Homeಮುಖಪುಟಆಪರೇಷನ್ 136: ಕ್ರೋನಿ ಕ್ಯಾಪಿಟಲಿಸಂ, ಕ್ರೋನಿ ಜರ್ನಲಿಸಂ ಮತ್ತು ಕ್ರೋನಿ ಪಾಲಿಟಿಕ್ಸ್

ಆಪರೇಷನ್ 136: ಕ್ರೋನಿ ಕ್ಯಾಪಿಟಲಿಸಂ, ಕ್ರೋನಿ ಜರ್ನಲಿಸಂ ಮತ್ತು ಕ್ರೋನಿ ಪಾಲಿಟಿಕ್ಸ್

- Advertisement -
- Advertisement -
  • ಡಾ.ಎಚ್.ವಿ.ವಾಸು |

ಹಾಗೆ ನೋಡಿದರೆ ಈ 10 ವರ್ಷಗಳಲ್ಲಿ ಇದರಷ್ಟು ದೊಡ್ಡ ಬ್ರೇಕಿಂಗ್ ನ್ಯೂಸ್ ಇನ್ನೊಂದು ಬಂದಿರಲಿಕ್ಕಿಲ್ಲ. ಏಕೆಂದರೆ 24ಕ್ಕೂ ಹೆಚ್ಚು ಟಿವಿ/ನ್ಯೂಸ್ ಪೇಪರ್‍ಗಳು ಕಪ್ಪು ಹಣ ಪಡೆದು, ಬಿಜೆಪಿ ಪಕ್ಷದ ಪರವಾಗಿ ಹಾಗೂ ಹಿಂದೂತ್ವ ಸಿದ್ಧಾಂತವನ್ನು ಹರಡಲು ಒಪ್ಪಿಕೊಂಡ ‘ಕುಟುಕು ಕಾರ್ಯಾಚರಣೆ’ಯ ವಿಡಿಯೋ ಪ್ರಕಟವಾಗಿದೆ. ಜಾಹೀರಾತು ವಿಭಾಗದ ಮುಖ್ಯಸ್ಥರುಗಳಿಂದ ಹಿಡಿದು, ಹಿರಿಯ ಸಂಪಾದಕರು ಮತ್ತು ಮಾಧ್ಯಮ ಸಂಸ್ಥೆಯ ಮಾಲೀಕರವರೆಗೆ ಹಲವರು ಇದರಲ್ಲಿ ಮಾತನಾಡಿದ್ದಾರೆ. ಕೆಲವು ಕೋಟಿಗಳಿಂದ 500 ಕೋಟಿ ರೂ.ಗಳವರೆಗೆ ‘ಡೀಲ್’ನ ಮಾತುಕತೆ ಆಗಿದೆ. ಇದನ್ನು ಬ್ರೇಕಿಂಗ್ ನ್ಯೂಸ್ ಮಾಡಬಹುದೆಂದು ಹೇಗೂ ಆಯಾ ಸುದ್ದಿ ಸಂಸ್ಥೆಗಳಿಗೆ ಅನ್ನಿಸುವುದು ಸಾಧ್ಯವಿಲ್ಲ; ಆದರೆ, ಇತರ ಸುದ್ದಿ ಸಂಸ್ಥೆಗಳೂ ಇದನ್ನು ಬ್ರೇಕಿಂಗ್ ನ್ಯೂಸ್ ಇರಲಿ, ಸಾಧಾರಣ ಸುದ್ದಿಯನ್ನಾಗಿಯೂ ಪ್ರಕಟಿಸಲಿಲ್ಲ. ಸಾಮಾನ್ಯ ಜನರ ಒಂದು ವಿಭಾಗವೂ ‘ಇದರಲ್ಲೇನು ವಿಶೇಷ?, ಮಾಧ್ಯಮದವರೂ ಭ್ರಷ್ಟರೇ. ಅವರೆಲ್ಲಾ ಹಣ ತೆಗೆದುಕೊಂಡೇ ಇಂತಹ ಸುದ್ದಿ ಮಾಡುತ್ತಾರೆ’ ಎಂದು ಹೇಳಿ ಉಪೇಕ್ಷೆ ಮಾಡುತ್ತಿದ್ದಾರೆ.

