HomeಅಂಕಣಗಳುKarnataka SIRಕರ್ನಾಟಕ ಎಸ್‌ಐಆರ್: 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್; 2028ಕ್ಕೆ ಯಾರಿಗೆ ಅಧಿಕಾರ?

ಕರ್ನಾಟಕ ಎಸ್‌ಐಆರ್: 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್; 2028ಕ್ಕೆ ಯಾರಿಗೆ ಅಧಿಕಾರ?

ಕಾಂಗ್ರೆಸ್‌ – 115, ಬಿಜೆಪಿ – 58 ಹಾಗೂ ಜೆಡಿಎಸ್‌ – 19 ಕ್ಷೇತ್ರಗಳಲ್ಲಿ ಭಾರೀ ವ್ಯತ್ಯಾಸ

- Advertisement -
- Advertisement -

ಜನಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ವಿರೋಧ, ಆತಂಕ ಹಾಗೂ ಆರೋಪಗಳ ಹೊರತಾಗಿಯೂ ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದಿದೆ. 2026ರ ಅಕ್ಟೋಬರ್ 27ರಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಅಂತಿಮ ಮತದಾರರ ಪಟ್ಟಿಯಲ್ಲಿ 4.55 ಕೋಟಿ ಮತದಾರರು ಉಳಿದುಕೊಂಡಿದ್ದಾರೆ. ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ಡಿಲೀಟ್ ಮಾಡಿರುವುದು 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಬಗ್ಗೆ ಈಗಾಗಲೇ ‘ನಾನುಗೌರಿ.ಕಾಮ್’ನಲ್ಲಿ ವಿಶ್ಲೇಷಣೆ ಮಾಡಲಾಗಿತ್ತು. ಕಾಂಗ್ರೆಸ್‌ ಕಡಿಮೆ ಅಂತರದಲ್ಲಿ ಗೆದ್ದಿರುವ ಸುಮಾರು 97 ಕ್ಷೇತ್ರಗಳನ್ನು ಪಟ್ಟಿ ಮಾಡಿ, ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಆಗಬಹುದಾದ ನಷ್ಟದ ಬಗ್ಗೆ ಅಂದಾಜಿಸಲಾಗಿತ್ತು.

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಎಸ್‌ಐಆರ್ ಆರಂಭದಿಂದ ಅಂತ್ಯದವರೆಗೆ

ಇದೀಗ, ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದೆ. 2026ರ ಅಕ್ಟೋಬರ್ 27ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ 4,55,00,011 ಮತದಾರರು ಉಳಿದಿದ್ದಾರೆ. ಪರಿಷ್ಕರಣೆ ಆರಂಭಕ್ಕೂ ಮುನ್ನ ಇದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ, ಅಂತಿಮ ಪಟ್ಟಿಯಲ್ಲಿ 99,32,303 ಮತದಾರರನ್ನು ಡಿಲೀಟ್ ಮಾಡಲಾಗಿದೆ.

2026ರ ಜೂನ್ 30ರಂದು ಆರಂಭವಾದ ಈ ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರ ಮಾಹಿತಿಯನ್ನು ಪರಿಶೀಲಿಸಿ, ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲಾಗಿತ್ತು. ಆ ಪಟ್ಟಿಯಲ್ಲಿ 4,46,35,975 ಮತದಾರರಿದ್ದರು. ಇದಕ್ಕೂ ಮುನ್ನ ಇದ್ದ ಪಟ್ಟಿಯಲ್ಲಿನ 5,54,32,314 ಮತದಾರರಿಗೆ ಹೋಲಿಸಿದರೆ, ಕರಡು ಪಟ್ಟಿಯಲ್ಲಿ 1,07,96,339 ಹೆಸರುಗಳನ್ನು ಕೈಬಿಡಲಾಗಿತ್ತು.

ಕರಡು ಪಟ್ಟಿ ಪ್ರಕಟವಾದ ಬಳಿಕ ಮತದಾರರಿಗೆ ತಮ್ಮ ಹೆಸರುಗಳನ್ನು ಪರಿಶೀಲಿಸಲು, ಆಕ್ಷೇಪಣೆ ಸಲ್ಲಿಸಲು ಹಾಗೂ ಅರ್ಹ ಮತದಾರರು ತಮ್ಮ ಹೆಸರುಗಳನ್ನು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಹೊಸದಾಗಿ 10,08,038 ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದ್ದು, 1,88,324 ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬದಲಾವಣೆಗಳ ಬಳಿಕ ಅಂತಿಮ ಪಟ್ಟಿಯಲ್ಲಿನ ಒಟ್ಟು ಮತದಾರರ ಸಂಖ್ಯೆ 4.55 ಕೋಟಿಗೆ ಇಳಿದಿದೆ.

