Homeರಾಜಕೀಯಉಡುಪಿಯ ಮರಳು ಮಾಫಿಯಾಕ್ಕೆ ಅರಳು-ಮರಳು ಪೇಜಾವರರ ಕೃಪಾಶೀರ್ವಾದ!

ಉಡುಪಿಯ ಮರಳು ಮಾಫಿಯಾಕ್ಕೆ ಅರಳು-ಮರಳು ಪೇಜಾವರರ ಕೃಪಾಶೀರ್ವಾದ!

- Advertisement -
- Advertisement -

 ಶುದ್ಧೋಧನ |

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಮರಳುಗಾರಿಕೆ ಖತರ್‍ನಾಕ್ ಮಾಫಿಯಾ ಪಾರುಪತ್ಯದಲ್ಲಿದೆ. ಎತ್ತಿಂದೆತ್ತ ಲೆಕ್ಕ ಹಾಕಿ ತಾಳೆ ನೋಡಿದರೂ ಇದೊಂದು ಸಾವಿರಾರು ಕೋಟಿ ರೂಪಾಯಿಗಳ ಕಡುಕಪ್ಪು ದಂಧೆ ಎಂಬುದು ಖಾತ್ರಿಯಾಗುತ್ತದೆ. ಹೀಗಾಗಿ ಈ ಮಾಫಿಯಾಕ್ಕೆ ಎಂ.ಪಿ-ಎಮ್ಮೆಲ್ಲೆ-ಮಂತ್ರಿ-ಪೇಜಾವರರಂಥ ಸ್ವಾಮೀಜಿಗಳ ಕೃಪಾಶೀರ್ವಾದವೂ ಸಿಕ್ಕಿದೆ. ಮರಳಿನ ಸುತ್ತ ನಡೆಯುತ್ತಿರುವ ಅನಾಚಾರ, ಅವ್ಯವಹಾರ, ಅವಾಂತರ ಉಡುಪಿ ಜಿಲ್ಲೆ ಮಟ್ಟಿಗೆ ಒಂಚೂರು ವಿಭಿನ್ನ. ಉಡುಪಿಯ ಮರಳು ಭಾನ್ಗಡಿಯಲ್ಲಿ ಜಿಲ್ಲೆಯ ಅಷ್ಟೂ ಅಕ್ಕಲ್‍ಗೇಡಿ ಬಿಜೆಪಿ ಶಾಸಕ-ಸಂಸದರು ಮತ್ತವರ ರಾಜಗುರು ಪೇಜಾವರ ಸ್ವಾಮಿ ಎಂಟ್ರಿ ಹೊಡೆದಿರುವುದರಿಂದ ಚಿತ್ರ-ವಿಚಿತ್ರ ಸೀನ್ ಸೃಷ್ಟಿಯಾಗಿಬಿಟ್ಟಿವೆ!
ಉಡುಪಿ ಜಿಲ್ಲೆ ಉಪ್ಪು ನೀರಿನ ಸಿಆರ್‍ಝಡ್ ಮರಳುಗಾರಿಕೆ ಮತ್ತು ಸಿಹಿ ನೀರಿನ ನಾನ್ ಸಿಆರ್‍ಝಡ್ ಮರಳುಗಾರಿಕೆಯಲ್ಲಿ ಮಾಫಿಯಾ ಹಾವಳಿ ಮಿತಿಮೀರಿ ಹೋಗಿತ್ತು. ಮರಳು ರೌಡಿಗಳು ಲಂಗುಲಗಾಮಿಲ್ಲದೆ ಪುಂಡಾಟ ಶುರುಹಚ್ಚಿಕೊಂಡಿದ್ದರು. ಎರಡು-ಮೂರು ಸಾವಿರಕ್ಕೆ ಮನೆ ಬಾಗಿಲಿಗೆ ಬಂದು ಬೀಳುತ್ತಿದ್ದ ಲೋಡ್ ಮರಳಿಗೆ ಬರೋಬ್ಬರಿ ಇಪ್ಪತ್ತೈದು ಸಾವಿರ ಆಗಿಬಿಟ್ಟಿತು! ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿಗೆ ಹೋಗಿದ್ದ ನಿಷ್ಠೂರ ನಿಯತ್ತಿನ ಜಿಲ್ಲಾಧಿಕಾರಿಣಿ ಪ್ರಿಯಾಂಕ ಮೇರಿ ಮೇಲೆ ಹಲ್ಲೆಗೂ ಪ್ರಯತ್ನ ನಡೆದುಹೋಗಿತ್ತು! ಯಾವಾಗ ಸುಪ್ರೀಂ ಕೋರ್ಟ್ ಹಸಿರು ನ್ಯಾಯಾಧಿಕರಣದ ಮುಂದೆ ಅಕ್ರಮ ಮರಳುಗಾರಿಕೆ ವಿರುದ್ಧ ಅಹವಾಲು ಸಲ್ಲಿಕೆಯಾಯ್ತೋ ಆಗ ಕಳ್ಳರಿಗೆ ಕಡಿವಾಣ ಬಿತ್ತು. ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯ ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧ ಮಾಡಬೇಕಾಗಿ ಬಂತು.
