ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬಂಧಿಸಿದಂತೆ, 2026ರ ಮತದಾರರ ಪಟ್ಟಿಯಲ್ಲಿದ್ದರೂ ಸಹ ಗಣತಿ ನಮೂನೆಗಳನ್ನು (enumeration forms) ಭರ್ತಿ ಮಾಡದ ಕಾರಣಕ್ಕಾಗಿ ಕರಡು ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ವ್ಯಕ್ತಿಗಳು, ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳಲು ‘ಫಾರಂ 6’ ಅನ್ನು ಬಳಸುವಂತೆ ಸೂಚಿಸಿರುವುದನ್ನು ಸುಪ್ರೀಂ ಕೋರ್ಟ್ ಬುಧವಾರ (ಅ.28) ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಂದೆ ಪ್ರಶ್ನಿಸಿದೆ.
ಫಾರಂ 6 ಮೊದಲ ಬಾರಿಗೆ ಮತದಾನ ಮಾಡುವ ಹೊಸ ಮತದಾರರಿಗಾಗಿ ಇರುವಂತದ್ದು, ಅರ್ಜಿದಾರರು ತಾವು ಈ ಹಿಂದೆ ಎಂದಿಗೂ ಮತದಾನ ಮಾಡಿಲ್ಲ ಎಂಬ ಘೋಷಣೆಯನ್ನು ಅದರಲ್ಲಿ ನೀಡಬೇಕಾಗುತ್ತದೆ ಎಂಬುವುದನ್ನು ಸುಪ್ರೀಂ ಕೋರ್ಟ್ ಬೆಟ್ಟು ಮಾಡಿ ತೋರಿಸಿದೆ.
ದೆಹಲಿಯಲ್ಲಿ ವಿಳಾಸ ಬದಲಾಯಿಸಿರುವ ಕಾರಣಕ್ಕೆ ಅಥವಾ ಕೆಲಸದ ನಿಮಿತ್ತ ತಾತ್ಕಾಲಿಕವಾಗಿ ನಗರದಿಂದ ಹೊರಹೋಗಿರುವ ಕಾರಣಕ್ಕೆ ಗಣತಿ ನಮೂನೆಗಳನ್ನು ತಲುಪಿಸಲು ಸಾಧ್ಯವಾಗದಂತಹ ಹಲವಾರು ವ್ಯಕ್ತಿಗಳಿರುತ್ತಾರೆ ಎಂಬುದನ್ನು ಕೋರ್ಟ್ ಒತ್ತಿಹೇಳಿದೆ. ಅಂತಹವರಿಗೆ ಫಾರಂ 6 ಅನ್ನು ಭರ್ತಿ ಮಾಡುವಂತೆ ಒತ್ತಾಯಿಸುವ ಬದಲು, ಗಣತಿ ನಮೂನೆಗಳನ್ನು ಭರ್ತಿ ಮಾಡಲು ಅಥವಾ (ವಿಳಾಸ ಬದಲಾವಣೆಯನ್ನು ತೋರಿಸಲು) ಫಾರಂ 8 ಅನ್ನು ಸಲ್ಲಿಸಲು ಏಕೆ ಅವಕಾಶ ನೀಡಬಾರದು ಎಂದು ಕೋರ್ಟ್ ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು, ದೆಹಲಿಯ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂಜಲಿ ಭಾರದ್ವಾಜ್ ಮತ್ತು ಅಮೃತಾ ಜೋಹ್ರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿದೆ.
ಪೀಠವು ವ್ಯಕ್ತಪಡಿಸಿದ ಕಳವಳಗಳಿಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ದಾಮಾ ಶೇಷಾದ್ರಿ ನಾಯ್ಡು ಅವರು, ಅಧಿಕಾರಿಗಳು ಈ ವಿಷಯಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಚುನಾವಣಾ ಆಯೋಗವು ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸುವ ಬಗ್ಗೆಯೂ ಪರಿಶೀಲಿಸಲಿದೆ ಎಂದು ನಾಯ್ಡು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವ ವ್ಯಕ್ತಿಗಳ ಸಮಸ್ಯೆಯನ್ನು ನಿವಾರಿಸಲು ಒಂದು ಉಳಿಕೆ ವರ್ಗವನ್ನು (residual category) ರಚಿಸುವಂತೆ ಸಲಹೆ ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ಅವರು, “ಮತದಾರರ ಪಟ್ಟಿಯಿಂದ ಕೈಬಿಡಲಾದ ಒಟ್ಟು 47 ಲಕ್ಷ ಮತದಾರರಲ್ಲಿ 43 ಲಕ್ಷ ಜನರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು ಅಥವಾ ಗೈರುಹಾಜರಾದವರು ಎಂದು ತೋರಿಸಲಾಗಿದೆ ಎಂದು ಕೋರ್ಟ್ಗೆ ತಿಳಿಸಿದ್ದಾರೆ. ಇವರ್ಯಾರಿಗೂ ಗಣತಿ ನಮೂನೆ ತಲುಪಿಲ್ಲ. ಚುನಾವಣಾ ಆಯೋಗ ಇವರಿಗೆ ವಿಳಾಸ ಬದಲಾವಣೆಯನ್ನು ದಾಖಲಿಸುವ ಸಲುವಾಗಿ ‘ಫಾರಂ 8’ ಸಲ್ಲಿಸಲು ಅವಕಾಶ ನೀಡುತ್ತಿಲ್ಲ, ಬದಲಿಗೆ ಕರಡು ಪಟ್ಟಿಯಲ್ಲಿ ಹೆಸರು ಸೇರಿಸಲು ‘ಫಾರಂ 6’ ಸಲ್ಲಿಸುವಂತೆ ಒತ್ತಾಯಿಸುತ್ತಿದೆ” ಎಂದು ಹೇಳಿದ್ದಾರೆ.
