| ಮಲ್ಲನಗೌಡರ್ |
ಇಲ್ಲಿ ಫ್ಯಾಸಿಸಂ ಮತ್ತು ಯುದ್ಧಗಳಿಗೆ ಮಾನವೀಯತೆ ಮತ್ತು ಅಂತ:ಕರಣ ಮುಖಾಮುಖಿಯಾಗುತ್ತಿದೆ,,,, ದೇಶದ ಜನರ ಸಂಕಟವನ್ನು ಕೆಲವೇ ಗೆರೆಗಳ ಮೂಲಕ ಮನದಾಳಕ್ಕೆ ತಟ್ಟಿಸಿ ಎಚ್ಚರಿಸುವ ಯತ್ನ ನಡೆದಿದೆ.
ಗದಗಿನಲ್ಲಿ ಇವತ್ತು ಫ್ಯಾಸಿಸ್ಟ್ ಹಿಟ್ಲರ್‍ಗೆ ಜೀವಪರ ನಿಲುವಿನ ಕಲಾವಿದ ಪಿಕಾಸೋ ಮುಖಾಮುಖಿಯಾಗಿ ಗೆದ್ದಿದ್ದಾರೆ. ಮೇ 4, 5 ರಂದು ಗದಗಿನಲ್ಲಿ ನಡೆಯುತ್ತಿರುವ 6ನೇ ಮೇ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ, ಪೂರಕವಾಗಿ ಇಂದು ಚಿತ್ರಕಲಾ ಶಿಬಿರದ ಚಾಲನೆಯಾಗಿದೆ.
ಹೋರಾಟಕ್ಕೆ ಕತ್ತಿ, ಚೂರಿ, ಬಂದೂಕೂ ಬೇಕಿಲ್ಲ, ಸಂವಿಧಾನವೇ ನಮ್ಮ ಹೋರಾಟದ ಅಸ್ಸ್ತ್ರ ಎಂದು ಶಿಬಿರಕ್ಕೆ ಚಾಲನೆ ನೀಡಿದ ಖ್ಯಾತ ಕಲಾವಿದ ರಾ. ಸೂರಿ ಹೇಳಿದರು. ಅವರು ಹೇಳಿದ್ದಕ್ಕಿಂತ ಹೆಚ್ಚಿನದನ್ನು ಅವರು ಬಿಡಿಸಿದ ಚಿತ್ರ ಹೇಳುತ್ತಿತ್ತು! ಕಲೆಯ ಶಕ್ತಿಯೇ ಅದಲ್ಲವೇ?
ಹಿಟ್ಲರ್ ಬಂದೂಕು ಗಿ/s ಪಿಕಾಸೋ ಚಿತ್ರ!
ಮೇ ಸಾಹಿತ್ಯ ಸಮ್ಮೇಳನಕ್ಕೆ ಪೂರಕವಾಗಿಯೇ ನಡೆದಿರುವ ಈ ಕಲಾ ಶಿಬಿರದಲ್ಲಿ ಹಿಟ್ಲರ್ ಬಂದಿದ್ದು ಆತನಿಗೆ ಎದುರಾಗಿ ಕಲಾವಿದ ಪಿಕಾಸೋ ನಿಂತಿದ್ದು ಆಶ್ಚರ್ಯವೇನೂ ಅಲ್ಲ. ಈ ಸಲದ ಸಮ್ಮೇಳನದ ಥೀಮೇ ಭ್ರಮಾತ್ಮಕ ಭಾರತ ಗಿ/s ವಾಸ್ತವ ಭಾರತ… ಅಂದರೆ ಅಭಿವೃದ್ಧಿ ಭಾರತ: ಕವಲು ದಾರಿಗಳ ಮುಖಾಮುಖಿ…
ಶಿಬಿರಕ್ಕೆ ಚಾಲನೆ ನೀಡಿದ ರಾ. ಸೂರಿ ಸಂವಿಧಾನದ ಮಹತ್ವದ ಕುರಿತು ಬಿಡಿಸಿದ ಚಿತ್ರ ಸಾಕಷ್ಟು ಸಂಚಲನೆ ಉಂಟು ಮಾಡಿತು. ನಂತರ ಮಾತಾಡಿದ ಪ್ರೇಮಾ ಹಂದಿಗೋಳರು ಮೂಲಭೂತ ಸೌಕರ್ಯ ಮತ್ತು ಸ್ವಾತಂತ್ರ್ಯ ಇದ್ದಾಗಲಷ್ಟೇ ಕಲಾವಿದ ಶಕ್ತಿಶಾಲಿ ಮೆಸೇಜ್ ಕೊಡಬಲ್ಲ ಎಂದರು.
