Homeಅಂಕಣಗಳುಹಿಂದಿ ಹೇರಿಕೆ ಅಷ್ಟೊಂದು ದೊಡ್ಡ ವಿಚಾರವಾ? ಹೌದು ಬಹಳ ದೊಡ್ಡದು ಏಕೆಂದರೆ...

ಹಿಂದಿ ಹೇರಿಕೆ ಅಷ್ಟೊಂದು ದೊಡ್ಡ ವಿಚಾರವಾ? ಹೌದು ಬಹಳ ದೊಡ್ಡದು ಏಕೆಂದರೆ…

ಯಾಜಮಾನ್ಯವನ್ನು, ಗುಲಾಮಗಿರಿಯನ್ನು, ದುರ್ಬಲರು ಸದಾ ಅಸಹಾಯಕರಂತೆಯೇ ಮುಂದುವರೆಯುವುದನ್ನು ಸಹಜ ಎಂದು ಸ್ವೀಕರಿಸಿರುವ ಸಮಾಜ ಇದು. ಹಾಗಾಗಿಯೇ ಹಿಂದಿ ಎಲ್ಲೆಲ್ಲೋ ನುಸುಳುತ್ತಾ ಹೋಗುವುದು ಮತ್ತು ಅಲ್ಲಲ್ಲಿ ಕನ್ನಡ ಮರೆಯಾಗುತ್ತಾ ಹೋಗುವುದು ‘ಬಹಳಷ್ಟು ಜನ’ರಿಗೆ ದೊಡ್ಡ ಸಮಸ್ಯೆ ಎನಿಸುವುದಿಲ್ಲ.

- Advertisement -
- Advertisement -

(2017ರಲ್ಲಿ ಬೆಂಗಳೂರು ಮೆಟ್ರೊದಲ್ಲಿ ಹಿಂದಿ ಹೇರಿಕೆ ಮಾಡಲು ಹೊರಟಾಗ ಬರೆದ ಲೇಖನವಿದು. ಇಂದು ಹಿಂದಿ ದಿವಸದ ಹಿನ್ನೆಲೆಯಲ್ಲಿ ಪ್ರಸ್ತುತ ಎನಿಸಿ ಮರು ಪ್ರಕಟಿಸುತ್ತಿದ್ದೇವೆ.)

‘ಬೆಂಗಳೂರು ಮೆಟ್ರೊದಲ್ಲಿ ಹಿಂದಿ ಬಳಸಲಾಗುತ್ತಿರುವುದನ್ನು ಕೆಲವರು ಅತಿರೇಕಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ, ಅದೇನು ಅಷ್ಟೊಂದು ದೊಡ್ಡ ವಿಚಾರವಾ?’ ಎಂದು ಗೆಳೆಯರೊಬ್ಬರು ಕೇಳಿದರು. ‘ಹಿಂದಿ ಬಳಸಲಾಗುತ್ತಿದ್ದರೆ, ಅದು ಅಷ್ಟೊಂದು ದೊಡ್ಡ ವಿಚಾರ ಅಲ್ಲ. ಹಿಂದಿಯನ್ನು ಹೇರುತ್ತಿದ್ದರೆ ದೊಡ್ಡ ವಿಚಾರ’ ಎಂದು ಹೇಳಿದೆ. ‘ಹೇರಿಕೆ ಎಂದು ನೀವಂದುಕೊಂಡರೆ, ಅದು ಹೇರಿಕೆ. ನಮಗೆ ದೇಶದ ಒಂದು ಲಿಂಕ್ ಭಾಷೆಯನ್ನು ಕಲಿಸಲು ಏರ್ಪಾಡು ಮಾಡುತ್ತಿದ್ದಾರೆಂದುಕೊಂಡರೆ ಅದು ಹೇರಿಕೆಯಲ್ಲ. ರಾಜ್ಯದಿಂದ ರಾಜ್ಯಕ್ಕೆ ಜನರ ಓಡಾಟ ತುಂಬಾ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಹೊರಗಿನಿಂದ ಬಂದವರಿಗೆ ಸಮಸ್ಯೆಯಾಗಬಾರದು ಅಲ್ಲವೇ? ನಾವು ಅಪರಿಚಿತ ಪ್ರದೇಶಕ್ಕೆ ಹೋದರೆ ಎಷ್ಟೊಂದು ಸಮಸ್ಯೆಯಾಗುತ್ತದೆ. ಮೇಲಾಗಿ ಇದನ್ನು ನಮ್ಮ ಮೇಲೆ ದುರುದ್ದೇಶಪೂರ್ವಕವಾಗಿ ಹೇರುತ್ತಿದ್ದಾರೆ ಎಂದು ನೋಡುವುದು ತಪ್ಪು’ ಎಂದರು.