ಕರಡು ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಹಲವು ಕಾರಣಗಳನ್ನು ಗುರುತಿಸಲಾಗಿತ್ತು. ಶಾಶ್ವತವಾಗಿ ಸ್ಥಳಾಂತರಗೊಂಡವರು, ಪರಿಶೀಲನೆ ಸಂದರ್ಭದಲ್ಲಿ ಪತ್ತೆಯಾಗದವರು ಅಥವಾ ಗೈರುಹಾಜರಾಗಿದ್ದವರು, ಮೃತಪಟ್ಟವರು ಹಾಗೂ ಪುನರಾವರ್ತಿತ ಅಥವಾ ನಕಲಿ ನಮೂದುಗಳು ಪ್ರಮುಖ ವರ್ಗಗಳಾಗಿದ್ದವು.

ವರದಿಗಳ ಪ್ರಕಾರ, ಸುಮಾರು 65.46 ಲಕ್ಷ ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರ ವರ್ಗದಲ್ಲಿ ಗುರುತಿಸಲಾಗಿತ್ತು. ಸುಮಾರು 19 ಲಕ್ಷ ಹೆಸರುಗಳು ಪತ್ತೆಯಾಗದವರು ಅಥವಾ ಗೈರುಹಾಜರಾಗಿದ್ದವರ ವರ್ಗದಲ್ಲಿದ್ದವು. ಮೃತಪಟ್ಟ ಮತದಾರರ ಸಂಖ್ಯೆ ಸುಮಾರು 16.4 ಲಕ್ಷವಾಗಿದ್ದು, ನಕಲಿ ಅಥವಾ ಪುನರಾವರ್ತಿತ ನಮೂದುಗಳ ಸಂಖ್ಯೆ ಸುಮಾರು 7.1 ಲಕ್ಷ ಎಂದು ವರದಿಯಾಗಿದೆ.

2028ರ ಚುನಾವಣೆಯ ಮೇಲೆ ಬೀರುವ ಪರಿಣಾಮವೇನು?

2028ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಗೆದ್ದ ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು, ಅಂತಹ ಕ್ಷೇತ್ರಗಳಲ್ಲಿ ಎಸ್‌ಐಆರ್ ಹೆಸರಿನಲ್ಲಿ ಕಾಂಗ್ರೆಸ್‌ ಮತಬ್ಯಾಂಕ್ ಒಡೆಯುವ ಸಾಧ್ಯತೆ ಇದೆ ಎಂದು ಈ ಹಿಂದೆ ನಾಗರಿಕ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದಿರುವ 135 ಕ್ಷೇತ್ರಗಳಲ್ಲಿ 97ರಿಂದ 100 ಸ್ಥಾನಗಳನ್ನು ಕಡಿಮೆ ಅಂತರದಿಂದ ಗೆದ್ದಿದೆ.

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೆವು. ಈಗ ಆ ಕ್ಷೇತ್ರಗಳಲ್ಲಿ ಡಿಲೀಟ್ ಆಗಿರುವ ಮತಗಳ ಸಂಖ್ಯೆ ಹಾಗೂ ಕಾಂಗ್ರೆಸ್‌ ಗೆದ್ದಿರುವ ಮತಗಳ ಅಂತರದ ಕುರಿತು ವಿಶ್ಲೇಷಣೆ ಮಾಡಲಾಗಿದೆ.