“ಸ್ಥಳಾಂತರಗೊಂಡ ಮತದಾರರು ಮಾಡಬಹುದಾದ ಏಕೈಕ ಕೆಲಸವೆಂದರೆ ಫಾರಂ 8 ಅನ್ನು ಭರ್ತಿ ಮಾಡುವುದು. ಆದರೆ, ಎಸ್ಐಆರ್ನಲ್ಲಿ ನೀವು ಫಾರಂ 8 ಭರ್ತಿ ಮಾಡಲು ಸಾಧ್ಯವಿಲ್ಲ, ಕರಡು ಪಟ್ಟಿಗೆ ಸೇರಲು ಫಾರಂ 6 ಅನ್ನೇ ಭರ್ತಿ ಮಾಡಬೇಕು ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಈ ಮೂಲಕ ತಾವು ಈ ಹಿಂದೆ ಎಂದಿಗೂ ಮತದಾನ ಮಾಡಿಲ್ಲ ಎಂಬ ಸುಳ್ಳು ಘೋಷಣೆಯನ್ನು ಜನರು ನೀಡುವಂತೆ ಆಯೋಗವು ಒತ್ತಾಯಿಸುತ್ತಿದೆ. ಇದಕ್ಕೆ ಒಂದು ಸುಲಭವಾದ ಪರಿಹಾರವಿದೆ, ಜನರಿಗೆ ಈಗಲೂ ಸಹ ಗಣತಿ ನಮೂನೆಗಳನ್ನು ಭರ್ತಿ ಮಾಡಲು ಅವಕಾಶ ನೀಡುವುದು. ಸ್ಥಳಾಂತರಗೊಂಡವರು ಗಣತಿ ನಮೂನೆಯೊಂದಿಗೆ ಫಾರಂ 8 ಅನ್ನು ಭರ್ತಿ ಮಾಡಬೇಕು. ಏಕೆಂದರೆ ಫಾರಂ 6 ಇರುವುದು ಹೊಸ ಮತದಾರರಿಗಾಗಿ, ನಾವು ಹೊಸ ಮತದಾರರಲ್ಲ” ಎಂದು ವಿವರಿಸಿದ್ದಾರೆ.
ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ಬಾಗ್ಚಿ ಅವರು “ಮತದಾರರ ಪಟ್ಟಿಯಲ್ಲಿ ಹೆಸರು ಇರುವಿಕೆ ಎಂದರೆ ಚುನಾವಣಾ ಆಯೋಗದ ತಿಳುವಳಿಕೆ ಏನು? ಇದು 2003ರ ಪಟ್ಟಿಯಲ್ಲಿರುವ ಹೆಸರೇ ಅಥವಾ ತೀರಾ ಇತ್ತೀಚಿನ ಮತದಾರರ ಪಟ್ಟಿಯಲ್ಲಿರುವ ಹೆಸರೇ?” ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ, ವಿಶೇಷ ತೀವ್ರ ಪರಿಷ್ಕರಣೆಗಿಂತ (ಎಸ್ಐಆರ್) ಮುಂಚಿನ ಇತ್ತೀಚಿನ ಪಟ್ಟಿಯನ್ನು (2026) ಆಧಾರವಾಗಿ ತೆಗೆದುಕೊಳ್ಳಲಾಗುತ್ತದೆ” ಎಂದು ಚುನಾವಣಾ ಆಯೋಗದ ಪರ ವಕೀಲ ನಾಯ್ಡು ಉತ್ತರಿಸಿದ್ದಾರೆ.
ನಂತರ, ನ್ಯಾಯಮೂರ್ತಿ ಬಾಗ್ಚಿ ಅವರು ಪೀಠದ ಕಳವಳವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ.
