ರಂಗಿತರಂಗ, ಕಳೆದ ವರ್ಷದ ಅತ್ಯದ್ಭುತ ಸಿನಿಮಾಗಳಲ್ಲಿ ಒಂದು. ಆ ತಂಡದ ಮೇಲೆ ಭರವಸೆಯನ್ನೂ ಹೆಚ್ಚಿಸಿದ್ದ ಸಿನಿಮಾ ಅದು. ಆದರೀಗ ರೇಡಿಯೋ ಆಂಕರಮ್ಮ ಮಾಡಿದ ಯಡವಟ್ಟಿಗೆ ಇಡೀ ತಂಡ ತಮ್ಮ ಪ್ರತಿಭೆಯ ಕ್ವಾಲಿಟಿಗೆ ಮಸಿ ಬಳಿಸಿಕೊಂಡು ಮರುಗುತ್ತಿದೆ. ಆಕ್ಚುಯಲಿ ಏನಾಗಿದೆ ಅಂದ್ರೆ, ಮೊನ್ನೆ ಈ ತಂಡದ ಹೊಸ ಸಿನಿಮಾ ರಾಜರಥಾ ಬಿಡುಗಡೆಯಾಗಿತ್ತು. ಸಿನಿಮಾದ ಪ್ರಚಾರಕ್ಕೆಂದು ರಪರಪ ರ್ಯಾಪಿಡಮ್ಮ ಅರ್ಥಾತ್ ರ್ಯಾಪಿಡ್ ರಶುಮಮ್ಮನ ರೇಡಿಯೋ ಶೋನಲ್ಲಿ ತಂಡ ಕೂತಿತ್ತು. ಉಸಿರು ಬಿಗಿಹಿಡಿದಂತೆ ಒಂದೇಸಮನೆ ಮಾತಾಡೋದು ಬಿಟ್ಟು ತಮಗೊಂದು ಸೆನ್ಸಿಬಲ್ ಹೊಣೆ ಇದೆ ಅನ್ನೋದನ್ನೇ ಮರೆತ ಆ್ಯಂಕರ್ ಪರಂಪರೆಯ ರ್ಯಾಪಿಡ್ ರಶ್ಮಿ `ನಿಮ್ಮ ರಾಜರಥಾ ಸಿನಿಮಾವನ್ನು ನೋಡದಿರೋ ಪ್ರೇಕ್ಷಕರನ್ನು ನೀವು ಏನಂತ ಕರೀತೀರಾ?’ ಅನ್ನೋ ಅಸಂಬಂದ್ಧ ಪ್ರಶ್ನೆ ಎಸೆದಿದ್ದಳು. ಒಂದು ಸಿನಿಮಾ ರಿಲೀಸ್ ಆಯ್ತು ಅಂದ್ರೆ ಅದನ್ನು ಎಲ್ಲರು ನೋಡ್ಲೇಬೇಕಾ, ಹಾಗೊಮ್ಮೆ ನೋಡದೆ ಇದ್ರೆ ಅವರಲ್ಲಿ ಏನೊ ಡಿಫೆಕ್ಟ್ ಇದೆ ಅಂತ ಅಂದ್ಕೋಬೇಕಾ… ವಿಚಿತ್ರವಾಗಿದೆ ಆಯಮ್ಮನ ವಾದ. ಹೋಗ್ಲಿ, ಚಿತ್ರತಂಡವಾದರು ಈ ಪ್ರಶ್ನೆಯ ಅಸಂಬದ್ಧತೆಯನ್ನ ಅರ್ಥ ಮಾಡಿಕೊಂಡು ಆಂಕಂರಮ್ಮನನ್ನ ತಿದ್ದಬಹುದಿತ್ತು. ಅದರ ಬದಲಿಗೆ `ಈ ಸಿನಿಮಾ ನೋಡ್ದೇ ಇರೋರು ಕಚಡಾ ನನ್ಮಕ್ಕಳು’ ಅಂದುಬಿಡೋದಾ?.

