Homeಕರ್ನಾಟಕರಾಜಕಾರಣಿಗಳ ಅವ್ಯವಹಾರ: ಬಳಕೆದಾರರಿಗೆ ಶಾಕ್, ಬಯಲಿಗೆ ಬಂತು ಮತ್ತೊಂದು ವಿದ್ಯುತ್ ಹಗರಣ

ರಾಜಕಾರಣಿಗಳ ಅವ್ಯವಹಾರ: ಬಳಕೆದಾರರಿಗೆ ಶಾಕ್, ಬಯಲಿಗೆ ಬಂತು ಮತ್ತೊಂದು ವಿದ್ಯುತ್ ಹಗರಣ

- Advertisement -
- Advertisement -

ಮೇಲ್ನೋಟಕ್ಕೆ ಇದು ಬಿಜೆಪಿ ಕಾಲದ ಹಗರಣ. ಸದನ ಸಮಿತಿ ರಚನೆಯಾಗುವ ಹೊತ್ತಿಗೆ ಯಡಿಯೂರಪ್ಪ ಮತ್ತು ಶೋಭಾ ಅವರೂ ಬಿಜೆಪಿಗೆ ವಾಪಸ್ಸು ಬಂದಾಗಿತ್ತು. ಕಾಂಗ್ರೆಸ್‍ನ ಬಲಾಢ್ಯ ಲೀಡರ್ ಡಿಕೆಶಿ ಸದನ ಸಮಿತಿ ಅಧ್ಯಕ್ಷ. ಹಾಗಿದ್ದ ಮೇಲೆ ಇನ್ನೊಂದು ಜಿಂದಾಲ್ ಪ್ರಕರಣದಲ್ಲಿ ಯಡಿಯೂರಪ್ಪನವರಲ್ಲದಿದ್ದರೂ ಶೋಭಾ ಕರಂದ್ಲಾಜೆ ಆದರೂ ಜೈಲಿಗೆ ಹೋಗಬೇಕಿತ್ತು. ಎಲ್ಲರೂ ಹಾಗೆಯೇ ಭಾವಿಸಿದ್ದರು.

8335.57 ಕೋಟಿ ರೂ. ಇದು 2010ರಿಂದ 2018ರವರೆಗೆ ಯುಪಿಸಿಎಲ್ ಎಂಬ ಖಾಸಗಿ ಕಂಪೆನಿಯಿಂದ ಕೊಂಡ ವಿದ್ಯುತ್‍ಗೆ ಹೆಚ್ಚುವರಿಯಾಗಿ ಪಾವತಿಸಿದ ಹಣ ಎಂಬ ಆರೋಪ. ಆಧಾರ-ಸದನ ಸಮಿತಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ನೀಡಿದ ಪತ್ರ. 1,600 ಕೋಟಿ ರೂ. ಇದು ಕರ್ನಾಟಕ ಸರ್ಕಾರದಡಿಯ ವಿದ್ಯುತ್ ಕಂಪೆನಿಗಳು (ಎಸ್ಕಾಂಗಳು) ಅದಾನಿಯ ಇದೇ ಯುಪಿಸಿಎಲ್‍ಗೆ ಪಾವತಿಸಬೇಕಾದ ದಂಡದ ಮೊತ್ತ (ತಡ ಪಾವತಿ ಶುಲ್ಕ). ಇದು ಆರೋಪವಲ್ಲ. ಕೇಂದ್ರ ವಿದ್ಯುತ್ ನಿಯಂತ್ರಣಾ ಆಯೋಗವು ಇದೇ ನವೆಂಬರ್ 8ರಂದು ನೀಡಿದ ಆದೇಶ.

ಇದರೊಂದಿಗೆ ಇನ್ನೂ ಒಂದು ಸಂಖ್ಯೆಯನ್ನು ಗಮನಿಸಿ. ರೂ.29,413 ಕೋಟಿ. ಇದು ಯಡಿಯೂರಪ್ಪನವರ ಮೊದಲ ಅವಧಿಯಲ್ಲಿ ಶೋಭಾ ಕರಂದ್ಲಾಜೆಯವರು ಇಂಧನ ಸಚಿವರಾಗಿದ್ದಾಗ ಮಾಡಿಕೊಂಡಿದ್ದ ‘ಡೀಲ್’ನಿಂದ ಸರ್ಕಾರಕ್ಕಾದ ಒಟ್ಟು ನಷ್ಟ ಎಂಬ ಅಂದಾಜು. ಈ ಅಂದಾಜನ್ನು ಮಾಡಿದ್ದು ಎಚ್.ಡಿ.ಕುಮಾರಸ್ವಾಮಿಯವರು. ಅವರ ಪ್ರಕಾರ ಅದನ್ನು ಮುಚ್ಚಿ ಹಾಕಿದ್ದು ಅವರು ಸದಸ್ಯರಾಗಿದ್ದ, ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದ ಸದನ ಸಮಿತಿ. ಈಗ ಅದೇ ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕೆ ಆಪ್ತರು!!