"ನೀವು ಇತ್ತೀಚಿನ ಅಂದರೆ 2026ರ ಮತದಾರರ ಪಟ್ಟಿಯನ್ನೇ ಆಧಾರವಾಗಿ ಇಟ್ಟುಕೊಂಡಿದ್ದೀರಿ. ಆದರೆ ಯಾರೋ ಒಬ್ಬರಿಗೆ ನೀವು ಕಳುಹಿಸಿದ ಫಾರಂ ತಲುಪಿಲ್ಲ ಎಂದಮಾತ್ರಕ್ಕೆ ಅವರು ಊರು ಬಿಟ್ಟಿದ್ದಾರೆ ಎಂದು ನಿರ್ಧರಿಸಿ, ಅವರನ್ನು ಹೊಸ ಮತದಾರರಂತೆ "ಫಾರಂ 6" ತುಂಬಲು ಕೇಳುತ್ತಿದ್ದೀರಿ. ಫಾರಂ 6 ಎಂದರೆ "ನನ್ನ ಹೆಸರು ಈ ಹಿಂದೆ ಎಲ್ಲೂ ಇರಲಿಲ್ಲ" ಎಂದು ಬರೆದುಕೊಡುವುದು. ಇದು ತಪ್ಪು ಮತ್ತು ಗೊಂದಲದ ಸಂಗತಿ".
"ನೀವು ಎಲ್ಲರನ್ನೂ ಹೊಸಬರಂತೆ ಪರಿಗಣಿಸಬೇಕಿದ್ದರೆ, 2003ರ ಹಳೆಯ ಪಟ್ಟಿಯನ್ನೇ ಕೊನೆಯ ಆಧಾರ ಮಾಡಿಕೊಳ್ಳಬೇಕಿತ್ತು. ಆಗ "2026ರ ನಂತರದ ಯಾವುದೇ ಪಟ್ಟಿಗಳು ಮಾನ್ಯವಲ್ಲ, ಎಲ್ಲರೂ ಹೊಸದಾಗಿ ನೋಂದಣಿ ಮಾಡಿ" ಎಂದು ಹೇಳುವುದು ಅರ್ಥವಾಗುತ್ತಿತ್ತು. ಆದರೆ ಇತ್ತೀಚಿನ (2026) ಪಟ್ಟಿಯನ್ನು ಒಪ್ಪಿಕೊಳ್ಳುತ್ತಾ, ಮತ್ತೊಂದೆಡೆ ಜನರಿಂದ ಹೊಸ ಮತದಾರರಂತೆ ಸುಳ್ಳು ಘೋಷಣೆ ಹಾಗೂ ತಂದೆಯ ಹೆಸರು, ಹುಟ್ಟಿದ ಸ್ಥಳದಂತಹ ಎಲ್ಲಾ ಮಾಹಿತಿಯನ್ನು ಮರುಪಡೆಯುವುದು ಸರಿಯಲ್ಲ".
"ಒಮ್ಮೆ ಒಬ್ಬ ವ್ಯಕ್ತಿ 2026ರ ಪಟ್ಟಿಯಲ್ಲಿದ್ದು, ಈಗ ಕೇವಲ ಅವರ ವಿಳಾಸ ಬದಲಾಗಿದ್ದರೆ ಅಥವಾ ಅವರು ತಾತ್ಕಾಲಿಕವಾಗಿ ಊರಲ್ಲಿ ಇಲ್ಲದಿದ್ದರೆ, ಅವರಿಗೆ ಹೊಸಬರಂತೆ ಫಾರಂ 6 ನೀಡುವ ಬದಲು, ಕೇವಲ ವಿಳಾಸ ಬದಲಾವಣೆಯನ್ನು ಸರಿಪಡಿಸುವ "ಫಾರಂ 8" ಅನ್ನು ಸಲ್ಲಿಸಲು ಚುನಾವಣಾ ಆಯೋಗ ಕಡ್ಡಾಯವಾಗಿ ಅವಕಾಶ ನೀಡಬೇಕು".
ಮುಂದುವರಿದು ಮಾತನಾಡಿದ ನ್ಯಾಯಮೂರ್ತಿ ಬಾಗ್ಚಿ …
"ಗಣತಿ ನಮೂನೆಗಳನ್ನು ನೀವು ಯಾವ ರೀತಿ ತಲುಪಿಸಿದ್ದೀರಿ? ದೆಹಲಿಯಲ್ಲಿ ಒಟ್ಟು 1.45 ಕೋಟಿ ಮತದಾರರಿದ್ದಾರೆ. ಅವರಲ್ಲಿ ಜೂನ್ 30ರಿಂದ ನೀವು ಈ ನಮೂನೆಗಳನ್ನು ವಿತರಿಸಲು ಪ್ರಾರಂಭಿಸಿದ್ದೀರಿ... ಅಂದರೆ ಸುಮಾರು 1.45 ಕೋಟಿ ಜನರಿಗೆ ಫಾರಂ ತಲುಪಿಸಲು ನೀವು ಕೇವಲ ಒಂದೂವರೆ ತಿಂಗಳು ತೆಗೆದುಕೊಂಡಿದ್ದೀರಿ. ಅದರಲ್ಲಿ 97 ಲಕ್ಷ ಜನರು ಪ್ರತಿಕ್ರಿಯಿಸಿದ್ದಾರೆ, 47 ಲಕ್ಷ ಜನರು ಪ್ರತಿಕ್ರಿಯಿಸಿಲ್ಲ. ಹೀಗೆ ಪ್ರತಿಕ್ರಿಯಿಸದ ಜನರನ್ನು ನೀವು ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮರಣ ಹೊಂದಿದವರು ಅಥವಾ ನಕಲಿ ಮತದಾರರು ಎಂದು ವರ್ಗೀಕರಿಸಿದ್ದೀರಿ".
