Homeಅಂಕಣಗಳುಭ್ರಷ್ಟಾಚಾರ ನಿಯಂತ್ರಣ ಮುಖ್ಯಮಂತ್ರಿಯವರಿಗೆ ಸಲಹೆಗಳು

ಭ್ರಷ್ಟಾಚಾರ ನಿಯಂತ್ರಣ ಮುಖ್ಯಮಂತ್ರಿಯವರಿಗೆ ಸಲಹೆಗಳು

- Advertisement -
- Advertisement -

ಮುಖ್ಯಮಂತ್ರಿ ಕುಮಾರಸ್ವಾಮಿಗಳು ಮೊನ್ನೆ ಗಾಂಧಿಭವನದಲ್ಲಿ ಮಾತನಾಡುತ್ತಾ ‘ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಕೊನೆಗಾಣಿಸಲು ಹೊರಟರೆ ನನ್ನ ಮುಖ್ಯಮಂತ್ರಿ ಪದವಿಗೆ ಸಂಚಕಾರ ಬರಬಹುದು’ ಎಂದು ಹೇಳಿ ‘ನಾನು ವಿಧಾನಸೌಧದ 3ನೇ ಮಹಡಿಗಳಲ್ಲಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ಸಂಕಲ್ಪ ಮಾಡಿದ್ದೇನೆ’ ಎಂದು ಘೋಷಿಸಿದ್ದಾರೆ. ಇದು ಸ್ವಾಗತಾರ್ಹ ತೀರ್ಮಾನ. ಮುಖ್ಯಮಂತ್ರಿಗಳು ಎಷ್ಟೇ ಬಲಶಾಲಿಗಳಾಗಿರಬಹುದು, 70 ವರ್ಷಗಳಿಂದ ಬೆಳೆದುನಿಂತಿರುವ ಈ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಒಂದೇ ಏಟಿಗೆ ತಡೆಹಿಡಿಯುವುದು ಆಗದ ಮಾತು. ಹಾಗೆ ಹೇಳಿ, ಭ್ರಷ್ಟಾಚಾರವನ್ನೂ ಸಮಾಜದಿಂದ ತೊಲಗಿಸುವುದು ಸಾಧ್ಯವೇ ಇಲ್ಲವೆಂದು ಕೈಕಟ್ಟಿ ಕೂಡುವುದೂ ಸರಿಯಲ್ಲ. ಕುಮಾರಸ್ವಾಮಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಂಕಲ್ಪ ಮಾಡಬೇಕು.
ಸರ್ಕಾರದ ಸಿಬ್ಬಂದಿಯ ಭ್ರಷ್ಟಾಚಾರವನ್ನು ನಿಗ್ರಹಿಸಲು ನಿರ್ಧರಿಸಿರುವ ಕುಮಾರಸ್ವಾಮಿಯವರು ಆ ಕ್ರಿಯೆ ಎಲ್ಲಿಂದ ಆರಂಭವಾಗಬೇಕು ಎಂಬುದನ್ನು ಮೊದಲು ತಿಳಿಯಬೇಕು.
