ನಿಖಿಲ್ ಕೊಲ್ಫೆ |

ಅಡಾಲ್ಫ್ ಹಿಟ್ಲರ್‍ನ ನಾಝಿ ಜರ್ಮನಿಯ ಭಯಾನಕ ಸರ್ವಾಧಿಕಾರವು ಎಲ್ಲಾ ಆಕಾಂಕ್ಷಿಗಳಿಗೆ ಪಠ್ಯಪುಸ್ತಕದಂತಿದೆ. ಅದೇ ಪಠ್ಯಪುಸ್ತಕದ ಕೆಲವು ಹಾಳೆಗಳನ್ನು ಹರಿದು ನಮ್ಮದೇ ದೇಶದಲ್ಲಿ ಅನುಷ್ಠಾನಗೊಳಿಸುವ ಪ್ರಯತ್ನಗಳು ಆಗುತ್ತಿವೆಯೆ ಎಂಬುದು ಚಿಂತೆಯ ವಿಷಯ.
ಏಕೆಂದರೆ, ಜರ್ಮನಿಯ ಸರ್ವಾಧಿಕಾರವು ಏಕಾಏಕಿಯಾಗಿ ಬೆಳೆದುಬರಲಿಲ್ಲ. ಅದು ಮೊದಲನೇ ಮಹಾಯುದ್ಧದ ಬಳಿಕ ಜರ್ಮನಿಯು ಎದುರಿಸುತ್ತಿದ್ದ ಐತಿಹಾಸಿಕ, ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು, ಆಗಿದ್ದ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಚಾಣಾಕ್ಷತನದಿಂದ ಬಳಸಿಕೊಂಡು ಬೆಳೆಯಿತು. ಒಮ್ಮೆ ಅಧಿಕಾರಕ್ಕೆ ಬಂದಮೇಲೆ ಅದರ ಆಕ್ಟೋಪಸ್ ಬಾಹುಗಳು ನೆರೆಯ ದೇಶಗಳನ್ನು ಆಕ್ರಮಿಸಿದ್ದು, ಮಾತ್ರವಲ್ಲ; ಎರಡನೇ ಮಹಾಯುದ್ಧಕ್ಕೆ ಕಾರಣವಾಯಿತು.
ಲಕ್ಷಾಂತರ ಜನರು ಸಾವಿಗೀಡಾದ ಮಾನವೀಯ ದುರಂತದಲ್ಲಿ ಸತ್ತವರ, ಚಿತ್ರಹಿಂಸೆಗೆ ಗುರಿಯಾದವರ, ಅತ್ಯಾಚಾರಕ್ಕೆ ಒಳಗಾದವರ ಸರಿಯಾದ ಲೆಕ್ಕ ಇಟ್ಟವರೇ ಇಲ್ಲ. ವ್ಯವಸ್ಥಿತವಾದ ರೀತಿಯಲ್ಲಿ ಕಮ್ಯುನಿಸ್ಟರು, ಬುದ್ಧಿಜೀವಿಗಳು, ಯಹೂದಿಗಳು, ಪೋಲೆಂಡ್ ಸೇರಿದಂತೆ ವಿದೇಶಿ ಮೂಲದವರು, ಶತಮಾನಗಳಿಂದ ಇಡೀ ಯುರೋಪಿನಲ್ಲಿ ಗಡಿಯ ಹಂಗಿಲ್ಲದೇ, ಆಸ್ತಿಪಾಸ್ತಿಗಳ ಕಲ್ಪನೆಯೇ ಇಲ್ಲದೆ ತಿರುಗಾಡಿ ಬದುಕುತ್ತಿದ್ದ ಅಲೆಮಾರಿ ಜಿಪ್ಸಿಗಳು ಸೇರಿದಂತೆ ಲಕ್ಷಾಂತರ ಜನರನ್ನೂ ಯಾತನಾಶಿಬಿರಗಳಿಗೆ ತಳ್ಳಿ, ಅನ್ನಾಹಾರ ನೀಡದೆ, ಪಶುಗಳಂತೆ ದುಡಿಸಿ, ದುರ್ಬಲರನ್ನು ಗುಂಡಿಕ್ಕಿ ಕೊಂದು ಸಾಮೂಹಿಕವಾಗಿ ಹೂಳಲಾಯಿತು. ಅಷ್ಟೇ ಏಕೆ? ಜರ್ಮನ್ ಅಂಗವಿಕಲರನ್ನು ನಿಷ್ಪ್ರಯೋಜಕರೆಂದು ಕೊಲ್ಲಲಾಯಿತು. ನಾಝಿಗಳ ಆಣತಿ ಮೀರಿದ ನಿಜವಾದ ದೇಶಪ್ರೇಮಿ ಸೈನಿಕರನ್ನೂ ಬಿಡಲಿಲ್ಲ. ಕೊಲ್ಲುವ ಕೆಲಸ ಸುಲಭವಾಗಲೆಂದು ವಿಷಾನಿಲ ಚೇಂಬರ್‍ಗಳನ್ನು ಬಳಸಲಾಯಿತು.