"ನಿಮ್ಮ ಈ ವರ್ಗೀಕರಣವು ಎಲ್ಲವನ್ನೂ ಒಳಗೊಂಡಿದೆಯಾದರೂ, ಇವುಗಳ ಹೊರತಾಗಿ ಗಣತಿ ನಮೂನೆಗಳೇ ತಲುಪದ ಒಂದು 'ಉಳಿಕೆ ವರ್ಗ' (residual group) ಕೂಡ ಇರುವ ಸಾಧ್ಯತೆ ಇದೆ. ಒಂದು ವೇಳೆ ಅವರು ತಾತ್ಕಾಲಿಕವಾಗಿ ಬೇರೆಡೆಗೆ ಹೋಗಿದ್ದರೆ, ಅವರನ್ನು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ನೀವು ಹೇಗೆ ಕರೆಯುತ್ತೀರಿ? ಯಾರೋ ಒಬ್ಬರು ಕೇವಲ ಒಂದು ತಿಂಗಳ ಮಟ್ಟಿಗೆ ದೆಹಲಿಯಿಂದ ಹೊರಗೆ ಹೋಗಿರಬಹುದು. ಅವರು ವಾಪಸ್ ಬರುವಷ್ಟರಲ್ಲಿ ಫಾರಂ ಹಂಚುವ ಸಮಯ ಮುಗಿದಿರುತ್ತದೆ. ಅಂದರೆ ಅವರು ನಿಜವಾಗಿ ದೆಹಲಿಯನ್ನು ಬಿಟ್ಟು ಹೋಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇರುವವರಿಗೆ ನೀವೇನು ಮಾಡುತ್ತೀರಿ?"
ನಿಮ್ಮ ಸದ್ಯದ ವ್ಯವಸ್ಥಿತ ಪರಿಷ್ಕರಣಾ ಯೋಜನೆಯ ಪ್ರಕಾರ, ಇಂತಹ ವ್ಯಕ್ತಿಗಳು ಕೂಡ 'ಫಾರಂ 6' ಅನ್ನೇ ಸಲ್ಲಿಸಬೇಕಾಗಿದೆ. ಇದನ್ನೇ ವಕೀಲರಾದ ಭೂಷಣ್ ಅವರು ಆಕ್ಷೇಪಿಸುತ್ತಿರುವುದು. ಈ ಜನರನ್ನು ಫಾರಂ 6 ಸಲ್ಲಿಸುವಂತೆ ಏಕೆ ಕೇಳಲಾಗುತ್ತಿದೆ? ಫಾರಂ 6 ಇರುವುದು ಮತದಾರರ ಪಟ್ಟಿಯಲ್ಲಿ ಇದುವರೆಗೆ ಹೆಸರೇ ಇಲ್ಲದ ಹೊಸಬರಿಗಾಗಿ ಮಾತ್ರ. ಕೆಲವರು ಸ್ಥಳಾಂತರಗೊಂಡಿರುವುದಿಲ್ಲ, ಬದಲಿಗೆ ಅವರಿಗೆ ಫಾರಂ ತಲುಪಿರುವುದಿಲ್ಲ ಅಷ್ಟೇ. ನಿಮ್ಮ ಯೋಜನೆಯಲ್ಲಿ ಅಂತಹವರಿಗಾಗಿ ನೀವು ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ. ನೀವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಶೀಲಿಸಬೇಕು."
ನಂತರ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಈ ಕೆಳಗಿನ ಸಲಹೆಗಳನ್ನು ನೀಡಿದ್ದಾರೆ
ಚುನಾವಣಾ ಆಯೋಗವು ಕೇವಲ ಒಂದೇ ಒಂದು ಅಧಿಕೃತ ಸುತ್ತೋಲೆ ಅಥವಾ ಪ್ರಕಟಣೆಯನ್ನು ಹೊರಡಿಸುವ ಮೂಲಕ ಸಾರ್ವಜನಿಕರಲ್ಲಿರುವ ಗೊಂದಲವನ್ನು ತಕ್ಷಣವೇ ಬಗೆಹರಿಸಬಹುದು. ದೆಹಲಿಯಲ್ಲಿ ಇದುವರೆಗೆ ಮತದಾನದ ಹಕ್ಕೇ ಇಲ್ಲದ ಮತ್ತು ಮೊದಲ ಬಾರಿಗೆ ಹೊಸ ಮತದಾರರಾಗಿ ಹೆಸರು ನೋಂದಾಯಿಸಲು ಬಯಸುವವರು ಮಾತ್ರ 'ಫಾರಂ 6' ಅನ್ನು ಭರ್ತಿ ಮಾಡಬೇಕು ಎಂಬುದನ್ನು ಆಯೋಗ ಸ್ಪಷ್ಟಪಡಿಸಬೇಕು. ಯಾರ ಹೆಸರುಗಳು ಈಗಾಗಲೇ 2026ರ ಮತದಾರರ ಪಟ್ಟಿಯಲ್ಲಿದ್ದವೋ, ಮತ್ತು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮನೆ ಬದಲಾಯಿಸಿ ಬೇರೆಡೆಗೆ ಹೋಗಿರುವುದರಿಂದ ಅಥವಾ ಇನ್ಯಾವುದೇ ಕಾರಣಗಳಿಂದಾಗಿ ಆಯೋಗದ ಗಣತಿ ನಮೂನೆಯನ್ನು ಪಡೆಯಲು ಸಾಧ್ಯವಾಗಿಲ್ಲವೋ, ಅಂತಹ ಹಳೆಯ ಮತದಾರರನ್ನು ಹೊಸಬರಂತೆ ಪರಿಗಣಿಸಬಾರದು. ಅವರಿಗೆ ಫಾರಂ 6 ತುಂಬಲು ಒತ್ತಾಯಿಸದೆ, ತಮ್ಮ ಹಳೆಯ ಹೆಸರನ್ನು ಉಳಿಸಿಕೊಳ್ಳಲು ಅಥವಾ ತಿದ್ದುಪಡಿ ಮಾಡಲು ಬೇರೆ ಸೂಕ್ತ ಮಾರ್ಗವನ್ನು ಕಲ್ಪಿಸಿಕೊಡಬೇಕು.
