ಗಿರೀಶ್ ತಾಳಿಕಟ್ಟೆ |
ವಿಶ್ವದ ಅತಿದೊಡ್ಡ ಸ್ಟ್ಯಾಚ್ಯು ಎಲ್ಲಿದೆ? ಭಾರತ, ಯಾನೆ ಇಂಡಿಯಾ, ಅರ್ಥಾತ್ ನಮ್ಮ ಹಿಂದೂಸ್ಥಾನದಲ್ಲಿ! ಮೊನ್ನೆ ಪ್ರಧಾನಿ ಮೋದಿಯವರಿಂದ ನರ್ಮದಾ ನದಿಯ ನಡುಗಡ್ಡೆಯಲ್ಲಿ ಉದ್ಘಾಟನೆಗೊಂಡ ಸರ್ದಾರ್ ವಲ್ಲಭಭಾಯ್ ಪಟೇಲರ `ಏಕತಾ ಪ್ರತಿಮೆ’ ಈ ಹೆಗ್ಗಳಿಕೆ ತಂದುಕೊಟ್ಟಿದೆ. ಇದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಲೇಬೇಕಾದ ಸಂಗತಿ. ಆದರೆ ಈ ಹೆಮ್ಮೆಯ ಹೊರತಾಗಿ ಭಾರತಕ್ಕಾದ ಲಾಭವೇನು? ಎಂಬ ಇನ್ನೊಂದು ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಲೇಬೇಕಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ, ಮುಖ್ಯವಾಗಿ ನೋಟು ಅಮಾನ್ಯೀಕರಣದ ನಂತರ ದೇಶದ ಎಕಾನಮಿ ಸೊರಗುತ್ತಿದೆ ಎಂದು ಸ್ವತಃ ಆರ್‌ಬಿಐ ಹೇಳುತ್ತಿದೆ; ಇರುವ ಉದ್ಯೋಗಗಳೇ ಕೈತಪ್ಪಿ ಹೋಗುತ್ತಿರುವುದರಿಂದ ನಿರುದ್ಯೋಗದ ಹಾಹಾಕಾರ ಹೆಚ್ಚಾಗುತ್ತಿದೆ; ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 2014ರಿಂದೀಚೆಗೆ ಗಣನೀಯವಾಗಿ ಕುಸಿಯುತ್ತಿರುವ ಭಾರತದ ಸ್ಥಾನ, ಈ ಸಲ 100ರಿಂದ 103ಕ್ಕೆ ಕುಸಿದಿದೆ; ಥಾಮ್ಸನ್ ರ‍್ಯೂರ‍್ಸ್ ಸಮೀಕ್ಷೆಯ ಪ್ರಕಾರ ಭಾರತವು ಮಹಿಳೆಯರ ಪಾಲಿಗೆ ಅತ್ಯಂತ ಅಪಾಯಕಾರಿ ಎಂಬ ಹಣೆಪಟ್ಟಿಗೆ ಗುರಿಯಾಗಿದೆ; ಸಹಸ್ರಾರು ಕೋಟಿ ಸಾಲ ಮಾಡಿ ಬ್ಯಾಂಕ್‌ಗಳನ್ನು ವಂಚಿಸಿದ ಮಲ್ಯ, ನೀರವ್ ಮೋದಿ, ಮೆಹುಲ್ ಚೋಸ್ಕಿಯಂಥಾ ಬಿಸಿನೆಸ್ ಮ್ಯಾಗ್ನೆಟ್ಟುಗಳು ಅನಾಯಾಸವಾಗಿ ದೇಶ ತೊರೆಯುತ್ತಿದ್ದರೆ ಈ ನೆಲದ ಅನ್ನದಾತ ನೇಣಿಗೆ ಕುತ್ತಿಗೆ ಒಡ್ಡುವ ದುರಂತ ದಟ್ಟವಾಗುತ್ತಲೇ ಇದೆ. ಈ ಎಲ್ಲಾ ಸವಾಲುಗಳಿಗೆ ಉತ್ತರವನ್ನು ಕಾಣಿಸದ ಹೊರತು ಯಾವ ಹೆಮ್ಮೆಯೂ ನಮ್ಮ ಬೆನ್ನುಮೂಳೆಯನ್ನು ನೆಟ್ಟಗೆ ನಿಲ್ಲಿಸಲಾರದು, ಬದಲಿಗೆ ಬಾಗಿರುವ ಬೆನ್ನಿನ ಮೇಲೆ ಹೊಸ ಹೊರೆಯಾಗಿ ಬಾಧಿಸಲಿದೆ. ಇದೇ ಕಾರಣಕ್ಕೆ `ವಿಶ್ವದ ಅತಿದೊಡ್ಡ’ ಎಂಬ ರಿಯಾಲಿಸ್ಟಿಕ್ ಹೆಮ್ಮೆಯ ಕ್ರೆಡಿಟ್ಟನ್ನೂ ಪಕ್ಕಕ್ಕಿರಿಸಿ ಏಕತಾ ಪ್ರತಿಮೆ ಪ್ರವಾಸೋದ್ಯಮವನ್ನು ಹೆಚ್ಚಿಸಲಿದೆ, ಉದ್ಯೋಗವನ್ನು ಸೃಷ್ಟಿಸಲಿದೆ, ಆದಾಯವನ್ನು ವೃದ್ಧಿಸಲಿದೆ ಎಂಬ ಅನ್‌ರಿಯಾಲಿಸ್ಟಿಕ್ ಪ್ರಚಾರದ ಜಾಹೀರಾತುಗಳಿಗೆ ಕೋಟ್ಯಂತರ ಹಣ ಸುರಿಯುವ ಅನಿವಾರ್ಯತೆ ಖುದ್ದು ಕೇಂದ್ರ ಸರ್ಕಾರಕ್ಕೆ ಎದುರಾಗಿರೋದು.
ಒಂದೊಮ್ಮೆ ನೀವು ಎಂಟರ್‌ಟೈನ್‌ಮೆಂಟ್ ಟೀವಿ ಜಗತ್ತಿನೊಳಕ್ಕೆ ಕಣ್ಣು ತೂರಿಸುವವರಾದರೆ ಬಹುಮುಖ್ಯ ಕಾರ್ಯಕ್ರಮಗಳ ಪ್ರೈಮ್ ಟೈಮ್‌ನಲ್ಲಿ ಇತ್ತೀಚೆಗೆ ಈ ಪ್ರತಿಮೆ-ಪ್ರವಾಸೋದ್ಯಮದ ಜಾಹಿರಾತು ಕಡ್ಡಾಯವಾಗಿ ನಿಮಗೆ ಕಾಣಿಸಿಕೊಂಡಿರುತ್ತೆ. ಸರ್ದಾರ್ ಪಟೇಲರು ದೇಶದ ಪ್ರಪ್ರಥಮ ಗೃಹಮಂತ್ರಿಯಾಗಿ ಸಣ್ಣಪುಟ್ಟ ಸಂಸ್ಥಾನಗಳನ್ನು ಒಗ್ಗೂಡಿಸಿ ಇಡಿಯಾಗಿ ಭಾರತವನ್ನು ಕಟ್ಟಿದಾಗಲೂ ಅವರಿಗೆ ಆ ಸಂಸ್ಥಾನಗಳ ಪ್ರಾದೇಶಿಕ ಅಸ್ಮಿತೆಯ ಬಗ್ಗೆ ಅಪಾರ ಕಾಳಜಿಯಿತ್ತು. ಯಾವ ಸಂಸ್ಥಾನದ ಭಾಷೆ, ಭಾವನೆಗಳನ್ನೂ ಅವರು ಹತ್ತಿಕ್ಕಿದವರಲ್ಲ. ಐರನ್‌ಮ್ಯಾನ್‌ನ ಜೀವಂತಿಕೆ ಇದ್ದದ್ದು ಅಲ್ಲಿ. ವಿಪರ್ಯಾಸವೆಂದರೆ, ಅಂಥಾ ವ್ಯಕ್ತಿಯ ನಿರ್ಜೀವ ಪ್ರತಿಮೆಯ ಪ್ರಚಾರದ ನೆಪದಲ್ಲಿ ಮೋದಿಯವರ ಸರ್ಕಾರ ದೇಶಿ ಭಾಷೆಗಳ ಮೇಲೆ ಹಿಂದಿಯನ್ನು ಹೇರಲು ಹೊರಟಂತಿದೆ. ಕೇಂದ್ರ ಸರ್ಕಾರದ ಬಹಳಷ್ಟು ಜಾಹೀರಾತುಗಳು ಆಯಾ ಪ್ರಾದೇಶಿಕ ಭಾಷೆಗೆ ಅನುವಾದಗೊಂಡು ಬಿತ್ತರಗೊಳ್ಳುತ್ತಿವೆ. ಆದರೆ ಪ್ರತಿಮೆಯ ಜಾಹೀರಾತನ್ನು ಬೇಕಂತಲೇ ಹಿಂದಿ ಭಾಷೆಯಲ್ಲೇ ಬಿತ್ತರಿಸಲಾಗುತ್ತಿದೆ. ಇದು, ವಿವಿಧತೆಯ ಭಾರತದ ಕನಸು ಕಂಡಿದ್ದ ಪಟೇಲರಿಗೆ ಮಾಡಿದ ಮೊದಲ ಅವಮಾನವೇ ಸರಿ!