ಹೊಸ ಕಾನೂನಿನಿಂದ ಅಕ್ರಮ ಮರಳುಗಾರಿಕೆ ಕೊಟ್ಟಿದ್ದ ಧಾರಾಳ ಲೈಸೆನ್ಸ್ ಪದ್ದತಿ ನಿಂತಿತು. ಹಸಿರು ಪೀಠದಲ್ಲಿ ಕೇಸು ನಡೆಯುತ್ತಿದ್ದರಿಂದ ಮರಳುಗಾರಿಕೆಗೆ ಒಂದಿಷ್ಟು ಕಾಲ ನಿಷೇಧವೂ ಹಾಕಲಾಗಿತ್ತು. ಮಾಫಿಯಾದ ಕಳ್ಳ ಮರಳು ದಾಸ್ತಾನು ಖಾಲಿಯಾಗುತ್ತಿದ್ದಂತೆಯೇ ಕೃತಕ ಹಾಹಾಕಾರ ಶುರುವಾಯ್ತು. ಬಡವರಿಗೆ ಮನೆ ಕಟ್ಟಿಕೊಳ್ಳಲು ಮರಳು ಸಿಗುತ್ತಿಲ್ಲ; ಪಾಪದ ಮರಳು ಕಾರ್ಮಿಕರು ದಂಧೆಯಿಲ್ಲದೆ ಉಪವಾಸ-ವನವಾಸ ಬಿದ್ದಿದ್ದಾರೆಂದು ಶಾಸಕ ರಘುಪತಿ ಭಟ್ಟ, ಎಡಬಿಡಂಗಿ ಸಂತ ಪೇಜಾವರ ಸ್ವಾಮಿ ಗುರು-ಶಿಷ್ಯ ಜೋಡಿ ನೆಲ-ಮುಗಿಲು ಒಂದು ಮಾಡಿ ತುಂಡು ಗುಪ್ವಳ ಹೊಡೆಯತೊಡಗಿತು. ಬೇಕಂತಲೇ ಜಿಲ್ಲಾಧಿಕಾರಿಣಿ ಪ್ರಿಯಾಂಕ ಮೇರಿ ಮರಳುಗಾರಿಕೆಗೆ ಅವಕಾಶ ಕೊಡುತ್ತಿಲ್ಲ. ಆಕೆ ರಾಜಿನಾಮೆ ಕೊಡಬೇಕು; ಇಲ್ಲದಿದ್ದರೆ ಸರ್ಕಾರ ಎತ್ತಂಗಡಿ ಮಾಡಬೇಕೆಂದು ಎಡವಟ್ಟು ಎಮ್ಮೆಲ್ಲೆ ರಘುಪತಿ ಭಟ್ಟ ಬೊಬ್ಬಿರಿದು ಹೀರೋ ಆಗಲು ಹವಣಿಸಿದ್ದೇ ಹವಣಿಸಿದ್ದು. ಇದ್ಯಾವುದಕ್ಕೂ ಖಡಕ್ ಜಿಲ್ಲಾಧಿಕಾರಿಣಿ ಪ್ರಿಯಾಂಕ ಸೊಪ್ಪುಹಾಕಲಿಲ್ಲ. ಪಕ್ಕದ ಮಂಗಳೂರಿನ ಬೆಂಕಿ ಬ್ರಾಂಡಿನ ಸಂಸದ ನಳಿನ್‍ಕುಮಾರ್ ಕಟೀಲ್, ಕಾರ್ಕಳದ ಭಜರಂಗಿ ಶಾಸಕ ಸುನೀಲ್‍ಕುಮಾರ್, ಕಾಪುದ ಮಂಡೆಯಿಲ್ಲದ ಲಾಲಾಜಿ ಮೆಂಡನ್, ಬೈಂದೂರಿನ ಸಿಡಿಮಿಡಿ ಮುದುಕ ಸುಕುಮಾರ್ ಶೆಟ್ಟಿ ಮತ್ತು ಕುಂದಾಪುರದ ಆಜನ್ಮ ಬ್ರಹ್ಮಚಾರಿ ಹಾಲಾಡಿ ಶ್ರೀನಿವಾಸ್ ಶೆಟ್ಟಿಯನ್ನು ಬೆನ್ನಿಗಿಟ್ಟುಕೊಂಡು ರಘುಪತಿ ಭಟ್ಟ ಡಿಸಿ ಕಛೇರಿ ಬಳಿ ಆಹೋರಾತ್ರಿ ಧರಣಿ ಡ್ರಾಮಾ ಎಂಟು ದಿನ ನಡೆಸಿದ. ಗಣಿ ಇಲಾಖೆಯ ಕಾರ್ಯದರ್ಶಿ ಕೊಠಾರಿಯೂ ಬಂದು “ಸಾಂತ್ವನ” ಹೇಳುತ್ತಿದ್ದಂತೆಯೇ ಧರಣಿ ಟೆಂಟು ಕಿತ್ತುಕೊಂಡು ಹೋದ ಸಂಸದ-ಶಾಸಕರ ಅಸಲಿಯತ್ತು ಜಿಲ್ಲೆಯ ಜನರಿಗೀಗ ಅರ್ಥವಾಗಿ ಹೋಗಿದೆ.
ಬಡವರ ಮರಳು ಕಾರ್ಮಿಕರ ಹಿತೈಷಿಯಂತೆ ಪೋಸು ಕೊಡುತ್ತಿರುವ ರಘುಪತಿ ಭಟ್ಟ ಹುಸಿ ಹೋರಾಟದ ಮೂಲ ಉದ್ದೇಶ ಮರಳು ಮಾಫಿಯಾದ ಲೂಟಿಗೆ ನೆರವಾಗುವುದಷ್ಟೇ. ಕಳೆದ ಅಸೆಂಬ್ಲಿ ಇಲೆಕ್ಷನ್ ಹೊತ್ತಲ್ಲಿ ಈ ಭಟ್ಟನಿಗೆ ಮರಳು ಮಾಫಿಯಾ ದೊಡ್ಡ ಗಂಟು ಕೊಟ್ಟಿತ್ತು. ಅಂದು ಉಡುಪಿ ಶಾಸಕನೂ, ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದ ಪ್ರಮೋದ್ ಮಧ್ವರಾಜ್ ಎಂಬ ಮೊದ್ಮಣಿ ವಿರುದ್ಧ ಮರಳು ಮಾಫಿಯಾ ಮುರಕೊಂಡು ಬಿದ್ದಿತ್ತು. ಪ್ರಮೋದ್‍ನ ಮತ್ಸ್ಯೋದ್ಯಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಉದಯ ಸುವರ್ಣ ಅಕ್ರಮ ಮರಳುಗಾರಿಕೆ ಬಗ್ಗೆ ಹಸಿರು ನ್ಯಾಯಾಧೀಕರಣಕ್ಕೆ ದೂರು ಸಲ್ಲಿಸಿದ್ದರು. ಹಾಗಾಗಿ ಇದು ಪ್ರಮೋದರದೇ ಕಿತಾಪತಿ ಎಂಬ ತರ್ಕಕ್ಕೆ ಬಿದ್ದಿದ್ದ ಮರಳು ಮಾಫಿಯಾ ಆತನ ಎದುರಾಳಿ ರಘುಪತಿ ಭಟ್ಟನಿಗೆ ಎಲೆಕ್ಷನ್‍ನಲ್ಲಿ ಫೈನಾನ್ಸ್ ಮಾಡಿತ್ತು. ಮರಳು ಮಾಫಿಯಾ ಭಟ್ಟನಿಂದ ಈಗದರ ಕೂಲಿಯನ್ನು ಪಡೆಯಲು ಯತ್ನಿಸುತ್ತಿದೆ.