192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್

ರಾಜ್ಯದ 224 ಕ್ಷೇತ್ರಗಳ ದತ್ತಾಂಶವನ್ನು ಎಸ್‌ಐಆರ್ ವಿರೋಧಿ ಒಕ್ಕೂಟದ ಭಾಗವಾದ ‘ಮತ ಕಾವಲು ಸಮಿತಿ’ ಸಂಗ್ರಹಿಸಿದ್ದು, ರಾಜ್ಯದ 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್ ಆಗಿರುವುದು ಕಂಡುಬಂದಿದೆ. ಕಾಂಗ್ರೆಸ್‌ನ ಅತಿ ಹೆಚ್ಚು, ಅಂದರೆ 115 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳು ಡಿಲೀಟ್ ಆಗಿದ್ದರೆ, ಬಿಜೆಪಿಯ 58 ಕ್ಷೇತ್ರಗಳು ಹಾಗೂ ಜೆಡಿಎಸ್‌ನ 19 ಕ್ಷೇತ್ರಗಳಲ್ಲಿ ಈ ವ್ಯತ್ಯಾಸ ಕಂಡುಬಂದಿದೆ. ಇದೀಗ ಡಿಲೀಟ್ ಆಗಿರುವ 99.3 ಲಕ್ಷ ಮತದಾರರ ಪೈಕಿ ಅರ್ಹರು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗದೇ ಇದ್ದರೆ, 2028ರ ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 135, ಬಿಜೆಪಿ 66 ಮತ್ತು ಜೆಡಿಎಸ್‌ 19 ಸ್ಥಾನಗಳಲ್ಲಿ ಗೆದ್ದರೆ, 4 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ಉಪಚುನಾವಣೆಗಳ ಬಳಿಕ ಕಾಂಗ್ರೆಸ್‌ನ ಸ್ಥಾನಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.

2023ರಲ್ಲಿ ಕಾಂಗ್ರೆಸ್‌ ಗೆದ್ದಿರುವ 135 ಕ್ಷೇತ್ರಗಳ ಪೈಕಿ 115 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳು ಡಿಲೀಟ್ ಆಗಿವೆ. ಬಿಜೆಪಿ ಗೆದ್ದ 66 ಕ್ಷೇತ್ರಗಳ ಪೈಕಿ 58ರಲ್ಲಿ ಮತ್ತು ಜೆಡಿಎಸ್‌ ಗೆದ್ದ 19ಕ್ಕೆ 19 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳು ಡಿಲೀಟ್ ಆಗಿವೆ. ಈ ವ್ಯತ್ಯಾಸಗಳು 2028ರಲ್ಲಿ ನಡೆಯುವ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದರೂ, ಯಾವ ಪಕ್ಷದ ಮೇಲೆ ನೇರ ಪರಿಣಾಮ ಬೀರಲಿದೆ ಎಂಬುದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್‌ ಈ ಹಿಂದೆ ಅಲ್ಪ ಮತಗಳ ಅಂತರದಿಂದ ಗೆದ್ದಿರುವ ಸುಮಾರು 97 ಕ್ಷೇತ್ರಗಳಲ್ಲಿ ಆಡಳಿತ ಪಕ್ಷಕ್ಕೆ ವಿರುದ್ಧವಾದ ತೀರ್ಪು ಬರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಬೆಂಗಳೂರು ನಗರ ಶಾಸಕರ ಕ್ಷೇತ್ರಗಳಲ್ಲಿ ಭಾರೀ ಕಡಿತ

ಬೆಂಗಳೂರು ನಗರ ಜಿಲ್ಲೆ ಹಾಗೂ ಜಿಬಿಎ ವ್ಯಾಪ್ತಿಯ ಶಾಸಕರ ಕ್ಷೇತ್ರಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮತಗಳನ್ನು ಕಡಿತಗೊಳಿಸಲಾಗಿದೆ. ಎಸ್‌ಐಆರ್ ಅಂತಿಮ ಮತದಾರರ ಪಟ್ಟಿಯ ಪ್ರಕಾರ, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 46.88 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕಡಿತಗೊಳಿಸಲಾಗಿದೆ. ಈ ಬೃಹತ್ ಪರಿಷ್ಕರಣೆಯಿಂದಾಗಿ ಬೆಂಗಳೂರಿನ ಒಟ್ಟು ಮತದಾರರ ಸಂಖ್ಯೆ 1.03 ಕೋಟಿಯಿಂದ 59.08 ಲಕ್ಷಕ್ಕೆ ಕುಸಿದಿದೆ.

ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಸುಮಾರು 32.74 ಲಕ್ಷ, ಗೈರುಹಾಜರಾಗಿದ್ದಾರೆ ಎಂದು 7.27 ಲಕ್ಷಕ್ಕೂ ಹೆಚ್ಚು ಹಾಗೂ ಮೃತಪಟ್ಟಿದ್ದಾರೆ ಎಂದು 3.19 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ.