ಇನ್ನೀಗ ಪ್ರತಿಮೆಯ ಸುತ್ತ ಹೊಸೆದುಕೊಳ್ಳುತ್ತಿರುವ ಅಂಕಗಣಿತಕ್ಕೆ ಬರೋಣ. ಮೋದಿಯವರನ್ನು ಆರಾಧಿಸುವ ಭಕ್ತಗಣದ ಭಜನೆ ಮತ್ತು ಸ್ವತಃ ಕೇಂದ್ರ ಸರ್ಕಾರದ ಜಾಹಿರಾತಿನ ಆಂಬೋಣ, `ವಿಶ್ವದ ಈ ಅತಿದೊಡ್ಡ ಪ್ರತಿಮೆ ಮಿಲಿಯಗಟ್ಟಲೆ ವಿದೇಶಿ ಪ್ರವಾಸಿಗರನ್ನು ಸೆಳೆಯುವುದರಿಂದ ದೇಶದ ಆದಾಯ ಸಿಕ್ಕಾಪಟ್ಟೆ ಹೆಚ್ಚಾಗಲಿದೆ’ ಅನ್ನೋದಾಗಿದೆ. ಆ ಅಂಕಿಸಂಖ್ಯಿಗೆ ಹೋಗುವುದಕ್ಕೂ ಮುನ್ನ `ಪ್ರವಾಸೋದ್ಯಮದ ಸೈಕಾಲಜಿ’ಯನ್ನು ಕೊಂಚ ಅರ್ಥ ಮಾಡಿಕೊಳ್ಳುವುದು ಕ್ಷೇಮ. ಬುಡಕಟ್ಟು ಆದಿವಾಸಿಗಳನ್ನು ಒಕ್ಕಲೆಬ್ಬಿಸಿ 182 ಮೀಟರ್ ಎತ್ತರದ ಪಟೇಲರ ಪ್ರತಿಮೆಯನ್ನು ನಿಲ್ಲಿಸುವ ಮೊದಲು ಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆ ಯಾವುದಾಗಿತ್ತು ಗೊತ್ತಾ? ಬಹಳ ಜನ ಅಂದುಕೊಂಡಂತೆ ಅಮೆರಿಕಾದ ಸ್ಟ್ಯಾಚ್ಯು ಆಫ್ ಲಿಬರ್ಟಿ ಅಲ್ಲ! ಚೀನಾದ ಸ್ಪ್ರಿಂಗ್ ಟೆಂಪಲ್‌ನ ಬುದ್ಧನ ವಿಗ್ರಹ. ಅದು 128 ಮೀಟರ್ ಎತ್ತರದ್ದು. ಆದಾಗ್ಯೂ ಅದು ಚೀನಾದ ಟಾಪ್ 10 ಪ್ರವಾಸಿ ತಾಣಗಳಲ್ಲಿ ಯಾವತ್ತೂ ಸ್ಥಾನ ಪಡೆದಿಲ್ಲ. ಮಹಾಗೋಡೆ, ಟರ‍್ರಾಕೋಟಾ ಆರ್ಮಿ ಮತ್ತು ಫಾರ್ಬಿಡನ್ ಸಿಟಿಗಳೇ ಇವತ್ತಿಗೂ ಅತಿಹೆಚ್ಚು ಪ್ರವಾಸಿಗರನ್ನು ಸೆಳೆಯುವ ಚೀನಾದ ತಾಣಗಳಾಗಿವೆ. ಇವುಗಳ Common characteristic ಏನೆಂದರೆ, ಇವು ಮೂರೂ ಸಹಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಮಾರಕಗಳು.
