Homeಅಂತರಾಷ್ಟ್ರೀಯಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

- Advertisement -
- Advertisement -

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ ವಿರಾಮ ಘೋಷಿಸಿತು.

ಇಸ್ರೇಲ್ 2023ರ ಅಕ್ಟೋಬರ್ 7ರಿಂದ ನಿರಂತರವಾಗಿ ವೈಮಾನಿಕ ಮತ್ತು ನೆಲ ದಾಳಿ ನಡೆಸಿ ಗಾಝಾದ ಅಮಾಯಕರ ನರಮೇಧ ನಡೆಸುತ್ತಿರುವುದನ್ನು ನೋಡಿದ ಮಾನವೀಯ ಜಗತ್ತು ಈ ಕದನ ವಿರಾಮ ಘೋಷಣೆಯಿಂದ ಕೊಂಚ ನಿರಾಳವಾಗಿತ್ತು.

ಆದರೆ, ಈ ಕದನ ವಿರಾಮ ಇಸ್ರೇಲ್ ಮತ್ತು ಅಮೆರಿಕ ರೂಪಿಸಿದ ಹೊಸ ನಾಟಕ ಎಂಬುವುದು ಈಗ ಜನರೆಡೆ ಚರ್ಚೆಯಾಗುತ್ತಿದೆ. ಏಕೆಂದರೆ, ಕದನ ವಿರಾಮ ಘೋಷಣೆಯಾದ ಬಳಿಕ ಇಸ್ರೇಲ್ ಗಾಝಾ ಮೇಲಿನ ತನ್ನ ದಾಳಿಯನ್ನು ಇವತ್ತಿಗೂ ಮುಂದುವರಿಸಿದೆ. ಪ್ರತಿದಿನ ಅಮಾಯಕ ನಾಗರಿಕರನ್ನು ಹತ್ಯೆ ಮಾಡುತ್ತಿದೆ.

ಹಮಾಸ್ ಹೆಸರೇಳಿ ಅಮಾಯಕ ನಾಗರಿಕ ಮನೆಗಳನ್ನು ಬಾಂಬಿಟ್ಟು ಧ್ವಂಸಗೊಳಿಸಿರುವ ಇಸ್ರೇಲ್, ಈಗ ಅವರು ಉಳಿದುಕೊಳ್ಳಲು ವಿಶ್ವಸಂಸ್ಥೆ, ರೆಡ್‌ಕ್ರೆಸೆಂಟ್‌ನಂತಹ ಸಂಸ್ಥೆಗಳು ಮಾನವೀಯ ನೆಲೆಯಲ್ಲಿ ಒದಗಿಸಿದ ತಾತ್ಕಾಲಿಕ ಟೆಂಟ್‌ಗಳ ಮೇಲೂ ದಾಳಿ ನಡೆಸುತ್ತಿರುವುದು ನೋಡಿದರೆ ಕದನ ವಿರಾಮ ಎಂಬುವುದು ಜಗತ್ತಿನ ಕಣ್ಣಿಗೆ ಮಣ್ಣೆರಚಲು ಇಸ್ರೇಲ್-ಅಮೆರಿಕ ರೂಪಿಸಿದ ನಾಟಕ ಎಂಬುದು ಮಣದಟ್ಟಾಗುತ್ತದೆ.

3 ಸಾವಿರಕ್ಕೂ ಹೆಚ್ಚು ಬಾರಿ ಇಸ್ರೇಲ್‌ನಿಂದ ಕದನ ವಿರಾಮ ಉಲ್ಲಂಘನೆ

ಗಾಝಾದ ಸರ್ಕಾರಿ ಮಾಧ್ಯಮ ಕಚೇರಿಯ ವರದಿಗಳ ಪ್ರಕಾರ, ಕದನ ವಿರಾಮ ಜಾರಿಗೆ ಬಂದಾಗಿನಿಂದ ಮೇ 27, 2026ರ ಒಳಗೆ ಇಸ್ರೇಲ್ ಸೇನೆಯು ಒಟ್ಟು 3,005 ಬಾರಿ ಒಪ್ಪಂದವನ್ನು ಉಲ್ಲಂಘಿಸಿದೆ.

1,109ಕ್ಕೂ ಹೆಚ್ಚು ವೈಮಾನಿಕ ದಾಳಿಗಳು ಮತ್ತು ಫಿರಂಗಿ ಬಾಂಬ್ ದಾಳಿಗಳು, ನಾಗರಿಕರನ್ನು ಗುರಿಯಾಗಿಸಿಕೊಂಡು 921 ಬಾರಿ ನೇರ ಗುಂಡಿನ ದಾಳಿ ಮತ್ತು ನಿರಾಶ್ರಿತರ ಶಿಬಿರಗಳು ಮತ್ತು ವಸತಿ ಕಟ್ಟಡಗಳ ಮೇಲಿನ 273ಕ್ಕೂ ಹೆಚ್ಚು ಆಸ್ತಿ ಧ್ವಂಸ ಕಾರ್ಯಾಚರಣೆಗಳು ನಡೆಸಿವೆ.

ಕದನ ವಿರಾಮದ ಅವಧಿಯಲ್ಲಿ ಶಾಂತಿ ನೆಲೆಸಬೇಕಿದ್ದ ಗಾಝಾದಲ್ಲಿ ಪ್ರತಿದಿನ ಸಾವು-ನೋವುಗಳು ಸಂಭವಿಸುತ್ತಿವೆ. ವರದಿಗಳ ಪ್ರಕಾರ, ಕದನ ವಿರಾಮದ ನಂತರ ನಡೆದ ಇಸ್ರೇಲಿ ದಾಳಿಗಳಲ್ಲಿ ಈವರೆಗೆ ಕನಿಷ್ಠ 922ಕ್ಕೂ ಹೆಚ್ಚು ಫ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 2,786ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ವಿಶ್ವಸಂಸ್ಥೆಯ ಮಕ್ಕಳ ನಿಧಿ ಯುಬಿಸೆಫ್ ವರದಿಯ ಪ್ರಕಾರ, ಈ ಕದನ ವಿರಾಮದ ಅವಧಿಯಲ್ಲಿ ಪ್ರತಿದಿನ ಸರಾಸರಿ ಇಬ್ಬರು ಮಕ್ಕಳು ಇಸ್ರೇಲ್ ದಾಳಿಗೆ ಬಲಿಯಾಗುತ್ತಿದ್ದಾರೆ. 

ಮೇ 28, 2026ರ ಇತ್ತೀಚಿನ ವರದಿಯಂತೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕದನ ವಿರಾಮದ ನಿಯಮಗಳನ್ನು ಸಂಪೂರ್ಣವಾಗಿ ಮೀರಿ, ಗಾಝಾ ಪಟ್ಟಿಯ ಶೇಕಡಾ 70ರಷ್ಟು ಪ್ರದೇಶವನ್ನು ಇಸ್ರೇಲ್ ಸೇನೆಯ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆದೇಶಿಸಿದ್ದಾರೆ. 

ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಸ್ರೇಲ್ ಗಾಝಾ ಮೇಲಿನ ದಾಳಿಗಳನ್ನು ಶೇಕಡ 35 ರಷ್ಟು ಹೆಚ್ಚಿಸಿದೆ. ನುಸೇರತ್ ಮತ್ತು ಬುರೇಜ್ ನಿರಾಶ್ರಿತರ ಶಿಬಿರಗಳ ಮೇಲೆ ಇತ್ತೀಚೆಗೆ ಭೀಕರ ಬಾಂಬ್ ದಾಳಿ ನಡೆಸಲಾಗಿದೆ. 

