ಶುದ್ಧೋಧನ |
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಮರಳುಗಾರಿಕೆ ಖತರ್‍ನಾಕ್ ಮಾಫಿಯಾ ಪಾರುಪತ್ಯದಲ್ಲಿದೆ. ಎತ್ತಿಂದೆತ್ತ ಲೆಕ್ಕ ಹಾಕಿ ತಾಳೆ ನೋಡಿದರೂ ಇದೊಂದು ಸಾವಿರಾರು ಕೋಟಿ ರೂಪಾಯಿಗಳ ಕಡುಕಪ್ಪು ದಂಧೆ ಎಂಬುದು ಖಾತ್ರಿಯಾಗುತ್ತದೆ. ಹೀಗಾಗಿ ಈ ಮಾಫಿಯಾಕ್ಕೆ ಎಂ.ಪಿ-ಎಮ್ಮೆಲ್ಲೆ-ಮಂತ್ರಿ-ಪೇಜಾವರರಂಥ ಸ್ವಾಮೀಜಿಗಳ ಕೃಪಾಶೀರ್ವಾದವೂ ಸಿಕ್ಕಿದೆ. ಮರಳಿನ ಸುತ್ತ ನಡೆಯುತ್ತಿರುವ ಅನಾಚಾರ, ಅವ್ಯವಹಾರ, ಅವಾಂತರ ಉಡುಪಿ ಜಿಲ್ಲೆ ಮಟ್ಟಿಗೆ ಒಂಚೂರು ವಿಭಿನ್ನ. ಉಡುಪಿಯ ಮರಳು ಭಾನ್ಗಡಿಯಲ್ಲಿ ಜಿಲ್ಲೆಯ ಅಷ್ಟೂ ಅಕ್ಕಲ್‍ಗೇಡಿ ಬಿಜೆಪಿ ಶಾಸಕ-ಸಂಸದರು ಮತ್ತವರ ರಾಜಗುರು ಪೇಜಾವರ ಸ್ವಾಮಿ ಎಂಟ್ರಿ ಹೊಡೆದಿರುವುದರಿಂದ ಚಿತ್ರ-ವಿಚಿತ್ರ ಸೀನ್ ಸೃಷ್ಟಿಯಾಗಿಬಿಟ್ಟಿವೆ!
ಉಡುಪಿ ಜಿಲ್ಲೆ ಉಪ್ಪು ನೀರಿನ ಸಿಆರ್‍ಝಡ್ ಮರಳುಗಾರಿಕೆ ಮತ್ತು ಸಿಹಿ ನೀರಿನ ನಾನ್ ಸಿಆರ್‍ಝಡ್ ಮರಳುಗಾರಿಕೆಯಲ್ಲಿ ಮಾಫಿಯಾ ಹಾವಳಿ ಮಿತಿಮೀರಿ ಹೋಗಿತ್ತು. ಮರಳು ರೌಡಿಗಳು ಲಂಗುಲಗಾಮಿಲ್ಲದೆ ಪುಂಡಾಟ ಶುರುಹಚ್ಚಿಕೊಂಡಿದ್ದರು. ಎರಡು-ಮೂರು ಸಾವಿರಕ್ಕೆ ಮನೆ ಬಾಗಿಲಿಗೆ ಬಂದು ಬೀಳುತ್ತಿದ್ದ ಲೋಡ್ ಮರಳಿಗೆ ಬರೋಬ್ಬರಿ ಇಪ್ಪತ್ತೈದು ಸಾವಿರ ಆಗಿಬಿಟ್ಟಿತು! ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿಗೆ ಹೋಗಿದ್ದ ನಿಷ್ಠೂರ ನಿಯತ್ತಿನ ಜಿಲ್ಲಾಧಿಕಾರಿಣಿ ಪ್ರಿಯಾಂಕ ಮೇರಿ ಮೇಲೆ ಹಲ್ಲೆಗೂ ಪ್ರಯತ್ನ ನಡೆದುಹೋಗಿತ್ತು! ಯಾವಾಗ ಸುಪ್ರೀಂ ಕೋರ್ಟ್ ಹಸಿರು ನ್ಯಾಯಾಧಿಕರಣದ ಮುಂದೆ ಅಕ್ರಮ ಮರಳುಗಾರಿಕೆ ವಿರುದ್ಧ ಅಹವಾಲು ಸಲ್ಲಿಕೆಯಾಯ್ತೋ ಆಗ ಕಳ್ಳರಿಗೆ ಕಡಿವಾಣ ಬಿತ್ತು. ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯ ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧ ಮಾಡಬೇಕಾಗಿ ಬಂತು.