ಹಾಗಾದರೆ ಈ ಇಂಧನ ಇಲಾಖೆಯಲ್ಲಿ ಏನು ನಡೆಯುತ್ತಿದೆ? ಸಾವಿರಾರು ಕೋಟಿಗಳ ಈ ನಷ್ಟವು ಅಂತಿಮವಾಗಿ ವಿದ್ಯುತ್ ಬಿಲ್ ಕಟ್ಟಬೇಕಾದ ಗ್ರಾಹಕರ ತಲೆ ಮೇಲೆ ಬರುತ್ತದಾದರೆ, ಲಾಭ ಯಾರಿಗೆ ಆಗುತ್ತದೆ? ರಾಜಕಾರಣಿಗಳ ಜೊತೆಗೆ ಲಾಭ ಮಾಡಿಕೊಂಡ ಕಂಪೆನಿಗಳು ಯಾವುವು? ಮಿಕ್ಕೆಲ್ಲಾ ಖಾಸಗಿ ಕಂಪೆನಿಗಳು ಲಾಭ ಮಾಡುತ್ತಿರುವಾಗ, ನಮ್ಮ ಕರ್ನಾಟಕ ವಿದ್ಯುತ್ ನಿಗಮದ ರಾಯಚೂರು ವಿದ್ಯುತ್ ಸ್ಥಾವರ ಮಾತ್ರ ಪದೇ ಪದೇ ಕೆಟ್ಟು ನಿಲ್ಲುತ್ತಿರುವುದೇಕೆ? ಇವೆರಡಕ್ಕೂ ಏನಾದರೂ ಸಂಬಂಧ ಇದೆಯಾ? ಇದರ ಬೆನ್ನುಹತ್ತಿ ಹೋಗಲೇಬೇಕೆಂದು ‘ಪತ್ರಿಕೆ’ ಯೋಜಿಸುತ್ತಿತ್ತಾದರೂ, ಕೂಡಲೇ ಪ್ರಚೋದನೆ ಕೊಟ್ಟಿದ್ದು ಕೇಂದ್ರ ವಿದ್ಯುತ್ ನಿಯಂತ್ರಣಾ ಆಯೋಗದ ಆದೇಶ. ಇದರ ಕುರಿತು ಮತ್ತಷ್ಟು ಮಾಹಿತಿಯನ್ನು ಕೆದಕುವ ಮುಂಚೆ ಪರಿಚಯಾತ್ಮಕವಾಗಿ ಬರೆಯಹೊರಟಿರುವ ಈ ಲೇಖನವೇ ಸಾಕಷ್ಟು ಶಾಕ್ ಹೊಡೆಸಲಿದೆ.

ಅಧಿಕಾರಿಗಳ ಮತ್ತು ರಾಜಕೀಯ ವಲಯದಲ್ಲಿ ಇದೇನೂ ಅಚ್ಚರಿಯ ವಿಷಯವಲ್ಲ. 30 ವರ್ಷಗಳ ಹಿಂದೆ ಮುಖ್ಯಮಂತ್ರಿಯ ನಂತರದ ಬಲಾಢ್ಯ ಖಾತೆ ಕಂದಾಯ ಸಚಿವಾಲಯದ್ದಾಗಿತ್ತು. ಹಾಗೆಯೇ ಗೃಹ ಖಾತೆ. ಅಬಕಾರಿ ಮತ್ತು ಹಣಕಾಸು ಸಚಿವರು ಮುಖ್ಯಮಂತ್ರಿಯವರ ಪ್ರಭಾವವಲಯದಿಂದ ಹೊರಗಿರುವವರಾದರೆ ಅವರದ್ದೂ ಪ್ರಭಾವೀ ಖಾತೆಯೇ. ಈಗ ಹಣಕಾಸು ಖಾತೆಯನ್ನು ಮುಖ್ಯಮಂತ್ರಿಗಳೇ ಇಟ್ಟುಕೊಳ್ಳುವುದು ವಾಡಿಕೆಯಾಗಿದೆ. ಅಬಕಾರಿ ಲೆಕ್ಕಕ್ಕಿಲ್ಲ. ಕಂದಾಯಕ್ಕೆ ಅಷ್ಟೇನೂ ಮಹತ್ವವಿಲ್ಲ. ಹಾಗಾದರೆ ಮಹತ್ವ ಬಂದಿರುವುದು ಯಾವ ಖಾತೆಗಳಿಗೆ? ಲೋಕೋಪಯೋಗಿ, ಜಲಸಂಪನ್ಮೂಲ ಅಥವಾ ಬೃಹತ್ ನೀರಾವರಿ, ಬೆಂಗಳೂರು ಅಭಿವೃದ್ಧಿ ಮತ್ತು ಇಂಧನ ಖಾತೆ. ಅಂದರೆ ಎಲ್ಲಿ ಭಾರೀ ಪ್ರಮಾಣದ ಕಾಮಗಾರಿಗಳು ಅಥವಾ ಖರೀದಿ ನಡೆಯುತ್ತದೆಯೋ ಆ ಖಾತೆಗಳು. ಮುಖ್ಯಮಂತ್ರಿಗೆ ಆಪ್ತರಾದವರು ಅಥವಾ ಬಲಾಢ್ಯರಾಗಿರುವರೇ ‘ವ್ಯವಹಾರ’ ನಡೆಸಲು ಸಾಧ್ಯವಿರುವ ಈ ಖಾತೆಗಳನ್ನು ಹಿಡಿಯುತ್ತಾರೆ.