ವಿಶ್ವಸಂಸ್ಥೆಯ ಗೋದಾಮುಗಳು, ನಿರಾಶ್ರಿತರ ಶಿಬಿರಗಳು ಮತ್ತು ಆಂಬ್ಯುಲೆನ್ಸ್‌ಗಳ ಮೇಲೆಯೂ ಇಸ್ರೇಲ್ ದಾಳಿ ನಡೆಸಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟುರ್ಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಗಾಝಾದ ಗಡಿಗಳನ್ನು ಸಂಪೂರ್ಣವಾಗಿ ದಿಗ್ಬಂಧನ (Blockade) ಮಾಡಿರುವುದರಿಂದ ಗಾಝಾದಲ್ಲಿ ಆಹಾರ, ಶುದ್ಧ ನೀರು ಮತ್ತು ತುರ್ತು ಔಷಧಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ಅಪೌಷ್ಟಿಕತೆ ಜಾಗತಿಕ ಮಟ್ಟದ ಬಿಕ್ಕಟ್ಟಾಗಿ ಮಾರ್ಪಟ್ಟಿದೆ.

ವಿಶ್ವಸಂಸ್ಥೆ ಮತ್ತು ಜಾಗತಿಕ ಮಾನವ ಹಕ್ಕುಗಳ ಸಂಸ್ಥೆಗಳು ಈ ಕದನ ವಿರಾಮವನ್ನು “ಕೇವಲ ಹೆಸರಿಗಷ್ಟೇ ಇರುವ ಒಪ್ಪಂದ” (Fragile Ceasefire) ಎಂದು ಕರೆದಿದ್ದು, ಇಸ್ರೇಲ್ ಕೃತ್ಯಗಳು ಗಾಝಾವನ್ನು ಸಂಪೂರ್ಣವಾಗಿ ವಾಸಕ್ಕೆ ಯೋಗ್ಯವಲ್ಲದ ಜಾಗವನ್ನಾಗಿ ಮಾಡುತ್ತಿವೆ ಎಂದು ಆಕ್ಷೇಪಿಸಿವೆ. 

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿಯರ ಮೇಲೆ ನಿರಂತರ ಆಕ್ರಮಣ

ಗಾಝಾದ ಕಥೆ ಒಂದೆಡೆಯಾದರೆ ಇಸ್ರೇಲ್ ಆಕ್ರಮಿಸಿಕೊಂಡಿರುವ ಪಶ್ಚಿಮ ದಂಡೆಯ ಕಥೆ ಬೇರೆಯದ್ದೇ ಇದೆ. ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ಸೇನೆ (ಐಡಿಎಫ್‌) ಮತ್ತು ಅಲ್ಲಿನ ಅಕ್ರಮ ಇಸ್ರೇಲ್ ವಸಾಹತುಗಾರರು (Settlers) ನಡೆಸುತ್ತಿರುವ ಹಿಂಸಾಚಾರ ಮತ್ತು ಆಕ್ರಮಣಗಳು 2025 ಹಾಗೂ 2026ರ ಪ್ರಸ್ತುತ ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿವೆ.

ಗಾಝಾ ಯುದ್ಧದ ನೆರಳಿನಲ್ಲಿ, ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿಯರನ್ನು ಅವರ ಸ್ವಂತ ಭೂಮಿಯಿಂದ ಒಕ್ಕಲೆಬ್ಬಿಸುವ ಮತ್ತು ವ್ಯವಸ್ಥಿತವಾಗಿ ದಬ್ಬಾಳಿಕೆ ನಡೆಸುವ ಪ್ರಕ್ರಿಯೆ ಗಣನೀಯವಾಗಿ ಹೆಚ್ಚಾಗಿದೆ.

ಪಶ್ಚಿಮ ದಂಡೆಯಲ್ಲಿ ಸುಮಾರು 7.5 ಲಕ್ಷ ಯಹೂದಿ ವಸಾಹತುಗಾರರು ಅಕ್ರಮವಾಗಿ ನೆಲೆಸಿದ್ದು, ಇವರು ಪ್ಯಾಲೆಸ್ತೀನಿಯರ ಹಳ್ಳಿಗಳ ಮೇಲೆ ಪ್ರತಿದಿನ ಆಕ್ರಮಣ ನಡೆಸುತ್ತಿದ್ದಾರೆ. 

ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (OCHA) ವರದಿಯ ಪ್ರಕಾರ, 2026ರಲ್ಲಿ ವಸಾಹತುಗಾರರು ಪ್ರತಿದಿನ ಸರಾಸರಿ 6 ಭೀಕರ ದಾಳಿಗಳನ್ನು ನಡೆಸುತ್ತಿದ್ದಾರೆ.

ಶಸ್ತ್ರಸಜ್ಜಿತ ವಸಾಹತುಗಾರರು ಪ್ಯಾಲೆಸ್ತೀನ್ ನಾಗರಿಕರ ಮನೆಗಳು, ವಾಹನಗಳು ಮತ್ತು ಮಸೀದಿಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಪ್ಯಾಲೆಸ್ತೀನಿಯರ ಪ್ರಮುಖ ಆದಾಯ ಮೂಲವಾದ ಆಲಿವ್ ತೋಟಗಳನ್ನು ಧ್ವಂಸಗೊಳಿಸಿ, ಅವರ ಜಾನುವಾರುಗಳನ್ನು ಕೊಲ್ಲಲಾಗುತ್ತಿದೆ. 

ಈ ವಸಾಹತುಗಾರರು ದಾಳಿ ಮಾಡುವಾಗ ಇಸ್ರೇಲ್ ಮಿಲಿಟರಿ ಪಡೆಗಳು ಅವರಿಗೆ ಸಂಪೂರ್ಣ ರಕ್ಷಣೆ ನೀಡುತ್ತವೆ ಅಥವಾ ಮೂಕಪ್ರೇಕ್ಷಕರಾಗಿ ನಿಲ್ಲುತ್ತವೆ ಎಂದು ವಿಶ್ವಸಂಸ್ಥೆ ಆಕ್ಷೇಪಿಸಿದೆ.

ಇಸ್ರೇಲ್ ರಕ್ಷಣಾ ಪಡೆಗಳು ಕೂಡಡ ಪಶ್ಚಿಮ ದಂಡೆಯ ಪ್ರಮುಖ ನಗರಗಳು ಮತ್ತು ನಿರಾಶ್ರಿತರ ಶಿಬಿರಗಳ ಮೇಲೆ ನಿರಂತರವಾಗಿ ವಾಯು ಮತ್ತು ಭೂಸೇನಾ ದಾಳಿಗಳನ್ನು ನಡೆಸುತ್ತಿವೆ.

ಉತ್ತರ ಪಶ್ಚಿಮ ದಂಡೆಯ ಜೆನಿನ್, ತುಲ್ಕರ್ಮ್ ಮತ್ತು ನೂರ್ ಶಾಮ್ಸ್ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ಸೇನೆ ನಿರಂತರ ಮುತ್ತಿಗೆ ಹಾಕುತ್ತಿದೆ.

ಮಿಲಿಟರಿ ಬುಲ್ಡೋಜರ್‌ಗಳ ಮೂಲಕ ಪ್ಯಾಲೆಸ್ತೀನಿಯರ ರಸ್ತೆಗಳು, ವಿದ್ಯುತ್ ಸಂಪರ್ಕಗಳು ಮತ್ತು ನೀರಿನ ಪೈಪ್‌ಲೈನ್‌ಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಲಾಗುತ್ತಿದೆ.

