Homeಗೌರಿ ಲಂಕೇಶ್ಗೌರಿ ಲಂಕೇಶರ ಆಶಯದಡಿ ನಡೆಯುವುದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಕೆ.ಎಲ್.ಅಶೋಕ್ ಸಂದರ್ಶನ

ಗೌರಿ ಲಂಕೇಶರ ಆಶಯದಡಿ ನಡೆಯುವುದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಕೆ.ಎಲ್.ಅಶೋಕ್ ಸಂದರ್ಶನ

- Advertisement -
- Advertisement -

ಗೌರಿ ಲಂಕೇಶ್ ಅವರ ಹೆಸರಿನಲ್ಲಿ ರಚಿತವಾದ ಟ್ರಸ್ಟ್‌ನ ಕುರಿತಂತೆ ಪತ್ರಿಕೆಯೊಂದರಲ್ಲಿ ವರದಿಯೊಂದು ಪ್ರಕಟವಾಯಿತು. ನಂತರ ಅದರ ಕುರಿತು ಚಿತ್ರ ನಿರ್ದೇಶಕ ಇಂದ್ರಜಿತ್ ಪತ್ರಿಕಾಗೋಷ್ಠಿಯನ್ನೂ ಮಾಡಿದರು. ಇದರ ಬಗ್ಗೆ ಗೌರಿ ಸ್ಮಾರಕ ಟ್ರಸ್ಟ್‍ನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಅವರನ್ನು ಪತ್ರಿಕೆಯು ಮಾತಾಡಿಸಿತು

ಪತ್ರಿಕೆ: ಗೌರಿ ಸ್ಮಾರಕ ಟ್ರಸ್ಟ್‌ನ ಉದ್ದೇಶವಾಗಿತ್ತು?
ಕೆ.ಎಲ್.ಅಶೋಕ್: ಸತ್ಯವನ್ನು ನೇರವಾಗಿ ಹೇಳುತ್ತಿದ್ದ ಕರ್ನಾಟಕದ ಧೀಮಂತ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಅದೇ ಕಾರಣಕ್ಕೆ ಆಯಿತು. ಅವರ ದನಿಯನ್ನು ಉಡುಗಿಸಲೆಂದೇ ಆ ಹತ್ಯೆ ನಡೆದದ್ದರಿಂದ ದನಿ ಉಡುಗಬಾರದು ಎಂಬುದು ಅವರ ಬಳಗದ ನಮ್ಮೆಲ್ಲರ ಆಶಯವಾಗಿತ್ತು. ಸೆಪ್ಟೆಂಬರ್ 5ರಂದು ಆ ಹತ್ಯೆ ನಡೆದಿತ್ತು. ಜನವರಿ 29ಕ್ಕೆ ಗೌರಿಯವರ ಹುಟ್ಟಿದ ದಿನದ ಹೊತ್ತಿಗೆ ಕಾರ್ಯಕ್ರಮವೊಂದನ್ನು ಮಾಡಿ ಅವರ ಆಶಯಗಳ ದಾರಿಯಲ್ಲಿ ಮುಂದುವರೆಯುತ್ತೇವೆ ಎಂದು ಸಾರುವ ಅಗತ್ಯವೂ ಇತ್ತು. ಹಾಗಾಗಿ ಸ್ಮಾರಕ ಟ್ರಸ್ಟ್ ಆರಂಭವಾಯಿತು.