ಹಾಗಾಗಿಯೇ ಕಳೆದ 15 ವರ್ಷದಲ್ಲಿ ಇಂಧನ ಖಾತೆ ಹಿಡಿದವರ ಹೆಸರುಗಳನ್ನು ನೋಡಿದರೆ ನಿಮಗೆ ಇದರ ‘ಮಹತ್ವ’ ಅರ್ಥವಾಗುತ್ತದೆ. ಎಚ್.ಡಿ.ರೇವಣ್ಣ, ಶೋಭಾ ಕರಂದ್ಲಾಜೆ, ಕೆ.ಎಸ್.ಈಶ್ವರಪ್ಪ, ಮತ್ತೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಮತ್ತು ಈಗ ಬಿ.ಎಸ್.ಯಡಿಯೂರಪ್ಪ. ಖಾಸಗಿ ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಸೋಲಾರ್ ಪ್ಲಾಂಟ್‍ಗಳಿಂದ ವಿದ್ಯುತ್ ಖರೀದಿ ಮಾಡುವುದರಲ್ಲಿ ಮತ್ತು ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ಉತ್ಪಾದಕ ಸ್ಥಾವರಗಳಿಗೆ ಕಲ್ಲಿದ್ದಲು ಖರೀದಿ ಮಾಡುವುದರಲ್ಲಿ ಸಾವಿರಾರು ಕೋಟಿ ರೂ.ಗಳ ಅವ್ಯವಹಾರದ ಸಾಧ್ಯತೆ ಇದೆ. ಇವುಗಳಲ್ಲಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಖರೀದಿ ಒಪ್ಪಂದಗಳು ಏರ್ಪಡುತ್ತವೆ. ಈ ವ್ಯವಹಾರದಲ್ಲಿ 10% ಕಮೀಷನ್ ಎನ್ನುವುದು ಸಲೀಸಾಗಿ ನೂರು ಕೋಟಿ ರೂ.ಗಳ ಆಮದನಿ ತರುತ್ತವಾದ್ದರಿಂದ ಅದಕ್ಕೆ ಈ ಪಾಟಿ ಮಹತ್ವ ಬಂದಿದೆ.

ಶೋಭಾ ಅವರ ಅವಧಿಯಲ್ಲಿನ
ಬೃಹತ್ ವ್ಯವಹಾರ

ಅಂತಹ ಒಂದು ವ್ಯವಹಾರವು ಯಡಿಯೂರಪ್ಪನವರ ಕ್ಯಾಬಿನೆಟ್‍ನಲ್ಲಿ ಶೋಭಾ ಕರಂದ್ಲಾಜೆಯವರು ಇಂಧನ ಸಚಿವರಾಗಿದ್ದಾಗ ನಡೆಯಿತೆಂಬ ವಾಸನೆ ಹೊರಟಿತು. ವಿಚಾರ ಬಹಳ ನೇರವಾಗಿತ್ತು. ರಾಜ್ಯದಲ್ಲಿ ಆಗಿನ್ನೂ ‘ವಿದ್ಯುತ್ ಅಭಾವ’ದ ಸ್ಥಿತಿಯಿದ್ದು ವಿದ್ಯುತ್ ಖರೀದಿಯ ಅವಕಾಶಗಳು ವಿಸ್ತಾರವಾಗುತ್ತಿದ್ದವು. ಆಗ 1980 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿತ್ತು. ಟೆಂಡರ್‍ನಲ್ಲಿ ಹಲವರು ಪಾಲ್ಗೊಂಡಿದ್ದರು. ಅದರಲ್ಲಿ ತೋರಣಗಲ್‍ನ ಜೆಎಸ್‍ಡಬ್ಲ್ಯೂ (ಜಿಂದಾಲ್) ಸಹಾ ಒಂದು. ಅವರಿಂದ ಯೂನಿಟ್‍ವೊಂದಕ್ಕೆ ರೂ.3.80ಕ್ಕೆ ಕೊಳ್ಳುವ ಕುರಿತು ತೀರ್ಮಾನ ಅಂತಿಮವಾಗುವುದರಲ್ಲಿತ್ತು. ಇದು 25 ವರ್ಷಗಳ ದೀರ್ಘಾವಧಿ ಒಪ್ಪಂದವಾಗಿದ್ದು, ಅಲ್ಲಿಯವರೆಗೂ ಪೂರ್ವನಿಗದಿತ ದರದಲ್ಲೇ ವಿದ್ಯುತ್ ಉತ್ಪಾದಿಸಿ ಸರಬರಾಜು ಮಾಡುವ ಹೊಣೆ ಜೆಎಸ್‍ಡಬ್ಲ್ಯೂದ್ದಾಗಿತ್ತು.