ನ್ಯಾಯಮೂರ್ತಿ ಬಾಗ್ಚಿ ಅವರು, ಮತದಾರರ ಪಟ್ಟಿಯ ಪ್ರಕ್ರಿಯೆಯಲ್ಲಿ ಬಳಸಲಾಗುವ ಫಾರಂ 6, ಫಾರಂ 7 ಮತ್ತು ಫಾರಂ 8 ಗಳ ಸ್ವರೂಪಗಳು 'ಕಲ್ಲಿನಲ್ಲಿ ಕೆತ್ತಿದಂತೆ' (cast in stone) ಸ್ಥಿರವಾದವು, ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಈ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಮತದಾರರಿಂದ ಹೆಚ್ಚುವರಿ ಘೋಷಣೆಗಳನ್ನು (declarations) ಪಡೆಯುವ ಮೂಲಕ ಈ ಫಾರಂಗಳಿಗೆ ಹೊಸ ಅಂಶಗಳನ್ನು ಸೇರಿಸುವ ವಿಶೇಷ ಅಧಿಕಾರ (residual powers) ಚುನಾವಣಾ ಆಯೋಗಕ್ಕೆ ಇದೆ ಎಂದಿದ್ದಾರೆ. ಆದ್ದರಿಂದ, ಆಯಾ ಮತದಾರರು ತಮಗೆ ನೀಡಲಾಗಿದ್ದ ಗಣತಿ ನಮೂನೆಯನ್ನು (enumeration form) ಪಡೆಯಲು ಅಥವಾ ಅದಕ್ಕೆ ಪ್ರತಿಕ್ರಿಯಿಸಲು ಏಕೆ ಸಾಧ್ಯವಾಗಲಿಲ್ಲ ಎಂಬ ನೈಜ ಕಾರಣವನ್ನು ಕೇಳಿ ಅವರಿಂದ ಒಂದು ಪ್ರತ್ಯೇಕ ಘೋಷಣಾ ಪತ್ರವನ್ನು ಪಡೆದುಕೊಳ್ಳಬಹುದು ಎಂದು ನ್ಯಾಯಮೂರ್ತಿ ಬಾಗ್ಚಿ ಸಲಹೆ ನೀಡಿದ್ದಾರೆ.
ನ್ಯಾಯಮೂರ್ತಿ ಬಾಗ್ಚಿ ಅವರು, ಗಣತಿ ನಮೂನೆಯು ತಲುಪದ ಕಾರಣಕ್ಕಾಗಿ ಮತದಾರರು ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಎಂಬ ಅಂಶವನ್ನು ಪರಿಗಣಿಸಿ ಒಂದು ‘ಉಳಿಕೆ ವರ್ಗೀಕರಣ’ವನ್ನು (residual categorisation) ಮಾಡಬಹುದು ಎಂದು ಹೇಳಿದ್ದಾರೆ. ಅಲ್ಲದೆ, ತಾವು ಪ್ರತಿಕ್ರಿಯಿಸದೇ ಇರಲು ಕಾರಣವೇನು ಎಂಬುದನ್ನು ವಿವರಿಸುವ ಘೋಷಣಾ ಪತ್ರವನ್ನು (declaration) ಅವರಿಂದ ಪಡೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಮತದಾನದ ಹಕ್ಕು ಒಂದು ಅತ್ಯಗತ್ಯ ಹಕ್ಕು
ಮತದಾನದ ಹಕ್ಕು ಅತ್ಯಂತ “ಪ್ರಮುಖ ಹಕ್ಕು” (vital right) ಎಂಬುದನ್ನು ಒತ್ತಿಹೇಳಿದ ನ್ಯಾಯಮೂರ್ತಿ ಬಾಗ್ಚಿ ಅವರು, ಕೇವಲ ಗಣತಿ ನಮೂನೆಯನ್ನು ಭರ್ತಿ ಮಾಡಿಲ್ಲ ಎಂಬ ಕಾರಣಕ್ಕಾಗಿ ಒಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿರುವ ತನ್ನ ಹಕ್ಕನ್ನು ಕಳೆದುಕೊಳ್ಳಬೇಕೇ ಎಂದು ಪ್ರಶ್ನಿಸಿದ್ದಾರೆ.