ಅಕ್ಟೋಬರ್ 2023ರಿಂದ ಇತ್ತೀಚಿನ 2026ರ ಮೇ ತಿಂಗಳವರೆಗೆ ಇಸ್ರೇಲ್ ಸೇನೆ ಮತ್ತು ವಸಾಹತುಗಾರರ ದಾಳಿಗೆ ಪಶ್ಚಿಮ ದಂಡೆಯಲ್ಲೇ 1,100 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಬಲಿಯಾಗಿದ್ದಾರೆ. ಇವರಲ್ಲಿ 230ಕ್ಕೂ ಹೆಚ್ಚು ಅಮಾಯಕ ಮಕ್ಕಳಿದ್ದಾರೆ. 

ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್‌) ವರದಿಯ ಪ್ರಕಾರ, ಪಶ್ಚಿಮ ದಂಡೆಯಲ್ಲಿ ಕಲ್ಲು ತೂರಾಟ ನಡೆಸುವ ಅಪ್ರಾಪ್ತ ಮಕ್ಕಳ ಮೇಲೆಯೂ ಇಸ್ರೇಲ್ ಸೇನೆ ನೇರ ಗುಂಡಿನ ದಾಳಿ ನಡೆಸುತ್ತಿದ್ದು, ಪ್ರತಿ ವಾರ ಕನಿಷ್ಠ ಒಬ್ಬ ಮಗು ಸಾವನ್ನಪ್ಪುತ್ತಿದೆ.

2025 ಒಂದರಲ್ಲೇ ಇಸ್ರೇಲ್ ದಾಳಿಗಳಿಂದಾಗಿ ಪಶ್ಚಿಮ ದಂಡೆಯಲ್ಲಿ 37,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ತಮ್ಮ ಮನೆಗಳನ್ನು ಕಳೆದುಕೊಂಡು ಬಲವಂತವಾಗಿ ಸ್ಥಳಾಂತರಗೊಂಡಿದ್ದಾರೆ. 2026ರ ಮೊದಲ ಮೂರು ತಿಂಗಳಲ್ಲೇ ವಸಾಹತುಗಾರರ ಹಿಂಸಾಚಾರದಿಂದಾಗಿ 680ಕ್ಕೂ ಹೆಚ್ಚು ಮಕ್ಕಳು ಬೀದಿಪಾಲಾಗಿದ್ದಾರೆ.

ಭೂಮಿ ವಶ ಮತ್ತು ಇಸ್ರೇಲ್ ಸರ್ಕಾರದ ಅಧಿಕೃತ ಬೆಂಬಲ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇತ್ತೀಚೆಗೆ ‘E1 ವಸಾಹತು ವಿಸ್ತರಣಾ ಯೋಜನೆ’ಗೆ ಸಹಿ ಹಾಕಿದ್ದು, ಇದರ ಅಡಿಯಲ್ಲಿ ಪ್ಯಾಲೆಸ್ತೀನಿಯರ ಭೂಮಿಯನ್ನು ಕಸಿದುಕೊಂಡು ಸಾವಿರಾರು ಹೊಸ ಯಹೂದಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದು ಭವಿಷ್ಯದ ಸ್ವತಂತ್ರ ಪ್ಯಾಲೆಸ್ತೀನ್ ರಾಷ್ಟ್ರದ ಕನಸನ್ನೇ ಇಲ್ಲದಂತೆ ಮಾಡುವ ತಂತ್ರ ಎಂದು ಜಾಗತಿಕ ಸಮುದಾಯ ಕಳವಳ ವ್ಯಕ್ತಪಡಿಸಿದೆ.

ಪ್ಯಾಲೆಸ್ತೀನಿಯರ ಮೇಲೆ ದೌರ್ಜನ್ಯ ಎಸಗುವ ವಸಾಹತುಗಾರರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುತ್ತಿಲ್ಲ. ಇಸ್ರೇಲಿ ಮಾನವ ಹಕ್ಕುಗಳ ಸಂಸ್ಥೆ ‘ಯೆಶ್ ದಿನ್’ ಪ್ರಕಾರ, ವಸಾಹತುಗಾರರ ಹಿಂಸಾಚಾರದ ಶೇಕಡ 96 ರಷ್ಟು ಪ್ರಕರಣಗಳನ್ನು ಇಸ್ರೇಲ್ ನ್ಯಾಯಾಲಯಗಳು ವಿಚಾರಣೆ ಇಲ್ಲದೆ ವಜಾಗೊಳಿಸುತ್ತಿವೆ. 

ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ನಡೆಸುತ್ತಿರುವ ಈ ಆಕ್ರಮಣ, ಅಕ್ರಮ ವಸಾಹತು ನಿರ್ಮಾಣ ಮತ್ತು ಪ್ಯಾಲೆಸ್ತೀನಿಯರ ವಿರುದ್ಧದ ಸಾಂಸ್ಥಿಕ ತಾರತಮ್ಯವನ್ನು ಅಂತಾರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ಕಾನೂನುಬಾಹಿರ ಎಂದು ಘೋಷಿಸಿದೆ. ತಕ್ಷಣವೇ ಪಶ್ಚಿಮ ದಂಡೆಯಿಂದ ಇಸ್ರೇಲ್ ತನ್ನ ಎಲ್ಲಾ ವಸಾಹತುಗಳನ್ನು ತೆರವುಗೊಳಿಸಬೇಕೆಂದು ಆದೇಶಿಸಿದ್ದರೂ, ಇಸ್ರೇಲ್ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ತನ್ನ ಆಕ್ರಮಣವನ್ನು ಮುಂದುವರಿಸಿದೆ. 

ಎರಡು ವರ್ಷಗಳ ನಿರಂತರ ದಾಳಿ, ಗಾಝಾ ನಿರ್ಣಾಮ, ನರಮೇಧ

ಅಕ್ಟೋಬರ್ 7, 2023ರಿಂದ ಅಕ್ಟೋಬರ್ 10, 2025ರಂದು ಕದನ ವಿರಾಮ ಜಾರಿಗೆ ಬರುವವರೆಗೆ ಇಸ್ರೇಲ್ ಸೇನೆಯು ಗಾಝಾ ಪಟ್ಟಿಯ ಮೇಲೆ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಮತ್ತು ಭೀಕರವಾದ ನಿರಂತರ ಸರಣಿ ದಾಳಿಗಳನ್ನು ನಡೆಸಿತ್ತು.

ಎರಡು ವರ್ಷಗಳ ಕಾಲ ನಡೆದ ಈ ಸುದೀರ್ಘ ಸಂಘರ್ಷದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ, ಭೂಸೇನಾ ಮತ್ತು ನೌಕಾಸೇನಾ ಆಕ್ರಮಣಗಳು ಇಡೀ ಗಾಝಾವನ್ನು ಸ್ಮಶಾನವಾಗಿಸಿದವು. 

ಅಕ್ಟೋಬರ್ 7ರ ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ತಕ್ಷಣವೇ ಗಾಝಾವನ್ನು ಸಂಪೂರ್ಣ ದಿಗ್ಬಂಧನಕ್ಕೊಳಪಡಿಸಿತ್ತು. ಇತಿಹಾಸದಲ್ಲೇ ಅತ್ಯಂತ ಭಾರಿ ಪ್ರಮಾಣದ ಬಾಂಬ್‌ಗಳನ್ನು ಗಾಝಾ ನಗರದ ಮೇಲೆ ಸುರಿದಿತ್ತು.

ಅಕ್ಟೋಬರ್ 27, 2023ರಂದು ಇಸ್ರೇಲಿ ಟ್ಯಾಂಕ್‌ಗಳು ಮತ್ತು ಪದಾತಿದಳವು ಉತ್ತರ ಗಾಝಾ ಮೂಲಕ ಅಧಿಕೃತವಾಗಿ ಒಳನುಗ್ಗಿದ್ದವು.

