ಇಂಡಿಯಾದ ರಾಜಕೀಯ ವಲಯದಲ್ಲಿ ಪಾಲಿಟಿಕಲ್ ಸಂತನೆಂದೇ ಸುಪ್ರಸಿದ್ಧರಾಗಿರುವ ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ “ದ್ವೈತ” ಸಿದ್ಧಾಂತಿ ಈ “ದ್ವೈತ”ವನ್ನು “ದ್ವಂದ್ವ” ಎಂದೇ ನಂಬಿದಂತಿರುವ ಪೇಜಾವರರ ನಡೆ-ನುಡಿ, ರೀತಿ-ನೀತಿಗಳಲ್ಲೆಲ್ಲ ವಿರೋಧಾಭಾಸವೇ ವಿರೋಧಿಭಾಸ!! ಬಾಬರಿ ಮಸೀದಿ ಧ್ವಂಸಕರಿಗೆ, ಗೋಗೂಂಡಾಗಳಿಗೆ ಸ್ಫೂರ್ತಿಯ ಚಿಲುಮೆಯಂತಿರುವ ಈ ಕೇಸರಿ ಪರಿವಾರದ ರಾಜರ್ಷಿ ಮಠದ ವ್ಯಾವಹಾರಿಕ ಕಾರ್ಯಕ್ರಮಕ್ಕೆ, ಮಠದ ಪರ್ಯಾಯ ಉತ್ಸವಕ್ಕೆ ಸಾಬರಿಂದ ಜೋಳಿಗೆ ತುಂಬ ಕಾಣಿಕೆ-ದೇಣಿಗೆ ಯಥೇಚ್ಛವಾಗಿ ಪಡೆಯುತ್ತಾರೆ; ರಂಜಾನ್ ಹೊತ್ತಲ್ಲಿ ಮುಸ್ಲಿಮರನ್ನು ಮಠಕ್ಕೆ ಆಹ್ವಾನಿಸಿ ತಿಂಡಿ-ತೀರ್ಥ ಕೊಟ್ಟು ಕಳಿಸುವ ಈ ಸ್ವಯಂಘೋಷಿತ ಪರಧರ್ಮ ಸಹಿಷ್ಣು ಕಣ್ಣೆದುರೇ ಸಾಬರನ್ನು ಹಿಂದೂತ್ವದ ಸೈತಾನರು ಬೆತ್ತಲೆ ಮಾಡಿ ಕೇಕೆ ಹಾಕಿದರೂ, ಬಡಿದು ಕೊಂದೆಸೆದರೂ ಮಾತೇ ಆಡುವುದಿಲ್ಲ.
ಇಂತಿಪ್ಪ ಪೇಜಾವರರ ಇಫ್ತಾರ್‍ಕೂಟ ಪ್ರಹಸನ ಈಗ ತರಹೇವಾರಿ ಸುದ್ದಿಯಲ್ಲಿದೆ. ಕಳೆದ ಬಾರಿಯ ರಂಜಾನ್ ಸಂದರ್ಭದಲ್ಲಿ ಪೇಜಾವರರು ಕೃಷ್ಣನ ಮಠಕ್ಕೆ ಮುಸ್ಲಿಮರನ್ನು ಬರಮಾಡಿಕೊಂಡು ಬರಸೆಳೆದು ಈದ್ ಮುಬಾರಕ್ ಹೇಳಿದ್ದರು. ಅಷ್ಟೇ ಅಲ್ಲ, ತಮ್ಮ ಕೈಯಾರೆ ಉಪಾಹಾರ ಕೊಟ್ಟು ಇಫ್ತಾರ್‍ಕೂಟ ಮಾಡಿಕಳಿಸಿದ್ದರು. ಹಾಗೇ ಪೇಜಾವರರು ಇಫ್ತಾರ್‍ಕೂಟ ಮಾಡಿದ್ದು ಅದೇ ಮೊದಲ ಸಲವೇನಲ್ಲ. ಹಿಂದೆಯೂ ಇಂಥ ಸೌಹಾರ್ದ ಸರ್ಕಸ್ ಸ್ವಾಮೀಜಿ ಮಾಡಿದ್ದರು. ಆದರೆ ಕಳೆದ ವರ್ಷ ಪೇಜಾವರರು ಸಾಬಿಗಳನ್ನು ಮಠಕ್ಕೆ ಕಳೆದು “ಕೂಟ” ಮಾಡಿದ್ದು