ಮೊನ್ನೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಒಂದು ಆಂತರಿಕ ಆದೇಶಕ್ಕೆ ಸಹಿ ಹಾಕಿದರು. ಅದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹುಬ್ಬಳ್ಳಿಯ ಮಹೇಶ್ ಟೆಂಗಿನಕಾಯಿಯನ್ನು ಆಯ್ಕೆ ಮಾಡಿದ ಆದೇಶ. ಮೇಲ್ನೋಟಕ್ಕೆ ಇದರಲ್ಲಿ ಅಚ್ಚರಿ ಪಡುವಂತದ್ದು ಏನೂ ಇಲ್ಲ. ಆದರೆ ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿರುವ ಇತ್ತೀಚಿನ ದಿನಗಳ ಹಾವು ಏಣಿ ಆಟವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಆದೇಶದೊಳಗಿನ ರೋಚಕತೆ ಅರ್ಥವಾಗುತ್ತೆ. ಯಾಕೆಂದರೆ ಇಷ್ಟು ದಿನ ಆ ಹುದ್ದೆಯಲ್ಲಿ ಇದ್ದದ್ದು ಸಿ.ಟಿ.ರವಿ! ತನಗೆ `ಒಳ್ಳೆಯ’ ಖಾತೆ ಸಿಕ್ಕಿಲ್ಲವೆಂದು ವರಾತ ತೆಗೆದು ರಾಜೀನಾಮೆ ಕೊಡುವ ಊಹಾಪೋಹಗಳಿಗೆ ಆಹಾರವಾಗಿದ್ದ ಸಿ.ಟಿ.ರವಿಯವರಿಗೆ ಕೋಕ್ ಕೊಟ್ಟು ಆ ಜಾಗಕ್ಕೆ ಮಹೇಶ್ ಟೆಂಗಿನಕಾಯಿಯನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಹಳ ಮಹತ್ವವಿದೆ. ಪಕ್ಷದ ಅಧ್ಯಕ್ಷನ ನಂತರದ ಮಹತ್ವದ ಸ್ಥಾನ ಇದು. ಅಂಥಾ ಹುದ್ದೆಗೆ ಬಂದು ಕೂತಿರುವ ಮಹೇಶ್ ಟೆಂಗಿನಕಾಯಿ ಅಪ್ಪಟ ಬಿ.ಎಲ್.ಸಂತೋಷ್ ಬಣದ ಬೆಂಬಲಿಗ!
ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಪಾಲಿಸಿ ಅಡಿಯಲ್ಲಿ ಬಿ.ಎಲ್.ಸಂತೋಷ್, ಸಿಟಿ ರವಿಯನ್ನು ಕಾರ್ಯದರ್ಶಿ ಹುದ್ದೆಯಿಂದ ಹೊರಗಟ್ಟಿದ್ದಾರೆ. ಖಾತೆಯ ಕಾರಣಕ್ಕೆ ಮೊದಲೇ ಅಸಮಾಧಾನಗೊಂಡಿದ್ದ ಸೀಟಿ ರವಿ ಈ ನಿರ್ಧಾರದಿಂದ ಕೆರಳಿರಲಿಕ್ಕೂ ಒಂದು ಕಾರಣವಿದೆ. ಸಾಮಾನ್ಯವಾಗಿ ಇಡೀ ಪಕ್ಷದ ಸಂಘಟನಾ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಭಾಗವಾಗಿ ಪ್ರಧಾನ ಕಾರ್ಯದರ್ಶಿ ಹುದ್ದೆಗೂ ನೇಮಕ ಮಾಡಲಾಗುತ್ತೆ. ಆದರೆ ಇಲ್ಲಿ ಟೆಂಗಿನಕಾಯಿ ಆಯ್ಕೆಯನ್ನು ಬಿಟ್ಟರೆ ಮತ್ತ್ಯಾವ ಪದಾಧಿಕಾರಿಯನ್ನೂ ಬದಲಿಸಿಲ್ಲ. ಉದ್ದೇಶಪೂರ್ವಕವಾಗಿ ರವಿಯನ್ನು ಪ್ರಭಾವಿ ಹುದ್ದೆಯಿಂದ ದೂರ ಇಡುವುದಕ್ಕೆಂದೇ ಸಂತೋಷ್ ಈ ಆಯ್ಕೆ ಮಾಡಿರುವುದು ಖಚಿತವಾಗಿದೆ. ಅಂದಹಾಗೆ, ಸಿಟಿ ರವಿ ಈಗ ಮಂತ್ರಿ ಆಗಿರೋದ್ರಿಂದ ಒಂದೇ ಹುದ್ದೆ ನೇಮದಡಿ ಈ ಆಯ್ಕೆಯಾಗಿದೆ ಎಂದು ಸಂತೋಷ್ ಬಣ ಹೇಳಿಕೊಳ್ಳುತ್ತಿದೆ. ನೆನಪಿರಲಿ, ಈ ಹಿಂದೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟನ್ನು ದಿವಂಗತ ಅನಂತ್ಕುಮಾರ್ ಮಡದಿ ತೇಜಸ್ವಿನಿಯವರಿಗೆ ತಪ್ಪಿಸಲು `ಡಿಎನ್ಎ ಪೊಲಟಿಕ್ಸ್’ ಅನ್ನು ಅಸ್ತ್ರವಾಗಿ ಬಳಸಿದ್ದ ಸಂತೋಷ್ ನಂತರದ ಉಪಚುನಾವಣೆಯಲ್ಲಿ ಕಾಂಗ್ರೆಸಿನಿಂದ ಬಿಜೆಪಿಗೆ ಹೋಗಿ ಕಲ್ಬುರ್ಗಿಯ ಸಂಸದರಾಗಿದ್ದ ಉಮೇಶ್ ಜಾಧವ್ ಅವರ ಮಗ ಅವಿನಾಶ್ ಜಾಧವಗೆ ಚಿಂಚೋಳಿಯ ಟಿಕೇಟ್ ಕೊಟ್ಟಾಗ `ಡಿಎನ್ಎ ಪೊಲಿಟಿಕ್ಸ್’ನ ಸೊಲ್ಲೆತ್ತದೆ ತೆಪ್ಪಗಿದ್ದರು. ಅಂದರೆ ಸಂತೋಷ್, ತನ್ನ ಎದುರಾಳಿಗಳನ್ನು ಅಳಿಯಲು ಸರ್ವಸಮ್ಮತ `ಮಾರಲ್ ಪೊಲಿಟಿಕ್ಸ್’ನ ಅಸ್ತ್ರಗಳನ್ನು ತನಗೆ ತಕ್ಕಂತೆ ಬಳಸಿಕೊಳ್ಳುತ್ತಾ ಬಂದಿರೋದು ಇದರಿಂದ ಸಾಬೀತಾಗುತ್ತೆ. ಈಗ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಅನ್ನೋ ನಿಯಮ ಮುಂದೆ ಮಾಡಿ ತನ್ನ ಜಾಗಕ್ಕೆ ಬೆಂಬಲಿಗ ಟೆಂಗಿನಕಾಯಿ ತಂದು ಕೂರಿಸಿಕೊಂಡಿರೋದು ಸೀಟಿ ರವಿಯ ಸಂಕಟವನ್ನು ಒಳಗೊಳಗೇ ಹೆಚ್ಚಿಸಿರೋದು ಇದೇ ಕಾರಣ.