ಇದು ಎಷ್ಟು ವ್ಯವಸ್ಥಿತವಾಗಿ ನಡೆಯಿತೆಂದರೆ, ವಿರೋಧಿಗಳ ಹತ್ಯಾಕಾಂಡದಲ್ಲಿಯೂ ಆರ್ಥಿಕತೆ ಇತ್ತು. ಮುಖ್ಯವಾಗಿ ಯಹೂದಿಗಳ ಮನೆ, ಉದ್ಯಮ, ಆಸ್ತಿಪಾಸ್ತಿ, ಹಣ, ಒಡವೆ ಮಾತ್ರವಲ್ಲ; ನಂತರ ಉಟ್ಟ ಬಟ್ಟೆಯನ್ನೂ ಕಸಿದುಕೊಳ್ಳಲಾಯಿತು. ಅವರಿಂದ ಯುದ್ಧದ ಸಿದ್ಧತೆಗಾಗಿ ಗುಲಾಮಿ ದುಡಿತವನ್ನೂ ಮಾಡಿಸಲಾಯಿತು. ಗಂಡಸರು ಮತ್ತು ಹೆಂಗಸರ ತಲೆಬೋಳಿಸಿ ಕೂದಲನ್ನು ಸೈನಿಕರಿಗೆ ಸ್ವೆಟರ್ ತಯಾರಿಸಲು ಬಳಸಲಾಯಿತು. ಸತ್ತ ಕೆಲವರ ತಲೆಬುರುಡೆಗಳನ್ನು ಕುಗ್ಗಿಸಿ ಆ್ಯಷ್ ಟ್ರೇಗಳಾಗಿ ಬಳಸಲು ಅರ್ಜೆಂಟೀನಾದಂತಹ ದೇಶಗಳಿಗೆ ರಫ್ತು ಮಾಡಲಾಯಿತೆಂದು ಹೇಳಲಾಗುತ್ತದಾದರೂ ಇದಕ್ಕೆ ಸ್ಪಷ್ಟ ಆಧಾರಗಳಿಲ್ಲ. ಕೊನೆಗೆ ಎಲುಬುಗಳನ್ನೂ ಬಿಡದೆ ಕ್ಯಾಲ್ಸಿಯಂಗಾಗಿ ಬಳಸಲಾಯಿತು. ನಾಝಿ ಕ್ರೌರ್ಯವನ್ನು ಬಣ್ಣಿಸುವುದು ಈ ಬರಹದ ಉದ್ದೇಶವಲ್ಲ.