‘ಇಲ್ಲಿ ಸಮಸ್ಯೆ ಏನೆಂದರೆ, ಹಿಂದಿಯನ್ನು ಹೇರುತ್ತಿದ್ದರೂ ಅದು ಹೇರಿಕೆಯಲ್ಲವೆನ್ನುವಂತೆ, ಸಹಜವೆನ್ನುವಂತೆ ಮಾಡಲಾಗಿದೆ. ಉದಾಹರಣೆಗೆ ಬೆಂಗಳೂರಿನ ಮೂಲೆಯೊಂದರಲ್ಲಿ ಕರ್ನಾಟಕ ಮೂಲದ್ದೇ ಒಂದು ರಾಷ್ಟ್ರೀಕೃತ ಬ್ಯಾಂಕಿನ ಶಾಖೆ ಇರುತ್ತದೆ (ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕರ್ನಾಟಕ ಮೂಲದ್ದು ಐದು ಇದ್ದವು. ಅದರಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮುಳುಗಿಸಲಾಯಿತು. ವಿಜಯ ಬ್ಯಾಂಕ್ ಅನ್ನು ಬರೋಡಾ ಬ್ಯಾಂಕ್ ನೊಡನೆ ಮುಳುಗಿಸಲಾಯಿತು. ವಿಲೀನ ಎಂದರೆ, ವಿಲೀನ. ಮುಳುಗಿಸಿದರೆ ಎಂದರೆ ಮುಳುಗಿಸಿದರು). ಆ ಶಾಖೆಗೆ ಕನ್ನಡ ಬಲ್ಲವರೇ ಶೇ.95ರಷ್ಟು ಹೋಗುತ್ತಾರೆ. ವಯಸ್ಸಾದ ಮುದುಕ ಮುದುಕಿಯರು ನಿವೃತ್ತಿ ವೇತನವನ್ನೋ, ಮಾಸಾಶನವನ್ನೋ ಪಡೆಯಲೂ ಅಲ್ಲಿಗೇ ಹೋಗುತ್ತಾರೆ. ಕನ್ನಡ ಬಾರದ ಶೇ.5ರಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಮೂಲದವರಿದ್ದಾರೆ. ಅಲ್ಲಿ ಹಣ ಪಡೆಯಲು ಅಥವಾ ತುಂಬಲು ಇರುವ ಚೀಟಿಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಇರುತ್ತದೆ. ಅಲ್ಲಿಗೆ ಬರುವ ಸ್ಥಳೀಯರಾದ ಗ್ರಾಹಕರು ಚೀಟಿ ತುಂಬಲು ಬಹಳ ಮುಜುಗರದಿಂದ ಅಲ್ಲಿ ನಿಂತಿರುವ ಅವರಿವರಲ್ಲಿ ಕೇಳಿಕೊಳ್ಳಬೇಕು. ಎಲ್ಲರೂ ಧಾವಂತದಲ್ಲಿ ಇರುವವರೇ. ಹಾಗಾಗಿ ಒಂದಿಬ್ಬರು ನಿರಾಕರಿಸಿಬಿಟ್ಟರೆ, ತನ್ನ ಮನೆ ಪಕ್ಕದ ಬ್ಯಾಂಕಿಗೆ ಬಂದಿರುವ ವಯಸ್ಸಾದ ಮಹಿಳೆ ಅಪರಿಚಿತರನ್ನು ದೈನೇಸಿಯಾಗಿ ಬೇಡಿಕೊಳ್ಳಬೇಕು. ಕನ್ನಡ ಗೊತ್ತಿದ್ದೂ ಹೀಗಾಗುತ್ತದೆ. ಆದರೆ, ಇವೆಲ್ಲವೂ ಸಹಜ ಎಂದು ಸುತ್ತಲಿನ ‘ಸಮಾಜ’ ನೋಡುತ್ತಿರುತ್ತದೆ. ಆಕೆ ಅನಕ್ಷರಸ್ಥಳೆಂದು ಅವರು ತಿಳಿಯುತ್ತಿರುತ್ತಾರೆ. ಹಾಗೆ ನೋಡಿದರೆ, ಕೆಲವರು ಅರೆ ಅಕ್ಷರಸ್ಥರೂ ಬ್ಯಾಂಕಿಗೆ ಬರುತ್ತಾರೆ. ಅವರನ್ನು ಪ್ರೋತ್ಸಾಹಿಸಿದರೆ ಕನ್ನಡ ಬರೆಯಬಲ್ಲರು. ಆದರೆ, ಇಂಗ್ಲಿಷು ಮತ್ತು ಹಿಂದಿ ಅವರನ್ನು ಅನಕ್ಷರಸ್ಥರನ್ನಾಗಿಸುತ್ತದೆ.’