ಅದ್ಯಾಕೋ ಮತೋನ್ಮತ್ತ ಹಿಂದೂತ್ವದ ಹರಿಕಾರರ ಪಿತ್ಥ ನೆತ್ತಿಗೇರಿಸಿತ್ತು. ಪ್ರಮೋದ್ ಮುತಾಲಿಕ್ ಎಂಬ ಸೈತಾನರ ಸೇನೆಯ ಸರದಾರ ಪೇಜಾವರರ ಮೇಲೆ ಮುರಕೊಂಡು ಬಿದ್ದಿದ್ದ. ಪೇಜಾವರರಂಥ ಪೇಜಾವರರೇ ಗೋಭಕ್ಷಕ ಸಾಬರ ಅಪ್ಪಿಕೊಳ್ಳುವುದು ಧರ್ಮಬಾಹಿರ ಎಂದು ಬೊಬ್ಬಿರಿದರೆ ತನ್ನ ಹಿಂದೂತ್ವದ ಇಮೇಜ್ ಮತ್ತಷ್ಟು ಹರಿತವಾಗುತ್ತದೆಂದು ಭಾವಿಸಿದ್ದ ಹುಂಬ ಮುತಾಲಿಕ್ ಸದ್ರಿ ಸ್ವಾಮಿ ವಿರುದ್ಧ ತಿರುಗಿಬಿದ್ದುಬಿಟ್ಟಿದ್ದ!
ಪೇಜಾವವರ ಇಫ್ತಾರ್‍ಕೂಟದ ಕತೆ ಕೇಳಿದ್ದೇ ತಡ, ಅದೆಲ್ಲಿಂದಲೋ ಉಡುಪಿಗೆ ವಕ್ಕರಿಸಿದ್ದ ಮುತಾಲಿಕ್ ನೇರ ಪೇಜಾವರ ಮಠಕ್ಕೆ ನುಗ್ಗಿದ್ದ, “ಏನ್ರಿ ಸ್ವಾಮ್ಯಾರಾ…. ಮಠಾ ಮಸೀದಿ ಮಾಡಾಕ್ ಹೊಂಟೆರೇನ್…..” ಎಂದು ಏರುಧ್ವನಿಯಲ್ಲಿ ಪೇಜಾವರರನ್ನು ತರಾಟೆಗೆ ತೆಗೆದುಕೊಂಡಿದ್ದ. ಈ ಅನಿರೀಕ್ಷಿತ ದಾಳಿಯಿಂದ ಹೌಹಾರಿದ ಪೇಜಾವರರು ಸಾವರಿಸಿಕೊಂಡು, “ಏ ಮುತಾಲಿಕಾ ಇದು ಕೃಷ್ಣ ಮಠ….. ಮೆಲ್ಲುಗೆ ಮಾತಾಡೋ ಮಾರಾಯ…..” ಎಂದು ರಮಿಸಿದ್ದರು. “ಗೋರಕ್ಷಕ ಕೃಷ್ಣನ ಮಠಕ್ಕೆ ಗೋಭಕ್ಷಕ ಸಾಬರನ್ನು ಕರೆಸಿಕೊಂಡಿರುವ ಪೇಜಾವರರು ತಮ್ಮ ಕೆಲಸ ಸಮರ್ಥಿಸಿಕೊಳ್ಳುತ್ತಿದ್ದಾರೆ….. ಅವರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡ್ತೇನೆ…..” ಎಂದು ಹಾರಾಡಿದ್ದ ಮುತಾಲಿಕ್ ಮಾಮ. ಮುತಾಲಿಕ್ ಬಹಿರಂಗವಾಗಿ ಕೂಗಾಡಿ ರಾಡಿ ಎಬ್ಬಿಸಿದ್ದ; ಆದರೆ ವಿಶ್ವ ಹಿಂದೂ ಪರಿಷತ್, ಆರೆಸೆಸ್‍ನ ನಾಜೂಕಿನ ರಿಂಗ್ ಮಾಸ್ಟರ್‍ಗಳು ಸದ್ದಿಲ್ಲದೆ ಪೇಜಾವರರಿಗೆ ಗುದ್ದುಹಾಕಿ “ವಿಚಾರಿಸಿ”ಕೊಂಡಿದ್ದರು. 
