ಪಕ್ಷಕಾರರ (ಸಂತ್ರಸ್ತೆ ಮತ್ತು ಆರೋಪಿ) ನಡುವಿನ ರಾಜಿ ಸಂಧಾನದ ಆಧಾರದ ಮೇಲೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇವಲ ಒಪ್ಪಂದದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು ಒಳಗೊಂಡಿರುವ ಪ್ರಕರಣ ರದ್ದುಗೊಳಿಸುವುದನ್ನು ತಾನು ಅನುಮೋದಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಜೆ. ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ತೀರ್ಪನ್ನು ನೀಡಿದೆ. ಇದೇ ವೇಳೆ, ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ನ್ಯಾಯಾಲಯವು ವಿಚಾರಣೆಯನ್ನು ಮುಂದುವರಿಸುವಂತೆ ನಿರ್ದೇಶಿಸಿದೆ. ಅಲ್ಲದೆ, ಹಣಕಾಸಿನ ಒಪ್ಪಂದಗಳ ಆಮಿಷಕ್ಕೆ ಒಳಗಾಗಿ ನೀಡಲಾಗುವ ಸುಳ್ಳು ದೂರುಗಳು ಮತ್ತು ಬಲವಂತದ ಮೂಲಕ ಮಾಡಿಕೊಳ್ಳಲಾಗುವ ರಾಜಿ ಸಂಧಾನಗಳ ಬಗ್ಗೆಯೂ ಪೀಠವು ತೀವ್ರ ಕಳವಳ ವ್ಯಕ್ತಪಡಿಸಿದೆ.
ಭಾರತೀಯ ನ್ಯಾಯ ಸಂಹಿತೆ, 2023 (BNS)ರ ಸೆಕ್ಷನ್ಗಳಾದ 64(1), 33(2) ಮತ್ತು 351(3), ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 (SC/ST ಕಾಯ್ದೆ)ರ ಸೆಕ್ಷನ್ಗಳಾದ 3(1)(w)(i), 3(1)(w)(ii) ಮತ್ತು 3(2)(v) ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿದ್ದರು.
ತನ್ನ ಹಿಂದಿನ ಆದೇಶವನ್ನು ಪರಿಶೀಲಿಸಿದ ಪೀಠವು, ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ವರಿಶಾ ಫರಾಸತ್ ಅವರು ಪ್ರಕರಣವು ರಾಜಿ ಸಂಧಾನದ ಮೂಲಕ ಬಗೆಹರಿದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದನ್ನು ಗಣನೆಗೆ ತೆಗೆದುಕೊಂಡಿದೆ. ಅಲ್ಲದೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 (BNSS) ರ ಸೆಕ್ಷನ್ 528 ರ ಅಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ತನ್ನ ಅಂತರ್ಗತ ಅಧಿಕಾರವನ್ನು ಬಳಸಿ, ರಾಜಿಯನ್ನು ಅಂಗೀಕರಿಸಿ ಇತ್ಯರ್ಥಪಡಿಸಿದೆ ಎಂದೂ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, “ಅಪರಾಧದ ಗಂಭೀರತೆಯನ್ನು ಪರಿಗಣಿಸಿ, ನಮಗೆ ಸ್ವಲ್ಪ ಆತಂಕ ಹಾಗೂ ತಳಮಳ ಉಂಟಾಗಿದೆ” ಎಂದು ಹೇಳಿದೆ. ಮುಂದುವರಿದು ಹೈಕೋರ್ಟ್ ಅವಲಂಬಿಸಿದ್ದ ತೀರ್ಪುಗಳನ್ನು ಪರಿಶೀಲಿಸಿದ ಪೀಠವು, ‘ನರಿಂದರ್ ಸಿಂಗ್ V/s ಪಂಜಾಬ್ ರಾಜ್ಯ’ ಮತ್ತು ‘ಅನಿತಾ ಮಾರಿಯಾ ಡಯಾಸ್ ಮತ್ತು ಇತರರು V/s ಮಹಾರಾಷ್ಟ್ರ ರಾಜ್ಯ ಮತ್ತು ಇತರರು’ ಪ್ರಕರಣಗಳ ತೀರ್ಪುಗಳನ್ನು ಉಲ್ಲೇಖಿಸಿದೆ. ಪ್ರಕರಣವೊಂದನ್ನು ರದ್ದುಗೊಳಿಸುವ ಅಂತರ್ಗತ ಅಧಿಕಾರವನ್ನು ‘ಮಾನಸಿಕ ವಿಕೃತಿಯನ್ನು ಬಿಂಬಿಸುವ ಹಿತಹೀನ ಮತ್ತು ಗಂಭೀರ ಅಪರಾಧಗಳಾದ ಕೊಲೆ, ಅತ್ಯಾಚಾರ, ದರೋಡೆ ಮುಂತಾದ ವೈಯಕ್ತಿಕ ಸ್ವರೂಪದ್ದಲ್ಲದ ಪ್ರಕರಣಗಳಲ್ಲಿ ಬಳಸಬಾರದು’ ಎಂದು ಆ ತೀರ್ಪುಗಳು ಎಚ್ಚರಿಸಿದ್ದನ್ನು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ನೆನಪಿಸಿದೆ.