ಮೈಸೂರು ಸಂಸ್ಥಾನದ ಕೊನೆಯ ದಿವಾನರಾಗಿದ್ದ ಸರ್. ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅವರು ದಕ್ಷ ಆಡಳಿತಗಾರರು. ಅವರು ಪೊಲೀಸರಿಗೆ ಹೀಗೆ ಹೇಳುತ್ತಿದ್ದರು: ‘ಭ್ರಷ್ಟಾಚಾರದಲ್ಲಿರುವ ಒಬ್ಬ ನೌಕರ ಅಥವಾ ಸೇವಕನನ್ನು ಹಿಡಿದು ಶಿಕ್ಷಿಸಿ ಪತ್ರಿಕೆಯಲ್ಲಿ ಪ್ರಚಾರ ಗಿಟ್ಟಿಸುವುದರಿಂದ ಏನೂ ಪ್ರಯೋಜನವಿಲ್ಲ. ಭ್ರಷ್ಟ್ಟಾಚಾರ ಕೊನೆಗೊಳ್ಳಬೇಕೆಂಬುದು ನಿಮ್ಮ ಉದ್ದೇಶವಾಗಿದ್ದರೆ, ಉನ್ನತಮಟ್ಟದ ನಾಲ್ಕಾರು ಭ್ರಷ್ಟರನ್ನು ಬಂಧಿಸಿ ಅವರಿಗೆ ಶಿಕ್ಷೆ ಕೊಡಿಸಿ. ಆಗ ಭ್ರಷ್ಟಾಚಾರ ತಾನೇ ತಾನಾಗಿ ಕೊನೆಗೊಳ್ಳುತ್ತದೆ’ ಎಂದು. ಕುಮಾರಸ್ವಾಮಿಯವರು ಆದ್ಯತೆಯ ಮೇಲೆ ಈ ಕ್ರಮ ಕೈಗೊಳ್ಳಬೇಕು. ತಳಮಟ್ಟದ ಹುದ್ದೆಯ ನೂರಾರು ನೌಕರರನ್ನು ಹಿಡಿದರೆ. ನೀವು ಪ್ರಚಾರಗಿಟ್ಟಿಸಿಕೊಳ್ಳಬಹುದೇ ಹೊರತು, ಭ್ರಷ್ಟಾಚಾರವನ್ನು ತಡೆಗಟ್ಟಲಾರಿರಿ.
ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ನಿರತರಾಗಿರುವ ಹತ್ತಾರು ಸಾವಿರ ಮಂದಿ ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಇದ್ದಾರೆ. ಇವರಲ್ಲಿ ಅನೇಕರು ಮಂತ್ರಿಗಳೂ, ಶಾಸಕರು, ಉನ್ನತಾಧಿಕಾರಿಗಳೂ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರೂ ಇದ್ದಾರೆ. ಸಾರ್ವಜನಿಕ ಭೂಮಿ ಒತ್ತುವರಿಗೆ ಸಂಬಂಧಿಸಿ ಎ.ಟಿ.ರಾಮಸ್ವಾಮಿ ಸಮಿತಿಯ ವರದಿ ಹಿಂದೆ ನೀವು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ಸಿದ್ಧವಾಯಿತು. ಅವರ ವರದಿಯಲ್ಲಿ ನಮೂದಿಸಿರುವವರ ವಿರುದ್ಧ ಖಟ್ಲೆ ನಡೆಸಲು ವಿಶೇಷ ನ್ಯಾಯಾಲಯವೂ ಸ್ಥಾಪನೆಯಾಗಿದೆ. 50-60 ಸಾವಿರ ಕೇಸುಗಳು ಆ ನ್ಯಾಯಾಲಯದ ಮುಂದಿವೆ. ಈಗಿರುವ ಕೋರ್ಟು ಈ ಎಲ್ಲ ಕೇಸುಗಳನ್ನೂ ಕೈಗೆತ್ತಿಕೊಂಡು ನಿರ್ಣಯ ಕೊಡಬೇಕಾದರೆ ಇನ್ನು ಹತ್ತಿಪ್ಪತ್ತು ವರ್ಷಗಳೇ ಬೇಕಾಗಬಹುದು. ನಾಲ್ಕಾರು ವಿಶೇಷ ಕೋರ್ಟುಗಳನ್ನು ಅರಂಭಿಸದ ಹೊರತು ಈ ಖಟ್ಲೆಗಳನ್ನೆಲ್ಲಾ ವಿಚಾರಣೆಗೆ ಒಳಪಡಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೂಡಲೇ ವಿಶೇಷ ನ್ಯಾಯಾಲಯಗಳ ಸಂಖ್ಯೆ ಹೆಚ್ಚು ಮಾಡಿ ದುಷ್ಟ ಭೂಗಳ್ಳರಿಗೆ ಶಿಕ್ಷೆ ವಿಧಿಸುವಂತೆ ಮಾಡಲಿ. ಹಾಗೆಯೇ, ಎ.ಸಿ.ಬಿ ತನಿಖಾ ತಂಡವನ್ನು ಕೈಬಿಡುವ ವಿಚಾರ ಕುಮಾರಸ್ವಾಮಿಯವರಿಗಿಲ್ಲ ಎಂದು ಪತ್ರಿಕೆಗಳ ಸುದ್ದಿ ಇದೆ. ಚುನಾವಣಾ ಪ್ರಚಾರ ಕಾಲದಲ್ಲಿ ಘೋಷಣೆ ಮಾಡಿದಂತೆ ಕುಮಾರಸ್ವಾಮಿಯವರು ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಕೆಲಸವನ್ನಾದರೂ ಈ ಕೂಡಲೇ ಮಾಡಬೇಕು.