ಹಿಂದೂತ್ವದ ದಾಳಿಗೆ ಪೇಜಾವರರು ಹೈರಾಣಾಗಿಹೋಗಿದ್ದರು. ಮಠದೊಳಗಣ ಇಫ್ತಿಯಾರ್ ಕೂಟ ಕರಾವಳಿಯಲ್ಲಿ ಬದಲಾಗಿರುವ ಹಿಂದೂತ್ವದ ಕಾಲಧರ್ಮಕ್ಕೆ ಸರಿಹೊಂದುವುದಿಲ್ಲ ಎಂಬ ಉಪದೇಶ ಪೇಜಾವರರಿಗೆ ಸಂಘಪರಿವಾರದ ದಶದಿಕ್ಕಿನಿಂದ ಧಾರಾಳವಾಗಿ ಬಾದತ್ವಳಿಸಿತ್ತು! ಪೇಜಾವರರಂಥವರೇ ಕರಾವಳಿಯ ಉದ್ದಗಲಕ್ಕೆ ಬಿತ್ತಿಬೆಳೆದ ಹಿಂಸೋನ್ಮಾದದ ಧರ್ಮಕಾರ ಸ್ವತಃ ಪೇಜಾವರರಿಗೇ ಧರ್ಮಸಂಕಟಕ್ಕೆ ಈಡು ಮಾಡಿತ್ತು. ತಮ್ಮ ಸಂದಿಗ್ಧತೆ ಹೊರಗೆಲ್ಲೂ ತೋರಿಸಿಕೊಳ್ಳದೆ ಒಳಗೊಳಗೇ ಚಡಪಡಿಸಿದ ಪೇಜಾವರರು ಮಾತಿನೇಟು ಮುತಾಲಿಕ್‍ಗೆ ಕೊಟ್ಟರು. ಗೋಕುಲಾಷ್ಠಮಿಗೂ ಇಮಾಮ್ ಸಾಬಿಗೂ ಎತ್ತನಿಂದೆತ್ತಣ ಸಂಬಂಧ ಎಂಬುದು ಮುತಾಲಿಕ್‍ನ ಮಂಗಾಟವಾಗಿತ್ತು.
ಈ ಕಾಲಕ್ಕೆ “ಮಾರು”ತ್ತರ ಕೊಟ್ಟ ಪೇಜಾವರರು ಉಡುಪಿ ಕೃಷ್ಣಮಠ ಮತ್ತು ಮುಸ್ಲಿಮರ ಮಧ್ಯೆ ಬಿಡಿಸಲಾಗದ ನಂಟಿರುವ ಇತಿಹಾಸ ಬಿಚ್ಚಿಟ್ಟಿದ್ದರು. 1904ರಲ್ಲೇ ಹಾಜಿ ಅಬ್ದುಲ್ಲಾ ಎಂಬ ಸೆಕ್ಯುಲರ್ ಸಾಬಣ್ಣ ತನ್ನ ಗುರುವಿನ ಗುರುಗಳಿಗೇ ಮನೆಗೆ ಕರೆದೊಯ್ದು ಕಾಣಿಕೆ ಕೊಟ್ಟು ಕಳಿಸಿದ್ದರು; 800 ವರ್ಷಗಳ ಹಿಂದೆಯೇ ಮಧ್ವಾಚಾರ್ಯರು ಸಾಯ್ಬರು ನೀಡಿದ ಸನ್ಮಾನ-ಗೌರವ ಮನಃಪೂರ್ವಕ ಸ್ವೀಕರಿಸಿ ಖುಷಿಗೊಂಡಿದ್ದರು. ಸಾಬರೊಂದಿಗೆ ಮಧ್ವಾಚಾರಿಗೆ ಅನ್ಯೋನ್ಯ ಸಂಬಂಧವೂ ಇತ್ತು. ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇಗುಲಕ್ಕೆ ಜಾಗ ಕೊಟ್ಟದ್ದು ಸಾಯ್ಬರ ಸುಲ್ತಾನ; ಉತ್ತರಾದಿ ಮಠದ ಸತ್ಯಭೋಧ ಸ್ವಾಮಿಗೂ ಮುಸ್ಲಿಮರ ದೊರೆಗಳಿಗೂ ಒಡನಾಟವಿತ್ತು…… ಎಂಬಂಥ ಹಲವು ಹಿಂದೂ-ಮುಸ್ಲಿಮ್ ಬಾಂಧವ್ಯದ ನಿದರ್ಶನ ನೀಡಿದ್ದರು ಪೇಜಾವರರು. ಇದು ಮುತಾಲಿಕ್‍ನಂಥ ಬಾಯಿಬಡುಕರ ಹಿಂದೂತ್ವ ಬರೀ ಬೂಟಾಟಿಕೆಯದು ಎಂಬುದನ್ನು ನಿಸ್ಸಂದಿಗ್ಧವಾಗಿ ಸಾಬೀತು ಮಾಡುವಂತಿತ್ತು.