ಹೊಸ ಕಾನೂನಿನಿಂದ ಅಕ್ರಮ ಮರಳುಗಾರಿಕೆ ಕೊಟ್ಟಿದ್ದ ಧಾರಾಳ ಲೈಸೆನ್ಸ್ ಪದ್ದತಿ ನಿಂತಿತು. ಹಸಿರು ಪೀಠದಲ್ಲಿ ಕೇಸು ನಡೆಯುತ್ತಿದ್ದರಿಂದ ಮರಳುಗಾರಿಕೆಗೆ ಒಂದಿಷ್ಟು ಕಾಲ ನಿಷೇಧವೂ ಹಾಕಲಾಗಿತ್ತು. ಮಾಫಿಯಾದ ಕಳ್ಳ ಮರಳು ದಾಸ್ತಾನು ಖಾಲಿಯಾಗುತ್ತಿದ್ದಂತೆಯೇ ಕೃತಕ ಹಾಹಾಕಾರ ಶುರುವಾಯ್ತು. ಬಡವರಿಗೆ ಮನೆ ಕಟ್ಟಿಕೊಳ್ಳಲು ಮರಳು ಸಿಗುತ್ತಿಲ್ಲ; ಪಾಪದ ಮರಳು ಕಾರ್ಮಿಕರು ದಂಧೆಯಿಲ್ಲದೆ ಉಪವಾಸ-ವನವಾಸ ಬಿದ್ದಿದ್ದಾರೆಂದು ಶಾಸಕ ರಘುಪತಿ ಭಟ್ಟ, ಎಡಬಿಡಂಗಿ ಸಂತ ಪೇಜಾವರ ಸ್ವಾಮಿ ಗುರು-ಶಿಷ್ಯ ಜೋಡಿ ನೆಲ-ಮುಗಿಲು ಒಂದು ಮಾಡಿ ತುಂಡು ಗುಪ್ವಳ ಹೊಡೆಯತೊಡಗಿತು. ಬೇಕಂತಲೇ ಜಿಲ್ಲಾಧಿಕಾರಿಣಿ ಪ್ರಿಯಾಂಕ ಮೇರಿ ಮರಳುಗಾರಿಕೆಗೆ ಅವಕಾಶ ಕೊಡುತ್ತಿಲ್ಲ. ಆಕೆ ರಾಜಿನಾಮೆ ಕೊಡಬೇಕು; ಇಲ್ಲದಿದ್ದರೆ ಸರ್ಕಾರ ಎತ್ತಂಗಡಿ ಮಾಡಬೇಕೆಂದು ಎಡವಟ್ಟು ಎಮ್ಮೆಲ್ಲೆ ರಘುಪತಿ ಭಟ್ಟ ಬೊಬ್ಬಿರಿದು ಹೀರೋ ಆಗಲು ಹವಣಿಸಿದ್ದೇ ಹವಣಿಸಿದ್ದು. ಇದ್ಯಾವುದಕ್ಕೂ ಖಡಕ್ ಜಿಲ್ಲಾಧಿಕಾರಿಣಿ ಪ್ರಿಯಾಂಕ ಸೊಪ್ಪುಹಾಕಲಿಲ್ಲ. ಪಕ್ಕದ ಮಂಗಳೂರಿನ ಬೆಂಕಿ ಬ್ರಾಂಡಿನ ಸಂಸದ ನಳಿನ್‍ಕುಮಾರ್ ಕಟೀಲ್, ಕಾರ್ಕಳದ ಭಜರಂಗಿ ಶಾಸಕ ಸುನೀಲ್‍ಕುಮಾರ್, ಕಾಪುದ ಮಂಡೆಯಿಲ್ಲದ ಲಾಲಾಜಿ ಮೆಂಡನ್, ಬೈಂದೂರಿನ ಸಿಡಿಮಿಡಿ ಮುದುಕ ಸುಕುಮಾರ್ ಶೆಟ್ಟಿ ಮತ್ತು ಕುಂದಾಪುರದ ಆಜನ್ಮ ಬ್ರಹ್ಮಚಾರಿ ಹಾಲಾಡಿ ಶ್ರೀನಿವಾಸ್ ಶೆಟ್ಟಿಯನ್ನು ಬೆನ್ನಿಗಿಟ್ಟುಕೊಂಡು ರಘುಪತಿ ಭಟ್ಟ ಡಿಸಿ ಕಛೇರಿ ಬಳಿ ಆಹೋರಾತ್ರಿ ಧರಣಿ ಡ್ರಾಮಾ ಎಂಟು ದಿನ ನಡೆಸಿದ. ಗಣಿ ಇಲಾಖೆಯ ಕಾರ್ಯದರ್ಶಿ ಕೊಠಾರಿಯೂ ಬಂದು “ಸಾಂತ್ವನ” ಹೇಳುತ್ತಿದ್ದಂತೆಯೇ ಧರಣಿ ಟೆಂಟು ಕಿತ್ತುಕೊಂಡು ಹೋದ ಸಂಸದ-ಶಾಸಕರ ಅಸಲಿಯತ್ತು ಜಿಲ್ಲೆಯ ಜನರಿಗೀಗ ಅರ್ಥವಾಗಿ ಹೋಗಿದೆ.
