‘ನುಸುಳುಕೋರರನ್ನು’ ಪತ್ತೆ ಹಚ್ಚುವುದು ಅಥವಾ ‘ವಿದೇಶಿ ಅಕ್ರಮ ವಲಸಿಗರನ್ನು’ ಪತ್ತೆ ಹಚ್ಚುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿತ್ತು. ಹಲವು ಸರ್ಕಾರಿ ಪ್ರತಿನಿಧಿಗಳು ಮತ್ತು ಬಿಜೆಪಿ ನಾಯಕರು ಕೂಡ ವಿವಾದಾತ್ಮಕ ಎಸ್‌ಐಆರ್ ಅನ್ನು ಬೆಂಬಲಿಸುವಾಗ ಇದೇ ವಾದವನ್ನು ಮುಂದಿಡುತ್ತಾ ಬಂದಿದ್ದರು. ಆದರೆ, ಹಿಂದೂಸ್ತಾನ್ ಟೈಮ್ಸ್‌ನ ಹಿಮಾಂಶಿ ದಹಿಯಾ ಅವರ ವರದಿಯಲ್ಲಿ ಮಹತ್ವದ ವಿಷಯವನ್ನು ಹೇಳಲಾಗಿದೆ. ವರದಿಯ ಪ್ರಕಾರ, ಸುಮಾರು 9.86 ಕೋಟಿ ಮತದಾರರನ್ನು ಹೊಂದಿರುವ ಆರು ರಾಜ್ಯಗಳಲ್ಲಿ ಎಸ್‌ಐಆರ್ ಮೂಲಕ ಕೇವಲ 1,600 ಹೆಸರುಗಳನ್ನು ಮಾತ್ರ ವಿದೇಶಿಗರೆಂದು ಗುರುತಿಸಲಾಗಿದೆ.
ಬಿಜೆಪಿಯು ತನ್ನ “ಪತ್ತೆಹಚ್ಚುವುದು, ತೆಗೆದುಹಾಕುವುದು ಮತ್ತು ಹೊರಹಾಕುವುದು” (detect, delete, and deport) ನೀತಿಯ ಭಾಗವಾಗಿ ಎಸ್‌ಐಆರ್ ಅನ್ನು ಜಾರಿಗೆ ತರಲು ಬಾರೀ ಉತ್ಸುಕತೆ ತೋರಿಸಿತ್ತು. ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2025ರಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರದ ಎಸ್‌ಐಆರ್‌ನಲ್ಲಿ ಕೇವಲ ‘ಒಳನುಸುಳುಕೋರರನ್ನು’ ಮಾತ್ರವೇ ಹೊರಹಾಕಲಾಗಿದೆ ಎಂದು ಹೇಳಿದ್ದರು.
“ಅವರು (ಮತದಾರರ ಪಟ್ಟಿಯಿಂದ ತೆಗೆದು ಹಾಕಲ್ಪಟ್ಟವರು) ಭಾರತೀಯ ನಾಗರಿಕರಾಗಿದ್ದರೆ, ಅದಕ್ಕೆ ಪುರಾವೆಗಳನ್ನು ನೀಡುತ್ತಿದ್ದರು. ನಿಮಗಾಗಲಿ ಅಥವಾ ನನಗಾಗಲಿ ಯಾವುದೇ ತೊಂದರೆ ಇಲ್ಲ. ನಮ್ಮಿಂದ ಏನನ್ನು ಕೇಳಲಾಗುತ್ತದೆಯೋ, ಆ ದಾಖಲೆಗಳನ್ನು ನಾವು ಒದಗಿಸುತ್ತೇವೆ. ತೆಗೆದು ಹಾಕಿದವರ ಪೈಕಿ ಕೇವಲ ಮೂರು ಮೇಲ್ಮನವಿಗಳು ಮಾತ್ರ ಬಂದಿವೆ. ಒಂದು ವೇಳೆ ಏನಾದರೂ ತಪ್ಪಾಗಿದ್ದರೆ, ಮೇಲ್ಮನವಿಗಳು ಸಲ್ಲಿಕೆಯಾಗುತ್ತಿರಲಿಲ್ಲವೇ? ಇದರರ್ಥ, ಯಾರ ಹೆಸರುಗಳನ್ನು ತೆಗೆದು ಹಾಕಲಾಗಿದೆಯೋ ಅವರು ಭಾರತೀಯ ನಾಗರಿಕರಲ್ಲ. ಅಂತಹವರ ಹೆಸರುಗಳನ್ನು ಮಾತ್ರ ತೆಗೆದುಹಾಕಲಾಗಿದೆ” ಎಂದು ಶಾ ಹೇಳಿದ್ದರು.