ಪ: ಗೌರಿ ಮೀಡಿಯಾ ಟ್ರಸ್ಟ್ ಏಕೆ ಸ್ಥಾಪನೆಯಾಯಿತು?
ಅ: ಈ ನಾಡಿನ ಒಂದಿಡೀ ತಲೆಮಾರನ್ನು ಪ್ರಭಾವಿಸಿದ ಪಿ.ಲಂಕೇಶರ ಪತ್ರಿಕೆಯ ಮುಂದುವರಿಕೆಯಾಗಿ ಗೌರಿ ಲಂಕೇಶ್ ಪತ್ರಿಕೆಯು ಅಸ್ತಿತ್ವಕ್ಕೆ ಬಂದಿತ್ತು. ಅದನ್ನು ಮುಂದುವರೆಸುವ ಹೊಣೆಗಾರಿಕೆಯೂ ನಮ್ಮ ಮೇಲಿತ್ತು. ಜೊತೆಗೆ ಗೌರಿ ಲಂಕೇಶರು ಇದ್ದಾಗಲೇ ವೆಬ್‍ಮೀಡಿಯಾ ಆರಂಭಿಸುವ ಯೋಜನೆಯಾಗಿತ್ತು. ಅವೆಲ್ಲದರ ನಿತ್ಯದ ಚಟುವಟಿಕೆಗಳನ್ನು ಹೊತ್ತುಕೊಂಡು ನಡೆಸುವ ಜವಾಬ್ದಾರಿಯನ್ನು ರಾಜ್ಯ ಮತ್ತು ದೇಶದ ವಿವಿಧ ಭಾಗಗಳಲ್ಲಿದ್ದ ಸ್ಮಾರಕ ಟ್ರಸ್ಟ್‌ನ ಸದಸ್ಯರು ತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ. ಇದಲ್ಲದೇ ಪತ್ರಿಕೆ ಅಥವಾ ಯಾವುದೇ ಬಗೆಯ ಮಾಧ್ಯಮ ಪ್ರಯತ್ನ ನಡೆಸುವ ಮಾಲೀಕರು ಕಾನೂನು ಕಟ್ಟಲೆಗಳನ್ನೂ ಎದುರಿಸಬೇಕಾಗುತ್ತದೆ. ಹೀಗೆ ಹಲವು ಕಾರಣಗಳಿಂದ ಪುಟ್ಟದಾದ ಮೀಡಿಯಾ ಟ್ರಸ್ಟ್ ರಚನೆಗೊಂಡು, ಸ್ಮಾರಕ ಟ್ರಸ್ಟ್‌ನ ಹಿರಿಯರ ಮಾರ್ಗದರ್ಶನದಲ್ಲಿ ಸ್ವತಂತ್ರವಾಗಿ ಮಾಧ್ಯಮ ಸಂಸ್ಥೆ ಕಟ್ಟುವ ಹೊಣೆ ಹೊತ್ತುಕೊಂಡಿತು.

ಪ: ಇದರ ಹಣಕಾಸನ್ನು ಹೇಗೆ ನಿಭಾಯಿಸುತ್ತಿದ್ದೀರಿ?
: ಯಾವುದರದ್ದು ಸ್ಮಾರಕ ಟ್ರಸ್ಟ್‌ದಾ ಅಥವಾ ಪತ್ರಿಕೆಯದ್ದಾ?

ಪ: ಎರಡರದ್ದೂ….
: ಸ್ಮಾರಕ ಟ್ರಸ್ಟ್‌ದು ಹೆಚ್ಚಿನ ಚಟುವಟಿಕೆಗಳಿರುವುದಿಲ್ಲ. ವರ್ಷದಲ್ಲಿ ಎರಡು ಕಾರ್ಯಕ್ರಮಗಳನ್ನು ಮಾಡುತ್ತೇವೆ. ಗೌರಿ ಸ್ಮಾರಕ ಉಪನ್ಯಾಸವಲ್ಲದೇ, ಗೌರಿ ಲಂಕೇಶ್ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ವರ್ಷ ಅದನ್ನು ಪ್ರಖ್ಯಾತ ಪತ್ರಕರ್ತ ರವೀಶ್‍ಕುಮಾರ್ ಅವರಿಗೆ ನೀಡಲಾಯಿತು. ಇವೆಲ್ಲವೂ ನಮ್ಮ ಹಿತೈಷಿಗಳು ನೀಡುವ ವಂತಿಗೆಯಿಂದ ನಡೆಯುತ್ತದೆ. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅಂದಾಜು ಬಜೆಟ್ ತಯಾರಿಸಿ ಹಿತೈಷಿಗಳ ಮುಂದೆ ಇಡಲಾಗುತ್ತದೆ. ಮುಗಿದ ನಂತರ ಖರ್ಚು ವೆಚ್ಚದ ಲೆಕ್ಕಾಚಾರವನ್ನು ಮಾಡಿ ಟ್ರಸ್ಟ್‍ಗೆ ಲೆಕ್ಕ ಒಪ್ಪಿಸಲಾಗುತ್ತದೆ. ಕೆಲವೊಮ್ಮೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟಿಸಿದ್ದೇವೆ.

