Homeನ್ಯಾಯ ಪಥಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ : 2026ಕ್ಕೆ ದಕ್ಷಿಣ ಭಾರತ ರಾಜ್ಯಗಳಿಗೆ ಕಾದಿದೆಯಾ ಆಘಾತ?

ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ : 2026ಕ್ಕೆ ದಕ್ಷಿಣ ಭಾರತ ರಾಜ್ಯಗಳಿಗೆ ಕಾದಿದೆಯಾ ಆಘಾತ?

- Advertisement -
- Advertisement -

| ರಾಜಶೇಖರ್ ಅಕ್ಕಿ|

2026, ದಕ್ಷಿಣ ಭಾರತದ ರಾಜ್ಯಗಳ ಪಾಲಿಗೆ ಇದು ದೊಡ್ಡ ಆಘಾತ ತಂದೊಡ್ಡಲಿದೆಯಾ? ಲೋಕಸಭಾ ಕ್ಷೇತ್ರಗಳ ಪುನರ್‍ವಿಂಗಡಣೆಯ ರೀತಿರಿವಾಜುಗಳನ್ನು ಅಧ್ಯಯನ ಮಾಡಿದವರು 2026 ದಕ್ಷಿಣ ಭಾರತದ ರಾಜ್ಯಗಳಿಗೆ ತಂದೊಡ್ಡಲಿರುವ ಆಘಾತದ ಸುಳಿವು ನೀಡುತ್ತಿದ್ದಾರೆ.

ಹೌದು, 2026ಕ್ಕೆ ಲೋಕಸಭಾ ಕ್ಷೇತ್ರಗಳ ಪುನರ್‍ವಿಂಗಡಣೆ ನಡೆಯಲಿದೆ. ಹಾಗೇನಾದರು ಅದು ನಡೆದರೆ, ಜನಸಂಖ್ಯೆಯ ಆಧಾರದಲ್ಲಿ ದಕ್ಷಿಣ ರಾಜ್ಯಗಳು ಈಗಿರುವ ತಮ್ಮ ಸಂಸತ್ ಕ್ಷೇತ್ರಗಳ ಸ್ಥಾನಗಳಲ್ಲಿ ಕೆಲವನ್ನು ಕಳೆದುಕೊಂಡರೆ, ಉತ್ತರದ ರಾಜ್ಯಗಳು ಈಗಿರುವುದಕ್ಕಿಂತ ಹೆಚ್ಚು ಸ್ಥಾನಗಳನ್ನು ದಕ್ಕಿಸಿಕೊಳ್ಳಲಿವೆ. ಆಗ ಸಹಜವಾಗಿಯೇ ಸಂಸತ್ ಅಂಗಳದಲ್ಲಿ, ಅರ್ಥಾತ್ ರಾಷ್ಟ್ರ ರಾಜಕಾರಣದಲ್ಲಿ ದಕ್ಷಿಣ ರಾಜ್ಯಗಳ ದನಿ ಮತ್ತಷ್ಟು ಕ್ಷೀಣಿಸಲಿದೆ. ಈಗಲೇ ಹಿಂದಿ ಹಾರ್ಟ್‍ಲ್ಯಾಂಡ್ ರಾಜ್ಯಗಳೇ ದಿಲ್ಲಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಅಂತದ್ದರಲ್ಲಿ ದಕ್ಷಿಣ ಭಾರತೀಯರ ಸಂಸದರ ಸಂಖ್ಯೆ ಮತ್ತಷ್ಟು ಕುಸಿದರೆ, ಮುಗಿದೇಹೋಯ್ತು! ಅಂದಹಾಗೆ, ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದಕ್ಕೆ, ಆ ಮೂಲಕ ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ತುಲನಾತ್ಮಕವಾಗಿ ಅಭಿವೃದ್ಧಿ ಸಾಧಿಸಿರೋದಕ್ಕೆ ದಕ್ಷಿಣ ರಾಜ್ಯಗಳಿಗೆ ಸಿಗಲಿರುವ ಬಹುಮಾನ ಇದು!!

ಅದು ಹೇಗೆ? ಬನ್ನಿ ಈ ಕುರಿತು ತಿಳಿದುಕೊಳ್ಳೋಣ….

