ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಮರಣದಂಡನೆ ಘೋಷಣೆಯಾಗಿದ್ದ ವ್ಯಕ್ತಿಯೊಬ್ಬರನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದೆ. ‘ಪ್ರಕರಣದ ವಿಚಾರಣೆ ಸರಿಯಾದ ರೀತಿಯಲ್ಲಿ ನಡೆದಿಲ್ಲ’ ಎಂದು ತೀರ್ಪು ಪ್ರಕಟಿಸುವ ವೇಳೆ ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ವಿಚಾರಣಾ ನ್ಯಾಯಾಧೀಶರು ತನಿಖಾಧಿಕಾರಿಗೆ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಗಳನ್ನು ಮುಖ್ಯ ವಿಚಾರಣೆಯ ಸಮಯದಲ್ಲಿ ಹೇಳಲು ನಿಯಮ ಮೀರಿ ಅವಕಾಶ ಕೊಟ್ಟಿದ್ದಾರೆ ಮತ್ತು ಆ ಹೇಳಿಕೆಗಳನ್ನು ಸಾಕ್ಷಿಯಾಗಿ ಒಪ್ಪಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ವ್ಯಕ್ತಿಗೆ ಐಪಿಸಿ ಸೆಕ್ಷನ್ 376ಎ (ಅತ್ಯಾಚಾರ ಸಾವಿಗೆ ಕಾರಣವಾಗುವುದು), 302 (ಕೊಲೆ), 366 (ಅಪಹರಣ), 363 (ಅಪ್ರಾಪ್ತ ವಯಸ್ಕರನ್ನು ಅಪಹರಿಸುವುದು), 201 (ಸಾಕ್ಷ್ಯ ನಾಶ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 5/6 ರ ಅಡಿಯಲ್ಲಿ ಮರಣದಂಡನೆ ವಿಧಿಸಲಾಗಿತ್ತು.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಕೆಳ ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದು, ತನಿಖಾಧಿಕಾರಿಯಿಂದ ನಿರೂಪಿಸಲ್ಪಟ್ಟ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಗಳನ್ನು ಸಾಕ್ಷ್ಯವಾಗಿ ಸ್ವೀಕರಿಸಿದ ವಿಚಾರಣಾ ನ್ಯಾಯಾಧೀಶರ ನಿರ್ಧಾರವು ಸಾಕ್ಷ್ಯ ಕಾನೂನಿನ ಉಲ್ಲಂಘನೆಯಾಗಿದೆ. ಏಕೆಂದರೆ ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ, ಪೊಲೀಸರ ಸಮ್ಮುಖದಲ್ಲಿಯೂ ಕೂಡ ಮ್ಯಾಜಿಸ್ಟ್ರೇಟ್ ದಾಖಲಿಸಿದ ತಪ್ಪೊಪ್ಪಿಗೆ ಹೇಳಿಕೆಗಳು ಮಾತ್ರ ಕಾನೂನುಬದ್ಧವಾಗಿ ಸ್ವೀಕಾರಾರ್ಹವಾಗಿವೆ ಎಂದು ಹೇಳಿದೆ.
ಡಿಎನ್‌ಎ ಪರೀಕ್ಷೆ ನಡೆಸಿದ ವೈಜ್ಞಾನಿಕ ತಜ್ಞರ ಬಗ್ಗೆ ಮಾಹಿತಿ ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯವು ಎತ್ತಿ ತೋರಿಸಿದೆ. ತಜ್ಞರು ಡಿಎನ್‌ಎ ಪರೀಕ್ಷೆ ವೇಳೆ ಅನುಸರಿಸಿದ ವಿಧಾನದ ಬಗ್ಗೆ ಪರೀಶಿಲನೆ ನಡೆಸದ ಕಾರಣ ಡಿಎನ್‌ಎ ವರದಿ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಇದು ಸಾಕ್ಷ್ಯ ಕಾಯ್ದೆಯ ಸೆಕ್ಷನ್ 45 ಮತ್ತು ರಾಹುಲ್ vs ದೆಹಲಿ ಸರ್ಕಾರ ಪ್ರಕರಣದಲ್ಲಿ ನೀಡಿದ ತೀರ್ಪಿನ ಉಲ್ಲಂಘನೆ ಎಂದಿದೆ.
ರಾಹುಲ್ vs ದೆಹಲಿ ಸರ್ಕಾರ ಪ್ರಕರಣದಲ್ಲಿ, ಡಿಎನ್‌ಎ ಪರೀಕ್ಷೆ ವೇಳೆ ತಜ್ಞರು ವೈಜ್ಞಾನಿಕ ವಿಧಾನಗಳನ್ನು ವಿಶ್ವಾಸಾರ್ಹವಾಗಿ ಅನ್ವಯಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಸಾಬೀತುಪಡಿಸುವುದು ಅವಶ್ಯಕ, ಇಲ್ಲದಿದ್ದರೆ ಸೆಕ್ಷನ್ 293 ಸಿಆರ್‌ಪಿಸಿ ಪ್ರಕಾರ ಡಿಎನ್‌ಎ ವರದಿಯನ್ನು ಸಾಕ್ಷ್ಯವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ನ್ಯಾಯಾಲಯ ಹೇಳಿತ್ತು.