“ಮತದಾನದ ಹಕ್ಕು ಅತ್ಯಂತ ಪ್ರಮುಖವಾದ ಹಕ್ಕಾಗಿದೆ. ನಿಮ್ಮ ಕೆಲಸವನ್ನು ನೀವು ಸೂಕ್ತ ಜಾಗರೂಕತೆಯಿಂದಲೇ ಮಾಡಿದ್ದೀರಿ. ಒಂದು ವೇಳೆ ಮತದಾರನ ಕಡೆಯಿಂದಲೇ ಲೋಪವಾಗಿದೆ ಎಂದೇ ಇಟ್ಟುಕೊಳ್ಳೋಣ. ಅವನು ಪ್ರತಿಕ್ರಿಯಿಸಲಿಲ್ಲ, ಹಾಗೆಂದ ಮಾತ್ರಕ್ಕೆ ಅದು ಅವನ ಹಕ್ಕನ್ನು ಶಾಶ್ವತವಾಗಿ ಕಸಿದುಕೊಳ್ಳಲು ಆಧಾರವಾಗುತ್ತದೆಯೇ? ನನಗೆ ಉತ್ತರ ಹೇಳಿ. ಒಬ್ಬ ಮತದಾರ ವಿವಿಧ ಕಾರಣಗಳಿಗಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಿರುವುದಿಲ್ಲ. ಆ ಮತದಾರ ಈಗ ಬಂದು ‘ದಯವಿಟ್ಟು ಈ ದಾಖಲೆಗಳನ್ನು ಸೇರಿಸಿಕೊಳ್ಳಿ’ ಎಂದು ಕೇಳುತ್ತಾನೆ. ಆಗ ನೀವು ‘ಫಾರಂ 6 ಸಲ್ಲಿಸಿ’ ಎನ್ನುತ್ತೀರಿ. ಅವನು ಫಾರಂ 6 ಅನ್ನು ಹೇಗೆ ತಾನೇ ಸಲ್ಲಿಸಲು ಸಾಧ್ಯ? ಇಲ್ಲಿ ಒಂದು ವ್ಯವಸ್ಥಿತವಾದ ಅಸಂಗತತೆ (structural incongruity) ಇದೆ, ಇದನ್ನು ಬಗೆಹರಿಸಬೇಕಾಗಿದೆ. ಒಂದು ವೇಳೆ ಅವನು ಗಣತಿ ನಮೂನೆಯನ್ನು ಭರ್ತಿ ಮಾಡದಿದ್ದರೂ ಮತ್ತು ಕರಡು ಪಟ್ಟಿ ಪ್ರಕಟವಾಗಿದ್ದರೂ ಸಹ, ಅವನು ನಿಜವಾಗಿ ಸ್ಥಳಾಂತರಗೊಂಡಿಲ್ಲ ಎಂದಾದರೆ… ಭಾರತೀಯ ಚುನಾವಣಾ ಆಯೋಗವಾಗಿ ನಿಮಗೆ ನಮ್ಮ ಪ್ರಶ್ನೆ ಏನೆಂದರೆ: ಆ ವ್ಯಕ್ತಿಯು ಮತದಾರರ ಪಟ್ಟಿಗೆ ಸೇರುವ ತನ್ನ ಹಕ್ಕನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾನೆ ಎಂದು ನೀವು ಹೇಳುತ್ತೀರಾ?” ಎಂದು ನ್ಯಾಯಮೂರ್ತಿಗಳು ಕೇಳಿದ್ದಾರೆ.
ಒಂದು ಮತಗಟ್ಟೆಯಿಂದ ಮತ್ತೊಂದಕ್ಕೆ ಸ್ಥಳಾಂತರಗೊಂಡಿರುವ ವ್ಯಕ್ತಿಗಳ ಸಮಸ್ಯೆಯನ್ನು ನಿವಾರಿಸಲು “ಉಳಿಕೆ ವರ್ಗ”ವನ್ನು (residual category) ರಚಿಸುವ ನ್ಯಾಯಾಲಯದ ಸಲಹೆಯನ್ನು ಪರಿಶೀಲಿಸಲಾಗುವುದು ಎಂದು ನಾಯ್ಡು ಉತ್ತರಿಸಿದ್ದಾರೆ.
