ಎ.ಕೆ. ಸುಬ್ಬಯ್ಯ |
ಇಂದು ಪಶ್ಚಿಮಘಟ್ಟಗಳ ರಕ್ಷಣೆ ದಿನನಿತ್ಯದ ಚರ್ಚೆಯ ವಿಷಯವಾಗಿದೆ. ಮಾಧವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳು ಹೇಳಿರುವಂತೆ, ಪಶ್ಚಿಮಘಟ್ಟಗಳು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಗುಜರಾತಿನ ತಪ್ತನದಿ ದಂಡೆಯವರೆಗೆ ವ್ಯಾಪಿಸಿವೆ. ಉದ್ದ ಸುಮಾರು 1,600 ಕಿ.ಮೀ., ಅಗಲ 10 ಕಿ.ಮೀ.ನಿಂದ 210 ಕಿ.ಮೀ.ವರೆಗಿದೆ, ಎತ್ತರ 1800 ಅಡಿಯಿಂದ 2400 ಅಡಿವರೆಗಿದೆ. ಇದನ್ನು ಸಹ್ಯಾದ್ರಿ ಬೆಟ್ಟದ ಸಾಲುಗಳೆಂದೂ ಕರೆಯಲಾಗುತ್ತದೆ. ಕೇರಳದ ಪಾಲ್ಘಾಟ್ ಬಳಿ ಸುಮಾರು 30 ಕಿ.ಮೀ. ಉದ್ದ ಹಾಗೂ 100 ಮೀಟರ್ ಎತ್ತರ ಇರುವ `ಪಾಲ್ಘಾಟ್ ಗ್ಯಾಪ್’ ಎಂಬ ಕಣಿವೆಯನ್ನು ಹೊರತುಪಡಿಸಿದರೆ ಈ ಶ್ರೇಣಿಯು ನಿರಂತರವಾಗಿ ತಮಿಳುನಾಡಿನಿಂದಾರಂಭಿಸಿ ಕೇರಳ, ಕರ್ನಾಟಕ, ಗೋವ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳವರೆಗೆ ಹಬ್ಬಿದೆ. ಇದು 56,377 ಚದರ ಕಿ.ಮೀ. ವಿಸ್ತೀರ್ಣವಿದ್ದು, ಅದರ ಶೇಕಡ 40ರಷ್ಟು ಭೂಭಾಗವನ್ನು ‘ನೈಸರ್ಗಿಕ ವಲಯ’ವೆಂತಲೂ, ಉಳಿದ ಶೇಕಡ 60ರಷ್ಟು ಭೂಭಾಗವನ್ನು ‘ಸಾಂಸ್ಕೃತಿಕ ವಲಯ’ವೆಂತಲೂ ಕಸ್ತೂರಿ ರಂಗನ್ ವರದಿಯಲ್ಲಿ ವಿಂಗಡಿಸಲಾಗಿದೆ.
ನೈಸರ್ಗಿಕ ವಲಯವೆಂದರೆ ಸಂಪೂರ್ಣವಾಗಿ ಅರಣ್ಯ ಇಲಾಖೆಯ ಅಧೀನಕ್ಕೊಳಪಟ್ಟಿರುವ ಭೂಭಾಗ. ಇಲ್ಲಿ ಆದಿವಾಸಿಗಳನ್ನು ಬಿಟ್ಟರೆ ಬೇರೆ ಜನವಸತಿ ಇಲ್ಲ. ಸಾಂಸ್ಕೃತಿಕ ವಲಯವೆಂದರೆ ಖಾಸಗಿ ಭೂ ಒಡೆತನವಿದ್ದು, ಕೃಷಿಗೆ ಒಳಪಟ್ಟಿರುವ ಭೂಪ್ರದೇಶ. ಒಟ್ಟಾರೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಐವತ್ತು ಮಿಲಿಯ, ಅಂದರೆ ಐದು ಕೋಟಿಯಷ್ಟು ಜನವಸತಿ ಇದೆಯೆಂದು ಕಸ್ತೂರಿ ರಂಗನ್ ವರದಿ ಹೇಳುತ್ತದೆ. ಈ ಜನಸಂಖ್ಯೆಯಲ್ಲಿ ಬಹುತೇಕರು ಕೃಷಿಕರಾಗಿದ್ದು, ಉಳಿದಂತೆ ಕೃಷಿ ಕಾರ್ಮಿಕರು, ಕುಶಲಕರ್ಮಿಗಳು ಹಾಗೂ ಆದಿವಾಸಿಗಳಿದ್ದಾರೆ. ಇಲ್ಲಿ ಕೃಷಿಗೆ ಪೂರಕವಾದ ವ್ಯಾಪಾರ ವಹಿವಾಟು ಹಾಗೂ ಸಣ್ಣ ಕೈಗಾರಿಕಾ ಘಟಕಗಳು ಇರುವಂಥ ಸಣ್ಣ ನಗರ ಹಾಗೂ ಪಟ್ಟಣಗಳೂ ಇವೆಯೆಂದು ಬೇರೆ ಹೇಳಬೇಕಾಗಿಲ್ಲ. ಹಿಮಾಲಯಕ್ಕಿಂತ ಮೊದಲೇ ಪಶ್ಚಿಮಘಟ್ಟ ಸಾಲುಗಳು ಅಸ್ತಿತ್ವಕ್ಕೆ ಬಂದಿವೆಯೆಂದು ಹೇಳಲಾಗುತ್ತಿದೆ.