ಗ್ಯಾನ್ ಸಿಂಗ್ V/s ಪಂಜಾಬ್ ರಾಜ್ಯ ಪ್ರಕರಣದ ಪೀಠವು, ಪಕ್ಷಕಾರರು ರಾಜಿ ಮಾಡಿಕೊಂಡಾಗ ಅಪರಾಧಗಳು ಮಾನಸಿಕ ವಿಕೃತಿ, ಕೊಲೆ, ಅತ್ಯಾಚಾರ ಅಥವಾ ದರೋಡೆಯಂತಹ ಹಿತಹೀನ ಮತ್ತು ಗಂಭೀರ ಸ್ವರೂಪದ್ದಾಗಿರದಿದ್ದರೆ ಅಥವಾ ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಅಡಿಯಲ್ಲಿ ಬಾರದಿದ್ದರೆ ಮಾತ್ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 (CrPC) ರ ಸೆಕ್ಷನ್ 482 (ಪ್ರಸ್ತುತ BNSS ನ ಸೆಕ್ಷನ್ 528) ಅಡಿಯ ಅಧಿಕಾರವನ್ನು ಚಲಾಯಿಸಬಹುದು ಎಂದು ತೀರ್ಪು ನೀಡಿರುವುದನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.ಇನ್ನು ಶಂಭು ಖಾರ್ವರ್ V/s ಉತ್ತರ ಪ್ರದೇಶ ರಾಜ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿ ಕೇಳಿಬಂದಿದ್ದ ಆರೋಪಗಳೇ ಆ ಸಂಬಂಧವು ಪರಸ್ಪರ ಒಪ್ಪಿಗೆಯಿಂದ ಕೂಡಿತ್ತು ಎಂಬುದನ್ನು ತೋರಿಸುತ್ತಿದ್ದ ಕಾರಣ ಆ ಪ್ರಕರಣವನ್ನು ರದ್ದುಗೊಳಿಸಲಾಗಿತ್ತು ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಾಲಯವು ಅರ್ಜಿದಾರನಿಗೆ (ಆರೋಪಿಗೆ) ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ, ಆದರೆ ಈ ಕೆಳಗಿನಂತೆ ಹೇಳಿದೆ..
“ ಕೇವಲ ರಾಜಿ ಸಂಧಾನದ ಆಧಾರದ ಮೇಲೆ, ಅದರಲ್ಲೂ ವಿಶೇಷವಾಗಿ ಅದು ರಾಜಿ ಮಾಡಿಕೊಳ್ಳಲಾಗದ (non-compoundable) ಅಪರಾಧವಾಗಿದ್ದಾಗ, ಸೆಕ್ಷನ್ 482ರ ಅಡಿಯಲ್ಲಿ ಪ್ರಕರಣವನ್ನು ರದ್ದುಗೊಳಿಸುವುದು ಆ ಸೆಕ್ಷನ್ 482 ವ್ಯಾಪ್ತಿಯನ್ನು ಮೀರಿ ಹೆಜ್ಜೆ ಇಟ್ಟಂತಾಗುತ್ತದೆ; ಮತ್ತು ಅದು ಸೆಕ್ಷನ್ 320ರ ಅಡಿಯಲ್ಲಿ ನೀಡಲಾದ ಅಧಿಕಾರದ ಉಲ್ಲಂಘನೆಯೂ ಆಗುತ್ತದೆ. ಆರೋಪಿಗಳ ಬಲವಂತದ ಮೇರೆಗೆ ಮಾಡಿಕೊಳ್ಳಲಾಗುವ ರಾಜಿ ಸಂಧಾನಗಳ ಬಗ್ಗೆ ಮಾತ್ರ ನಮಗೆ ಕಳವಳವಿಲ್ಲ; ಬದಲಿಗೆ, ಭವಿಷ್ಯದಲ್ಲಿ ರಾಜಿ ಮಾಡಿಕೊಳ್ಳಬಹುದು ಎಂಬ ಹಣಕಾಸಿನ ಆಮಿಷದಿಂದಾಗಿ ಇಂತಹ ಸುಳ್ಳು ದೂರುಗಳು ಹೆಚ್ಚಾಗಬಹುದು ಎಂಬ ಆತಂಕವೂ ನಮಗಿದೆ.”
ಹೈಕೋರ್ಟ್ ಉಲ್ಲೇಖಿಸಿದ ತೀರ್ಪುಗಳು, ಅತ್ಯಾಚಾರದಂತಹ ಗಂಭೀರ ಅಪರಾಧದ ಆರೋಪವಿರುವ ದೂರನ್ನು ಕೇವಲ ರಾಜಿ ಸಂಧಾನದ ಆಧಾರದ ಮೇಲೆ ರದ್ದುಗೊಳಿಸಲು ಹೈಕೋರ್ಟ್ಗೆ ಅಧಿಕಾರ ನೀಡುತ್ತವೆ ಎಂಬುದನ್ನು ಮೇಲ್ನೋಟಕ್ಕೆ ಒಪ್ಪಲು ಸಾಧ್ಯವಿಲ್ಲ ಎಂದು ಪೀಠವು ತಿಳಿಸಿದೆ. ಈ ಕಾರಣಕ್ಕಾಗಿ, ಸುಪ್ರೀಂ ಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಹೈಕೋರ್ಟ್ನಿಂದ ತರಿಸಿಕೊಂಡಿದೆ.