ನ್ಯಾಯಮೂರ್ತಿ ಬಾಗ್ಚಿ ಅವರು ತಮ್ಮ ವೈಯಕ್ತಿಕ ಉದಾಹರಣೆಯನ್ನು ಉಲ್ಲೇಖಿಸುತ್ತಾ, ಜನಪ್ರತಿನಿಧಿ ಕಾಯ್ದೆಯ (Representation of the People Act) ಪ್ರಕಾರ, ತಾವು ಪ್ರಸ್ತುತ ತಮ್ಮ ಕ್ಷೇತ್ರದಲ್ಲಿ ಉಪಸ್ಥಿತರಿಲ್ಲದಿದ್ದರೂ ಸಹ, ಅಲ್ಲಿಂದ “ಸ್ಥಳಾಂತರಗೊಂಡಿದ್ದಾರೆ” ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಸ್ಥಳಾಂತರಗೊಂಡಿರುವ ವ್ಯಕ್ತಿಗಳ ಪ್ರಸ್ತುತ ವಿಳಾಸವು ಅವರ ಹಿಂದಿನ ವಿಳಾಸದಂತೆಯೇ ಇಲ್ಲ ಎಂಬ ಕಾರಣದ ಮೇಲೆ, ಅವರು ಗಣತಿ ನಮೂನೆಯನ್ನು ಭರ್ತಿ ಮಾಡದಂತೆ ತಡೆಯಲಾಗಿದೆ ಎಂದು ಭೂಷಣ್ ಆರೋಪಿಸಿದ್ದಾರೆ.
ಆ ವರ್ಗಗಳ ಜನರಿಗಾಗಿ ಚುನಾವಣಾ ಆಯೋಗವು ಹೊಸ ನಮೂನೆಯೊಂದನ್ನು ನೀಡಲು ಸಿದ್ಧವಿದ್ದು, ಅದನ್ನು “ಫಾರಂ 6” ಎಂದು ಕರೆಯುವುದಿಲ್ಲ ಎಂದು ನಾಯ್ಡು ತಿಳಿಸಿದ್ದಾರೆ. ದೇಶದ ಅರ್ಧದಷ್ಟು ಭಾಗವು ಈಗಾಗಲೇ ಇದೇ ಪ್ರಕ್ರಿಯೆಯ ಮೂಲಕ ಹಾದುಹೋಗಿದ್ದರೂ (ಅಂದರೆ ಕೈಬಿಡಲಾದ ಮತದಾರರು ಫಾರಂ 6 ಸಲ್ಲಿಸಬೇಕಾದ ಪ್ರಕ್ರಿಯೆ), ಇದುವರೆಗೆ ಯಾರೊಬ್ಬರ ಮೇಲೂ ಯಾವುದೇ ರೀತಿಯ ಕಾನೂನು ಕ್ರಮ (prosecution) ಜರುಗಿಸಿಲ್ಲ ಎಂಬುದನ್ನು ಅವರು ಒತ್ತಿಹೇಳಿದ್ದಾರೆ. “ನಾವು ಅವರನ್ನು ಮೊದಲ ಬಾರಿಯ ಮತದಾರರು ಎಂದು ಕರೆಯುತ್ತಿರುವುದಕ್ಕೆ ಕಾರಣ, ಇದು ಒಂದು ಹೊಸ ಆರಂಭ (clean slate) ಎಂಬ ಉದ್ದೇಶದಿಂದ. ಕರಡು ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಆದ್ದರಿಂದ ಈ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ಮಟ್ಟಿಗೆ ಅವರು ಮೊದಲ ಬಾರಿಯ ಮತದಾರರಾಗುತ್ತಾರೆ” ಎಂದು ನಾಯ್ಡು ಪ್ರತಿಪಾದಿಸಿದ್ದಾರೆ.
ದೆಹಲಿಯಲ್ಲಿ ಸದ್ಯಕ್ಕೆ ಯಾವುದೇ ಚುನಾವಣೆಗಳು ನಡೆಯುತ್ತಿಲ್ಲವಾದ್ದರಿಂದ, ಈ ಇಡೀ ಪ್ರಕ್ರಿಯೆಯನ್ನು ಆತುರಾತುರವಾಗಿ ಮುಗಿಸದಂತೆ ಮುಖ್ಯ ನ್ಯಾಯಮೂರ್ತಿ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದಾರೆ.
“ಫಾರಂ 6 ರ ಬದಲಿಗೆ ಅವರಿಗೆ ಗಣತಿ ನಮೂನೆಯನ್ನೇ ಸಲ್ಲಿಸಲು ನೀವು ಏಕೆ ಅನುಮತಿ ನೀಡಬಾರದು?” ಎಂದು ನ್ಯಾಯಮೂರ್ತಿ ಬಾಗ್ಚಿ ಪ್ರಶ್ನಿಸಿದ್ದಾರೆ. ಗಣತಿ ನಮೂನೆಗಳನ್ನು ಸಲ್ಲಿಸುವ ಗಡುವನ್ನು ಸಹ ವಿಸ್ತರಿಸಬಹುದು” ಎಂದು ಮುಖ್ಯ ನ್ಯಾಯಮೂರ್ತಿ ಸಲಹೆ ನೀಡಿದ್ದಾರೆ.