ಹವಾ ನಿಯಂತ್ರಿತ ಕೊಠಡಿಯಲ್ಲಿ ಸಿದ್ಧಪಡಿಸಿದ ವರದಿ

ಪಶ್ಚಿಮಘಟ್ಟಗಳ ಗಡಿಯನ್ನು ಸ್ಪಷ್ಟವಾಗಿ ಗುರುತಿಸಬೇಕಾದುದು ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ಸಮಿತಿಗಳ ಜವಾಬ್ದಾರಿಯಾಗಿತ್ತು. ಅದಕ್ಕಾಗಿ ಸ್ಥಳ ಪರಿಶೀಲನೆ ಮತ್ತು ಹದ್ದುಬಸ್ತು ಸರ್ವೆ ನಡೆಸಬೇಕಾದ ಅಗತ್ಯವಿತ್ತು. ಅಲ್ಲದೆ ಪಶ್ಚಿಮ ಘಟ್ಟಗಳ ವಲಯದಲ್ಲಿ ತಲೆತಲಾಂತರದಿಂದ ಬದುಕು ಕಟ್ಟಿಕೊಂಡಿರುವ ಐದು ಕೋಟಿಯಷ್ಟಿರುವ ವಿವಿಧ ಜನಸಮುದಾಯಗಳ ಜೊತೆ ಕೂಲಂಕಷ ಚರ್ಚೆಯ ನಂತರವೇ ವರದಿಯನ್ನು ತಯಾರಿಸಬೇಕಾಗಿತ್ತು. ಆದರೆ ಈ ಎರಡೂ ಸಮಿತಿಗಳು ಸ್ಥಳ ಪರಿಶೀಲನೆಯನ್ನಾಗಲೀ, ಸರ್ವೆ ನಡೆಸುವುದಾಗಲೀ ಮಾಡದೆ, ಕೇವಲ ಸರಕಾರಿ ದಾಖಲೆಗಳನ್ನು ತರಿಸಿಕೊಂಡು ಹವಾನಿಯಂತ್ರಿತ ಕೊಠಡಿಯಲ್ಲಿ ಆಸೀನರಾಗಿ, ಪರಿಸರ ರಕ್ಷಣೆಯ ಸೋಗಿನಲ್ಲಿ ದಂಧೆ ನಡೆಸುತ್ತಿರುವ ಹಲವಾರು ಲಾಭಕೋರ ಸರಕಾರೇತರ ಸಂಸ್ಥೆ(ಎನ್‌ಜಿಓ)ಗಳ ಮೂಗಿನ ನೇರಕ್ಕೆ ವರದಿಯನ್ನು ತಯಾರಿಸಿರುವಂತೆ ಕಾಣುತ್ತದೆ.
5 ಕೋಟಿ ಜನರಲ್ಲಿ ಹೆಚ್ಚಿನವರ ಜೀವನೋಪಾಯ ಕೃಷಿಯೇ ಆಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೃಷಿಯೆಂದರೆ ಕೇವಲ ಬೇಸಾಯ ಮಾತ್ರವಲ್ಲ, ಅದರೊಡನೆ ನಮ್ಮ ಪರಂಪರೆ, ಸಂಸ್ಕೃತಿ, ಆಚಾರವಿಚಾರ ಎಲ್ಲವೂ ತಳುಕು ಹಾಕಿಕೊಂಡಿರುತ್ತದೆ. ಕೃಷಿ ವ್ಯಾಪಕವಾಗಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾಲವಿದು. ಹೀಗಿರುವಾಗ ಪಶ್ಚಿಮಘಟ್ಟದಲ್ಲಿ ಮುಖ್ಯ ಹಿತಾಸಕ್ತಿ ಹೊಂದಿರುವ ಜನ ಸಮುದಾಯಗಳ ಜೊತೆ ಚರ್ಚೆಯನ್ನೇ ಮಾಡದೆ ಅವರನ್ನು ಸಂಪೂರ್ಣ ಕತ್ತಲೆಯಲ್ಲಿಟ್ಟು, ಯಾವುದೋ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ತಯಾರಿಸಿದಂತಿರುವ, ಪಶ್ಚಿಮಘಟ್ಟ ನಿವಾಸಿಗಳ ಮೇಲೆ ಹೇರಲಾಗುತ್ತಿರುವ ವರದಿಗಳನ್ನು ಜನ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳಬೇಕೆ? ಅಥವಾ ಅದನ್ನು ಧಿಕ್ಕರಿಸಬೇಕೇ? ಎಂಬುದೇ ಇಂದು ಪಶ್ಚಿಮಘಟ್ಟ ನಿವಾಸಿಗಳ ಮುಂದಿರುವ ಸವಾಲಾಗಿದೆ.
ಪಶ್ಚಿಮಘಟ್ಟ ಹಾಗೂ ಪರಿಸರ ರಕ್ಷಣೆಯೂ, ಸೋಗಿನ ‘ಪರಿಸರವಾದಿ’ಗಳೂ
ಈ ಭೂಗೋಳದ ಪರಿಸರ ಹಿಂದೆಂದೂ ಇರದಿದ್ದ ಪ್ರಮಾಣದಲ್ಲಿ ಅಪಾಯಕ್ಕೆ ಗುರಿಯಾಗಿದೆ, ಅದನ್ನು ಎಷ್ಟೇ ಕಷ್ಟವಾದರೂ ಸರಿ ಸಂರಕ್ಷಣೆ ಮಾಡಲೇಬೇಕು, ಅದಕ್ಕಾಗಿ ಸುಸ್ಥಿರ ಕೃಷಿ, ಸುಸ್ಥಿರ ಬದುಕು ರೂಪಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ಯಾರದೂ ತಕರಾರಿರಲು ಸಾಧ್ಯವಿಲ್ಲ. ಆದರೆ, ಆಯಾ ಪರಿಸರದೊಳಗೆ ಅನಾದಿ ಕಾಲದಿಂದಲೂ ಬದುಕುತ್ತಾ ಅದನ್ನು ಬಳಕೆ ಮಾತ್ರವಲ್ಲ, ಸಂರಕ್ಷಣೆ ಕೂಡ ಮಾಡುತ್ತಾ ಬಂದಿರುವ ಅಲ್ಲಿನ ಜನಸಮುದಾಯಗಳ ಸಂಪರ್ಕವೇ ಇಲ್ಲದೆ, ಅವರ ಬಗ್ಗೆ ಕನಿಷ್ಠಮಟ್ಟದ ಕಾಳಜಿಯೂ ಇಲ್ಲದೆ, ಪರಿಸರವೆಂದರೆ ಗಿಡಮರ, ಪ್ರಾಣಿಪಕ್ಷಿಗಳು ಮಾತ್ರ ಎಂಬಂತೆ ಪ್ರತಿಪಾದಿಸುತ್ತಿರುವವರನ್ನು ಮಾತ್ರ ಒಪ್ಪಲು ಸಾಧ್ಯವೇ ಇಲ್ಲ. ಇಂಥವರನ್ನು ಸಾಮಾಜಿಕ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆಯವರು `ಆಂಗ್ಲ ಮಾಧ್ಯಮ ಪರಿಸರವಾದಿ’ಗಳೆಂದು ಬಣ್ಣಿಸುವುದು ಸರಿಯಾಗಿಯೇ ಇದೆ. ಪರಿಸರವಾದದ ಸೋಗಿನಲ್ಲಿ ವಿದೇಶಿ ದೇಣಿಗೆ ಪಡೆದು ಸರಕಾರೇತರ ಸಂಸ್ಥೆ(ಎನ್‌ಜಿಓ)ಗಳನ್ನು ಕಟ್ಟಿಕೊಂಡು, ಬೆವರಿಳಿಸದೆ ಮೋಜಿನ ಜೀವನ ನಡೆಸುತ್ತಿರುವ ವಂಚಕರ ಜಾಲ ಇದು.