ಜಿದ್ದು-ಸೇಡಿನ ಹಿಂದೂತ್ವದಿಂದ ತಲೆ ತೊಳೆಸಿಕೊಂಡಿರುವ ಶೂದ್ರ ಸಂತತಿಯ ಕೇಸರಿ ಭಾವೋದ್ವೇಗದ ಅಮಲು ಇಳಿಸುವಂತಿರುವ ಪೇಜಾವರರ ತರ್ಕ-ವಾದ ಕೇಳಿ ಸಂಘಪರಿವಾರದ ತಂತ್ರಗಾರರು ತಲೆ-ತಲೆ ಚಚ್ಚಿಕೊಂಡರು. ಪೇಜಾವರರನ್ನು ಗುಟ್ಟಾಗಿ ಸಂಧಿಸಿ ಓಟ್‍ಬ್ಯಾಂಕ್ ಹಿಂದೂತ್ವಕ್ಕೆ ಧಕ್ಕೆ ತರದಂತೆ ತಾಕೀತು ಮಾಡಿದ್ದರು ಸಂಘಿ ಸರದಾರರು. ಮುಂದಿನ ರಂಜಾನ್ ಹೊತ್ತಲ್ಲಿ ಇಂಥ ಗೊಂದಲ-ಗಲಾಟೆ ಮಾಡದಂತೆ ಎಚ್ಚರಿಸಲಾಗಿತ್ತೆಂದು ಮಠದ ಗೋಡೆ-ಕಂಬಗಳು ಈಗ ಪಿಸುಗುಟ್ಟುತ್ತಿವೆ! ಹೀಗಾಗಿ ಈ ಬಾರಿಯ ರಂಜಾನ್ ಹಬ್ಬ ಹತ್ತಿರತ್ತಿರ ಬರುತ್ತಿದ್ದಂತೆಯೇ ಪೇಜಾವರ ಸ್ವಾಮಿಗೆ ಪೀಕಲಾಟ ಶುರುವಾಗಿತ್ತು. ಇಫ್ತಿಯಾರ್ ಕೂಟ ಆಯೋಜನೆಯಿಂದ ತಪ್ಪಿಸಿಕೊಳ್ಳಲು ಉಪಾಯ ಹುಡುಕತೊಡಗಿದ್ದರು. ಒಂದೆಡೆ ಮುಸ್ಲಿಮರ ಜೊತೆಗಿನ ಸ್ನೇಹ-ಸಂಪರ್ಕದ ಸೆಕ್ಯುಲರ್ ಮುಖವಾಡದ ಚಿರತೆ; ಇನ್ನೊಂದೆಡೆ ವಿಎಚ್‍ಪಿ-ಆರೆಸೆಸ್ ಧಮಕಿ. ಇಫ್ತಾರ್‍ಕೂಟ ಮಾಡೊದಾ? ಬಿಡೋದಾ? ಎಂಬ ದ್ವಂದ್ವಕ್ಕೆ ಬಿದ್ದು ಒದ್ದಾಡಿದರು ಪೇಜಾವರ ಸ್ವಾಮೀಜಿ, ಪಾಪ!