ಆದರೆ, ಇದು ಉಪೇಕ್ಷೆ ಮಾಡುವ ಸುದ್ದಿ ಅಲ್ಲ. ಸುದ್ದಿಯೇ ಬಿಕರಿಗಿರುವ ದುರಂತದ ಸಂಗತಿ. ಅದರಲ್ಲೂ ವಿಷವನ್ನೂ ಪ್ರಸಾರ ಮಾಡುತ್ತೇವೆ ಎಂದು ಅಪರಿಚಿತ ವ್ಯಕ್ತಿಯೊಬ್ಬನ ಮುಂದೆ ಸಲೀಸಾಗಿ ಮಾಧ್ಯಮ ಮುಖ್ಯಸ್ಥರು ಹೇಳುತ್ತಿದ್ದಾರೆಂದರೆ ನಮ್ಮ ಮಾಧ್ಯಮ ಸಂಸ್ಥೆಗಳು ಚಿಲ್ಲರೆಯಾಗಿ ಮತ್ತು ಸಗಟಾಗಿ ಮಾರಿಕೊಂಡಿರುವ ಅಪಾಯಕಾರಿ ವಿದ್ಯಮಾನ.

ಇನ್ನೂ ಸಹಾ ತಮ್ಮ ಮೊಬೈಲ್ ಮೂಲಕ ವಿವರಗಳನ್ನು ಪಡೆದುಕೊಂಡಿರದವರಿಗಾಗಿ ಈ ವಿವರಗಳು. ಕೋಬ್ರಾ ಪೋಸ್ಟ್ ಡಾಟ್ ಕಾಂ ಎಂಬ ವೆಬ್‍ಪೋರ್ಟಲ್ ಹಿಂದೆಯೂ ಹಲವು ಸ್ಟಿಂಗ್‍ಗಳನ್ನು ನಡೆಸಿದೆ. ಈ ಸಂಸ್ಥೆಯ ಪತ್ರಕರ್ತ ಪುಷ್ಪ್ ಶರ್ಮಾ ಎಂಬಾತ ಮಾಧ್ಯಮ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ತಿಂಗಳುಗಟ್ಟಲೆ ಶ್ರಮ ಹಾಕಿ ನಡೆಸಿದ ಕಾರ್ಯಾಚರಣೆ ಇದು. ಈ ಕಾರ್ಯಾಚರಣೆಗೆ ‘ಆಪರೇಷನ್ 136’ ಎಂದು ಹೆಸರಿಸಲು ಕಾರಣವಿತ್ತು. ಕೋಬ್ರಾಪೋಸ್ಟ್ ಟೀಂ ಈ ಕಾರ್ಯಾಚರಣೆಗೆ ಇಳಿದ ಸಂದರ್ಭದಲ್ಲಿ ಜಗತ್ತಿನಲ್ಲಿ ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಭಾರತದ ಸ್ಥಾನ 136 ಆಗಿತ್ತು. ದುರಂತವೆಂದರೆ, ವಿಡಿಯೋಗಳು ಬಿಡುಗಡೆಯಾಗುವ ಹೊತ್ತಿಗೆ ಭಾರತದ ಸ್ಥಾನ 138 ಆಗಿದೆ.