ನ್ಯಾ| ಸಂತೋಷ್ ಹೆಗ್ಡೆಯವರ ಕಾಲದಿಂದ ಇಂದಿನವರೆಗೆ ಲೋಕಾಯುಕ್ತರಿಂದ ಅನೇಕ ಉನ್ನತ ಅಧಿಕಾರಿಗಳ ಮನೆಗಳ ಶೋಧ ನಡೆದಿದೆ. ಈ ಅಧಿಕಾರಿಗಳು ಆದಾಯಕ್ಕೂ ಮೀರಿ ಆಸ್ತಿ ಹೊಂದಿದ್ದಾರೆಂದು ಲೋಕಾಯುಕ್ತರು ಪತ್ತೆಮಾಡಿ ವರದಿ ತಯಾರಿಸಿ ಈ ಉನ್ನತಾಧಿಕಾರಿಗಳ ಮೇಲೆ ಖಟ್ಲೆ ಹೂಡಲು ಅನುಮತಿ ಕೋರಿ ಸರ್ಕಾರಕ್ಕೆ ಬರೆದಿದ್ದಾರೆ. ಆ ಎಲ್ಲ ಕಡತಗಳು ಮುಖ್ಯಮಂತ್ರಿಗಳ ಕಛೇರಿಯಲ್ಲಿ ಕೊಳೆಯುತ್ತಾ ಬಿದ್ದಿವೆ. ಭ್ರಷ್ಟಾಚಾರ ತೊಲಗಿಸಬೇಕೆಂದು ತೀರ್ಮಾನಿಸಿರುವ ಕುಮಾರಸ್ವಾಮಿಯವರು ಆ ಎಲ್ಲಾ ಅಧಿಕಾರಿಗಳ ಮೇಲೆ ಖಟ್ಲೆ ಹೂಡಲು ಸೂಚಿಸಿ, ಕೂಡಲೇ ಪತ್ರ ಬರೆದರೆ ಲೋಕಾಯುಕ್ತರು ಕ್ರಮ ಕೈಗೊಳ್ಳಲು ಮುಂದಾಗಬಹುದು.
ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಿಶೇಷ ಜಿಲ್ಲಾಧಿಕಾರಿಗಳಿಂದ 40 ಸಾವಿರ ಎಕರೆ ಜಮೀನು ಅಕ್ರಮವಾಗಿ ಹಂಚಿಕೆಯಾಗಿದೆ. ಅದನ್ನೆಲ್ಲ ಹಿಂಪಡೆಯಬೇಕೆಂದು ಸಿದ್ದರಾಮಯ್ಯನವರ ಸರ್ಕಾರ ತೀರ್ಮಾನಿಸಿ, ಸರ್ಕಾರಿ ಜಮೀನನ್ನು ವಾಪಸ್ ಪಡೆಯಲು ಜಿಲ್ಲಾಧಿಕಾರಿಗಳ ನೆರವಿಗೆ ಇನ್ನಿಬ್ಬರು ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಿರುತ್ತಾರೆ. ಈ ವಿಶೇಷ ಜಿಲ್ಲಾಧಿಕಾರಿಗಳು ಮಂದಗತಿಯಲ್ಲಿ ಜಮೀನು ಹಿಂಪಡೆಯುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಶಂಕರ್ ಅವರು ಮಾತ್ರ ಕ್ರಿಯಾಶೀಲರಾಗಿ ಕ್ರಮ ಕೈಗೊಂಡಿದ್ದಾರೆ. ಆದರೆ ಆ ಕೆಲಸವೂ ಸಮರ್ಪಕವಾಗಿ ಆಗಿಲ್ಲ. ಈಗ ಶೇ.25ರಷ್ಟು ಜಮೀನು ವಾಪಸ್ ಪಡೆದಿದ್ದಾರಷ್ಟೆ. ಹೀಗೆ ಹಿಂಪಡೆಯಲಾದ ಜಮೀನಿಗೆ ತಂತಿ ಬೇಲಿ ಬಿಗಿದಿದ್ದರೂ, ಈಗಲೂ ಅಲ್ಲಿ ಕೆಲ ಪ್ರಬಲ ಪಾಲಿಕೆ ಸದಸ್ಯರು ಹಾಗೂ ಕೆಲ ಭೂಕಬಳಿಕೆದಾರರು ತಾವು ಹಾಕಿದ್ದ ಷೆಡ್‍ಗಳನ್ನು ಹಾಗೇ ಉಳಿಸಿಕೊಂಡು ಹತ್ತಾರು ಸಾವಿರ ರೂಗಳ ಬಾಡಿಗೆ ಪಡೆಯುತ್ತಿದ್ದಾರೆ.
ಈ ಅಕ್ರಮಕ್ಕೆ ಕಡಿವಾಣ ಹಾಕುವುದಲ್ಲದೆ ಈ ಎರಡು ಜಿಲ್ಲೆಗಳ 40 ಸಾವಿರ ಎಕರೆ ಸರ್ಕಾರಿ ಜಮೀನನ್ನು ನಿರ್ದಿಷ್ಟ ಅವಧಿಯೊಳಗೆ ಹಿಂಪಡೆಯಲು ಜಿಲ್ಲಾಧಿಕಾರಿಗಳಿಗೂ, ವಿಶೇಷ ಜಿಲ್ಲಾಧಿಕಾರಿಗಳಿಗೂ ಕುಮಾರಸ್ವಾಮಿಯವರ ಸರ್ಕಾರ ಕÀಟ್ಟಪ್ಪÀಣೆ ಮಾಡಬೇಕು.
ಇದಲ್ಲದೆ, ದೇವೇಗೌಡರ ನೇತೃತ್ವದಲ್ಲಿ ನೈಸ್ ಕಂಪನಿ ವಿರುದ್ಧ ನಡೆದ ಹೋರಾಟ ಈಗ ಹಾಲಿ ಸ್ಥಗಿತವಾಗಿದೆ. ಸಚಿವ ಜಯಚಂದ್ರ ಸಮಿತಿ ಕೂಡ ನೈಸ್ ಕಂಪನಿಯ ಖೇಣಿಯ ವಿರುದ್ಧ ನೂರಾರು ಪುಟಗಳ ವರದಿ ಸಲ್ಲಿಸಿದೆ. ಈ ವರದಿಯನ್ನು ಸರ್ಕಾರ ಒಪ್ಪಿಕೊಂಡಿದ್ದೂ ಆಗಿದೆ. ಆದರೆ ಸರ್ಕಾರ ಖೇಣಿ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿರುವ ಕುಮಾರಸ್ವಾಮಿಯವರು ಕೂಡಲೇ ಈ ವರದಿಯನ್ವಯ ಕ್ರಮಕೈಗೊಳ್ಳಬೇಕೆಂದು ಅಗ್ರಹ ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ.
ಈ ಮೇಲೆ ಹೇಳಿದ ಎಲ್ಲ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆಗೊಳಪಡಿಸಿದರೆ ಭ್ರಷ್ಟಾಚಾರ ನಿರ್ಮೂಲನಕ್ಕಾಗಿ ಒಂದು ದಿಟ್ಟಹೆಜ್ಜೆ ಇಟ್ಟಂತಾಗುತ್ತದೆ; ಮಾತುಗಳನ್ನು ಕೃತಿಗಿಳಿಸಿದಂತಾಗುತ್ತದೆ.

– ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...