ಕಳೆದ ಬಾರಿಯ ಇಫ್ತಾರ್‍ಕೂಟದ ದೆಸೆಯಿಂದ ಪೇಜಾವರರ ಹಿಂದೂತ್ವದ ಪ್ರಭಾವಳಿ ಮಸುಕಾಗುವ ಗಂಡಾಂತರ ಎದುರಾಗಿತ್ತು. ಅದನ್ನು ಹೇಗುಹೇಗೋ ಮ್ಯಾನೇಜ್ ಮಾಡಿದ್ದ ಪೇಜಾವರರು ಟೀಕೆ, ತಕರಾರಿಗೆ ತಾನೊಬ್ಬ ಸ್ವಧರ್ಮ ನಿಷ್ಠನೂ ಪರಧರ್ಮ ಸಹಿಷ್ಣುವೂ ಎಂದುತ್ತರಿಸಿದ್ದರು. ಸ್ವಾಮೀಜಿಯ ನಾಜೂಕಿನ ಮಾತುಗಾರಿಕೆಯಿಂದ ಆತನಿಗೆ ಕಾಲಧರ್ಮ, ದೇಶಧರ್ಮ ಮತ್ತು ಧರ್ಮದ ಧರ್ಮ ಅರಿವು ತಡವಾಗಿಯಾದರೂ ಆಗಿದೆಯಲ್ಲ ಎಂದು ಮನುಷ್ಯತ್ವವಾದಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ ಪೇಜಾವರರೀಗ ಉಲ್ಟಾ ಹೊಡೆದಿದ್ದಾರೆ! ತನ್ನ ಅಸಲಿ ಹಿಂದೂತ್ವದ ಅವತಾರ ತೋರಿಸಿದ್ದಾರೆ. “ಈ ಬಾರಿ ಮಠದಲ್ಲಿ ಇಫ್ತಾರ್‍ಕೂಟ ನಡೆಸುವುದಿಲ್ಲ” ಎಂದ್ಹೇಳಿ ತಾನೊಬ್ಬ ಶುದ್ಧ ಎಡಬಿಡಂಗಿ ಎಂಬ ಅನುಮಾನ ಖಾತ್ರಿಪಡಿಸಿದ್ದಾರೆ. ಪೇಜಾವರರ ಇಫ್ತಾರ್‍ಕೂಟ ಬೂಟಾಟಿಕೆ ಆಟ ಎಂಬುದು ಈಗ ಸಾಬೀತಾಗಿಹೋಗಿದೆ.
ತಾನೇ ಹಠ ಮಾಡಿ ಬಿಜೆಪಿ ಎಮ್ಮೆಲ್ಲೆಗಿರಿ ಟಿಕೆಟ್ ಕೊಡಿಸಿದ್ದ ರಂಗೀಲಾ ರಘುಪತಿ ಭಟ್ಟ ಮತ್ತು ವಿಶ್ವ ಹಿಂದೂ ಪರಿಷತ್, ಆರೆಸೆಸ್‍ನ ದಿಗ್ಗಜರ ಒತ್ತಡಕ್ಕೆ ಮಣಿದ ಪೇಜಾವರ ಸ್ವಾಮಿ ಈ ಬಾರಿ ಇಫ್ತಾರ್‍ಕೂಟ ಮಾಡಿಲ್ಲ ಎಂಬುದು ಬಹಿರಂಗ ರಹಸ್ಯ. ಸ್ವಾಮೀಜಿ ಮಠಕ್ಕೆ ಸಾಬರ ಕರೆಸಿಕೊಂಡು ಒಡನಾಡಿದರೆ ಕರಾವಳಿಯಲ್ಲಿ ಈಗ ಹುರಿಗೊಂಡಿರುವ ಹರಾಮಿ ಹಿಂದೂತ್ವ ಕಾವು ಕಡಿಮೆಯಾಗುತ್ತದೆಂಬ ದೂ(ದು)ರಾಲೋಚನೆ ರಘುಪತಿ ಭಟ್ಟನಂಥ ಹೇತ್ಲಾಂಡಿ ಚೆಡ್ಡಿಗಳದು; ಸ್ವಾಮಿಯ ಇಫ್ತಾರ್‍ಕೂಟದಿಂದ ಹಿಂದೂತ್ವದ ಹೋರಾಟದ ಕಾಲಾಳುಗಳಾದ ಶೂದ್ರರು ಬಿಜೆಪಿ-ಪರಿವಾರದಿಂದ ವಿಮುಖರಾಗುತ್ತಾರೆಂಬುದು ವಿಎಚ್‍ಪಿ-ಆರೆಸೆಸ್ ಡಾನ್‍ಗಳ ಲೆಕ್ಕಾಚಾರ!