ಭಾರತ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ಎದುರಿಸಿದಾಗ 489 ಲೋಕಸಭೆ ಕ್ಷೇತ್ರಗಳಿದ್ದವು. ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಆಗುವುದು ಎಲ್ಲರಿಗೂ ಗೊತ್ತೇ ಇದೆ. ಅದೇ ಜನಗಣತಿಯ ಆಧಾರದ ಮೇಲೆ ಹತ್ತು ವರ್ಷಕ್ಕೊಮ್ಮೆ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಆಗುತ್ತಿತ್ತು. ಅದರನುಗುಣವಾಗಿ 1966ರಲ್ಲಿ (1961ರ ಜನಗಣತಿ ಪ್ರಕಾರ) 489ರಿಂದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 520ಕ್ಕೆ ಏರಿದ್ದವು. ನಂತರ 1971ರಲ್ಲಿ ಜನಗಣತಿಯ ತರುವಾಯ 1976ರಲ್ಲಿ ಅವು ಪ್ರಸ್ತುತ 543ಕ್ಕೆ ಏರಿದವು. ಆದರೆ ಆನಂತರ, ಅಂದರೆ 1976ರಲ್ಲೇ (ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ) ಕ್ಷೇತ್ರಗಳ ಪುನರ್‍ವಿಂಗಡನೆಗೆ ಮುಂದಿನ 25 ವರ್ಷಗಳವರೆಗೆ ಫ್ರೀಜ್ ಮಾಡಿ ಸಂವಿಧಾನಾತ್ಮಕ ಕಡಿವಾಣ ಹಾಕಲಾಯಿತು. ಆಗಲೇ ಜನಸಂಖ್ಯೆ ನಿಯಂತ್ರಣದ ಯೋಜನೆಗಳು ಆರಂಭವಾದವು. ಜನಗಣತಿಯ ಆಧಾರದ ಮೇಲೆ ಕ್ಷೇತ್ರವಿಂಗಡಣೆ ಮಾಡುತ್ತಾ ಹೋದಲ್ಲಿ ಜನಸಂಖ್ಯೆ ನಿಯಂತ್ರಣ ಸರಿಯಾಗಿ ಮಾಡದ (ಅಂದರೆ ಅಭಿವೃದ್ಧಿ ಆಗದೇ ಇರುವ) ರಾಜ್ಯಗಳಲ್ಲಿ ಲೋಕಸಭೆ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿ, ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಇಳಿಮುಖವಾಗುವ ಸಾಧ್ಯತೆ ಇತ್ತು. ಹಾಗಾಗಿ 1976ರಲ್ಲಿ ಮುಂದಿನ 25 ವರ್ಷಗಳ ತನಕ ಕ್ಷೇತ್ರ ಪುನರ್‍ವಿಂಗಡನೆ ಮಾಡಬಾರದು ಎಂದು ನಿರ್ಣಯಿಸಲಾಯಿತು.

ಆ 25 ವರ್ಷಗಳ ಅವಧಿ 2001ರಲ್ಲಿ ಮುಗಿದು, 2006ಕ್ಕೆ ಕ್ಷೇತ್ರಗಳ ಪುನರ್‍ವಿಂಗಡನೆಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಇಪ್ಪತೈದು ವರ್ಷಗಳ ಇನ್ನೊಂದು ಅವಧಿಯವರೆಗೆ ಪುನರ್‍ವಿಂಗಡನೆ ಮಾಡಬಾರದೆಂದು 2001ರಲ್ಲಿ ಮತ್ತೆ ನಿರ್ಣಯಿಸಲಾಯಿತು. ಹಾಗೆ ಮಾಡಿದ್ದಲ್ಲಿ ಉತ್ತರಭಾರತದ ರಾಜ್ಯಗಳಲ್ಲಿ ಲೋಕಸಭೆ ಕ್ಷೇತ್ರಗಳ ಸಂಖ್ಯೆಯಲ್ಲಿ ವೃದ್ಧಿಯಾಗಿ, ದಕ್ಷಿಣದ ರಾಜ್ಯಗಳ ಕ್ಷೇತ್ರಗಳಲ್ಲಿ ಗಣನೀಯ ಕಡಿತ ಕಾಣಿಸಿಕೊಳ್ಳಲಿತ್ತು.  2008ರಲ್ಲಿ ಮೀಸಲು ಕ್ಷೇತ್ರಗಳ ಪುನರ್‍ವಿಂಗಡನೆ ಮತ್ತು ರಾಜ್ಯದೊಳಗೆ ವಿಧಾನಸಭೆ ಕ್ಷೇತ್ರಗಳ ಪುನರ್‍ವಿಂಗಡನೆಯಾಯಿತು ಆದರೆ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲಿಲ್ಲ.