ಈ ಸಲಹೆಗಳ ಕುರಿತು ಚುನಾವಣಾ ಆಯೋಗ ಚರ್ಚಿಸಲಿದೆ ಎಂದು ನಾಯ್ಡು ತಿಳಿಸಿದ್ದಾರೆ.
“ವಿಷಯವೇನೆಂದರೆ—ನಿಮ್ಮ ಅಂತಿಮ ಮತದಾರರ ಪಟ್ಟಿ ಸಿದ್ಧವಾಗುವವರೆಗೆ ಫಾರಂ 6 ಏಕೆ ಬೇಕು? ಅವರು ಗಣತಿ ನಮೂನೆಯನ್ನೇ ಸಲ್ಲಿಸಬಹುದು. ಸ್ಥಳಾಂತರಗೊಂಡವರು, ಮರಣ ಹೊಂದಿದವರು, ಪಟ್ಟಿಯಿಂದ ಕೈಬಿಡಲ್ಪಟ್ಟವರು ಅಥವಾ ಇತರ ಯಾವುದೇ ಕಾರಣಗಳಿದ್ದರೂ ಸಹ ಅವರು ಗಣತಿ ನಮೂನೆಯನ್ನು ಸಲ್ಲಿಸಲು ಅವಕಾಶ ನೀಡಬಹುದು” ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ, ಪಟ್ಟಿಯಿಂದ ಕೈಬಿಡಲಾದ ವ್ಯಕ್ತಿಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಬೇಕು ಮತ್ತು ಆ ವ್ಯಕ್ತಿಗಳು ತಮ್ಮ ಹತ್ತಿರದ ಬೂತ್ ಮಟ್ಟದ ಅಧಿಕಾರಿಯನ್ನು (ಬಿಎಲ್ಒ) ಸಂಪರ್ಕಿಸಿ ‘ಫಾರಂ 8’ ಅನ್ನು ಸಲ್ಲಿಸುವಂತೆ ಸೂಚಿಸಬೇಕು ಎಂದು ಪ್ರಸ್ತಾಪಿಸಿದ್ದಾರೆ.
“ನಾವು ಎರಡು ವಾರಗಳ ನಂತರ ಈ ವಿಷಯವನ್ನು ಮತ್ತೆ ಕೈಗೆತ್ತಿಕೊಳ್ಳುತ್ತೇವೆ. ಆ 43 ಲಕ್ಷ ಜನರ ವ್ಯತ್ಯಾಸವನ್ನು ಹೇಗೆ ಕಡಿಮೆ ಮಾಡಬೇಕು ಎಂಬುದೇ ನಮ್ಮ ಪ್ರಯತ್ನವಾಗಬೇಕು. ಇದಕ್ಕೆ ಒಂದು ಸಲಹೆ ಏನೆಂದರೆ—ಈ ಹಿಂದೆ ಇಂತಿಂತಹ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ 43 ಲಕ್ಷ ವ್ಯಕ್ತಿಗಳು ನೀವೇ ಆಗಿದ್ದೀರಿ, ನಮ್ಮಿಂದ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ, ಆದ್ದರಿಂದ ದಯವಿಟ್ಟು ನೀವೇ ನಮ್ಮನ್ನು ಸಂಪರ್ಕಿಸಿ ಎಂದು ತಿಳಿಸುವ ಪಟ್ಟಿಯೊಂದನ್ನು ಪ್ರಕಟಿಸುವುದನ್ನು ಖಚಿತಪಡಿಸಿಕೊಳ್ಳಿ. ಅವರು ತಮ್ಮ ಹತ್ತಿರದ ಬಿಎಲ್ಒ ಅವರನ್ನು ಸಂಪರ್ಕಿಸಿ ಫಾರಂ 8 ಅನ್ನು ಭರ್ತಿ ಮಾಡುವಂತೆ ಸೂಚಿಸಿ” ಎಂದು ನ್ಯಾಯಾಲಯ ಹೇಳಿದೆ.
“ಈಗ ಎನ್ಯುಮರೇಷನ್ ನಮೂನೆಗಳೇ ಸಾಕಾಗುತ್ತವೆ. ಅಂತಿಮ ಪಟ್ಟಿ ಸಿದ್ಧವಾದ ನಂತರ, ನೀವು ಹೇಳಿದ್ದು ಸರಿ [ನಮೂನೆ 6 ಅನ್ನು ಸಲ್ಲಿಸಬೇಕಾಗುತ್ತದೆ]” ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದ್ದಾರೆ.
“ನಮೂನೆ 6 ಮತ್ತು 8 ಅನ್ನು ಇನ್ನೂ ಸಲ್ಲಿಸಬಹುದು ಎಂದು ತಿಳಿಸಿ. ಜನರನ್ನು ಮನವೊಲಿಸುವ ಕೆಲಸವನ್ನು ಮುಂದುವರಿಸಿ” ಎಂದು ಸಿಜೆಐ ಸಲಹೆ ನೀಡಿದ್ದಾರೆ.
ಈ ವಿಷಯವನ್ನು ಎರಡು ವಾರಗಳ ನಂತರ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
Courtesy :livlaw.in


