Home ಚಳವಳಿ ಚಳುವಳಿಗಳ ಸಂಗಾತಿಯಾಗಿದ್ದ ಸ್ವಾಮೀಜಿ

ಚಳುವಳಿಗಳ ಸಂಗಾತಿಯಾಗಿದ್ದ ಸ್ವಾಮೀಜಿ

0
ಚಳುವಳಿಗಳ ಸಂಗಾತಿಯಾಗಿದ್ದ ಸ್ವಾಮೀಜಿ

ಗದಗಿನ ತೋಂಟದಾರ್ಯ ಮಠದ ಸ್ವಾಮೀಜಿಯವರು ಹಠಾತ್ತನೇ ನಿರ್ಗಮಿಸಿದ್ದಾರೆ. ಸಹಜವಾಗಿಯೇ ಲಿಂಗಾಯತ ಧರ್ಮದ ಚಳುವಳಿಯಲ್ಲಿದ್ದ ಬಸವತತ್ವವಾದಿಗಳಿಗೆ ದುಃಖವಾಗಿದೆ. ಕಾರಣ, ಸ್ವಾಮೀಜಿಯವರು ಈ ಚಳುವಳಿಯ ಸಿದ್ಧಾಂತಿಗಳಲ್ಲಿ ಒಬ್ಬರಾಗಿದ್ದುದು. ಚಳುವಳಿಗೆ ಬೇಕಾದ ತಾತ್ವಿಕ ಸ್ಪಷ್ಟತೆಯ ಹಿಂದೆ ಅವರ ಅಧ್ಯಯನವಿತ್ತು. ಅವರ ವಿದ್ಯಾಗುರುಗಳಾದ ಎಂ.ಎಂ. ಕಲಬುರ್ಗಿಯವರ ಸಂಶೋಧನೆ ಮತ್ತು ಚಿಂತನೆಗಳಿದ್ದವು. ಸಾಮಾಜಿಕ ಪ್ರಜ್ಞೆಯ ದೃಷ್ಟಿಯಿಂದ ಅವರು ಕಲಬುರ್ಗಿಯವರಿಗಿಂತ ಹೆಚ್ಚು ವಿಶಾಲವೂ ವಿಸ್ತಾರವೂ ಆದ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಅವರು ನಾಡಿನ ಜನಪರ ಚಳುವಳಿಗಳಲ್ಲಿ ಭಾಗವಹಿಸಿದರು. ಬಸವಣ್ಣನ ಹೆಸರು ಹೇಳುವವರು ಮತೀಯವಾದಿ ರಾಜಕಾರಣದ ಜತೆ ಕೈಜೋಡಿಸುವಾಗ, ಅವರು ಬಸವತತ್ವವನ್ನು ಕೋಮುವಾದ ವಿರೋಧಿ ಚಳುವಳಿಯನ್ನು ಬೆಸೆಯುತ್ತಿದ್ದರು. ಗೋಕಾಕ್ ಚಳುವಳಿಯಲ್ಲಿ ಅವರು ಪಾಟೀಲ ಪುಟ್ಟಪ್ಪ ಹಾಗೂ ರಾಜಕುಮಾರ್, ಚನ್ನವೀರಕಣವಿ ಚಂಪಾರ ಜತೆಗೂಡಿ ಕೆಲಸ ಮಾಡಿದರು. ಪೊಸ್ಕೊ ಕಂಪನಿಗಾಗಿ ರೈತರ ಭೂಮಿ ವಶಪಡಿಸಿಕೊಳ್ಳುವ ಯೋಜನೆಯ ವಿರುದ್ಧದ ಚಳುವಳಿಯನ್ನು ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡುವುದರ ವಿರೋಧಿ ಚಳುವಳಿಯನ್ನೂ ಅವರು ಮುನ್ನಡೆಸಿದರು. ಮೌಢ್ಯವಿರೋಧಿ ವೈಚಾರಿಕ ಚಳುವಳಿಯಲ್ಲೂ ಅವರ ಪಾತ್ರವಿತ್ತು. ಹೀಗಾಗಿಯೇ ಮಠ ಮತ್ತು ಮಠಾಧಿಪತಿಗÀಳೆಂದರೆ ಅಂತರ ಕಾಯ್ದುಕೊಳ್ಳುತ್ತಿದ್ದ ಅನೇಕ ಬರೆಹಗಾರರು ಚಿಂತಕರು, ಅವರ ಜತೆ ವೇದಿಕೆ ಹಂಚಿಕೊಳ್ಳುವಂತಾಯಿತು. ಈ ಕಾರಣಗಳಿಂದ ಅವರೊಬ್ಬ ಚಳುವಳಿಗಳ ಸಖನಾಗಿದ್ದರು. ನಾನು ಅವರ ನೇತೃತ್ವದಲ್ಲಿ ನಡೆದ ಪೋಸ್ಕೊ ವಿರೋಧಿ ಚಳುವಳಿಯಲ್ಲಿ ಭಾಗವಹಿಸಿದ್ದೆ. ಆದಿನ ಅವರು ಮಾಡಿದ ಭಾಷಣವು ಕರುಳನ್ನು ಬಗೆದು ತೋರುವಂತೆ ಆರ್ತತೆಯಿಂದ ಕೂಡಿತ್ತು.