ಇಸ್ರೇಲ್ ತನ್ನ ಆಕ್ರಮಣವನ್ನು ದಕ್ಷಿಣದತ್ತ ವಿಸ್ತರಿಸಿ, ಹಮಾಸ್‌ನ ಪ್ರಮುಖ ನೆಲೆಯೆಂದು ಆರೋಪಿಸಿ ಖಾನ್ ಯೂನಿಸ್ ನಗರದ ಮೇಲೆ ಮೂರು ಪ್ರತ್ಯೇಕ ಹಂತಗಳಲ್ಲಿ ಭೀಕರ ದಾಳಿ ನಡೆಸಿ ಇಡೀ ನಗರವನ್ನು ಧ್ವಂಸಗೊಳಿಸಿತ್ತು.

ಕದನ ವಿರಾಮಕ್ಕೂ ಮುನ್ನ 2025ರ ಮಧ್ಯಭಾಗದಲ್ಲಿ ಇಸ್ರೇಲ್ ಮತ್ತೊಮ್ಮೆ ಉತ್ತರ ಗಾಝಾ ಮತ್ತು ಗಾಝಾ ನಗರದ ಮೇಲೆ ಕರಾರುವಾಕ್ಕಾದ ಮತ್ತು ಅತ್ಯಂತ ತೀವ್ರವಾದ ಅಂತಿಮ ವಾಯುದಾಳಿಗಳನ್ನು ನಡೆಸಿತ್ತು.

ಅಕ್ಟೋಬರ್ 10, 2025ರ ಒಪ್ಪಂದದ ವೇಳೆಗೆ ಲಭ್ಯವಾದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಎರಡು ವರ್ಷಗಳ ಕಾಲ ಇಸ್ರೇಲ್ ದಾಳಿಗಳಿಂದಾಗಿ 67,900ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.

ಸುಮಾರು 1,70,000ಕ್ಕೂ ಹೆಚ್ಚು ನಾಗರಿಕರು ತೀವ್ರವಾಗಿ ಗಾಯಗೊಂಡು ಅಂಗವಿಕಲರಾಗಿದ್ದಾರೆ. ಒಟ್ಟು ಮೃತಪಟ್ಟವರಲ್ಲಿ ಶೇಕಡ 60ಕ್ಕಿಂತ ಹೆಚ್ಚು ಕೇವಲ ಅಮಾಯಕ ಮಹಿಳೆಯರು, ಮಕ್ಕಳು ಮತ್ತು ವೃದ್ಧರಾಗಿದ್ದರು.

ವಿಶ್ವಸಂಸ್ಥೆಯ (UNRWA) 380ಕ್ಕೂ ಹೆಚ್ಚು ಆಡಳಿತ ಸಿಬ್ಬಂದಿ ಹಾಗೂ ನೂರಾರು ವೈದ್ಯರು, ಪತ್ರಕರ್ತರು ಇಸ್ರೇಲ್ ಬಾಂಬ್‌ಗಳಿಗೆ ಬಲಿಯಾದರು.

ಮೂಲಸೌಕರ್ಯ ಮತ್ತು ಆಸ್ತಿಪಾಸ್ತಿಗಳ ಸಂಪೂರ್ಣ ವಿನಾಶ

ಕದನ ವಿರಾಮ ಘೋಷಣೆಯಾಗುವ ಹೊತ್ತಿಗೆ ಗಾಝಾ ಪಟ್ಟಿಯ ಶೇಕಡ 90ಕ್ಕಿಂತ ಹೆಚ್ಚು ನಾಗರಿಕ ಮೂಲಸೌಕರ್ಯಗಳು ಮತ್ತು ಶೇಕಡ 92ರಷ್ಟು ವಸತಿ ಕಟ್ಟಡಗಳು ಇಸ್ರೇಲಿ ದಾಳಿಯಿಂದ ಸಂಪೂರ್ಣವಾಗಿ ಅಥವಾ ಭಾಗಶಃ ನಾಶವಾಗಿದ್ದವು.

ಗಾಝಾದಲ್ಲಿದ್ದ ಬಹುತೇಕ ಎಲ್ಲಾ ಪ್ರಮುಖ ಆಸ್ಪತ್ರೆಗಳು (ಅಲ್-ಶಿಫಾ, ನಾಸರ್ ಆಸ್ಪತ್ರೆ ಸೇರಿದಂತೆ), ಧಾರ್ಮಿಕ ಕೇಂದ್ರಗಳು ಮತ್ತು ಶಾಲೆಗಳನ್ನು ಇಸ್ರೇಲ್ ಸೇನೆ ಬಾಂಬ್ ಹಾಕಿ ಧ್ವಂಸಗೊಳಿಸಿದೆ.

ಗಾಝಾದ ಒಟ್ಟು 22 ಲಕ್ಷ ಜನಸಂಖ್ಯೆಯಲ್ಲಿ ಶೇಕಡ 90 ರಷ್ಟು ಜನ (ಸುಮಾರು 20 ಲಕ್ಷ ನಾಗರಿಕರು) ತಮ್ಮ ಸ್ವಂತ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ನಿರಂತರ ಎರಡು ವರ್ಷಗಳ ಕಾಲ ಇಸ್ರೇಲ್ ನಡೆಸಿದ ಈ ಭೀಕರ ದಾಳಿಗಳ ನಂತರ, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಎದುರಿಸಿದ ನರಮೇಧದ ಮೊಕದ್ದಮೆ, ಜಾಗತಿಕ ರಾಜತಾಂತ್ರಿಕ ಒತ್ತಡ ಹಾಗೂ ಅಮೆರಿಕ ಬೆಂಬಲಿತ ಶಾಂತಿ ಯೋಜನೆಯ ಅನ್ವಯ, ಇಸ್ರೇಲ್ ಮತ್ತು ಹಮಾಸ್ ಅಂತಿಮವಾಗಿ ಅಕ್ಟೋಬರ್ 10, 2025 ರಂದು ಕದನ ವಿರಾಮಕ್ಕೆ ಒಪ್ಪಿಕೊಂಡವು. ಇದರೊಂದಿಗೆ ಇಸ್ರೇಲ್ ಸೇನೆಯು ಗಾಝಾದ ತನ್ನ ಮುಂಚೂಣಿ ನೆಲೆಗಳಿಂದ ಭಾಗಶಃ ಹಿಂದೆ ಸರಿದಿದೆ.

ಯೆಲ್ಲೋ ಲೈನ್ ಎಂಬ ಹೊಸ ತಂತ್ರ

‘ಯೆಲ್ಲೋ ಲೈನ್’ಎಂಬುವುದು ಇಸ್ರೇಲ್ ರಕ್ಷಣಾ ಪಡೆಗಳು ಗಾಝಾ ಪಟ್ಟಿ ಮತ್ತು ದಕ್ಷಿಣ ಲೆಬನಾನ್‌ನಲ್ಲಿ ತಮ್ಮ ದೀರ್ಘಾವಧಿಯ ಮಿಲಿಟರಿ ನಿಯಂತ್ರಣವನ್ನು ಸಾಧಿಸಲು ಮತ್ತು ಬಫರ್ ಜೋನ್ ಸೃಷ್ಟಿಸಲು ರೂಪಿಸಿರುವ ಒಂದು ತಾತ್ಕಾಲಿಕ ಮಿಲಿಟರಿ ಗಡಿ ರೇಖೆಯಾಗಿದೆ. 

ಕದನ ವಿರಾಮ ಒಪ್ಪಂದಗಳ ನಿಯಮಗಳನ್ನು ಮೀರಿ, ಇಸ್ರೇಲ್ ಈ ರೇಖೆಯನ್ನು ಬಳಸಿಕೊಂಡು ವಿವಿಧ ರಾಷ್ಟ್ರಗಳ ಭೂಮಿಯನ್ನು ವ್ಯವಸ್ಥಿತವಾಗಿ ತನ್ನ ವಶಕ್ಕೆ ಪಡೆಯುತ್ತಿದೆ ಎಂಬ ತೀವ್ರ ಆಕ್ಷೇಪಗಳು ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿವೆ. 

