‘ಮೋದಿ ಸಾಬ್, ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆದರೆ, ಈ ಸಲ ಬಿಜೆಪಿಗೆ 40 ಸೀಟೂ ಬರಲ್ಲ’ ಎಂದು ಬಿಜೆಪಿಯ ನಾಯಕರೂ ಆಗಿರುವ ಸುಪ್ರಿಂಕೋರ್ಟಿನ ವಕೀಲರೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ, ಬಿಜೆಪಿ ಹೇಗೆ ವಿಷಯಗಳನ್ನು ತಿರುಚಿ ಲಾಭ ಮಾಡಿಕೊಳ್ಳುತ್ತದೆ ಮತ್ತು ಇಂತಹ ಕೆಲಸದಲ್ಲಿ ಮೋದಿ ನಿರ್ಲಜ್ಜರು ಎಂಬುದರ ಮೇಲೂ ಅವರು ಬೆಳಕು ಚೆಲ್ಲಿದ್ದಾರೆ…
ಸುಪ್ರಿಂಕೋರ್ಟಿನ ವಕೀಲರೂ ಆಗಿರುವ ಬಿಜೆಪಿ ನಾಯಕ ಅಜಯ್ ಅಗರವಾಲ್ ಅವರು ಬಿಜೆಪಿ ನಾಯಕತ್ವದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಲೇ, ಗೆಲ್ಲಲು ಬಿಜೆಪಿ ಎಂತೆಂತಹ ಕೀಳು ಪ್ರಯೋಗಗಳನ್ನು ಮಾಡುತ್ತದೆ ಎಂಬುದನ್ನು ದೃಢಪಡಿಸಿದ್ದಾರೆ.
2014ರ ಚುನಾವಣೆಯಲ್ಲಿ ಅಗರವಾಲ್ ರಾಯ್‌ಬರೇಲಿಯಲ್ಲಿ ಸೋನಿಯಾ ವಿರುದ್ಧ ಸ್ಪರ್ಧಿಸಿ ಸೋತವರು. ಇಲ್ಲಿವರೆಗೆ ರಾಯ್‌ಬರೇಲಿಯಲ್ಲಿ ಬಿಜೆಪಿ ಅತಿ ಹೆಚ್ಚು ಮತ ಗಳಿಸಿದ್ದು ಆಗಲೇ. ಈ ಸಲ ಅವರಿಗೆ ಅಲ್ಲಿ ಟಿಕೆಟ್ ನಿರಾಕರಿಸಲಾಗಿದೆ.
`ಮೋದಿ ಒಬ್ಬ ಕೃತಘ್ನ’ ಎನ್ನುವ ಅಗರವಾಲ್, ’ಗುಜಾರಾತಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ನನ್ನ ಪಾತ್ರವೂ ಇದೆ. ಮಣಶಂಕರ್ ಅಯ್ಯರ್ ಮನೆಯಲ್ಲಿ ಮನಮೋಹನಸಿಂಗ್, ಮಾಜಿ ರಾಷ್ಟ್ರಪತಿ ಹಮೀದ್ ಅನ್ಸಾರಿ, ಮಣಿಶಂಕರ್ ಅಯ್ಯರ್ ಅವರು ಪಾಕ್ ರಾಯಭಾರಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ವಿಷಯವನ್ನು ನಾನು ಮೀಟಿಂಗ್‌ವೊಂದರಲ್ಲಿ ಮೋದಿ ಗಮನಕ್ಕೆ ತಂದೆ. ಮರುದಿನವೇ ಅವರು, ನನ್ನ ಸೋಲಿಸಲು ಪಾಕ್ ಮತ್ತು ಕಾಂಗ್ರೆಸ್ ಕೈಜೋಡಿಸುವೆ ಎಂದೆಲ್ಲ ಆಧಾರರಹಿತ ಆರೋಪ ಮಾಡಿ, ಬಿಜೆಪಿಗೆ ಅಲ್ಪ ಬಹುಮತ ತಂದು ಕೊಟ್ಟರು’ ಎನ್ನುವ ಅಗರವಾಲ್, ಗೆಲುವಿಗಾಗಿ ಮೋದಿ ಎಂತಹ ಕೀಳುಮಟ್ಟಕ್ಕೂ ಇಳಿಯಬಲ್ಲರು ಎಂದು ಆರೋಪಿಸಿದ್ದಾರೆ.
