ಪರಿಮಳಾ ವಾರಿಯರ್ |
ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರ ಹೆಸರು ಹೇಳಿ ಎಂದರೆ ನಮಗೆಲ್ಲರಿಗೂ ಒಂದರ ಹಿಂದೊಂದು ರಾಜರು-ಪುರುಷ ನಾಯಕರ ಹೆಸರು ಬರುತ್ತವೆ. ಆ ನಂತರ ಒಂದೆರಡು ಮಹಿಳೆಯರ ಹೆಸರು ನೆನಪಾಗಬಹುದು. ಅಪ್ಪಿತಪ್ಪಿಯೂ ಒಬ್ಬ ಜನಸಾಮಾನ್ಯ, ಕೆಳ ಸಮುದಾಯದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ನಮಗೆ ನೆನಪಾಗುವುದೇ ಇಲ್ಲ. ಯಾಕೆಂದರೆ ನಾವೆಲ್ಲರೂ ಕಲಿತಿರುವ ಇತಿಹಾಸದ ಪುಟಗಳಲ್ಲಿ ಇವರ ಉಲ್ಲೇಖಗಳೇ ಇಲ್ಲ. ಚರಿತ್ರೆಯ ದಾಖಲಾತಿಯೇ ಹಾಗೆ. ಅದು ಕಾಲಘಟ್ಟವೊಂದರ ಸ್ಥಿತ್ಯಂತರಗಳ ಮುಂಚೂಣಿಯಲ್ಲಿ ನಿಂತವರ ಹೆಸರನ್ನು ಮಾತ್ರ ಜತನವಾಗಿ ನೆನಪಿಟ್ಟುಕೊಳ್ಳುತ್ತದೆ. ಮುಂಚೂಣಿಯಲ್ಲಿ ನಿಂತವರು ಗೆಲ್ಲಲು ಕಾರಣವಾದ ಜೀವಗಳನ್ನು ನಿರ್ದಯದಿಂದ ದೂರವುಳಿಸುತ್ತದೆ. ಹೀಗೆ ಚರಿತ್ರೆಯ ಪುಟಗಳಿಂದಲೇ ಅಳಿಸಿಹೋದ ವೀರರು, ವೀರಮಹಿಳೆಯರನ್ನು ಹುಡುಕುತ್ತ ಹೋದರೆ ಲೆಕ್ಕಕ್ಕೆ ಸಿಗದಷ್ಟು ವೀರಚರಿತೆಗಳು ನಮಗೆ ಸಿಗುತ್ತವೆ. ಅವುಗಳಲ್ಲಿ ತಮಿಳುನಾಡಿನ ‘ವೀರಮಂಗೈ ಕುಯಿಲಿ’ ಎಂಬ ದಲಿತ ಹೆಣ್ಣುಮಗಳೂ ಒಬ್ಬಳು. ಆಕೆಯದ್ದು ಯಾವ ವೀರಾಧಿವೀರ ರಾಜ ಮಹಾರಾಜರಿಗೇನೂ ಕಡಿಮೆ ಶೌರ್ಯದ ಕಥೆಯಲ್ಲ. 17ನೇ ಶತಮಾನದ ಆವತ್ತಿಗೆ ರೈತಕೂಲಿಗಳ ಮಗಳಾಗಿ ಹುಟ್ಟಿದಾಕೆ ಕುಯಿಲಿ. ಬ್ರಿಟಿಶರ ದಾಳಿಯಿಂದ ಗಂಡನನ್ನೂ ತನ್ನ ಸಾಮ್ರಾಜ್ಯವನ್ನೂ ಕಳೆದುಕೊಂಡ ರಾಣಿಯೊಬ್ಬಳು ತನ್ನ ರಾಜ್ಯವನ್ನು ಪುನಃ ಗೆದ್ದುಕೊಳ್ಳಲು ಅವಳ ಜೊತೆ ನಿಂತಾಕೆ ಕುಯಿಲಿ. ಬ್ರಿಟಿಶರಿಗೆ ಯುದ್ಧದಲ್ಲಿ ಮಣ್ಣು ಮುಕ್ಕಿಸಲು ತನ್ನ ಜೀವವನ್ನೇ ಅಕ್ಷರಶಃ ಬಲಿ ಕೊಟ್ಟು ಬಡಿದಾಡಿದವಳು ‘ವೀರ ಮಂಗೈ ಕುಯಿಲಿ.’