ಪುಷ್ಪ್ ಶರ್ಮಾ, ಆಚಾರ್ಯ ಅಟಲ್ ಎಂಬ ಹೆಸರಿನಲ್ಲಿ ಮಾಧ್ಯಮ ಸಂಸ್ಥೆಗಳ ಕಮರ್ಷಿಯಲ್ ವಿಭಾಗದ ಮಧ್ಯಮ ಹಂತದ ಸಿಬ್ಬಂದಿಯನ್ನು ಭೇಟಿಯಾಗಲಾರಂಭಿಸಿದ್ದಾರೆ. ಅಲ್ಲಿಂದ ಸಾಧ್ಯವಾದಷ್ಟೂ ಮೇಲೆ ಹೋಗಿ ಡೀಲ್ ಕುದುರಿಸುವ ನಾಟಕವನ್ನು ಆಡಿದ್ದಾರೆ. ಕನ್ನಡಪ್ರಭ ಮತ್ತು ಸುವರ್ಣ ಚಾನೆಲ್‍ನಲ್ಲಿ ಸಂಪಾದಕ ರವಿ ಹೆಗಡೆಯವರ ತನಕ ಹೋಗಿದ್ದರೆ, ಟೈಮ್ಸ್ ಗುಂಪಿನಲ್ಲಿ ಅದರ ಮಾಲೀಕ ವಿನೀತ್ ಜೈನ್‍ವರೆಗೂ ಹೋಗಿದ್ದಾರೆ. (ಇವೆರಡೂ ಸಂಸ್ಥೆಗಳು ಈಗ ‘ಆ ಥರದ ವ್ಯಕ್ತಿ ಬಂದು ಡೀಲ್ ಕುದುರಿಸಲು ಯತ್ನಿಸಿದ್ದು ನಿಜ. ಆದರೆ, ನಮ್ಮವರು ಆತನನ್ನೇ ಕೌಂಟರ್ ಸ್ಟಿಂಗ್ ಮಾಡಲು ಮಾತಾಡಿಸುತ್ತಾ ಹೋದರು ಎಂಬ ಸ್ಪಷ್ಟನೆ ನೀಡಿದ್ದಾರೆ).

ಪಶ್ಚಿಮ ಬಂಗಾಳದ ದೈನಿಕ್ ವರ್ತಮಾನ್ ಮತ್ತು ದೈನಿಕ್ ಸಂಬದ್ ಎರಡು ಮಾಧ್ಯಮ ಸಂಸ್ಥೆಗಳು ಮಾತ್ರ ಈ ಡೀಲ್‍ಅನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ನಿರಾಕರಿಸಿವೆ. ಇಂಡಿಯಾ ಟುಡೇ ಗುಂಪಿನ ಮುಖ್ಯಸ್ಥರಲ್ಲಿ ಒಬ್ಬರಾದ ಕಲ್ಲಿ ಪುರಿ ಅವರ ಜಾಹೀರಾತುಗಳನ್ನು ಹಾಕುವುದಾಗಿಯೂ, ಅವರ ಪರವಾಗಿ ಸುದ್ದಿ ಮಾಡುವುದಾಗಿಯೂ ಒಪ್ಪಿಕೊಂಡಿದ್ದರೂ ಅವರೇನಾದರೂ ತಪ್ಪು ಮಾಡಿದರೆ ವಿಮರ್ಶೆ ಮಾಡಬೇಕಾಗುತ್ತದೆಂದೂ ಹೇಳಿದ್ದಾರೆ.

ಉಳಿದಂತೆ ಕೆಲವು ಮಾಧ್ಯಮ ಸಂಸ್ಥೆಗಳು, ತಾವು ಈಗಾಗಲೇ ಬಿಜೆಪಿ ಮತ್ತು ಸಂಘಪರಿವಾರದ ಪರವಾಗಿಯೇ ಇದ್ದೇವೆಂಬುದನ್ನು ಲಜ್ಜೆಯಿಲ್ಲದೇ ಹೇಳಿದ್ದಾರೆ. ಟಿವಿ 18, ಹಿಂದೂಸ್ತಾನ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ, ರೇಡಿಯೋ ಒನ್, ಇಂಡಿಯಾ ಟುಡೇ, ಎಬಿಪಿ ನ್ಯೂಸ್, ಭಾರತ್ ಸಮಾಚಾರ್, ಬಿಗ್ ಎಫ್‍ಎಂ, ದೈನಿಕ್ ಜಾಗರಣ್, ದಿನಮಲರ್, ಇಂಡಿಯಾ ವಾಯ್ಸ್, ಕೆ ನ್ಯೂಸ್, ಓಪೆನ್, ಲೋಕಮತ್, ಎಂ.ವಿ.ಟಿವಿ, ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್, ಸ್ಟಾರ್ ಇಂಡಿಯಾ, ಸ್ವರಾಜ್ ಎಕ್ಸ್‍ಪ್ರೆಸ್, ಟಿವಿ 5, ಸನ್‍ಗ್ರೂಪ್, ಸಾಧನಾಪ್ರೈಮ್ ನ್ಯೂಸ್, ಆಜ್, ಸುವರ್ಣನ್ಯೂಸ್-ಕನ್ನಡಪ್ರಭ, ಪ್ರಭಾತ್ ಖಬರ್ ಮತ್ತು ದೈನಿಕ್ ಭಾಸ್ಕರ್ ಸಂಸ್ಥೆಗಳನ್ನು ಅವರು ಮಾತಾಡಿಸಿದ್ದಾರೆ. ದೈನಿಕ್ ಭಾಸ್ಕರ್ ಬಹಳ ಮುಂಚೆಯೇ ಕೋರ್ಟ್‍ನಲ್ಲಿ ಇದರ ಪ್ರಸಾರಕ್ಕೆ ತಡೆ ಕೋರಿ ಆದೇಶ ತಂದಿದ್ದರೆ, ಸುವರ್ಣ ನ್ಯೂಸ್ ನಂತರ ತಡೆ ಆದೇಶ ತಂದಿತು.

