ಕೆಲವೊಮ್ಮೆ ಅನಿಸುತ್ತೆ
ನೀನು ಇಲ್ಲೇ ಇದ್ದೀ
ಎಂದಿನಂತೆ ನಿನ್ನ ಬಿಡುವಿಲ್ಲದ
ಕೆಲಸದಲ್ಲಿ ಮುಳುಗಿಹೋಗಿದ್ದೀ..
ಅದಕೆಂದೇ ಈ ವಾರ
ಮನೆಗೆ ಬರದೇ ಹೋದೀ..
ಆದರೆ ಮಿಕ್ಕ ಸಮಯದಲ್ಲೆ
ನಿಜ ಮುಖಕ್ಕೆ ರಾಚುತ್ತೆ
ನೀನಿನ್ನು ಬರಲ್ಲ
ಎಂದೆಂದೆಂದಿಗೂ ಬರಲ್ಲ
ಅನ್ನೋ ಕಹಿಸತ್ಯ ಅರಿವಾಗುತ್ತೆ
ಹೃದಯ ಕಂಪಿಸುತ್ತೆ
ಕಾಲುಗಳು ನಡುಗುತ್ತೆ
ಹೊಟ್ಟೆಯೊಳಗೆ ಸಂಕಟವಾಗಿ
ಒಳಗಿರೋದೆಲ್ಲಾ ಕಕ್ಕುವಂತಾಗುತ್ತೆ..
ಆದರೆ ನನ್ನಂತೆ ಅದೂ ಖಾಲಿಖಾಲಿಯಾಗಿದೆ..
ಎಚ್ಚರವಾದಾಗ ಕೊರಗುತ್ತಾ
ಮಲಗಿದ್ದಾಗ ಬೆಚ್ಚಿಬೀಳುತ್ತಾ..
ಪ್ರತಿಗಳಿಗೆಯೂ ಕಳೆದುಕೊಂಡಿದ್ದರ
ಲೆಕ್ಕ ನೀಡುತ್ತಿದೆ..
ನಿನ್ನ ಆ ಕೊನೆ ಹತ್ತು ಸೆಕೆಂಡುಗಳನ್ನು
ಊಹಿಸಿಕೊಳ್ಳುತ್ತೀನಿ
ಪೊಲೀಸರ ಪ್ರಕಾರ
ಹತ್ತೇ ಸೆಕೆಂಡುಗಳಲ್ಲಿ
ಆ ಕೊಲೆಗಡುಕರು
ನಿನ್ನ ಧ್ವನಿಯಡಗಿಸಿರಬಹುದಂತೆ..
ಹೇಗಿದ್ದಿರಬಹುದು ಆ ಹತ್ತು ಸೆಕೆಂಡುಗಳು
ಹೆಲ್ಮೆಟ್ಟಿನ ಹಿಂದೆ ಅಡಗಿದ್ದ ಆ ಕೊಲೆಗಡುಕ
ಆ ಹೇಡಿ
ನಿನ್ನ ಕಡೆ ನುಗ್ಗುತ್ತಾನೆ
ಯಾರೋ ನೀನು? ಎನ್ಮಾಡ್ತಿದೀಯೋ..ಮಗನೇ?
ಕೂಡಲೇ ಹಾರಿರಬಹುದೇ ಮೊದಲಗುಂಡು!
ಹೇ..ಯಾಕೋ? ಯಾವ ಬೇವರ್ಸಿ ಕಳಿಸಿದ್ದು ನಿನ್ನ..
ಚಡ್ಡಿ ಕಳಚಿ ಪ್ಯಾಂಟು ಹಾಕ್ಕೊಂಡ ತಕ್ಷಣ
ದೊಡ್ಡವನೆಂದು ತಿಳ್ಕೊಂಡ್ಯಾ..
ಎಷ್ಟು ಧೈರ್ಯ..ನನ್ನ ಕೊಲ್ತೀಯ
ಹತ್ತು ಸೆಕೆಂಡುಗಳು. ಮತ್ತೆ ಮೂರು ಬುಲ್ಲೆಟ್ಟುಗಳು.
ಕೊಂದೇ ಬಿಟ್ಟರಲ್ಲೇ ನಿನ್ನ..
ಆ ಕೊನೆಗಳಿಗೆಯಲ್ಲಿ ನಿನ್ನ ಕಣ್ಮುಂದೆ ಬಂದವರು ಯಾರು?
ಇಷಾ? ಅಮ್ಮ? ಅಥವಾ ನಾನೇ?
ನಿನ್ನ ಪ್ರೀತಿ, ಕಾಳಜಿ, ಕಳವಳಗಳೇ?
ಅಥವಾ ಪುಟ್ಟ ಗುಬ್ಬಿಯಂತಿದ್ದ ನಿನ್ನನ್ನು
ಮೊರೆಯುವ ಹೆಣ್ಣುಹುಲಿಯನ್ನಾಗಿಸಿದ ನಿನ್ನ ಕಾಮ್ರೇಡುಗಳೇ?
ನೀನು ತಣ್ಣಗೆ ಮಲಗಿದ್ದಿ ಅಲ್ಲಿ
ರಕ್ತದ ಮಡುವಿನಲ್ಲಿ..
ಆದರೆ ಸಾವೂ ಸುಮ್ಮನಾಗಿಸಲಿಲ್ಲ್ಲ ನಿನ್ನ
ಈಗ ಎಲ್ಲಿ ನೋಡಿದರು ಅಲ್ಲಿ ಗೌರಿಯರು
ಬೀದಿಯಲ್ಲಿ, ಗಲ್ಲಿಯಲ್ಲಿ, ದೂರದ ಡೆಲ್ಲಿಯಲ್ಲಿ..
ನಿನ್ನ ರಕ್ತದ ಕಣಕಣವೂ ಹೋರಾಟದ ಕಣ
ನನಗೀಗ ಮತ್ತಷ್ಟು ಗೊಂದಲ..
ನಿನ್ನಂತೆ
ಧ್ವನಿ ಇಲ್ಲದವರಿಗೆ ಧ್ವನಿಯಾದರೆ
ನಾನೂ ನೀನಾಗಬಲ್ಲೆನೇ?
ಸುಮ್ಮನುಳಿದರೆ
ಬದುಕಿಯೂ ಸತ್ತಂತಾಗುವೆನೇ?
ಇಂಗ್ಲೀಷ್ ಮೂಲ: ಕವಿತಾ ಲಂಕೇಶ್
ಅನು: ಶಿವಸುಂದರ್



