ಚುನಾವಣೆ ಸಮರದಲ್ಲಿ ಸುಳ್ಳು ಸಹಜ. ಆದರೆ ಸಾಮಾಜಿಕ ಜಾಲತಾಣಗಳ ಬಳಕೆ ಪ್ರಮಾಣ ಹೆಚ್ಚಾದಂತೆಲ್ಲ ಸುಳ್ಳುಗಳ ಮಹಾಪೂರವೇ ಹರಿದು ಬರುತ್ತಿದ್ದು ರಾಜಕೀಯ, ಏಧರ್ಮಕ್ಕೆ ಸಂಬಂಧಿಸಿದ ಯಾವ ಸುದ್ದಿಯನ್ನೂ ಪರೀಕ್ಷಿಸದೇ ನಂಬುವಂತೆಯೇ ಇಲ್ಲ.
ಅದಿರಲಿ, ಸರ್ಕಾರವೇ ಇಂತಹ ಫೇಕ್ ಫ್ಯಾಕ್ಟರಿಗಳನ್ನು ಪೋಷಿಸತೊಡಗಿದರೆ, ದೇಶದ ಪ್ರಧಾನಿಯೇ ಇಂತಹ ಸುಳ್ ಕಾರ್ಖಾನೆಗಳನ್ನು ಪ್ರಮೋಟ್ ಮಾಡತೊಡಗಿದರೆ ಅದಕ್ಕಿಂತ ನಾಚಿಕೆಗೇಡು ಬೇರೆನಿದೆ?
ಕಳೆದ ತಿಂಗಳು ಸಮರ್ಥ ಬನ್ಸಾಲ್ ಎಂಬ ಪರ್ತಕರ್ತರು ಈ ಫೇಕ್ ಫ್ಯಾಕ್ಟರಿಗಳ ಕುರಿತು ಒಂದು ತನಿಖಾ ವರದಿ ಪ್ರಕಟಿಸಿದರು. ಹೆಚ್ಚುತ್ತಿರುವ ಫೇಕ್ ಸ್ಟೋರಿಗಳು ಮತ್ತು ಸರ್ಕಾರದ ನಡುವೆ ಲಿಂಕ್ ಇರುವುದನ್ನು ಅವರು ಎಳೆಎಳೆಯಾಗಿ ತೋರಿಸಿದ್ದರು. ಪ್ರಧಾನಿಯ ನಮೋ ಆ್ಯಪ್ ಮೂಲಕ ಸುಳ್ಳು ಸುದ್ದಿಗಳು, ಕುಚೋದ್ಯಗಳು ಹರಿದಾಡುವುದನ್ನು ಬನ್ಸಾಲ್ ತೋರಿಸಿದರು.
ನಮೋ ಆ್ಯಪ್‍ನ ‘ಮೈ ನೆಟ್‍ವರ್ಕ್’ ವಿಭಾಗದಲ್ಲಿ 15 ಪ್ರಮೋಟೆಡ್ ಅಕೌಂಟುಗಳಿವೆ, ಅದರಲ್ಲಿ ಫೇಕ್ ಫ್ಯಾಕಟ್ರಿ ಎಂದೇ ಕುಖ್ಯಾತಿ ಪಡೆದಿರುವ ‘ದಿ ಇಂಡಿಯನ್ ಐ’ ಕೂಡ ಇದೆ. ಬಳಕೆದಾರರು ಇದನ್ನು ಫಾಲೋ ಮಾಡದೇ ಇದ್ದಾಗಲೂ ಇದರ ಪೋಸ್ಟ್‍ಗಳು ಅವರ ‘ಮೈ ನೆಟ್‍ವರ್ಕ್’ ಫೀಡರ್‍ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ.
ಕೇಜ್ರಿವಾಲಾ ದೇಶದ್ರೋಹಿಯಂತೆ!
ಫೇಸ್‍ಬುಕ್ ಪೇಜ್, ಟ್ವಿಟರ್, ವೆಬ್‍ಸೈಟ್- ಹೀಗೆ ಸಾಮಾಜಿಕ ಜಾಲತಾಣದ ಎಲ್ಲ ಸ್ತರಗಳಲ್ಲೂ ಇರುವ ‘ದಿ ಇಂಡಿಯನ್ ಐ’ ಎಂತಹ ಕುಚೋದ್ಯ ಮಾಡುತ್ತದೆ ಎಂಬುದಕ್ಕೆ ಈ ಉದಾಹರಣೆ ನೋಡಿ. ವಿರೋಧ ಪಕ್ಷಗಳ ಮಹಾಘಟಬಂಧನ್ ಸಮಾವೇಶದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಪಾಕಿಸ್ತಾನದ ಪರ ಮಾತಾಡಿದರು ಎಂದು ಈ ಇಂಡಿಯನ್ ಐ ಸುಳ್ ಸುದ್ದಿ ಹರಡಿತ್ತು. ‘ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ತೊಂದರೆ’ ಎಂಬರ್ಥದಲ್ಲಿ ಕೇಜ್ರಿವಾಲ ಮಾತಾಡಿದರು ಎಂದಿತ್ತು. ಅದಕ್ಕಾಗಿ ಅವರನ್ನು ದೇಶದ್ರೋಹಿ ಎಂದು ‘ಆರ್ಡರ್’ ಅನ್ನೂ ಪಾಸ್ ಮಾಡಿಬಿಟ್ಟಿತ್ತು.
