ಸುಪ್ರೀಂ ಕೋರ್ಟ್ಗೆ ಸುಳ್ಳು ಹೇಳಿದ್ದಕ್ಕೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಕೈಗೊಂಡ ಎಲ್ಲಾ ನಿರ್ಧಾರಗಳಿಗೆ ಸಂಪೂರ್ಣ ಆಯೋಗದ ಅನುಮೋದನೆ ಇತ್ತು ಎಂದು ಚುನಾವಣಾ ಆಯೋಗವು (ಇಸಿ) ಸುಪ್ರೀಂ ಕೋರ್ಟ್ಗೆ ಸುಳ್ಳು ಅಫಿಡವಿಟ್ ಸಲ್ಲಿಸಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
“ಅಫಿಡವಿಟ್ನಲ್ಲಿ ಹೇಳಿರುವುದು ಸಂಪೂರ್ಣ ಸುಳ್ಳು; ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಬಹಿರಂಗಪಡಿಸಿದಂತೆ, ಇತರ ಚುನಾವಣಾ ಆಯುಕ್ತರ ಭಿನ್ನಾಭಿಪ್ರಾಯದ ಟಿಪ್ಪಣಿಗಳು ಮತ್ತು ಅವರು ಕ್ಯಾಬಿನೆಟ್ ಕಾರ್ಯದರ್ಶಿಗೆ ಸಲ್ಲಿಸಿದ ದೂರುಗಳು ಇದನ್ನು ಸಾಬೀತುಪಡಿಸುತ್ತವೆ” ಎಂದಿದ್ದಾರೆ.
ಎಲ್ಲಾ ನಿರ್ಧಾರಗಳನ್ನು ಮುಖ್ಯ ಆಯುಕ್ತರು ಸೇರಿದಂತೆ ಮೂವರು ಚುನಾವಣಾ ಆಯುಕ್ತರ ಒಮ್ಮತದ ತೀರ್ಮಾನದಿಂದ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಸೋಮವಾರ (ಅ.26) ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಹೇಳಿದೆ.
ಚುನಾವಣಾ ಆಯೋಗದ ನಿರ್ಧಾರಗಳ ಕುರಿತು ಪ್ರಶ್ನೆಗಳನ್ನು ಎತ್ತಿ ಸಾಮಾಜಿಕ ಕಾರ್ಯಕರ್ತ ರಾಕೇಶ್ ಕುಮಾರ್ ಸಿಂಗ್ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಚುನಾವಣಾ ಆಯೋಗ ಈ ಅಫಿಡವಿಟ್ ಸಲ್ಲಿಸಿದೆ.
“ಚುನಾವಣಾ ಆಯುಕ್ತರು ವ್ಯಕ್ತಪಡಿಸುವ ಅವಲೋಕನಗಳು, ಸಲಹೆಗಳು ಮತ್ತು ಪ್ರಶ್ನೆಗಳು ಕೇವಲ ಅವರ ವೈಯಕ್ತಿಕ ಅಭಿಪ್ರಾಯಗಳೇ ಹೊರತು, ಅವು ಆಯೋಗದ ಅಂತಿಮ ನಿರ್ಧಾರಗಳಲ್ಲ ಎಂದು ಚುನಾವಣಾ ಆಯೋಗ ತನ್ನ ಅಫಿಡವಿಟ್ನಲ್ಲಿ ಹೇಳಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಕಾನೂನುಬದ್ಧವಾಗಿದೆ ಎಂದು ಸಮರ್ಥಿಸಿಕೊಂಡಿರುವ ಆಯೋಗವು, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿದಾರರ ಆರೋಪಗಳು ತಪ್ಪು ತಿಳುವಳಿಕೆಯಿಂದ ಕೂಡಿವೆ ಎಂದು ಹೇಳಿದೆ.
ಆದರೆ, ಕಳೆದ 10 ತಿಂಗಳುಗಳಲ್ಲಿ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತಮಗೆ ಮುಂಚಿತವಾಗಿ ಮಾಹಿತಿ ನೀಡದೆ ಆಯೋಗದ ಹೆಸರಿನಲ್ಲಿ ಕೈಗೊಳ್ಳಲಾದ ನಿರ್ಧಾರಗಳ ಬಗ್ಗೆ 14 ಬಾರಿ ಆಕ್ಷೇಪಣಾ ಟಿಪ್ಪಣಿಗಳನ್ನು ದಾಖಲಿಸಿದ್ದರು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಇತ್ತೀಚೆಗೆ ವರದಿ ಮಾಡಿತ್ತು.