ಆದರೆ, ಈ ನೇಮಕದ ಅಸಲೀ ಸಂಗತಿ ಇದಲ್ಲ. ಮಹೇಶ್ ಟೆಂಗಿನಕಾಯಿಯನ್ನು ಆ ಸ್ಥಾನಕ್ಕೆ ನೇಮಕ ಮಾಡೋ ವಿಚಾರ ರಾಜ್ಯದ ಬಹಳಷ್ಟು ನಾಯಕರಿಗೆ ಗೊತ್ತೇ ಇರಲಿಲ್ಲ! ಮುಖ್ಯವಾಗಿ ಧಾರವಾಡ ವಿಭಾಗದ ಸಹ ಪ್ರಭಾರಿಯಾಗಿ ಹುಬ್ಬಳ್ಳಿಯಲ್ಲಿದ್ದ ಟೆಂಗಿನಕಾಯಿಗೆ ಏಕಾಏಕಿ ಇಂಥಾ ಪ್ರಮೋಷನ್ ಸಿಗಲಿದೆ ಅನ್ನೋದು ಆ ಭಾಗದ ಘಟಾನುಘಟಿ ನಾಯಕರುಗಳೆನಿಸಿದ ಮಾಜಿ ಸಿಎಂ ಕಂ ಹಾಲಿ ಮಂತ್ರಿ ಜಗದೀಶ್ ಶೆಟ್ಟರ್ ಗಾಗಲಿ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿಗಾಗಲಿ ಕೊನೇ ಕ್ಷಣದವರೆಗೆ ತಿಳಿದೇ ಇರಲಿಲ್ಲ. ಪಕ್ಕಾ ಬಿಎಲ್ ಸಂತೋಷ್ ಬಣದವರಾದ ಮಹೇಶ್ ಟೆಂಗಿನಕಾಯಿ ಈ ಹಿಂದೆ ತೆಲಂಗಾಣ ಚುನಾವಣಾ ವೀಕ್ಷಕರಾಗಿ ನೇಮಕವಾದದ್ದಾಗಲಿ, ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಉಸ್ತುವಾರಿಯಾಗಿ ಆಯ್ಕೆಯಾದದ್ದಾಗಲಿ ಎಲ್ಲವೂ ಸಂತೋಷ್ ಕೃಪೆಯಿಂದಲೇ! 2018ರಲ್ಲಿ ಧಾರವಾಡದ ಕಲಘಟಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿಯೂ ಇದೇ ಟೆಂಗಿನಕಾಯಿಯವರನ್ನು ಸಂತೋಷ್ ಆಯ್ಕೆ ಮಾಡಿದ್ದರು. ಆದರೆ ಕೊನೇ ಕ್ಷಣದಲ್ಲಿ ಸಿ.ಎಂ.ನಿಂಬಣ್ಣನವರ ಮತ್ತವರ ಬೆಂಬಲಿಗರು ದೊಡ್ಡ ಗಲಾಟೆ ಮಾಡಿ ಪ್ರತಿಭಟಿಸಿದ್ದರಿಂದ ಟಿಕೇಟ್ ಆತನ ಪಾಲಾಯ್ತು. ಸಂತೋಷ್ ಬೆಂಬಲವಿರುವ ಈತ ಎಲ್ಲಿ ತಮ್ಮನ್ನೇ ಓವರ್ ಟೇಕ್ ಮಾಡಿಬಿಡುವನೋ ಎಂಬ ಭಯದಲ್ಲಿ ಜೋಷಿ-ಶೆಟ್ಟರ್ ಜೋಡಿಯೇ ಟಿಕೇಟ್ ತಪ್ಪಿಸಿದ್ದರು ಎಂಬ ಮಾತುಗಳೂ ಇವೆ. ಅದೇನೆ ಇರಲಿ, ಆ ಭಾಗದ ಟೆಂಗಿನ ಕಾಯಿಯನ್ನು ನೇಮಕ ಮಾಡುವ ಸಂದರ್ಭದಲ್ಲಿ ಜೋಷಿ-ಶೆಟ್ಟರರನ್ನೂ ಹೊರಗಿಟ್ಟಿರುವ ಸಂತೋಷ್ ಆ ಮೂಲಕ ಅವರಿಗೆ ಸಣ್ಣದಾಗಿ ಬಿಸಿ ಮುಟ್ಟಿಸಿರೋದು ಮಾತ್ರ ಸತ್ಯ. ಅದನ್ನು ಹೊರಗೆ ತೋರಿಸಿಕೊಳ್ಳಲಾಗದೆ ಅವರಿಬ್ಬರೂ ಒಳಗೊಳಗೇ ಒತ್ತಾಡುತ್ತಿದ್ದಾರೆ ಎನ್ನುತ್ತವೆ ಅವರ ಆಪ್ತ ಮೂಲಗಳು.
