ವಿಶ್ವರಾಧ್ಯ ಸತ್ಯಂಪೇಟೆ |
ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನು ಉಂಟು ಮಾಡಿದ ಧ್ವನಿ ಸುರುಳಿಯ ಕರ್ತೃ ಶರಣಗೌಡ ಕಂದಕೂರ ಗುರುಮಿಠಕಲ್ ಕ್ಷೇತ್ರದಿಂದ ಗೆದ್ದು ಬಂದ ನಾಗಣ್ಣಗೌಡ ಕಂದಕೂರ ಅವರ ಪುತ್ರ. ಕಂದಕೂರ ಕುಟುಂಬ ವರ್ಗದವರಿಗೆ ದೇವೇಗೌಡರು ಎಂದೆಂದೂ ಸನಿಹವೆ. ಶರಣಗೌಡರ ದೊಡ್ಡಪ್ಪ ಲಿಂ.ಸದಾಶಿವರೆಡ್ಡಿ ಕಂದಕೂರ ಅಂದರೆ ಪಂಚಪ್ರಾಣ. ಯಾದಗಿರಿಗೆ ಗೌಡರು ಆಗ ಯಾವಾಗ ಬಂದರೂ ಸದಾಶಿವರೆಡ್ಡಿಯವರನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ. ಸದಾಶಿವರೆಡ್ಡಿ ಜನತಾ ಪಕ್ಷ ಪಾಳೆಯದಲ್ಲಿ ಹಿಂದಿನಿಂದಲೂ ಗುರುತಿಸಿಕೊಂಡಿದ್ದರು. ಯಾದಗಿರಿ ಮತ ಕ್ಷೇತ್ರದ ಶಾಸಕರಾಗಿದ್ದ ಕೆಲವು ಕಾಲ ಮಂತ್ರಿಯಾಗಿದ್ದ ವಿಶ್ವನಾಥರೆಡ್ಡಿ ಮುದ್ನಾಳರ ಒಡನಾಟವಿದ್ದರೂ ತಮ್ಮದೆ ಅಸ್ತಿತ್ವ ಹೊಂದಿದವರು. ಸಣ್ಣ ಪುಟ್ಟ ಗಿಮಿಕ್ ಮಾಡದೆ ನೇರ ನಿಷ್ಠುರ ಗುಣಗಳನ್ನು ಬೆಳೆಸಿಕೊಂಡು ಜನ ಮನ್ನಣೆ ಗಳಿಸಿಕೊಂಡಿದ್ದವರು. ಬಹುಶಃ ಇದನ್ನು ಗುರುತಿಸಿದ್ದ ದೇವೇಗೌಡರು ಯಾದಗಿರಿಗೆ ಯಾವಾಗ ಬಂದರೂ ಸದಾಶಿವರೆಡ್ಡಿಯವರನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ.
ಈ ಸದಾಶಿವರೆಡ್ಡಿಯವರ ತಮ್ಮ ನಾಗಣ್ಣಗೌಡ ಕಂದಕೂರ ಅವರ ಮಗನೆ ಶರಣಗೌಡ ಕಂದಕೂರ. ಗುರುಮಿಠಕಲ್ ಮತಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಸೋತು ಹೋಗಿದ್ದ ನಾಗಣ್ಣಗೌಡರ ಗೆಲುವಿಗೆ ಮುಖ್ಯ ಕಾರಣವೆ ಶರಣಗೌಡ ಕಂದಕೂರ. ಕೇವಲ 37 ವರ್ಷ ವಯಸ್ಸಿನವನಿದ್ರೂ ಮತಕ್ಷೇತ್ರದ ಉದ್ದಕ್ಕೂ ಪಾದರಸದಂತೆ ಓಡಾಡಿ ತಮ್ಮ ಕುಟುಂಬದ ಪ್ರಭಾವ ಉಂಟು ಮಾಡಿದ್ದಾನೆ.