ದಲಿತ ಹೆಣ್ಣುಮಗಳು ವೀರಮಂಗೈ ಕುಯಿಲಿಯ ಬದುಕನ್ನು ಅರಿಯಬೇಕೆಂದರೆ ನಾವು 17ನೇ ಶತಮಾನಕ್ಕೆ ವಾಪಸ್ಸು ಹೋಗಬೇಕು. ಅದು 1772ರಲ್ಲಿ ತಮಿಳುನಾಡಿನ ಶಿವಗಂಗೈ ಪ್ರಾಂತ್ಯವನ್ನು ‘ಮುತ್ತು ವಡುಗನಾಥ ತೇವರ್’ ಅನ್ನುವ ದ್ರಾವಿಡ ರಾಜನೊಬ್ಬ ಆಳುತ್ತಿದ್ದ ಕಾಲ. ಆಗ ಆರ್ಕಾಟ್ ನವಾಬರೊಟ್ಟಿಗೆ ಸೇರಿ ಬ್ರಿಟಿಶರು ಶಿವಗಂಗೈ ಪ್ರಾಂತ್ಯವನ್ನು ದಾಳಿಮಾಡಿ ‘ಮುತ್ತು ವಡುಗನಾಥ ತೇವರ್’ ರಾಜನ್ನು ಕೊಲ್ಲುತ್ತಾರೆ. ಶಿವಗಂಗೈ ಪಟ್ಟಣ ಪ್ರಾಂತ್ಯವನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಾರೆ. ಈ ರಾಜನ ಪತ್ನಿಯಾಗಿದ್ದ ರಾಣಿ ‘ವೇಲು ನಾಚ್ಚಿಯಾರ್’ ತನ್ನ ಮಗಳು ‘ವೆಳ್ಳಾಚ್ಚಿ’ಯೊಡನೆ ದಿಂಡುಗಲ್ ಪಕ್ಕದ ವಿರೂಪಾಚ್ಚಿ ಎಂಬಲ್ಲಿಗೆ ಹೋಗಿ ಅಜ್ಞಾತವಾಸದಲ್ಲಿ ಬದುಕುತ್ತಿರುತ್ತಾಳೆ. ಒಂದು ಕಡೆ ಗಂಡ ಮತ್ತು ರಾಜ್ಯ ಕಳೆದುಕೊಂಡ ದುಃಖ, ಮತ್ತೊಂದು ಕಡೆ ತನ್ನದೇ ನಾಡಿನಲ್ಲಿ ತಲೆಮರೆಸಿಕೊಂಡು ಬದುಕಬೇಕಾದ ಸಂಕಷ್ಟ ಇದೆಲ್ಲದರಿಂದ ಕುದ್ದು ಹೋದ ರಾಣಿ ‘ವೇಲು ನಾಚ್ಚಿಯಾರ್’ ಬ್ರಿಟಿಶ್ ಮತು ಆರ್ಕಾಟ್ ನವಾಬರ ಮೇಲೆ ಸೇಡು ತೀರಿಸಿಕೊಂಡು ತನ್ನ ರಾಜ್ಯ ವಾಪಸ್ ಪಡೆಯಲು ಪ್ರಯತ್ನ ಶುರುವಿಡುತ್ತಾಳೆ. ಅಜ್ಞಾತವಾಸದಲ್ಲಿದ್ದುಕೊಂಡೇ ಮಹಿಳೆಯರದ್ದೊಂದು ಸೈನ್ಯ ಕಟ್ಟಿ ಅವರಿಗೆ ಯುದ್ಧಕಲೆ ಕಲಿಸಿ ಯುದ್ಧವೊಂದಕ್ಕೆ ಸಜ್ಜುಗೊಳಿಸುತ್ತಾಳೆ. ಆ ಸಂದರ್ಭದಲ್ಲಿ ರಾಣಿ ‘ವೇಲು ನಾಚ್ಚಿಯಾರ್’ಗೆ ದೇವರಂತೆ ಸಿಗುವ ದಲಿತ ಮಹಿಳೆಯೇ ‘ವೀರಮಂಗೈ ಕುಯಿಲಿ.’
ಕುಯಿಲಿ ಆಗಿನ ರಾಜಾಡಳಿತದ ಶಿವಗಂಗೈ ಪ್ರಾಂತ್ಯದ ‘ಕುಡಂಚವಾಡಿ’ ಎಂಬ ಹಳ್ಳಿಯೊಂದರಲ್ಲಿ ರೈತಕೂಲಿಗಳಾಗಿ ಬದುಕುತ್ತಿದ್ದ ‘ಪೆರಿಯ ಮುತ್ತನ್’ ಮತ್ತು ‘ರಾಕು’ ಎಂಬ ದಲಿತ ದಂಪತಿಯ ಮಗಳು. ಕುಯಿಲಿಯ ತಾಯಿ ‘ರಾಕು’ ತಾನು ಕೂಲಿಯಾಗಿ ದುಡಿಯುತ್ತಿದ್ದ ಹೊಲಗದ್ದೆಗಳಿಗೆ ನುಗ್ಗಿ ಬೆಳೆನಾಶ ಮಾಡುತ್ತಿದ್ದ ಕಾಡುಕೋಣಗಳನ್ನು ಓಡಿಸಲು ಅವುಗಳೊಡನೆ ಬಡಿದಾಡುವ ಸಂದರ್ಭದಲ್ಲಿ ಪ್ರಾಣ ಬಿಡುತ್ತಾಳೆ. ಇದಾದನಂತರ ವಯಸ್ಸಿಗೆ ಬಂದಿದ್ದ ಕುಯಿಲಿಯನ್ನು ಕರೆದುಕೊಂಡು ಅವಳ ತಂದೆ ಪೆರಿಯ ಮುತ್ತನ್ ಹುಟ್ಟೂರು ಬಿಟ್ಟು ಶಿವಗಂಗೈ ಪಟ್ಟಣಕ್ಕೆ ಬರುತ್ತಾನೆ. ಅಲ್ಲಿ ಅದಾಗಲೇ ರಾಜ್ಯ ಪಡೆಯಲು ಹರಸಾಹಸ ಮಾಡುತ್ತಿದ್ದ ರಾಣಿ ವೇಲು ನಾಚ್ಚಿಯಾರ್’ಳ ಗೂಢಚಾರಿಯಾಗಿ ಸೇರಿಕೊಳ್ಳುತ್ತಾನೆ. ನವಾಬರು ಮತ್ತು ಬ್ರಿಟಿಶ್ ಸೈನ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ರಾಣಿಗೆ ತಲುಪಿಸುವುದು ಪೆರಿಯ ಮುತ್ತನ್ ಕೆಲಸವಾಗಿತ್ತು. ಈ ಸಂದರ್ಭದಲ್ಲಿ ಕುಯಿಲಿಯೂ ರಾಣಿಯ ಸಂಪರ್ಕಕ್ಕೆ ಬರುತ್ತಾಳೆ. ಬ್ರಿಟಿಶರು ಮತ್ತು ನವಾಬರು ರಾಣಿಯನ್ನು ಕೊಲ್ಲಲು ಒಂದರ ಹಿಂದೊಂದು ಪ್ರಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ ಒಮ್ಮೆ ರಾಣಿ ವೇಲು ನಾಚ್ಚಿಯಾರ್‍ಳನ್ನು ಕೊಂದೇಬಿಡುವ ಪ್ರಯತ್ನವೊಂದಕ್ಕೆ ಕೈಹಾಕುತ್ತಾರೆ. ಆಗ ಅವರೊಡನೆ ಬಡಿದಾಡುವ ಕುಯಿಲಿ ಆ ಹಂತಕರನ್ನು ಹಿಮ್ಮೆಟ್ಟಿಸಿ ರಾಣಿಯ ಪ್ರಾಣರಕ್ಷಣೆ ಮಾಡುತ್ತಾಳೆ. ರಾಣಿಯ ಸೈನ್ಯಕ್ಕೆ ಸಿಲಂಬಂ (ದೊಣ್ಣೆವರಸೆ ವಿದ್ಯೆ) ಕಲಿಸುತ್ತಿದ್ದ ಗುರುವೊಬ್ಬ ಬ್ರಿಟಿಶರ ಗೂಢಚಾರನಾಗಿ ರಾಣಿಯನ್ನು ಕೊಲ್ಲಲೆತ್ನಿಸಿದಾಗ ಅವನನ್ನು ಕುಯಿಲಿ ಕೊಂದು ರಾಣಿಯ ಪ್ರಾಣ ಉಳಿಸುತ್ತಾಳೆ. ಆಗಿನಿಂದ ರಾಣಿಯ ಖಾಸಗಿ ಅಂಗರಕ್ಷಕಿಯಾಗಿ ಕುಯಿಲಿ ನೇಮಕಗೊಳ್ಳುತ್ತಾಳೆ.