ಬಡವರ ಮರಳು ಕಾರ್ಮಿಕರ ಹಿತೈಷಿಯಂತೆ ಪೋಸು ಕೊಡುತ್ತಿರುವ ರಘುಪತಿ ಭಟ್ಟ ಹುಸಿ ಹೋರಾಟದ ಮೂಲ ಉದ್ದೇಶ ಮರಳು ಮಾಫಿಯಾದ ಲೂಟಿಗೆ ನೆರವಾಗುವುದಷ್ಟೇ. ಕಳೆದ ಅಸೆಂಬ್ಲಿ ಇಲೆಕ್ಷನ್ ಹೊತ್ತಲ್ಲಿ ಈ ಭಟ್ಟನಿಗೆ ಮರಳು ಮಾಫಿಯಾ ದೊಡ್ಡ ಗಂಟು ಕೊಟ್ಟಿತ್ತು. ಅಂದು ಉಡುಪಿ ಶಾಸಕನೂ, ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದ ಪ್ರಮೋದ್ ಮಧ್ವರಾಜ್ ಎಂಬ ಮೊದ್ಮಣಿ ವಿರುದ್ಧ ಮರಳು ಮಾಫಿಯಾ ಮುರಕೊಂಡು ಬಿದ್ದಿತ್ತು. ಪ್ರಮೋದ್‍ನ ಮತ್ಸ್ಯೋದ್ಯಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಉದಯ ಸುವರ್ಣ ಅಕ್ರಮ ಮರಳುಗಾರಿಕೆ ಬಗ್ಗೆ ಹಸಿರು ನ್ಯಾಯಾಧೀಕರಣಕ್ಕೆ ದೂರು ಸಲ್ಲಿಸಿದ್ದರು. ಹಾಗಾಗಿ ಇದು ಪ್ರಮೋದರದೇ ಕಿತಾಪತಿ ಎಂಬ ತರ್ಕಕ್ಕೆ ಬಿದ್ದಿದ್ದ ಮರಳು ಮಾಫಿಯಾ ಆತನ ಎದುರಾಳಿ ರಘುಪತಿ ಭಟ್ಟನಿಗೆ ಎಲೆಕ್ಷನ್‍ನಲ್ಲಿ ಫೈನಾನ್ಸ್ ಮಾಡಿತ್ತು. ಮರಳು ಮಾಫಿಯಾ ಭಟ್ಟನಿಂದ ಈಗದರ ಕೂಲಿಯನ್ನು ಪಡೆಯಲು ಯತ್ನಿಸುತ್ತಿದೆ.