Image Courtesy: Aisanet

‘ಇದನ್ನು ತುಂಬಾ ಎಳೆಯುವುದು ಬೇಡ. ಅನುಕೂಲ ಏನೆಂದು ನೋಡೋಣ. ನೀವು ಹೇಳುತ್ತಿರುವ ಶೇ.95ರಷ್ಟು ಕನ್ನಡ ಬಲ್ಲವರಲ್ಲಿ ಎಲ್ಲರಿಗೂ ಇಂಗ್ಲಿಷ್ ಅಥವಾ ಹಿಂದಿ ಬರುವುದಿಲ್ಲವಾ?’, ‘ಶೇ.90ರಷ್ಟು ಜನಕ್ಕೆ ಹಿಂದಿ ಅಕ್ಷರ ಗೊತ್ತಾಗೋದೇ ಇಲ್ಲ. ಶೇ.50ಕ್ಕೂ ಹೆಚ್ಚು ಜನರಿಗೆ ಇಂಗ್ಲಿಷ್ ಅಕ್ಷರ ಗೊತ್ತಾಗುತ್ತದೆ, ಆದರೆ ಸರಿಯಾಗಿ ಅರ್ಥ ಆಗುವುದಿಲ್ಲ. ಸಾವಿರಾರು ವರ್ಷಗಳ ಇತಿಹಾಸವಿರುವ, ಅತ್ಯಂತ ಹೆಚ್ಚು ಜನ ಮಾತಾಡುವ ಜಗತ್ತಿನ ಭಾಷೆಗಳಲ್ಲಿ ಮೊದಲ ಐವತ್ತರಲ್ಲೇ ಬರುವ ಭಾಷೆಯೊಂದರ ಸ್ವಂತ ಜನರಿಗೆ, ಅವರ ನೆಲಮೂಲದ್ದೇ ಆಗಿರುವ ಬ್ಯಾಂಕೊಂದರಲ್ಲಿ ಅಪರಿಚಿತ ಭಾವ, ಅಸಹಾಯಕ ಭಾವ ಮೂಡಿಸಲಾಗುತ್ತದೆ. ಮತ್ತು ಇದನ್ನು ಸಹಜ ಎಂದು ಬಗೆಯಲಾಗುತ್ತದೆ. ಆ ಬ್ಯಾಂಕಿಗೆ ಬರುವ ಗ್ರಾಹಕರಲ್ಲಿ ತಮಿಳು ಅಥವಾ ತೆಲುಗು ಮೂಲದವರು ಶೇ.3ರಷ್ಟಿದ್ದರೂ ಅವರ ಭಾಷೆಯಲ್ಲಿ ಯಾವ ಚೀಟಿಯೂ ಇರುವುದಿಲ್ಲ. ಶೇ.1ರಷ್ಟೂ ಇರದ ಹಿಂದಿಯಲ್ಲಿ ಇದ್ದರೆ ಅದು ಸಹಜವಾಗಿಬಿಡುತ್ತದೆ’. ‘…………………’.

ಯಾಜಮಾನ್ಯವನ್ನು, ಗುಲಾಮಗಿರಿಯನ್ನು, ದುರ್ಬಲರು ಸದಾ ಅಸಹಾಯಕರಂತೆಯೇ ಮುಂದುವರೆಯುವುದನ್ನು ಸಹಜ ಎಂದು ಸ್ವೀಕರಿಸಿರುವ ಸಮಾಜ ಇದು. ಹಾಗಾಗಿಯೇ ಹಿಂದಿ ಎಲ್ಲೆಲ್ಲೋ ನುಸುಳುತ್ತಾ ಹೋಗುವುದು ಮತ್ತು ಅಲ್ಲಲ್ಲಿ ಕನ್ನಡ ಮರೆಯಾಗುತ್ತಾ ಹೋಗುವುದು ‘ಬಹಳಷ್ಟು ಜನ’ರಿಗೆ ದೊಡ್ಡ ಸಮಸ್ಯೆ ಎನಿಸುವುದಿಲ್ಲ. ಈ ‘ಬಹಳಷ್ಟು ಜನ’ರಲ್ಲಿ ಸ್ವತಃ ಇಂಗ್ಲಿಷ್ ಅಥವಾ ಹಿಂದಿ ಕಲಿತವರು ಇರುತ್ತಾರೆ. ಅವರು ಮಾತು ಬಲ್ಲವರಾಗಿರುತ್ತಾರೆ. ಅವರೇ ಅಭಿಪ್ರಾಯ ರೂಪಿಸುವ ಜನ. ಅವರಲ್ಲಿ ಹೆಚ್ಚಿನವರಿಗೆ ಹಿಂದಿ ಮಾತ್ರ ಸಹಜ ಅಲ್ಲ, ಹಿಂದಿ-ಹಿಂದೂ-ಹಿಂದೂಸ್ತಾನ್ ಸಹಾ ಸಹಜವೇ. ಸಮಸ್ಯೆ ಇಂದು ಬೇರೆ ರೂಪ ತೆಗೆದುಕೊಳ್ಳುತ್ತಿರುವುದಕ್ಕೆ ಈ ಕಾರಣವೂ ಇದೆ.

ಹಿಂದಿಯನ್ನು ಅಗತ್ಯವಿರುವೆಡೆ ಅಗತ್ಯಕ್ಕಾಗಿ ತಂದಿದ್ದಾರೆನ್ನುವುದು ವಾಸ್ತವವಲ್ಲ. ಗೆಳೆಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಹೆದ್ದಾರಿಯೊಂದರ ಮೈಲಿಗಲ್ಲಿನ ಫೋಟೋ ಹಾಕಿದ್ದರು. ಅದು ಚನ್ನಪಟ್ಟಣ ಊರಿಗೆ ಇಂತಿಷ್ಟು ಕಿ.ಮೀ. ಎಂದು ತೋರಿಸುವ ಮೈಲಿಗಲ್ಲು. ಹಿಂದಿಯಲ್ಲಿತ್ತು. ಹಿಂದಿಯಲ್ಲಿ ಮಾತ್ರವೇ ಇತ್ತು! ಖಂಡಿತಾ ಹೊರಗಿನಿಂದ ಬರುವ ಜನರನ್ನು ನಾವು ಅತಿಥಿಗಳಾಗಿ ನೋಡಬೇಕು, ಅವರಿಗೆ ಇಲ್ಲಿ ಅನುಕೂಲಗಳನ್ನು ಕಲ್ಪಿಸಬೇಕು. ಆದರೆ ಬರುವವರು ಯಾರು ಹೆಚ್ಚು? ಆಂಧ್ರ, ತಮಿಳುನಾಡುಗಳಿಂದ ಇಲ್ಲಿಗೆ ಬರುವವರು ಹೆಚ್ಚೋ, ಉತ್ತರ ಭಾರತದಲ್ಲಿ ಹಿಂದಿ ಓದಲು ಗೊತ್ತಿರುವ ಭಾಗದಿಂದ ಬರುವವರು ಹೆಚ್ಚೋ? ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿ ಬೀದಿಗಳಲ್ಲಿ ಓಡಾಡುವವರು, ವ್ಯವಹಾರಗಳನ್ನು ನಡೆಸುವವರಲ್ಲಿ ಕನ್ನಡಿಗರೂ ಇದ್ದಾರಲ್ಲವೇ? ಆದರೆ, ಬೆಂಗಳೂರಿನ ಎಷ್ಟೊಂದು ಹೆಸರಿನ ಫಲಕಗಳಲ್ಲಿ ಕನ್ನಡವೇ ಇಲ್ಲ. ಇಂಥದ್ದು ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು.

ಇನ್ನೂ ಒಂದು ಮುಖ್ಯ ಸಂಗತಿಯಿದೆ. ಇದು ಮುಖ್ಯ ಎಂದು ಎಲ್ಲರಿಗೂ ಅನಿಸುತ್ತದೋ ಇಲ್ಲವೋ ಗೊತ್ತಿಲ್ಲ. ಅನಕ್ಷರಸ್ಥರು ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಇರುವ ಒಂದು ದೇಶದಲ್ಲಿ ಅವರಿಗೂ ಅರ್ಥವಾಗುವ ರೀತಿಯ ಬೋರ್ಡುಗಳು ಬೇಕಲ್ಲವಾ? ಶೌಚಾಲಯ ಗಂಡಸರದ್ದೋ, ಹೆಂಗಸರದ್ದೋ ಎಂದು ಸೂಚಿಸುವ ಫಲಕಗಳಲ್ಲಿ ಚಿತ್ರವನ್ನೇನೋ ಹಾಕಿರುತ್ತಾರೆ. ಆದರೆ, ಆ ಚಿತ್ರವನ್ನು ದಿಢೀರನೆ ನೋಡಿದರೆ ಕೆಲವೊಮ್ಮೊ ವ್ಯತ್ಯಾಸವೇ ಗೊತ್ತಾಗುವುದಿಲ್ಲ. ಎಷ್ಟು ಜನ ‘ಹೊರಗಿನಿಂದ’ ಬರುತ್ತಾರೆ ಎಂದು ಲೆಕ್ಕ ಹಾಕಿ ವೇದನೆಯನ್ನು ತೋರುವವರು, ಒಳಗೇ ಇರುವವರನ್ನು ಹೊರಗಿನವರನ್ನಾಗಿಸುವ ಇಂತಹ ಸಂಗತಿಗಳ ಬಗ್ಗೆ ಯಾಕೆ ಸಂವೇದನೆ ತೋರುವುದಿಲ್ಲ?

ಈ ಸಮಸ್ಯೆ ಹೆಚ್ಚಾಗಿ ಕಾಡುವುದು ಆಸ್ಪತ್ರೆಗಳಲ್ಲಿ. ಶೌಚಾಲಯಗಳ ಮುಂದೆ ಇಂಗ್ಲಿಷಿನಲ್ಲಿ ಹಿ (ಅವನು) ಅಥವಾ ಷಿ (ಅವಳು) ಎಂದು ಮಾತ್ರ ಹಾಕುವ, ಚಿತ್ರ ಹಾಕದ ದೊಡ್ಡ ಹೋಟೆಲ್ಲಿಗೆ ಹೋಗೋದೇ ಬೇಡ ಎಂದಿಟ್ಟುಕೊಳ್ಳೋಣ. ಆದರೆ, ಆಸ್ಪತ್ರೆಗೆ ಹೋಗದಿರಲಾದೀತೇ? ಆಸ್ಪತ್ರೆಗೆ ಹೋಗಬೇಕೆಂದರೆ, ಬಹಳಷ್ಟು ಹಳ್ಳಿ ಜನರಿಗೆ ಇರುವ ಸಮಸ್ಯೆ ‘ನಮ್ಮನ್ನು ಬಹಳ ಸುತ್ತಿಸ್ತಾರೆ. ಎಲ್ಲಿಗೆ ಹೋಗಬೇಕು ಎಂಬುದೇ ಗೊತ್ತಾಗಲ್ಲ.’ ಅಂತಹ ಕಡೆ ಹೆಚ್ಚಿನ ಫಲಕಗಳು ಇಂಗ್ಲಿಷಿನಲ್ಲಿ ಇರುತ್ತವೆ. ಖಾಸಗಿ ಆಸ್ಪತ್ರೆಗಳಲ್ಲಿ ಇದು ಇನ್ನಷ್ಟು ಹೆಚ್ಚು.