ಆರಂಭದಲ್ಲಿ ನಾಝಿ ಸರ್ವಾಧಿಕಾರವು ಪ್ರಜಾಪ್ರಭುತ್ವದ ಸೋಗಿನಲ್ಲೇ ಬಂತು. ಮೊದಲ ಮಹಾಯುದ್ಧದ ಸೋಲಿನಿಂದ ಅದರ ರಾಷ್ಟ್ರೀಯ ಸ್ವಾಭಿಮಾನಕ್ಕೆ ಬಲವಾದ ಹೊಡೆತಬಿದ್ದಿತ್ತು. ಆರ್ಥಿಕತೆ ಕುಸಿದಿತ್ತು. ಯುವಜನರು ನಿರುದ್ಯೋಗದಿಂದ ಕಂಗಾಲಾಗಿದ್ದರು. ಆ ಹೊತ್ತಿಗೆ ಯಹೂದಿಗಳು ವ್ಯಾಪಾರ, ಲೇವಾದೇವಿ, ಬ್ಯಾಂಕಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಕೊಂಡು ಸಾಕಷ್ಟು ಉತ್ತಮ ಸ್ಥಿತಿಯಲ್ಲಿದ್ದರು. ಯುದ್ಧದ ಅವಮಾನ, ಯುವಜನರ ಕೋಪ ಇತ್ಯಾದಿಗಳನ್ನೆಲ್ಲಾ ನಾಝಿಗಳು ಜರ್ಮನ್ ಶ್ರೇಷ್ಠತೆಯ ಭ್ರಮೆಯಲ್ಲಿ ಯಹೂದಿಗಳ ವಿರುದ್ಧ ತಿರುಗಿಸಿದರು. ಶತಮಾನಗಳ ಹಿಂದೆಯೇ ಬಂದು ನೆಲೆಸಿದ್ದ ಅವರನ್ನು ವಿದೇಶೀಯರು ಎಂಬಂತೆ, ಜರ್ಮನಿಯ ಎಲ್ಲಾ ಸಮಸ್ಯೆಗಳಿಗೆ ಅವರೇ ಕಾರಣಕರ್ತರು ಎಂಬಂತೆ ಬಿಂಬಿಸಿದರು. ಅವರಿದನ್ನು ಒಮ್ಮೆಗೇ ಬಹಿರಂಗವಾಗಿ ಮಾಡಲಿಲ್ಲ.
ನಾಝಿಗಳ ಕಾರ್ಯತಂತ್ರಗಳು ಏನಾಗಿದ್ದವು? ಎಲ್ಲರ ಜೊತೆ ಎಲ್ಲರ ಅಭಿವೃದ್ಧಿ- ಅಂದರೆ, ಜರ್ಮನಿಯ ಅಭಿವೃದ್ಧಿ ಎಂಬ ಘೋಷಣೆ ಅಂದೂ ಇತ್ತು. ನಾಜಿಗಳ ಹತ್ತು ಘೋಷಣೆಗಳಲ್ಲಿ ಇದೂ ಇತ್ತು. ಅವುಗಳಲ್ಲಿ ಕೆಲವು ಇಲ್ಲಿವೆ.