ಮರಳುಗಾರಿಕೆ ನಿಂತಿರುವುದು ಕೇಂದ್ರ ಸರ್ಕಾರದ ಕಾನೂನು-ನಿಯಮದಿಂದ ಎಂಬುದು ಮರೆಮಾಚಿ ಪ್ರಾಮಾಣಿಕ ಜಿಲ್ಲಾಧಿಕಾರಿಣಿ ಮತ್ತು ಕಾಂಗ್ರೆಸ್ ಮೇಲೆ ಪೆದ್ದು ಆರೋಪ ಹೊರಿಸುತ್ತಿರುವ ಭಟ್ಟ ಮರಳು ತೆಗೆಯುತ್ತೇವೆಂದು ಪೊಕ್ಕು ಪೌರುಷ ತೋರಿಸುತ್ತಿದ್ದಾನೆ. ಇನ್ನು ಸಂಸದ ನಳಿನ್ ತನ್ನದೇ ಪಕ್ಷದ ಕೇಂದ್ರ ಸರ್ಕಾರದ ಪರಿಸರ ಮಂತ್ರಿಯ ಮೂಗು ಹಿಡಿದು ತನಗೆ ಬೇಕಾದಂತೆ “ಮರಳು ನೀತಿ” ಮಾಡಿಕೊಳ್ಳಬಹುದಾದರೂ, ಆ ತಾಕತ್ತಿಲ್ಲದ ಆತ ರಾಜ್ಯ ಸರ್ಕಾರ, ಜಿಲ್ಲಾಡಳಿತದತ್ತ ಬೆಟ್ಟು ತೋರಿಸುತ್ತಾ ತನ್ನತ್ತಲೇ ಇತರ ಮೂರು ಬೆರಳುಗಳನ್ನು ತಿರುಗಿಸಿಕೊಂಡಿದ್ದಾನೆ.
ಕಳೆದ ವರ್ಷ ಈ ಮರಳು ಮಾಫಿಯಾ ಎಂಥ ಹಗಲು ದರೋಡೆ ಮಾಡಿದೆ, ಎಂತೆಂಥ ಗೂಂಡಾಗಿರಿ ಮಾಡಿದೆ. ಬಡವರಿಗೆ ಮರಳು ಸಿಗದಂತೆ ಮಾಡಿ ಮಲ್ಟಿ ಎಕ್ಸಲ್ ಲಾರಿಗಳಲ್ಲಿ ಮರಳು ತುಂಬಿ ಯಾವ್ಯಾವ ಜಿಲ್ಲೆಗೆ-ರಾಜ್ಯಕ್ಕೆ ಕಳಿಸಿದೆ ಎಂಬುದೆಲ್ಲಾ ಬಿಜೆಪಿ ಶಾಸಕ, ಸಂಸದರಿಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಪೋಸು ಕೊಡುತ್ತಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ 9,67,179 ಮೆಟ್ರಿಕ್ ಟನ್ ಮರಳು ಎತ್ತಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಇದರ ದುಪ್ಪಟ್ಟು ಮರಳು ತೆಗೆಯಲಾಗಿದೆ. ಇದರಲ್ಲಿ ಶೇಕಡ ಹದಿನೈದರಷ್ಟು ಉಡುಪಿ ಜಿಲ್ಲೆಯವರಿಗೆ ಮನೆ ಕಟ್ಟಲು ಸಿಕ್ಕಿಲ್ಲ!
ಉಳಿದ ಮರಳನ್ನು ಪ್ರತಿ ಲೋಡ್‍ಗೆ ಇಪ್ಪತ್ತೈದು ಸಾವಿರದಂತೆ ಬೇರೆ-ಬೇರೆ ಜಿಲ್ಲೆಗೆ ಕಳ್ಳಸಾಗಾಣಿಕೆ ಮಾಡಲಾಗಿದೆ. ಕಳೆದ ಒಂದೇ ವರ್ಷದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬರೋಬ್ಬರಿ ಹದಿನಾಲ್ಕುವರೆ ಸಾವಿರ ಕೋಟಿ ರೂಪಾಯಿ ಮರಳಿನ ದಂಧೆ ನಡೆದಿದೆಯೆಂದು ಪರಿಸರ ಹೋರಾಟಗಾರರು ಅಂದಾಜಿಸಿದ್ದಾರೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಜಿಲ್ಲೆಯಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿದೆ. ಆದರೆ ಮೀನುಗಾರಿಕೆ ದೋಣಿಗಳಿಗೆ ಗಂಡಾಂತರಕಾರಿಯಾದ ನದಿಯೊಳಗಿನ ಮರಳು ದಿಬ್ಬ ತೆಗೆಯಲು ಶರತ್ತಿನ ಅವಕಾಶ ನೀಡಲಾಗಿದೆ. ಮರಳಿನ ದಿಬ್ಬಗಳನ್ನು ನೀರಿನ ಮೇಲ್ಮಟ್ಟದಿಂದ ಒಂದು ಮೀಟರ್ ಆಳದವರೆಗಷ್ಟೇ ತೆರವುಗೊಳಿಸಲು ಸಾಂಪ್ರದಾಯಿಕ ಮರಳುಗಾರಿಕೆ ಕಸುಬಿನವರಿಗೆ ಪರವಾನಗಿ ನೀಡಲು ಹೇಳಿದೆ.