ಇನ್ನು ಮೀಡಿಯಾ ಟ್ರಸ್ಟ್ ಪತ್ರಿಕೆಯನ್ನು ನಡೆಸುವುದರಿಂದ, ಓದುಗರು ವಾರ್ಷಿಕ ಅಥವಾ ದ್ವೈವಾರ್ಷಿಕ ಚಂದಾ ಹಣ ನೀಡುವ ಮೂಲಕ ಜೊತೆಯಾಗಿದ್ದಾರೆ. ಇದಲ್ಲದೇ ರಾಜ್ಯದ ಸುಮಾರು 70ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಸ್ಟಾಲ್‍ಗಳಲ್ಲಿ ಮಾರಾಟವಾಗುತ್ತದೆ. ಓದುಗರು ವೆಬ್‍ಸೈಟ್ ಮೂಲಕ ಸಹಾ ವಂತಿಗೆ ನೀಡುತ್ತಾರೆ. ನೇರವಾಗಿ ಮೀಡಿಯಾ ಟ್ರಸ್ಟ್‍ಗೆ ವಂತಿಗೆ ನೀಡುವವರೂ ಇದ್ದಾರೆ. ಆದರೆ ನಮ್ಮ ಈ ಪ್ರಯತ್ನಗಳಿಗೆ ಉದ್ದೇಶಪೂರ್ವಕವಾಗಿ ತಡೆ ಒಡ್ಡಿದ ಕೆಲವು ಪ್ರಯತ್ನಗಳು ನಡೆದದ್ದರಿಂದ ಇನ್ನೂ ಸ್ವಾವಲಂಬಿಯಾಗಿಲ್ಲ. ಹಾಗಾಗಿ ಸ್ಮಾರಕ ಟ್ರಸ್ಟ್ ಮತ್ತು ಟ್ರಸ್ಟಿಗಳು ವಂತಿಗೆ ನೀಡಿ ಸರಿದೂಗಿಸುತ್ತೇವೆ. ಸಂಪೂರ್ಣ ಸ್ವಾವಲಂಬಿಯಾಗಿ ನಡೆಸಲು ಕಾಲನಿಗದಿತ ಯೋಜನೆ ಸಿದ್ಧವಾಗಿದೆ.

ಇವೆಲ್ಲದರ ಸಂಪೂರ್ಣ ಲೆಕ್ಕ ನೋಡಿಕೊಳ್ಳಲು ಸಿಬ್ಬಂದಿಯಿದ್ದಾರೆ; ಲೆಕ್ಕ ಪರಿಶೋಧಕರ ಮೂಲಕ ಪರಿಶೀಲನೆ ನಡೆಯುತ್ತದೆ. ಮುಖ್ಯ ಟ್ರಸ್ಟ್‌ನಲ್ಲಿ ಪ್ರತಿ ಪೈಸೆಗೂ ಲೆಕ್ಕ ಕೇಳುವ ಹಿರಿಯರಿದ್ದಾರಾದ್ದರಿಂದ ಶಿಸ್ತಿನಿಂದ ನಡೆಯದೇ ಬೇರೆ ದಾರಿಯಿಲ್ಲ.

ಪ: ನೀವುಗಳು ಚಂದಾ ಎತ್ತಿ ಇವೆಲ್ಲವನ್ನೂ ನಡೆಸುತ್ತಿದ್ದೀರಿ ಎಂಬ ಆರೋಪವಿದೆಯಲ್ಲಾ?
ಅ: ಇದನ್ನು ಕೇಳಿದರೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಪತ್ರಿಕೆಯ ಓದುಗರು, ಪ್ರತೀ ವಾರವೂ ನಮ್ಮ ಮನೆಗೆ ಪೋಸ್ಟ್‌ನಲ್ಲಿ ಪತ್ರಿಕೆ ಬರಲಿ ಎಂದು ಚಂದಾ ಹಣ ಕೊಟ್ಟು ಅದನ್ನು ನಡೆಸುವುದು ಹೆಮ್ಮೆಯ ಸಂಗತಿ. ಏಕೆಂದರೆ ಬ್ಲ್ಯಾಕ್‍ಮೇಲ್ ಮಾಡಿ, ಅವರವರನ್ನು ಬೆದರಿಸಿ ಹಣ ವಸೂಲಿ ಮಾಡಿ ಪತ್ರಿಕೆ ನಡೆಸುತ್ತಿರುವವರೂ ಇದ್ದಾರೆ. ಅಂಥಾದ್ದರಲ್ಲಿ ಎಷ್ಟೇ ಕಷ್ಟವಾದರೂ ಸರಿ ಚಂದಾದಾರರನ್ನು ಅವಲಂಬಿಸಿ ಪತ್ರಿಕೆ ನಡೆಸುವುದು ಮಾದರಿ ಅಲ್ಲವೇ?

