ಪಿ.ಕೆ. ಮಲ್ಲನಗೌಡರ್ |
ಇದನ್ನು ಈಗ ಬರೆಯುವ ಹೊತ್ತಿನಲ್ಲಿ, (ಬುಧವಾರ ಮಧ್ಯಾಹ್ನ 1 ಗಂಟೆ), ಸ್ಪೀಕರ್ ಜೊತೆ ಆಡಳಿತ ಮತ್ತು ವಿರೋದ ಪಕ್ಷಗಳು ನಡೆಸಿದ ಎರಡು ಸಭೆ ವಿಫಲವಾಗಿವೆ. ನಾಚಿಗೆಗೆಟ್ಟ ಬಿಜೆಪಿ ಬೇಕೆಂತಲೇ ಎಸ್‌ಐಟಿ ತನಿಖೆಯನ್ನು ವಿರೋಧಿಸುತ್ತ, ಬಾವಿಗಿಳಿದು ಪ್ರತಿಭಟಿಸುತ್ತ ಕಾಲಹರಣ ಮಾಡುತ್ತಿದೆ. ಅದರ ನಾಯಕನೇ ‘ಆಡಿಯೋದಲ್ಲಿನ ಧ್ವನಿ ನನ್ನದೇ’ ಎಂದ ಮೇಲಾದರೂ ಬಿಜೆಪಿ ಪ್ರಾಯಶ್ಚಿತ ಮಾಡಿಕೊಳ್ಳಬೇಕಿತ್ತು. ಗಟಾರ ಸೇರಿರುವ ಬಿಜೆಪಿಯಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?
ಯಾವ ನಿಟ್ಟಿನಿಂದ ನೋಡಿದರೂ ಇದು ‘ಸೆಲ್ಫ್’ ಸುಸೈಡ್! ಅಧಿಕಾರಕ್ಕಾಗಿ ಬರಗೆಟ್ಟು ಹೋಗಿರುವ ಹತಾಶ ನಾಯಕ ತನಗೇ ಅರಿವಿದ್ದೋ, ಅರಿವಿಲ್ಲದೇಯೋ ಸೆಲ್ಫ್ ಸುಸೈಡ್ ಮಾಡಿಕೊಳ್ಳುತ್ತಿದ್ದರೆ, ಲಜ್ಜೆ, ಮಾನ ಎಲ್ಲವನ್ನೂ ಬಿಟ್ಟಿರುವ ಆತನ ಪಕ್ಷವೂ ಸೆಲ್ಫ್ ಸುಸೈಡ್ ಮಾಡಿಕೊಂಡಿದೆ. ಇದು ಹಾಳಾಗಿ ಹೋಗಲಿ, ಈ ಮೂಲಕ ರಾಜ್ಯ ರಾಜಕಾರಣವೂ, ಇಲ್ಲಿನ ಪ್ರಜಾಸತ್ತೆಯೂ ಸೆಲ್ಫ್ ಸುಸೈಡ್ ಮಾಡಿಕೊಳ್ಳುವಂತೆ ಮಾಡಿದ ಯಡಿಯೂರಪ್ಪ ಮತ್ತು ಅವರ ಬಿಜೆಪಿಗೆ ಯಾವುದರಲ್ಲಿ ಸನ್ಮಾನ ಮಾಡುವುದು ಎಂಬುದೇ ಜನಕ್ಕೆ ತಿಳಿಯುತ್ತಿಲ್ಲ.