ಇವೆಲ್ಲವೂ ಹಿಂದಿ ಬಳಕೆಯ ಒಂದು ಮುಖ ಮಾತ್ರ. ಹಿಂದಿ ಹೇರಿಕೆಯನ್ನು ಸುಗಮಗೊಳಿಸುವ ಇನ್ನೂ ಹಲವು ವಿಧಾನಗಳನ್ನು ಅಲ್ಪಸಂಖ್ಯಾತ ಹಿಂದಿ ಯಜಮಾನರು ಬಹಳ ಹಿಂದಿನಿಂದಲೂ ಕಂಡುಕೊಂಡಿದ್ದಾರೆ. ಸಾಕಷ್ಟು ಸರ್ಕಾರೀ ಅನುದಾನದೊಂದಿಗೆ ಹಿಂದಿ ಪ್ರಚಾರ ಪರಿಷತ್ ಮಾತ್ರವಲ್ಲದೇ ದಕ್ಷಿಣ ಭಾರತ ಹಿಂದೀ ಪ್ರಚಾರ ಪರಿಷದ್ ಸಹಾ ದಶಕಗಳಿಂದ ಅಸ್ತಿತ್ವದಲ್ಲಿದೆ. ಕೇಂದ್ರ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ದಿನಕ್ಕೊಂದು ಹಿಂದೀ ಪದ ಬರೆದು ಪ್ರಚುರಗೊಳಿಸಲಾಗುತ್ತದೆ. ಇದು ಕೇವಲ ಒಂದು ಮೆಟ್ರೋದಲ್ಲಿನ ಸಮಸ್ಯೆಯಲ್ಲ. ಕೇಂದ್ರ ಸ್ವಾಮ್ಯದ ರೈಲ್ವೇ, ಟೆಲಿಕಾಂ, ಸಾರ್ವಜನಿಕ ಉದ್ದಿಮೆಗಳು, ಕೇಂದ್ರ ಇಲಾಖೆಗಳು ಎಲ್ಲೆಡೆಯೂ ಹಿಂದಿಗೆ ಪ್ರಾಶಸ್ತ್ಯ ಇದ್ದೇ ಇದೆ. ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಭಾರತದ ಇತರ ಭಾಷೆಗಳಲ್ಲಿ ಬರೆಯುವುದು ಸಾಧ್ಯವಿರಲಿಲ್ಲ. ಈಗ ಕೆಲವು ಕಡೆ ಅವಕಾಶ ಕಲ್ಪಿಸಲಾಗಿದೆಯಾದರೂ, ಹಿಂದಿಗಿರುವ ವಿಶೇಷ ಸ್ಥಾನಮಾನ ಇದ್ದೇ ಇದೆ.

