ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಮನವಿ ಮಾಡಿದ್ದಾರೆ. ಈ ಪ್ರಸ್ತಾವನೆಯ ಕುರಿತು ಮಾತನಾಡಿದ ರಾಜ್‌ಮೋಹನ್, ರಾಜ್ಯದ ಪ್ರತಿಯೊಂದು ಪ್ರಮುಖ ರಾಜಕೀಯ ಪಕ್ಷವೂ ತನ್ನ ಆಳ್ವಿಕೆಯ ಸಂದರ್ಭದಲ್ಲಿ ಶಾಲಾ ಪೌಷ್ಟಿಕಾಂಶ ಕಾರ್ಯಕ್ರಮವನ್ನು ತನ್ನದೇ ಆದ ರೀತಿಯಲ್ಲಿ ಬಲಪಡಿಸಿದೆ ಎಂದು ಹೇಳಿದ್ದಾರೆ.
ಕಾಮರಾಜರ್ ಅವರು ಮಧ್ಯಾಹ್ನದ ಬಿಸಿಊಟದ ಯೋಜನೆಯನ್ನು ಪರಿಚಯಿಸಿದರು, ಕಲೈಜ್ಞರ್ ಕರುಣಾನಿಧಿ ಅವರು ಮೊಟ್ಟೆಯನ್ನು ಸೇರಿಸಿದರು, ಎಂಜಿಆರ್ ಅದನ್ನು ಪೌಷ್ಟಿಕ ಆಹಾರ ಯೋಜನೆಯಾಗಿ ಪರಿವರ್ತಿಸಿದರು ಮತ್ತು ಜಯಲಲಿತಾ ಅವರು ವಾರದ ಉದ್ದಕ್ಕೂ ಮೊಟ್ಟೆ ವಿತರಣೆಯನ್ನು ವಿಸ್ತರಿಸಿದರು. ಅದೇ ರೀತಿ, ಸರ್ಕಾರಿ ಶಾಲೆಗಳಲ್ಲಿ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ಪರಿಚಯಿಸಬೇಕೆಂಬುದು ನನ್ನ ಆಸೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಈ ಪ್ರಸ್ತಾವನೆಯು ಮುಖ್ಯಮಂತ್ರಿ ವಿಜಯ್ ಅವರ ಪರಿಶೀಲನೆಯಲ್ಲಿದ್ದು, ಇನ್ನು ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಶಾಲಾ ಪೌಷ್ಟಿಕಾಂಶ ಕಾರ್ಯಕ್ರಮಗಳಲ್ಲಿ ತಮಿಳುನಾಡು ಬಹುಕಾಲದಿಂದಲೂ ಮುಂದಾಳಾಗಿ ಗುರುತಿಸಿಕೊಂಡಿದೆ. 1950ರ ದಶಕದಲ್ಲಿ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರು ಮೊದಲ ಬಾರಿಗೆ ಮಧ್ಯಾಹ್ನದ ಬಿಸಿಊಟ ಯೋಜನೆಯನ್ನು ಪ್ರಾರಂಭಿಸಿ, ಭಾರತದ ಅತ್ಯಂತ ಯಶಸ್ವಿ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಒಂದಕ್ಕೆ ಬಲವಾದ ಅಡಿಪಾಯ ಹಾಕಿದ್ದರು. ನಂತರ ಬಂದ ಸರ್ಕಾರಗಳು ಆಹಾರದ ಪೌಷ್ಟಿಕಾಂಶದ ಮೌಲ್ಯ ಮತ್ತು ಮೆನುವನ್ನು ಸುಧಾರಿಸುವ ಮೂಲಕ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿದವು.
ಸೆಪ್ಟೆಂಬರ್ 2022 ರಲ್ಲಿ DMK ಸರ್ಕಾರವು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ನೀಡಲು ಮುಖ್ಯಮಂತ್ರಿಯವರ ಉಪಹಾರ ಯೋಜನೆಯನ್ನು (ನಂತರ ಇದನ್ನು ಪೆರುಂತಲೈವರ್ ಕಾಮರಾಜರ್ ಉಪಹಾರ ಯೋಜನೆ ಎಂದು ಮರುನಾಮಕರಣ ಮಾಡಲಾಯಿತು) ಪ್ರಾರಂಭಿಸಿತು. ಮಧ್ಯಾಹ್ನದ ಬಿಸಿಊಟದ ಯೋಜನೆಯ ಜೊತೆಗೆ ಜಾರಿಯಲ್ಲಿರುವ ಈ ಕಾರ್ಯಕ್ರಮವು ಶಾಲಾ ಅವಧಿಯಲ್ಲಿ ಮಕ್ಕಳಿಗೆ ಎರಡು ಬಾರಿಯ ಪೌಷ್ಟಿಕ ಆಹಾರ ಸಿಗುವಂತೆ ನೋಡಿಕೊಳ್ಳುತ್ತಿದೆ.
ರಾಜ್‌ಮೋಹನ್ ಅವರ ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ, ಚಿಕನ್ ಬಿರಿಯಾನಿ ಸೇರ್ಪಡೆಯು ತಮಿಳುನಾಡಿನ ಶಾಲಾ ಊಟದ ಮೆನುವಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಮಹತ್ವದ ಬದಲಾವಣೆಗಳಲ್ಲಿ ಒಂದಾಗಲಿದೆ. ಇದು ಮಕ್ಕಳ ಪೌಷ್ಟಿಕಾಂಶ ಮತ್ತು ಶಾಲೆಗೆ ವಿದ್ಯಾರ್ಥಿಗಳ ಹಾಜರಾತಿಯನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ರಾಜ್ಯದ ಸಾಂಪ್ರದಾಯಿಕ ಕಲ್ಯಾಣ ಯೋಜನೆಗಳನ್ನು ಮುಂದುವರಿಸಿದಂತಾಗುತ್ತದೆ.
ಇದರ ಜೊತೆಗೆ, ಹಾಲಿ ಇರುವ ಶಾಲಾ ಉಪಹಾರದ ಮೆನುವನ್ನು ಬದಲಾಯಿಸುವ ಯೋಜನೆಗಳನ್ನೂ ಸಚಿವರು ಉಲ್ಲೇಖಿಸಿದ್ದಾರೆ. ಪ್ರಸ್ತುತ ಪ್ರತಿ ವಿದ್ಯಾರ್ಥಿಗೆ ಸುಮಾರು 15 ರೂಪಾಯಿ ಹಂಚಿಕೆ ಮಾಡಲಾಗುತ್ತಿದ್ದು, ಪದೇ ಪದೇ ನೀಡಲಾಗುವ ಗೋಧಿ ಮತ್ತು ರವೆ ಉಪ್ಪಿಟ್ಟಿನ ಬದಲಿಗೆ ಹೆಚ್ಚು ಪೌಷ್ಟಿಕ ಮತ್ತು ರುಚಿಕರವಾದ ಪರ್ಯಾಯ ಆಹಾರಗಳನ್ನು ಒದಗಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ಸಚಿವರು ತಿಳಿಸಿದ್ದಾರೆ.