ತೋಂಟದಾರ್ಯರು ಅದ್ಭುತ ವಾಗ್ಮಿಯಾಗಿದ್ದರು. ಕರ್ನಾಟಕದಲ್ಲಿ ನೆರೆದ ಸಭೆಯನ್ನು ವಶೀಕರಿಸಿಕೊಂಡು ಮಾತನಾಡುವ ಅನೇಕ ವಾಗ್ಮಿಗಳಿದ್ದಾರೆ. ಹೆಚ್ಚಿನವರು ಕೇಳುಗರಲ್ಲಿ ಹುಸಿರಾಷ್ಟ್ರೀಯತೆ ಮತ್ತು ಮತೀಯ ನಂಜನ್ನು ತುಂಬುವವರು; ಪ್ರತಿರೋಧದ ಕಸುವಿಲ್ಲದ ಆದರ್ಶ ಬಿತ್ತುವವರು. ಭಾರತದಲ್ಲಿ ದೇಶಭಕ್ತಿ ಮತ್ತು ಮತಾಭಿಮಾನದ ಮದ್ಯವನ್ನು ಕುಡಿಸಿ ಜನರನ್ನು ಅಮಲೇರಿಸುವುದು ಹಾಗೂ ವ್ಯವಸ್ಥೆಯನ್ನು ಕದಡದಂತೆ ಇರುವ ಇಕ್ಕಟ್ಟಿನಲ್ಲೇ ಬದುಕುವ ಕಲೆ ಹೇಳಿಕೊಡುವುದು ಸುಲಭ. ಆದರೆ ಪೂರ್ವಸಂಚಿತ ಗ್ರಹಿಕೆಗಳನ್ನು ಒಡೆದು ಮನಸ್ಸನ್ನುತ್ತಿ ವಿಚಾರದ ಬೀಜ ಬಿತ್ತುವುದು, ಪ್ರವಾಹಕ್ಕೆ ಎದುರು ಈಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ತೋಂಟದಾರ್ಯ ಸ್ವಾಮೀಜಿಯವರ ಮಾತುಗಾರಿಕೆ ಮತ್ತು ಜನಪ್ರಿಯತೆಗಳಿಗೆ ಸಾಂಸ್ಕøತಿಕ ಮಹತ್ವವಿದೆ. ಅವರ ಭಾಷಣಗಳಲ್ಲಿ ಕನ್ನಡವು ಸಂಗೀತಾತ್ವಕ ಲಯದಲ್ಲಿ ರೂಪು ತಳೆಯುತ್ತಿತ್ತು. ಕೋಮುಸೌಹಾರ್ದ ಚಳುವಳಿಗೆಂದು ಮಂಗಳೂರಿಗೆ ಬಂದಿದ್ದ ಅವರ ಭಾಷಣ ಕೇಳಿದ್ದ ಚಿಂತಕರೂ ಸ್ವತಃ ಕನ್ನಡದ ಶ್ರೇಷ್ಠ ಗದ್ಯಕಾರರೂ ಆದ ಜಿ. ರಾಜಶೇಖರ್ ಬೆರಗಾಗಿದ್ದರು; `ಛೇ! ಅವರ ಜೀವಂತ ಕನ್ನಡದ ಮುಂದೆ ನಮ್ಮ ಕನ್ನಡ ಸಪ್ಪೆ’ ಎಂದು ಹೇಳುತ್ತಿದ್ದರು. ತೋಂಟದಾರ್ಯರ ಕನ್ನಡ ಜೀವಂತವೆÉನಿಸಲು ಕಾರಣಗಳೇನಿರಬಹುದು? ಬಹುಶಃ ಇವು:
ಸ್ವಾಮೀಜಿಯವರು ಗದಗ-ಹುಬ್ಬಳ್ಳಿ-ಬಿಜಾಪುರ ಸೀಮೆಯ ವ್ಯಾಪಾರಿಗಳು ರೈತರು ಮಹಿಳೆಯರು ರಾಜಕಾರಣಿಗಳ ಜತೆ ಒಡನಾಡುತ್ತಿದ್ದರು; ಜನರ ಲೌಕಿಕ ಆಧ್ಯಾತ್ಮಿಕ ಸಮಸ್ಯೆಗಳನ್ನು ಬಿಡಿಸುತ್ತ ಅವರ ಸುಖದುಃಖಗಳ ಭಾಗವಾಗಿದ್ದರು. ಲಿಂಗಾಯತರÀ ಧಾರ್ಮಿಕ ಸಾಹಿತ್ಯವಾದ ವಚನಗಳು ಕನ್ನಡದಲ್ಲಿರುವುದರಿಂದ ಅವರಿಗೆ ಕನ್ನಡ ಭಾಷೆಯ ಜತೆ ಭಾವನಾತ್ಮಕ ಹಾಗೂ ಚಾರಿತ್ರಿಕ ಸಂಬಂಧವಿತ್ತು. ಕÀನ್ನಡಕ್ಕೆ ಅಸಾಧಾರಣವಾದ ಅಭಿವ್ಯಕ್ತಿ ಶಕ್ತಿಯನ್ನೂ ಚೆಲುವನ್ನೂ ತುಂಬಿದÀ ವಚನಗಳನ್ನು ಸ್ವಾಮಿಜಿ ತಮ್ಮ ನಿತ್ಯದ ಮಾತುಕತೆ, ಪ್ರವಚನ ಭಾಷಣಗಳಲ್ಲಿ ಬಳಸುತ್ತಿದ್ದರು. ಜತೆಗೆ ಅವರಿದ್ದ ಗದಗವು ಕವಿರಾಜಮಾರ್ಗಕಾರ ಹೇಳುವ ತಿರುಳುಗನ್ನಡ ಪ್ರದೇಶವಾದ ಒಕ್ಕುಂದ ಲಕ್ಷ್ಮೇಶ್ವರ ಕೊಪಣ ನಗರಗಳ ವೃತ್ತÀದಲ್ಲಿ ಬರುತ್ತದೆ. ನೆರೆರಾಜ್ಯದ ಅಂಚನ್ನು ಹಂಚಿಕೊಳ್ಳದ ಜಿಲ್ಲೆಗಳಲ್ಲಿ ಗದಗದಲ್ಲಿ ಗಡಿಯಲ್ಲಿರುವ ದ್ವಿಭಾಷಿಕತೆ ಕಡಿಮೆ. ಸ್ವಾಮೀಜಿಯವರು ಮೂಲತಃ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದವರು. ಸದಾ ಅಭ್ಯಾಸ ಮಾಡುತ್ತ್ತಿದ್ದರು. ಬರೆಹಗಾರರ ಜತೆ ಆಪ್ತ ಸಂಬಂಧ ಇರಿಸಿಕೊಂಡಿದ್ದರು. ಪುಸ್ತಕಪ್ರೇಮಿಯಾಗಿದ್ದರು. ಒಳ್ಳೆಯ ಬರೆಹವನ್ನು ಓದಿ ಲೇಖಕರಿಗೆ ಪತ್ರ ಬರೆಯುತ್ತಿದ್ದರು.