raghupathi bhat, BJP mla

ಮರಳುಗಾರಿಕೆ ನಿಂತಿರುವುದು ಕೇಂದ್ರ ಸರ್ಕಾರದ ಕಾನೂನು-ನಿಯಮದಿಂದ ಎಂಬುದು ಮರೆಮಾಚಿ ಪ್ರಾಮಾಣಿಕ ಜಿಲ್ಲಾಧಿಕಾರಿಣಿ ಮತ್ತು ಕಾಂಗ್ರೆಸ್ ಮೇಲೆ ಪೆದ್ದು ಆರೋಪ ಹೊರಿಸುತ್ತಿರುವ ಭಟ್ಟ ಮರಳು ತೆಗೆಯುತ್ತೇವೆಂದು ಪೊಕ್ಕು ಪೌರುಷ ತೋರಿಸುತ್ತಿದ್ದಾನೆ. ಇನ್ನು ಸಂಸದ ನಳಿನ್ ತನ್ನದೇ ಪಕ್ಷದ ಕೇಂದ್ರ ಸರ್ಕಾರದ ಪರಿಸರ ಮಂತ್ರಿಯ ಮೂಗು ಹಿಡಿದು ತನಗೆ ಬೇಕಾದಂತೆ “ಮರಳು ನೀತಿ” ಮಾಡಿಕೊಳ್ಳಬಹುದಾದರೂ, ಆ ತಾಕತ್ತಿಲ್ಲದ ಆತ ರಾಜ್ಯ ಸರ್ಕಾರ, ಜಿಲ್ಲಾಡಳಿತದತ್ತ ಬೆಟ್ಟು ತೋರಿಸುತ್ತಾ ತನ್ನತ್ತಲೇ ಇತರ ಮೂರು ಬೆರಳುಗಳನ್ನು ತಿರುಗಿಸಿಕೊಂಡಿದ್ದಾನೆ.
ಕಳೆದ ವರ್ಷ ಈ ಮರಳು ಮಾಫಿಯಾ ಎಂಥ ಹಗಲು ದರೋಡೆ ಮಾಡಿದೆ, ಎಂತೆಂಥ ಗೂಂಡಾಗಿರಿ ಮಾಡಿದೆ. ಬಡವರಿಗೆ ಮರಳು ಸಿಗದಂತೆ ಮಾಡಿ ಮಲ್ಟಿ ಎಕ್ಸಲ್ ಲಾರಿಗಳಲ್ಲಿ ಮರಳು ತುಂಬಿ ಯಾವ್ಯಾವ ಜಿಲ್ಲೆಗೆ-ರಾಜ್ಯಕ್ಕೆ ಕಳಿಸಿದೆ ಎಂಬುದೆಲ್ಲಾ ಬಿಜೆಪಿ ಶಾಸಕ, ಸಂಸದರಿಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಪೋಸು ಕೊಡುತ್ತಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ 9,67,179 ಮೆಟ್ರಿಕ್ ಟನ್ ಮರಳು ಎತ್ತಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಇದರ ದುಪ್ಪಟ್ಟು ಮರಳು ತೆಗೆಯಲಾಗಿದೆ. ಇದರಲ್ಲಿ ಶೇಕಡ ಹದಿನೈದರಷ್ಟು ಉಡುಪಿ ಜಿಲ್ಲೆಯವರಿಗೆ ಮನೆ ಕಟ್ಟಲು ಸಿಕ್ಕಿಲ್ಲ!
ಉಳಿದ ಮರಳನ್ನು ಪ್ರತಿ ಲೋಡ್‍ಗೆ ಇಪ್ಪತ್ತೈದು ಸಾವಿರದಂತೆ ಬೇರೆ-ಬೇರೆ ಜಿಲ್ಲೆಗೆ ಕಳ್ಳಸಾಗಾಣಿಕೆ ಮಾಡಲಾಗಿದೆ. ಕಳೆದ ಒಂದೇ ವರ್ಷದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬರೋಬ್ಬರಿ ಹದಿನಾಲ್ಕುವರೆ ಸಾವಿರ ಕೋಟಿ ರೂಪಾಯಿ ಮರಳಿನ ದಂಧೆ ನಡೆದಿದೆಯೆಂದು ಪರಿಸರ ಹೋರಾಟಗಾರರು ಅಂದಾಜಿಸಿದ್ದಾರೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಜಿಲ್ಲೆಯಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿದೆ. ಆದರೆ ಮೀನುಗಾರಿಕೆ ದೋಣಿಗಳಿಗೆ ಗಂಡಾಂತರಕಾರಿಯಾದ ನದಿಯೊಳಗಿನ ಮರಳು ದಿಬ್ಬ ತೆಗೆಯಲು ಶರತ್ತಿನ ಅವಕಾಶ ನೀಡಲಾಗಿದೆ. ಮರಳಿನ ದಿಬ್ಬಗಳನ್ನು ನೀರಿನ ಮೇಲ್ಮಟ್ಟದಿಂದ ಒಂದು ಮೀಟರ್ ಆಳದವರೆಗಷ್ಟೇ ತೆರವುಗೊಳಿಸಲು ಸಾಂಪ್ರದಾಯಿಕ ಮರಳುಗಾರಿಕೆ ಕಸುಬಿನವರಿಗೆ ಪರವಾನಗಿ ನೀಡಲು ಹೇಳಿದೆ.