ಅದಕ್ಕೆ ರಾಜ್ಯದ ಆರ್ಥಿಕ ಇಲಾಖೆಯು ಆಕ್ಷೇಪವೆತ್ತಿತು. ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ ಮತ್ತಿತರ ಕಡೆ ಇದಕ್ಕಿಂತ ಕಡಿಮೆ ದರಕ್ಕೆ ವಿದ್ಯುತ್ ಖರೀದಿ ಆಗುತ್ತಿದ್ದು, ಅಲ್ಲಿ ಸರಬರಾಜು ಮಾಡುವ ಕೆಲವು ಕಂಪೆನಿಗಳು ಇಲ್ಲೂ ಟೆಂಡರ್ ಹಾಕಿವೆ. ಸರ್ಕಾರದ ಅಧೀನದಲ್ಲಿರುವ ಯರಮರಸ್ ವಿದ್ಯುತ್ ಸ್ಥಾವರ (ಯೂನಿಟ್‍ವೊಂದಕ್ಕೆ 3.177 ರೂ) ಮತ್ತು ಎದ್ಲಾಪೂರ ಸ್ಥಾವರ (3.370 ರೂ)ಗಳಲ್ಲಿ ಇದಕ್ಕಿಂತ ಕಡಿಮೆ ದರಕ್ಕೆ ಉತ್ಪಾದನೆಯಾಗುತ್ತಿದೆ. ಹೀಗಿರುವಾಗ ನಾವು ಅದಕ್ಕಿಂತ ಹೆಚ್ಚು ಮೊತ್ತಕ್ಕೆ ಖರೀದಿಸಬಾರದು ಎಂಬುದೇ ಆ ಆಕ್ಷೇಪ. ಇದಕ್ಕೆ ಇಂಧನ ಇಲಾಖೆಯ ಅಪರ ಕಾರ್ಯದರ್ಶಿಯವರು ವಿವರವಾದ ಉತ್ತರವನ್ನು ನೀಡುತ್ತಾರೆ.

‘ಮಹಾರಾಷ್ಟ್ರದಲ್ಲಿ ಅದಾನಿ ಪವರ್ ಲಿಮಿಟೆಡ್ ಶೇ.50ರಷ್ಟು ವಿದ್ಯುತ್‍ಅನ್ನು ರೂ.2.80ಕ್ಕೆ ಸರಬರಾಜು ಮಾಡುತ್ತದಾದರೂ, ಅವರು ದೇಶೀಯ ಕಲ್ಲಿದ್ದಲನ್ನು ಬಳಸುತ್ತಿದ್ದು, ಕಲ್ಲಿದ್ದಲೂ ರಾಜ್ಯದೊಳಗೇ ಇದೆ. ಹಾಗಾಗಿ ಸಾಗಾಣಿಕೆ ವೆಚ್ಚ ಅವರಿಗೆ ಇಲ್ಲ. ರಾಜಸ್ತಾನದಲ್ಲೂ ಅದಾನಿ ಪವರ್ ಅವರೇ ಸರಬರಾಜು ಮಾಡುತ್ತಿದ್ದು ಅವರ ಸ್ಥಾವರವೂ ರಾಜ್ಯದಲ್ಲೇ ಇದ್ದು, ಬಂದರಿನ ಅನುಕೂಲವೂ ಇದೆ. ಹಾಗಾಗಿ ಅದಲ್ಲಿಯೂ ಕಡಿಮೆ ಇರಬಹುದು.

ಆದರೆ, ಇಲ್ಲಿ ಜೆಎಸ್‍ಡಬ್ಲ್ಯೂ ಎನರ್ಜಿಯವರು 25 ವರ್ಷಗಳ ಕಾಲ ಒಟ್ಟು ಖರೀದಿ ದರವು ಯೂನಿಟ್‍ವೊಂದಕ್ಕೆ ರೂ.3.792ರಿಂದ ರೂ.3.856ರ ಒಳಗೆ ಇರುತ್ತದೆ. ಇದು ನಮಗೆ ಲಾಭದಾಯಕ’ ಈ ವಿವರಣೆಯುಳ್ಳ ಕಡತವು ಇಂಧನ ಸಚಿವರಾದ ಶೋಭಾ ಕರಂದ್ಲಾಜೆಯವರ ಮುಂದೆ ಹೋಗುತ್ತದೆ. ಅಲ್ಲಿಂದ ಅದು ಅನುಮೋದನೆಗೆ ಸಚಿವ ಸಂಪುಟಕ್ಕೆ ಹೋಗಿ ವಿದ್ಯುತ್ ಖರೀದಿಯ ಒಪ್ಪಂದ ಆಗಬೇಕಿರುತ್ತದೆ. ಲೆಟರ್ ಆಫ್ ಇಂಟೆಂಟ್ ಸಹಾ ಕೊಟ್ಟಾಗಿರುತ್ತದೆ.

ಕೊಟ್ಟ ಕಾರಣ ಒಂದು;
ಅಸಲೀ ಹಿಕ್ಮತ್ತು ಬೇರೊಂದು

ಆದರೆ, ‘ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ನಡೆದ ಟೆಂಡರ್‍ನಲ್ಲಿ per ಯೂನಿಟ್‍ಗೆ ಜಾಸ್ತಿ cost ನಮೂದಾಗಿರುವ ಕಾರಣ ಈ ಟೆಂಡರ್‍ನ್ನು cancel ಮಾಡಿ ಹೊಸ ಟೆಂಡರ್ ಕರೆಯಬಹುದಾಗಿದೆ. ಸಚಿವ ಸಂಪುಟದ ಅನುಮೋದನೆಗಾಗಿ ಕೋರಿದೆ’ ಎಂದು ಬರೆಯುತ್ತಾರೆ. ಸಚಿವ ಸಂಪುಟಕ್ಕೆ ಟೆಂಡರ್ ರದ್ದು ಮಾಡಲು ನೋಟ್ ಹೋಗುತ್ತದೆ. ತಮ್ಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಬರೆದ ನೋಟ್‍ಅನ್ನು ಉಪೇಕ್ಷಿಸುತ್ತಾರೆ. ಹೀಗೇಕೆ ಬರೆದಿದ್ದೀರಿ ಎಂದು ಅವರು ಮತ್ತೆ ಅಪರ ಮುಖ್ಯ ಕಾರ್ಯದರ್ಶಿಯವರ ಬಳಿ ಸಮಜಾಯಿಷಿ ಕೇಳುವುದಿಲ್ಲ. ಬದಲಿಗೆ ಅದನ್ನು ರದ್ದುಗೊಳಿಸಿ ಎಂದು ಸಚಿವ ಸಂಪುಟದ ಕಾರ್ಯದರ್ಶಿಯವರಿಗೆ ಕಳಿಸುತ್ತಾರೆ.

ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣಾ ಆಯೋಗದ ಅನುಮತಿಯೊಂದಿಗೆ 25 ವರ್ಷಗಳ ಅವಧಿಗೆ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದ್ದನ್ನು ಆಯೋಗದ ಪೂರ್ವಾನುಮತಿಯಿಲ್ಲದೆ ಸಂಬಂಧಪಟ್ಟ ಇಂಧನ ಸಚಿವರು ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಲು ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಿರುವುದು ಕಾನೂನುಬಾಹಿರ ಎಂದು ಇಲಾಖೆಯ ಕಾನೂನು ಸಲಹೆಗಾರರು ಸಹಾ ಹೇಳುತ್ತಾರೆ.

ಇಲ್ಲಿ ಶೋಭಾ ಕರಂದ್ಲಾಜೆಯವರು ಮಾಡಿದ್ದು ಸರಿ ಇದೆಯಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ವಾಸ್ತವ ಅದಲ್ಲ. 25 ವರ್ಷಗಳ ಕಾಲ ಯೂನಿಟ್‍ವೊಂದಕ್ಕೆ ರೂ 3.80ರ ಹಾಗೆ ಕೊಳ್ಳುವ ಈ ಟೆಂಡರ್ ರದ್ದುಪಡಿಸಿ, ಅದೇ ಜೆಎಸ್‍ಡಬ್ಲ್ಯೂ ಎನರ್ಜಿ ಲಿಮಿಡೆಟ್‍ನಿಂದ ಅಲ್ಪಾವಧಿಗೆ 2011-12ನೇ ಸಾಲಿನಲ್ಲಿ ಅಲ್ಪಾವಧಿ ಆಧಾರದ ಮೇರೆಗೆ ಒಟ್ಟು 3952.01 ದಶಲಕ್ಷ ಯೂನಿಟ್ ವಿದ್ಯುತ್‍ನ್ನು ರೂ.1872.42 ಕೋಟಿಗಳನ್ನು ಪಾವತಿಸಿ ಪ್ರತಿ ಯೂನಿಟ್‍ಗೆ ಸರಾಸರಿ ರೂ. 4.26ರಿಂದ 5.50ರ ದರದಲ್ಲಿ ಖರೀದಿಸಲಾಗುತ್ತದೆ. 2012-13ನೇ ಸಾಲಿನಲ್ಲಿ 4384.37 ದ.ಲ.ಯೂ ವಿದ್ಯುತ್‍ನ್ನು ಪ್ರತಿ ಯೂನಿಟ್‍ಗೆ ರೂ.4.26ರಿಂದ 5.30 ದರದಲ್ಲಿ ರೂ.1895.58 ಕೋಟಿ ಮೊತ್ತದ ವಿದ್ಯುತ್ತನ್ನೂ, 2013-14ನೇ ಸಾಲಿನಲ್ಲಿ ಅಲ್ಪಾವಧಿ ಆಧಾರದ ಮೇರೆಗೆ ಒಟ್ಟು 2786.08 ದ.ಲ.ಯೂ ವಿದ್ಯುತ್‍ನ್ನು ಪ್ರತಿ ಯೂನಿಟ್‍ಗೆ ರೂ.4.92 ರಂತೆ ರೂ. 1371.99 ಕೋಟಿಗಳನ್ನು ಪಾವತಿಸಿ ಖರೀದಿಸಲಾಗುತ್ತದೆ.

ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣಾ ಆಯೋಗದ ಅನುಮತಿಯೊಂದಿಗೆ 25 ವರ್ಷಗಳ ಅವಧಿಗೆ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದ್ದನ್ನು ಆಯೋಗದ ಪೂರ್ವಾನುಮತಿಯಿಲ್ಲದೆ ಸಂಬಂಧಪಟ್ಟ ಇಂಧನ ಸಚಿವರು ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಲು ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಿರುವುದು ಕಾನೂನುಬಾಹಿರ ಎಂದು ಇಲಾಖೆಯ ಕಾನೂನು ಸಲಹೆಗಾರರು ಸಹಾ ಹೇಳುತ್ತಾರೆ.