ಜರ್ಮನಿಯು ನಿಮ್ಮ ಪಿತೃಭೂಮಿ. ಅದನ್ನು ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿ. ಜರ್ಮನಿಯ ವಿರೋಧಿಗಳು ನಿಮ್ಮ . ಅವರನ್ನು ಮನಸಾರೆ ದ್ವೇಷಿಸಿ. (ಇಲ್ಲಿಯೂ ಸರಕಾರವನ್ನು ವಿರೋಧಿಸಿದವರಿಗೆ ದೇಶದ್ರೋಹಿಯ ಹಣೆಪಟ್ಟಿ ಕಟ್ಟಲಾಗುತ್ತಿರುವುದನ್ನು ಗಮನಿಸಿದ್ದೀರಲ್ಲ?). ಜರ್ಮನಿಯ ವಿರೋಧಿಗಳ ಕಪಾಳಕ್ಕೆ ಹೊಡೆಯಿರಿ. ಯಹೂದಿಗಳ ಮೇಲಿನ ದ್ವೇಷವನ್ನು ಎದುರಿಗೆ ತೋರಿಸಿಕೊಳ್ಳುವ ಮೂರ್ಖತನ ಮಾಡಬೇಡಿ. (ಇಲ್ಲಿಯೂ ಕೆಲವೊಮ್ಮೆ ಅಲ್ಪಸಂಖ್ಯಾತ ಮತ್ತು ದಲಿತ ಪ್ರೇಮ ಉಕ್ಕುತ್ತಿರುವುದನ್ನು ನೋಡುವಿರಿ). ಮಾತಿಗಿಂತ ಹೆಚ್ಚು ಕೆಲಸ ಮಾಡಿ; ಕರ್ತವ್ಯಗಳ ಬಗ್ಗೆ ಮಾತಾಡಿ, ಹಕ್ಕುಗಳ ಬಗ್ಗೆ ಅಲ್ಲ; ನಾಯಕತ್ವವನ್ನು ಪ್ರಶ್ನಿಸಬೇಡಿ… ಇತ್ಯಾದಿ.
ಆದರೆ, ದೇಶದೊಳಗೆ ಜರ್ಮನಿಯ ವಿರೋಧಿಗಳು ಯಾರೆಂದು ವಿವರಿಸಲಾಗುತ್ತಿರಲಿಲ್ಲ. ಪರೋಕ್ಷವಾಗಿ ಅವರು ಯಹೂದಿಗಳು, ಬುದ್ಧಿಜೀವಿಗಳು, ಕಮ್ಯುನಿಸ್ಟರು, ಜಿಪ್ಸಿಗಳು ಎಂದು ಸೂಚಿಸಲಾಗುತ್ತಿತ್ತು. ಜೊತೆಗೆಯೇ ನಾಝಿ ಯೂತ್ ಲೀಗ್ ಗೂಂಡಾಗಳು ಚದುರಿದಂತೆ ಅಲ್ಲಲ್ಲಿ ಅವರ ಮೇಲೆ ದಾಳಿಗಳನ್ನು ಚಾಲ್ತಿಯಲ್ಲಿಡುತ್ತಿದ್ದರು. ಯಹೂದಿ ಮತ್ತು ಕೆಲವು ಕ್ರೈಸ್ತ ಪಂಥಗಳ ಪೂಜಾಸ್ಥಳಗಳ ಮೇಲೆ ದಾಳಿ ನಡೆಸುತ್ತಿದ್ದರು. ಇನ್ನೊಂದು ವಿಧಾನವೆಂದರೆ, ಅವರ ಜೊತೆ ವ್ಯಾಪಾರ ವಹಿವಾಟು ನಡೆಸಬೇಡಿ ಎಂದು ಪ್ರಚೋದಿಸುವುದು ಹಾಗೂ ಅವರು ದೇಶಕ್ಕೆ ಪರಕೀಯರು ಎಂಬಂತೆ ಬಿಂಬಿಸುತ್ತಾ ಬರುವುದು.
ನಮ್ಮಲ್ಲಿ ಕೂಡಾ ಇಂತಹ ದಾಳಿಗಳು ನಡೆಯುತ್ತಿರುವುದು, ನಿರ್ದಿಷ್ಟ ಸಮುದಾಯಗಳ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ, ಅವರ ರಿಕ್ಷಾಗಳಲ್ಲಿ ಕುಳಿತುಕೊಳ್ಳಬೇಡಿ ಮುಂತಾಗಿ ಪ್ರಚೋದಿಸುವ ವಿಫಲ ಯತ್ನಗಳು ನಡೆಯುತ್ತಿರುವುದನ್ನು ಕಾಣಬಹುದು. ನೂರಾರು ವರ್ಷಗಳಿಂದ ಇಲ್ಲಿ ಬಾಳಿ-ಬದುಕಿ ಭಾರತೀಯ ಸಂಸ್ಕೃತಿಯಲ್ಲಿ ಮಿಳಿತವಾಗಿರುವ ಸಮುದಾಯಗಳಲ್ಲಿ ಕೂಡ ಪರಕೀಯ ಪ್ರಜ್ಞೆ ಮೂಡಿಸುವ ಕೆಲಸಗಳೂ ನಿರಂತರವಾಗಿ ನಡೆಯುತ್ತಿವೆ.