ಈ ಎಲ್ಲಾ ಮಾಧ್ಯಮ ಸಂಸ್ಥೆಗಳು ಮಾತ್ರವಲ್ಲದೇ, ಹಣಕಾಸು ವಹಿವಾಟು ಆಪ್ ನಡೆಸುವ ಪೇಟಿಎಂ ಸಂಸ್ಥೆಯ ಮುಖ್ಯಸ್ಥರಲ್ಲೊಬ್ಬರನ್ನೂ ಕೋಬ್ರಾಪೋಸ್ಟ್ ಮಾತಾಡಿಸಿತು. ಪ್ರಧಾನಿ ಕಚೇರಿ ಮತ್ತು ಆರೆಸ್ಸೆಸ್‍ಗೆ ತಾನು ಯಾವ್ಯಾವ ರೀತಿಯ ಸಹಾಯ/ಮಾಹಿತಿ ಕೊಟ್ಟಿದ್ದೇನೆಂದರೆ, ಅದನ್ನೆಲ್ಲಾ ಹೇಳಲಾಗದು ಎಂದು ಆತನೂ ಸೀಕ್ರೆಟ್ ಕ್ಯಾಮೆರಾ ಇರುವುದು ಗೊತ್ತಿಲ್ಲದೇ ಮಾತಾಡಿದ್ದಾರೆ. ಕೋಟಿಗಟ್ಟಲೆ ಜನರು ಗೌಪ್ಯತೆ ಕಾಪಾಡಿಕೊಳ್ಳುವ ಭರವಸೆ ಆಧಾರದಲ್ಲಿ ನೀಡಿರುವ ತಮ್ಮ ವೈಯಕ್ತಿಕ ಮಾಹಿತಿಯು ಈ ರೀತಿ ಸೋರಿಕೆ ಮಾಡುವ ಕಂಪೆನಿಗೆ ಕೊಟ್ಟಿದ್ದಾರೆ ಮತ್ತು ಈ ಕಂಪೆನಿಯು ನೋಟು ರದ್ದತಿಯ ನಂತರ ಪ್ರಧಾನಿಯ ಫೋಟೋ ಬಳಸಿಕೊಂಡು ಜಾಹೀರಾತನ್ನು ನೀಡಿತ್ತೆಂಬುದನ್ನು ಮರೆಯಲಾಗದು.

ವಿನೀತ್ ಜೈನ್ ಎಂಬಾತ ದೇಶದುದ್ದಕ್ಕೂ ವೃತ್ತಪತ್ರಿಕೆಗಳು ಮತ್ತು ಚಾನೆಲ್‍ಗಳನ್ನು ಹೊಂದಿರುವ ಟೈಮ್ಸ್ ಗ್ರೂಪ್‍ನ ಮುಖ್ಯಸ್ಥ. ಭಗವದ್ಗೀತೆ ಮತ್ತು ಕೃಷ್ಣ ಹೆಸರಿನಲ್ಲಿ ಪರೋಕ್ಷವಾಗಿ ಬಿಜೆಪಿಯ ಪರವಾಗಿ ಕಾರ್ಯಕ್ರಮಗಳನ್ನು ಮಾಡುವುದಲ್ಲದೇ, ಇತರ ಅನೈತಿಕ ಪ್ರಚಾರಕ್ಕೆ 500 ಕೋಟಿ ರೂ.ಗಳಷ್ಟು ದೊಡ್ಡ ಡೀಲ್‍ನ ಮಾತುಕತೆ ಈತನ ಜೊತೆಗೇ ನಡೆದದ್ದು. ಈ 500 ಕೋಟಿ ಕಪ್ಪು ಹಣವನ್ನು ನಗದಾಗಿ ಕೊಡಬೇಕೆಂದರೆ ಯಾವ ರೀತಿಯಲ್ಲಿ ತನಗೆ ತಲುಪಿಸಬಹುದೆಂಬ ಸಲಹೆಗಳನ್ನೂ ಈತನೇ ನೀಡುತ್ತಾನೆ. ನೋಟು ರದ್ದತಿಯಿಂದ ಕಪ್ಪು ಹಣ ಮಾಯವಾಗುತ್ತದೆಂದು ಅಭಿಯಾನ ನಡೆಸಿದ್ದ ಚಾನೆಲ್ ಟೈಮ್ಸ್ ನೌ ಈತನದ್ದೇ.