ಆದರೆ ಆಗಲೇ ಅಲ್ಟ್‍ನ್ಯೂಸ್ ಇಂಡಿಯನ್ ಐ ಹಾಕಿರುವ ವಿಡಿಯೋ ತಿರುಚಿದ್ದು ಎಂದು ಸಾಬೀತು ಮಾಡಿತ್ತು. ‘ಮೋದಿ ಮತ್ತು ಶಾ ಮತ್ತೆ ಅಧಿಕಾರಕ್ಕೆ ಬಂದರೆ ದೇಶ ಉಳಿಯಲಾರದು’ ಎಂಬ ಕೇಜ್ರಿವಾಲರ ಮಾತನ್ನು ತಿರುಚಲಾಗಿತ್ತು. ‘ದೇಶ’ ಎಂದಿರುವಲ್ಲಿ ‘ಪಾಕಿಸ್ತಾನ’ ಎಂದು ಸೇರಿಸಲಾಗಿತ್ತು! ಇಂತಹ ಅನಾಹುತ ಮಾಡುವ ಗುಂಪಿಗೆ ನರೇಂದ್ರ ಮೋದಿಯವರ ಆ್ಯಪ್ ಸಪೋರ್ಟು ಮಾಡುತ್ತಿದೆ.
ಗುಜರಾತ್ ಲಿಂಕ್
ಅಲ್ಟ್‍ನ್ಯೂಸ್ ಕಳೆದ ಸೆಪ್ಟೆಂಬರ್‍ನಲ್ಲಿ ಈ ಇಂಡಿಯನ್ ಐಗಿರುವ ಗುಜರಾತ್ ಲಿಂಕನ್ನು ಬಯಲು ಮಾಡಿತ್ತು. ಗುಜರಾತ್ ಮೂಲದ ಸಿಲ್ವರ್ ಟಚ್ ಟೆಕ್ನಾಲಜೀಸ್ ಕಂಪನಿಗೂ ಇದಕ್ಕೂ ಸಂಬಂಧವಿದೆ. ಈ ಸಿಲ್ವರ್ ಟಚ್ ಟೆಕ್ನಾಲಜಿ ಸಂಸ್ಥೆಯೇ ನಮೋ ಆ್ಯಪ್ ರೂಪಿಸಿದೆ! ಈ ಕಂಪನಿಯ ಸರ್ವರ್‍ಗಳ ಮೂಲಕವೇ ಇಂಡಿಯನ್ ಐ ಹಾಸ್ಟ್ ಮಾಡಲಾಗುತ್ತಿತ್ತು. ಅಲ್ಟ್‍ನ್ಯೂಸ್ ತನಿಖೆಯ ನಂತರ ಇಂಡಿಯನ್ ಐ ಐಪಿ ಅಡ್ರೆಸ್ ಬದಲು ಮಾಡಲಾಗಿತು.
ಇದೇ ಇಂಡಿಯನ್ ಐ ಕೊಲ್ಕೊತ್ತಾದ ಮಹಾಘಟಬಂಧನ್ ರ್ಯಾಲಿಯಲ್ಲಿ ಯಾರೊಬ್ಬರೂ ‘ಭಾರತ್ ಮಾತಾ ಕಿ ಜೈ’ ಅನ್ನಲಿಲ್ಲ ಎಂದು ಸುಳ್ಳು ಹರಡಿತ್ತು. ಇದನ್ನೇ ಅಮಿತ್ ಶಾ ತಮ್ಮ ಭಾಷಣಗಳಲ್ಲಿ ಹೇಳಿದ್ದರು. ಆದರೆ ರ್ಯಾಲಿಯ ಕೊನೆಯಲ್ಲಿ ಭಾರತ್ ಮಾತಾ ಕಿ ಜೈ, ಜೈ ಹಿಂದ್, ವಂದೇ ಮಾತರಂ ಘೋಷಣೆಗಳನ್ನು ಹೇಳಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ಹೀಗೆ ಬರೀ ಸುಳ್ಳು, ಕುಚೋದ್ಯವನ್ನೇ ಮಾಡುವ ಇಂತಹ ನೂರಾರು ಗುಂಪುಗಳಿವೆ. ಆದರೆ, ಪ್ರಧಾನಿಯವರ ನಮೋ ಆ್ಯಪ್ ಇಂಥವನ್ನು ಬೆಂಬಲಿಸುತ್ತದೆ ಎನ್ನುವ ವಿಷಯ ಅಸಹ್ಯಕರವಾದುದು.
ಪ್ರಧಾನಿಯೇ ಒಬ್ಬ ಮಹಾ ಸುಳ್ಳುಗಾರನಾಗಿರುವಾಗ, ಸುಳ್ಳುಗಲೇ ಅವರ ಬಂಡವಾಳವಾಗಿರುವಾಗ ಇಂಥದ್ದೆಲ್ಲ ನಡೆಯದೇ ಇರುತ್ತಾ?