ಪ್ರಪಂಚದ ಇಡೀ ಪ್ರವಾಸಿ ತಾಣಗಳನ್ನು ಗುಡ್ಡೆಹಾಕಿಕೊಂಡು ತಾಳೆ ನೋಡಿದರೆ, `ದಿ ಬೆಸ್ಟ್’ ಪ್ರವಾಸಿ ತಾಣಗಳೆನಿಸಿಕೊಂಡಿರೋದು ಐತಿಹಾಸಿಕ ಸ್ಮಾರಕಗಳೇ ಹೊರತು ಇತ್ತೀಚಿನ ಆಧುನಿಕ ನಿರ್ಮಾಣಗಳಲ್ಲ. ಇಲ್ಲದೇ ಹೋಗಿದ್ದರೆ ವಿಶ್ವದ ಅತಿದೊಡ್ಡ ಬಿಲ್ಡಿಂಗ್ ಎಂಬ ಹೆಗ್ಗಳಿಕೆ ಪಡೆದಿರುವ 828 ಮೀಟರ್ ಎತ್ತರದ ದುಬೈ ಶೇಕುಗಳ ಬುರ್ಜ್ ಖಲೀಫಾ ವರ್ಷಕ್ಕೆ 20 ಲಕ್ಷ ಪ್ರವಾಸಿಗರನ್ನು ಸೆಳೆಯುವುದಕ್ಕೆ ಸುಸ್ತಾದರೆ, ಒಂದೂಕಾಲು ಶತಮಾನದಷ್ಟು ಹಳೆಯದಾದ 300 ಮೀಟರ್ ಎತ್ತರದ ಪ್ಯಾರಿಸ್‌ನ ಐಫೆಲ್ ಟವರ್ ಪ್ರತಿವರ್ಷ ಅಜಮಾಸು 70 ಲಕ್ಷ ಪ್ರವಾಸಿಗರನ್ನು ಸೆಳೆಯುತ್ತಿರಲಿಲ್ಲ. ಹಾಗಾಗಿ ದೇಶದ ಐತಿಹಾಸಿಕ ಅಚ್ಚರಿಗಳಾದ ತಾಜ್‌ಮಹಲ್, ಹಂಪೆ, ಎಲ್ಲೋರಾದಂತಹ ಸ್ಮಾರಕಗಳನ್ನು ಹಿಂದಿಕ್ಕಿ ಈ ಮೂರು ಸಾವಿರ ಕೋಟಿಯ `ಮೇಡ್ ಇನ್ ಚೀನಾ’ ಪ್ರತಿಮೆ ಪ್ರವಾಸಿಗರನ್ನು ಸೆಳೆಯಲಿದೆ ಅಂದುಕೊಳ್ಳಲಿಕ್ಕೆ ಹೆಚ್ಚೇನೂ ಕಾರಣಗಳಿಲ್ಲ. ಯಾಕಂದ್ರೆ ಸರ್ದಾರ್ ಪಟೇಲರ ಪ್ರತಿಮೆ ರಾಜಕೀಯ ಸ್ಮಾರಕವೇ ಹೊರತು ಅದು ಈ ನೆಲದ ಸಮೃದ್ಧ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿನಿಧಿಸದು. ಭಾರತದ ಪುರಾತತ್ವ ಸರ್ವೇಕ್ಷಣಾ ಅಂಕಿಅಂಶದ ಪ್ರಕಾರ ನಮ್ಮ ದೇಶದಲ್ಲಿ 3600ಕ್ಕೂ ಹೆಚ್ಚು ಇಂಥಾ ಐತಿಹ್ಯ ಹಿನ್ನೆಲೆಯ ತಾಣಗಳಿವೆ. ಅವುಗಳಲ್ಲಿ 36 ತಾಣಗಳು ವಿಶ್ವಸಂಸ್ಥೆಯ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಂತವು. ಆದರೆ ಇವುಗಳನ್ನು