ಇನ್ನೊಬ್ಬಾತ ಅವ್‍ನೀಶ್ ಬನ್ಸಲ್ ಹಿಂದೂಸ್ತಾನ್ ಟೈಮ್ಸ್‍ನ ಸಹ-ಉಪಾಧ್ಯಕ್ಷ. ಈತ ನಿರಂತರವಾಗಿ ಮಾಧ್ಯಮ ಸಂಸ್ಥೆಗಳಿಗೆ ಹಣ ಹರಿಸುತ್ತಿರಿ ಎಂದು ‘ಸಂಘಪರಿವಾರಕ್ಕೆ’ ಸಲಹೆ ನೀಡುವುದಲ್ಲದೇ, ಒಂದು ಒಳ್ಳೆಯ ಪಿಆರ್ ಕಂಪೆನಿಯನ್ನು ಹಿಡಿದು ನೇರವಾಗಿ ವರದಿಗಾರರ ಜೊತೆಗೂ ಡೀಲ್ ಕುದುರಿಸಿಕೊಳ್ಳಿ ಎನ್ನುತ್ತಾನೆ. ವರದಿಗಾರರಲ್ಲಿ ಎರಡು ವಿಧ. ಒಂದು, ಒಳಗಡೆ ಬೆಂಕಿ ಇರುವವರು ಮತ್ತು ಇನ್ನೊಂದು ಬಗೆಯ ಜನ ವೃತ್ತಿಯ ಕುರಿತ ಬದ್ಧತೆಗಿಂತ ಹಣದ ಆಸೆ ಇರುವವರು. ನೀವು ಇಂಥವರ ಮೂಲಕ ಕೆಲಸ ಸಾಧಿಸಿಕೊಳ್ಳಬಹುದು ಎಂದು ಉಪದೇಶಿಸುತ್ತಾರೆ.

