ರಾಮಚಂದ್ರಾಪುರ ಮಠದ ಕ್ರಿಮಿನಲ್ ಸನ್ಯಾಸಿ ರಾಘು ಯಾನೆ ರಾಘವೇಶ್ವರ ಭಾರತಿ ಸ್ವಾಮಿಯ ಕಾಮಕಾಂಡಗಳಿಗೂ ಆತನ ಚತುರ್ಮೋಸ ವ್ರತಾಚರಣೆಗೂ ಅವಿನಾ ಸಂಬಂಧ ಹೆಣೆದುಕೊಂಡಿದೆ. ಚಾತುರ್ಮಾಸವು ಸನ್ಯಾಸಿಗಳಿಗೆ ಆತ್ಮಶುದ್ಧಿಯ ಒಂದು ವರ್ಷಾವಧಿಯ ಪಾಪ ಪ್ರಾಯಶ್ಚಿತ್ತ ವ್ರತ. ಅಸಹ್ಯವೆಂದರೆ, ಈ ಹೊತ್ತಲ್ಲೇ ಈತ ಅಸಹಾಯಕ-ಅಮಾಯಕ ಹವ್ಯಕ ಹೆಂಗಸರ ಬಾಳನ್ನು ದಿಕ್ಕೆಡಿಸುವ ಕೃತ್ಯಗಳಿಗೆ ಕೈ ಹಾಕಿದ್ದಾನೆ. ಆತ ಚಾತುರ್ಮಾಸಕ್ಕೆ ಕುಂತಾಗಲೇ ಅತ್ಯಾಚಾರ-ಅನಾಚಾರ ಹಗರಣಗಳು ಬಹಿರಂಗವಾಗೋದು ಅಥವಾ ಆತನ ಮೇಲೆ ರೇಪ್ ಕೇಸ್ ಕಂಪ್ಲೇಂಟು, ದೋಷಾರೋಪ ಪಟ್ಟಿ ಬೀಳುವುದು ನಡೆಯುತ್ತಿದೆ. ಅಂತಹ ಚಾರ್ಜ್‍ಷೀಟುಗಳು ಈಗ ಬಿದ್ದಿವೆ.
ರಾಮಕಥಾ ಗಾಯಕಿ ಪ್ರೇಮಲತಾ ಅತ್ಯಾಚಾರ ಕೇಸಿಂದ ರಾಘುನ ಕಾಮಕಥೆಗಳು ಬಯಲಾದವು. ಚಾತುರ್ಮಾಸದ ನೆಪವೊಡ್ಡಿ ಹಲವು ತನಿಖೆ ವೈದ್ಯಕೀಯ ಪರೀಕ್ಷೆಯಿಂದ ರಾಘು ತಪ್ಪಿಸಿಕೊಂಡಿದ್ದನಾದರೂ ನ್ಯಾಯಾಲಯದಲ್ಲಿ ಈ ಕೇಸ್ ವಿಚಾರಣೆ ನಡೆದಿತ್ತು. ನ್ಯಾಯಲಯಗಳನ್ನೇ ದಿಕ್ಕು ತಪ್ಪಿಸಲು ರಾಘು ಗ್ಯಾಂಗು ಹವಣಿಸಿತ್ತು. ಐದಾರು ನ್ಯಾಯಾಧೀಶರು ಸದ್ರಿ ಕೇಸ್ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಅಂತಿಮವಾಗಿ ಇದೊಂದು ‘ಒಪ್ಪಿತ ಲೈಂಗಿಕ ಸಂಬಂಧ’ವೆಂದು ನ್ಯಾಯಾಲಯವು ವಿಶ್ಲೇಷಿಸಿತ್ತು. ಅಲ್ಲಿಗೆ ಸನ್ಯಾಸಿ ಸೋಗಿನ ರಾಘು ಯತಿಧರ್ಮ ಪಾಲಿಸುತ್ತಿಲ್ಲವೆಂದೂ ಮಠವೊಂದರ ಪೀಠದಲ್ಲಿರುವ ನೈತಿಕತೆ ಇಲ್ಲ ಎಂಬುದು ಸಂಶಯಾತೀತವಾಗಿ ಖಾತ್ರಿಯಾಗಿ ಹೋಗಿತ್ತು!!