ಇನ್ನು ಜನಪರವಾದ ಮಾಧ್ಯಮವೊಂದನ್ನು ಕಟ್ಟಿ ನಿಲ್ಲಿಸುವುದು ಇಡೀ ಸಮಾಜದ ಜವಾಬ್ದಾರಿಯಾಗಿದೆ. ಹಾಗಾಗಿಯೇ ಹಲವರು ಯಾವುದೇ ಗೌರವಧನ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ನೂರಾರು ಜನ ಬರಹಗಾರರು ಸಂಭಾವನೆಯ ಪ್ರಶ್ನೆಯೇ ಎತ್ತದೆ ತಮ್ಮ ಲೇಖನಗಳನ್ನು ಕಳಿಸಿದ್ದಾರೆ. ಹಾಗೆಯೇ ಹಲವಾರು ಹಿತೈಷಿಗಳು ವಂತಿಗೆ ನೀಡಿದ್ದಾರೆ. ಇವೆಲ್ಲವೂ ಜನಪರ ಮಾದ್ಯಮವೊಂದು ಇಂದಿನ ಕಾಲದಲ್ಲಿ ನಡೆಯಬೇಕಾದ ರೀತಿಯಾಗಿದೆ. ಬಹುಶಃ ಆರೋಪ ಮಾಡುತ್ತಿರುವವರಿಗೆ ಅವರ ರೀತಿಯಲ್ಲಿ ನಾವು ಬ್ಲ್ಯಾಕ್‍ಮೇಲ್ ಮಾಡಿ ಅಥವಾ ಬ್ಲ್ಯಾಕ್ ಮನಿ ಮೂಲಕ ಪತ್ರಿಕೆ ನಡೆಸುತ್ತಿಲ್ಲ ಎಂದು ಕಾಡುತ್ತಿರಬೇಕು.

ಪ: ಈ ಟ್ರಸ್ಟ್‌ನಲ್ಲಿ ಗೌರಿ ಲಂಕೇಶ್ ಕುಟುಂಬದ ಸದಸ್ಯರು ಏಕಿಲ್ಲ?
ಅ: ಘಟನೆ ನಡೆದ ನಂತರ ಕುಟುಂಬದ ಸದಸ್ಯರು ಸಹಜವಾಗಿಯೇ ಷಾಕ್‍ನಲ್ಲಿದ್ದರು. ಆದರೂ ಅವರ ತಾಯಿ ಇಂದಿರಮ್ಮನವರು ಮತ್ತು ತಂಗಿ ಕವಿತಾ ಗೌರಿಯವರ ಹತ್ಯೆಯ ವಿರುದ್ಧ ಆಕ್ರೋಶ, ನೋವಿನಿಂದ ದೇಶಾದ್ಯಂತ ಹರಡಿದ ಪ್ರತಿರೋಧದಲ್ಲಿ ಭಾಗಿಯಾದರು. ನೋವಿನ ಸಂಗತಿಯೆಂದರೆ, ಗೌರಿಯವರು ಬಲಪಂಥೀಯ ರಾಜಕಾರಣದ ವಿರುದ್ಧ ರಾಜಿರಹಿತ ಹೋರಾಟ ಮಾಡುತ್ತಿದ್ದರೆ, ಅವರ ಸೋದರ ಬಲಪಂಥೀಯರ ಜೊತೆ ಸೇರಿದ್ದರು. ಗೌರಿಯವರು ಬದುಕಿದ್ದಾಗಲೇ ಆತನ ಅಧಃಪತನ ಶುರುವಾಗಿತ್ತು. ಕನ್ನಡದ ಧೀಮಂತ ಬರಹಗಾರ ಪಿ.ಲಂಕೇಶರ ಸ್ಮೃತಿಗಳ ಬಗ್ಗೆಯೂ ಗೌರವವಿಲ್ಲದ ಆತನ ಕುರಿತ ಹಲವು ವಿವರಗಳಿವೆ. ಅವೆಲ್ಲವನ್ನೂ ನಾವಿಲ್ಲಿ ಹೇಳಲು ಹೋಗುವುದಿಲ್ಲ. ಆತ ಇದರ ಭಾಗವಾಗುವುದು ಸಾಧ್ಯವೇ ಇರಲಿಲ್ಲ.