ಆದರೆ ಈ ಮಾತನ್ನು ಆಧುನಿಕ ನಾಗರಿಕತೆಯ ಬುದ್ಧಿವಂತ ಜನ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಏಕೆಂದರೆ ಈ ಪರಿಸರವಾದಿಗಳು ಅತ್ಯಂತ ಪ್ರಭಾವಶಾಲಿಗಳು, ಮಾತಿನ ಮಂಟಪ ಕಟ್ಟಿ ಜನರನ್ನು ಮರುಳು ಮಾಡುವುದರಲ್ಲಿ ನಿಸ್ಸೀಮರು. ನ್ಯಾಯಾಂಗ ಕೂಡ ಹಲವು ಪ್ರಸಂಗಗಳಲ್ಲಿ ಹಿಂದುಮುಂದು ನೋಡದೆ, ಈ ಸೋಗಿನ ಪರಿಸರವಾದಿಗಳ ಪರವಾಗಿ ತೀರ್ಪು ನೀಡಿರುವ ಅದೆಷ್ಟೋ ಉದಾಹರಣೆಗಳಿವೆ. ಇಡೀ ಸಮಾಜವಿಂದು ‘ಪರಿಸರ ಫೋಬಿಯಾ’ ಎಂಬ ಸಾಂಕ್ರಾಮಿಕ ರೋಗದಿಂದ ನರಳುವಂತೆ ಮಾಡಿಬಿಟ್ಟಿದ್ದಾರೆ ಅವರು. ಹೀಗಾಗಿ ಈ ಸೋಗಿನ ಪರಿಸರವಾದಿಗಳ ವಂಚನೆಯ ಜಾಲದ ಬಗ್ಗೆ ಹಾಗೂ ಅವರ ಸಮಾಜಘಾತಕ ಚಟುವಟಿಕೆಗಳ ಬಗ್ಗೆ ಅಲ್ಲಗಳೆಯಲಾಗದ ಆಧಾರಗಳನ್ನು ಮುಂದಿಡಬೇಕಾಗುತ್ತದೆ.
ಇಂತಹ ಹಲವು ನಕಲಿ ಪರಿಸರವಾದಿಗಳು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡು ಅಕ್ರಮ ಸಂಭಾವನೆ ಗಳಿಸುತ್ತಿದ್ದಾರೆಂಬ ಆರೋಪ ವ್ಯಾಪಕವಾಗಿ ಕೇಳಿಬಂದಾಗ, ಆ ಬಗ್ಗೆ ವಿಚಾರಣೆ ನಡೆಸಲು ಕರ್ನಾಟಕ ಸರಕಾರವು ಆಜ್ಞೆ ನಂ. ಎಫ್.ಇ.ಇ. 239 ವರ್ಷ 1999, ತಾ. 16-6-2000ದಂತೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ನೇತೃತ್ವದಲ್ಲಿ ರಚಿಸಿದ್ದ ತಜ್ಞರ ಸಮಿತಿಯು ಆಮೂಲಾಗ್ರ ತನಿಖೆ ನಡೆಸಿ Principal Chief Conservator of Forest – Wild Life & Chief Wildlife Warden ಇವರಿಗೆ 2004ನೇ ಇಸವಿಯಲ್ಲಿಯೇ ವರದಿಯನ್ನು ಸಲ್ಲಿಸಿದೆ. ಆ ವರದಿಯ ಪ್ರತಿ ಲಭ್ಯವಿದೆ. ಯಾರು ಬೇಕಾದರೂ ಈ ವರದಿಯನ್ನು ಓದಿ ಸತ್ಯವನ್ನು ತಿಳಿದುಕೊಳ್ಳಬಹುದು.
ಈ `ಪರಿಸರವಾದಿ’ ಎನ್‌ಜಿಓಗಳ ಅಕ್ರಮಗಳ ಒಂದು ಉದಾಹರಣೆ ನೀಡಬೇಕೆಂದರೆ, ನಾಗರಹೊಳೆ ಅಭಯಾರಣ್ಯ ಯೋಜನೆಯಿಂದ ನಿರ್ವಸಿತರಾದ ಆದಿವಾಸಿಗಳಿಗೆ ಹತ್ತಿರದ ವೀರನಹೊಸಳ್ಳಿ ಎಂಬಲ್ಲಿ ಸಂಪೂರ್ಣ ಕೇಂದ್ರ ಸರಕಾರದ ಯೋಜನೆಯಡಿ ಮಾಡಲಾಗಿರುವ ಪುನರ್ ವಸತಿ ವ್ಯವಸ್ಥೆಯನ್ನು ಒಂದು ಎನ್‌ಜಿಓ ತಾನು ಮಾಡಿದ್ದೆಂದು ವರದಿ ತಯಾರಿಸಿ, ಒಂದೇ ವರ್ಷ 60,000 ಡಾಲರ್ ವಿದೇಶಿ ಹಣ ಲಪಟಾಯಿಸಿದ್ದು ಒಂದಲ್ಲ ಹಲವಾರು ಉನ್ನತ ಮಟ್ಟದ ತನಿಖಾ ವರದಿಗಳಿಂದ ಬೆಳಕಿಗೆ ಬಂದಿದೆ. ಹೀಗೆ ಈ ವಂಚಕ ಪರಿಸರವಾದಿ ಗುಂಪುಗಳ ಅಕ್ರಮಗಳನ್ನು ಹಲವು ಉನ್ನತ ಮಟ್ಟದ ತನಿಖಾ ವರದಿಗಳು ಬಹಿರಂಗಪಡಿಸಿದ್ದರೂ ಸಹ, ಅವುಗಳ ವಿರುದ್ಧ ಯಾವ ಕ್ರಮವನ್ನೂ ಜರುಗಿಸಲಾಗಿಲ್ಲ, ಎಲ್ಲಾ ವರದಿಗಳು ಕಸದ ಬುಟ್ಟಿಗೆ ಸೇರಿಹೋಗಿವೆಯೆಂದರೆ ಇವರು ಅದೆಂತಹ ಪ್ರಭಾವಶಾಲಿಗಳೆಂದು ತಿಳಿದುಕೊಳ್ಳಬಹುದು.