ಅತಿ ಹೆಚ್ಚು ಮತದಾರರು ಕಡಿತಗೊಂಡ ಪ್ರಮುಖ ಕ್ಷೇತ್ರಗಳು

ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಪ್ರತಿನಿಧಿಸುತ್ತಿರುವ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 3.55 ಲಕ್ಷಕ್ಕೂ ಹೆಚ್ಚು, ಬಿಜೆಪಿ ಶಾಸಕಿ ಮಂಜುಳಾ ಅರವಿಂದ್ ಲಿಂಬಾವಳಿ ಪ್ರತಿನಿಧಿಸುತ್ತಿರುವ ಮಹದೇವಪುರ ಕ್ಷೇತ್ರದಲ್ಲಿ 2,84,463, ಬಿಜೆಪಿ ಶಾಸಕ ಎಂ. ಸತೀಶ್ ರೆಡ್ಡಿ ಪ್ರತಿನಿಧಿಸುವ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ 2,65,202, ಬಿಜೆಪಿಯ ಬೈರತಿ ಬಸವರಾಜು ಶಾಸಕರಾಗಿರುವ ಕೆ.ಆರ್. ಪುರ ಕ್ಷೇತ್ರದಲ್ಲಿ 2,59,305, ಬಿಜೆಪಿಯ ಮತ್ತೊಬ್ಬ ಶಾಸಕ ಕೆ. ಗೋಪಾಲಯ್ಯ ಶಾಸಕರಾಗಿರುವ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 1,34,223, ಮಾಜಿ ಶಾಸಕ ಅಶ್ವತ್ಥ ನಾರಾಯಣ ಪ್ರತಿನಿಧಿಸುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 1,09,599, ಎಸ್‌. ರಘು ಶಾಸಕರಾಗಿರುವ ಸಿ.ವಿ. ರಾಮನ್ ನಗರದಲ್ಲಿ 1,40,272, ಮುನಿರತ್ನ ನಾಯ್ಡು ಶಾಸಕರಾಗಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 2,43,924, ಎಸ್.ಆರ್. ವಿಶ್ವನಾಥ್ ಶಾಸಕರಾಗಿರುವ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 1,72,458, ಉದಯ್ ಗರುಡಾಚಾರ್ ಪ್ರತಿನಿಧಿಸುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,07,757, ಎಸ್‌.ಟಿ. ಸೋಮಶೇಖರ್ ಅವರ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 2,37,616, ಸುರೇಶ್ ಕುಮಾರ್ ಪ್ರತಿನಿಧಿಸುತ್ತಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 1,00,357, ರವಿ ಸುಬ್ರಮಣ್ಯ ಶಾಸಕರಾಗಿರುವ ಬಸವನಗುಡಿಯಲ್ಲಿ 1,13,085 ಹಾಗೂ ಆರ್. ಅಶೋಕ್ ಶಾಸಕರಾಗಿರುವ ಪದ್ಮನಾಭನಗರದಲ್ಲಿ 1,25,994 ಮತ್ತು ಸಿ.ಕೆ. ರಾಮಮೂರ್ತಿ ಶಾಸಕರಾಗಿರುವ ಜಯನಗರದಲ್ಲಿ 93,318 ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ.

ಇನ್ನು ಬೆಂಗಳೂರು ನಗರದ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಲ್ಲಿ ನೋಡುವುದಾದರೆ, ಕಳೆದ ಚುನಾವಣೆಯಲ್ಲಿ 105 ಮತಗಳ ಕಡಿಮೆ ಅಂತರದಲ್ಲಿ ಗೆದ್ದಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಅವರ ಕ್ಷೇತ್ರದಲ್ಲಿ 1,12,247 ಮತಗಳನ್ನು ಡಿಲೀಟ್ ಮಾಡಲಾಗಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರತಿನಿಧಿಸುವ ಸರ್ವಜ್ಞನಗರದಲ್ಲಿ 1,64,060, ಆಹಾರ ಸಚಿವ ರಿಜ್ವಾನ್ ಅರ್ಷದ್ ಪ್ರತಿನಿಧಿಸುವ ಶಿವಾಜಿನಗರದಲ್ಲಿ 81,372, ಸಚಿವ ಜಮೀರ್ ಅಹಮದ್ ಪ್ರತಿನಿಧಿಸುವ ಚಾಮರಾಜಪೇಟೆಯಲ್ಲಿ 1,07,757, ಎ.ಸಿ. ಶ್ರೀನಿವಾಸ್ ಶಾಸಕರಾಗಿರುವ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ 1,09,588, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರ ಶಾಂತಿನಗರ ಕ್ಷೇತ್ರದಲ್ಲಿ 1,06,315, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಬ್ಯಾಟರಾಯನಪುರ ಕ್ಷೇತ್ರದಲ್ಲಿ 2,27,630, ಸಚಿವ ಬೈರತಿ ಸುರೇಶ್ ಅವರ ಹೆಬ್ಬಾಳ ಕ್ಷೇತ್ರದಲ್ಲಿ 1,30,449, ಪ್ರಿಯಾ ಕೃಷ್ಣ ಶಾಸಕರಾಗಿರುವ ಗೋವಿಂದರಾಜನಗರದಲ್ಲಿ 1,48,785, ಕಾಂಗ್ರೆಸ್‌ನ ಹಿರಿಯ ಶಾಸಕ ಎಂ. ಕೃಷ್ಣಪ್ಪ ಅವರ ವಿಜಯನಗರ ಕ್ಷೇತ್ರದಲ್ಲಿ 1,62,692, ಸಚಿವ ರಾಮಲಿಂಗಾರೆಡ್ಡಿ ಅವರ ಬಿ.ಟಿ.ಎಂ. ಲೇಔಟ್‌ನಲ್ಲಿ 1,46,073 ಹಾಗೂ ಬಿ. ಶಿವಣ್ಣ ಶಾಸಕರಾಗಿರುವ ಆನೇಕಲ್‌ನಲ್ಲಿ 1,87,599 ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ.