ಕರ್ನಾಟಕ ಅಷ್ಟೇ ಏಕೆ ದೇಶದ ರಾಜಕಾರಣದಲ್ಲಿ ಇಂತಹ ನಡತೆಗೆಟ್ಟ ರಾಜಕಾರಣ ಎಲ್ಲಿಯೂ ನಡೆದಿಲ್ಲ. ಶಾಸಕರನ್ನು ಖರೀದಿಸುವುದು, ರಾಜಿನಾಮೆ ಕೊಡಿಸುವುದು, ಮತ್ತೆ ಅದೇ ಕ್ಷೇತ್ರಗಳಿಂದ ತಮ್ಮ (ಬಿಜೆಪಿ) ಪಕ್ಷದಿಂದ ಹಣ ಚೆಲ್ಲಿ ಗೆಲ್ಲಿಸುವುದು, -ಇದು ಬಿಜೆಪಿ ಈ ದೇಶಕ್ಕೆ 2008ರಲ್ಲಿ ಪರಿಚಯಿಸಿದ ಒಂದು ಪುಟ್ಟಾಪೂರಾ ಹಲ್ಕಾ ವ್ಯವಹಾರ. ಚುನಾವಣೆಯಲ್ಲಿ ಗೆಲ್ಲಲಾಗದ ಸಂದರ್ಭದಲ್ಲಿ ಈ ದಂಧೆ ಮಾಡಿ ಹೇಗಾದರೂ ಅಧಿಕಾರ ಹಿಡಿಯಿರಿ ಎಂದು ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿಯೇ ಅನುಮೋದನೆ ನೀಡಿದೆ. ಹೀಗಾಗಿ ಆಪರೇಷನ್ ಕಮಲ ಎಂಬುದು ರಾಜ್ಯ ಬಿಜೆಪಿ ಮತ್ತು ಯಡಿಯೂರಪ್ಪ ಪಾಲಿಗೆ ಪಾಪಕೃತ್ಯವೂ ಅಲ್ಲ, ಪ್ರಜಾಪ್ರಭುತ್ವ ವಿರೋಧಿಯೂ ಅಲ್ಲ.
ಬಜೆಟ್‌ನ ಹಿಂದಿನ ದಿನ ‘ಗೌರವಾನ್ವಿತ’ ನಾಯಕ ಯಡಿಯೂರಪ್ಪ ದೇವದುರ್ಗದ ಐಬಿಯಲ್ಲಿ ಯುವನೊಬ್ಬನೊಂದಿಗೆ ತೀರಾ ಚಿಲ್ಲರೆ ಮಟ್ಟದಲ್ಲಿ ಸಂಭಾಷಣೆ ನಡೆಸುತ್ತಾರೆ. ಯುವಕ ಶಾಸಕರೊಬ್ಬರ ಮಗ, ಚಿಲ್ಲರೆ ಮಾತುಕತೆಯಲ್ಲಿ ಕೋಟಿಕೋಟಿಗಳು ಪಟಪಟಂತ ಉದುರಿ ಹೋಗುತ್ತವೆ. ಅಲ್ಲಿ ದೇವದುರ್ಗದ ಶಾಸಕ, ಆಪರೇಷನ್ ಕಮಲದ ಮೊದಲ ಬಲಿ (ಬಿಜೆಪಿ ಪ್ರಕಾರ ಮೊದಲ ಫಲಾನುಭವಿ!) ಎಂದೇ ಅಪಖ್ಯಾತಿ ಪಡೆದಿರುವ ಶಿವನಗೌಡ ನಾಯಕ್ ಕೂಡ ಇರುತ್ತಾರೆ. ಈ ಒಟ್ಟೂ ಸಂಭಾಷಣೆಯಲ್ಲಿ ನಮ್ಮ ರಾಜ್ಯದ ರಾಜಕಾರಣವೇ ಸುಸೈಡ್ ಮಾಡಿಕೊಳ್ಳುತ್ತದೆ, ಸಾಂವಿಧಾನಿಕ ಮೌಲ್ಯಗಳಿಗೆ ಸಜೀವ ದಹನ ಮಾಡಲಾಗುತ್ತದೆ. ದೇಶದ ಪ್ರಧಾನಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಇದಕ್ಕೆಲ್ಲ ಸಪೋರ್ಟಿದ್ದಾರೆ ಎಂದು ಆ ಯುವಕನನ್ನು ಪುಸಲಾಯಿಸಲಾಗುತ್ತದೆ. ಖಂಡಿತ, ಇಂತಹ ಕೊಳಕು ರಾಜಕೀಯಕ್ಕೆ ಮೋದಿ-ಶಾ ಜೋಡಿ ಬೆಂಬಲಿಸುವುದೇನೂ ಆಶ್ಚರ್ಯದ ವಿಷಯವಲ್ಲ. ಆದರೆ, ಅಲ್ಲಿ ಸ್ಪೀಕರ್ ಅವರನ್ನೇ ಬುಕ್ ಮಾಡಿದ್ದೇವೆ ಎಂಬ ಮಾತು ಬಂದ ಕೂಡಲೇ ಇವರೆಲ್ಲ ಇಂತಹ ನೀಚ ಕೆಲಸಕ್ಕೆ ಇಳಿದಿದ್ದಾರೆ ಎಂಬುದು ಜನಸಾಮಾನ್ಯರಿಗೂ ಅರ್ಥವಾಗುತ್ತದೆ. ಸ್ಪೀಕರ್ ತಕ್ಷಣ ರಾಜಿನಾಮೆ ಅಂಗಿಕಾರ ಮಾಡಿ ಬಿಸಾಡ್ತಾರೆ, ಸ್ಪೀಕರ್‌ಗೆ 50 ಕೋಟಿ ಡೀಲ್ ಆಗಿದೆ ಎಂದು ಹೇಳಲಾಗುತ್ತದೆ. ‘ಮತ್ತೆ ನಿನ್ನ ತಂದೆ ಗುರುಮಿಠಕಲ್‌ನಿಂದಲೇ ಗೆಲ್ಲುವಂತೆ ನೋಡಿಕೊಳ್ಳುತ್ತೇವೆ. ಬೇಕಾದರೆ ನೀನೇ ನಿಲ್ಲು, ನಿನ್ನ ಗೆಲ್ಲಿಸಿ ಮಿನಿಸ್ಟರ್ ಮಾಡುತ್ತೇನೆ. ಎಲೆಕ್ಷನ್‌ಗೆ 10 ಕೋಟಿ ಕೊಡ್ತೀನಿ’ ಎಂದು ‘ಗೌರವಾನ್ವಿತ’ ನಾಯಕ ಯಡಿಯೂರಪ್ಪ ಬೊಗಳುತ್ತಾರೆ. ‘ನೀನು ನನ್ನ ಮಕ್ಕಳಾದ ರಾಘವೇಂದ್ರ ಮತ್ತು ವಿಜಯೇಂದ್ರರಿದ್ದಂತೆ’ ಎಂದು ನಕಲಿ ಪ್ರೀತಿಯನ್ನೂ ತೋರುತ್ತಾರೆ.
ಇದೆಲ್ಲ ಬಜೆಟ್ ಹಿಂದಿನ ದಿನದ ಮಧ್ಯರಾತ್ರಿಯಲ್ಲಿ ನಡೆದ ಸಂಭಾಷಣೆ. ‘ಬಜೆಟ್ ಮಂಡಿಸಲಿಕ್ಕೇ ಬಿಡಲ್ಲ, ಸರ್ಕಾರ ಕೆಡವಿಯೇ ಕೆಡವುತ್ತೇವೇ ಎಂದೆಲ್ಲ ಸುದ್ದಿ ಹಬ್ಬಿಸಿದ್ದ ಬಿಜೆಪಿಯ ನಾಯಕರು ಮತ್ತು ಅವರ ಚೇಲಾ ಮಾಧ್ಯಮಗಳಿಗೆ ಶಾಕ್ ಆಗುವಂತೆ, ಬಜೆಟ್‌ಗೆ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲಿನ ಸಂಭಾಷಣೆಯ ಆಡಿಯೋ ಬಾಂಬ್ ಎಸೆದು ಬಿಟ್ಟರು. ಸಂಭಾಷಣೆಯಲ್ಲಿದ್ದ ಯುವಕ , ಗುರುಮಿಠಕಲ್ ಕೇತ್ರದ ಶಾಸಕ ನಾಗನಗೌಡರ ಮಗ ಶರಣೇಗೌಡರೂ ಮಾಧ್ಯಮಗೋಷ್ಠಿಯಲ್ಲಿ ಹಾಜರು ಇದ್ದಿದ್ದರಿಂದ ಸ್ವತ: ಯಡಿಯೂರಪ್ಪ, ಶಿವನಗೌಡರೇ ಪತರಗುಟ್ಟಿ ಹೋದರು. ಹೀಗಾಗಿ ಬಿಜೆಪಿಯ ಯಾವ ನಾಯಕರಿಗೂ ಮುಖವೇ ಇಲ್ಲದಂತಾಗಿ ಸದನದಲ್ಲಿ ಬಜೆಟ್ ಚರ್ಚೆಗೆ ‘ಇನ್ನೂ ಮೂರು ದಿನ ಕಾಲ;ಲಾವಕಾಶ ವಿಸ್ತರಿಸಿ’ ಎಂದು ಕೇಳಿಕೊಳ್ಳುವಂತಾಗಿತು!