ಗುಜರಾತ್ ಗೆಲುವಿಗೆ ನನ್ನ ಕೊಡುಗೆಯಿದೆ ಎಂದು ಸಂಘದ ಹಿರಿಯ ನಾಯಕರೂ ಒಪ್ಪಿಕೊಂಡಿದ್ದಾರೆ ಎಂದಿರುವ ಅಗರ್ವಾಲ್ ಇದಕ್ಕೆ ಸಾಕ್ಷಿಯಾಗಿ ಸಂಘ ಪರಿವಾರದ ದತ್ತಾತ್ರೇಯ ಹೊಸಬಾಳೆ ಜೊತೆ ಫೋನಿನಲ್ಲಿ ನಡೆಸಿದ ಮಾತುಕತೆಯ ಆಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ.
ಸದ್ಯ ಮೋದಿಗೊಂದು ಪತ್ರ ಬರೆದಿರುವ ಅವರು, `300-400 ಸೀಟು ಗೆಲ್ಲುವ ಮಾತು ಬಿಡಿ, ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿಗೆ 40 ಸೀಟೂ ಬರಲ್ಲ’ ಎಂದು ಕಿಡಿ ಕಾರಿದ್ದಾರೆ. ಮೋದಿಯೊಂದಿಗೆ 28 ವರ್ಷಗಳ ಒಡನಾಟವಿದೆ, ಕಳೆದ ಸಲ ರಾಯ್‌ಬರೇಲಿಯಲ್ಲಿ ಒಳ್ಳೆ ಫೈಟ್ ಕೊಟ್ಟರೂ ಮೋದಿ ನನ್ನನ್ನು ಬೇಕೆಂತಲೇ ನಿರ್ಲಕ್ಷಿಸಿದ್ದಾರೆ ಎಂದೂ ಅವರು ಅಪಾದಿಸಿದ್ದಾರೆ.
ಗುಜರಾತ್ ಅಸೆಂಬ್ಲಿ ಗೆಲುವಿಗಾಗಿ ಅದ್ವಾನಿಯವರ ರಾಜಕೀಯವನ್ನೂ ಬಲಿ ಹಾಕಲಾಗಿದೆ. ಅದ್ವಾನಿಯವರನ್ನು ರಾಷ್ಟ್ರಪತಿ ಮಾಡಲು ಪಕ್ಷ ಯೋಚಿಸಿತ್ತು. ಆದರೆ ಗುಜರಾತಿನಲ್ಲಿ ಕೋಲಿ ಸಮುದಾಯದ ಮತಗಳನ್ನು ಪಡೆಯಲು ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಲಾಗಯಿತು. ಮೋದಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಹೀಗೆಲ್ಲ ಮಾಡಿದರಷ್ಟೇ ಎಂದೂ ಅಗರ್‌ವಾಲ್ ಹೇಳಿದ್ದಾರೆ.
ಪತ್ರದಲ್ಲಿ ನೋಟ್ ಬ್ಯಾನ್ ಬಗ್ಗೆ ಪ್ರಶ್ನಿಸಿರುವ ಅಗರವಾಲ್, ’ಪಾರ್ಟಿಯಲ್ಲಿ ನೀವೇ ಬಹಳ ಬುದ್ಧಿವಂತರು. ಹೀಗಾಗಿ ಯಾರನ್ನೂ ಕೇಳದೇ ನೋಟ್‌ಬ್ಯಾನ್ ಮಾಡಿ ಬಡವರ ಬದುಕನ್ನು ಇನ್ನಷ್ಟು ಬವಣೆಗೆ ದೂಕಿಬಿಟ್ಟಿರಿ. ಇದೊಂದು ಮುರ್ಖತನದ ನಿರ್ಧಾರವಾಗಿತ್ತು’ ಎಂದು ಕಠೋರ ಶಬ್ದಗಳಲ್ಲಿ ಮೋದಿಯನ್ನು ಕುಟುಕಿದ್ದಾರೆ.
(ಆಧಾರ: ದಿ ವೈರ್)