ಜರ್ಮನ್ ರಾಷ್ಟ್ರೀಯತೆ ಮತ್ತು ಆರ್ಯ ಜನಾಂಗದ ಶ್ರೇಷ್ಠತೆಯು ನಾಝಿ ಮೂಲಮಂತ್ರಗಳಲ್ಲಿ ಒಂದು. ನಮ್ಮಲ್ಲಿ ಕೂಳಿಲ್ಲದಿದ್ದರೂ ಪರವಾಗಿಲ್ಲ; ಜಗತ್ತಿಗೆ ಎಲ್ಲವನ್ನೂ ನೀಡಿದವರು ನಾವೇ ಎಂಬ ಮೇಲರಿಮೆಯ ಭ್ರಮೆ ಹುಟ್ಟಿಸುವುದು ಇದರ ಮೂಲ ಲಕ್ಷಣ. ಪರಸ್ಪರ ಕೊಡುಕೊಳ್ಳುವಿಕೆಯೇ ಐತಿಹಾಸಿಕ ಪ್ರಗತಿಯ ಜೀವಾಳ ಎಂಬುದನ್ನು ಮರೆಸಿ, ಅದನ್ನು ಕಂಡುಹಿಡಿದವರು ನಾವು, ಇದನ್ನು ಕಂಡುಹಿಡಿದವರು ನಾವು, ಜಗತ್ತಿಗೆ ಎಲ್ಲವನ್ನು ನೀಡಿದವರು ನಮ್ಮ ಪೂರ್ವಜರು, ನಾವು ವಿಶ್ವಗುರುಗಳು ಎಂಬ ಕಟ್ಟುಕತೆಗಳನ್ನು ಇತ್ತೀಚೆಗೆ ಯದ್ವಾತದ್ವಾ ಹಾಸ್ಯಾಸ್ಪದವಾಗಿ ಹರಿಯಬಿಡಲಾಗುತ್ತಿದೆ. ಭಾರತವು ಜಗತ್ತಿಗೆ ಬಹಳಷ್ಟನ್ನು ನೀಡಿದೆ ಎಂಬುದು ನಿಜ. ಅದಕ್ಕಿಂತ ಹೆಚ್ಚನ್ನು ಪಡಕೊಂಡಿದೆ ಎಂಬುದೂ ನಿಜ.
ಮತ್ತೆ ಜನಾಂಗೀಯ ಶ್ರೇಷ್ಠತೆಯ ಮಟ್ಟಿಗೆ ಹೇಳುವುದಾದರೆ ಭಾರತೀಯತೆ ಒಂದೇ ಜನಾಂಗವಲ್ಲ. ಭಾರತದ ಬಹುತೇಕ ನಿವಾಸಿಗಳು ಸಾವಿರಾರು ವರ್ಷಗಳಾಚೆಗೆ ಜಗತ್ತಿನ ಬೇರೆಬೇರೆ ಕಡೆಗಳಿಂದ ಬಂದು ನೆಲೆಸಿದವರು. ವಿಜ್ಞಾನವು ಆಧುನಿಕ ಭಾರತೀಯರಲ್ಲಿ ಹಲವಾರು ರೀತಿಯ ಮೂಲ ಮುಖ ಮತ್ತು ದೇಹ ಲಕ್ಷಣಗಳನ್ನು ಗುರುತಿಸಿದೆ.