ಹತ್ಯೆಯಾದ ಎರಡು ತಿಂಗಳಲ್ಲೇ ಆರಂಭವಾದ ಟ್ರಸ್ಟ್‌‌ಗೆ ಕವಿತಾ ಲಂಕೇಶ್ ಪೋಷಕರಾಗಿದ್ದರು. ನಂತರ ಬಹಳ ಸಕ್ರಿಯವಾಗಿ ಅವರು ತಮ್ಮ ಸೋದರಿಯ ಆದರ್ಶಗಳನ್ನು ವಿಸ್ತರಿಸುವ ಕೆಲಸಗಳಲ್ಲಿ ಭಾಗಿಯಾದರು. ಟ್ರಸ್ಟ್‌ನ ಜೊತೆಗೆ ಬಹಳ ಪ್ರೀತಿಯಿಂದ ಜೊತೆಗೂಡಿದರು. ಹಾಗಾಗಿ ಈಗ ಅವರು ಇದರ ಭಾಗವೇ ಆಗಿದ್ದಾರೆ.

ಪ: ಈ ಟ್ರಸ್ಟ್‌ನ ಮೇಲೆ ಹಣಕಾಸಿನ ದುರುಪಯೋಗದ ಆರೋಪ ಬರುತ್ತಿದೆಯಲ್ಲಾ, ಏನು ಕಾರಣ?
ಅ: ಅಂತಹ ಆರೋಪ ಮಾಡುತ್ತಿರುವವರ ಹಿನ್ನೆಲೆ, ಅಸಲೀ ವ್ಯಕ್ತಿತ್ವಗಳನ್ನು ಸಂಪೂರ್ಣ ಬಿಚ್ಚಿಟ್ಟರೆ ಅವರುಗಳು ಗೌರಿ ಲಂಕೇಶರಿಗೆ ಕೊಟ್ಟ ಕಿರುಕುಳಗಳನ್ನು ಮುಂದಿಟ್ಟರೆ ನಿಮಗೆ ಇದು ಅರ್ಥವಾಗಬಹುದು. ಆದರೆ, ಸ್ಥೂಲವಾಗಿಯಾದರೂ ಅವು ಎಲ್ಲರಿಗೂ ಗೊತ್ತಿದೆ.

ಇಂದು ದೇಶ ಇರುವ ಪರಿಸ್ಥಿತಿಯಲ್ಲಿ ಗೌರಿಲಂಕೇಶರ ಆಶಯಗಳನ್ನು ಮುಂದುವರೆಸುವುದು ಎಂದರೆ ರಿಸ್ಕ್‌ಗೆ ಒಡ್ಡಿಕೊಳ್ಳುವುದು ಎಂದೇ ಅರ್ಥ. ಅಂತಹುದೇ ರಿಸ್ಕ್‌ಗಳನ್ನು ಮೈಮೇಲೆ ಎಳೆದುಕೊಂಡು ಸತ್ಯಕ್ಕೆ ಮುಖಾಮುಖಿಯಾದ ಗೌರಿಯವರನ್ನು ಕೊಂದೇ ಬಿಟ್ಟರು. ಕೊಂದವರು, ಬದುಕಿದ್ದಾಗಲೂ ಕಾಡಿದವರು ನೀಚ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ. ಅಂಥವರು ಒಂದಲ್ಲಾ ಒಂದು ರೀತಿಯಲ್ಲಿ ಗೌರಿಯವರ ಹೆಸರಿಗೂ ಮಸಿ ಬಳಿಯಬೇಕು; ಅಂತಹ ಆಶಯವನ್ನು ಮುಂದುವರೆಸುವವರ ಮೇಲೂ ಕೆಸರು ಎರಚಬೇಕು. ಅದಕ್ಕಿಂತ ದೊಡ್ಡ ಘನ ಉದ್ದೇಶ ಅವರಿಗೆ ಇನ್ನೇನೂ ಇಲ್ಲ.

ಒಂದನ್ನಂತೂ ಹೇಳಬಹುದು. ಗೌರಿಯವರ ಸಂಸ್ಥೆಯ ಎಲ್ಲಾ ಹಣಕಾಸು ವ್ಯವಹಾರಗಳೂ ನೈತಿಕವಾಗಿ ಸರಿಯಿವೆ ಎಂದು ಅಂತಃಶುದ್ಧಿಯಿಂದ ಹೇಳುತ್ತೇವೆ. ತಾಂತ್ರಿಕವಾಗಿಯೂ ಸರಿಇದೆಯೇ ಇಲ್ಲವೇ ಎಂಬುದನ್ನು ನಮ್ಮ ಹಿತೈಷಿಗಳು ಯಾವಾಗ ಬೇಕಾದರೂ ಪರಿಶೀಲಿಸಬಹುದು. ಅಷ್ಟೇ ಅಲ್ಲದೇ ಅದನ್ನು ಸಾರ್ವಜನಿಕವಾಗಿಯೂ ಮುಂದಿಡುವ ಯೋಜನೆಯೂ ಇದೆ.

ಪ: ನಕ್ಸಲೀಯ ಸಹಾನುಭೂತಿಪರರೇ ಇದರಲ್ಲಿ ಇದ್ದೀರಂತಲ್ಲಾ?
ಅ: ಗೌರಿ ಲಂಕೇಶರು ಇರುವಾಗ ಮಾತ್ರವಲ್ಲದೇ ಅವರು ಹತ್ಯೆಗೊಳಗಾದಾಗಲೂ ಇದೇ ಜನರು ಅವರನ್ನು ನಕ್ಸಲೀಯ ಸಹಾನುಭೂತಿಯುಳ್ಳವರು ಎಂದು ಹೇಳುತ್ತಾ ಬಂದಿದ್ದರು. ವಿಪರ್ಯಾಸವೆಂದರೆ, ನಕ್ಸಲೀಯರೇ ಅವರನ್ನು ಕೊಂದಿರಬಹುದು ಎಂತಲೂ ತಿರುಚುವ ಪ್ರಯತ್ನ ಮಾಡಿದರು. ಈಗ ನಕ್ಸಲೀಯ ಸಹಾನುಭೂತಿಪರರು ಅವರ ಟ್ರಸ್ಟ್‌ನಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಗೌರಿ ಲಂಕೇಶರನ್ನು ಇನ್ನಿಲ್ಲದೇ ಕಾಡಿದ ಜನರೇ ಅವರನ್ನು ಕೊಲ್ಲುವ ವಾತಾವರಣ ನಿರ್ಮಿಸಿದರು. ಕೊಲೆಯನ್ನು ಸಮರ್ಥಿಸಿದ್ದೂ ಇದೆ. ಈಗ ಅವರೇ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ.

ಅವರ ಪ್ರಕಾರ ಗೌರಿಯವರು ನಕ್ಸಲೀಯ ಸಹಾನುಭೂತಿಪರರೇ ಆಗಿದ್ದರೆ, ಅವರ ಟ್ರಸ್ಟ್‌ನಲ್ಲೂ ಅಂತಹವರೇ ಇರುತ್ತಾರಲ್ಲವೇ? ವಾಸ್ತವ ಅದಲ್ಲ. ಗೌರಿ ಲಂಕೇಶ್ ಅವರು, ಎ.ಕೆ.ಸುಬ್ಬಯ್ಯನವರು ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರು ನಕ್ಸಲೀಯ ಚಳವಳಿಯಲ್ಲಿ ಭಾಗಿಯಾಗಿದ್ದವರನ್ನು ಮುಖ್ಯವಾಹಿನಿಗೆ ತಂದರು. ಆ ರೀತಿ ಮುಖ್ಯವಾಹಿನಿಗೆ ಬಂದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಅವರು ಚಳವಳಿಯಲ್ಲಿ ಭಾಗವಹಿಸಿ ಬಡವರಿಗೆ ಪರಿಹಾರ ದೊರಕಿಸಿಕೊಡುತ್ತಿದ್ದಾರೆ, ಅದೇ ತಪ್ಪಾ? ಅವರುಗಳು ಕಾಡಲ್ಲೇ ಇರಬೇಕಿತ್ತಾ? ಇವೆಲ್ಲದರಿಂದ ಯಾರಿಗೆ ಹೊಟ್ಟೆ ಉರಿಯುತ್ತಿದೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಗೌರಿಯವರು ನಕ್ಸಲೀಯ ಸಹಾನುಭೂತಿಪರರಾಗಿದ್ದರೆ ಆ ದಾರಿ ಬೇಡ ಎಂದು ಅದರಲ್ಲಿ ಸಕ್ರಿಯರಾಗಿದ್ದವರನ್ನು ಹೊರಗೇಕೆ ತರುತ್ತಾರೆ?