‘ಹಿಂದೂಸ್ತಾನ್ ಟೈಮ್ಸ್’ ವರದಿಯು ಗಮನಿಸಿರುವಂತೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಸಂಖ್ಯೆ ಹಾಗೂ ಕೈಬಿಡಲಾದ ಹೆಸರುಗಳ ಪ್ರಮಾಣಕ್ಕೆ ಹೋಲಿಸಿದರೆ, ಇಲ್ಲಿಯವರೆಗೆ ಪತ್ತೆಯಾದ ವಿದೇಶಿ ಪ್ರಜೆಗಳೆಂದು ಶಂಕಿಸಲಾದ ವ್ಯಕ್ತಿಗಳ ಸಂಖ್ಯೆ ಅತ್ಯಲ್ಪವಾಗಿದೆ. ಎಸ್‌ಐಆರ್‌ನಲ್ಲಿ 13 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದು, ವಿರೋಧ ಪಕ್ಷಗಳು ಮತ್ತು ಯುವಜನರು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ಅಥವಾ ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿರುವ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳ (ಸಿಇಒ) ಕಚೇರಿಗಳನ್ನು ಹಿಂದೂಸ್ತಾನ್ ಟೈಮ್ಸ್ ಸಂಪರ್ಕಿಸಿತ್ತು. ಇದರಲ್ಲಿ 11 ರಾಜ್ಯಗಳ ಅಧಿಕಾರಿಗಳು ಪತ್ರಿಕೆಗೆ ಪ್ರತಿಕ್ರಿಯ ನೀಡಿದ್ದಾರಾದರೂ, ಕೇವಲ ಆರು ಅಧಿಕಾರಿಗಳು ಮಾತ್ರ ವರದಿಗಾರ ಹಿಮಾಂಶಿ ದಹಿಯಾ ಅವರಿಗೆ ಶಂಕಿತ ವಿದೇಶಿಗರ ನಿಖರ ಸಂಖ್ಯೆಯನ್ನು ಒದಗಿಸಿದ್ದಾರೆ. ವಿಶೇಷವೆಂದರೆ, ತಾವು ಈ ರೀತಿಯ ಯಾವುದೇ ಡೇಟಾ ನಿರ್ವಹಿಸುತ್ತಿಲ್ಲ ಎಂದು ನಾಲ್ಕು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ತಿಳಿಸಿವೆ. ಅವುಗಳಲ್ಲಿ ಒಡಿಶಾ ಕೂಡ ಒಂದಾಗಿದೆ. ಈ ಕುರಿತು ಒಡಿಶಾದ ರಾಜ್ಯ ಅಧಿಕಾರಿಯೊಬ್ಬರು, “ಮತದಾರರ ಪಟ್ಟಿಯಲ್ಲಿ ನಾವು ಶಂಕಿತ ವಿದೇಶಿ ನಾಗರಿಕರನ್ನು ಪತ್ತೆಹಚ್ಚಿರುವುದು ನಿಜ, ಆದರೆ ನಾವು ಅದರ ಯಾವುದೇ ಅಂಕಿ-ಅಂಶಗಳನ್ನು ದಾಖಲಿಸಿಟ್ಟುಕೊಂಡಿಲ್ಲ” ಎಂದು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿಯಲ್ಲಿ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನೂ ಉಲ್ಲೇಖಿಸಲಾಗಿದ್ದು, “ಈ ಡೇಟಾವನ್ನು ಪ್ರತ್ಯೇಕವಾಗಿ ಸಂಗ್ರಹಿಸುವಂತೆ ರಾಜ್ಯಗಳಿಗೆ ಸೂಚಿಸಿರಲಿಲ್ಲ” ಎಂದು ಅವರು ತಿಳಿಸಿದ್ದಾರೆ. ಮುಂದುವರಿದು ಮಾತನಾಡಿದ ಅಧಿಕಾರಿ, “ನಮ್ಮ ಬಳಿಯೂ ಇದಕ್ಕೆ ಸಂಬಂಧಿಸಿದ ಒಟ್ಟಾರೆ ಅಥವಾ ರಾಜ್ಯವಾರು ದತ್ತಾಂಶ ಲಭ್ಯವಿಲ್ಲ. ಇಂತಹ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ, ಅವುಗಳನ್ನು ಎಎಸ್‌ಡಿಡಿಒನ ‘ಇತರರು’ ವರ್ಗದ ಅಡಿಯಲ್ಲಿ ಸೇರಿಸಲಾಗಿದೆ. ಆದರೆ ಈ ವಿವರಗಳನ್ನು ಒದಗಿಸುವಂತೆ ಭಾರತೀಯ ಚುನಾವಣಾ ಆಯೋಗವು (ಇಸಿಐ) ಅವರಿಗೆ ಕೇಳಿಲ್ಲ” ಎಂದು ಹೇಳಿದ್ದಾರೆ.