ಮುಖ್ಯಮಂತ್ರಿ ಕುಮಾರಸ್ವಾಮಿಯೇ ಶಾಸಕ ನಾಗನಗೌಡರ ಮಗ ಶರಣೇಗೌಡರನ್ನು ಯಡಿಯೂರಪ್ಪ ಬಳಿ ಕಳಿಸಿ ಆಡಿಯೋ ಮಾಡಿಸಿದ್ದಾರೆ ಎಂಬುದೂ ಅಲ್ಲಿಗೆ ಪಕ್ಕಾ ಆಗಿತ್ತು. ಆದರೂ ಬಜೆಟ್ ದಿನ ‘ಅದು ನಕಲಿ ಆಡಿಯೋ. ಮಿಮಿಕ್ರಿ ಮಾಡಲಾಗಿದೆ…’ ಎಂದೆಲ್ಲ ಯಡಿಯೂರಪ್ಪ ಮತ್ತು ಸಂಗಡಿಗರು ಹಾರಾಡಿದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ತೀರ್ಮಾನಿಸಿದವೋ ಅಲ್ಲಿಗೆ ಯಡಿಯೂರಪ್ಪರ ಜಂಗಾಬಲವೇ ಉಡುಗಿ ಹೋಗಿತು. ಬಜೆಟ್‌ಗೂ ಮುನ್ನ ಕುಮಾರಸ್ವಾಮಿ ಈ ಆಡಿಯೋ ಆಧರಿಸಿ ಸ್ಪೀಕರ್‌ಗೆ ದೂರು ಕೊಟ್ಟ ಮೇಲೆ ಬಿಜೆಪಿಯ ಚೆಡ್ಡಿಪಡೆ ಯಡಿಯೂರಪ್ಪರ ಬೆಂಬಲಕ್ಕೆ ನಿಲ್ಲಲೇ ಇಲ್ಲ.
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಎಸಿಬಿಗೆ ದೂರು ನೀಡಬಹುದು ಎಂಬ ಸುದ್ದಿ ಹಬ್ಬಿದ ಮೇಲಂತೂ ಯಡಿಯೂರಪ್ಪ ಕಣ್ಣಿಗೆ ಪರಪ್ಪನ ಅಗ್ರಹಾರವೇ ಕಾಣತೊಡಗಿತು. ಅವರ ಅಪದ್ಬಾಂಧವರು, ಹಿತೈಷಿಗಳನ್ನೆಲ್ಲ ಸಮಪರ್ಕಿಸಿದ ಯಡಿಯೂರಪ್ಪ, ಬೀಸೋ ದೊಣ್ಣೇ ತಪ್ಪಿಸಿಕೊಳ್ಳಲು ‘ಆಡಿಯೋದಲ್ಲಿರುವುದು ನನ್ನದೇ ಧ್ವನಿ’ ಎಂದು ಒಪ್ಪಿಕೊಂಡರು. ಹುಬ್ಬಳ್ಳಿಯಲ್ಲಿ ಪ್ರಧಾನ ಮಂತ್ರಿ ಮೋದಿ ಯಡಿಯೂರಪ್ಪರನ್ನು ಪಕ್ಕದಲ್ಲಿ ಇಟ್ಟುಕೊಂಡು, ‘ಭ್ರಷ್ಟರಿಗೆ ನನ್ನ ಕಂಡರೆ ಭಯ…ಕರ್ನಾಟಕ ಸರ್ಕಾರದ ಮಾದರಿಯನ್ನೇ ದೇಶದ ಮೇಲೆ ಹೇರ ಹೊರಟಿದ್ದಾರೇ ಎಂದೆಲ್ಲ ಹೇಳಿದ್ದೇ ಹಾಸ್ಯಾಸ್ಪದವಾಗಿತ್ತು. ಯಡಿಯೂರಪ್ಪರ ಮನಸ್ಸು ಅಲ್ಲಿರಲೇ ಇಲ್ಲ. ಮರುದಿನ ಸದಸನದಲ್ಲಿ ಏನಾಗೊತ್ತೋ ಎಂಬ ಕಳವಳದಲ್ಲೇ ಅವರು ಹುಬ್ಬಳ್ಳಿ ಸಭೆಯಲ್ಲಿ ಕಾಲ ಹಾಕಿದರು.