ಕುಯಿಲಿ ರಾಣಿಯೊಡನೆ ಇರುವರೆಗೂ ಅವಳನ್ನು ಕೊಲ್ಲಲಾಗದೆಂದು ಅರಿತ ಬ್ರಿಟಿಶರು ಮತ್ತು ಅರ್ಕಾಟ್ ನವಾಬರು ಕುಯಿಲಿಯನ್ನು ತಮ್ಮ ಕಡೆಗೆ ಬಂದು ರಾಣಿ ಕೊಲ್ಲಲು ನೆರವಾಗಿ ಕುಯಿಲಿಗೆ ಆಮಿಷಗಳ ಸರಮಾಲೆಯನ್ನೇ ಒಡ್ಡಿದರೂ ಅದನ್ನು ನಿರಾಕರಿಸುವ ಕುಯಿಲಿ ರಾಣಿಯ ರಕ್ಷಣೆಗೆ ಟೊಂಕಕಟ್ಟಿ ನಿಲ್ಲುತ್ತಾಳೆ. ಇದಕ್ಕೆ ಪ್ರತಿಯಾಗಿ ಬ್ರಿಟಿಶರು ಮತ್ತು ನವಾಬರು ಕುಯಿಲಿ ಪ್ರತಿನಿಧಿಸುವ ದಲಿತರಿಗೆ ಪರಿಪರಿಯಾಗಿ ಹಿಂಸಿಸಿ ಪೀಡಿಸುತ್ತಾರೆ. ಇದ್ಯಾವುದಕ್ಕೂ ಜಗ್ಗದ ಕುಯಿಲಿ ರಾಣಿಯ ಜೊತೆಗೆ ಬ್ರಿಟಿಶರ ವಿರುದ್ಧ ಹೋರಾಡಲು ಮುನ್ನುಗ್ಗುತ್ತಾಳೆ. ಕುಯಿಲಿಯ ರಾಜನಿಷ್ಠೆ ಮತ್ತು ಪರಾಕ್ರಮಕ್ಕೆ ಉಡುಗೊರೆಯಾಗಿ ರಾಣಿ ‘ವೇಲು ನಾಚ್ಚಿಯಾರ್’ ಅವಳನ್ನು ತನ್ನ ಸೈನ್ಯದ ಮಹಿಳಾ ಸೇನಾಧಿಪತಿಯಾಗಿ ನೇಮಿಸುತ್ತಾಳೆ. 17ನೇ ಶತಮಾನದ ಕಾಲಘಟ್ಟದಲ್ಲಿ ದಲಿತ ಯುವತಿಯೊಬ್ಬಳು ಸೈನ್ಯವೊಂದರ ಉಸ್ತುವಾರಿ ವಹಿಸಿಕೊಂಡದ್ದು ಅತ್ಯಂತ ಕ್ರಾಂತಿಕಾರಕ ಬೆಳವಣಿಗೆಯಾಗಿತ್ತು. ನಂತರ ಪಾಂಡ್ಯರಾಜರು, ಮರುದು ಪಾಂಡಿಯರ್ ದೊರೆಗಳು, ಗೋಪಾಲ ನಾಯ್ಕರ್ ಮತ್ತು ಹೈದರ್ ಆಲಿಯೊಡನೆ ರಾಜತಾಂತ್ರಿಕ ಸಂಬಂಧ ಬೆಳೆಸುವ ರಾಣಿ ‘ವೇಲು ನಾಚ್ಚಿಯಾರ್’ ಅವರೊಡನೆ ಸೈನ್ಯದ ನೆರವನ್ನು ಪಡೆಯುತ್ತಾಳೆ. ಬ್ರಿಟಿಶರು ಮತ್ತು ನವಾಬರ ಮೇಲೆ ಕುಯಿಲಿಯ ನೇತೃತ್ವದ ಸೈನ್ಯವನ್ನು ಮುನ್ನುಗ್ಗಿಸಿ ಮುಗಿಬಿದ್ದು ಹಲವಾರು ಯುದ್ಧಗಳನ್ನು ಮಾಡಿ ಗೆಲ್ಲುತ್ತಾಳೆ.
ಅದಾಗಲೇ ತನ್ನ ಗಂಡನನ್ನು ಗೆದ್ದು ಶಿವಗಂಗೈ ಪಟ್ಟಣ ಮತ್ತು ಕೋಟೆಯನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ಬ್ರಿಟಿಶರು ಮತ್ತು ನವಾಬರಿಂದ ಕೋಟೆಯೊಂದನ್ನು ವಶಪಡಿಸಿಕೊಂಡರೆ ಶಿವಗಂಗೈ ಪ್ರಾಂತ್ಯ ಸಂಪೂರ್ಣ ಕೈಗೆ ಬರುವಷ್ಟರಮಟ್ಟಿಗೆ ಸೇನಾಧಿಪತಿ ಕುಯಿಲಿ ಮತ್ತು ರಾಣಿ ‘ವೇಲು ನಾಚ್ಚಿಯಾರ್’ ಬ್ರಿಟಿಶರಿಗೆ ತಲೆನೋವಾಗಿ ಪರಿಣಮಿಸುತ್ತಾರೆ. ಬ್ರಿಟಿಶರ ಆಧುನಿಕ ಬಂದೂಕು ಮತ್ತು ಮದ್ದುಗುಂಡಿನ ಸೈನ್ಯದೆದುರು ತಮ್ಮ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಅಂತಿಮ ಯುದ್ಧವನ್ನು ಗೆಲ್ಲುವುದು ಅಸಾಧ್ಯವೆಂದು ಅರಿತಿದ್ದ ಕುಯಿಲಿ ಅದಕ್ಕೊಂದು ಅಪಾಯಕಾರಿ ಯುದ್ಧವ್ಯೂಹವೊಂದನ್ನು ರಚಿಸುತ್ತಾಳೆ. ಶಿವಗಂಗೈ ಕೋಟೆಯೊಳಗೆ ಇದ್ದ ಬ್ರಿಟಿಶರ ಮದ್ದುಗುಂಡು ದಾಸ್ತಾನಿನ ಆಯುಧಾಗಾರದ ದಾಸ್ತಾನನ್ನು ಧ್ವಂಸಗೊಳಿಸಿ, ನಂತರ ಅವರ ಮೇಲೆ ಮುಗಿಬಿದ್ದರೆ ಯುದ್ಧದಲ್ಲಿ ಬ್ರಿಟಿಶರಿಗೆ ಆಯುಧಗಳೇ ಇಲ್ಲದೆ ಗೆಲುವು ನಮ್ಮದಾಗುತ್ತದೆಂದು ಯೋಚಿಸಿದ ಕುಯಿಲಿ ಆ ದಿಸೆಯಲ್ಲಿ ಒಂದು ಉಪಾಯವೊಂದನ್ನು ಹೊಸೆಯುತ್ತಾಳೆ. ಅದು ವಿಜಯದಶಮಿಯ ಕಾಲ. ಕೋಟೆಯೊಳಗಿದ್ದ ‘ರಾಜರಾಜೇಶ್ವರಿ ಅಮ್ಮನ್’ ದೇವಸ್ಥಾನಕ್ಕೆ ತನ್ನ ಸೈನ್ಯದ ಕೆಲವು ಮಹಿಳಾ ಸೈನಿಕರೊಡನೆ ದೈವಭಕ್ತೆಯರಂತೆ ತೆರಳುತ್ತಾಳೆ. ಹೋಗುವಾಗ ಹೂವಿನ ಬುಟ್ಟಿ, ಹಣ್ಣಿನ ಬುಟ್ಟಿ, ತುಪ್ಪದಡಬ್ಬಿ, ಎಣ್ಣೆದೀಪಗಳನ್ನು ದೇವರಪೂಜೆಯ ನೆಪದಲ್ಲಿ ದೇವಾಲಯದೊಳಗೆ ತೆಗೆದುಕೊಂಡು ಹೋಗುವಲ್ಲಿ ಕುಯಿಲಿ ಯಶಸ್ವಿಯಾಗುತ್ತಾಳೆ. ಹೂವು-ಹಣ್ಣಿನ ಬುಟ್ಟಿಯಲ್ಲಿ ಅಡಗಿಸಿಕೊಂಡಿದ್ದ ಆಯುಧಗಳಿಂದ ಕೋಟೆಯೊಳಗಿನ ಬ್ರಿಟಿಶ್ ಕಾವಲು ಸೈನಿಕರನ್ನು ಕೊಂದು ಬ್ರಿಟಿಶ್ ಸೈನ್ಯದ ಆಯುಧಾಗಾರದ ದಾಸ್ತಾನುಕೋಣೆಯನ್ನು ಪತ್ತೆ ಹಚ್ಚುತ್ತಾಳೆ. ಆ ನಂತರ ತಂದಿದ್ದ ತುಪ್ಪ ಮತ್ತು ಎಣ್ಣೆಯನ್ನು ತನ್ನ ದೇಹದ ಮೇಲೆ ಸುರಿದುಕೊಳ್ಳುವ ಕುಯಿಲಿ ತನ್ನ ಮೈಗೆ ಬೆಂಕಿ ಹಚ್ಚಿಕೊಳ್ಳುತ್ತಾಳೆ. ಬ್ರಿಟಿಶರ ಆಯುಧಾಗಾರದಲ್ಲಿದ್ದ ಮದ್ದುಗುಂಡು ಬಂದೂಕುಗಳ ದಾಸ್ತಾನು ಕುಯಿಲಿಯೊಡನೆಯೇ ಸುಟ್ಟು ಭಸ್ಮವಾಗುತ್ತದೆ. ಕುಯಿಲಿ ತನ್ನ ಸೈನ್ಯ ಮತ್ತು ರಾಣಿ ಗೆಲ್ಲಲು ತನ್ನ ಜೀವವನ್ನೇ ಬಲಿ ಕೊಡುತ್ತಾಳೆ.