ಅಕ್ಟೋಬರ್ 2025ರಲ್ಲಿ ಅಮೆರಿಕ ಪ್ರಸ್ತಾಪಿಸಿದ ಗಾಝಾ ಶಾಂತಿ ಯೋಜನೆಯಡಿ ಕದನ ವಿರಾಮ ಘೋಷಣೆಯಾದಾಗ ಈ ಯೆಲ್ಲೋ ಲೈನ್ ಅನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು. ಇಸ್ರೇಲ್ ಸೇನೆಯು ತಾವು ನಿಯಂತ್ರಿಸುವ ಪ್ರದೇಶವನ್ನು ಗುರುತಿಸಲು ಗಾಝಾದೊಳಗೆ ಹಳದಿ ಬಣ್ಣ ಬಳಿದ ಕಾಂಕ್ರೀಟ್ ಬ್ಲಾಕ್‌ಗಳನ್ನು ಅಳವಡಿಸಿದೆ.

ಮೂಲ ಒಪ್ಪಂದದ ಪ್ರಕಾರ, ಈ ರೇಖೆಯು ಗಾಝಾದ ಒಟ್ಟು ಭೂಪ್ರದೇಶದ ಶೇಕಡ 53ರಷ್ಟು ಭಾಗವನ್ನು ಇಸ್ರೇಲ್ ಮಿಲಿಟರಿ ನಿಯಂತ್ರಣದಲ್ಲೂ, ಉಳಿದ ಶೇಕಡ 47ರಷ್ಟು ಪಶ್ಚಿಮ ಭಾಗವನ್ನು ಪ್ಯಾಲೆಸ್ತೀನಿಯರ ನಿಯಂತ್ರಣದಲ್ಲೂ ಇರಿಸಬೇಕಿತ್ತು. 

ಬಿಬಿಸಿ ಮತ್ತು ಸ್ಯಾಟಲೈಟ್ ಚಿತ್ರಗಳ ವರದಿಯ ಪ್ರಕಾರ, ಇಸ್ರೇಲ್ ಸೇನೆಯು ಈ ಹಳದಿ ಕಾಂಕ್ರೀಟ್ ಬ್ಲಾಕ್‌ಗಳನ್ನು ಕದನ ವಿರಾಮದ ನಿಯಮಗಳಿಗೆ ವಿರುದ್ಧವಾಗಿ ರಹಸ್ಯವಾಗಿ ಪಶ್ಚಿಮದ ಕಡೆಗೆ (ಗಾಝಾದ ಒಳಭಾಗಕ್ಕೆ) ನೂಕುತ್ತಿದೆ. ಪ್ರಸ್ತುತ ಮೇ 2026ರ ಇತ್ತೀಚಿನ ವರದಿಯಂತೆ, ಇಸ್ರೇಲ್ ಗಾಝಾದ ಶೇಕಡ 64ರಿಂದ 70ರಷ್ಟು ಭಾಗವನ್ನು ತನ್ನ ಯೆಲ್ಲೋ ಲೈನ್ ವ್ಯಾಪ್ತಿಗೆ ತಂದುಕೊಂಡಿದೆ. 

ಈ ಯೆಲ್ಲೋ ಲೈನ್ ದಾಟಿ ಇಸ್ರೇಲ್ ನಿಯಂತ್ರಿತ ಪ್ರದೇಶದ ಕಡೆಗೆ ಬರುವ ಯಾವುದೇ ಪ್ಯಾಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ ಸೇನೆಯು ನೇರ ಗುಂಡಿನ ದಾಳಿ ನಡೆಸುತ್ತಿದೆ. ಈ ವಲಯದಲ್ಲಿ ನೂರಾರು ಮನೆಗಳನ್ನು ನೆಲಸಮಗೊಳಿಸಲಾಗಿದೆ.

ಲೆಬನಾನ್ ಮೇಲೆ ಗಾಝಾದಂತೆ ಆಕ್ರಮಣ

ಇಸ್ರೇಲ್ ಸೇನೆಯು ಈ ವರ್ಷದಲ್ಲಿ ಲೆಬನಾನ್ ಮೇಲೆ ನಡೆಸುತ್ತಿರುವ ಆಕ್ರಮಣವು, 2023ರಿಂದ ಗಾಝಾದಲ್ಲಿ ಅದು ಅನುಸರಿಸಿದ ವಿನಾಶಕಾರಿ ಮಿಲಿಟರಿ ತಂತ್ರಗಳನ್ನೇ ಸಂಪೂರ್ಣವಾಗಿ ಹೋಲುತ್ತಿದೆ.

ಇದನ್ನು ಜಾಗತಿಕ ರಾಜತಾಂತ್ರಿಕರು ಮತ್ತು ಮಿಲಿಟರಿ ವಿಶ್ಲೇಷಕರು ಲೆಬನಾನ್‌ನ “ಗಾಝಾಫಿಕೇಶನ್” (Gazafication) ಎಂದು ಕರೆದಿದ್ದಾರೆ.

ಯುದ್ಧದ ಆರಂಭದಲ್ಲಿ ಇಸ್ರೇಲ್ ಉತ್ತರ ಗಾಝಾದ ನಾಗರಿಕರಿಗೆ ತಕ್ಷಣ ದಕ್ಷಿಣಕ್ಕೆ ವಲಸೆ ಹೋಗುವಂತೆ ಆದೇಶಿಸಿ, ನಂತರ ಇಡೀ ನಗರವನ್ನು ಧ್ವಂಸಗೊಳಿಸಿತ್ತು.

ಅದೇ ರೀತಿ ಇಸ್ರೇಲ್ ಸೇನೆಯು ಇತ್ತೀಚೆಗೆ ದಕ್ಷಿಣ ಲೆಬನಾನ್‌ನ ಜಹ್ರಾನಿ ಮತ್ತು ಲಿಟಾನಿ ನದಿಯ ದಕ್ಷಿಣ ಭಾಗದಲ್ಲಿರುವ ಎಲ್ಲಾ ನಾಗರಿಕರಿಗೆ ತಕ್ಷಣ ಮನೆಗಳನ್ನು ಖಾಲಿ ಮಾಡಿ ಉತ್ತರಕ್ಕೆ ತೆರಳುವಂತೆ ಸಾಮೂಹಿಕ ಆದೇಶ ಹೊರಡಿಸಿದೆ. ಇದರ ಪರಿಣಾಮವಾಗಿ ಈಗಾಗಲೇ 12 ಲಕ್ಷಕ್ಕೂ ಹೆಚ್ಚು ಲೆಬನಾನ್ ನಾಗರಿಕರು ನಿರಾಶ್ರಿತರಾಗಿದ್ದಾರೆ.

ಗಾಝಾದಲ್ಲಿ ಹಮಾಸ್ ಸುರಂಗಗಳನ್ನು ನಾಶಪಡಿಸುವ ನೆಪದಲ್ಲಿ ಇಸ್ರೇಲ್ ಇಡೀ ವಸತಿ ಸಮುಚ್ಚಯಗಳನ್ನು ಡೈನಮೈಟ್ ಇಟ್ಟು ಗಾಳಿಯಲ್ಲಿ ತೇಲಿಸಿ ನೆಲಸಮ ಮಾಡಿತ್ತು.