ಸ್ಪೀಕರ್‌ಗೆ ಕೈ ಹಾಕೋದಾ?
ಬೋಪಯ್ಯರಂತಹ ಸ್ಪೀಕರ್‌ಗಳಿದ್ದರೆ ಹೇಗೋ ಅಡ್ಜೆಸ್ಟ್ ಮಾಡಿಕೊಳ್ಳಬಹುದುತ್ತು. ಆದರೆ ಪ್ರಾಮಾಣಿಕತೆಗೆ ಹೆಸರಾಗಿರುವ ರಮೇಶಕುಮಾರರ ಹೆಸರನ್ನು ಎಳೆ ತಂದು ಯಡಿಯೂರಪ್ಪ ಸಂಕಷ್ಟಕ್ಕೀಡಾದರು. ಸೋಮವಾರ ಇಡೀದೇಶದ ಚಿತ್ತ ಸದಸನದತ್ತಲೇ ನೆಟ್ಟಿತ್ತು. ಸ್ಪೀಕರ್ ರಮೇಶಕುಮಾರ್ ಪ್ರಶ್ನೋತ್ತರಕ್ಕೂ ಮೊದಲು, ಕೆಲವು ಮಾತುಗಳನ್ನು ಹೇಳಲೇಬೇಕಾಗಿದೆ ಎಂದಾಗ ಯಡಿಯೂರಪ್ಪ ಮುಖ ಕಪ್ಪಿಟ್ಟಿತ್ತು.
ಒಂದಿಷ್ಟು ಜಾಸ್ತಿಯೇ ಎನಿಸುವಷ್ಟು ಭಾವುಕತೆಗೆ ಒಳಗಾದ ಸ್ಪೀಕರ್ ರಮೇಶಕುಮಾರರು, ಆಡಿಯೋದಲ್ಲಿ ತಮ್ಮ ಹೆಸರು ಬಂದಿದ್ದಕ್ಕೆ ದು:ಖ ವ್ಯಕ್ತಪಡಿಸುತ್ತ ಹೋದರು. ಬಜೆಟ್‌ಗೆ ಮುನ್ನವೇ ಮುಖ್ಯಮಂತ್ರಿ ಈ ಕುರಿತಾಗಿ ದೂರು ನೀಡಿದ್ದರು, ಆದರೆ ಬಜೆಟ್ ಮಂಡನೆಗೆ ಅಡ್ಡಿಯಾಗಬಾರದು ಎಂದು ಈ ವಿಷಯವನ್ನು ಈಗ ಎತ್ತಿಕೊಂಡಿರುವೆ ಎಂದರು. ಈ ಹುದ್ದೆಯಲ್ಲಿ ಮುಂದುವರಿಯಲೇ ಬಿಡಲೇ ಎಂಬ ಗೊಂದಲದಿಂದ ಹೊರಬಂದಿರುವೆ, ಸತ್ಯಾಸತ್ಯತೆ ಗೊತ್ತಾಗಲಿ ಎಂದು ಮುಖ್ಯಮಂತ್ರಿ ಅವರಿಗೆ ಒಂದು ಸಲಹೆ ಕೊಡುವೆ ಎಂದಾಗ, ಕಾಂಗ್ರೆಸ್‌ನ ಕೃಷ್ಣ ಭೈರೆಗೌಡ ಮಧ್ಯ ಪ್ರವೇಶಿಸಿ, ‘ಸರ್, ಇದನ್ನು ತಾವು ವೈಯಕ್ತಿಕ ನೆಲೆಯಲ್ಲಿ ನೋಡೋದಿ ಸರಿಯಲ್ಲ. ಇದು ಸದನಕ್ಕೆ ಸಂಬಂಧಿಸಿದ ವಿಷಯ. ಇಲ್ಲಿ ಸದಸನದ ಹಕ್ಕುಚ್ಯುತಿ ಆಗಿದೆ. ಸದನದ ಮರ್ಯಾದೆ ತೆಗೆದ ಮಹಾಶಯರಿಗೆ ತಕ್ಕ ಶಿಕ್ಷೆ ಆಗಲೇ ಬೇಕೆಂದರು.