ಮೇಲೆ ಹೇಳಲಾದ ಮಾಧ್ಯಮ ಸಂಸ್ಥೆಗಳ ವಿಡಿಯೋಗಳು ಹೊರಬಂದಿದ್ದು ಎರಡನೆಯ ಕಂತಿನಲ್ಲಿ. ಮೊದಲ ಕಂತಿನಲ್ಲಿ ಬಂದ ಸಂಸ್ಥೆಗಳು ಇನ್ನಷ್ಟು ಇವೆ. ಮೋದಿಯವರ ಅತ್ಯಾಪ್ತ ರಜತ್ ಶರ್ಮಾರ ಇಂಡಿಯಾ ಟಿವಿ, ದೈನಿಕ್ ಜಾಗರಣ್ – ಇದು ಭಾರತದ ಅತೀ ದೊಡ್ಡ ಹಿಂದೀ ದೈನಿಕ, ಉತ್ತರ ಪ್ರದೇಶದ ಹಿಂದಿ ಖಬರ್ ಚಾನೆಲ್, ಎಸ್‍ಎಬಿ ಗುಂಪು, ಡಿಎನ್‍ಯ ಇಂಗ್ಲಿಷ್ ದೈನಿಕ (ಜೀ ಸಂಸ್ಥೆಗೆ ಸೇರಿದೆ), ಅಮರ್ ಉಜಾಲಾ, ಯುಎನ್‍ಐ ನ್ಯೂಸ್ ಏಜೆನ್ಸಿ, 9ಎಕ್ಸ್ ತಷನ್ ಎಂಬ ಮನರಂಜನೆಯ ಚಾನೆಲ್, ಸಮಾಚಾರ್ ಪ್ಲಸ್ ಎಂಬ ಉ.ಪ್ರದೇಶದ ನ್ಯೂಸ್ ಚಾನೆಲ್, ಉತ್ತರಾಖಂಡದ ಚಾನೆಲ್ ಎಚ್‍ಎನ್‍ಎನ್ 24*7, ಪಂಜಾಬ್ ಕೇಸರಿ ಮತ್ತು ಸ್ವತಂತ್ರ ಭಾರತ್ ಎಂಬ ಹಿಂದಿ ವೃತ್ತ ಪತ್ರಿಕೆಗಳು, ಸ್ಕೂಪ್‍ವ್ಹೂಪ್ ಮತ್ತು ರೀಡಿಫ್.ಕಾಂ ಎಂಬ ವೆಬ್‍ಪೋರ್ಟಲ್‍ಗಳು ಮತ್ತು ಸಾಧನಾ ಪ್ರೈಂ ನ್ಯೂಸ್ ಎಂಬ ಉ.ಪ್ರದೇಶದ ಇನ್ನೊಂದು ಚಾನೆಲ್ ಇವರ ಜೊತೆಗಿನ ಸಂಭಾಷಣೆಗಳ ಮೊದಲ ಕಂತು ಮಾರ್ಚ್‍ನಲ್ಲೇ ಬಿತ್ತರಗೊಂಡಿತ್ತು.

ಅನಿರುದ್ಧ್

ಆದರೆ, ಎರಡನೆಯ ಕಂತಿನಲ್ಲಿ ದೇಶದ ಹಲವು ಪ್ರಮುಖ ಸಂಸ್ಥೆಗಳ ಮುಖ್ಯಸ್ಥರನ್ನು ಮಾತಾಡಿಸಿರುವುದನ್ನು ನೋಡಿದ್ದೀರಿ. ಕೋಬ್ರಾಪೋಸ್ಟ್‍ನ ಸಂಪಾದಕ ಅನಿರುದ್ಧ ಬಹಲ್ ಹೇಳಿದ ಇನ್ನೊಂದು ಅಂಶವೆಂದರೆ, ‘ತಾನು ಮುಂದಿಟ್ಟ ಆಫರ್‍ಗೆ ಏನೇನು ಮಾಡಬೇಕೆಂದು ಕೇಳಿದೆನೋ ಅದೆಲ್ಲಕ್ಕೂ ಒಪ್ಪಿದ್ದು ಮಾತ್ರವಲ್ಲದೇ, ತಮಗೆ ಲಾಭ ತರಬಹುದಾದ ಈ ಗಿರಾಕಿಯ ಪರವಾಗಿ ಕೋಮುವಾದೀ ಪ್ರಚಾರ ಅಭಿಯಾನ ನಡೆಸುವ ಹಲವು ವಿಧಾನಗಳನ್ನು ಅವರೇ ಹೇಳಿಕೊಟ್ಟಿದ್ದು ನಮ್ಮ ವರದಿಗಾರನನ್ನು ದಿಗ್ಭ್ರಾಂತಿಗೊಳಿಸಿದೆ.’