ಮೇಲಿನ ಅಂಕಿ-ಅಂಶಗಳಂತೆ 7 ವರ್ಷಕ್ಕೆ ರೂ. 5,895.14 ಕೋಟಿ ನಷ್ಟವನ್ನು ಪರಿಗಣಿಸಿದರೆ 25 ವರ್ಷಕ್ಕೆ ಕನಿಷ್ಠ ರೂ.21,054 ಕೋಟಿ ರಾಜ್ಯದ ಬೊಕ್ಕಸಕ್ಕಾಗುವ ನಷ್ಟವಾಗುತ್ತದೆ. ಮತ್ತು ರದ್ದುಪಡಿಸಲಾದ 1580 ಮೆ.ವ್ಯಾ.ನ ಬಿಡ್‍ನಲ್ಲಿ ನಮೂದಿಸಿರುವಂತೆ ಲೋಡ್ ಫ್ಯಾಕ್ಟರ್ ಶೇ.85ರಷ್ಟ್ಟನ್ನು ಪರಿಗಣಿಸಿದರೆ ವಾರ್ಷಿಕ 11,765 ಮೆ.ವ್ಯಾ. ವಿದ್ಯುತ್ ದೊರೆಯುತ್ತಿತ್ತು. ಹೀಗಾಗಿ ಪ್ರತಿ ಯೂನಿಟ್‍ಗೆ ಒಂದು ರೂಪಾಯಿನಂತೆ ನಷ್ಟ್ಟ ಪರಿಗಣಿಸಿದರೆ 25 ವರ್ಷದಲ್ಲಿ ರಾಜ್ಯದ ಬೊಕ್ಕಸಕ್ಕೆ ಆಗುವ ನಷ್ಟದ ಪ್ರಮಾಣ ರೂ.29,413 ಕೋಟಿ ಆಗುತ್ತದೆ. ಅಂದರೆ ಈ ನಷ್ಟದ ಫಲಾನುಭವಿಗಳು ಅಂದು ಅಧಿಕಾರದಲ್ಲಿದ್ದವರು ಮತ್ತು ಜೆಎಸ್‍ಡಬ್ಲ್ಯೂ ಕಂಪೆನಿಯೇ ಆಗಿರಲು ಸಾಧ್ಯ.

ತನಿಖೆಯೂ ಆಗಿಬಿಟ್ಟಿತು;
ಫಲಿತಾಂಶ ಮಾತ್ರ ಕುತೂಹಲಕಾರಿ

ಈ ವಿಚಾರವನ್ನು ಹೊರತಂದು ಅವ್ಯವಹಾರದ ಕುರಿತು ಸದನ ಸಮಿತಿ ರಚನೆಯಾಗುವಂತೆ ನೋಡಿಕೊಂಡಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. 2013ರ ನಂತರ ಬಂದ ಸಿದ್ದರಾಮಯ್ಯನವರ ಸರ್ಕಾರದ ಹೊತ್ತಿನಲ್ಲಿ ಸದನದಲ್ಲಿ ಈ ಕುರಿತು ಬಲವಾಗಿ ಅವರು ಪ್ರತಿಪಾದಿಸಿದ್ದರು. ಸೆಪ್ಟೆಂಬರ್ 2014ರಲ್ಲಿ ಸದನ ಸಮಿತಿ ರಚನೆಯಾದಾಗ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ತಾವೇ ಅದರ ಅಧ್ಯಕ್ಷರಾಗುವ ಹಾಗೆ ನೋಡಿಕೊಂಡರು. ಸಮಿತಿಯಲ್ಲಿ ಶಾಸಕರಾದ ನರೇಂದ್ರಸ್ವಾಮಿ, ಶಿವಾನಂದ ಪಾಟೀಲ್, ಕೆ.ಎನ್.ರಾಜಣ್ಣ, ಬಸವರಾಜ ಬೊಮ್ಮಾಯಿ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿಯವರಿದ್ದರು. ಜೆಡಿಎಸ್‍ನಿಂದ ಯಾರಿರುತ್ತೀರಿ ಎಂದಾಗ ಕುಮಾರಸ್ವಾಮಿಯವರು ತಾನೇ ಇರುತ್ತೇನೆಂದಿದ್ದಲ್ಲದೇ, ಸಮಿತಿಯಲ್ಲೂ ಸತತವಾಗಿ ಹಗರಣ ಬಯಲಿಗೆಳೆಯಲು ಪ್ರಯತ್ನಿಸಿದರು.

ಮೇಲ್ನೋಟಕ್ಕೆ ಇದು ಬಿಜೆಪಿ ಕಾಲದ ಹಗರಣ. ಸದನ ಸಮಿತಿ ರಚನೆಯಾಗುವ ಹೊತ್ತಿಗೆ ಯಡಿಯೂರಪ್ಪ ಮತ್ತು ಶೋಭಾ ಅವರೂ ಬಿಜೆಪಿಗೆ ವಾಪಸ್ಸು ಬಂದಾಗಿತ್ತು. ಕಾಂಗ್ರೆಸ್‍ನ ಬಲಾಢ್ಯ ಲೀಡರ್ ಡಿಕೆಶಿ ಸದನ ಸಮಿತಿ ಅಧ್ಯಕ್ಷ. ಹಾಗಿದ್ದ ಮೇಲೆ ಇನ್ನೊಂದು ಜಿಂದಾಲ್ ಪ್ರಕರಣದಲ್ಲಿ ಯಡಿಯೂರಪ್ಪನವರಲ್ಲದಿದ್ದರೂ ಶೋಭಾ ಕರಂದ್ಲಾಜೆ ಆದರೂ ಜೈಲಿಗೆ ಹೋಗಬೇಕಿತ್ತು. ಎಲ್ಲರೂ ಹಾಗೆಯೇ ಭಾವಿಸಿದ್ದರು.
ಸದನ ಸಮಿತಿಯ ವರದಿ ಕೊಡುವ ಹೊತ್ತಿಗೆ (ನವೆಂಬರ್ 2017) ಸಿದ್ದರಾಮಯ್ಯನವರ ಮೇಲೆ ಬಿಜೆಪಿ ಆರೋಪಗಳ ಸುರಿಮಳೆ ಸುರಿಸುತ್ತಿತ್ತು. ಸಿದ್ದರಾಮಯ್ಯನವರು ಮತ್ತು ಡಿಕೆಶಿ ಇಬ್ಬರೂ ಸೇರಿ ಬಿಜೆಪಿಯನ್ನು ಬಲಿ ಹಾಕಲು ಇದನ್ನು ಬಳಸಿಕೊಳ್ಳುತ್ತಾರೆಂದು ಸುದ್ದಿಗಳೂ ಪ್ರಕಟವಾದವು. ಅಂತಿಮವಾಗಿ ಡಿಕೆಶಿ ವಿಧಾನಸಭೆಯಲ್ಲಿ ವರದಿ ಮಂಡಿಸುವ ಮುನ್ನ ಲೈವ್ ಕೊಟ್ಟ ಟಿವಿ ವಾಹಿನಿಯೊಂದು ‘ಬಿಜೆಪಿಯ ಹಗರಣ ಬಿಚ್ಚಿಟ್ಟ ಡಿಕೆಶಿ’ ಎಂದು ಶೀರ್ಷಿಕೆಯನ್ನೂ ರೆಡಿ ಮಾಡಿಟ್ಟುಕೊಂಡು ಹಾಕಿತ್ತು. ಆದರೂ ಅಂಥದ್ದೇನೂ ಆಗಲಿಲ್ಲ.