ಈ ಅವಕಾಶ ಬಳಸಿಕೊಂಡು ಮರಳು ಮಾಫಿಯಾ ನೀರಿನ ಮೇಲ್ಮಟ್ಟದಿಂದ 25-30 ಅಡಿ ಆಳದವರೆಗೆ ಮರಳು ತೆಗೆದಿದೆ. ಕೇಂದ್ರ ಪರಿಸರ ಇಲಾಖೆಯ ನಿಯಮದಂತೆ ಮರಳು ಕಸುಬಿನವರು ನದಿಯಲ್ಲಿ ಮುಳುಗಿ ಬುಟ್ಟಿಯಲ್ಲಿ ಮರಳು ತುಂಬಿ ನಾಡದೋಣಿಗೆ ಹಾಕಬೇಕು. ಆದರೆ ಮರಳಿನ ದಿಬ್ಬ ತೆರವು ಮಾಡುವಾಗ ದೊಡ್ಡ-ದೊಡ್ಡ ಫೈಬರ್, ಕಬ್ಬಿಣದ ದೋಣಿ ಬಳಸಲಾಗಿದೆ; ಜೆಸಿಬಿ, ಜರಡಿಯಿಂದ ಮರಳು ಲೂಟಿ ಮಾಡಲಾಗಿದೆ. ಹಸಿರು ಪೀಠ ಮರಳು ದಿಬ್ಬ ತೆರವುಗೊಳಿಸಲು ಸಾಂಪ್ರದಾಯಿಕ ಮರಳು ಕರ್ಮಚಾರಿಗಳಿಗಷ್ಟೇ ಲೈಸೆನ್ಸ್ ಕೊಡಬೇಕೆಂದು ಹೇಳಿದೆ. ಆದರೆ ಮರಳು ಕಸುಬು ಎಂದೂ ಮಾಡದ ದುಡ್ಡಿನ ಕುಳಗಳು ಅಕ್ರಮವಾಗಿ ಪರವಾನಗಿ ಪಡೆದಿದ್ದಾರೆ. ಮಾಫಿಯಾ ಬಿಹಾರ, ಉತ್ತರ ಪ್ರದೇಶದ ಕೂಲಿಗಳನ್ನು ತಂದು ದೇಖಾದಂಧೆ ನಡೆಸುತ್ತಿದೆ.
ತಾವು ಮಾತ್ರ ದೇಶೋದ್ಧಾರಕರು ದೇಶಭಕ್ತರೆಂದು ಬೊಬ್ಬಿರಿಯುವ ಬಿಜೆಪಿ ಭೂಪರಿಗೆ ಮರಳು ಕಳ್ಳದಂಧೆಯಲ್ಲಿ ಸಿಗುವ ಪಾಲು ಎಷ್ಟು? ಹಸಿರು ನ್ಯಾಯಪೀಠದ ಆದೇಶ ಉಲ್ಲಂಘಿಸಿ ಮರಳು ಕಳ್ಳರ ನರವಿಗೆ ಜಿಲ್ಲಾಧಿಕಾರಣಿ ಬರುವಂತೆ ಮಾಡಲೆಂದೇ ಶಾಸಕ ರಘುಪತಿ ಭಟ್ಟ, ಪೇಜಾವರ ಸ್ವಾಮಿ ಬಳಗ ಧರಣಿ ತಂತ್ರಗಾರಿಕೆ ಮಾಡಿತ್ತಲ್ಲವಾ? ಇಂಥ ಪ್ರಶ್ನೆಗಳೀಗ ಉಡುಪಿ ಜಿಲ್ಲೆಯ ಜನರನ್ನು ಕಾಡಲಾರಂಭಿಸಿವೆ!!