ಇದನ್ನು ಕ್ರೋನಿ ಜರ್ನಲಿಸಂ ಎಂದಲ್ಲದೇ ಇನ್ನೇನು ಕರೆಯಬಹುದು? ವಿಕೃತ ಬಂಡವಾಳಶಾಹಿಯನ್ನು ಕ್ರೋನಿ ಕ್ಯಾಪಿಟಲಿಸಂ ಎಂದು ಕರೆಯಲಾಗುತ್ತದೆ. ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಇದನ್ನು ತೊಲಗಿಸಬೇಕೆಂದೇ ಹೋರಾಟ ಮಾಡುತ್ತಿದ್ದರು. ಎಲ್ಲಿಯವರೆಗೆ ಈ ಹೋರಾಟ ಕಾಂಗ್ರೆಸ್‍ನ ವಿರುದ್ಧ ಇತ್ತೋ, ಅಲ್ಲಿಯವರೆಗೆ ಅದಕ್ಕೆ ಸಾಕಷ್ಟು ಪ್ರಚಾರ ಕೊಟ್ಟ ಇವೇ ಮಾಧ್ಯಮಗಳು, ಬಿಜೆಪಿಯು ಕ್ರೋನಿ ಕ್ಯಾಪಿಟಲಿಸಂನ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದಾಕ್ಷಣ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದರು. ಅಂದರೆ, ಕ್ರೋನಿ ಕ್ಯಾಪಿಟಲಿಸಂ, ಕ್ರೋನಿ ರಾಜಕೀಯ ಮತ್ತು ಕ್ರೋನಿ ಜರ್ನಲಿಸಂ ಇಂದು ಒಂದರೊಡನೊಂದು ಕೈ ಜೋಡಿಸಿದೆಯೆಂಬುದು ಬಹಳ ಸ್ಪಷ್ಟ.

ಭಾರತದಲ್ಲಿ ಕ್ರೋನಿ ಕ್ಯಾಪಿಟಲಿಸ್ಟರು ದೇಶದ ಬೊಕ್ಕಸವನ್ನು, ಪ್ರಾಕೃತಿಕ ಸಂಪನ್ಮೂಲಗಳನ್ನು ಹೆಚ್ಚೆಚ್ಚು ಕೊಳ್ಳೆ ಹೊಡೆಯುತ್ತಾ ಸಾಗಿದಂತೆ, ಅವರಿಗೆ ಕಾಂಗ್ರೆಸ್ ಸಪ್ಪೆ ಎನಿಸಿತು. ಇವರನ್ನು ಬೆಳೆಸಿದ್ದು ಕಾಂಗ್ರೆಸ್ಸೇ ಆಗಿತ್ತು; ಆದರೆ, ಒಂದು ಹಂತ ದಾಟಿದ ಮೇಲೆ ಕಾಂಗ್ರೆಸ್ ಪಕ್ಷದೊಳಗಿನ ಒಂದು ವಿಭಾಗ ಅಂಬಾನಿ ಥರದವರ ನಿರ್ಲಜ್ಜ ಲೂಟಿಯ ಪರವಾಗಿ ನಿಲ್ಲಲು ನಿರಾಕರಿಸಿತು. ಅವರಂಥವರ ಲೂಟಿಕೋರ ಯೋಜನೆಗಳು ನಿಧಾನವಾಗತೊಡಗಿದವು. ಆಗ ಅವರ ನಿಷ್ಠಾವಂತ ಸೇವಕರಾಗಿ, ಬಹಳ ಆಕರ್ಷಕ ರೀತಿಯಲ್ಲಿ ಕೆಲಸ ಮಾಡಲು ಮುಂದೆ ಬಂದದ್ದೇ ಮೋದಿ-ಅಮಿತ್ ಶಾ-ಆರೆಸ್ಸೆಸ್‍ನ ಡೆಡ್ಲಿ ಕಾಂಬಿನೇಷನ್. ಅಡ್ವಾಣಿ ಥರದವರೂ ಇವರ ಮುಂದೆ ಸಪ್ಪಗೆ ಕಾಣಿಸಿದರು.

ಈ ಹೊತ್ತಿಗೆ ಮಾಧ್ಯಮ ಸಂಸ್ಥೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಕ್ರೋನಿಗಳು ನಿರ್ಧರಿಸಿದ್ದರು. ಅಂಬಾನಿಯೊಬ್ಬನೇ ದೇಶದುದ್ದಗಲಕ್ಕೂ ಹರಡಿಕೊಂಡಿರುವ ಅದೆಷ್ಟೋ ಟಿವಿ 18 ಚಾನೆಲ್‍ಗಳ ಮಾಲೀಕ. ಬಿಗ್ ಎಫ್‍ಎಂ ಎಂಬ ಅವರದೊಂದು ರೇಡಿಯೋ ಚಾನೆಲ್‍ನ ವ್ಯಕ್ತಿ, ‘ನಮ್ಮ ರಿಲೆಯನ್ಸ್ ಕಂಪೆನಿ ಬಿಜೆಪಿಯ ಪರವಾಗಿಯೇ ಇದೆ’ ಎಂದು ಕೋಬ್ರಾಪೋಸ್ಟ್‍ನ ಕ್ಯಾಮೆರಾಕ್ಕೆ ಹೇಳುತ್ತಾನೆ.