ನಿರ್ವಹಿಸುವುದಕ್ಕೆ ನಮ್ಮ ಸರ್ಕಾರಗಳ ಬಳಿ ಹಣವಿಲ್ಲ. ಖಾಸಗಿಯವರ ಸುಪರ್ದಿಗೆ ವಹಿಸಲಾಗುತ್ತಿದೆ. ಐತಿಹಾಸಿಕ ಸ್ಮಾರಕಗಳ ರಕ್ಷಣೆ ಬಗ್ಗೆ ನಮ್ಮ ಸರ್ಕಾರದ ಕಾಳಜಿ ಎಂತದ್ದಿದೆಯೆಂದರೆ 2017ರಲ್ಲಿ ಅವುಗಳ ಸಂರಕ್ಷಣೆಗೆ ಖರ್ಚು ಮಾಡಿದ್ದಕ್ಕಿಂತಲೂ ಹೆಚ್ಚು ಹಣವನ್ನು ದೆಹಲಿಯಲ್ಲಿ ಪುರಾತತ್ವ ಇಲಾಖೆಗೆ ಹೊಸ ಹೆಡ್ಡಾಫೀಸ್ ಕಟ್ಟಡ ಕಟ್ಟಲು ಖರ್ಚು ಮಾಡಲಾಗಿದೆ!
ಈಗ ಪ್ರತಿಮೆಯ ಎಕಾನಮಿಗೆ ಮರಳೋಣ. ಅತಿಹೆಚ್ಚು ಪ್ರವಾಸಿಗರನ್ನು ಸೆಳೆಯುವ ನಮ್ಮ ದೇಶದ ಸ್ಮಾರಕವೆಂದರೆ ಅದು ಆಗ್ರಾದ ತಾಜ್‌ಮಹಲ್. ಅಧಿಕೃತ ಮಾಹಿತಿಯ ಪ್ರಕಾರ ವರ್ಷವೊಂದಕ್ಕೆ 80 ಲಕ್ಷ ದೇಶಿ-ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಷ್ಟಾಗಿಯೂ ಅದು ದೇಶದ ಬೊಕ್ಕಸಕ್ಕೆ ಸಂದಾಯ ಮಾಡುತ್ತಿರುವ ವಾರ್ಷಿಕ ಆದಾಯ ಕೇವಲ 25 ಕೋಟಿ ರೂಪಾಯಿ ಮಾತ್ರ. ಇಷ್ಟೇ ಪ್ರಮಾಣದ ಪ್ರವಾಸಿಗರನ್ನು `ಅತಿದೊಡ್ಡ’ ಪ್ರತಿಮೆ ತನ್ನತ್ತ ಸೆಳೆಯಲಿದೆ ಅಂತ ಭ್ರಮಿಸಿಕೊಂಡರು ಅದಕ್ಕೆ ಖರ್ಚು ಮಾಡಿರುವ ಮೂರು ಸಾವಿರ ಕೋಟಿ ರೂಪಾಯಿ ಜಮೆಯಾಗಲು ಬರೋಬ್ಬರಿ 120 ವರ್ಷ ಬೇಕಾಗುತ್ತದೆ! ಅದೂ ಈ 120 ವರ್ಷಗಳಲ್ಲಿ ಬಂದ ಟಿಕೆಟ್ ದರವನ್ನು ಖುಲ್ಲಂಕುಲ್ಲಾ ಬೊಕ್ಕಸಕ್ಕೆ ಜಮಾ ಮಾಡುತ್ತಾ ಬಂದರೆ, ಅದರ ಮೇಂಟೇನೆನ್ಸ್ ಖರ್ಚನ್ನು ಮೈನಸ್ ಮಾಡಿದರೆ ವರ್ಷಗಳ ಅಂತರ ಮತ್ತಷ್ಟೂ ಹೆಚ್ಚಾಗಲಿದೆ! ಯಾಕೆಂದರೆ ಅಧಿಕೃತ ಮಾಹಿತಿ ಪ್ರಕಾರ ದಿನವೊಂದಕ್ಕೆ ಇದರ ನಿರ್ವಹಣೆಗೆ 12 ಲಕ್ಷ ಖರ್ಚಾಗಲಿದೆಯಂತೆ!
