ಉಪಚುನಾವಣೆಯಲ್ಲಿ ಗೆದ್ದ ಮಾಜಿ ಅನರ್ಹ ಕಂ ಹಾಲಿ ಅರ್ಹ ಶಾಸಕರು ಯಡ್ಯೂರಪ್ಪನವರ ಸಂಪುಟದಲ್ಲಿ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲು ತುದಿಗಾಲ ಮೇಲೆ ನಿಂತಿರೋದೇನೊ ನಿಜ. ಆದರೆ ಇನ್ನೂ ಒಂದು ತಿಂಗಳ ಕಾಲ ಅವರು ಮಂತ್ರಿಗಿರಿಯಿಂದ ದೂರವೇ ಉಳಿಯಬೇಕಾದ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ. ಅವರ ಪಾಲಿಗೆ ವಿಲನ್ ಆಗಿ ಕಾಡುತ್ತಿರೋದು ಡಿಸೆಂಬರ್ ಮಾಹೆಯ ಮಧ್ಯಂತರದಲ್ಲಿ ಶುರುವಾಗಲಿರುವ ಧನುರ್ಮಾಸವಂತೆ!
ಹೌದು, ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಯಡ್ಯೂರಪ್ಪನವರು ದಿಲ್ಲಿಗೆ ದೌಡಾಯಿಸಿ, ಅಮಿತ್ ಶಾಗೆ ವರದಿ ಒಪ್ಪಿಸಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದು ಬರಬೇಕಿತ್ತು. ಈ ವಾರಾಂತ್ಯದೊಳಗೆ ನೂತನ ಸಚಿವರ ಪ್ರಮಾಣ ವಚನವೂ ಮುಗಿದು ಖಾತೆ ಹಂಚಿಕೆಯಾಗಬೇಕಿತ್ತು. ಆದರೆ ಅದ್ಯಾಕೋ, ಬಂಪರ್ ಬೆಳೆ ತೆಗೆದರು ಸಹಾ ದಿಲ್ಲಿ ನಾಯಕರಿಂದ ಯಡ್ಯೂರಪ್ಪನವರಿಗೆ ಇದುವರೆಗೆ ಬುಲಾವ್ ಬಂದಿಲ್ಲ. ನವದೆಹಲಿಯ ಫರ್ಮಾನು ಇಲ್ಲದೆ ಸ್ವಂತಕ್ಕೆ ಸಂಪುಟ ವಿಸ್ತರಿಸುವ ಸ್ವಾತಂತ್ರ್ಯವೂ ಯಡ್ಯೂರಪ್ಪನವರಿಗೆ ಇಲ್ಲ. ಹಾಗಾಗಿ, ನಿನ್ನೆ ಮಾಧ್ಯಮದವರು ನೀವು ಯಾವಾಗ ದಿಲ್ಲಿಗೆ ಹೋಗುತ್ತೀರಿ? ಎಂದು ಕೇಳಿದ ಪ್ರಶ್ನೆಗೆ ಇನ್ನು ಮೂರ್‍ನಾಲ್ಕು ದಿನವಂತೂ ನಾನು ದಿಲ್ಲಿ ಕಡೆಗೆ ಹೋಗಲ್ಲ, ಯಾವಾಗ ರಾಷ್ಟ್ರೀಯ ಅಧ್ಯಕ್ಷರು ಕರೀತಾರೋ (ಅಮಿತ್ ಶಾ) ಆಗ ಹೋಗ್ತೀನಿ. ಬಹುಶಃ ಮುಂದಿನ ವಾರವೇ ನನಗೆ ದಿಲ್ಲಿಗೆ ಹೋಗಲು ಸಾಧ್ಯವಾಗುತ್ತೇನೊ ಎಂಬ ಉತ್ತರ ಕೊಟ್ಟಿದ್ದಾರೆ.
ಇದೇ ೧೬ರಂದು (ಬರುವ ಸೋಮವಾರದಿಂದ) ಧನುರ್ಮಾಸ ಶುರುವಾಗಲಿದೆ. ಕವಡೆ ಶಾಸ್ತ್ರ, ಜ್ಯೋತಿಷ್ಯ, ಪಂಚಾಂಗಗಳನ್ನು ವಿಪರೀತ ನಂಬುವ ಯಡ್ಯೂರಪ್ಪನವರು ಧನುರ್ಮಾಸದಲ್ಲಿ ತಮ್ಮ ಸಂಪುಟ ಪನರ್ರಚನೆಗಾಗಲಿ, ವಿಸ್ತರಣೆಗಾಗಲಿ ಕೈಹಾಕಲಾರರು ಅನ್ನೋ ಮಾತನ್ನು ಅವರ ಒಡನಾಡಿಗಳು ಹೇಳುತ್ತಿದ್ದಾರೆ. ಧನುರ್ಮಾಸದಲ್ಲಿ ಯಾವ ಶುಭಕಾರ್ಯಗಳು ನಡೆಯಬಾರದು, ನಡೆದರೆ ವಿಘ್ನ ಎದುರಾಗಲಿದೆ ಎಂಬ ಮೂಢನಂಬಿಕೆಯೇ ಇದಕ್ಕೆ ಕಾರಣ. ಈಗ ಶುರುವಾಗುವ ಇದು ಜನವರಿ ಮೂರನೇ ವಾರದಲ್ಲಿ ಮಕರ ಸಂಕ್ರಮಣದೊಂದಿಗೆ ಮುಕ್ತಾಯವಾಗಲಿದೆ. ಅಲ್ಲೀವರೆಗೂ ಯಡ್ಯೂರಪ್ಪನವರ ಸಂಪುಟದ ಗಾತ್ರ ಹಿಗ್ಗದು ಎಂದೇ ಅಂದಾಜಿಸಲಾಗಿದೆ. ಹಾಗೇನಾದರು ಆದಲ್ಲಿ ಚುನಾವಣೆಯಲ್ಲಿ ಗೆದ್ದು ಅರ್ಹರಾದರು ಮಂತ್ರಿಭಾಗ್ಯ ಕಾಣಲು ಮಾಜಿ ಅನರ್ಹರು ಒಂದು ತಿಂಗಳು ವಿರಹವೇದನೆ ಅನುಭವಿಸದೆ ವಿಧಿಯಿಲ್ಲ.