ಕಳೆದ ಎರಡು ವಿಧಾನಸಭೆಯ ಚುನಾವಣೆಯಲ್ಲಿ ಅಲ್ಲಿನ ಬಾಬುರಾವ್ ಚಿಂಚನಸೂರ ಎಂಬ ವ್ಯಕ್ತಿಯಿಂದ ಸೋತು ಸುಣ್ಣವಾಗಿದ್ದ ನಾಗಣ್ಣಗೌಡ ಕಂದಕೂರ ಮತ್ತೆ ಚಿಗುರುವಂತೆ ಮಾಡಿದ್ದೇ ಈ ಶರಣಗೌಡನ ಸಂಘಟನಾ ಚತುರತೆ. ನಾಗಣ್ಣಗೌಡರ ತೂಕದ ಮಾತು ಹಾಗೂ ಗಟ್ಸ್ ಒಂದೆಡೆ ಕೆಲಸ ಮಾಡಿದ್ದರೆ ಇನ್ನೊಂದೆಡೆ ಶರಣಗೌಡನ ಕ್ಷೇತ್ರದ ಪಾದಯಾತ್ರೆಗಳೂ ಪ್ಲಸ್ ಪಾಯಿಂಟ್ ಆದವು. ಎರಡು ಬಾರಿ ನೆಲ ಕಚ್ಚಿ ಇನ್ನೇನು ಮೂರನೆ ಬಾರಿ ಕಂದಕೂರ ಕುಟುಂಬ ನೆಲ ಕಚ್ಚಿಯೇ ಹೋಗುತ್ತದೆ ಎಂದು ರಾಜಕೀಯ ನಾಯಕರು ಎಣಿಕೆ ಹಾಕಿದಾಗ ಮತದಾರನ ಕರುಣಾ ದೃಷ್ಟಿ ಇವರ ಮೇಲೆ ಬಿತ್ತು. ಸಾಡೆ ಸಾತಿಯಂತೆ ಗುರುಮಿಠಕಲ್ ಮತಕ್ಷೇತ್ರಕ್ಕೆ ಗಂಟು ಬಿದ್ದಿದ್ದ ಚಿಂಚನಸೂರ ಬಾಬುರಾವ್ ನೇಪಥ್ಯಕ್ಕೆ ಸರಿಯಬೇಕಾಯಿತು.
ಮೂರನೆ ಸಲ ಗುರುಮಿಠಕಲ್ ಕ್ಷೇತ್ರದಲ್ಲಿ ನಿಲ್ಲಲು ದೇವೇಗೌಡರ ಜನತಾದಳ ನಾಗಣ್ಣಗೌಡ ಕಂದಕೂರರಿಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಿದೆ. ಈ ಸಹಕಾರ ಇಂದು ನಿನ್ನೆಯದಲ್ಲ. ಹೀಗಾಗಿ ನಾಗಣ್ಣಗೌಡ ಕಂದಕೂರ ಆತನ ಮಗ ಶರಣಗೌಡ ಮತ್ತು ಮುಖ್ಯಮಂತ್ರಿ ಕುಮಾರ ಸ್ವಾಮಿಗಳು ಬೀಸಿದ ಬಲೆಯಲ್ಲಿ ಯಡಿಯೂರಪ್ಪ ಸಿಕ್ಕು ಹಾಕಿಕೊಂಡಿದ್ದಾನೆ. ಯಡಿಯೂರಪ್ಪನ ಮುಖ್ಯಮಂತ್ರಿಯ ಕನಸಿಗೆ ಬ್ರೇಕ್ ಹಾಕದೆ ಹೋದರೆ ಕುಮಾರಣ್ಣನ ಸರಕಾರ ಉರುಳಿ ಹೋಗುತ್ತದೆಂಬುದು ಯಾರಾದರೂ ಊಹಿಸಬಹುದಾಗಿತ್ತು. ಕುದುರೆಗಳು ಹೇಗೂ ಖರೀದಿಗೆ ಸಿಗುತ್ತವೆ ಎಂಬ ಖಾತ್ರಿಯಲ್ಲಿದ್ದ ಯಡಿಯೂರಪ್ಪ ಹೈಕಮಾಂಡ್‌ನಿಂದ ಗ್ರಿನ್ ಸಿಗ್ನಲ್ ಪಡೆದು ತನ್ನ ಕೈಚಳ ಆರಂಭಿಸಿದ್ದರು. ಇದರಿಂದ ಕಾಂಗ್ರೆಸ್ ಹಾಗೂ ದಳದ ಮೈತ್ರಿ ಸರಕಾರ ತನ್ನ ಅಸ್ತಿತ್ವಕ್ಕಾಗಿ ಯಡ್ಡಿಯನ್ನು ಖೆಡ್ಡಾದಲ್ಲಿ ಕೆಡವಲು ಸಖತ್ ಗೇಮ್ ಆಡಿದೆ.