ಅದೇ ರೀತಿ ದಕ್ಷಿಣ ಲೆಬನಾನ್‌ನ ಗಡಿ ಗ್ರಾಮಗಳಾದ ತೈಬೆಹ್, ನಕೌರಾ ಮತ್ತು ಡೀರ್ ಸೆರಿಯಾನ್‌ಗಳಲ್ಲಿ ಇಸ್ರೇಲ್ ಸೇನೆಯು ಒಳನುಗ್ಗಿ, ಪ್ರತಿಯೊಂದು ಮನೆಯನ್ನು ಬಾಂಬ್ ಇಟ್ಟು ಧ್ವಂಸಗೊಳಿಸುತ್ತಿದೆ. ನಾಗರಿಕರು ಭವಿಷ್ಯದಲ್ಲಿ ಮರಳಿ ಬಂದು ವಾಸಿಸದಂತೆ ಇಡೀ ಹಳ್ಳಿಗಳನ್ನೇ ಸ್ಮಶಾನವಾಗಿಸಲಾಗುತ್ತಿದೆ.

ದನ ವಿರಾಮದ ನಿಯಮಗಳನ್ನು ಮೀರಿ ಇಸ್ರೇಲ್ ಗಾಝಾದೊಳಗೆ ಹಳದಿ ಕಾಂಕ್ರೀಟ್ ಬ್ಲಾಕ್‌ಗಳನ್ನು ಬಳಸಿ ‘ಯೆಲ್ಲೋ ಲೈನ್’ ಸ್ಥಾಪಿಸಿ, ಶೇಕಡ 70ರಷ್ಟು ಭಾಗವನ್ನು ತನ್ನ ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ಇದೇ ಮಾದರಿಯನ್ನು ದಕ್ಷಿಣ ಲೆಬನಾನ್‌ನಲ್ಲೂ ಜಾರಿಗೆ ತರಲಾಗಿದ್ದು, ಇಸ್ರೇಲ್ ಸೇನೆ ಅಲ್ಲಿಯೂ ‘ಯೆಲ್ಲೋ ಲೈನ್’ ಘೋಷಿಸಿದೆ. ಈ ರೇಖೆಯ ವ್ಯಾಪ್ತಿಯಲ್ಲಿ ಬರುವ 55ಕ್ಕೂ ಹೆಚ್ಚು ಲೆಬನಾನ್ ಹಳ್ಳಿಗಳನ್ನು ‘ನೋ-ಗೋ ಜೋನ್’ ಎಂದು ಘೋಷಿಸಿ, ಅಲ್ಲಿ ತನ್ನದೇ ಆದ ಮಿಲಿಟರಿ ಔಟ್‌ಪೋಸ್ಟ್‌ಗಳನ್ನು ನಿರ್ಮಿಸುತ್ತಿದೆ.

ಮೂಲಸೌಕರ್ಯ ಮತ್ತು ಇತಿಹಾಸದ ಮೇಲಿನ ದಾಳಿ

ಗಾಝಾದಲ್ಲಿ ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ಶಿಬಿರಗಳನ್ನು ಹಮಾಸ್ ನೆಲೆಗಳೆಂದು ಆರೋಪಿಸಿ ಇಸ್ರೇಲ್ ಧ್ವಂಸಗೊಳಿಸಿತ್ತು.

ಇತ್ತೀಚಿನ ಮೇ ತಿಂಗಳ ತೀವ್ರ ಆಕ್ರಮಣದ ವೇಳೆ, ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್‌ನಲ್ಲಿರುವ ಅತ್ಯಂತ ಆಯಕಟ್ಟಿನ 900 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಬ್ಯೂಫೋರ್ಟ್ ಕೋಟೆಯನ್ನು ತನ್ನ ಮಿಲಿಟರಿ ವಶಕ್ಕೆ ಪಡೆದುಕೊಂಡಿದೆ ಮತ್ತು ಬೈರುತ್‌ನ ನಾಗರಿಕ ಜನನಿಬಿಡ ಪ್ರದೇಶಗಳ ಮೇಲೆ ನಿರಂತರ ವಾಯುದಾಳಿ ನಡೆಸುತ್ತಿದೆ.

ಲೆಬನಾನ್‌ನಲ್ಲಿ ಕೇವಲ ಈ ವರ್ಷದ ಇಸ್ರೇಲ್ ದಾಳಿಗಳಲ್ಲೇ 3,350ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

ಏಪ್ರಿಲ್‌ನಲ್ಲಿ ನಡೆದ ‘ಬ್ಲ್ಯಾಕ್ ವೆಡ್ನೆಸ್‌ಡೇ’ ಕಾರ್ಯಾಚರಣೆಯಲ್ಲಿ ಇಸ್ರೇಲ್ ಕೇವಲ 10 ನಿಮಿಷಗಳಲ್ಲಿ 100ಕ್ಕೂ ಹೆಚ್ಚು ಕಡೆ ಬಾಂಬ್ ಹಾಕಿ ಒಂದೇ ದಿನ 357 ಜನರನ್ನು ಕೊಂದಿದೆ. ಇದು ಗಾಝಾದ ಮೇಲಿನ ಆರಂಭಿಕ ಭೀಕರ ವಾಯುದಾಳಿಗಳನ್ನು ನೆನಪಿಸುವಂತಿತ್ತು.

ಲೆಬನಾನ್ ಪ್ರಧಾನಿ ನವಾಫ್ ಸಲಾಮ್ ಅವರು, ಇಸ್ರೇಲ್ ತನ್ನ ದೇಶವನ್ನು ಮತ್ತೊಂದು ಗಾಝಾವನ್ನಾಗಿ ಮಾಡಲು ಹೊರಟಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಾಗತಿಕ ಸಮುದಾಯದ ತುರ್ತು ಹಸ್ತಕ್ಷೇಪಕ್ಕೆ ಮನವಿ ಮಾಡಿದ್ದಾರೆ.

ಸಿರಿಯಾ ಮೇಲೂ ಆಕ್ರಮಣ

ಇಸ್ರೇಲ್ ಸೇನೆಯು ಸಿರಿಯಾ ಗಡಿಯಲ್ಲಿ (ಗೋಲ್ಡನ್ ಹೈಟ್ಸ್ ಮತ್ತು ದಕ್ಷಿಣ ಸಿರಿಯಾ) ತನ್ನ ಮಿಲಿಟರಿ ಆಕ್ರಮಣವನ್ನು ತೀವ್ರವಾಗಿ ವಿಸ್ತರಿಸಿದ್ದು, ಇಸ್ರೇಲಿ ಅತಿರೇಕದ ವಸಾಹತುಗಾರರು ಸಿರಿಯಾದ ಸಾರ್ವಭೌಮ ಭೂಪ್ರದೇಶದೊಳಗೆ ನುಗ್ಗಿ ಹೊಸ ಅಕ್ರಮ ವಸಾಹತುಗಳನ್ನು ಸ್ಥಾಪಿಸಲು ದೌರ್ಜನ್ಯ ಎಸಗುತ್ತಿದ್ದಾರೆ. 2024ರ ಕೊನೆಯಲ್ಲಿ ಸಿರಿಯಾದ ಅಸ್ಸಾದ್ ಆಡಳಿತ ಪತನಗೊಂಡಾಗಿನಿಂದ ಇಸ್ರೇಲ್ ಈ ಗಡಿಯಲ್ಲಿ ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದೆ. 