ರಾಜ್ಯ ಬಿಜೆಪಿಯ ಮೇಲೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಲ್.ಸಂತೋಷ್ ಹೊರಟಿರುವ ವೇಗ ನೋಡುತ್ತಿದ್ದರೆ ಸದ್ಯದಲ್ಲೇ ಪಕ್ಷದೊಳಗೆ ಭಾರೀ ಅಪಘಾತವೊಂದು ಸಂಭವಿಸುವ ಸುಳಿವುಗಳು ಸಿಗುತ್ತಿವೆ. ಹಳಬರನ್ನೆಲ್ಲ ಮೂಲೆಗುಂಪು ಮಾಡುವ ಧಾವಂತದಲ್ಲಿ ದೊಡ್ಡ ಶತ್ರು ಪಡೆಯನ್ನೇ ಅವರು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಯಡಿಯೂರಪ್ಪ ಮತ್ತು ಸಂತೋಷ್ ನಡುವೆ ಸಂಬಂಧ ಹದಗೆಟ್ಟು ಹಳ್ಳ ಹಿಡಿದಿದೆ. ಸಿಎಂ ಆಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳಾದರು ಸಂಪುಟ ವಿಸ್ತರಣೆ ಮಾಡಿಕೊಳ್ಳದಂತೆ ಅಡ್ಡಗಾಲು ಹಾಕಿದ್ದಾಗಲಿ, ಆಮೇಲೆ ತನಗಿಷ್ಟ ಬಂದವರನ್ನು ಮಂತ್ರಿ ಮಾಡಿಕೊಳ್ಳದಂತೆ, ಬಜರ್.ದಸ್ತ್ ಖಾತೆಗಳನ್ನು ಕೊಡಲಾಗದಂತೆ ನೋಡಿಕೊಂಡದ್ದಾಗಲಿ ಎಲ್ಲವೂ ಸಂತೋಷ್ ಚಿತಾವಣೆ ಅನ್ನೋದ್ರಲ್ಲಿ ಯಡಿಯೂರಪ್ಪನವರಿಗೆ ಯಾವ ಅನುಮಾನವೂ ಉಳಿದಿಲ್ಲ. ಹಾಗೆಯೇ ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಕೆ.ಎಸ್.ಈಶ್ವರಪ್ಪ, ಬಿ.ಶ್ರೀರಾಮುಲು ಮತ್ತು ಆರ್.ಅಶೋಕಗೆ ಶಾಕ್ ಕೊಟ್ಟ ಸಂತೋಷ್ ಆ ಜಾಗಕ್ಕೆ ಪರಾಜಿತ ಅಭ್ಯರ್ಥಿ ಲಕ್ಷ್ಮಣ್ ಸವದಿ, ಪ್ರಭಾವಿಯಲ್ಲದ ಅಶ್ವತ್ಥ್ ನಾರಾಯಣ್ ಅಂತವರನ್ನು ತಂದು ಕೂರಿಸಿ ಈಶು-ಅಶು ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಅದರಲ್ಲೂ ತನ್ನದೇ ಒಕ್ಕಲಿಗ ಸಮುದಾಯದ ಅಶ್ವತ್ಥ್ ನಾರಾಯಣರನ್ನು ಉಪಮುಖ್ಯಮಂತ್ರಿ ಮಾಡಿರೋದು ಆರ್.ಅಶೋಕಗೆ ವಿಪರೀತ ಸಿಟ್ಟು ತರಿಸಿದೆ. ಇನ್ನು ಚುನಾವಣೆಗೆ ಮೊದಲಿಂದಲೇ ಶ್ರೀರಾಮುಲು ಮುಂದಿನ ಉಪಮುಖ್ಯಮಂತ್ರಿ ಎಂಬ ಪುಕಾರೆಬ್ಬಿಸಿ `ನಾಯಕ’ ಜನಾಂಗದ ಮತಗಳನ್ನು ಸಾಲಿಡ್ಡಾಗಿ ಬುಟ್ಟಿಗೆ ಹಾಕಿಕೊಂಡಿದ್ದ ಬಿಜೆಪಿ ಈಗ ತನ್ನನ್ನು ಆ ಸ್ಥಾನಕ್ಕೆ ಮೂಸಿ ನೋಡದಿರೋದು ರಾಮುಲು-ರೆಡ್ಡಿ ಪಾಳೆಯಕ್ಕೆ ಇರಿಸುಮುರಿಸು ಉಂಟುಮಾಡಿದೆ. ಇದರಲ್ಲಿ ಯಡಿಯೂರಪ್ಪನವರ ಪಾತ್ರ ಏನೂ ಇಲ್ಲ, ಎಲ್ಲಾ ಸಂತೋಷ್ ಆಟ ಅನ್ನೋದು ಅವರಿಗೆಲ್ಲ ಚೆನ್ನಾಗಿ ಗೊತ್ತಿದೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನಳೀನ್ ಕುಮಾರ್ ಕಟೀಲನ್ನು ಆಯ್ಕೆ ಮಾಡುವಾಗಲೂ ಸಂತೋಷ್ ಏಕಪಕ್ಷೀಯವಾಗಿ ನಡೆದುಕೊಂಡಿರೋದು ಹಲವು ಹಿರಿಯ ನಾಯಕರ ಕಣ್ಣು ಕೆಂಪಗಾಗಿಸಿದೆ. ಮುಖ್ಯವಾಗಿ, ಕರ್ನಾಟಕ ಬಿಜೆಪಿಯನ್ನು ತನ್ನ ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದ ಕಲ್ಲಡ್ಕ ಭಟ್ಟರು ನಳೀನ್ ಆಯ್ಕೆಯಿಂದ ಕುದ್ದು ಹೋಗಿದ್ದಾರೆ. ಮೊದಮೊದಲು ಗುರು-ಶಿಷ್ಯರಂತಿದ್ದ ಕಲ್ಲಡ್ಕ ಭಟ್ಟರು ಹಾಗೂ ನಳೀನ್ ಈಗ ಹಾವು ಮುಂಗಸಿಯಂತಾಗಿರೋದು ಇಡೀ ಕರಾವಳಿಗೆ ಗೊತ್ತಿರುವ ಸಂಗತಿ. ಕಳೆದ ಎಂಪಿ ಎಲೆಕ್ಷನ್ನಿನಲ್ಲಿ ನಳೀನ್.ಗೆ ಬಿಜೆಪಿ ಟಿಕೇಟ್ ತಪ್ಪಿಸಲು ಕಲ್ಲಡ್ಕ ಭಟ್ಟರು ಹರಸಾಹಸ ಪಟ್ಟಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಆದರೂ ಕಟೀಲುವನ್ನು ಸೋಲಿಸಲು ಒಳಗೊಳಗೇ ಕಾಂಗ್ರೆಸ್ಸಿನ ಭಜರಂಗಿ ಹುಡುಗ ಮಿಥುನ್ ರೈಗೆ ಸಪೋರ್ಟು ಮಾಡಿದ್ದರು. ಮೋದಿ ಹೆಸರು ಹೇಳಿಕೊಂಡು ಓಟು ಕೇಳುತ್ತಿದ್ದ ನಳೀನನ ಕಾಲು ಎಳೆಯಬೇಕೆಂದೇ ಚುನಾವಣೆ ಸಮಯದಲ್ಲಿ ಕಲ್ಲಡ್ಕ ಭಟ್ಟರು “ಬಿಜೆಪಿ ಅಭ್ಯರ್ಥಿಗಳು, ಅದರಲ್ಲು ಈ ಹಿಂದೆ ಸಂಸದರಾಗಿದ್ದವರು ತಮ್ಮ ಸಾಧನೆ ಆಧಾರದಲ್ಲಿ ಮತ ಕೇಳುವುದರ ಬದಲು ಮೋದಿ ಹೆಸರಲ್ಲಿ ಮತ ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ” ಎಂಬ ಹೇಳಿಕೆ ಬಿಸಾಕಿದ್ದರು.
ಅಂಥಾ ಕಲ್ಲಡ್ಕರ ದುಷ್ಮನನ್ನು ಏಕಾಏಕಿ ರಾಜ್ಯಧ್ಯಕ್ಷನ ಸ್ಥಾನದಲ್ಲಿ ಕೂರಿಸಿರೋದು ಕಲ್ಲಡ್ಕ ಭಟ್ಟರೂ ಸಂತೋಷ್ ಮೇಲೆ ಹಗೆ ಸಾಧಿಸುವಂತೆ ಮಾಡಿದೆ. ಈಗ ಶೆಟ್ಟರ್, ಜೋಷಿ, ಸಿಟಿ ರವಿಯ ಮುನಿಸಿಗೂ ಸಂತೋಷ್ ಕಾರಣರಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಈಗ ಪವರ್.ಫುಲ್ ಆಗಿರೋದ್ರಿಂದ ಇವರ್ಯಾರೂ ತುಟಿ ಬಿಚ್ಚುತ್ತಿಲ್ಲ. ಸದ್ಯಕ್ಕೆ ತೆಪ್ಪಗಿದ್ದಾರಷ್ಟೆ. ಬಿಜೆಪಿ `ದ್ವೈ’ಕಮ್ಯಾಂಡಿಗೆ ಸಣ್ಣ ಹಿನ್ನಡೆಯಾದರು ಸಾಕು, ಅಥವಾ ಬಿ.ಎಲ್. ಸಂತೋಷ್ ದ್ವೈಕಮ್ಯಾಂಡಿನ ವಿಶ್ವಾಸದಿಂದ ಕೊಂಚ ದೂರವಾದರು ಸಾಕು ಇವರೆಲ್ಲ ಸಿಟ್ಟು ಸಂತೋಷ್ ಮೇಲೆ ಸ್ಫೋಟಗೊಂಡು ಬಿಜೆಪಿಯೊಳಗೆ ಭೀಕರ ಬಿಕ್ಕಟ್ಟನ್ನೇ ತಂದಿಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
- ಗಿರೀಶ್ ತಾಳಿಕಟ್ಟೆ


