್ರೆಸ್ ನಾಯಕರು ಈಗ ಮಾತು ಉಳಿಸಿಕೊಂಡಿದ್ದಾರೆ.
ಈಗಲಾದರೂ ತಮ್ಮ ಸಮುದಾಯದ ಮತ್ತು ಅಹಿಂದ ಸಮುದಾಯಗಳ ಜೊತೆಗೆ ಬಾಂಧವ್ಯ ಹೆಚ್ಚಿಸಿಕೊಂಡು ಶೋಷಿತ ಸಮುದಾಯಗಳ ಪರವಾಗಿ ನಿಲ್ಲುವ ಕೆಲಸವನ್ನು ವೇಣುಗೋಪಾಲ್ ಮಾಡಬೇಕಿದೆ. ಜಿ.ಪರಮೇಶ್ವರ್ ಅವರ ಹಿಂದೆ ನಿಲ್ಲುವುದೆಂದರೆ ಶೋಷಿತ ಸಮುದಾಯಗಳ ಪರ ನಿಲ್ಲುವುದಲ್ಲ ಎಂಬುದನ್ನು ಅವರಿಗೆ ಯಾರಾದರೂ ಹೇಳಬೇಕಿದೆ.
ಇದಕ್ಕಿಂತ ಕೆಟ್ಟ ಆಯ್ಕೆ ಜೆಡಿಎಸ್‍ನದ್ದು. ರಾಜ್ಯ ಯುವಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಜೆಡಿಎಸ್‍ನ ಮಾಜಿ ಎಂಎಲ್‍ಸಿ ಮತ್ತು ವಕ್ತಾರ ರಮೇಶ್‍ಬಾಬು, ಹಿರಿಯ ನಾಯಕ ವೈಎಸ್‍ವಿ ದತ್ತರ ಜೊತೆಯಲ್ಲಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಎಂಎಲ್‍ಸಿ ಆಗಬಯಸಿದ್ದರು. ಆದರೆ, ಗೌಡರು ಕೃಪೆ ತೋರಿದ್ದು ಬೆಂಗಳೂರು ನಗರ ಯುವ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್‍ಗೌಡರಿಗೆ. ದೇವೇಗೌಡರ ಮಗಳೊಬ್ಬರು ಹಾಕಿದ ಒತ್ತಡದಿಂದ ಇದು ಸಾಧ್ಯವಾಗಿದೆ ಎನ್ನಲಾಗುತ್ತಿದೆ. ನಾಮಪತ್ರ ಸಲ್ಲಿಕೆಯ ಸಮಯ ಮುಗಿಯಲು ಕೇವಲ 15 ನಿಮಿಷಗಳಿದ್ದಾಗ, ಎಚ್.ಡಿ.ರೇವಣ್ಣರೊಬ್ಬರೇ ರಮೇಶ್‍ಗೌಡರ ಜೊತೆಗೆ ಹೋಗಿ ನಾಮಪತ್ರ ಸಲ್ಲಿಕೆಯಾಗುವಂತೆ ನೋಡಿಕೊಂಡರು. ಯಾವ ರೀತಿಯಲ್ಲಿ ಹಿರಿಯರ ಮನೆಗೆ ಈತ ಸೂಕ್ತ ವ್ಯಕ್ತಿ ಎಂದು ಗೌಡರು ನಿರ್ಧರಿಸಿದರೋ ಗೊತ್ತಿಲ್ಲ.
ಸರ್ಕಾರವು ರಾಜ್ಯದ ಜನತೆಗೆ ಸಕಾರಾತ್ಮಕ ಸಂದೇಶ ಕೊಡುವ ಕ್ರಮಗಳಿಗೆ ಮುಂದಾಗಬೇಕು. ವಿವಿಧ ಸಮುದಾಯಗಳನ್ನು ಸರ್ಕಾರವು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಎಲ್ಲರಿಗೂ ಅನ್ನಿಸಬೇಕು. ಆಡಳಿತ ನಡೆಸುತ್ತಿರುವ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಅದರ ಪರಿಣಾಮ ಆಡಳಿತದ ಮೇಲೆ ಆಗುವುದಿಲ್ಲ ಮತ್ತು ಪಕ್ಷಗಳೊಳಗಿನ ಅಶಿಸ್ತನ್ನು ಸಂಪೂರ್ಣ ತಹಂಬದಿಗೆ ತಂದುಕೊಳ್ಳುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇವುಗಳನ್ನು ಮಾಡುವುದರಲ್ಲಿ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಪಕ್ಷಗಳು ಇದುವರೆಗೂ ಸಫಲವಾಗಿಲ್ಲ. ಕಳೆದ 15 ದಿನಗಳ ಬೆಳವಣಿಗೆಗಳೂ ಅದನ್ನೇ ಸಾಬೀತುಪಡಿಸುತ್ತವೆ.
ಒಟ್ಟಿನಲ್ಲಿ ಸರಿಯಾದ ವಿರೋಧ ಪಕ್ಷವೂ ಇಲ್ಲ; ಆಡಳಿತ ಪಕ್ಷಗಳೊಳಗೂ ಎಲ್ಲವೂ ನೆಟ್ಟಗಿಲ್ಲದ ಸ್ಥಿತಿಯಲ್ಲಿ ರಾಜ್ಯದ ರಾಜಕೀಯ ದುಸ್ಥಿತಿ ಇರುವುದು ದುರದೃಷ್ಟಕರ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...