ಅದೇರೀತಿ, ಕೆಲವು ಎನ್‌ಜಿಓಗಳ ವಂಚನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಿದ, ವನ್ಯಜೀವಿ ವಿಭಾಗದ Wild Life Warden ಆಗಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಕೆ. ಚಕ್ರವರ್ತಿ ಅವರು ಕೇಂದ್ರದ Inspector General of Forests and Director Project Tiger ಅವರಿಗೆ ಸಲ್ಲಿಸಿದ 17-4-2003ರ ಸಮಗ್ರ ವರದಿಯ ಅಂತಿಮ ಭಾಗ ಈ ಕೆಳಗಿನಂತಿದೆ: ‘ತಮ್ಮ ಪತ್ರದಲ್ಲಿ ತಿಳಿಸಿರುವ 3 ಯೋಜನೆಗಳಿಗೆ ಸಂಬಂಧಿಸಿದಂತೆ ಬಹು ನಿಕಟವಾಗಿ ಒಳಸಂಬಂಧ ಹೊಂದಿರುವ ಎನ್‌ಜಿಓಗಳ ಕ್ಲೇಮ್‌ಗಳನ್ನು ವಿವರವಾಗಿ ಪರಿಶೀಲಿಸಿದ ನಂತರ ನನ್ನ ನಿರ್ಣಯ ಹೀಗಿದೆ – ಇದೊಂದು ವಿದೇಶಿ ದೇಣಿಗೆಗಳನ್ನು ಪಡೆಯಲು ಹೆಣೆದಿರುವ ವ್ಯವಸ್ಥಿತವಾದ, ಸಂಘಟಿತವಾದ ಪ್ರಯತ್ನವಾಗಿದೆ. … ಅದೇನೂ ಅವುಗಳ ವರದಿಯಲ್ಲಿ ಬಿಂಬಿಸಲಾಗಿರುವಂತೆ ವನ್ಯಜೀವಿ ಸಂರಕ್ಷಣೆಯ ಹಿತಾಸಕ್ತಿಯನ್ನು ಹೊಂದಿರುವಂಥದ್ದಲ್ಲ. ಈ ಸಂಸ್ಥೆಗಳು ಯಾವಾಗಲೂ ತಾವೇ ತಯಾರಿಸುವ ಸೊಗಸಾದ ವರದಿಗಳಲ್ಲಿ ಅರಣ್ಯ ಇಲಾಖೆಯ ಪ್ರಯತ್ನಗಳನ್ನು ತಮ್ಮ ಅಮೋಘವಾದ ಸಾಧನೆಗಳೆಂದು ಬಿಂಬಿಸಿ, ತಮಗೆ ದೇಣಿಗೆ ನೀಡುವವರನ್ನು ವಂಚಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ……’
ಪಶ್ಚಿಮ ಘಟ್ಟಗಳ ಪರಿಸರ ನಾಶಕ್ಕೆ ಅರಣ್ಯ ಇಲಾಖೆಯೇ ಪ್ರಧಾನ ಹೊಣೆ
ಪಶ್ಚಿಮಘಟ್ಟದಲ್ಲಿ ಅರಣ್ಯ ನಾಶ ಮಾಡಲಾಗಿದ್ದರೆ ಅದು ಖಂಡಿತ ಜನಸಾಂದ್ರತೆಯ ಒತ್ತಡದಿಂದಲ್ಲ. ಅದು ಅರಣ್ಯ ಇಲಾಖೆಯ ದುರಾಡಳಿತ, ಭ್ರಷ್ಟಾಚಾರ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದಲ್ಲದೆ ಬೇರೆ ಯಾವ ಕಾರಣದಿಂದಲೂ ಅಲ್ಲ. ಸಾಂಸ್ಕೃತಿಕ ವಲಯದಲ್ಲಿ ಹಸಿರು ಬೆಳೆಸುವುದಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮವನ್ನು ಜಾರಿಗೊಳಿಸಬೇಕೆಂದು ಗಾಡ್ಗೀಳ್ ಸಮಿತಿ ವರದಿ ಹೇಳುತ್ತದಾದರೂ ಹಾಗೆ ಮರಗಳನ್ನು ಬೆಳೆಸಲು ಉತ್ತೇಜನ ನೀಡುವ ಯಾವುದೇ ಯೋಜನೆಯನ್ನೂ ಇಲ್ಲಿ ಮಾತ್ರವಲ್ಲ ಎಲ್ಲಿಯೂ ಜಾರಿಗೊಳಿಸಿಲ್ಲ. ಸಾಂಸ್ಕೃತಿಕ ವಲಯದಲ್ಲಿ ಮರ ಬೆಳೆಸುವುದಕ್ಕೆ ಅನೇಕ ನಿರ್ಬಂಧಗಳು ಇಲಾಖೆಯಿಂದ ಹೇರಲ್ಪಟ್ಟಿದ್ದು, ಜಮೀನು ಮಾಲಿಕರು ಮರ ಬೆಳೆಸಿದರೂ ಹಲವು ಕಿರುಕುಳಗಳನ್ನು ಎದುರಿಸಿ, ಜೈಲು ಸೇರಬೇಕಾದ ಪರಿಸ್ಥಿತಿ ಕೊಡಗಿನಲ್ಲಂತೂ ಎದುರಾಗಿದೆ. ಹೀಗಿದ್ದಾಗ ಖಾಸಗಿ ಜಮೀನಿನಲ್ಲಿ ಮರ ಬೆಳೆಸುವುದಾದರೂ ಹೇಗೆ? ಕೃಷಿ ವಲಯದಲ್ಲಿ ಮರ ಬೆಳೆಸಿದರೆ ಜೈಲು ಸೇರಬೇಕಾದ ಪರಿಸ್ಥಿತಿಯನ್ನು ಇರುವ ಕಾನೂನಿನಲ್ಲಿಯೇ ಇಲಾಖೆಯವರು ನಿರ್ಮಿಸಿದ್ದಾರೆಂದ ಮೇಲೆ, ಗಾಡ್ಗೀಳ್, ಕಸ್ತೂರಿ ರಂಗನ್ ವರದಿಗಳು ಜಾರಿಯಾದಲ್ಲಿ ಕೃಷಿಕರಿಗೆ ಕಿರುಕುಳ ನೀಡುವುದಕ್ಕೆ ಅರಣ್ಯ ಅಧಿಕಾರಿಗಳಿಗೆ ಇನ್ನೊಂದು ಅಸ್ತ್ರ ದೊರೆತಂತೆಯೇ. ಹಾಗಾದಲ್ಲಿ ಕೃಷಿಕರ ಗತಿಯೇನು ಎಂಬುದನ್ನು ಊಹಿಸಲು ಸಾಧ್ಯವಿಲ್ಲ.