ಹೆಚ್ಚುವರಿಯಾಗಿ, ಪೀಠವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಿಂದ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಸಂತ್ರಸ್ತೆಯೊಂದಿಗೆ ಸಂವಾದ ನಡೆಸಿದೆ. ಈ ವೇಳೆ, “ತನ್ನನ್ನು ಬಲವಂತಪಡಿಸಿ ರಾಜಿ ಮಾಡಿಕೊಳ್ಳುವಂತೆ ಮಾಡಲಾಗಿದೆ ಎಂದು ಒಂದೇ ಉಸಿರಿನಲ್ಲಿ ಹೇಳುವ ಸಂತ್ರಸ್ತೆ, ತಾನು ರಾಜಿ ಸಂಧಾನಕ್ಕೆ ಸಿದ್ಧಳಿಲ್ಲ ಮತ್ತು ತನಗೆ ರಾಜಿಗಾಗಿ ಹಣದ ಅಗತ್ಯವಿದೆ ಎಂದೂ ಹೇಳುತ್ತಾಳೆ. ತಾವು ನೀಡಿದ ದೂರಿನಲ್ಲಿ ಸತ್ಯವನ್ನೇ ಹೇಳಿರುವುದಾಗಿ ಆಕೆ ಸ್ಪಷ್ಟಪಡಿಸಿದ್ದಾಳೆ” ಎಂದು ಪೀಠವು ದಾಖಲಿಸಿಕೊಂಡಿದೆ. ಮುಂದುವರಿದು, ಈ ಆರೋಪಗಳ ಸತ್ಯಾಸತ್ಯತೆಯನ್ನು ವಿಚಾರಣೆಯ (trial) ಸಂದರ್ಭದಲ್ಲೇ ಪರಿಶೀಲಿಸಬೇಕಾಗುತ್ತದೆ ಮತ್ತು ಸದ್ಯಕ್ಕೆ ಅವುಗಳ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.
ಹಣಕಾಸಿನ ಒಪ್ಪಂದದ ಆಮಿಷಕ್ಕೆ ಒಳಗಾಗಿ ಮಾಡಲಾಗುವ ಸುಳ್ಳು ಆರೋಪಗಳು ಮತ್ತು ಬಲವಂತದ ಮೂಲಕ ಮಾಡಿಕೊಳ್ಳಲಾಗುವ ರಾಜಿ ಸಂಧಾನಗಳು — ಇವೆರಡರ ಬಗ್ಗೆಯೂ ನ್ಯಾಯಾಲಯವು ತನ್ನ ಎಚ್ಚರಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.
“ಕೇವಲ ರಾಜಿ ಸಂಧಾನದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು ಒಳಗೊಂಡಿರುವ ಪ್ರಕರಣವನ್ನು ರದ್ದುಗೊಳಿಸುವುದಕ್ಕೆ ಸಂಬಂಧಿಸಿದಂತೆ ನಾವು ಈಗಾಗಲೇ ಕಾನೂನನ್ನು ಸ್ಪಷ್ಟಪಡಿಸಿದ್ದೇವೆ; ಇದನ್ನು ನಾವು ಯಾವುದೇ ಕಾರಣಕ್ಕೂ ಅನುಮೋದಿಸಲು ಸಾಧ್ಯವಿಲ್ಲ. ಗೌರವಾನ್ವಿತ ಏಕಸದಸ್ಯ ಪೀಠವು (ಹೈಕೋರ್ಟ್ ಜಡ್ಜ್) ಅವಲಂಬಿಸಿದ್ದ ತೀರ್ಪುಗಳು ಈ ಪ್ರಕರಣಕ್ಕೆ ಹೇಗೆ ಅನ್ವಯಿಸುವುದಿಲ್ಲ ಎಂಬುದನ್ನೂ ನಾವು ಸ್ಪಷ್ಟವಾಗಿ ವಿವರಿಸಿದ್ದೇವೆ.”
ಮೇಲ್ಕಂಡ ಅಂಶಗಳ ಬೆಳಕಿನಲ್ಲಿ, ಸುಪ್ರೀಂ ಕೋರ್ಟ್ ಹೈಕೋರ್ಟ್ನ ಆದೇಶವನ್ನು ರದ್ದುಗೊಳಿಸಿತಲ್ಲದೆ, ವಿಚಾರಣೆಯನ್ನು ಮುಂದುವರಿಸುವಂತೆ ನಿರ್ದೇಶನ ನೀಡಿದೆ. ಇದೇ ವೇಳೆ, ಕೆಲವು ಷರತ್ತುಗಳೊಂದಿಗೆ ಆರೋಪಿಗೆ ನಿರೀಕ್ಷಣಾ ಜಾಮೀನನ್ನೂ ಮಂಜೂರು ಮಾಡಿದೆ.