ಸಿರಿಯನ್ ರಿಸರ್ಚ್ ಸೆಂಟರ್ (Sijil Centre) ವರದಿಯ ಪ್ರಕಾರ, ಇಸ್ರೇಲ್ ಸೇನೆಯು ಸಿರಿಯಾ ಭೂಪ್ರದೇಶದೊಳಗೆ 1,600ಕ್ಕೂ ಹೆಚ್ಚು ಬಾರಿ ಮಿಲಿಟರಿ ನಿಯಮಗಳನ್ನು ಉಲ್ಲಂಘಿಸಿದೆ. ಮಾರ್ಚ್ 2026ರಲ್ಲಿ ಅತ್ಯಂತ ಗರಿಷ್ಠ ಮಟ್ಟದ ದಾಳಿಗಳು ನಡೆದಿದ್ದು, ಒಂದೇ ತಿಂಗಳಲ್ಲಿ 121 ವೈಮಾನಿಕ ದಾಳಿಗಳನ್ನು ಒಳಗೊಂಡಂತೆ 321 ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.

ಇಸ್ರೇಲ್ ರಕ್ಷಣಾ ಪಡೆಗಳು ಕೇವಲ ಗಡಿಯ ನಿಗದಿತ ಬಫರ್ ಝೋನ್ ಮಾತ್ರವಲ್ಲದೆ, ದಕ್ಷಿಣ ಸಿರಿಯಾದ ಒಳಕ್ಕೆ ನುಗ್ಗಿ 800ಕ್ಕೂ ಹೆಚ್ಚು ಬಾರಿ ಸರಣಿ ದಾಳಿಗಳನ್ನು ನಡೆಸಿವೆ ಎಂದು ಅಲ್ ಜಝೀರಾ ನಕ್ಷೆಗಳ ಸಹಿತ ಬಹಿರಂಗಪಡಿಸಿದೆ. 

ದಕ್ಷಿಣ ಸಿರಿಯಾದ ಕುನೇತ್ರಾ ಪ್ರಾಂತ್ಯ ಸೇರಿದಂತೆ ಸಿರಿಯಾದ ಸಾರ್ವಭೌಮ ಭೂಮಿಯೊಳಗೆ ಇಸ್ರೇಲ್ ಈಗಾಗಲೇ 9 ಹೊಸ ಮಿಲಿಟರಿ ಬೇಸ್‌ಗಳನ್ನು ಮತ್ತು ಕಾವಲು ಗೋಪುರಗಳನ್ನು ಅಕ್ರಮವಾಗಿ ನಿರ್ಮಿಸಿದೆ. 

ಸಿರಿಯಾದಿಂದ ಲೆಬನಾನ್‌ಗೆ ಶಸ್ತ್ರಾಸ್ತ್ರ ಸರಬರಾಜಾಗುತ್ತಿದೆ ಎಂದು ಆರೋಪಿಸಿ ಇಸ್ರೇಲ್ ಸೇನೆಯು ಜಂಟಿ ಗಡಿಭಾಗಗಳಲ್ಲಿ ನಿರಂತರ ಡ್ರೋನ್ ದಾಳಿಗಳನ್ನು ನಡೆಸಿ ನಾಗರಿಕರನ್ನು ಹತ್ಯೆ ಮಾಡುತ್ತಿದೆ. 

ಇಸ್ರೇಲ್ ವಸಾಹತುಗಾರರ ದುಷ್ಕೃತ್ಯಗಳು

ಏಪ್ರಿಲ್ 2023ರಲ್ಲಿ ಭಾರಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇಸ್ರೇಲ್‌ನ ಸಶಸ್ತ್ರ ಯಹೂದಿ ವಸಾಹತುಗಾರರ ಗುಂಪುಗಳು ಸಿರಿಯಾ ಗಡಿಯನ್ನು ದಾಟಿ ನೇರವಾಗಿ ಸಿರಿಯಾದ ದ್ರೂಜ್ (Druze) ಗ್ರಾಮಗಳ ಒಳಗೆ ನುಗ್ಗಿ ಅಲ್ಲಿನ ಮನೆಗಳ ಮೇಲೆ ಹಳದಿ ಬಾವುಟ ಹಾರಿಸಿ ದಬ್ಬಾಳಿಕೆ ನಡೆಸಿವೆ.

ಇಸ್ರೇಲಿ ವಸಾಹತುಗಾರರು ಸಿರಿಯಾದ ಆಕ್ರಮಿತ ಪ್ರದೇಶಗಳಲ್ಲಿ ನಿಂತು ಧಾರ್ಮಿಕ ನೃತ್ಯ ಮಾಡುತ್ತಾ, “ಬೈಬಲ್ ನಕ್ಷೆಯ ಪ್ರಕಾರ ಸಿರಿಯಾದ ಭಾಗಗಳು ನಮಗೆ ಸೇರಬೇಕು” ಎಂದು ಬಹಿರಂಗವಾಗಿ ಘೋಷಿಸುತ್ತಿದ್ದಾರೆ. ಇವರ ಈ ಅಕ್ರಮ ನುಸುಳುವಿಕೆಗೆ ಇಸ್ರೇಲ್ ಮಿಲಿಟರಿ ಸಂಪೂರ್ಣ ರಕ್ಷಣೆ ನೀಡುತ್ತಿದೆ.

ಏಪ್ರಿಲ್ 17, 2026ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕ್ಯಾಬಿನೆಟ್ ಆಕ್ರಮಿತ ಸಿರಿಯನ್ ಗೋಲಾನ್ ಹೈಟ್ಸ್‌ನಲ್ಲಿ ವಸಾಹತುಗಳನ್ನು ವಿಸ್ತರಿಸಲು $334 ಮಿಲಿಯನ್ (ಸುಮಾರು 2,800 ಕೋಟಿ ರೂ.) ಬೃಹತ್ ಯೋಜನೆಯನ್ನು ಅನುಮೋದಿಸಿದೆ. 

ಈ ಯೋಜನೆಯಡಿಯಲ್ಲಿ ಗೋಲಾನ್ ಹೈಟ್ಸ್‌ನಲ್ಲಿರುವ ‘ಕಾತ್ಸ್ರಿನ್’ (Katzrin) ಎಂಬ ಪ್ರದೇಶವನ್ನು ಇಸ್ರೇಲ್‌ನ ಪ್ರಮುಖ ನಗರವನ್ನಾಗಿ ಪರಿವರ್ತಿಸಿ, ಅಲ್ಲಿ ಸಾವಿರಾರು ಹೊಸ ಯಹೂದಿ ವಸಾಹತುಗಾರರನ್ನು ತಂದು ಮುಸ್ಲಿಂ ಮತ್ತು ದ್ರೂಜ್ ಸಿರಿಯನ್ನರನ್ನು ವ್ಯವಸ್ಥಿತವಾಗಿ ಒಕ್ಕಲೆಬ್ಬಿಸಲಾಗುತ್ತಿದೆ.

ಮಾನವ ಹಕ್ಕುಗಳ ಸಂಸ್ಥೆಯಾದ ಹ್ಯೂಮನ್ ರೈಟ್ಸ್ ವಾಚ್ ಇಸ್ರೇಲ್ ಸರ್ಕಾರದ ಈ ಹಣಕಾಸು ಯೋಜನೆಯನ್ನು “ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಯುದ್ಧ ಅಪರಾಧ” ಎಂದು ಕಟುವಾಗಿ ಖಂಡಿಸಿದೆ. ವಿಶ್ವಸಂಸ್ಥೆ ಮತ್ತು ಯೂರೋಪಿಯನ್ ಯೂನಿಯನ್ ಕೂಡ ಗೋಲಾನ್ ಹೈಟ್ಸ್ ಸಿರಿಯಾ ದೇಶಕ್ಕೆ ಸೇರಿದ ಆಕ್ರಮಿತ ಭೂಮಿಯಾಗಿದ್ದು, ಇಸ್ರೇಲ್‌ನ ಈ ವಸಾಹತುಶಾಹಿ ಧೋರಣೆ ಕಾನೂನುಬಾಹಿರ ಎಂದು ಎಚ್ಚರಿಸಿವೆ.

