ಐಎನ್‌ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ಬಂಧನದಲ್ಲಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂಗೆ ಇಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಆಗಸ್ಟ್ 22 ರಂದು ಸಿಬಿಐ ಬಂಧನಕ್ಕೊಳಗಾದ ಎರಡು ತಿಂಗಳ ನಂತರ ಚಿದಂಬರಂ ಪಾಲಿಗೆ ಇದೇ ಮೊದಲ ಒಳ್ಳೆಯ ಸುದ್ದಿಯಾಗಿದೆ.
ಆದರೂ ಮಾಜಿ ಹಣಕಾಸು ಸಚಿವರ ಸುಲಭವಾಗಿ ಜೈಲಿನಿಂದ ಹೊರ ಬರಲು ಸಾಧ್ಯವಿಲ್ಲ. ಏಕೆಂದರೆ ಸಿಬಿಐ ನಡೆಸುತ್ತಿರುವ ತನಿಖೆಯಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದರೂ ಸಹ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿರುವ ಸಂಬಂಧಿತ ಪ್ರಕರಣವೊಂದರಲ್ಲಿ ಅವರಿಗೆ ಜಾಮೀನು ಸಿಗಬೇಕಾಗಿದೆ. ಚಿದಂಬರಂ ಅವರನ್ನು ಅಕ್ಟೋಬರ್ 24 ರವರೆರೂ ಇಡಿ ಬಂಧನದಲ್ಲಿಡಲು ಆದೇಶಿಸಲಾಗಿದೆ.
ಹೈಕೋರ್ಟ್ ಜಾಮೀನು ನಿರಾಕರಿಸಿದ್ದರ ವಿರುದ್ಧ ಚಿದಂಬರಂ ಅವರ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಆರ್ ಭಾನುಮತಿ ನೇತೃತ್ವದ ನ್ಯಾಯಪೀಠ, ಚಿದಂಬರಂಗೆ ಒಂದು ಲಕ್ಷ ರೂನ ಬಾಂಡ್ ಮತ್ತು ಇಬ್ಬರು ಗಣ್ಯರ ಜಾಮೀನು ನೀಡುವಂತೆ ಆದೇಶಿಸಿದೆ. ಅವರ ಪಾಸ್‌ಪೋರ್ಟ್ ಅನ್ನು ಇದುವರೆಗೂ ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸದಿದ್ದಲ್ಲಿ ಕೂಡಲೇ ಒಪ್ಪಿಸಬೇಕಾಗಿದೆ.
ಚಿದಂಬರಂ ಅವರನ್ನು ಬೇರೆ ಯಾವುದೇ ಪ್ರಕರಣದಲ್ಲಿ ಬಂಧಿಸದಿದ್ದರೆ ಅಧಿಕಾರಿಗಳು ಬಿಡುಗಡೆ ಮಾಡಬಹುದು ಎಂದು ನ್ಯಾಯಮೂರ್ತಿ ಆರ್ ಭಾನುಮತಿ ಹೇಳಿದರು. ಆದರೆ ಅವರಿನ್ನು ಇಡಿ ಅಧಿಕಾರಿಗಳ ವಶದಲ್ಲಿದ್ದಾರೆ.