ಈ ಜನಾಂಗಗಳು ಮೂಲತಃ ಈಗಿನ ಮಧ್ಯ ಮತ್ತು ಪೂರ್ವ ಯುರೋಪ್, ಪಶ್ಚಿಮ ಏಷ್ಯಾ, ಟಿಬೆಟ್, ದಕ್ಷಿಣದಲ್ಲಿ ಇಂಡೋನೇಷ್ಯಾ, ಬಾಲಿ, ಸುಮಾತ್ರ ದ್ವೀಪ ಸಮುದಾಯಗಳಿಂದ ಬಂದಿವೆ. ಅದಕ್ಕಿಂತಲೂ ಪೂರ್ವದಲ್ಲಿ ಉತ್ತರ ಆಫ್ರಿಕಾದಿಂದ ಆದಿಮಾನವ ಸಮುದಾಯ ಲಕ್ಷ ವರ್ಷಗಳ ಹಿಂದೆಯೇ ಬೇರೆ ಬೇರೆ ಕವಲುಗಳಾಗಿ ಜಗತ್ತಿನಾದ್ಯಂತ ಪಸರಿಸಿರುವುದನ್ನು ವಿಜ್ಞಾನ ವಿವಾದೀತವಾಗಿ ಗುರುತಿಸಿದೆ. ವರ್ಣಾಶ್ರಮ ವ್ಯವಸ್ಥೆಯ ಬಳಿಕ ಅಂತರ್ಜಾತೀಯ ಸಂಬಂಧಗಳನ್ನು ನಿಷೇಧಿಸಲಾದರೂ, ಅದಕ್ಕಿಂತ ಮೊದಲೂ, ನಂತರವೂ ಅಂತರ್‍ಸಂಬಂಧಗಳು ನಡೆದಿವೆ- ನೈತಿಕ, ಅನೈತಿಕ ಎಂಬ ಜಿಜ್ಞಾಸೆ ನಮಗೆ ಬಿಟ್ಟದ್ದು. ಸಾವಿರಾರು ವರ್ಷಗಳ ಯುದ್ಧಗಳ ವೇಳೆ ಹೆಣ್ಣುಗಳನ್ನು ಲೈಂಗಿಕ ಸರಕುಗಳನ್ನಾಗಿ ಬಳಸಿದುದು, ಅತ್ಯಾಚಾರಗಳು ಮುಂತಾದವುಗಳ ಪರಿಣಾಮವಾಗಿ ಉಂಟಾದ ವರ್ಣ ಸಂಕರಗಳ ಬಳಿಕ ಯಾವ ರಕ್ತ ಎಲ್ಲಿ ಬೆರೆತಿದೆ ಎಂದು ಗುರುತಿಸುವುದೇ ಕಷ್ಟ.
ಹೀಗಿರುವಾಗ, ಹಳೆಯ ವರ್ಣಾಶ್ರಮ, ಜಾತಿ ಪದ್ಧತಿಯ ಆಧಾರದಲ್ಲಿ ಜನಾಂಗೀಯ ಶುದ್ಧತೆ ಮತ್ತು ಶ್ರೇಷ್ಠತೆಯನ್ನು ಪ್ರತಿಪಾದಿಸುವ ಮತ್ತು ಅನೇಕಾನೇಕ ಸೂಕ್ಷ್ಮ ವಿಧಾನಗಳ ಮೂಲಕ ಜಾತಿವ್ಯವಸ್ಥೆಯ ಮೇಲುಕೀಳನ್ನು ಉಳಿಸಿಕೊಂಡು ಧರ್ಮದ ಹೆಸರಿನಲ್ಲಿ ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನಗಳನ್ನು ಏನೆಂದು ಕರೆಯಬಹುದು?
ಹಿಟ್ಲರನ ಸರ್ವಾಧಿಕಾರಿ ಮಾದರಿ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಕಲಿಯಬಹುದಾದ ಪಾಠಗಳ ಬಗ್ಗೆ ಮುಂದೆ ವಿವರವಾಗಿ
ನೋಡೋಣ.

LEAVE A REPLY

Please enter your comment!
Please enter your name here