ಈ ಅವಕಾಶ ಬಳಸಿಕೊಂಡು ಮರಳು ಮಾಫಿಯಾ ನೀರಿನ ಮೇಲ್ಮಟ್ಟದಿಂದ 25-30 ಅಡಿ ಆಳದವರೆಗೆ ಮರಳು ತೆಗೆದಿದೆ. ಕೇಂದ್ರ ಪರಿಸರ ಇಲಾಖೆಯ ನಿಯಮದಂತೆ ಮರಳು ಕಸುಬಿನವರು ನದಿಯಲ್ಲಿ ಮುಳುಗಿ ಬುಟ್ಟಿಯಲ್ಲಿ ಮರಳು ತುಂಬಿ ನಾಡದೋಣಿಗೆ ಹಾಕಬೇಕು. ಆದರೆ ಮರಳಿನ ದಿಬ್ಬ ತೆರವು ಮಾಡುವಾಗ ದೊಡ್ಡ-ದೊಡ್ಡ ಫೈಬರ್, ಕಬ್ಬಿಣದ ದೋಣಿ ಬಳಸಲಾಗಿದೆ; ಜೆಸಿಬಿ, ಜರಡಿಯಿಂದ ಮರಳು ಲೂಟಿ ಮಾಡಲಾಗಿದೆ. ಹಸಿರು ಪೀಠ ಮರಳು ದಿಬ್ಬ ತೆರವುಗೊಳಿಸಲು ಸಾಂಪ್ರದಾಯಿಕ ಮರಳು ಕರ್ಮಚಾರಿಗಳಿಗಷ್ಟೇ ಲೈಸೆನ್ಸ್ ಕೊಡಬೇಕೆಂದು ಹೇಳಿದೆ. ಆದರೆ ಮರಳು ಕಸುಬು ಎಂದೂ ಮಾಡದ ದುಡ್ಡಿನ ಕುಳಗಳು ಅಕ್ರಮವಾಗಿ ಪರವಾನಗಿ ಪಡೆದಿದ್ದಾರೆ. ಮಾಫಿಯಾ ಬಿಹಾರ, ಉತ್ತರ ಪ್ರದೇಶದ ಕೂಲಿಗಳನ್ನು ತಂದು ದೇಖಾದಂಧೆ ನಡೆಸುತ್ತಿದೆ.
ತಾವು ಮಾತ್ರ ದೇಶೋದ್ಧಾರಕರು ದೇಶಭಕ್ತರೆಂದು ಬೊಬ್ಬಿರಿಯುವ ಬಿಜೆಪಿ ಭೂಪರಿಗೆ ಮರಳು ಕಳ್ಳದಂಧೆಯಲ್ಲಿ ಸಿಗುವ ಪಾಲು ಎಷ್ಟು? ಹಸಿರು ನ್ಯಾಯಪೀಠದ ಆದೇಶ ಉಲ್ಲಂಘಿಸಿ ಮರಳು ಕಳ್ಳರ ನರವಿಗೆ ಜಿಲ್ಲಾಧಿಕಾರಣಿ ಬರುವಂತೆ ಮಾಡಲೆಂದೇ ಶಾಸಕ ರಘುಪತಿ ಭಟ್ಟ, ಪೇಜಾವರ ಸ್ವಾಮಿ ಬಳಗ ಧರಣಿ ತಂತ್ರಗಾರಿಕೆ ಮಾಡಿತ್ತಲ್ಲವಾ? ಇಂಥ ಪ್ರಶ್ನೆಗಳೀಗ ಉಡುಪಿ ಜಿಲ್ಲೆಯ ಜನರನ್ನು ಕಾಡಲಾರಂಭಿಸಿವೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...