ಅಪಾಯ ಇಷ್ಟಕ್ಕೇ ಮುಗಿಯುವುದಿಲ್ಲ. ರಿಪಬ್ಲಿಕ್ ಎಂಬ ಬಿಜೆಪಿ ಚಾನೆಲ್‍ನ ಸಂಪಾದಕ ಅರ್ನಬ್ ಗೋಸ್ವಾಮಿ ‘ಹೌದು ನಾನು ರಾಷ್ಟ್ರೀಯವಾದಿಯೇ. ಅದರಲ್ಲೇನೂ ತಪ್ಪಿಲ್ಲ. ಪತ್ರಕರ್ತರು ರಾಷ್ಟ್ರೀಯವಾದಿಗಳಾಗಿರಬೇಕು’ ಎಂದು ಕಿರುಚುವಾಗ, ಆತ ಭಾರತ ರಾಷ್ಟ್ರದ ಪರವಾಗಿ ಮಾತಾಡುತ್ತಿಲ್ಲ; ಬಿಜೆಪಿಯ, ಆರೆಸ್ಸೆಸ್ಸಿನ ರಾಷ್ಟ್ರೀಯವಾದದ ಪರವಾಗಿ ಮಾತಾಡುತ್ತಿದ್ದಾನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೆಯೇ ಇಂದು ಸುವರ್ಣ ಚಾನೆಲ್ ಅಥವಾ ಇನ್ನಾವುದೋ ಚಾನೆಲ್, ಹೌದು ನಾವು ಬಿಜೆಪಿಯೇ, ಆರೆಸ್ಸೆಸ್ಸೇ ಏನಿವಾಗ? ಎಂದು ಕೇಳಿದರೆ ಯಾರಿಗೂ ಆಶ್ಚರ್ಯವಾಗುವುದಿಲ್ಲ. ಹಾಗೇ ಮುಂದುವರೆದು ತೂತ್ತುಕುಡಿಯಲ್ಲಿ ಷಾರ್ಪ್ ಷೂಟರ್‍ಗಳನ್ನು ಕರೆಸಿ ಹೋರಾಟಗಾರರನ್ನು ಕೊಲ್ಲಿಸಿದ್ದನ್ನೂ, ದಲಿತರ ಮಾರಣ ಹೋಮವನ್ನೋ, ಹೆಣ್ಣುಮಕ್ಕಳ ಮೇಲಿನ ಹಲ್ಲೆಯನ್ನೋ ರಾಷ್ಟ್ರದ ಹಿತಾಸಕ್ತಿ ಮತ್ತು ಸಂಸ್ಕøತಿಯ ಹೆಸರಿನಲ್ಲಿ ಸಮರ್ಥನೆ ಮಾಡಿದರೂ ಆಶ್ಚರ್ಯವಾಗುವುದಿಲ್ಲ. ಏಕೆಂದರೆ, ಅವೆಲ್ಲವೂ ಈಗಾಗಲೇ ನಡೆಯುತ್ತಿದೆ.

ಇವರ ಬಣ್ಣ ಬಯಲಾಯಿತು ಎಂದು ಸಂತಸ ಪಡುವ ಸಂದರ್ಭದಲ್ಲಿ ನಾವ್ಯಾರೂ ಇಲ್ಲ. ಪರ್ಯಾಯ ರಾಜಕಾರಣ ಮತ್ತು ಪರ್ಯಾಯ ಮಾಧ್ಯಮಗಳನ್ನು ಕಟ್ಟಿಕೊಳ್ಳುವುದಲ್ಲದೇ ಬೇರಿನ್ಯಾವ ದಾರಿಯೂ ಇಲ್ಲ.

(ಈ ಲೇಖನಕ್ಕೆ ಬೇಕಾದ ಮಾಹಿತಿಯನ್ನು ಕೋಬ್ರಾಪೋಸ್ಟ್ ಮತ್ತು ದಿ ವೈರ್‍ನ ಲೇಖನಗಳಿಂದ ತೆಗೆದುಕೊಂಡಿದೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...