ಮತದಾನದ ಹಕ್ಕು ಉಳಿಸುವ ಹೊಣೆ ಯಾರದ್ದು?

ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಿರುವುದು ಕೇವಲ ಅಂಕಿಅಂಶಗಳ ವಿಷಯವಲ್ಲ; ಇದು ಪ್ರಜಾಪ್ರಭುತ್ವದ ಪ್ರಾತಿನಿಧ್ಯ ಮತ್ತು ಮತದಾನದ ಹಕ್ಕಿಗೆ ಸಂಬಂಧಿಸಿದ ಗಂಭೀರ ಪ್ರಶ್ನೆಯಾಗಿದೆ. ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳು ಡಿಲೀಟ್ ಆಗಿರುವ 192 ಕ್ಷೇತ್ರಗಳ ಅಂಕಿಅಂಶಗಳು 2028ರ ಚುನಾವಣಾ ಫಲಿತಾಂಶಗಳ ಮೇಲೆ ನೇರ ಪರಿಣಾಮ ಬೀರಬಹುದು. ಮುಖ್ಯವಾಗಿ, ಪಟ್ಟಿಯಿಂದ ಹೊರಗುಳಿದವರಲ್ಲಿ ಎಷ್ಟು ಮಂದಿ ಅರ್ಹ ಮತದಾರರು ಎಂಬುದನ್ನು ಗುರುತಿಸುವುದು ತುರ್ತಾಗಿ ಆಗಬೇಕಿದೆ. ಅರ್ಹ ಮತದಾರರ ಘಟನೆ ಕಾಪಾಡುವ ಜೊತೆಗೆ, ಮತ್ತೆ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಚುನಾವಣಾ ಆಯೋಗ ಸುಲಭ ಮತ್ತು ಪಾರದರ್ಶಕ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ, ಮತದಾನದ ಹಕ್ಕಿನಿಂದ ವಂಚಿತರಾಗುವ ಅಪಾಯ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸೌಜನ್ಯ ಪ್ರಕರಣ: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಶಶಿಕುಮಾರ್‌ಗೆ ಕೊಕ್; ಚೇತನ್ ಸಿಂಗ್ ರಾಥೋಡ್‌ಗೆ ತನಿಖೆಯ ಹೊಣೆ

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಎಸ್‌ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್...

ಇಸ್ರೇಲ್ ಚುನಾವಣೆ: ನೆತನ್ಯಾಹು, ಐಸೆನ್‌ಕೋಟ್ ಬಣಗಳಿಗೆ ಬಹುಮತದ ಕೊರತೆ; ಸರ್ಕಾರ ರಚನೆಯಲ್ಲಿ ಅರಬ್ ಪಕ್ಷಗಳೇ ನಿರ್ಣಾಯಕ!

ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಆಡಳಿತಾರೂಢ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಬಣಗಳೆರಡಕ್ಕೂ ಭಾರಿ ಸವಾಲು ತಂದೊಡ್ಡಿದೆ. 120 ಸದಸ್ಯ ಬಲದ...

