ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು ಮತದಾರರು ಪಟ್ಟಿಯಿಂದ ಹೊರಬೀಳುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಕರಡು ಪಟ್ಟಿಯಲ್ಲಿ ಹೆಸರಿದ್ದರೂ ಸಹ, ನಾನಾ ತಾಂತ್ರಿಕ ಕಾರಣಗಳನ್ನು ನೀಡಿ ಚುನಾವಣಾ ಆಯೋಗವು ಬರೋಬ್ಬರಿ 32 ಲಕ್ಷ ಮತದಾರರಿಗೆ ನೋಟಿಸ್ ಜಾರಿ ಮಾಡಿದೆ. ವಿಚಿತ್ರವೆಂದರೆ, ಈ ನೋಟಿಸ್ ಪಡೆದವರ ಸಾಲಿನಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಂತಹ ವಿವಿಐಪಿಗಳೂ ಸೇರಿದ್ದಾರೆ.
ನೋಟಿಸ್ ಪಡೆದಿರುವ 32 ಲಕ್ಷ ನಾಗರಿಕರ ಹೆಸರುಗಳು ಕರಡು ಮತದಾರರ ಪಟ್ಟಿಯಲ್ಲಿ ಕಂಡುಬಂದಿದ್ದರೂ, ಅವರು ತಮ್ಮ ಮತದಾನದ ಅರ್ಹತೆಯನ್ನು ದೃಢೀಕರಿಸಲು ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕೆಂದು ಆಯೋಗ ಪಟ್ಟುಹಿಡಿದಿದೆ. ಕರಡು ಪಟ್ಟಿಯಲ್ಲಿನ ತಾಂತ್ರಿಕ ಲೋಪಗಳು, 2002ರ ಮತದಾರರ ಪಟ್ಟಿಯೊಂದಿಗೆ ಮಾಹಿತಿ ತಾಳೆಯಾಗದಿರುವುದು (Unmapping), ಹೆಸರುಗಳಲ್ಲಿನ ಕಾಗುಣಿತ ವ್ಯತ್ಯಾಸ ಹಾಗೂ ಪೋಷಕರು ಮತ್ತು ಮಕ್ಕಳ ವಯಸ್ಸಿನ ಅಂತರದಲ್ಲಿ ಕಂಡುಬಂದ ವ್ಯತ್ಯಾಸಗಳ ಆಧಾರದ ಮೇಲೆ ಈ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ವಿವರಣೆ ನೀಡಿದೆ.
ಹೊಸ ದೆಹಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 98 ವರ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಅವರ ಮಗಳು ಪ್ರತಿಭಾ ಮತ್ತು ಸೊಸೆ ಗೀತಿಕಾ ಅವರ ವಿವರಗಳು 2002ರ ಪಟ್ಟಿಗೆ ತಾಳೆಯಾಗದ ಕಾರಣ ಅವರಿಗೆ ನೋಟಿಸ್ ತಲುಪಿದೆ. ಅದೇ ರೀತಿ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಅವರ ಪತ್ನಿ ಸುದೇಶ್ ಹಾಗೂ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕುಟುಂಬದ ನಿಕಟ ಸಂಬಂಧಿಗಳ ಹೆಸರುಗಳು 2002ರ ಪಟ್ಟಿಯೊಂದಿಗೆ ‘ಮ್ಯಾಪ್’ ಆಗಿಲ್ಲ ಎಂಬ ಕಾರಣ ನೀಡಿ ನೋಟಿಸ್ ನೀಡಲಾಗಿದೆ.
ಇವರಷ್ಟೇ ಅಲ್ಲದೆ, ಸ್ವತಃ ಪ್ರಸ್ತುತ ಚುನಾವಣಾ ಆಯುಕ್ತ ಎಸ್.ಎಸ್. ಸಂಧು, ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸಂಸದರಾದ ಅಭಿಷೇಕ್ ಸಿಂಘ್ವಿ, ಕಪಿಲ್ ಸಿಬಲ್, ಬಾನ್ಸುರಿ ಸ್ವರಾಜ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಪ್ರಧಾನಿ ಮೋದಿಯವರ ಆರ್ಥಿಕ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ದಿವಂಗತ ಬಿಬೇಕ್ ದೆಬ್ರಾಯ್ ಸೇರಿದಂತೆ ಹತ್ತಾರು ಜನಪ್ರತಿನಿಧಿಗಳು ಮತ್ತು ಉನ್ನತಾಧಿಕಾರಿಗಳು ಈ ನೋಟಿಸ್‌ಗಳ ಜಂಜಾಟದಲ್ಲಿ ಸಿಲುಕಿಕೊಂಡಿದ್ದಾರೆ. ದೆಹಲಿ ಸಿಎಂ ರೇಖಾ ಗುಪ್ತಾ ಅವರ ವಯಸ್ಸಿನ ವ್ಯತ್ಯಾಸದ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ನವೆಂಬರ್ 4 ರಂದು ಪ್ರಕಟವಾಗಲಿರುವ ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಲಿದೆ ಎಂದು ಆಯೋಗ ತಿಳಿಸಿದೆ.
ಚುನಾವಣಾ ಆಯೋಗದ ಮೇ 14ರ ನಿರ್ದೇಶನದಂತೆ ನ್ಯಾಯಾಂಗ ವ್ಯವಸ್ಥೆಯ ಪ್ರಮುಖರು, ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಹಾಗೂ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳನ್ನು ಕರಡು ಪಟ್ಟಿಯಲ್ಲಿ ಕಾಯ್ದುಕೊಳ್ಳಲಾಗಿದೆ ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ. ಆಕ್ಷೇಪಣೆಗಳ ಸಲ್ಲಿಕೆ ಅವಧಿಯಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ ತಮ್ಮ ಅರ್ಹತೆಯನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಆಯೋಗ ಹೇಳಿದ್ದರೂ, ಪ್ರಭಾವಿಗಳೇ ಈ ಮಟ್ಟದ ಗೊಂದಲಕ್ಕೆ ಈಡಾಗಿರುವಾಗ ಸಾಮಾನ್ಯ ನಾಗರಿಕರ ಸ್ಥಿತಿ ಏನು ಎಂಬ ಪ್ರಶ್ನೆ ರಾಜಧಾನಿಯಲ್ಲಿ ತೀವ್ರವಾಗಿ ಸದ್ದು ಮಾಡುತ್ತಿದೆ.