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಯ (ಸಿಇಒ) ಕಚೇರಿಯು 716 ವಿದೇಶಿ ಪ್ರಜೆಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಗುರುತಿಸಲಾಗಿದ್ದು, ಇದರಲ್ಲಿ ಬೆಂಗಳೂರು ಉತ್ತರ ಭಾಗದ 545 ನೇಪಾಳಿ ನಾಗರಿಕರು ಸೇರಿದ್ದಾರೆ ಎಂದು ತಿಳಿಸಿದೆ
ಮತದಾರರ ಗಣತಿ ನಮೂನೆಗಳನ್ನು (enumeration forms) ಹಂಚಲು ಪ್ರಾರಂಭಿಸುವ ಕೆಲವೇ ದಿನಗಳ ಮುನ್ನ ಇದ್ದ 5.54 ಕೋಟಿ ಮತದಾರರ ಪೈಕಿ, ಪ್ರಸ್ತುತ ರಾಜ್ಯದ ಮತದಾರರ ಪಟ್ಟಿಯಲ್ಲಿ ಈಗ 99.77 ಲಕ್ಷದಷ್ಟು ಹೆಸರುಗಳು ಕಡಿಮೆಯಾಗಿವೆ.
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್ ಅವರು ತಮ್ಮ ಕಚೇರಿಯು ‘ವಿದೇಶಿಗರನ್ನು ಪತ್ತೆಹಚ್ಚಿದೆ’ ಮತ್ತು ‘ಅವರ ಸಂಖ್ಯೆ ಖಂಡಿತವಾಗಿಯೂ 1000ಕ್ಕಿಂತ ಕಡಿಮೆಯಿದೆ” ಎಂಬುವುದಾಗಿ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40 ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ ನೇಪಾಳದ 17 ಮಂದಿ, ಆಸ್ಟ್ರೇಲಿಯಾ ಮತ್ತು ಅಮೆರಿಕದ ತಲಾ ಆರು ಮಂದಿ, ಕೆನಡಾದ ಐವರು, ಬ್ರಿಟನ್‌ನ ಇಬ್ಬರು ಹಾಗೂ ನೆದರ್‌ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ನಾರ್ವೆಯ ತಲಾ ಒಬ್ಬರು ಸೇರಿದ್ದಾರೆ.
ಜಿಲ್ಲಾ ಅಧಿಕಾರಿಗಳ ಮಾಹಿತಿ ಪ್ರಕಾರ, ಉತ್ತರ ಕನ್ನಡದಲ್ಲಿ ನೇಪಾಳ, ಪಾಕಿಸ್ತಾನ, ಅಮೆರಿಕ ಮತ್ತು ಬಾಂಗ್ಲಾದೇಶದ ನಾಗರಿಕರು ಸೇರಿದಂತೆ 22 ವಿದೇಶಿಗರನ್ನು ಪತ್ತೆಹಚ್ಚಲಾಗಿದೆ. ಉಡುಪಿಯಲ್ಲಿ ನೇಪಾಳ, ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ವಿವಿಧ ದೇಶಗಳ 47 ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಟಿ.ಕೆ. ಸ್ವರೂಪ ಪತ್ರಕರ್ತರಿಗೆ ತಿಳಿಸಿದ್ದಾರೆ ಎಂದಿದೆ.
ಹಿಂದೂಸ್ತಾನ್ ಟೈಮ್ಸ್ ವರದಿಯು ವಿದೇಶಿ ನಾಗರಿಕರನ್ನು ದಾಖಲಿಸಿದ ರಾಜ್ಯಗಳ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
ಉತ್ತರಾಖಂಡದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಬಿ.ವಿ.ಆರ್.ಸಿ. ಪುರುಷೋತ್ತಮ್ ಅವರು ಇದು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. “ನಾವು ಈ ಡೇಟಾ ಹೇಗೆ ತಾನೇ ಸಂಗ್ರಹಿಸಲು ಸಾಧ್ಯ? ಇದು ಚುನಾವಣಾ ಅಧಿಕಾರಿಗಳ ವ್ಯಾಪ್ತಿಯನ್ನು ಮೀರಿದ್ದಾಗಿದೆ” ಎಂದು ಅವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
Courtesy : hindustantimes.com and thewire.in


