| ಪ್ರವೀಣ್  ಎಸ್ ಶೆಟ್ಟಿ |
ಮೋದಿ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ, ಭಾರತೀಯರ ಪುಣ್ಯದಿಂದ ಕೊನೆಗೂ ಮೋದಿಯಂತಹಾ ಪ್ರಧಾನಿ ನಮಗೆ ಸಿಕ್ಕಿರುವುದು ಎಂಬೆಲ್ಲಾ ವಿಶೇಷಣಗಳೊಂದಿಗೆ ಮೋದಿಯ ಪ್ರಚಾರ ಮಾಡಲಾಗುತ್ತಿದೆ. ಈಗ ಮೋದಿಗೆ 69 ವರ್ಷ ವಯಸ್ಸು. 2001 ರಲ್ಲಿ ಅವರು ಗುಜರಾತಿನ ಮುಖ್ಯಮಂತ್ರಿ ಆಗುವುದಕ್ಕೆ ಮುಂಚೆ ಅವರು ಒಂದು ಸಣ್ಣ ಪಂಚಾಯತ್ ಸದಸ್ಯನಷ್ಟೂ ಜನಸೇವೆ ಅಥವಾ ದೇಶಸೇವೆ ಮಾಡಿಲ್ಲ. ಅವರು ನೇರವಾಗಿ ಆಗಿನ ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಕೇಶುಭಾಯಿ ಪಟೇಲ್, ಸುರೇಶ್ ಮೇಹತಾ, ಹಾಗೂ ಆರ್‌ಜೆ‌ಪಿ ಪಕ್ಷದ ಶಂಕರ್ ಸಿಂಹ ವಾಘೆಲಾ ಇವರೆಲ್ಲರ ಬೆನ್ನಿಗೆ ಇರಿದು ಗುಜರಾತ್ ಮುಖ್ಯಮಂತ್ರಿ ಸ್ಥಾನ ಕಬಳಿಸಿದ್ದು. ಅದಕ್ಕೆ ಮುಂಚೆ ಅವರು ಕೇವಲ ಅಡ್ವಾಣಿಯವರ ತಲೆಗೆ ಕೊಡೆ ಹಿಡಿದಿದ್ದು ಮತ್ತು ಬಾಯಿಗೆ ಲೌಡ್ ಸ್ಪೀಕರ್ ಹಿಡಿದಿದ್ದು ಮಾತ್ರ ಅವರು ಮಾಡಿರುವ ಜನಸೇವೆ.
ಮೋದಿ ಗುಜರಾತ್ ಮುಖ್ಯಮಂತ್ರಿ ಆಗುವಾಗ ಅವರಿಗೆ 52 ವರ್ಷ ವಯಸ್ಸು. ಅಲ್ಲಿಯವರೆಗೆ ಅವರು ಒಂದು ಪೈಸೆಯ ದೇಶಸೇವೆ ಅಥವಾ ಜನಸೇವೆ ಮಾಡಿರಲಿಲ್ಲ. ಗುಜರಾತ್ ಮುಖ್ಯಮಂತ್ರಿ ಆದ ಮೇಲೂ ಅವರು ಮಾಡಿಸಿದ್ದು ಕೋಮು ಗಲಭೆ, ನಕಲಿ ಎಂಕೌಂಟರ್, ಮುಖ್ಯಮಂತ್ರಿ ಹುದ್ದೆಯ ಸ್ಪರ್ಧಿ ಹರೇನ್ ಪಾಂಡ್ಯರ ಸಂದೇಹಾಸ್ಪದ ಮರಣ, ಗುಜರಾತ್ ಪೆಟ್ರೋಲಿಯಂನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ರೈತರ ಭೂಮಿ ಕಸಿದು ತನ್ನ ಚೇಲಾ ಉದ್ಯಮಿಗಳಿಗೆ ಕವಡೆ ಬೆಲೆಗೆ ಕೊಟ್ಟಿದ್ದು ಅಷ್ಟೇ, ಇವನ್ನೆಲ್ಲಾ ಗುಜರಾತಿಗಾಗಿ ಮೋದಿಯ ಜೀವನದ ಮುಡಿಪು ಅನ್ನಬೇಕೆ? ಅಥವಾ ಆರು ಕೋಟಿ ಗುಜರಾತಿಗಳ ಪುಣ್ಯದಿಂದ ಗುಜರಾತಿಗೆ ಸಿಕ್ಕ ಮಹಾನ್ ಮುಖ್ಯಮಂತ್ರಿ ಎಂಬ ವಿಶೇಷಣ ಸೇರಿಸಬೇಕೆ?