ಕೃಷ್ಣ ಭೈರೆಗೌಡರಂತಹ ಕಿರಿಯ ಸದಸ್ಯ ತಮ್ಮ ಮಾತುಗಳ ಮೂಲಕ ಉತ್ತಮ ಸಂಸದೀಯ ಪಟುವಿನ ಲಕ್ಷಣ ತೋರಿಸುತ್ತಿದ್ದಾಗಲೇ, ಹಿಂದೆಲ್ಲ ಸದನದ ಚರ್ಚೆಗಳಲ್ಲಿ ಛಾಪು ಮೂಡಿಸಿದ್ದ ಹಿರಿಯ ಶಾಸಕರೊಬ್ಬರು ‘ಸೆಲ್ಫ್ ಸುಸೈಡ್’ ಮಾಡಿಕೊಳ್ಳಲು ಎದ್ದು ನಿಂತಿದ್ದು ಸದನದ ವಿಪರ್ಯಾಸವೋ ಅಥವಾ ಅವರ ಅಧೋಗತಿಯೋ? ಕೃಷ್ಣ ಭೈರೆಗೌಡರ ಮಾತಿಹೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಮಾಧುಸ್ವಾಮಿ, ಯಡಿಯೂರಪ್ಪರ ಪರ ನಿರ್ಲಜ್ಜತನದಿಂದ ವಾದಿಸುವ ಮೂಲಕ ಸಣ್ಣವರಾದರು. ಬೇಕೆಂತಲೇ ಈ ಪಾಟಿ ಸವಾಲು ಮಾಡಲು ಮಾಧುಸ್ವಾಮಿಯವರನ್ನು ಬಿಜೆಪಿ ಆಯ್ದುಕೊಂಡಿತ್ತು.
ರಮೇಶಕುಮಾರರ ಭಾವುಕತೆ ಮತ್ತು ಅವರೊಂದಿಗಿನ ಹಳೆಯ ಸಲುಗೆಯನ್ನು ದುರುಪಯೋಗ ಮಾಡಿಕೊಳ್ಳಲು ತಯ್ಯಾರಾಗಿ ಬಂದವರಂತೆ ಕಂಡ ಮಾಧುಸ್ವಾಮಿ, ‘ಎಲ್ಲೋ ಸದನದ ಹೊರಗೆ ಯಾರೋ ಏನೋ ಮಾತಾಡಿಕೊಂಡರು ಎಂಬ ಕಾರಣಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಬಗ್ಗೆ ನಮಗೆ ಗೌರವವಿದೆ. ಯಾರೋ ಮಾತಾಡಿದ್ದನ್ನು ಚರ್ಚಿಸುವ ಅಗತ್ಯವೂ ಇಲ್ಲ. ಅದನ್ನು ಮರೆತುಬಿಡಿ, ಅದನ್ನು ಮನ್ನಿಸಿಬಿಡಿ’ ಎಂದೆಲ್ಲ ಅಂಗಲಾಚುವ ಮಟ್ಟಕ್ಕೆ ಇಳಿದಿದ್ದು ಅಸಹ್ಯಕರವಾಗಿತ್ತು. ಸದಸನದ ಹೊರಗೆ ನಡೆದ ವಿಷಯ ಹಕ್ಕುಚ್ಯತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಆತ್ಮವಂಚನೆಯ ಮಾತನ್ನು ಮಾಧುಸ್ವಾಮಿ ಹೇಳುವ ಮಟ್ಟಕ್ಕೆ ಇಳಿದರು. ಇದಕ್ಕೆ ಕಿರಿಯ ಸದಸ್ಯ ಕೃಷ್ಣ ಭೈರೆಗೌಡ ಹಳೆಯ ಪ್ರಕರಣಗಳ ಉಲ್ಲೇಖ ಮಾಡುತ್ತ ಮಾಧುಸ್ವಾಮಿಯವರ ‘ಸ್ವಾಮಿನಿಷ್ಠೆ’ಯ ವಾದವನ್ನು ಹೊಡೆದು ಹಾಕಿದಾ ನಂತರವಷ್ಟೇ ಎಚ್ಚರಗೊಂಡ ಮಾಧುಸ್ವಾಮಿ, ತನಿಖೆಯಾಗಲಿ, ಸತ್ಯ ಹೊರಬರಲಿ ಎಂದರು.
‘ಕೊಲೆ ಮಾಡಿದ ಆರೋಪಿಯಷ್ಟೇ ಅಲ್ಲ, ಕೊಲೆಗೆ ಪ್ರಚೇದನೆ ನೀಡಿದವರನ್ನೂ ತನಿಖೆಗೆ ಒಳಪಡಿಸಿ’ ಎಂದು ವಾದ ಮಂಡಿಸಿದ್ದು ಯಾರು ಗೊತ್ತೆ? ಹಿಂದೆ ಸ್ಪೀಕರ್ ಆಗಿ, ಶಾಸಕರ ಅನರ್ಹತೆಯ ವಿಷಯದಲ್ಲಿ ‘ಇತಿಹಾಸ’ವನ್ನೇ ಬರೆದ ಬಿಜೆಪಿಯ ಬೋಪಯ್ಯ! ಇದರ ನಡುವೆ ಒಬ್ಬರಾದ ಮೇಲೊಬ್ಬರು ರಮೇಶಕುಮಾರರ ಪ್ರಾಮಾಣಿಕತೆಯನ್ನು ಹೊಗಳುವುದರಲ್ಲೇ ಕಾಲ ಹಾಕಿದರು. ಹೀಗಾಗಿ ಸದಸನದಲ್ಲೇ ಇದ್ದ ಇಬ್ಬರು ಪ್ರಮುಖ ಆರೋಪಿಗಳು ಯಾವ ಆತಂಕವೂ ಇಲ್ಲದೇ ಕುಳಿತಿದ್ದರು. ಹುಂಬ ಶಿವನಗೌಡ ನಾಯಕ್ ‘ಏ ಹಾಳಾಗಿ ಹೋಗ್ರಿ’ ಎಂಬರ್ಥದಲ್ಲಿ, ಸ್ಪೀಕರ್ ತೀರ್ಮಾನ ಕೊಡುವ ಮೊದಲೇ ಸದನದಿಂದ ಹೊರನಡೆದು ಉಡಾಫೇತನ ಮೆರೆದರು.ತುಟಿಪಿಟಿಕ್ಕನ್ನದೇ ಕೂತಿದ್ದ ಯಡಿಯೂರಪ್ಪ ಒಮ್ಮೆ ಮಾತ್ರ ಆತಂಕದಿಂದ ಬಾಯಿ ಬಿಟ್ಟರು. ‘ಆಡಿಯೋದಲ್ಲಿರುವುದು ನನ್ನದೇ ಧ್ವನಿ ಎಂದು ಸದಸನದಲ್ಲಿರುವ ಒಬ್ಬರು ಒಪ್ಪಿಕೊಂಡಿದ್ದಾರೆ’ ಎಂದು ಕೃಷ್ಣ ಭೈರೆಗೌಡರು ಹೇಳುತ್ತಿದ್ದಂತೆ ದಡಬಡಾಯಿಸಿ ಎದ್ದ ಯಡಿಯೂರಪ್ಪ, ಕುಂಬಳಕಾಯಿ ಕಳ್ಳನಂತೆ ಬೆನ್ನು ಮುಟ್ಟಿಕೊಂಡು, ಈ ಮಾತನ್ನು ಸದನದಲ್ಲಿ ತರಬೇಡಿ ಎಂದು ಆಕ್ಷೇಪ ವ್ಯಕ್ತ ಮಾಡಿದರು. ಇದು ಕೂಡ ಅವರ ಅಪರಾಧಕ್ಕೆ ಸಾಕ್ಷಿ ಎಂಬಂತೆ ಇತ್ತು!