ಹಾಗೆಂದು ಹಿಂದಿಯೆಂಬುದು ಉತ್ತರ ಭಾರತದ ಬಹುಭಾಗದಲ್ಲಿ ಇರುವ ಭಾಷೆಯೆಂಬುದೂ ವಾಸ್ತವವಲ್ಲ. ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಛತ್ತೀಸ್‍ಗಡ, ಜಾರ್ಖಂಡ್, ಉತ್ತರಖಂಡಗಳಲ್ಲಿ ಆಡುವ ಭಾಷೆಯೇ ಹಿಂದಿ ಎಂದು ಕೆಲವರು ತಿಳಿದಿದ್ದಾರೆ. ಈ ಎಲ್ಲಾ ರಾಜ್ಯಗಳಲ್ಲಿ ಅವರದ್ದೇ ಆದ ಒಂದು ಭಾಷೆ ಮಾತ್ರವಲ್ಲಾ, ಕೆಲವೊಮ್ಮೆ 3-4 ಭಾಷೆಗಳಿವೆ. ಇವೆಲ್ಲವೂ ಒಂದೇ ತಾಯಿ ಭಾಷೆಯ ವಿವಿಧ ಉಪಭಾಷೆಗಳಲ್ಲ. ತಮ್ಮದೇ ಆದ ವಿಶಿಷ್ಟ ಯಾಸೆ ಮತ್ತು ಪದಭಂಡಾರಗಳನ್ನು ಹೊಂದಿವೆ. ಪಿಕೆ ಸಿನೆಮಾದಲ್ಲಿ ಅಮೀರ್ ಖಾನ್  ಮಾತಾಡುವುದು ಭೋಜ್‍ಪುರಿ. ರಾಮ್‍ವಿಲಾಸ್ ಪಾಸ್ವಾನ್ ಮತ್ತು ಲಾಲೂ ಪ್ರಸಾದ್ ಯಾದವ್ ಈ ಭಾಷೆಯನ್ನು ಮಾತಾಡುತ್ತಾರೆ. ಅದೇ ಸಿನೆಮಾದಲ್ಲಿ ಸಂಜಯ್‍ದತ್ ಆಡುವುದು ರಾಜಸ್ತಾನೀ ಅನಿಸುತ್ತದೆ. ಪೊಲೀಸ್ ಇನ್ಸ್‍ಪೆಕ್ಟರ್ ಪಾಂಡೆ ಪಾತ್ರಧಾರಿ ಆಡುವುದು ದೆಹಲಿಯ ಅಕ್ಕಪಕ್ಕದಲ್ಲೇ ಇರುವ ‘ಹಿಂದಿ’ಗಿಂತ ಭಿನ್ನವಾದ ಭಾಷೆ. ತನುವೆಡ್ಸ್ ಮನು ರಿಟನ್ರ್ಸ್‍ನ ನಾಯಕಿ ಕಂಗನಾ ರನಾವತ್ ಲಖನೌನಲ್ಲಿ ಮಾತನಾಡುವ ಡಯಲೆಕ್ಟ್ ಮಾತನಾಡಿದರೆ, ಇನ್ನೊಬ್ಬ ನಾಯಕಿ (ಅದೂ ಕಂಗನಾನೇ, ದ್ವಿಪಾತ್ರ) ಹರಿಯಾಣ್ವೀ ಮಾತಾಡುತ್ತಾಳೆ. ರುದಾಲಿಯ ಹಿಂದಿಯೇ ಬೇರೆಯಾಗಿದೆ. ಸಿನೆಮಾ ರಂಗ ಸಾಮಾನ್ಯವಾಗಿ ಒಂದು ಭಾಷೆಯ ಒಂದು ಡಯಲೆಕ್ಟ್‍ಅನ್ನೇ ಪ್ರಧಾನವಾಗಿ ಮುಂದಿಡುತ್ತದೆ. ಇದಕ್ಕೆ ಬಾಲಿವುಡ್ ಹೊರತಲ್ಲ. ಹಾಗೆ ನೋಡಿದರೆ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಯೋಜನೆಗಿಂತ ಬಾಲಿವುಡ್ ಮತ್ತು ಟಿವಿ ಧಾರಾವಾಹಿಗಳು ಹಿಂದಿಯನ್ನು ಹೆಚ್ಚು ಹರಡಿವೆ.

ಆದರೂ, ಮೇಲೆ ಹೇಳಿದಂತಹ ಉದಾಹರಣೆಗಳು ನಮಗೆ ‘ಹಿಂದಿ’ ಪ್ರದೇಶದ ವಿವಿಧ ಭಾಷೆಗಳ ಸೊಗಡನ್ನು ಪರಿಚಯಿಸುತ್ತವೆ. ಇವುಗಳ ಮಧ್ಯೆ ಕೇವಲ ಯಾಸೆಯ ವ್ಯತ್ಯಾಸವಲ್ಲದೇ ಪದಗಳೇ ಬೇರೆ ಬೇರೆಯಾಗಿವೆ.

ಇವೆಲ್ಲದರ ಮಧ್ಯೆ ಇನ್ನೊಂದು ಅಂಶವನ್ನೂ ಗಮನಿಸಬೇಕು. ಉತ್ತರ ಭಾರತ ಅಹಂಕಾರ ಎಂಬುದೊಂದು ಸಾರ್ವತ್ರಿಕವಾಗಿ ಇಲ್ಲದಿರಬಹುದು. ಆದರೆ, ಉತ್ತರದ ಮಧ್ಯಮವರ್ಗಕ್ಕಂತೂ ಅದು ಎದ್ದು ಕಾಣುವ ಹಾಗೆ ಇದೆ. ಹೊಟ್ಟೆ ಪಾಡಿಗೆ ದುಡಿಯಲು ಬರುವ ಬಡವರಿಗೆ ಅದು ಇರುವುದಿಲ್ಲ. ಇನ್ನು ‘ಹಿಂದೀ ಭಾಗದ’ ರೊಕ್ಕಸ್ಥರಿಗೆ ಏನಿದೆ? ಅವರಿಗೆ ಇಡೀ ದೇಶ ಅವರ ಅಂಗೈ ಮುಷ್ಟಿಯಲ್ಲಿ ಇರಬೇಕೆಂಬ ಭಾವ ಇದೆ. ಹಿಂದಿಯೆಂಬುದನ್ನು ಸೃಷ್ಟಿಸಿ (ಹೌದು, ಸೃಷ್ಟಿಸಿ. 300 ವರ್ಷಗಳ ಹಿಂದೆ ಹಿಂದಿಯೆಂಬುದೊಂದು ಇರಲಿಲ್ಲ. ‘ಹಿಂದೂ ಧರ್ಮ’ ಎಂದು ಕರೆಯಲಾಗುತ್ತಿರುವುದು ಹೇಗೆ 300 ವರ್ಷಗಳ ಹಿಂದೆ ಇರಲಿಲ್ಲವೋ ಹಾಗೆ), ಅದನ್ನು ಭಾರತದಾದ್ಯಂತ ಹರಡಿಸುವುದರ ಹಿಂದೆ ಈ ರೊಕ್ಕಸ್ಥರ ಹಿತಾಸಕ್ತಿಯೂ ಇದೆ.