ಇವೆಲ್ಲವೂ ಅವರ ಭಾಷೆಯ ಚೆಲುವಿನ ಹಿನ್ನೆಲೆಯಲ್ಲಿ ಇರಬಹುದಾದ ತಾಂತ್ರಿಕ ಮತ್ತು ಐತಿಹಾಸಿಕ ಕಾರಣಗಳು. ಆದರೆ ಅವರ ಕನ್ನಡದ ಕಸುವಿಗ್ಕೆ ನಿಜವಾದ ಕಾರಣ, ಅವರ ವೈಚಾರಿಕತೆ ಮತ್ತು ಜಾತ್ಯತೀತ ಪ್ರಜ್ಞೆಯೆಂದು ಅನಿಸುತ್ತದೆ. ಅವರೊಮ್ಮೆ ಮಠದ ಜಾತ್ರಾ ಮಹೋತ್ಸವದ ಸಾರ್ವಜನಿಕ ಸಮಿತಿಯ ಅಧ್ಯಕ್ಷರನ್ನಾಗಿ ಒಬ್ಬ ಮುಸ್ಲಿಂ ನಾಯಕನನ್ನು ನೇಮಿಸಿದ್ದರು. ಕೆಲವರು ಗದ್ದಲ ತೆಗೆದರೂ ಮಣಿಯಲಿಲ್ಲ. ಪುತ್ತೂರಿನಲ್ಲಿ ಮಹಾಲಿಂಗೇಶ್ವರ ದೇವಳದ ಜಾತ್ರೆಯಲ್ಲಿ, ಶಿಷ್ಟಾಚಾರದ ಪ್ರಕಾರ ಅಲ್ಲಿಯ ಜಿಲ್ಲಾಧಿಕಾರಿಯ ಹೆಸರು ಆಹ್ವಾನಪತ್ರದಲ್ಲಿ ಮುದ್ರಿತವಾಗಿದ್ದಕ್ಕೆ, ಅಧಿಕಾರಿ ಮುಸ್ಲಿಮನಾಗಿದ್ದರಿಂದ ಅದನ್ನು ತೆಗೆಯುವವರೆಗೆ ಜಾತ್ರೆ ಮಾಡಲಾಗುವುದಿಲ್ಲ ಎಂದು ಸಂಘ ಪರಿವಾರ ಹಠ ಮಾಡಿತು. ಇದರ ಹಿನ್ನೆಲೆಯಲ್ಲಿ ಗದಗ ಜಾತ್ರೆಯ ಘಟನೆಯನ್ನು ನೋಡಬೇಕು. ಮಠದಲ್ಲಿ ಒಮ್ಮೆ ತೋಂಟದಾರ್ಯರು ಲೇಖಕಿ ಕಸ್ತೂರಿ ಬಾಯಿರಿಯವರ ಪುಸ್ತಕದ ಬಿಡುಗಡೆ ಮತ್ತು ಸನ್ಮಾನ ಕಾರ್ಯಕ್ರಮ ಇರಿಸಿಕೊಂಡಿದ್ದರು. ನಾನೂ ಹೋಗಿದ್ದೆ. ಕಾರ್ಯಕ್ರಮ ಮುಗಿದ ಬಳಿಕ ಕಸ್ತೂರಿ ಹೇಳಿದರು: “ಸರಾ, ನನಗೆ ನನ್ನ ತವರಿನಲ್ಲಿ ಸಿಗಲಾರದ ಪ್ರೀತಿ ಸಿಕ್ಕಿತು. ಅಜ್ಜಾ ಅವರು ನನಗೆ ಸೀರೆಯುಡಿಸಿದರು. ಹತ್ತುಸಾವಿರ ರೊಕ್ಕ ಉಡಿಗೆ ಹಾಕಿದರು. ನಾನೇನು ಲಿಂಗಾಯತರವಳಲ್ಲ. ಅವರ ಮಠದ ಭಕ್ತೆಯಲ್ಲ.’