ಚಿಕ್ಕಂದಿನಿಂದ ಮೋದಿಯ ಜೀವನ ಹೇಗೆ ವಿಶ್ಲೇಶಿಸಿದರೂ ಅವರು ಒಂದಿಷ್ಟೂ ದೇಶಸೇವೆ ಅಥವಾ ಜನಸೇವೆ ಮಾಡಿದ ಉದಾಹರಣೆ ಇಲ್ಲ. ಅವರ ತಂದೆ ತುಂಬಾ ಬಡವರಾಗಿದ್ದರಿಂದ ರೇಲ್ವೇ ಸ್ಟೇಷನ್ನಲ್ಲಿ ಚಹಾ ಮಾರುತ್ತಿದರು ಎಂಬುದೆಲ್ಲಾ ಶುದ್ಧ ಸುಳ್ಳು. ಬನಿಯಾ/ವೈಶ್ಯಾ ಮೇಲ್ಜಾತಿಯವರಾದ ಅವರ ತಂದೆಯ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇತ್ತು ಎಂದು ಅವರ ಮಾವನ ಮಗ ಕಲ್ಪೇಶ್ ಭಾಟಿಯಾ ಮೋದಿ ಎಂಬವರೇ ಹೇಳಿದ್ದಾರೆ. ಮೋದಿಯ ತಾಯಿ ಇತರರ ಮನೆಯ ಮುಸುರೆ ತಿಕ್ಕುವುದು ಒತ್ತಟ್ಟಿಗಿರಲಿ ಅವರು ತನ್ನ ಸ್ವಂತ ಮನೆಯ ಮುಸುರೆ ಸಹಾ ತಿಕ್ಕುತ್ತಿರಲಿಲ್ಲ. ಯಾಕೆಂದರೆ ಅವರು ಆರು ಮಕ್ಕಳನ್ನು ಹೆತ್ತು ಹೊತ್ತು ಸಾಕುವುದರಲ್ಲಿಯೇ ಅವರ ಜೀವನ ಕಳೆದು ಹೋಗಿತ್ತು.
ಮೋದಿಯ ತಂದೆಯ ಆರ್ಥಿಕ ಸ್ಥಿತಿ ಚೆನ್ನಾಗಿದ್ದುದರಿಂದಲೇ ಮೋದಿಯ ಇಬ್ಬರು ಅಣ್ಣಂದಿರು ಮತ್ತು ಇಬ್ಬರು ತಮ್ಮಂದಿರು ಸರಿಯಾಗಿ ಶಾಲೆ ಕಾಲೇಜು ಮುಗಿಸಿ ಡಿಗ್ರಿ ಪಡೆದು ಇಬ್ಬರು ಸರಕಾರಿ ನೌಕರಿ ಗಳಿಸಿದರೆ ಇನ್ನಿಬ್ಬರು ತಮ್ಮ ಸ್ವಂತ ಉದ್ಯಮ ಸ್ಥಾಪಿಸಿದರು. ತಂಗಿ ಜಯಂತಿಬೆನ್ ಸಹಾ ಪದವೀಧರೆ ಹಾಗೂ ಅವಳ ಗಂಡ ಎಲ್‌ಐಸಿ ಯಲ್ಲಿ ಅಧಿಕಾರಿಯಾಗಿದ್ದರು. ಹಾಗಿರುವಾಗ ಕೇವಲ ಮೋದಿ ಒಬ್ಬರೇ ಮಾನಸಿಕ ಸಮಸ್ಯೆಯಿಂದಾಗಿ ಸರಿಯಾಗಿ ಶಾಲೆಗೂ ಹೋಗದೆ ಉದ್ಯೋಗವನ್ನೂ ಮಾಡದೇ ಉಂಡಾಡಿಯಾಗಿ ತಿರುಗಾಡಿಕೊಂಡಿದ್ದು! ಅದನ್ನು ನೋಡಿ ಅವರ ತಂದೆ ಮೋದಿಗೆ 20 ವರ್ಷ ಆಗಿದ್ದಾಗ ಮಿಲಿಟರಿಯಲ್ಲಿ ಸೈನಿಕನಾಗಿ ಸೇರುವಂತೆ ಒತ್ತಾಯಿಸಿದರು. ಆದರೆ ಮೋದಿ ಮಿಲಿಟರಿ ಸೇರಲು ಭಯಪಟ್ಟು ಮನೆ ಬಿಟ್ಟು ಓಡಿ ಗುಜರಾತಿ ನಾಟಕ ಕಂಪನಿಯಲ್ಲಿ ತಬಲವಾದಕನಾಗಿ ಕೆಲಸಕ್ಕೆ ಸೇರಿದರು. ನಾಟಕ ಕಂಪನಿಯಲ್ಲಿ ಮೋದಿ 12 ವರ್ಷ ಕೆಲಸ ಮಾಡಿದ್ದನ್ನೇ ಅವರು ತಾನು ಹಿಮಾಲಯದಲ್ಲಿ ತಪಸ್ಸು ಮಾಡಿದ್ದೇನೆ ಎಂದು ಸುಳ್ಳು ಹೇಳಿದ್ದು. (ಯವ್ವನದಲ್ಲಿ ಮಿಲಿಟರಿ ಸೇರಲು ಭಯಪಟ್ಟ ಮೋದಿ ಈಗ ಮಾತ್ರ ವೀರ ಸೈನಿಕರ ಹೆಸರಲ್ಲಿ ವೋಟು ಕೇಳುತ್ತಿರುವುದು ವಿಪರ್ಯಾಸ).
1973 ರಲ್ಲಿ ಮೋದಿ 24 ವರ್ಷದವರಾಗಿದ್ದಾಗ ಅವರ ಹುಟ್ಟೂರು ವಡ್ನಗರದಲ್ಲಿ ಹೊಸ ರೇಲ್ವೆ ಸ್ಟೇಷನ್ ಕಟ್ಟಿದ್ದು. ಹಾಗಾದರೆ ಮೋದಿ ಚಿಕ್ಕಂದಿನಲ್ಲಿ ಚಹಾ ಮಾರಿದ್ದು ಯಾವ ರೇಲ್ವೆ ಸ್ಟೇಷನ್ನಿನಲ್ಲಿ? ಮೋದಿ 35 ವರ್ಷದವರಾಗಿದ್ದಾಗ ಅವರು ಆರೆಸ್ಸೆಸ್ಸ್ ಸೇರಿ ಅಲ್ಲಿ ಚಡ್ಡಿ ಹಾಕಿ ಹದಿನೈದು ವರ್ಷ ಲಾಠಿ ತಿರುಗಿಸಿದ್ದನ್ನು ದೇಶಸೇವೆ ಅನ್ನಲು ಸಾಧ್ಯವಿಲ್ಲ. ಮೋದಿ ಚಹಾ ಮಾರಿದ್ದು ಸುಳ್ಳು, ಹಿಮಾಲಯದಲ್ಲಿ ತಪಸ್ಸು ಮಾಡಿದ್ದು ಸುಳ್ಳು, ಮೊಸಳೆಯೊಂದಿಗೆ ಹೊಡೆದಾಡಿದ್ದು ಸುಳ್ಳು, ಬಡತನದಿಂದ ಬಳಲಿದ್ದು ಸುಳ್ಳು. ಹೀಗೆ ಸುಳ್ಳುಗಳ ಸರಮಾಲೆ ಹೆಣೆದು ಸೋಷಿಯಲ್ ಮೀಡಿಯಾದಲ್ಲಿ ಮತ್ತು ಪೇಡ್ ಪತ್ರಿಕೆಗಳಲ್ಲಿ ಈ ಕಟ್ಟುಕಥೆಗಳನ್ನು ಹರಡಿಯೇ 2014 ರಲ್ಲಿ ಮೋದಿ ಭಾರತೀಯ ಮತದಾರರ ಸಹಾನುಭೂತಿ ಗಳಿಸಿದ್ದು. ಈಗ ಸತ್ಯ ಹೊರಬಂದ ಮೇಲಾದರೂ ಮತದಾರರು ಕಣ್ಣು ತರೆಯುವರೇ?