ಸದನ ಸಮಿತಿಯ ವರದಿಗೆ ಸಹಿ ಹಾಕುವುದಿಲ್ಲವೆಂದು, ಮೊದಲೇ ಭಿನ್ನ ನಿಲುವನ್ನು ಪ್ರತಿಪಾದಿಸಿದ್ದ ಕುಮಾರಸ್ವಾಮಿ ಹಠ ಹಿಡಿದಿದ್ದರು. ಅಕ್ಟೋಬರ್ 28ರಂದು ಆಗಿನ್ನೂ ತಮ್ಮ ಪರಮ ವಿರೋಧಿಯಾಗಿದ್ದ ಎಚ್‍ಡಿಕೆ ಮನೆಗೆ ಡಿಕೆಶಿ ಖುದ್ದಾಗಿ ಹೋಗಿ ವರದಿಗೆ ಸಹಿ ಹಾಕಿಸಿಕೊಂಡು ಬಂದರು. ನವೆಂಬರ್ 7ರಂದು ವರದಿಯನ್ನು ಸದನಕ್ಕೆ ಒಪ್ಪಿಸಿದರು. ವರದಿಯಲ್ಲಿ ಕ್ಲೀನ್‍ಚಿಟ್ ನೀಡಲಾಗಿತ್ತು. ಒಮ್ಮೆ ಗುಟುರು ಹಾಕಿದ ಎಚ್‍ಡಿಕೆ ಮತ್ತೆ ಸುಮ್ಮನಾದರೇಕೆ ಮತ್ತು ಸಿದ್ದರಾಮಯ್ಯನವರೂ ಈ ವಿಚಾರದಲ್ಲಿ ಸತ್ಯ ಹೊರಬರಲಿ ಎಂದು ಪಟ್ಟು ಹಿಡಿಯಲಿಲ್ಲವೇಕೆ ಎಂಬುದನ್ನು ಓದುಗರು ಸುಲಭವಾಗಿ ಊಹಿಸಬಹುದು.

ಈ ನವೆಂಬರ್ 8ರಂದು ಹೊರಬಿದ್ದದ್ದು ಏನು?

ಇಂತಿಪ್ಪ ಇಂಧನ ಇಲಾಖೆಯಲ್ಲಿ ಈಗ ಹೊರಬಂದಿರುವುದು ಅಂತಹ ದೊಡ್ಡ ಹಗರಣ ಏನಲ್ಲ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ ಹೊರೆ ಹೊರಬೇಕಾಗುವುದು ಮಾತ್ರ ವಿದ್ಯುತ್ ಬಳಕೆದಾರರೇ. ಈ ಸಾರಿಯ ಫಲಾನುಭವಿ ಸಾಕ್ಷಾತ್ ಗೌತಮ್ ಅದಾನಿ. ದೇಶದ ಅತಿ ದೊಡ್ಡ ಖಾಸಗಿ ವಿದ್ಯುತ್ ಉತ್ಪಾದಕರಾಗಿ ನೆಲೆಯೂರುತ್ತಿರುವ, 2020ರ ಹೊತ್ತಿಗೆ 20,000 ಮೆಗಾವ್ಯಾಟ್ ಸಾಮಥ್ರ್ಯವನ್ನು ಪಡೆಯುತ್ತಿರುವ ಅದಾನಿ ಪವರ್ ಕಂಪೆನಿ.