ಈಗ ದೇಶವನ್ನು ಕೆಲವು ಜನರ ಯಾಜಮಾನ್ಯದ ಕೆಳಗೆ ತರಲು ಇಚ್ಛಿಸುತ್ತಿರುವ ಶಕ್ತಿಗಳು ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಗಳಾಗಿದ್ದಾರೆ. ಅವರು ದೇಶಭಕ್ತಿಯ ಹೆಸರಿನಲ್ಲಿ ಭಾರತವೆಂಬ ದೇಶದ ಪರಿಕಲ್ಪನೆಗೇ ಅಪಾಯ ತಂದೊಡ್ಡುತ್ತಿದ್ದಾರೆ. ಅವರ ನಿಲುವಿನೊಂದಿಗೆ ದಕ್ಷಿಣ ಭಾರತದಲ್ಲೂ ಕೈ ಜೋಡಿಸಿರುವ ಶಕ್ತಿಗಳಿವೆ. ಕರ್ನಾಟಕದಲ್ಲಿ ಅವರು ಇತರ ರಾಜ್ಯಗಳಿಗಿಂತ ಹೆಚ್ಚು ಬಲಶಾಲಿಗಳಾಗಿದ್ದಾರೆ. ಹೀಗಾಗಿಯೂ ಹಿಂದಿ ಹೇರಿಕೆಯೆಂಬುದು ಹಿಂದಿಗಿಂತಲೂ ಹೆಚ್ಚು ಅಪಾಯಕಾರಿ ಸಂಗತಿಯಾಗಿದೆ.

ಈ ಎಲ್ಲಾ ಕಾರಣಗಳಿಂದ ನಿಧಾನಕ್ಕೆ ಇದು ಕೇವಲ ಭಾಷೆಯೊಂದರ ಹೇರಿಕೆಯ ವಿಷಯವಾಗಿ ಉಳಿಯುವುದಿಲ್ಲ. ಕೆಲವರು ಉತ್ತರ ಭಾರತ ಮತ್ತು ದ್ರಾವಿಡ ಭಾರತವೆಂಬ ಎರಡು ಭಿನ್ನ ಪ್ರಾಂತಗಳ ಕುರಿತು ಮಾತಾಡುತ್ತಿದ್ದಾರೆ. ಇದಕ್ಕೆ ಹಲವು ಆಯಾಮಗಳಿವೆ. ಸದ್ಯಕ್ಕೆ ಇಷ್ಟು ಮಾತ್ರ ಹೇಳಬಹುದು. ಧರ್ಮ ಒಂದೇ ಆಗಿದ್ದರೂ, ಪೂರ್ವ ಪಾಕಿಸ್ತಾನವೆಂದು ಕರೆಸಿಕೊಳ್ಳುತ್ತಿದ್ದ ಬಾಂಗ್ಲಾ ದೇಶವು, ಪಾಕಿಸ್ತಾನದಿಂದ ಬೇರೆಯಾದದ್ದು ಏಕೆ ಮತ್ತು ಹೇಗೆ ಎಂಬುದನ್ನು ಎಲ್ಲರೂ ಅರಿತಿರಬೇಕು. ವಸಾಹತುಶಾಹಿಗಳ ವಿರುದ್ಧದ ಧೀರೋದಾತ್ತ ಜನಸಂಗ್ರಾಮದಲ್ಲಿ ಒಂದಾದ ದೇಶವಿದು. ಈ ದೇಶ ಈಗಲೂ ಸಾಮಾಜಿಕವಾಗಿ ಜಾತಿ/ಧರ್ಮಗಳ ಹೆಸರಿನಲ್ಲಿ ಛಿದ್ರವೇ ಆಗಿದೆ. ಭಾಷೆಗಳೂ ಜನರನ್ನು ಪ್ರತ್ಯೇಕಿಸಿದೆ. ಈ ಬಹುಭಾಷೆಗಳು ಮತ್ತು ಬಹುಸಂಸ್ಕೃತಿಗಳು ದೇಶದ ಸಂಪತ್ತೂ ಆಗಬಲ್ಲವು. ಆದರೆ, ಜಾತಿಗಳಲ್ಲ. ಧಾರ್ಮಿಕ ಯಾಜಮಾನ್ಯವೂ ಅಲ್ಲ. ಅವು ದೇಶವನ್ನು ಒಡೆಯಬಲ್ಲವು ಅಷ್ಟೇ. ದೇಶದ ಸಮಸ್ತ ಸಾಮಾನ್ಯ ಜನರು ಸಮಾನ ಶತ್ರುಗಳ ವಿರುದ್ಧದ ಹೋರಾಟದಲ್ಲಿ ಒಂದಾಗುವ ಅಗತ್ಯವಿರುವಾಗ ನಾವು ಒಡಕಿಗೆ ಅವಕಾಶವೀಯಬಾರದು. ಆ ಎಚ್ಚರವನ್ನು ಹೇರಿಕೆ ಮಾಡಲು ಬಯಸುತ್ತಿರುವವರು, ಹೇರಿಕೆಯನ್ನು ಸಹಜ ಎಂದು ಬಗೆದಿರುವವರು ಹೊಂದಿರುವ ಅಗತ್ಯ ಹೆಚ್ಚಿದೆ.