ಇಷ್ಟನ್ನಂತೂ ಹೇಳಬಹುದು. ಗೌರಿಯವರು ಆಕ್ಟಿವಿಸ್ಟ್ ಆಗಿ ರೂಪಾಂತರಗೊಂಡ ಆರಂಭದ ದಿನಗಳಿಂದ ಕಡೆಯವರೆಗೆ ಅವರ ಜೊತೆಗಿದ್ದ ಸಂಗಾತಿಗಳಲ್ಲೇ ಹಲವರು ಇಂದು ಅವರ ಆಶಯವನ್ನು ಮುಂದುವರೆಸುವ ಹೊಣೆ ಹೊತ್ತಿದ್ದೇವೆ.

ಪ: ಸದರಿ ಟ್ರಸ್ಟ್ ಎಲ್ಲಿಯವರೆಗೆ ಇರುತ್ತದೆ? ಪ್ರತೀ ವರ್ಷವೂ ಗೌರಿ ಲಂಕೇಶ್ ಪ್ರಶಸ್ತಿ ಮುಂದುವರೆಯುತ್ತದಾ?
ಅ: ಹೌದು ಮುಂದುವರೆಯುತ್ತದೆ. ಆದರೆ, ಟ್ರಸ್ಟ್‌ನ ರೂಪುರೇಷೆಗಳನ್ನು ಮಾರ್ಪಡಿಸುವ ಪ್ರಸ್ತಾಪವು ಆರು ತಿಂಗಳಿಗೂ ಹೆಚ್ಚು ಕಾಲದಿಂದ ಇದೆ. ಖಂಡಿತವಾಗಿಯೂ ಗೌರಿ ಲಂಕೇಶರ ನೆನಪನ್ನು, ಸ್ಫೂರ್ತಿಯನ್ನು ಕಾಪಿಡುವ ಕಾರ್ಯಕ್ರಮಗಳು ಮುಂದುವರೆಯುವುದರಲ್ಲಿ ಸಂಶಯವೇ ಇಲ್ಲ.

ನೋಡಿ, ಗೌರಿ ಲಂಕೇಶರ ಹತ್ಯೆಯನ್ನು ಸಂಭ್ರಮಿಸಿದವರ ಟ್ವಿಟ್ಟರ್ ಅಕೌಂಟ್‍ಅನ್ನು ಪ್ರಧಾನಿ ಫಾಲೋ ಮಾಡಿದ್ದರು ಎಂಬುದರ ಅರಿವು ನಮಗಿದೆ. ಬರಬಹುದಾದ ರಿಸ್ಕ್‍ಗಳನ್ನು ಎದುರಿಸಲು ಸಿದ್ಧರಾಗಿಯೇ ಇದಕ್ಕೆ ನಾವು ಇಳಿದಿದ್ದೇವೆ. ಈ ಕರ್ತವ್ಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಗೌರಿಯವರನ್ನು ಹೂತಿಲ್ಲ, ಬಿತ್ತಿದ್ದೇವೆ ಎಂಬ ಮಾತು ಸುಮ್ಮನೇ ಬಂದಿಲ್ಲ. ನಮ್ಮ ಮೇಲೆ ಬೇರೆ ರೀತಿಯ ದಾಳಿ ಮಾಡುವ ಮುಂಚೆ ನೈತಿಕವಾಗಿ ಕುಗ್ಗಿಸಬೇಕು ಎಂದು ಅಪಪ್ರಚಾರ ಮಾಡಲು ಹೊರಟಿದ್ದಾರೆ. ಅವರು ಇದರಲ್ಲಿ ಯಶಸ್ವಿಯಾಗಲ್ಲ. ಗೌರಿಯವರ ಹತ್ಯೆಯಿಂದ ಪ್ರಜಾತಂತ್ರದ ದನಿಗಳನ್ನು ಅಡಗಿಸಲು ಸಾಧ್ಯವಾಗಿಲ್ಲ ಎಂಬುದನ್ನು ಅರಿತಷ್ಟೂ ಒಳ್ಳೆಯದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮನುವಾದಿಗಳ ಅಪಪ್ರಚಾರಕ್ಕೆ ಗೌರಿಯವರ ಅಭಿಮಾನಿಗಳು ಕುಗ್ಗುವುದು ಬೇಡ. ಅಪಪ್ರಚಾರಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆಯೋಣ.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...