ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಇಂದು ಸುಪ್ರೀಂಕೋರ್ಟು ಐಎನ್ಎಕ್ಸ್ ಮೀಡಿಯಾ ಕೇಸಿನಲ್ಲಿ ಜಾಮೀನು ಮಂಜೂರು ಮಾಡಿದೆ. ಕಳೆದ 105 ದಿನಗಳಿಂದ ತಿಹಾರ್ ಜೈಲಿನಲ್ಲಿದ್ದ ಚಿದಂಬರಂ ಅವರು ‘ಓಡಿ ಹೋಗುವ ಸಾಧ್ಯತೆ’ ಇಲ್ಲದಿರುವುದರಿಂದ ಮತ್ತು ಜೈಲಿನಲ್ಲಿ ಕಳೆದ ದಿನಗಳಲ್ಲಿ ಈಗಾಗಲೇ ಎರಡು ಬಾರಿ ಅನಾರೋಗ್ಯಕ್ಕೆ ಗುರಿಯಾಗಿ, ಚಿಕಿತ್ಸೆ ಪಡೆಯುತ್ತಿರುವುದಿರಂದ ಅವರು ಜಾಮೀನು ಪಡೆಯಲು ಅರ್ಹರು ಎಂದು ನ್ಯಾಯಮೂರ್ತಿ ಭಾನುಮತಿ ಅವರ ನೇತೃತ್ವದ, ನ್ಯಾಹೃಷಿಕೇಷ್ ರಾಯ್ ಮತ್ತು ನ್ಯಾ.ಎ.ಎಸ್.ಬೋಪಣ್ಣ ಅವರಿರುವ ನ್ಯಾಯಪೀಠ ಭಾವಿಸಿದೆ.
ಆದರೆ ಇದೇ ಪ್ರಕರಣದ ಇತರ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲವೆಂದು ಹೇಳಿರುವ ಪೀಠ, ಪಿ.ಚಿದಂಬರಂ ತಮ್ಮ ಪಾಸ್ ಪೋರ್ಟನ್ನು ಕೋರ್ಟಿಗೆ ಒಪ್ಪಿಸಬೇಕು ಮತ್ತು ಪೂರ್ವಾನುಮತಿಯಿಲ್ಲದೇ ದೇಶ ಬಿಟ್ಟು ಹೋಗುವ ಹಾಗಿಲ್ಲ ಎಂದು ಆದೇಶ ನೀಡಿದೆ.
75 ವರ್ಷ ವಯಸ್ಸಿನ ಹಿರಿಯ ಕಾಂಗ್ರೆಸ್ ನಾಯಕ ಚಿದಂಬರಂರ ಮೇಲೆ ಈ ಮೊಕದ್ದಮೆಯನ್ನು ಸಿಬಿಐ ಮೇ 15, 2017ರಂದು ದಾಖಲಿಸಿತ್ತು. ಆಗಸ್ಟ್ 21, 2019ರಲ್ಲಿ ಬಂಧಿಸಿದ ನಂತರ ಚಿದಂಬರಂ ಜಾಮೀನು ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 22ರಂದು ಸರ್ವೋಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರೂ, ಸಂಬಂಧಿತ ಇನ್ನೊಂದು ಕೇಸಿನಲ್ಲಿ ಇಡಿ ಕಸ್ಟಡಿಗೆ ತೆಗೆದುಕೊಂಡಿತ್ತು.