ಒಂದುವೇಳೆ, ಈಗ 2019ರಲ್ಲಿ ಜನಗಣತಿಯ (2011ರ) ಆಧಾರದ ಮೇಲೆ ಕ್ಷೇತ್ರವಿಂಗಡನೆಯಾದಲ್ಲಿ ಅತ್ಯಂತ ಹೆಚ್ಚು ಕ್ಷೇತ್ರಗಳನ್ನು ಕಳೆದುಕೊಳ್ಳುವ ರಾಜ್ಯ ತಮಿಳುನಾಡು; 39 ರಿಂದ 29ಕ್ಕೆ ಇಳಿಯುವುದು. ಕರ್ನಾಟಕ ಎರಡು ಕ್ಷೇತ್ರಗಳನ್ನು ಕಳೆದುಕೊಂಡರೆ, ಆಂಧ್ರ ಮತ್ತು ತೆಲಂಗಾಣ ಸೇರಿ 5, ಕೇರಳ ಸಹ 5, ಓರಿಸ್ಸಾ 3  ಕ್ಷೇತ್ರ ಕಳೆದುಕೊಳ್ಳುತ್ತಿದ್ದವು. ಇನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಗುಜರಾತ್ 1 ಕ್ಷೇತ್ರ ಪಡೆದುಕೊಂಡರೆ, ಮಹಾರಾಷ್ಟ್ರ 3, ದೆಹಲಿ 2, ಹರಿಯಾಣ 2, ಮಧ್ಯಪ್ರದೇಶ 3, ರಾಜಸ್ಥಾನ 6, ಬಿಹಾರ 4 ಹಾಗೂ ಉತ್ತರಪ್ರದೇಶ ಅತ್ಯಂತ ಹೆಚ್ಚು 13 ಹೆಚ್ಚುವರಿ ಕ್ಷೇತ್ರಗಳನ್ನು ಪಡೆದುಕೊಳ್ಳಲಿದೆ. ಅಂದರೆ 80 ಇರುವ ಉತ್ತರ ಪ್ರದೇಶದ ಸೀಟುಗಳು 93ಕ್ಕೆ ಏರಿಕೆಯಾಗಲಿವೆ. ಸಹಜವಾಗಿಯೇ ಅದಕ್ಕೆ ರಾಜಕೀಯ ಬೇಡಿಕೆ, ಮನ್ನಣೆಗಳೂ ಹೆಚ್ಚಾಗಲಿವೆ.

ಆದರೆ ಈಗ ಎರಡನೇ 25 ವರ್ಷದ ಫ್ರೀಜ್ ಅವಧಿಯೂ ಮುಗಿಯುತ್ತ ಬಂದಿದೆ. 2021ರ ಜನಗಣತಿಯ ಆಧಾರದ ಮೇಲೆ 2026ರಲ್ಲಿ ಕ್ಷೇತ್ರಗಳ ಪುನರ್‍ವಿಂಗಡನೆಯಾಗಬೇಕಿದೆ. ಹಾಗೆ ಆದಲ್ಲಿ ದಕ್ಷಿಣದ ರಾಜ್ಯಗಳಿಗೆ ಆಘಾತ ಕಾದಿದೆ. ಹಾಗಾಗಿ ಜನಗಣತಿ ಆಧಾರದ ಮೇಲೆ ಕ್ಷೇತ್ರಗಳನ್ನು ವಿಂಗಡಿಸುವುದನ್ನು ಶಾಶ್ವತವಾಗಿ ಕೈಬಿಡಬೇಕು ಎನ್ನುವ ಬೇಡಿಕೆಯೂ ಇದೆ. ಅಮೇರಿಕದಲ್ಲಿ ಭಾರತಕ್ಕಿಂತ ಭಿನ್ನವಾಗಿ ಅಧ್ಯಕ್ಷೀಯ ಪದ್ಧತಿಯ ಚುನಾವಣೆ ಇದ್ದರೂ ಅಲ್ಲಿಯೂ ಈ ಸಮಸ್ಯೆ ಇದ್ದೇ ಇದೆ. ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್‍ಗಿಂತ ಹಿಲರಿ ಕ್ಲಿಂಟನ್ ಹೆಚ್ಚು ಮತಗಳನ್ನು ಪಡೆದರೂ ಡೊನಾಲ್ಡ್ ಟ್ರಂಪ್ ಅಮೇರಿಕದ ಅಧ್ಯಕ್ಷರಾಗಿ ಚುನಾಯಿತರಾಗಿದ್ದನ್ನು ಗಮನಿಸಬಹುದು.