ಆ ನಂತರ ಕೋಟೆಯೊಳಗೆ ಸೈನ್ಯದೊಡನೆ ನುಗ್ಗುವ ರಾಣಿ ‘ವೇಲು ನಾಚ್ಚಿಯಾರ್’ ಮತ್ತು ಬೆಂಬಲಿಗ ರಾಜರ ಪಡೆಯು ಆಯುಧಗಳೇ ಇಲ್ಲದೆ ಖಾಲಿಕೈನಲ್ಲಿ ಎದುರಾದ ಬ್ರಿಟಿಶರ ಸೈನ್ಯವನ್ನು ಬಗ್ಗುಬಡಿದು ತಮ್ಮ ರಾಜವಂಶದ ಶಶಿವರ್ಣ ತೇವರ್ ಕಟ್ಟಿದ್ದ ಶಿವಗಂಗೈ ಕೋಟೆ ಮತ್ತು ಪಟ್ಟಣವನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಾರೆ. ದಲಿತ ಸೇನಾಧಿಪತಿ ಕುಯಿಲಿಯ ಹುತಾತ್ಮನಡೆಯೊಂದು ನಡೆಯದೇ ಹೋಗಿದ್ದರೆ ಈ ಯುದ್ಧ ಗೆಲ್ಲುವುದು ರಾಣಿಗೆ ಸುಲಭಸಾಧ್ಯವಿರಲಿಲ್ಲ. ಈ ಮೂಲಕ ಕುಯಿಲಿಯನ್ನು ‘ವೀರಮಂಗೈ ಕುಯಿಲಿ’ (ವೀರಮಹಿಳೆ ಕುಯಿಲಿ)ಯೆಂದು ತಮಿಳುನಾಡು ಕರೆಯುತ್ತದೆ. ಕುಯಿಲಿಯ ವೀರಮರಣದಿಂದ ರಾಜ್ಯ ವಾಪಸ್ ಪಡೆಯುವ ರಾಣಿ ‘ವೇಲು ನಾಚ್ಚಿಯಾರ್’ ಆ ನಂತರ ದಶಕಗಳ ಕಾಲ ಶಿವಗಂಗೈ ಪ್ರಾಂತ್ಯವನ್ನು ಆಳಿ 1796ರಲ್ಲಿ ಮೃತಪಡುತ್ತಾಳೆ. ಆಕೆಯ ಸಾವಿನ ಶತಮಾನಗಳ ನಂತರ ಭಾರತ ಸರ್ಕಾರ ರಾಣಿ ‘ವೇಲು ನಾಚ್ಚಿಯಾರ್’ ಹೆಸರಿನಲ್ಲಿ ಪೋಸ್ಟ್‍ಸ್ಟಾಂಪನ್ನು ಬಿಡುಗಡೆ ಮಾಡುತ್ತದೆ. ಈ ಅರಸೊತ್ತಿಗೆಯ ಮೆರೆದಾಡುವ ಧಾವಂತದಲ್ಲಿ ಕುಯಿಲಿಯ ತ್ಯಾಗ ಬಲಿದಾನ ಯಾರ ಗಮನಕ್ಕೂ ಬರದೆ ಚರಿತ್ರೆಯ ಮೂಲೆಯೊಂದರಲ್ಲಿ ಹಾಗೇ ಉಳಿದುಬಿಟ್ಟಿದೆ.