ಕೊನೆಗೆ ಸ್ಪೀಕರ್ ವಿಶೇಷ ತನಿಖಾ ತಂಡ ರಚಿಸಿ (ಎಸ್‌ಐಟಿ) ಎಂದು ಮುಖ್ಯಮಂತ್ರಿಗೆ ಸೂಚಿಸಿ, 15 ದಿನದಲ್ಲಿ ಸತ್ಯಾಂಶ ಹೊರಬರಲಿ ಎಂದ ಮೇಲಂತೂ ಬಿಜೆಪಿಯ ಅದರಲ್ಲೂ ಯಡಿಯೂರಪ್ಪನವರ ಆಪ್ತರಿಗೆ ಮೈತುಂಬ ತುರಿಕೆ ಎದ್ದು ಬಿಟ್ಟವು. ಎಸ್‌ಐಟಿ ಮೇಲೆ ನಂಬಿಕೆಯಿಲ್ಲ, ನ್ಯಾಯಾಂಗ ತನಿಖೆ ಆಗಲಿ ಅಥವಾ ಸದನ ಸಮಿತಿಯಿಂದ ತನಿಖೆಯಾಗಲಿ ಎಂದೆಲ್ಲ ಅರಚಾಡಿದರು. ಇದು ಕೂಡ ಸೆಲ್ಫ್ ಸುಸೈಡ್‌ನ ಭಾಗವೇ ಆಗಿತ್ತು. ಅದೆಲ್ಲ ಇರಲಿ, ಎಸ್‌ಐಟಿ ತನಿಖೆ ಸ್ಪೀಕರ್ ಸುತ್ತದ ಹೇಳಿಕೆಗೆ ಸೀಮಿತವಾಗುವ ಲಕ್ಷಣಗಳಿವೆ. ಹಾಗಾಗಬಾರದು. ಅದು ಒಟೂ ಆಪರೇಷನ್ ಕಮಲದ ಎಂಬ ಹೇಯ ದಂಧೆಯ ಬುಡಕ್ಕೆ ಬತ್ತಿ ಇಡುವಂತಾಗಬೇಕು ಅಲ್ಲವೇ?
ಈ ಇಡೀ ಪ್ರಹಸನ ನಮ್ಮ ಪ್ರಜಾಪ್ರಭಯತ್ವ, ಸಂಸದೀಯ ನಡವಳಿಕೆ, ಸದನ ಚರ್ಚೆಗಳೆಲ್ಲ ಸೋತು ಹೋಗುತ್ತಿರುವುದಕ್ಕೆ ಒಂದು ಸಂಕೇತದಂತಿದೆ. ಹೀಗೆ ಎಲ್ಲರನ್ನೂ, ಎಲ್ಲವನ್ನೂ ಸೆಲ್ಫ್ ಸುಸೈಡ್‌ಗೆ ನೂಕಿದ ಬಿಜೆಪಿ ಮತ್ತು ಅದರ ಹತಾಶ ನಾಯಕ ಯಡಿಯೂರಪ್ಪ ಸ್ವತ: ಸೆಲ್ಫ್ ಸುಸೈಡ್ ಮಾಡಿಕೊಂಡಿದ್ದಾರೆ.


