ಭಾರತೀಯ ಚುನಾವಣಾ ಆಯೋಗ (ಇಸಿಐ) ಸೋಮವಾರ (ಅ.26) ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ ಕುರಿತು ವಿವರಿಸುವ ತನ್ನ ರೀಲ್ ಅನ್ನು ಇನ್ಸ್ಟಾಗ್ರಾಂ ತೆಗೆದುಹಾಕಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಲೈವ್ ಲಾ (Livelaw.in) ಹೇಳಿಕೊಂಡಿದೆ.
ರೀಲ್ ತೆಗೆದು ಹಾಕಿರುವ ಬಗ್ಗೆ ಎಕ್ಸ್ ಖಾತೆಯಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಲೈವ್ ಲಾ, “ಚುನಾವಣಾ ಆಯೋಗದ ವಾದದ ಕುರಿತು ವಿವರಿಸುವ ರೀಲ್ ಅನ್ನು ಇನ್ಸ್ಟಾಗ್ರಾಮ್ ತೆಗೆದುಹಾಕಿದೆ, ರೀಲ್ ನಿರ್ಬಂಧಿಸಲು ಅಥವಾ ತೆಗೆದುಹಾಕಲು ನಾವು ಕಾನೂನು ವಿನಂತಿಯನ್ನು ಸ್ವೀಕರಿಸಿದ್ದೇವೆ ಎಂಬುವುದಾಗಿ ಅದು ಹೇಳಿದೆ” ಎಂದು ಬರೆದುಕೊಂಡಿದೆ.
ಲೈವ್ ಲಾ ರೀಲ್ ತೆಗೆದು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ, “ಮೋದಿ ಸರ್ಕಾರವು ಇನ್ಸ್ಟಾಗ್ರಾಮ್ಗೆ ಸಾಮೂಹಿಕವಾಗಿ ಖಾತೆಗಳನ್ನು ಅಮಾನತುಗೊಳಿಸುವಂತೆ ಆದೇಶಗಳನ್ನು ನೀಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಅವರು ಪ್ರತ್ಯೇಕ ಪೋಸ್ಟ್ಗಳನ್ನು ಪರಿಶೀಲಿಸುವ ಗೋಜಿಗೇ ಹೋಗುತ್ತಿಲ್ಲ; ಬದಲಾಗಿ, ಯಾವುದೇ ವಿವೇಚನೆಯಿಲ್ಲದೆ ಎಲ್ಲೆಡೆ ಪೋಸ್ಟ್ಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಬಂಧಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಇಸಿಐ ಅಫಿಡವಿಟ್ ಕುರಿತ ಯಾವುದೇ ವ್ಯಾಖ್ಯಾನ ಅಥವಾ ವೈಯಕ್ತಿಕ ಅಭಿಪ್ರಾಯವಿಲ್ಲದ ವಿವರಣಾತ್ಮಕ ವಿಡಿಯೋ (Explainer video) ಒಂದನ್ನು, ‘ಕಾನೂನು ವಿನಂತಿ’ಯ ಮೇರೆಗೆ ಇನ್ಸ್ಟಾಗ್ರಾಮ್ ತನ್ನ ಪ್ಲಾಟ್ಫಾರ್ಮ್ನಿಂದ ತೆಗೆದುಹಾಕಿದೆ!!! ಮೆಟಾ ಸಂಸ್ಥೆಯೇ, ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ದಯವಿಟ್ಟು ಸ್ಪಷ್ಟಪಡಿಸಿ” ಎಂದು ಲೈವ್ ಲಾ ಮ್ಯಾನೇಜಿಂಗ್ ಎಡಿಟರ್ ಮನು ಸೆಬಾಸ್ಟಿಯನ್ ಬರೆದುಕೊಂಡಿದ್ದಾರೆ.
ಚುನಾವಣಾ ಆಯೋಗ ನಿರ್ಧಾರಗಳ ಕುರಿತು ಪ್ರಶ್ನೆಗಳನ್ನು ಎತ್ತಿ ಸಾಮಾಜಿಕ ಕಾರ್ಯಕರ್ತ ರಾಕೇಶ್ ಕುಮಾರ್ ಸಿಂಗ್ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಸೋಮವಾರ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
ಈ ಅಫಿಡವಿಟ್ನಲ್ಲಿ ಚುನಾವಣಾ ಆಯೋಗದ ನಿರ್ಧಾರಗಳನ್ನು ಮೂವರು ಆಯುಕ್ತರ ಒಮ್ಮತದ ತೀರ್ಮಾನದಿಂದ ಕೈಗೊಳ್ಳಲಾಗಿದೆ. ಫಾರಂ-6ರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂಬಿತ್ಯಾದಿ ಸಮರ್ಥನೆಗಳನ್ನು ಆಯೋಗ ಮಾಡಿದೆ. ಅರ್ಜಿದಾರರ ಆರೋಪಗಳನ್ನು ತಳ್ಳಿಹಾಕಿದೆ.