ಕಡೆಯದಾಗಿ ಒಂದು ಮಾತು. ಹಿಂದಿ ಹೇರಿಕೆಯೆಂಬುದು ಸಮಸ್ಯೆ, ಇಂಗ್ಲಿಷ್ ಹೇರಿಕೆ ಸಮಸ್ಯೆಯಲ್ಲವೇ? ಮೇಲೆ ಹೇಳಿದ ಬಹಳಷ್ಟು ಸಮಸ್ಯೆಗಳು ಇಂಗ್ಲಿಷಿನಿಂದಲೂ ಇವೆ. ಇನ್ನೂ ಹೆಚ್ಚು ಇವೆ. ನಮ್ಮ ಭಾಷೆಯನ್ನು ನುಂಗಿ ಹಾಕುತ್ತಿರುವುದರಲ್ಲಿ ಇಂಗ್ಲಿಷಿನ ಪಾಲು ಹೆಚ್ಚೇ ಇದೆ. ಹಿಂದಿ ಹೇರಿಕೆಯ ವಿರುದ್ಧ ಮಾತಾಡುತ್ತಿರುವವರಲ್ಲಿ ಕೆಲವರು ಈ ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಕೆಲವರು ಇಂಗ್ಲಿಷಿನ ‘ಪರವಾಗಿ’ ವಾದಿಸುವುದಂತೂ ವಿಚಿತ್ರವಾಗಿ ತೋರುತ್ತದೆ. ಇಂದಿನ ರಾಜಕೀಯ ಸಾಮಾಜಿಕ ಸಂದರ್ಭದಲ್ಲಿ ಇಂಗ್ಲಿಷಿನ ಪರವಾದ ವಾದಗಳು ಹಿಂದಿಯ ಪರವಾದ ವಾದಗಳಿಗೂ ನಿಧಾನಕ್ಕೆ ಪುಷ್ಟಿ ಕೊಡಬಹುದೆಂಬ ಎಚ್ಚರವನ್ನೂ ನಾವು ಹೊಂದಬೇಕಿದೆ. ಆದರೆ, ‘ಹಿಂದಿಯ ವಿರುದ್ಧ ಮಾತಾಡುವವರು ಇಂಗ್ಲಿಷ್‍ನ ವಿರುದ್ಧ ಏಕೆ ಮಾತಾಡುವುದಿಲ್ಲ’ ಎಂದು ಹಿಂದಿಪರ ವಾದಿಗಳು ಕೇಳುವುದು ಮಾತ್ರ ಇನ್ನೂ ವಿಚಿತ್ರ. ಏಕೆಂದರೆ, ಒಂದು ಮೇಲಾಳ್ವಿಕೆಯ ವಿರುದ್ಧ ಹೋರಾಟ ಮಾಡಲು, ಇನ್ನೊಂದು ಮೇಲಾಳ್ವಿಕೆಯ ವಿರುದ್ಧವೂ ಹೋರಾಟ ಮಾಡಲೇಬೇಕೆಂಬುದು ಪೂರ್ವ ಷರತ್ತೇನಲ್ಲ. ಒಂದು ವೇಳೆ ಇಂಗ್ಲಿಷಿನ ವಿರುದ್ಧದ ಕಹಳೆ ಅಷ್ಟೊಂದು ಮೊಳಗುತ್ತಿಲ್ಲ ಎಂದು ಅಂಥವರಿಗೆ ಅನ್ನಿಸಿದರೆ ಅದನ್ನು ಬೇಕಾದರೆ ಅವರೇ ಮಾಡಬಹುದು.

ಒಟ್ಟಿನಲ್ಲಿ ಹಿಂದಿ ಹೇರಿಕೆಯ ವಿರುದ್ಧದ ಹೋರಾಟವು ಈ ಕಾಲದ ಅಗತ್ಯಗಳಲ್ಲಿ ಒಂದಾಗಿರುವುದಂತೂ ಸತ್ಯ.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಾವಿಂದು ಹಿಂದಿ ಹೇರಿಕೆಯನ್ನು ವಿರೋಧಿಸದಿದ್ದರೆ, ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಉಳಿಯುವುದಿಲ್ಲ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...