ಕಾಫಿ ಮತ್ತು ಏಲಕ್ಕಿ ಕೃಷಿಗಿಂತ ಪರಿಸರಸ್ನೇಹಿ ಕೃಷಿ ಮತ್ತೊಂದಿಲ್ಲ. ಅಡಿಕೆ ತೋಟಗಳಂತೂ ಅವೇ ಒಂದು ಅರಣ್ಯದಂತೆ ವರ್ತಿಸುತ್ತವೆ. ಪಶ್ಚಿಮ ಘಟ್ಟಗಳ ಸಾಂಸ್ಕೃತಿಕ ವಲಯದಲ್ಲಿ ಕೃಷಿ ಚಟುವಟಿಕೆ ಇರುವ ಕಡೆ ಮಾತ್ರ ಇಂದಿಗೂ ಪರಿಸರ ಸಮೃದ್ಧವಾಗಿಯೇ ಇದೆ ಎನ್ನುವುದಕ್ಕೆ ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಗಳೇ ಸಾಕ್ಷಿ ನುಡಿಯುತ್ತವೆ. ಇಲ್ಲಿಯವರೆಗೆ ಉತ್ತಮವಾಗಿಯೇ ಇದ್ದ ಪರಿಸರವನ್ನು ಮುಂದೆ ಕೂಡ ಉಳಿಸಿಕೊಂಡು ಬೆಳೆಸಿಕೊಂಡು ಬರುವುದಕ್ಕೆ ಯಾವ ವರದಿಗಳ ಅನುಷ್ಠಾನದ ಅಗತ್ಯವೂ ಇಲ್ಲ. ಅದಕ್ಕೆ ಬೇಕಾಗಿರುವುದು ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುವ ಜನ ತಮ್ಮನ್ನು ತೊಡಗಿಸಿಕೊಳ್ಳುವುದು. ಈ ದಿಸೆಯಲ್ಲಿ ಪಶ್ಚಿಮಘಟ್ಟಗಳ ಸಾಂಸ್ಕೃತಿಕ ವಲಯದ ಬೆನ್ನೆಲುಬು ಆಗಿರುವ ಕೃಷಿಕ ವರ್ಗ ಮತ್ತು ಕೃಷಿಯನ್ನು ಅವಲಂಬಿಸಿರುವ ಇನ್ನಿತರ ಜನಸಮುದಾಯಗಳ ಜೊತೆ ವ್ಯಾಪಕ ಸಂವಾದದ ಅಗತ್ಯವಿದೆ.

ಆದರೆ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ಈ ಜನಗಳನ್ನು ಗಮನಕ್ಕೆ ತೆಗೆದುಕೊಳ್ಳದೆ, ಅವರನ್ನು ಕತ್ತಲಿನಲ್ಲಿಟ್ಟು ವರದಿ ತಯಾರಿಸಿರುವುದು ಸ್ಪಷ್ಟವಾಗಿದೆ. ಅರಣ್ಯ ನಾಶವಾಗಿರುವುದು, ಅರಣ್ಯ ಇಲಾಖೆಯ ವಶದಲ್ಲಿರುವ ಜನವಸತಿ ಕೂಡ ಇಲ್ಲದಿರುವ ನೈಸರ್ಗಿಕ ವಲಯದಲ್ಲಿ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಮೀಸಲು ಅರಣ್ಯ ಮಾತ್ರವಲ್ಲ, ವನ್ಯಜೀವಿ ವಿಭಾಗದಲ್ಲಿ ಕೂಡ ವ್ಯಾಪಕವಾಗಿ ಅರಣ್ಯ ಇಲಾಖೆಯವರೇ ತೇಗದ ಮರಗಳನ್ನು, ರಬ್ಬರ್, ಅಕೇಶಿಯಾ, ನೀಲಗಿರಿ ಗಿಡಗಳನ್ನು ನೆಟ್ಟಿದ್ದಾರೆ. ಆದರೆ ಈ ಬಗ್ಗೆ ಗಾಡ್ಗೀಳ್ ವರದಿಯಾಗಲಿ, ಕಸ್ತೂರಿ ರಂಗನ್ ವರದಿಯಾಗಲಿ ಚಕಾರವೆತ್ತಿಲ್ಲ. ಜೊತೆಗೆ ಪ್ರತೀ ವರ್ಷ ಅರಣ್ಯಗಳಿಗೆ ಬೆಂಕಿ ಬಿದ್ದು ಲಕ್ಷಾಂತರ ಎಕರೆ ಕಾಡು ನಾಶವಾಗುತ್ತದೆ. ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯವರೇ ಶಾಮೀಲಾಗಿ ವ್ಯಾಪಕವಾಗಿ ಅಕ್ರಮ ಗಾಂಜಾ ಬೆಳೆಸಿ ಅರಣ್ಯ ನಾಶ ಮಾಡಿರುವ ಉದಾಹರಣೆಗಳೂ ಇವೆ. ಅರಣ್ಯ/ಪರಿಸರ ನಾಶಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ಆಳವಾದ, ವಾಸ್ತವಿಕ ನೆಲೆಯ ಅಧ್ಯಯನ ಮಾಡಬೇಕಾದುದು ಈ ಸಮಿತಿಗಳ ಕರ್ತವ್ಯವಾಗಿತ್ತು. ಆದರೆ ಅವು ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ, ಅರಣ್ಯ ನಾಶಕ್ಕೆ ಜನಸಾಂದ್ರತೆಯ ಒತ್ತಡ ಕಾರಣ ಎಂದು ಹೇಳಿ ಕೈತೊಳೆದುಕೊಂಡಿರುವುದು ಅಮಾನವೀಯ ಎನ್ನಲೇಬೇಕಾಗಿದೆ.
ಪಶ್ಚಿಮಘಟ್ಟ ವಲಯದಲ್ಲಿ ಕೃಷಿ ಇರಬೇಕೋ, ಬೇಡವೋ ಎನ್ನುವುದನ್ನು ಮೊದಲು ನಿಶ್ಚಯಿಸಬೇಕು. ಕೃಷಿ ಬೇಡ ಎನ್ನುವುದಾದರೆ ಅದನ್ನು ಅವಲಂಬಿಸಿಕೊಂಡು ಬಾಳಿ ಬದುಕುತ್ತಿರುವ ಜನರಿಗೆ ಏನು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ ಎನ್ನುವುದು ತಿಳಿಯಬೇಕಾಗಿದೆ. ಕೃಷಿ ಬೇಕೆನ್ನುವುದಾದರೆ, ಕೃಷಿ ಬಿಕ್ಕಟ್ಟು ಪರಿಹಾರಕ್ಕೆ ಅಗತ್ಯವಿರುವ ಎಲ್ಲಾ ಉತ್ತೇಜನಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಯಾವ ಪರಿಸರಸೂಕ್ಷ್ಮ ಪ್ರದೇಶ ಕೂಡ ಕೃಷಿ ಚಟುವಟಿಕೆಗೆ ಅಡ್ಡಗಾಲು ಹಾಕುವಂತಿರಬಾರದು. ಈ ಕಾರಣದಿಂದ ಪಶ್ಚಿಮ ಘಟ್ಟ ಪ್ರದೇಶದ ಕೃಷಿಕರು, ಕೃಷಿ ಕಾರ್ಮಿಕರು, ಕುಶಲಕರ್ಮಿಗಳು ಹಾಗೂ ಆದಿವಾಸಿಗಳು ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುತ್ತಾರೆ.
