ಸೋಮಶೇಖರ್ ಚಲ್ಯ |
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬಾಲ್ಯದ ಕಥೆಯನ್ನಾಧರಿಸಿದ ಚಿತ್ರಗಳು ಕಣ್ಮರೆಯಾಗಿ, ಪ್ರೀತಿ-ಪ್ರೇಮದ ಸುತ್ತಾ ಚಿತ್ರರಂಗ ಗಿರಕಿಹೊಡೆಯುತ್ತದೆ. ಮೊದಲೆಲ್ಲ ಮಕ್ಕಳನ್ನಾಧರಿಸಿದ ಚಿತ್ರಗಳದ್ದೇ ಸದ್ದು-ಗದ್ದಲವಿರುತ್ತಿತ್ತು. ಸಿಂಹದಮರಿ ಸೈನ್ಯ, ಪುಟಾಣಿ ಏಜೆಂಟ್‌ನಂತಹ ಸಿನಿಮಾಗಳಲ್ಲಿ ಅಭಿನಯಿಸಿದ್ದ ಕಲ್ಪನಾ, ಬೇಬಿ ಶಾಂಭವಿ, ಅರ್ಜುನ್ ಸರ್ಜಾ ಮೊದಲಾದವರು ಸ್ಟಾರ್‌ಗಳ ರೇಂಜಿಗೆ ಹೆಸರು ಮಾಡಿದ್ದು ಕೂಡ ಬಾಲ ನಟನೆಯಿಂದಲೇ. ಆದರೆ ಈಗ ಆ ಟ್ರೆಂಡ್ ಮಾಯವಾಗಿದೆ. ಅಂಥಾ ಕಾಲವನ್ನು ಇತ್ತೀಚೆಗೆ ಮತ್ತೊಮ್ಮೆ ಬಾಲ್ಯವನ್ನು ನೆನೆಸಿದ್ದು ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ. ಈಗ ಇಂಥದ್ದೇ ಮತ್ತೊಂದು ಚಿತ್ರ ಬಾಲ್ಯದ ಕಥೆಯೊಂದಿಗೆ ಸಿನಿ ಫ್ಯಾನ್‌ಗಳ ಬಾಲ್ಯದ ಕನಸುಗಳನ್ನು ನೆನಪಿಸಲು ಮುಂದಾಗಿದೆ. 2016ರಲ್ಲಿಯೇ ನಿರ್ಮಾಣಗೊಂಡಿರುವ ಕಾರ್ತಿಕ್ ಸರಗೂರು ನಿರ್ದೇಶನದ ಚೊಚ್ಚಲ ಚಿತ್ರ ಜೀರ್ಜಿಂಬೆ ಇನ್ನೂ ತೆರೆಕಾರಣದಿರುವುದು ಅಚ್ಚರಿ ಮೂಡಿಸಿದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದೆ.
ಕರ್ನಾಟಕದ ಗ್ರಾಮೀಣ ಪ್ರದೇಶದ ಬಾಲಕಿಯೊಬ್ಬಳ ಜೀವನಾಧಾರಿತ ಕಥೆಯನ್ನು ಚಿತ್ರಿಸಿರುವ ಜೀರ್ಜಿಂಬೆ, ಹಳ್ಳಿ ಪ್ರದೇಶದಲ್ಲಿ ಬೆಳೆಯುವ ಎಲ್ಲಾ ಹೆಣ್ಣುಮಕ್ಕಳ ಕನಸನ್ನು ಪ್ರತಿನಿಧಿಸುವ ಭರವಸೆ ಹುಟ್ಟುಹಾಕಿದೆ. ಹೆನ್ರಿ ಡೇವಿಡ್ ಥೋರೇನ್‌ರವರ ‘ಪ್ರಕೃತಿ ಮತ್ತು ಮಹಿಳೆ ಮಾತ್ರವೇ ಎಂಥಹ ಪರಿಸ್ಥಿತಿಯನ್ನು ಎದುರಿಸಿ ಬದುಕಬಲ್ಲವು, ಏಕೆಂದರೆ ಆ ಇಬ್ಬರಲ್ಲಿ ಮಾತ್ರ ಆತ್ಮವಿಶ್ವಾಸ ಹೊಂದಿರುತ್ತಾರೆ’ ಎಂಬ ಮಾತಿನ ಸ್ಫೂರ್ತಿಯಲ್ಲಿ ಬಾಲಕಿ ಬದುಕಿನ ಚಿತ್ರವನ್ನು ನಿರ್ಮಿಸಿದ್ದಾರೆ. ಇಂದಿನ ಸಮಾಜದಲ್ಲಿ ಪೋಷಕರು ತಮ್ಮ ಮಕ್ಕಳ ಬಗೆಗಿನ ನಿರ್ದಿಷ್ಟ ಬದುಕನ್ನು ಗುರುತಿಸುತ್ತಾ ಮಕ್ಕಳ ಬದುಕಿನ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳ ವಿಚಾರದಲ್ಲಂತೂ ಅದು ದುಪ್ಪಟ್ಟು. ಮಕ್ಕಳ ಕನಸು ನನಸಾಗಿಸಲು ಪೋಷಕರು ಬಿಡುತ್ತಿಲ್ಲ. ಆದರೆ ಜೀರ್ಜಿಂಬೆ ಹೇಗೆ ತನ್ನ ಪುಟ್ಟ ಬಣ್ಣದ ರೆಕ್ಕೆಗಳಿಂದ ಸ್ವತಂತ್ರವಾಗಿ ಹಾರಾಡುತ್ತೋ ಹಾಗೇ ಪುಟ್ಟ ಬಾಲಕಿಯೊಬ್ಬಳು ತನ್ನ ಚಿಗುರು ಮನಸ್ಸಿನಲ್ಲಿ ಕನಸು ಕಾಣುವ ಸ್ವಾತಂತ್ರ್ಯ ಪಡೆದಿರುತ್ತಾಳೆ. ಅವರ ಗುರಿಯನ್ನು ಅವರೇ ಆಯ್ಕೆ ಮಾಡಿಕೊಳ್ಳಬೇಕು, ಆ ಗುರಿಯನ್ನು ಸಾಧಿಸಲು ಯಶಸ್ವಿಯಾಗಬೇಕು, ಅಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕೆಂಬ ಎಚ್ಚರಿಕೆಯನ್ನು ಈ ಚಿತ್ರ ಪೋಷಕರಿಗೆ ರವಾನಿಸಲಿದೆ. ಈಗಾಗಲೇ 23 ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಪ್ರದರ್ಶನಗೊಂಡು 2017ರಲ್ಲಿ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿರುವ ಜೀರ್ಜಿಂಬೆ ಸಧ್ಯದಲ್ಲೆ ಚಿತ್ರಮಂದಿರಗಳಲ್ಲಿ ಗುಯ್‌ಗುಟ್ಟಲಿದೆ.