ಡಿಎನ್‌ಎ ವರದಿಯನ್ನು ಸಿದ್ಧಪಡಿಸುವಲ್ಲಿ ವೈಜ್ಞಾನಿಕ ತಜ್ಞರು ಬಳಸಿದ ವಿಧಾನಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವಾಗ, ಅಂತಹ ಪುರಾವೆಗಳನ್ನು ಅವಲಂಬಿಸುವುದು ಅಸುರಕ್ಷಿತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಏಕೆಂದರೆ, ಸಂಗ್ರಹಿಸಿದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸುವ ಮೊದಲು ಅದನ್ನು ಪೊಲೀಸರ ವಶದಲ್ಲಿ ಇರಿಸಿದಾಗ ಅವುಗಳನ್ನು ತಿರುಚುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದಿದೆ.
ವಿಧಿವಿಜ್ಞಾನ ಮಾದರಿಗಳ ಸಮಗ್ರತೆಯನ್ನು ಸ್ಥಾಪಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದೆ ನಂತರ, ವೈದ್ಯಕೀಯ ಅಧಿಕಾರಿ ಸೀಲಿಂಗ್ ಮಾದರಿಗಳನ್ನು ದೃಢೀಕರಿಸಿಲ್ಲ ಮತ್ತು ಪೊಲೀಸ್ ಸಾಕ್ಷಿಗಳನ್ನು ಎಫ್‌ಎಸ್‌ಎಲ್‌ಗೆ ಸುರಕ್ಷಿತವಾಗಿ ತಲುಪಿಸಲಾಗಿದೆ ಎಂಬುವುದನ್ನು ಸಾಬೀತುಪಡಿಸಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಮೇಲಿನ ಎಲ್ಲಾ ಅಂಶಗಳನ್ನು ಉಲ್ಲೇಖಿಸಿದ ನ್ಯಾಯಾಲಯ ಮರಣದಂಡನೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ದೋಷಮುಕ್ತಗೊಳಿಸಿ ಮಹತ್ವದ ತೀರ್ಪು ನೀಡಿದೆ.
ಏನಿದು ಪ್ರಕರಣ?
ಉತ್ತರಾಖಂಡದ ಉಧಾಂಸಿಂಗ್ ನಗರ ಜಿಲ್ಲೆಯಲ್ಲಿ 2016ರ ಜೂನ್‌ನಲ್ಲಿ ಈ ಘಟನೆ ನಡೆದಿದ್ದು, ಜಾಗರಣೆ ವೇಳೆ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಬಳಿಕ ಆಕೆಯ ಮೃತದೇಹ ಪಕ್ಕದ ಹೊಲದಲ್ಲಿ ಪತ್ತೆಯಾಗಿತ್ತು. ಒಂದು ದಿನದ ಬಳಿಕ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದರು. ಎಫ್ಐಆರ್ ದಾಖಲಿಸುವ ವೇಳೆ, ಬಾಲಕಿಯನ್ನು ಆರೋಪಿಯ ಜೊತೆ ನೋಡಿದ್ದಾಗಿ ಹೇಳುವ ಯಾವ ಸಾಕ್ಷಿಯೂ ಪೊಲೀಸರ ಬಳಿ ಇರಲಿಲ್ಲ. ಆತ ಜಾಗರಣ ಕಾರ್ಯಕ್ರಮದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದ. ಆದರೆ ಪೊಲೀಸರು ಆತನ ವಿರುದ್ಧ ಆರೋಪ ಹೊರಿಸಿದ್ದರು.
ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರನ್ನು ಪಾಟೀಸವಾಲಿಗೆ ಗುರಿಪಡಿಸಿಲ್ಲ ಮತ್ತು ಯಾವ ಪೊಲೀಸ್‌ಗೆ ಮಾದರಿಗಳನ್ನು ಹಸ್ತಾಂತರಿಸಲಾಗಿದೆ ಎಂಬ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ. ಮಾದರಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸುರಕ್ಷಿತವಾಗಿ ನೀಡಲಾಗಿದೆ ಎಂದೂ ಹೇಳಿಲ್ಲ. ಆರೋಪಿಯಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆದ ಪೊಲೀಸರು ಅದಕ್ಕೇ ಅಂಟಿಕೊಂಡರು ಎಂದು ನ್ಯಾಯಾಲಯ ವಿಶ್ಲೇಷಿಸಿದೆ.
ಪೊಲೀಸರು ನೀಡಿರುವ ಪುರಾವೆ ಸಂಪೂರ್ಣ ನಂಬಲಸಾಧ್ಯ. ಸಂಗ್ರಹಿಸಿದ ಪುರಾವೆಗಳು ಕೂಡಾ ಸುಳ್ಳು. ಅರ್ಜಿದಾರನಿಗೆ ಸಾಕ್ಷಿಗಳನ್ನು ನಾಶಪಡಿಸುವ ಎಲ್ಲ ಅವಕಾಶವೂ ಇತ್ತು. ಘಟನೆ ನಡೆದ ಎರಡು ದಿನಗಳ ಬಳಿಕವೂ ಪೊಲೀಸರು ವಶಪಡಿಸಿಕೊಂಡ ಬಟ್ಟೆಗಳನ್ನು ಇಟ್ಟುಕೊಳ್ಳುವ ಅಗತ್ಯವಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಿಸಿದ ಕೇಂದ್ರದ ಬಿಜೆಪಿ ಸರ್ಕಾರ