ಈ ಚಳವಳಿಯನ್ನು ಹತ್ತಿಕ್ಕುವ ದುರುದ್ದೇಶದಿಂದಲೇ `ಟಿಂಬರ್ ಲಾಬಿ’, ‘ಗಣಿಗಾರಿಗೆ ಲಾಬಿ’ ಎಂದೆಲ್ಲಾ ಕಪೋಲ ಕಲ್ಪಿತ ಕಟ್ಟುಕತೆಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿ ಮಾಡಿಕೊಂಡು ಬಂದಿವೆ. ಯಾವ ದೃಷ್ಟಿಯಿಂದ ನೋಡಿದರೂ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿ ಕೃಷಿಕ ವರ್ಗದವರಿಗೆ ಸ್ವೀಕಾರ ಯೋಗ್ಯವಲ್ಲ. ಈ ವರದಿಗಳನ್ನು ನೈಸರ್ಗಿಕ ವಲಯದಲ್ಲಿ ಜಾರಿ ಮಾಡುವುದಕ್ಕೆ ಯಾರ ವಿರೋಧವೂ ಇರಲಾರದು. ಆದರೆ ಹಾಗೆ ಜಾರಿ ಮಾಡುವಾಗ ಕೃಷಿ ಚಟುವಟಿಕೆಗೆ ಧಕ್ಕೆ ಆಗದ ಹಾಗೆ ನಿಗಾ ವಹಿಸುವ ಅಗತ್ಯವಿದೆ. ಹಾಗಾಗಿ ಬಫರ್ ಜೋನ್ ಶೂನ್ಯವಾಗಿರಬೇಕು. ಹೀಗೆ ಕೃಷಿ ಚಟುವಟಿಕೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಭದ್ರತೆ ಒದಗಿಸುವ ಮೂಲಕ ಯಾವ ವರದಿ ಜಾರಿ ಮಾಡಿದರೂ ಕೃಷಿಕರು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೆ ಮಾಡದೆ, ಈ ವರದಿಗಳನ್ನು ಜನಗಳ ಮೇಲೆ ಹೇರುವುದರಿಂದ ಪರಿಸರವನ್ನು ಉಳಿಸುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಸರಕಾರಗಳು ಅರ್ಥಮಾಡಿಕೊಂಡು ವ್ಯವಹರಿಸುವ ಅವಶ್ಯಕತೆ ಇದೆ.
ಕಸ್ತೂರಿ ರಂಗನ್ ವರದಿಗೆ ವಿರೋಧ ಏಕೆ?
ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳಲ್ಲಿ ಕೃಷಿಯನ್ನು ನಾಶ ಮಾಡಿ ಇಡೀ ವಲಯವನ್ನು ಅರಣ್ಯವನ್ನಾಗಿಸಿ ಅದರ ಆಡಳಿತದ ಮೇಲೆ ಪ್ರಭುತ್ವ ಸಾಧಿಸುವ ಪಿತೂರಿಯನ್ನು ನಕಲಿ ಪರಿಸರವಾದಿಗಳು ಮತ್ತು ಭ್ರಷ್ಟ ಅರಣ್ಯ ಅಧಿಕಾರಿಗಳ ಕೂಟ ರೂಪಿಸಿರುವಂತೆ ಭಾಸವಾಗುತ್ತಿದೆ. ಈ ಪಿತೂರಿಯ ಅಂಗವಾಗಿಯೇ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜೋಡಿಯಾಗಿ ಕೃಷಿಕರಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದಾರೆಂದು ತಿಳಿಯಬೇಕಾಗಿದೆ.
ಕೊಡಗಿನ ಮಟ್ಟಿಗೆ ಹೇಳುವುದಾದರೆ ಕೃಷಿಕರು ತಮ್ಮ ಸ್ವಂತ ಜಮೀನಿನಲ್ಲಿ ಮರ ಬೆಳೆಸುವುದು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತಂದೊಡ್ಡಿದ್ದಾರೆ. ಕೃಷಿಕ ತನ್ನ ಸ್ವಂತ ಜಮೀನಿನಲ್ಲಿ ನೆಟ್ಟು ಬೆಳೆಸಿದ ಮರದ ಮೇಲೆ ಅವನಿಗೆ ಯಾವ ಹಕ್ಕೂ ಇಲ್ಲದೆ, ಇಲ್ಲಸಲ್ಲದ ಕಿರುಕುಳ ಅಧಿಕಾರಿಗಳಿಂದ ಎದುರಾಗುತ್ತಿರುವುದು ನಿತ್ಯದ ವ್ಯವಹಾರವಾಗಿದೆ. ಉದ್ದೇಶ ಪೂರ್ವಕವಾಗಿಯೇ ಕಾಡನ್ನು ನಾಶ ಮಾಡಿ, ಪ್ರಾಣಿಗಳನ್ನು ನಾಡಿಗೆ ಅಟ್ಟಿ ಕೃಷಿಕರ ವ್ಯವಸಾಯಕ್ಕೆ ಅಡಚಣೆ ಉಂಟುಮಾಡಲಾಗುತ್ತಿದೆ. ಕೊಡಗು ಕರ್ನಾಟಕದ ಭಾಗವಾದ ನಂತರ ಕೊಡಗಿನಲ್ಲಿ ಖಾಸಗಿ ಜಮೀನುಗಳು ಇಲ್ಲವೆಂದೂ, ಎಲ್ಲವೂ ಅರಣ್ಯವಾಗಿದ್ದು ಸರಕಾರಕ್ಕೆ ಸೇರಿದ ಜಮೀನು ಎಂಬ ವಾದವನ್ನು ಮುಂದಿಟ್ಟುಕೊಂಡು ಕೃಷಿಕರನ್ನು ನಾನಾ ರೀತಿಯ ಕಿರುಕುಳಕ್ಕೆ ಒಳಪಡಿಸಲಾಗುತ್ತಿದೆ. ಹಳೆಯ ಕಾನೂನುಗಳೆಲ್ಲವೂ ರದ್ದಾಗಿ ಇಡೀ ಕರ್ನಾಟಕಕ್ಕೆ ಅನ್ವಯವಾಗುವ 1964ರ ಕಂದಾಯ ಕಾನೂನು ಜಾರಿಯಾದ ನಂತರವೂ ಅಧಿಕಾರಿಗಳು ತಮ್ಮ ಕುಚೋದ್ಯವನ್ನು ಇನ್ನೂ ಮುಂದುವರೆಸುತ್ತಿರುವುದು ಸಾಮಾನ್ಯ ಕೃಷಿಕರನ್ನು ಕಂಗೆಡಿಸುತ್ತಿದೆ.