ಮೇಲೆ ಹೇಳಲಾದಂಥದ್ದೇ ಒಂದು ಒಪ್ಪಂದವನ್ನು ಉಡುಪಿಯ (ಅಂದಿನ ನಾಗಾರ್ಜುನ ಒಡೆತನದ) ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ಜೊತೆಗೆ 26.12.2005ರಂದು ಮಾಡಿಕೊಳ್ಳಲಾಗಿತ್ತು. ಅದರಾಚೆಗೆ ಮತ್ತೊಂದು ಕೈ ಬದಲಾಯಿಸಿ, ಏಪ್ರಿಲ್ 2015ರ ನಂತರ ಆ ಕಂಪೆನಿಯು ಗೌತಮ್ ಅದಾನಿಯ ಒಡೆತನದಲ್ಲಿದೆ. 2010ರ ನಂತರ ವಿದ್ಯುತ್ ಸರಬರಾಜು ಆರಂಭವಾಗಿತ್ತು. 11.11.2010 ಮತ್ತು 19.08.2012ನಿಂದ ಇಲ್ಲಿಯವರೆಗೆ ಸರಬರಾಜು ಮಾಡಿದ ವಿದ್ಯುತ್‍ನ ಬಿಲ್‍ಗಳು ಮತ್ತು 2010 ಮತ್ತು 2012ರಲ್ಲಿ 5 ಮತ್ತು 17 ತಿಂಗಳುಗಳ ಕಾಲ ಸರಬರಾಜು ಮಾಡಿದ ವಿದ್ಯುತ್‍ನ ಬಿಲ್‍ಗಳು ತನಗೆ ಪಾವತಿಯಾಗಿಲ್ಲ ಎಂದು ವಿವಿಧ ಎಸ್ಕಾಂಗಳು ಮತ್ತು ವಿದ್ಯುತ್ ಖರೀದಿಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುವ ಸರ್ಕಾರೀ ಸಂಸ್ಥೆ ಪಿಸಿಕೆಎಲ್‍ಗಳ ಮೇಲೆ 2018ರಲ್ಲಿ ಸರಬರಾಜು ಕಂಪೆನಿಯು ದಾವೆ ಹೂಡಿತ್ತು. ಇಂತಹ ದಾವೆಯನ್ನು ಹೂಡಲಿಕ್ಕಾಗಿಯೇ ಕೇಂದ್ರ ಸರ್ಕಾರದ ಅಧೀನದಲ್ಲಿ ಆಯೋಗವೊಂದಿದೆ.

ಅಲ್ಲಿ ಸತತವಾಗಿ ವಿಚಾರಣೆ ನಡೆದು ಬಾಕಿ ಪಾವತಿಯನ್ನು ತಡ ಮಾಡಿದ್ದಕ್ಕೆ ಇದೀಗ 1,600 ಕೋಟಿ ರೂ ದಂಡವನ್ನು (ಸರ್‍ಚಾರ್ಜ್) ಪಾವತಿಸಬೇಕೆಂದು ಆಯೋಗವು ಸ್ಪಷ್ಟವಾಗಿ ತೀರ್ಪನ್ನು ನೀಡಿದೆ. ಒಂದೆಡೆ ವಿವಿಧ ರಾಜಕಾರಣಿಗಳ ಬೇನಾಮಿ ಹೆಸರುಗಳಲ್ಲಿವೆಯೆಂದು ಹೇಳಲಾಗುವ ಬೃಹತ್ ಸೋಲಾರ್ ಪ್ಲಾಂಟ್‍ಗಳಿಂದ ವಿದ್ಯುತ್ ಖರೀದಿಗೂ ಒಪ್ಪಂದವಾಗಿದೆ; ಸರ್ಕಾರದ ಅಧೀನದಲ್ಲಿರುವ ಸ್ಥಾವರಗಳಿಂದಲೂ ವಿದ್ಯುತ್ ಲಭ್ಯವಾಗುತ್ತಿದೆ. ಹೀಗಿರುವಾಗ ಹೆಚ್ಚಿನ ಬೆಲೆ ತೆತ್ತು ಅದಾನಿ ಪವರ್‍ನಂತಹ ಕಂಪೆನಿಗಳಿಂದ ವಿದ್ಯುತ್ ಕೊಳ್ಳುವ ಅಗತ್ಯವೇನಿದೆ? ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡು, ಅಷ್ಟು ವಿದ್ಯುತ್‍ನ ಅಗತ್ಯವಿಲ್ಲದಾಗ ಸರ್ಕಾರದ ಸ್ಥಾವರಗಳನ್ನು ನಿಲ್ಲಿಸಲಾಗುತ್ತಿದೆಯೇ, ಪದೇ ಪದೇ ಈ ಸ್ಥಾವರಗಳು ನಿಲ್ಲಲು ಅದೇ ಕಾರಣವೇ ಎಂಬ ಪ್ರಶ್ನೆಯೂ ಏಳುತ್ತದೆ.

ಜೊತೆಗೆ ಆಯೋಗದ ಮುಂದೆ ಸರಿಯಾದ ರೀತಿಯಲ್ಲಿ ವಾದ ಮಂಡಿಸದೇ 1,600 ಕೋಟಿ ರೂ.ಗಳನ್ನು ಬಳಕೆದಾರರ ತಲೆಗೆ ಕಟ್ಟಬೇಕಾದ ಸ್ಥಿತಿಗೆ ಕಾರಣವೇನು ಎಂಬುದೂ ವಿಚಾರಣೆಗೊಳಗಾಗಬೇಕಾದ ಸಂಗತಿ. ವಿದ್ಯುತ್ ಇಲಾಖೆಯ ಮತ್ತಷ್ಟು ಷಾಕಿಂಗ್ ಸಂಗತಿಗಳನ್ನು ಕೆದಕಿ ಜನರಿಗೆ ಸತ್ಯ ತಿಳಿಸಬೇಕು ಎಂಬುದನ್ನಂತೂ ಮೇಲಿನ ಸಂಗತಿಗಳು ಸ್ಪಷ್ಟಪಡಿಸುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...