ಇನ್ನು ಆಯಾ ಪ್ರದೇಶದ ಜನಸಂಖ್ಯೆ ನಿಯಂತ್ರಣವಾಗುವದು ಆಯಾ ರಾಜ್ಯಗಳು ಕೈಗೊಂಡ ಜನಸಂಖ್ಯಾ ನಿಯಂತ್ರಣ ಕ್ರಮಗಳಿಂದ ಮಾತ್ರವೇ ಅಲ್ಲ ಎನ್ನುವುದನ್ನು ನೆನಪಲ್ಲಿಡಬೇಕಿದೆ. ಒಂದು ಪ್ರದೇಶ ಅಭಿವೃದ್ಧಿ ಹೊಂದಿದಾಗ, ಅಲ್ಲಿ ಶಿಕ್ಷಣದ, ಉದ್ಯೋಗದ ಮತ್ತು ಜೀವನಸ್ತರದಲ್ಲಿ ಅಭಿವೃದ್ಧಿ ಕಂಡುಬಂದಾಗ ಜನಸಂಖ್ಯೆ ನಿಯಂತ್ರಣ ತಾನಾಗಿಯೇ ಆಗುತ್ತದೆ.  ಅಭಿವೃದ್ಧಿ ಪಡೆದುಕೊಂಡ ತಪ್ಪಿಗೆ ಲೋಕಸಭೆಯಲ್ಲಿ ಕ್ಷೇತ್ರಗಳನ್ನು ಕಳೆದುಕೊಳ್ಳುವ ಶಿಕ್ಷೆ ಅನುಭವಿಸಬೇಕಾಗುತ್ತೆ ಎನ್ನುವ ಕಾರಣಕ್ಕಾಗಿ ಈ ಕ್ಷೇತ್ರವಿಂಗಡನೆಯ ಯೋಜನೆಯನ್ನು ಶಾಶ್ವತವಾಗಿ ಕೈಬಿಡಬೇಕೆನ್ನುವುದು ಹಲವರ ವಾದ. ಇನ್ನೊಂದು ವಾದವೇನೆಂದರೆ, ಲಕ್ಷದ್ವೀಪ ಕ್ಷೇತ್ರದಲ್ಲಿ ಕೇವಲ 47 ಸಾವಿರ ಮತದಾರರಿದ್ದರೆ ಉತ್ತರ ಭಾರತದ ಕೆಲವು ಕ್ಷೇತ್ರಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಅಂದರೆ ಪ್ರತಿ ಸಂಸದ ಪ್ರತಿನಿಧಿಸುವ ಜನರ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ. ಹಾಗಿರುವಾಗ ದೇಶದ ಅಧಿಕಾರದ ಚುಕ್ಕಾಣಿ ಯಾರು ಹಿಡಿಯುವರು ಎನ್ನುವ ನಿರ್ಧಾರದಲ್ಲಿ ಲಕ್ಷದ್ವೀಪದ ಒಬ್ಬ ಮತದಾರನ ತೂಕ ಉತ್ತರದ ಒಬ್ಬ ಮತದಾರನ ತೂಕಕ್ಕಿಂತ ಹೆಚ್ಚಾಗುತ್ತದೆ. ಹಾಗಾಗಿ ಕ್ಷೇತ್ರಗಳ ಪುನರ್‍ವಿಂಗಡನೆ ಆಗಲೇಬೇಕು ಎನ್ನುವುದು ಮತ್ತಿತರರ ವಾದ.

ಆದರೆ 2026 ಬಹಳ ದೂರವಿಲ್ಲ; ಈಗಿಂದಲೇ ಇದರ ಬಗ್ಗೆ ಚರ್ಚೆ ಪ್ರಾರಂಭವಾದರೆ ಮಾತ್ರ 2026 ತನಕ ಪರಿಹಾರ ಸಿಗಬಹುದು. ಅಥವಾ 2001ರಂತೆ ಇನ್ನೊಮ್ಮೆ ಕ್ಷೇತ್ರವಿಂಗಡನೆಯನ್ನು ಮುಂದೂಡಬಹುದು. ಆದರೆ ಸಾರ್ವಜನಿಕ ಚರ್ಚೆಯಾಗದೇ ಜನಗಣತಿಯ ಆಧಾರದ ಮೇಲೆ ಕ್ರಮ ತೆಗೆದುಕೊಂಡಲ್ಲಿ ದೇಶದಲ್ಲಿ ಬಿಕ್ಕಟ್ಟು ತಪ್ಪಿದ್ದಲ್ಲ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....