ಬಹುಶಃ ಈ ಜಾತ್ಯತೀತ ಪ್ರಜ್ಞೆ ತೋಂಟದಾರ್ಯರು ಹುಟ್ಟಿಬೆಳೆದ ಬಿಜಾಪುರ ಸಂಸ್ಕøತಿಯೊಳಗೂ ಇದ್ದಂತಿದೆ. ಬಿಜಾಪುರದ ಈ ಜಾತ್ಯತೀತ ಪರಂಪರೆಯನ್ನು ಉದ್ಘಾಟಿಸಿದವರು ಇಲ್ಲಿನ ಸೂಫಿಗಳು. ಸರಸ್ವತಿ ಪ್ರಾರ್ಥನೆಯಿಂದ `ಕಿತಾಬೆ ನೌರಸ್’ ರಚಿಸಿದ ಎರಡನೇ ಇಹ್ರಾಹಿಂ ಆದಿಲಶಾಹಿ. ಬಿಜಾಪುರದ ನಂಗಾಶಹಾ ಬ್ರಾಹ್ಮಣ ಸಮುದಾಯದಿಂದ ಬಂದ ಕಾಖಂಡಕಿ ಮಹಿಪತಿರಾಯರಿಗೆ ಗುರುವಾದರೆ, ಅಮೀನುದ್ದೀನ್ ಅಲಾ ಶಿರಹಟ್ಟಿಯ ಫಕೀರೇಶರನ್ನು ಶಿಷ್ಯರಾಗಿ ಸ್ವೀಕರಿಸಿದರು. ಮುಂದೆ ಅಲ್ಲಿಂದ ಅಮೀರ್‍ಬಾಯಿ-ಗೋಹರ್‍ಬಾಯಿ ಸೋದರಿಯರು ಬಂದರು; ಮರಾಠ ಮೂಲದ ಹಂದಿಗನೂರು ಸಿದ್ದರಾಮಪ್ಪ ಕನ್ನಡದ ನಟನಾಗಿ ಹೊಮ್ಮಿದರು. ಬಿಜಾಪುರದ ಅಸ್ಮಿತೆ ಎನ್ನಬಹುದಾದ ಕೃಷ್ಣಪಾರಿಜಾತ ಪರಂಪರೆಯು ಅಪ್ಪಾಲಾಲ್ ನದಾಫ ಎಂಬ ಶ್ರೇಷ್ಠ ನಟನನ್ನು ಹುಟ್ಟಿಸಿತು. ಇಲ್ಲಿನ ಹರದೇಶಿ ನಾಗೇಶಿ ಹಾಡು ಪರಂಪರೆಯು ಇಂಗಳಗಿ ಹುಸೇನನನ್ನು ರೂಪಿಸಿತು. ಇಮಾಂಬಿ ಎಂಬ ಬೋರಿಗಿ ಗ್ರಾಮದ ಆಡುಕಾಯುವ ಮುಸ್ಲಿಂ ಮಹಿಳೆ ಈಗಲೂ ಅದ್ಭುತವಾಗಿ ತತ್ವಪದ ಹಾಡುವಳು. ಇಂತಹ ಸೀಮೆಯಿಂದ ಬಂದ ತೋಂಟದಾರ್ಯರಲ್ಲಿ ಮತೀಯತೆಯ ಸೋಂಕಿರಲಿಲ್ಲ. ಸ್ವತಃ ತೋಂಟದಾರ್ಯ ಮಠವು ಸ್ಥಳೀಯ ಮುಸ್ಲಿಮರಿಗೆ ಮಸೀದಿ ಕಟ್ಟಿಸಲು ತನ್ನ ಭೂಮಿಯನ್ನು ಕೊಟ್ಟಿತು. ಇದರ ಬಗ್ಗೆ 19ನೇ ಶತಮಾನದ ಮುಸ್ಲಿಂ ಕವಿಯೊಬ್ಬರು ಕೃತಜ್ಞತೆಯಿಂದ ಬರೆದ ತೋಂಟದಾರ್ಯ ಸ್ತೋತ್ರಸಾಹಿತ್ಯ ಕೃತಿಯನ್ನು ಸ್ವಾಮೀಜಿ ಪ್ರಕಟಿಸಿದರು.