ಆದರೆ ಈಗಾಗಲೇ ನಾವು ಅರ್ಥ ಮಾಡಿಕೊಂಡಿರುವ ಪ್ರವಾಸೋದ್ಯಮ ಸೈಕಾಲಜಿಯ ಪ್ರಕಾರ ಐತಿಹಾಸಿಕ ಸ್ಮಾರಕಗಳ ಹೊರತು ಆಧುನಿಕ ನಿರ್ಮಾಣಗಳಿಗೆ ಪ್ರವಾಸಿಗರು ರೆಕಾರ್ಡ್ ಬ್ರೇಕಿಂಗ್ ಸಂಖ್ಯೆಯಲ್ಲಿ ಮುಗಿಬೀಳಲಾರರು. ಸರ್ಕಾರವೇ ಯೋಜನೆ ಅಂದಾಜು ಪ್ರಕಾರ ದಿನವೊಂದಕ್ಕೆ 15,000 ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಿ, ಅಷ್ಟು ಮಂದಿಯ ನಿರ್ವಹಣೆಗೆ ಬೇಕಾದ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಿದೆ. ನೆನಪಿರಲಿ, ಇದು ಸರ್ಕಾರ ಅಂದಾಜಿಸಿರುವ ಗರಿಷ್ಠ ಸಂಖ್ಯೆ. ಇದನ್ನೇ ಲೆಕ್ಕ ಹಾಕಿದರೆ ತಿಂಗಳಿಗೆ 4.5 ಲಕ್ಷ ಪ್ರವಾಸಿಗರು ಭೇಟಿ ನೀಡಲಿದ್ದಾರೆ. ಬಂದವರೆಲ್ಲ ಗರಿಷ್ಠ ಮುಖಬೆಲೆಯ ರೂ.350 ಟಿಕೇಟನ್ನೇ ಖರೀದಿಸಿ ಎತ್ತರದ ಗ್ಯಾಲರಿ ಪ್ರವೇಶಿಸುತ್ತಾರೆ ಎಂದುಕೊಂಡರು ತಿಂಗಳಿಗೆ 15.75 ಕೋಟಿ ಹಣ ಸಂಗ್ರಹಣೆಯಾಗಲಿದೆ. ಅಂದರೆ ವರ್ಷಕ್ಕೆ 189 ಕೋಟಿ ಹಣ. ಇದೇ ಸ್ಥಿರತೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಗರಿಷ್ಠ ದರದ ಟಿಕೆಟ್ ಕೊಳ್ಳುತ್ತಾರೆ ಎಂದುಕೊಂಡರು ಮೂರು ಸಾವಿರ ಕೋಟಿ ಬಂಡವಾಳ ವಾಪಾಸಾಗಲು ಹದಿನಾರು ವರ್ಷ ಬೇಕಾಗುತ್ತದೆ.