ಕೊಡಗಿನಲ್ಲಿ ಕಾಫಿ ಬೆಳೆ ಎಂದರೆ ಭಾರಿ ಭೂಮಾಲಿಕರು, ಅವರೆಲ್ಲರೂ ಅರಣ್ಯ ಭೂಮಿಯನ್ನು ಕಬಳಿಸಿಕೊಂಡು ಕಾಫಿ ತೋಟ ಮಾಡಿಕೊಂಡಿದ್ದಾರೆ ಎಂದು ಒಂದು ಕಡೆ ವ್ಯವಸ್ಥಿತವಾಗಿ ಬಿಂಬಿಸಲಾಗುತ್ತಿದೆ. ಇದರೊಡನೆ `ಟಿಂಬರ್ ಲಾಬಿ’ ಎಂಬ ಇಲ್ಲದಿರುವ ಪೆಡಂಭೂತವೊಂದನ್ನು ಹುಟ್ಟು ಹಾಕಲಾಗಿದೆ. ಕೊಡಗಿನಲ್ಲಿ ಸಾವಿರಾರು ಎಕರೆ ಕಾಫಿ ತೋಟದ ಮಾಲಿಕತ್ವ ಹೊಂದಿರುವವರೆಂದರೆ ಬ್ರಿಟಿಷರ ಕಾಲದಿಂದಲೇ ಇರುವ ಟಾಟಾ, ಬಿ.ಟಿ.ಟಿ.ಸಿ., ಕೊಠಾರಿ, ಇತ್ಯಾದಿ ಕಾಫಿ ಕಂಪೆನಿಗಳಾಗಿವೆ. ಹಿಡಿಯಷ್ಟು ಜನ ಖಾಸಗಿ ವ್ಯಕ್ತಿಗಳು ನೂರಾರು ಎಕರೆ ಕಾಫಿ ತೋಟದ ಮಾಲಿಕರಾಗಿರಬಹುದು. ಇಂಥವರ ಹಿತಾಸಕ್ತಿಗೆ ಯಾವ ಕಾರಣದಿಂದಲೂ ಇದುವರೆಗೆ ಧಕ್ಕೆ ಉಂಟಾಗಿಲ್ಲ, ಮುಂದೆಯೂ ಉಂಟಾಗುವುದಿಲ್ಲ.
ಕೊಡಗಿನಲ್ಲಿ ನೊಂದಾವಣೆಯಾಗಿರುವ ಕಾಫಿ ತೋಟಗಳು 45,000. ಇವುಗಳಲ್ಲಿ 450 ಮಾತ್ರ ಹತ್ತು ಹೆಕ್ಟೇರಿಗೂ ಹೆಚ್ಚು ಜಮೀನು ಇರುವವರು. ಉಳಿದವರು 5 ಎಕರೆಗಿಂತ ಕಡಿಮೆ ಇರುವ ಸಣ್ಣ ಹಿಡುವಳಿದಾರರಾಗಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಿಂದ ಭಾರಿ ಕುಳಗಳಾದ ಕಾಫಿ ಕಂಪೆನಿಯವರಿಗಾಗಲಿ, ನೂರಾರು ಎಕರೆ ಕಾಫಿ ತೋಟದ ಮಾಲಿಕರಿಗಾಗಲಿ ಯಾವುದೇ ಬಾಧಕವಿಲ್ಲ. ಅದು ಬಾಧಿಸುವುದು ಸಣ್ಣ ಹಿಡುವಳಿದಾರರಾಗಿರುವ ಕಾಫಿ ಕೃಷಿಕರನ್ನು. ಜೊತೆಗೆ ಅವರನ್ನು ಅವಲಂಬಿಸಿರುವ ಕೃಷಿ ಕಾರ್ಮಿಕರು, ಕುಶಲಕರ್ಮಿಗಳು ಹಾಗೂ ಆದಿವಾಸಿಗಳನ್ನು. ಹೀಗಾಗಿ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧವಿರುವುದು ಭಾರಿ ಕಾಫಿ ತೋಟದ ಮಾಲಿಕರಿಂದ ಅಲ್ಲ. ವಿರೋಧ ವ್ಯಕ್ತವಾಗುತ್ತಿರುವುದು ಸಣ್ಣ ಹಿಡುವಳಿದಾರರಾಗಿರುವ ಶ್ರೀಸಾಮಾನ್ಯ ಕೃಷಿಕರಿಂದಾಗಿದೆ.
ಏಕೆಂದರೆ ಈ ವರದಿ ಜಾರಿಯಿಂದ ಬೀದಿಗೆ ಬೀಳುವುದು ಇಂತಹ ಶ್ರೀಸಾಮಾನ್ಯನ ಬದುಕು ಹೊರತು ದೊಡ್ಡ ಕಾಫಿ ತೋಟದ ಮಾಲಿಕರಲ್ಲ. ಕೊಡಗಿನ ಕೃಷಿಕ ವರ್ಗಕ್ಕೆ ನಾನಾ ರೀತಿಯ ಕಿರುಕುಳ ನೀಡುತ್ತಾ ಅವರಿಗೆ ಉಸಿರುಗಟ್ಟುವ ವಾತಾವರಣ ಉಂಟುಮಾಡಿ ಅವರಾಗಿಯೇ ಕೃಷಿಯಿಂದ ಪಲಾಯನ ಮಾಡುವಂತೆ ನೋಡಿಕೊಳ್ಳುವುದಕ್ಕಾಗಿ ಅಧಿಕಾರಿಗಳು ನಕಲಿ ಪರಿಸರವಾದಿಗಳ ಜೊತೆ ಕೈಜೋಡಿಸಿಕೊಂಡು ಆದಿಯಿಂದಲೂ ನಾನಾ ರೀತಿಯ ಕಿರುಕುಳ ನೀಡುತ್ತಾ ಬಂದಿರುವುದು ವಾಸ್ತವ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಕರ ಗೋಳನ್ನು ಮತ್ತಷ್ಟು ಹೆಚ್ಚಿಸಲು ಸಹಾಯಕವಾಗುವ ಮತ್ತೊಂದು ಅಸ್ತ್ರವಾಗಿ ಕಸ್ತೂರಿ ರಂಗನ್ ವರದಿ ದೊರೆತರೆ ಕೊಡಗಿನಲ್ಲಿ ಕೃಷಿ ಚಟುವಟಿಕೆ ನಾಶವಾಗುವುದು ಖಚಿತ. ಆದ್ದರಿಂದಲೇ ‘ಮೊದಲು ಕೃಷಿ ಚಟುವಟಿಕೆ ಹಾಗೂ ಅದಕ್ಕೆ ಪೂರಕವಾಗಿರುವ ಚಟುವಟಿಕೆಗಳಿಗೆ ಭದ್ರತೆ ಒದಗಿಸಬೇಕು. ನಂತರವೇ ಕಸ್ತೂರಿ ರಂಗನ್ ವರದಿ ಅಥವಾ ಇನ್ನಾವುದೇ ವರದಿಯ ಜಾರಿ’ ಎಂಬ ನಿಲುವನ್ನು ಕೊಡಗಿನಲ್ಲಿ ಕೃಷಿಕ ವರ್ಗ ಹಾಗೂ ಶ್ರೀಸಾಮಾನ್ಯ ವರ್ಗ ತಳೆದಿದೆ.