ಆ ಒಂದು ಹೇಳಿಕೆ ಹೊಸಬರ ತಂಡದ ಮೇಲಿದ್ದ ಸಭ್ಯತೆಯ ನಿರೀಕ್ಷೆಗಳನ್ನೆಲ್ಲ ಧ್ವಂಸ ಮಾಡಿದ್ದಲ್ಲದೆ, ಹೈಗ್ರೌಂಡ್ಸ್ ಪೊಲೀಸ್ ಸ್ಟೇಷನ್‍ನಲ್ಲಿ ಪುಕ್ಕಟೆ ಕೇಸ್ ಕೂಡಾ ಅವರ ಹೆಗಲೇರುವಂತೆ ಮಾಡಿದೆ. ಅದೊಂದು ವಿವಾದವಾಗಿ ಬೆಳೆದದ್ದು, ಸಾರಾ ಗೋವಿಂದು ರಾಜಿಪಂಚಾಯ್ತಿಯಲ್ಲಿ ಅವರೆಲ್ಲ `ಸೋ, ಸಾರಿ ಪ್ರೇಕ್ಷಕರೇ’ ಅಂತ ಅವಲತ್ತುಕೊಂಡದ್ದು, ಇವೆಲ್ಲ ಸುದ್ದಿಗಳಾಗಿ ರಾರಾಜಿಸಿದವು. ಆದ್ರೆ ಈ ಆಂಕರ್‍ಗಳ ಐಲುತನದ ಬಗ್ಗೆ ಹೆಚ್ಚು ಚರ್ಚೆಯೇ ಹುಟ್ಟಿಕೊಳ್ಳಲಿಲ್ಲ. ಅದೇ ದುರಂತದ ಸಂಗತಿ. ನಿರೂಪಣೆ ತನ್ನ ಸೊಗಸು ಕಳಕೊಂಡು ಅದ್ಯಾವ ಘಳಿಗೆಯಲ್ಲಿ ಆಂಕರಿಂಗ್‍ನ ಅರೆಬೆಂದ ರೂಪ ಪಡೆಯಿತೋ ಆಗಿನಿಂದ ಅವರ ಅಧ್ವಾನಗಳನ್ನು ನೋಡಲಾಗುತ್ತಿಲ್ಲ. ಇತ್ತೀಚೆಗೆ ಈ ಆಂಕರ್‍ಗಳಿಗೆ ಸ್ಟಾರ್‍ಗಿರಿಯ ಭ್ರಮೆಯೂ ಶುರುವಾಗಿದ್ದು ಅವರ ಅವತಾರಗಳಿಗೆ ಲಂಗು ಲಗಾಮೇ ಇಲ್ಲದಂತಾಗಿದೆ. ಆಂಕರ್‍ಗಳ ಇಂಥಾ ಅಸಂಬಂದ್ಧ ಐಲಾಟ ಇದೇ ಮೊದಲೇನಲ್ಲ. ಯುವನಟಿ ರಶ್ಮಿಕಾ ಮಂದಣ್ಣಗೆ `ಕನ್ನಡದಲ್ಲಿ ಶೋ ಆಫ್ ನಟ ಅಂತ ನೀವು ಯಾರನ್ನ ಕರೀತಿರಿ?’ ಅನ್ನೋ ಪ್ರಶ್ನೆ ಹಾಕಿದ್ದ ಆಂಕರ್, ಆಕೆಗೆ ಇಷ್ಟವಿಲ್ಲದಿದ್ದರೂ ಒತ್ತಾಯಿಸಿ `ಯಶ್’ ಎಂಬ ಉತ್ತರ ಹೊರಬರುವಂತೆ ಮಾಡಿದ್ದ. ಪಾಪಾ, ಆಕೆ ಆಮೇಲೆ ಹಲವರ ವಿರೋಧ ಎದುರಿಸಬೇಕಾಯ್ತು. ಅದೇರೀತಿ ಆ್ಯಂಕರಿಂಗ್ ದೊರೆ ಬಿಗ್‍ಬಾಸ್ ಸಂಜನಾಗೆ `ನಿಮ್ಮ ಪ್ರಕಾರ ‘ಬಿಲ್ಡಪ್’ ನಟ ಯಾರು?’ ಅಂತ ಕೇಳಿ, ಅವಳ ಬಾಯಿಂದ ದರ್ಶನ್ ಹೆಸರು ಹೊರಬರುವಂತೆ ಮಾಡಿದ್ದ. ಅದೂ ವಿವಾದವಾಗಿತ್ತು. ಇಂಥಾ ಅದೆಷ್ಟೊ ನಿದರ್ಶನಗಳು ಸಿಗುತ್ತವೆ.
ವಿವಾದ ಸೃಷ್ಟಿಸೋದು, ಮತ್ತೊಬ್ಬರನ್ನು ಹೀಗಳೆಯೋದೇ ಆ್ಯಂಕರಿಂಗ್ ಅಂದುಕೊಂಡಿರೋ ಇವರಿಗೆ ನಿರೂಪಣೆಯ ವ್ಯಾಕರಣ ಅರ್ಥವಾಗೋದು ಕಷ್ಟ. ಆದ್ರೆ, ಕಡೇಪಕ್ಷ ತಾವಾಡುವ ಮಾತುಗಳಲ್ಲಿ ಒಂದಷ್ಟು ಕಾಮನ್‍ಸೆನ್ಸ್ ಇರಬೇಕು ಅನ್ನೋ ಪ್ರಜ್ಞೇನಾದ್ರು ಇವರು ಬೆಳೆಸಿಕೊಳ್ಳಬೇಕಿದೆ. ಅಂದಹಾಗೆ, ಇದೆಲ್ಲಾ ನಮ್ಮ ಎಂಟರ್‍ಟೈನ್‍ಮೆಂಟ್ ಚಾನೆಲ್ ಆ್ಯಂಕರ್‍ಗಳ ಐಲಾಟವಾಯ್ತು. ಇನ್ನು ನ್ಯೂಸ್ ಚಾನೆಲ್ ಆ್ಯಂಕರ್‍ಗಳ ಐಲಾಟಕ್ಕೆ ಹೋದ್ರೆ, ಬೆಂಗ್ಳೂರಲ್ಲಿ ಪ್ರಳಯವೇ ಆಗ್ಬಿಡುತ್ತೆ. ಬೇಡ ಬಿಡಿ…