ಶಿಷ್ಯಾಗ್ರೇಸ್ ರಘುಪತಿ ಭಟ್ಟ ಮತ್ತು ಪರಿವಾರ ಪರಾಕ್ರಮಿಗಳ ಏಕದೃಷ್ಟಿಯಿಂದ ಬಚಾವಾಗಲು ಇಫ್ತಾರ್‍ಕೂಟಕ್ಕೆ ಎಳ್ಳು ನೀರು ಬಿಟ್ಟಿರುವ ಪೇಜಾವರರು ತಾನು ಸುಬಗನೆಂದು ತೋರಿಸಿಕೊಳ್ಳಲು ಸಾಬರ ಮೇಲೆ ಗೂಬೆ ಕೂರಿಸುತ್ತಿರುವುದು ಆತ್ಮವಂಚನೆಯ ಪರಮಾವಧಿಯೇ ಸರಿ! ಮಠದ ಇಫ್ತಾರ್‍ಕೂಟಕ್ಕೆ ಬರಲು ಮುಸ್ಲಿಮರಿಗೆ ಮನಸ್ಸಿಲ್ಲ, ಕಳೆದ ಬಾರಿ ದೇವರಮೂರ್ತಿಯಿರುವ ಕೋಣೆಯಲ್ಲಿ ಇಫ್ತಾರ್ ನಡೆಸಲಾಗಿತ್ತೆಂಬ ಸಂಶಯ ಸಾಬರ ಕಾಡುತ್ತಿದೆ. ಆದರೆ ದೇವರಮೂರ್ತಿ ಕೂಟದ ಕೋಣೆಯಲ್ಲಿರಲಿಲ್ಲ; ಅದು ಪಕ್ಕದ ಕೊಠಡಿಯಲ್ಲಿತ್ತೆಂದು ಕಲಾತ್ಮಕವಾಗಿ ಸುಳ್ಳು ಸಬೂಬು ಪೋಣಿಸಿ ಹರಿಬಿಡುತ್ತಿದ್ದಾರೆ. ಮರುಕ್ಷಣವೇ ಮಾತು ಬದಲಿಸಿ ಈ ಬಾರಿ ರಂಜಾನ್ ಹಬ್ಬದಲ್ಲಿ ತಾನು ಪ್ರವಾಸದಲ್ಲಿದ್ದರಿಂದ ಮಠದಲ್ಲಿ ಇಫ್ತಾರ್‍ಕೂಟ ಏರ್ಪಡಿಸಲು ಸಾಧ್ಯವಾಗಲಿಲ್ಲ ಎಂದು ಭೋಂಗು ಬಿಡುತ್ತಾ ತಮ್ಮ “ಅದ್ವೈತ ದ್ವಂದ್ವ”ದ ತತ್ವಾನುಷ್ಠಾನ ಪ್ರದರ್ಶಿಸಿದ್ದಾರೆ.
ಕೋಮುಸೌಹಾರ್ದದ ಹೆಸರಲ್ಲಿ ಒಂದಡಿ ಮುಂದಿಟ್ಟಿದ್ದ ಪೇಜಾವರರು ಈ ವರ್ಷ ಏಕ್‍ದಮ್ ಹತ್ತಡಿ ಹಿಂದಿಟ್ಟಿದ್ದಾರೆ. ಪೇಜಾವರರಂತ “ಪೂಜ್ಯ”ರ ಹುಚ್ಚಾಟದಿಂದಾಗಿಯೇ ಹಿಂದೂತ್ವ ವಿಕಾರ ರೂಪತಾಳಿ ಸ್ಮಶಾನದಂತಾಗಿದೆ. ಅಮಾಯಕರ ಮಾರಣಹೋಮವಾಗುತ್ತಿದೆ; ಎಷ್ಟೊತ್ತಿಗೆ ಅದೆಂತ ಅನಾಹುತವಾಗುತ್ತಿದೇ ಎಂಬ ಆತಂಕ ಕರಾವಳಿ ಸೆರಗಲ್ಲಿ ಸುತ್ತಿಕೊಂಡಿದೆ. ಈ ಪಾಪ ಹಿಂದೂತ್ವದ ಹರಿಕರಗಳಿಗೆ ತಟ್ಟದೇ ಇರದು! ಪೇಜಾವರರ ಇಫ್ತಾರ್ ಕೂಟದ ಆಟ ಹಿಂದೂತ್ವದ ಹಿಡನ್ ಅಜೆಂಡಾದ ಹಿಕಮತ್ತೆಂದು ಅನುಮಾನ ಬರದಿರಲು ಸಾಧ್ಯವಾ?
– ವರದಿಗಾರ