ನ.1ರ ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಬೆಂಬಲ ಘೋಷಿಸಿದ ‘ಪೀಪಲ್ ಅಗೆನ್ಸ್ಟ್ ಎಸ್‌ಐಆರ್’

ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸಲಿರುವ ಬೃಹತ್ ರ‍್ಯಾಲಿಗೆ ಪೀಪಲ್ ಅಗೆನೆಸ್ಟ್ ಎಸ್‌ಐಆರ್‌ ಬೆಂಬಲ ಘೋಷಿಸಿದೆ. ಪ್ರಜಾಪ್ರಭುತ್ವವನ್ನು ಉಳಿಸಲು, ಎಸ್‌ಐಆರ್ ರದ್ದುಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ...

‘ನುಸುಳುಕೋರರನ್ನು’ ಹೊರಹಾಕಲು SIR ಎಂದಿತ್ತು ಬಿಜೆಪಿ ಮತ್ತು ಚು. ಆಯೋಗ : ಆರು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಕೇವಲ 1,600 ವಿದೇಶಿಯರು ಮಾತ್ರ

'ನುಸುಳುಕೋರರನ್ನು' ಪತ್ತೆ ಹಚ್ಚುವುದು ಅಥವಾ 'ವಿದೇಶಿ ಅಕ್ರಮ ವಲಸಿಗರನ್ನು' ಪತ್ತೆ ಹಚ್ಚುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿತ್ತು....

ಸಂತ್ರಸ್ತೆ ಮತ್ತು ಆರೋಪಿ ನಡುವಿನ ‘ಒಪ್ಪಂದ’ವನ್ನಷ್ಟೇ ಆಧರಿಸಿ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪಕ್ಷಕಾರರ (ಸಂತ್ರಸ್ತೆ ಮತ್ತು ಆರೋಪಿ) ನಡುವಿನ ರಾಜಿ ಸಂಧಾನದ ಆಧಾರದ ಮೇಲೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇವಲ ಒಪ್ಪಂದದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು...

DELHI SIR : 2026ರ ಮತದಾರರ ಪಟ್ಟಿಯಲ್ಲಿದ್ದರೂ ಕೂಡ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸುವಂತೆ ಸೂಚಿಸಿದ್ದು ಏಕೆ? ಚು. ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ, 2026ರ ಮತದಾರರ ಪಟ್ಟಿಯಲ್ಲಿದ್ದರೂ ಸಹ ಗಣತಿ ನಮೂನೆಗಳನ್ನು (enumeration forms) ಭರ್ತಿ ಮಾಡದ ಕಾರಣಕ್ಕಾಗಿ ಕರಡು ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ವ್ಯಕ್ತಿಗಳು,...

ಮರ್ಯಾದೆಗೇಡು ಹತ್ಯೆ ಶಂಕೆ: ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿಯ ಸಹೋದರ ಬಂಧನ

ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನನ್ನು ಇಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಶಂಕೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪತ್ನಿಯ ಹಿರಿಯ...

Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ ಬಹಿರಂಗ ಸವಾಲು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಹೋರಾಟಗಾರರು ತಿರಸ್ಕರಿಸಿದ್ದು, ಹೋರಾಟ ಮುಂದುವರಿಸುವ ಘೋಷಣೆ ಮಾಡಿದ್ದಾರೆ. ಬುಧವಾರ (ಅ.28) ಬೆಂಗಳೂರಿನ ಶಾಸಕರ ಭವನದಲ್ಲಿ...

ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ; ಪ್ರತಿಭಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ಸಾಧ್ಯತೆ

ಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುವ ನಿರೀಕ್ಷೆಯಿರುವ ಬೆನ್ನಲ್ಲೇ, ವಿದ್ಯಾರ್ಥಿಗಳ ಹೋರಾಟಕ್ಕೆ ಪಕ್ಷವು ಬೆಂಬಲ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಸಂಘವನ್ನು (ಜೆಎಂಐಎಸ್‌ಯು)...

ಎಂಎಲ್‌ಸಿ ಚುನಾವಣೆ ಸೋಲಿನ ಹಿಂದಿರುವ ರಾಜಕೀಯ – ಸಂಘಟನಾತ್ಮಕ ಕಾರಣಗಳ ಕುರಿತು ಪರಾಮರ್ಶಿಸುತ್ತೇವೆ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್

ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಸೋಲಿನ ಹಿಂದಿರುವ ರಾಜಕೀಯ ಹಾಗೂ ಸಂಘಟನಾತ್ಮಕ ಕಾರಣಗಳ ಕುರಿತು ಸಮಗ್ರ ಪರಾಮರ್ಶೆ ನಡೆಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್...