ಇದೇಹೊತ್ತಲ್ಲಿ, ಇದೇ ಬಿಜಾಪುರ ಸೀಮೆಯಿಂದ, ಹೆಸರಲ್ಲಿ ಬಸವಣ್ಣನ ಹೆಸರಿದ್ದರೂ, ಬಸವತತ್ವಕ್ಕೆ ವಿರುದ್ಧವಾದ ಹಾಗೂ ಮುಸ್ಲಿಮರನ್ನು ದ್ವೇಷಿಸುವ ಹೇಳಿಕೆಯನ್ನು, ವಿಚಾರವಾದಿಗಳನ್ನು ಗುಂಡಿಟ್ಟುಕೊಲ್ಲಬೇಕು ಎಂಬ ಹೇಳಿಕೆಯನ್ನು ಮಾಡಿದ ಶಾಸಕ ಬಸವರಾಜ ಪಾಟೀಲ ಯತ್ನಾಳರು ನೆನಪಾಗುತ್ತಾರೆ. ಬಹುಶಃ ಯತ್ನಾಳರಲ್ಲಿ ಬಸವತತ್ವವೂ ಇಲ್ಲ. ಶರಣರ ವೈಚಾರಿಕತೆಯೂ ಇಲ್ಲ. ಇದ್ದಿದ್ದರೆ ಇಬ್ಬರು ಶರಣತತ್ವ ಪ್ರತಿಪಾದಕರಾದ ಗೌರಿ ಹಾಗೂ ಕಲಬುರ್ಗಿಯವರನ್ನು ಮತೀಯವಾದಿಗಳು ಕೊಂದ ಬಳಿಕವೂ, ಅವರು ವಿಚಾರವಾದಿಗಳನ್ನು ಗುಂಡಿಟ್ಟುಕೊಲ್ಲಬೇಕು ಎಂದು ಹೇಳುವುದು ಸಾಧ್ಯವಾಗುತ್ತಿರಲಿಲ್ಲ. ದುಷ್ಟ ವಿಚಾರಧಾರೆಯು ನಮ್ಮ ಭಾಷೆಯನ್ನು ಹದಗೆಡಿಸುತ್ತದೆ. ವಾಗ್ಮಿಯೊಬ್ಬರ ಭಾಷೆಯ ಚೆಲುವಿಗೆ ಪ್ರಾದೇಶಿಕತೆಯ ಮತ್ತು ಭಾಷಾಶಾಸ್ತ್ರೀಯ ಕಾರಣಗಳು ಮಾತ್ರ ಇರುವುದಿಲ್ಲ. ವಾಗ್ಮಿತೆಗೆ ಕಸುವು ಬರುವುದು ಅದು ಒಳಗೊಂಡಿರುವ ಶಬ್ದಸಂಪತ್ತಿನಿಂದಲ್ಲ. ಅದರೊಳಗೆ ಹುದುಗಿರುವ ಸಾಮಾಜಿಕ ಸಂವೇದನೆಯಿಂದ. ದರ್ಶನದಿಂದ, ಚಿಂತನೆಯಿಂದ. ತೋಂಟದಾರ್ಯರ ಕನ್ನಡದಲ್ಲಿ ಇದ್ದ ಸಿರಿವಂತಿಕೆ ಕೇವಲ ಭಾಷಿಕವಾದುದಲ್ಲ, ಸಾಂಸ್ಕøತಿಕವಾದುದು. ಸುಂದರವಾದ ಭಾಷೆ ಸುಂದರವಾದ ಮನಸ್ಸಿನಿಂದ ಹುಟ್ಟುತ್ತದೆ. ನಾವು ಅತ್ಯುತ್ತಮ ವ್ಯಕ್ತಿಗಳನ್ನು ಕಳೆದುಕೊಳ್ಳುವಾಗ, ಭಾಷೆಗೆ ಸತ್ವವನ್ನು ಎರೆದ ಶಕ್ತಿಯನ್ನೂ ಕಳೆದುಕೊಳ್ಳುತ್ತಿರುತ್ತೇವೆಯೋ ಏನೋ?

LEAVE A REPLY

Please enter your comment!
Please enter your name here