ಟಿ‌ವಿಯಲ್ಲಿ ಬರುವ ರಿಯಾಲಿಟಿ ಶೋಗಳಲ್ಲಿ ವೇದಿಕೆಯಲ್ಲಿ ಜೋರು ಜೋರಾಗಿ ಅಳುತ್ತಾ ತಮ್ಮ ಜೀವನದ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳುವ ಹುಡುಗ-ಹುಡುಗಿಯರನ್ನು ಎಲ್ಲರೂ ನೋಡಿರುವರು. ಆದರೆ ಈ ಸ್ಪರ್ಧಿಗಳಲ್ಲಿ ಹೆಚ್ಚಿನವರು ನಿಜ ಜೀವನದಲ್ಲಿ ಯಾವುದೇ ಕಷ್ಟ ಕಾರ್ಪಣ್ಯ ಎದುರಿಸಿರುವುದಿಲ್ಲ. ಆದರೂ ಆ ರಿಯಾಲಿಟಿ ಶೋಗಳ ನಿರ್ದೇಶಕರೇ ಈ ಸ್ಪರ್ಧಿಗಳಿಗೆ ಕಾಲ್ಪನಿಕ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ವೀಕ್ಷಕರ ಅತಿ ಹೆಚ್ಚು ಸಹಾನುಭೂತಿ ಗಳಿಸಿ ಟಿ‌ಆರ್‌ಪಿ ಏರಿಸಲು ಸಹಾಯ ಮಾಡಿದರೆ ಮಾತ್ರ ಅವರನ್ನು ಗೆಲ್ಲಿಸುವುದು ಎಂಬ ಅಮಿಷೆ ಒಡ್ಡಿರುತ್ತಾರೆ. ಅದೇ ಪ್ರಕಾರ ಮೋದಿಯ ಜೀವನದ ಕಷ್ಟಕಾರ್ಪಣ್ಯ ಬಡತನ ಎಲ್ಲವೂ ಟಿ‌ವಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳು ಅಳುತ್ತಾ ಹೇಳುವ ಕಥೆಗಳಂತೆ ಶುದ್ಧ ಕಾಲ್ಪನಿಕ. ಅದು ಕೇವಲ ಹೆಂಗರುಳಿನ ಮತದಾರರ ಮನದಲ್ಲಿ ಮೋದಿಯ ಬಗ್ಗೆ ವಯುಕ್ತಿಕವಾಗಿ ಕನಿಕರ ಹುಟ್ಟಿಸಿ ಅವರ ವೋಟು ಸೆಳೆಯಲು ಮಾಡಿರುವ “ಫೇಕೂ ರಿಯಾಲಿಟಿ ಶೋ” ಅಷ್ಟೇ. ನಟ ಭಯಂಕರ, ಅಭಿನಯ ವಿಶಾರದ, ನಟಶೇಖರ, ಕಲಾ ಸಾಮ್ರಾಟ ಮೋದಿಯ ಎದುರು ದಿಲೀಪ್ ಕುಮಾರ್, ಶಿವಾಜಿ ಗಣೇಶನ್, ಎನ್‌ಟಿ‌ಆರ್, ಮಮ್ಮುಟ್ಟಿ, ಕಮಲ ಹಾಸನ್, ನಮ್ಮ ವರನಟ ಡಾ.ರಾಜ್ ಕುಮಾರ್, ಇವರೆಲ್ಲರೂ ಅತ್ಯಂತ ಸಪ್ಪೆಯಾಗಿ ಕಾಣುತ್ತಾರೆ ಪಾಪ!
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here