ದುರಂತವೆಂದರೆ ಪ್ರತಿಮೆ ಉದ್ಘಾಟನೆಗೊಂಡ ಮೊದಲ 11 ದಿನಗಳಲ್ಲಿ ಅಲ್ಲಿಗೆ ಭೇಟಿ ನೀಡಿದವರ ಸಂಖ್ಯೆ 1.28 ಲಕ್ಷ ಮಾತ್ರ. ಅಂದರೆ ದಿವಸಕ್ಕೆ 11,600 ಪ್ರವಾಸಿಗರಷ್ಟೆ ಉತ್ಸಾಹ ತೋರಿದ್ದಾರೆ. ಉದ್ಘಾಟನೆಗೊಂಡ ಹೊಸತರಲ್ಲೇ ಈ ಪರಿ ಅಬ್ಬರದ ಪ್ರಚಾರದ ನಡುವೆಯೂ ಆರಂಭದಲ್ಲೇ ಇಷ್ಟು ಪ್ರವಾಸಿಗರೆಂದರೆ, ದಿನಗಳೆದು ಪ್ರಚಾರ ಕುಗ್ಗಿದಂತೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸಲಿದೆಯೇ ಹೊರತು ಹೆಚ್ಚಾಗುವುದಿಲ್ಲ. ಆಗ ಲೆಕ್ಕಾಚಾರ ಮತ್ತಷ್ಟು ಅಧ್ವಾನಗೊಳ್ಳಲಿದೆ. ಅಷ್ಟಕ್ಕೂ ಇದನ್ನು ಓದುತ್ತಿರುವ ನೀವು ಅಥವಾ ನಿಮ್ಮ ಸುತ್ತಲಿನ ಅದೆಷ್ಟು ಮಂದಿ ಇನ್ನು ಒಂದು ವರ್ಷದಲ್ಲಿ ಅಥವಾ ಐದು ವರ್ಷದೊಳಗೆ ಗುಜರಾತ್‌ಗೆ ಹೋಗಿ ಸ್ಟ್ಯಾಚ್ಯೂ ನೋಡಿಕೊಂಡು ಬರಬೇಕು ಅಂತ ನಿರ್ಧರಿಸಿಕೊಂಡಿದ್ದೀರಿ? ಹೆಚ್ಚಿನ ಸಂಖ್ಯೆಯೇನೂ ಸಿಗದು.!
ಅಂದಹಾಗೆ, ಇಲ್ಲಿಗೆ ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡ 128 ಅಡಿ ಎತ್ತರದ ಬುದ್ದನ ಪ್ರತಿಮೆಗೆ ಖರ್ಚಾಗಿರೋದು 128 ಕೋಟಿ, ಆದರೆ ಸರ್ದಾರ್ ಪಟೇಲರ ಪ್ರತಿಮೆಗೆ ಖರ್ಚಾಗಿರೋದು 3000 ಕೋಟಿ! ಹತ್ತು ವರ್ಷಗಳ ಅಂತರದಲ್ಲಿ ಬೆಲೆಗಳು ಹೆಚ್ಚಾಗಿವೆ ಅನ್ನೋದನ್ನು ಪರಿಗಣಿಸಿದರೂ ಈ ಪಾಟಿ ಅಂತರ ಅಚ್ಚರಿ ಹುಟ್ಟಿಸದಿರದು…