ಒಟ್ಟಿನಲ್ಲಿ ಇಸ್ರೇಲ್ ಗಾಝಾ, ಪಶ್ಚಿಮ ದಂಡೆ, ಲೆಬನಾನ್, ಸಿರಿಯಾ ಸೇರಿದಂತೆ ತನ್ನ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ ಮಾರಣಹೋಮ ನಡೆಸುತ್ತಿದೆ. ಜನವಸತಿ ಪ್ರದೇಶಗಳನ್ನು ಸಂಪೂರ್ಣ ಧ್ವಂಸಗೊಳಿಸಿದೆ.

ಬಂಧಿತರ ಪ್ಯಾಲೆಸ್ತೀನಿಯರಿಗೆ ಚಿತ್ರಹಿಂಸೆ

ಇಸ್ರೇಲ್ ಅಕ್ರಮವಾಗಿ ಬಂಧಿಸಿಟ್ಟಿರುವ ಪ್ಯಾಲೆಸ್ತೀನಿಯರಿಗೆ ಜೈಲಿನಲ್ಲಿ ದೈಹಿಕ, ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಪ್ರತಿದಿನ ವರದಿಯಾಗುತ್ತಿದೆ. ಅಲ್ಲಿನ ತೀವ್ರ ಬಲಪಂಥೀಯ ಸಚಿವ ಇತಾಮರ್ ಬೆನ್-ಗ್ವಿರ್ ಪ್ಯಾಲೆಸ್ತೀನಿಯರನ್ನು ಅತ್ಯಂತ ಕ್ರೂರವಾಗಿ ಹಿಂಸಿಸುವುದನ್ನು ಬಹಿರಂಗವಾಗಿ ಪ್ರತಿಪಾದಿಸುತ್ತಾರೆ.

ಈ ಹಿಂದೆ ಇತಾಮರ್ ಬೆನ್-ಗ್ವಿರ್ ಅವರು ಇಸ್ರೇಲ್‌ನ ರಿಮೋನ್, ಓಫರ್ ಮತ್ತು ಕ್ತ್ಜಿಯೋಟ್ ಜೈಲುಗಳಿಗೆ ಭೇಟಿ ನೀಡಿ, ಅಲ್ಲಿ ಬಂಧನದಲ್ಲಿರುವ ಪ್ಯಾಲೆಸ್ತೀನ್ ಕೈದಿಗಳನ್ನು ಮತ್ತು ಪ್ರಮುಖ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌತಿ ಅವರನ್ನು ಭೇಟಿ ಮಾಡಿ ಉದ್ರೇಕಕಾರಿ ಮಾತುಗಳನ್ನಾಡಿದ್ದರು.

ಜೈಲಿನಲ್ಲಿ ಏಕಾಂತ ಸೆರೆವಾಸದಲ್ಲಿರುವ ಕೈದಿಗಳಿಗೆ ಬೆದರಿಕೆ ಹಾಕುವ ಹಾಗೂ ಅವರನ್ನು ನಿಂದಿಸುವ ವೀಡಿಯೊಗಳನ್ನು ಬೆನ್-ಗ್ವಿರ್ ಅವರೇ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ಇಸ್ರೇಲ್‌ನ ಜೈಲುಗಳನ್ನು ಐಷಾರಾಮಿ ಹೋಟೆಲ್‌ಗಳಂತೆ ನಡೆಸಲು ಬಿಡುವುದಿಲ್ಲ ಎಂದು ಘೋಷಿಸಿದ ಅವರು, ಪ್ಯಾಲೆಸ್ತೀನ್ ಕೈದಿಗಳಿಗೆ ನೀಡಲಾಗುವ ಸೌಲಭ್ಯಗಳನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಸಿದ್ದಾರೆ (ಟಿವಿ, ರೇಡಿಯೋ ಮತ್ತು ಸಿಹಿ ತಿಂಡಿಗಳನ್ನು ನಿಷೇಧಿಸಿದ್ದಾರೆ).

ಜೈಲು ಭೇಟಿಯ ಸಂದರ್ಭದಲ್ಲಿ ಅವರು ಪ್ಯಾಲೆಸ್ತೀನ್ ಮೂಲದ ಕೈದಿಗಳಿಗೆ ಗಲ್ಲು ಶಿಕ್ಷೆ, ಇಂಜೆಕ್ಷನ್ ಅಥವಾ ಎಲೆಕ್ಟ್ರಿಕ್ ಚೇರ್ ಮೂಲಕ ಮರಣದಂಡನೆ ಜಾರಿಗೆ ತರಬೇಕೆಂದು ಬಹಿರಂಗವಾಗಿ ಪ್ರತಿಪಾದಿಸಿದ್ದಾರೆ. 

ಅವರ ಈ ಜೈಲು ದಾಳಿ ಮಾದರಿಯ ಭೇಟಿಗಳ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಕೈದಿಗಳ ಸೆಲ್‌ಗಳ ಬಳಿ ಸ್ಟನ್ ಗ್ರೆನೇಡ್ (Stun grenades) ಮತ್ತು ಗ್ಯಾಸ್ ಬಳಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ಹಮಾಸ್ ತೀವ್ರವಾಗಿ ಖಂಡಿಸಿವೆ. 

ಕದನ ವಿರಾಮ ಎಂಬ ಕಳ್ಳಾಟ

ಜಗತ್ತಿನ ಕಣ್ಣಿಗೆ ಮಣ್ಣೆರೆಚಲು ಅಮೆರಿಕ-ಇಸ್ರೇಲ್ ಸೇರಿ ಗಾಝಾ ಮತ್ತು ಲೆಬನಾನ್ ವಿಚಾರದಲ್ಲಿ ಕದನ ವಿರಾಮ ಒಪ್ಪಂದದ ಬಗ್ಗೆ ಘೋಷಿಸಿವೆ. ಆದರೆ, ಗಾಝಾ, ಪಶ್ಚಿಮ ದಂಡೆ, ಲೆಬನಾನ್ ಮತ್ತು ಸಿರಿಯಾಗಳಲ್ಲಿ ಇಸ್ರೇಲ್‌ನ ಆಕ್ರಮಣ ನಿರಂತರವಾಗಿ ಮುಂದುವರಿದಿದೆ.

ಕದನ ವಿರಾಮಕ್ಕೂ ಮೊದಲು ಕಣ್ಣೊರೆಸುವ ತಂತ್ರವಾಗಿಯಾದರೂ ಕೆಲ ರಾಷ್ಟ್ರಗಳು ಇಸ್ರೇಲ್‌ನ ಆಕ್ರಮಣದ ವಿರುದ್ದ ಮಾತನಾಡುತ್ತಿದ್ದವು. ಆದರೆ, ಕದನ ವಿರಾಮದ ಬಳಿಕ ರಾಷ್ಟ್ರಗಳು ಬಿಡಿ, ಸದಾ ಕಳವಳ ವ್ಯಕ್ತಪಡಿಸುತ್ತಿದ್ದ ಸಾಮಾನ್ಯ ಜನರು ಕೂಡ ಇಸ್ರೇಲ್‌ ಆಕ್ರಮಣದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ, ಗಾಝಾದಿಂದ ಹಿಡಿದು ಸಿರಿಯಾದವರೆಗೆ ಅಮಾಯಕರ ಜನರ ಅಳಲು ಕೇಳಲು ಯಾರು ಇಲ್ಲದಂತಾಗಿದೆ, ಜೊತೆಗೆ ಇಸ್ರೇಲ್‌ನ ಆಕ್ರಮಣಕ್ಕೆ ಲಗಾಮು ಹಾಕುವವರೂ ಇಲ್ಲದಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...