ಶೀಬಿರದ ನಿದೇರ್ಶಕ ಭರಮಗೌಡರು ಹಿಟ್ಲರ್ ಮತ್ತು ಶ್ರೇಷ್ಠ ಕಲಾವಿದ ಪಿಕಾಸೋನನ್ನು ಚರ್ಚೆಗೆ ಎಳೆ ತಂದರು. ಯುದ್ಧದ ಭೀಕರತೆಯನ್ನು, ಸಾವುನೋವನ್ನು ನೋಡಲಾಗದೇ ತತ್ತರಿಸಿದ ಪಿಕಾಸೋ ಮನೆ ಬಾಗಿಲು ಹಾಕಿಕೊಂಡು ಯುದ್ಧದ ಕ್ರೌರ್ಯವನ್ನು ಖಂಡಿಸುವ ಮತ್ತು ಜಗತ್ತಿಗೆ ಅಗತ್ಯವಾದ ಮಾನವೀಯತೆಯನ್ನು ಬೆಂಬಲಿಸುವ ಶ್ರೇಷ್ಠ ಚಿತ್ರಗಳನ್ನು ಬರೆದ ಎಂದರು.
ಶಿಬಿರದ ಇನ್ನೊಬ್ಬ ನಿರ್ದೇಶಕ ವಿಜಯ ಕಿರೇಸೂರು ಈ ವಿಷಯವನ್ನು ಇನ್ನಷ್ಟು ವಿಸ್ತರಿಸಿದರು. ಹಿಟ್ಲರ್ ಒಬ್ಬ ಒಳ್ಳೆ ಕಲಾವಿದ… ಕಲಾವಿದನೂ ಮೃಗನಾಗಬಲ್ಲ ಎಂಬುದಕ್ಕೆ ಅವನೇ ಸಾಕ್ಷಿ ಎಂದರು. ‘ ಚಿತ್ರ ಪ್ರದರ್ಶನದಲ್ಲಿ ಪಿಕಾಸೋ ಬಿಡಿಸಿದ ಯುದ್ಧದ ಕ್ರೌರ್ಯ ಕುರಿತ ಚಿತ್ರಗಳನ್ನು ನೋಡುವಾಗ, ಇದನ್ನು ಯಾರು ರಚಿಸಿದ್ದು ಎನ್ನುತ್ತಾನೆ ಹಿಟ್ಲರ್. ಆಗ ಪಕ್ಕದಲ್ಲೇ ಇದ್ದ ಪಿಕಾಸೋ ‘ನೀವೇ’ ಎನ್ನುವ ಮೂಲಕ ಮಾರ್ಮಿಕ ಉತ್ತರ ನೀಡಿದರು ಎಂಬುದನ್ನು ಕಿರೇಸೂರು ವಿವರಿಸಿದರು.
ಮೇ ಸಾಹಿತ್ಯ ಸಮ್ಮೇಳನ ಹೀಗೆ ಯುದ್ಧ ವಿರೋಧಿಯಾಗಿ, ಸೌಹಾರ್ದದ ಬೆಂಬಲಿಗನಾಗಿ ಈಗಷ್ಟೇ ಶುರುವಾಗಿದೆ. ಮೇ 4, 5 ರಂದು ಈ ಚಿತ್ರಗಳ ಮಾತಿನ ಬದಲು ವ್ಯಕ್ತಿಗಳ ಮಾತನ್ನು ಕೇಳಲು ಗದಗದಲ್ಲಿ ಸೇರೋಣ. ಬನ್ನಿ….
ಬನ್ನಿ ಗದಗಿಗೆ…