ಇನ್ನು ಉದ್ಯೋಗ ಸೃಷ್ಟಿಯ ವಿಚಾರಕ್ಕೆ ಬರೋಣ. ಹೌದು, ಖಂಡಿತವಾಗಿಯೂ ಪ್ರತಿಮೆಯ ಸುತ್ತ ಒಂದಷ್ಟು ಉದ್ಯೋಗಗಳು ಖಂಡಿತವಾಗಿಯೂ ಸೃಷ್ಟಿಯಾಗುತ್ತವೆ. ಆದರೆ ಮೂರು ಸಾವಿರ ಕೋಟಿ ಹೂಡಿಕೆಗೆ ಪ್ರತಿಯಾಗಿ ಸೃಷ್ಟಿಯಾಗಬೇಕಾದಷ್ಟು ಉದ್ಯೋಗಗಳು ಮಾತ್ರ ಸೃಷ್ಟಿಯಾಗುವುದಿಲ್ಲ. ಹೆಚ್ಚೆಂದರೆ ಮೇಂಟೆನೆನ್ಸ್ ಸಿಬ್ಬಂದಿಯ ರೂಪದಲ್ಲಿ 1000 ಉದ್ಯೋಗಗಳು (!) (ನೆನಪಿರಲಿ, ಸರ್ಕಾರಿ ಜಾಹಿರಾತಿನಲ್ಲಿ Comparatively ಉಲ್ಲೇಖಿಸಲಾಗುವ ಅಮೆರಿಕಾದ ಸ್ಟ್ಯಾಚ್ಯು ಆಫ್ ಲಿಬರ್ಟಿ ಸೃಷ್ಟಿಸಿರೋದು 88 ಮೇಂಟೆನೆನ್ಸ್ ಉದ್ಯೋಗಗಳನ್ನಷ್ಟೇ!) ಮತ್ತು ಒಂದಷ್ಟು ಸ್ಥಳೀಯ ಸಣ್ಣಪುಟ್ಟ ಉದ್ದಿಮೆದಾರರು ಬದುಕು ಕಂಡುಕೊಳ್ಳಬಹುದು. ಅಷ್ಟು ಮಾತ್ರಕ್ಕೆ ಮೂರು ಸಾವಿರ ಕೋಟಿ ಬಂಡವಾಳ ಹೂಡಿಕೆ ಯಾವ ಕಾರಣಕ್ಕೂ ಸಮರ್ಥನೀಯವಾದುದಲ್ಲ. ಅಂದಹಾಗೆ, ಇದೇ 3000 ಕೋಟಿ ಹೂಡಿಕೆಯಲ್ಲಿ ನಮ್ಮ ದೇಶ ಏನೇನು ಮಾಡಬಹುದಿತ್ತು ಗೊತ್ತೇ?
2 ಐಐಟಿಗಳನ್ನ ಸ್ಥಾಪನೆ ಮಾಡಬಹುದಿತ್ತು, 2 ಏಮ್ಸ್ಗಳನ್ನ, 5 ಐಐಎಂಗಳನ್ನು, 5 ಸೋಲಾರ್ ಎನರ್ಜಿ ಪಾರ್ಕ್ಗಳನ್ನು ಸ್ಥಾಪಿಸಬಹುದಿತ್ತು ಅಥವಾ ಆರು ಮಂಗಳಯಾನ ಮಿಷನ್ ಅನ್ನು, 2 ಚಂದ್ರಯಾನ ಮಿಷನ್‌ಗಳನ್ನು ನಿರಾಯಾಸವಾಗಿ ಹಮ್ಮಿಕೊಳ್ಳಬಹುದಿತ್ತು. ಇನ್ನು ಕೃಷಿಯಲ್ಲಿ ಹೂಡಿಕೆ ಮಾಡುತ್ತೇವೆಂದಿದ್ದರೆ 40,000 ಹೆಕ್ಟೇರ್‌ನಲ್ಲಿ ಭರಪೂರ ಫಸಲು ತೆಗೆಯಬಹುದಿತ್ತು.
ಕೊನೆಯದಾಗಿ ಒಂದು ಪ್ರಶ್ನೆ. ಒಂದೊಮ್ಮೆ ಸರ್ದಾರ್ ಪಟೇಲರು ಇವತ್ತು ಬದುಕಿದ್ದಿದ್ದರೆ, ಪ್ರತಿ ದಿನ 20 ಕೋಟಿ ದೇಶವಾಸಿಗಳು ಹಸಿದ ಹೊಟ್ಟೆಯಲ್ಲಿ ಮಲಗುತ್ತಿರುವ ಇಂಥಾ ಹೊತ್ತಲ್ಲಿ ಮೂರು ಸಾವಿರ ಕೋಟಿ ವೆಚ್ಚದ ಪ್ರತಿಮೆಯನ್ನು ಕಂಡು ಏನಂಥಾ ಉದ್ಘರಿಸುತ್ತಿದ್ದರು?