ಗಾಡ್ಗೀಳ್, ರಂಗನ್ ವರದಿಗಳಿಂದ ಪರಿಸರ ರಕ್ಷಣೆ ಸಾಧ್ಯವೆ?
‘ಪಶ್ಚಿಮ ಘಟ್ಟ ಉಳಿಸಿ’ ಎಂಬ ಕೂಗು ಒಂದು ಆಂದೋಳನದ ರೂಪ ತಳೆದಿದೆ. ಪಶ್ಚಿಮಘಟ್ಟ ಉಳಿಸಿ ಎಂದರೆ ಅದಿನ್ನೂ ಅಳಿದಿಲ್ಲ, ಉಳಿದಿದೆ ಎಂದೇ ತಿಳಿಯಬೇಕು. ಪಶ್ಚಿಮ ಘಟ್ಟ ರಕ್ಷಣೆಗಾಗಿ ಬಹುದೊಡ್ಡ ಅರಣ್ಯ ಇಲಾಖೆಯಿದೆ. ಅದರ ಚಟುವಟಿಕೆಗಳಿಗಾಗಿ ಅಪಾರ ಪ್ರಮಾಣದ ಧನರಾಶಿಯನ್ನೇ ಸರಕಾರದ ಚೌಕಟ್ಟಿನಲ್ಲಿಯೇ ಒದಗಿಸಲಾಗುತ್ತಿದೆ. ಪಶ್ಚಿಮ ಘಟ್ಟ ಹಾಗೂ ಅರಣ್ಯ ರಕ್ಷಣೆಗಾಗಿ Wild life protection Act-1972, Karanataka Forest Act-1963, Forest Conservation Act-1980 ಇತ್ಯಾದಿ ಕಾನೂನುಗಳಿವೆ. ಅರಣ್ಯ ಇಲಾಖೆ ಇಷ್ಟೆಲ್ಲಾ ಕಾನೂನುಗಳನ್ನು ಬಳಸಿಕೊಂಡು ಪಶ್ಚಿಮ ಘಟ್ಟ ಉಳಿಸಿಕೊಳ್ಳಲು ಸಾಧ್ಯವಿಲ್ಲವೆ? ಸಾಧ್ಯವಿಲ್ಲ ಎನ್ನುವುದಾದರೆ ಗಾಡ್ಗೀಳ್/ಕಸ್ತೂರಿ ರಂಗನ್ ವರದಿಗಳ ಜಾರಿಯಿಂದ ಪಶ್ಚಿಮ ಘಟ್ಟವನ್ನು ಉಳಿಸುವುದಾದರೂ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಪಶ್ಚಿಮ ಘಟ್ಟದಲ್ಲಿ ಅರಣ್ಯವೇನಾದರೂ ನಾಶವಾಗಿದ್ದರೆ ಅದು ಮುಖ್ಯವಾಗಿ ಅರಣ್ಯ ಇಲಾಖೆಯ ವಶದಲ್ಲಿರುವ ನೈಸರ್ಗಿಕ ವಲಯದಲ್ಲೇ ಹೊರತು ಕೃಷಿ ಚಟುವಟಿಕೆ ಇರುವ ಸಾಂಸ್ಕೃತಿಕ ವಲಯದಲ್ಲಲ್ಲ. ಕೃಷಿ ಪ್ರದೇಶ ಇಂದಿಗೂ ಹಚ್ಚಹಸಿರಾಗಿದ್ದು, ಪರಿಸರ ಉತ್ತಮವಾಗಿಯೇ ಇದೆ ಎಂಬುದನ್ನು ಗಾಡ್ಗೀಳ್, ಕಸ್ತೂರಿ ರಂಗನ್ ವರದಿಗಳೇ ಸಾರುತ್ತಿವೆ.
ಒಂದು ಕಡೆ ಗಾಡ್ಗೀಳ್ ವರದಿ ಈ ಕೆಳಗಿನಂತೆ ಹೇಳುತ್ತದೆ: ‘ಕೊಡಗಿನಲ್ಲಿ ಕಾಫಿ ಹಾಗೂ ಇಡುಕ್ಕಿ ಮತ್ತು ವೈನಾಡಿನಲ್ಲಿ ಏಲಕ್ಕಿ ತೋಟಗಳಂಥ ಪರಿಸರಸ್ನೇಹಿ ಕೃಷಿ ಚಟುವಟಿಕೆಗಳನ್ನು ಉನ್ನತ ಮಟ್ಟದ ಕಾರ್ಯಪಡೆ ಗುರುತಿಸಿದೆ; ಅಲ್ಲಿ ನೈಸರ್ಗಿಕ ವಲಯಗಳೊಳಗೆ ಮಾನವ ವಸತಿಯು ಬೆಸೆದುಕೊಂಡಿದೆ. ನಿಜವಾಗಿ ಹೇಳಬೇಕೆಂದರೆ, ಜನರಿಗೂ ಪ್ರಕೃತಿಗೂ ನಡುವಿರುವ ಇಂತಹ ಅವಿನಾಭಾವ ಸಂಬಂಧದ ಕಾರಣದಿಂದಲೇ ಈ ಕಾರ್ಯಪಡೆಯು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುಸ್ಥಿರ ಮತ್ತು ಸಮಾನ ಅಭಿವೃದ್ಧಿಗೆ ಉತ್ತೇಜನ ನೀಡುವಂತಹ ಹಸಿರಿನ ಬೆಳವಣಿಗೆಗೆ ಉತ್ತೇಜಕವಾಗಬಲ್ಲ ನೀತಿಗಳನ್ನು ಜಾರಿಗೆ ತರುವಂತೆ ಶಿಫಾರಸು ಮಾಡಿದೆ.’ ಹೀಗೆ ದಾಖಲಿಸಿದ ಅದೇ ಕಸ್ತೂರಿ ರಂಗನ್ ವರದಿಯು `ಪಶ್ಚಿಮಘಟ್ಟ ನಾಶವಾಗಿರುವುದು ಜನಸಾಂದ್ರತೆಯ ಒತ್ತಡದಿಂದ’ ಎಂದು ತಿಪ್ಪೆಸಾರಿಸಿ ಬಿಟ್ಟಿರುವುದನ್ನು ನಾವು ಕಾಣುತ್ತೇವೆ.