ರಾಘುನ ಅಸಹ್ಯ ಅವತಾರ ಅನಾವರಣವಾದ ಹೊತ್ತಲ್ಲೇ ಉತ್ತರಕನ್ನಡದ ಮಲೆನಾಡಿನ ಹೈಗರ ಹೆಣ್ಣುಮಗಳು ‘ಪ್ರಬಲಾ’ ಸಹಾ ರಾಘು ತನ್ನ ಮೇಲೂ ಬಲಾತ್ಕಾರ ನಡೆಸಿದ್ದಾನೆಂದು ಪೊಲೀಸರಿಗೆ ದೂರು ಕೊಟ್ಟಿದ್ದಳು. ಮೂರು ವರ್ಷ ತನಿಖೆ ನಡೆಸಿದ ಸಿಐಡಿ ಪೊಲೀಸರೀಗ ರಾಘು ಮೇಲೆ ಐಪಿಸಿ 1860ರ ನಾಲ್ಕೈದು ಕಲಮ್ ಪ್ರಕಾರ ಅತ್ಯಾಚಾರದ ಆರೋಪ ಪಟ್ಟಿ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 2015ರ ಆಗಸ್ಟ್ 29ರಂದು ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದಾಖಲಿಸಿದ್ದ ದೂರನ್ನು ಗೃಹ ಸಚಿವಾಲಯದ ಆದೇಶದಂತೆ ತನಿಖೆ ನಡೆಸಿದ್ದ ಸಿಐಡಿಯು ರಾಘು ಸ್ವಾಮಿ ಪ್ರಬಲಾಳ ಪತಿರಾಯನ ಹೆಸರು ಉಲ್ಲೇಖಿಸಿ ಜಾರ್ಜ್‍ಶೀಟ್ ಹಾಕಲಾಗಿದೆ. ಸಿಐಡಿ ವಿಧಿವಿಜ್ಞಾನ ವರದಿ ಆಧಾರದಲ್ಲಿ ಸಾಕ್ಷ್ಯ ಸಂಗ್ರಹಿಸಿದೆ. ಬೆಂಗಳೂರು-ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಒಟ್ಟು 45 ಮಂದಿಯನ್ನು ಸಾಕ್ಷಿಯಾಗಿ ಮಾಡಿರುವ ಸಿಐಡಿ ಹಾಕಿರುವ ಕಲಮ್‍ನಂತೆ ರಾಘು ಏಳು ವರ್ಷಕ್ಕೆ ಕಡಿಮೆ ಇಲ್ಲದಂತೆ ಜೀವಾವಧಿವರೆಗಿನ ಶಿಕ್ಷೆಗೆ ಒಳಗಾಗಬಹುದಾಗಿದೆ!
ಕಾಮದುರಂಧರ ರಾಘು ತನ್ನ ಮಠದ ಶಾಲೆಯಲ್ಲಿ ಕಲಿಯುತ್ತಿದ್ದ ಹದಿನೈದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು 2006ರ ಚಾತುರ್ಮಾಸದ ವೇಳೆ. ಆನಂತರ ಪದೇ ಪದೇ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ಸಿಐಡಿ ತನಿಖೆಯಲ್ಲಿ ಪಕ್ಕಾ ಮಾಡಿಕೊಂಡಿದೆ. ಹೈಸ್ಕೂಲಿಗೆ ಹೋಗುತ್ತಿದ್ದ ಆ ಬಾಲಕಿಯ ಮುಗ್ಧತೆ ಬಳಸಿಕೊಂಡು ರಾಘು ಮೊದಲ ಸಲ ಆಕೆಯ ಮೇಲೆ ದೌರ್ಜನ್ಯವೆಸಗಿದ್ದು ರಾಮಚಂದ್ರಾಪುರ ಮಠದಲ್ಲೇ! ಆಕೆ ಅದೆಷ್ಟೇ ಪ್ರತಿಭಟಿಸಿದರೂ ಈ ರಕ್ಕಸ ಸ್ವಾಮಿ ಕೇರ್ ಮಾಡದೆ ‘ಹಠ ಸಂಭೋಗ’ (ಹಲ್ಕಾ ಸ್ವಾಮಿಗಳು ನಡೆಸುವ ಅತ್ಯಾಚಾರಕ್ಕೆ ಇಂತಹ ಪದ ಬಳಸುವುದೇ ವಿಚಿತ್ರವಾಗಿದೆ) ನಡೆಸಿದ್ದಾನೆ; ಬಾಲಕಿಯ ಕೈಗಳನ್ನು ಬಲವಾಗಿ ಹಿಡಿದು, ಬಾಯಿ ಮುಚ್ಚಿ ಲೈಂಗಿಕ ದಾಳಿ ಮಾಡಿದ್ದಾನೆ! ಈ ಲೈಂಗಿಕ ಹಲ್ಲೆ ಕತೆ ಯಾರಿಗಾದರೂ ಹೇಳಿದರೆ ಗುರು ಶಾಪ ತಟ್ಟುತ್ತದೆಂದು ಸ್ವಾಮಿ ಬೆದರಿಸಿದ್ದಾನೆಂದು ಚಾರ್ಜ್‍ಶೀಟ್‍ಲ್ಲಿ ಸಿಐಡಿ ಸ್ಪಷ್ಟವಾಗಿ ಹೇಳಿದೆ!!
ಕಡು ಬಡತನದ ಪ್ರಬಲಾಳ ತಾಯ್ತಂದೆಯ ಅಸಾಯಕತೆ ಬಳಸಿಕೊಂಡು ರಾಘು ಆಕೆಯನ್ನು ಕಾಡಿದ್ದು ಭೀಭತ್ಸವಾಗಿದೆ. ಅಂಗೈ ಅಗಲ ಅಡಿಕೆ ತೋಟ ಬಿಟ್ಟರೆ ಬೇರೇನೂ ಜೀವನ ನಿರ್ವಹಣೆಗೆ ಇಲ್ಲದ ಪ್ರಬಲಾಳ ಅಪ್ಪ ಅಕೆಯನ್ನು ಅದ್ಯಾವ ಕೆಟ್ಟಗಳಿಗೆಯಲ್ಲಿ ರಾಮಚಂದ್ರಪುರ ಮಠ ಸಾಗರದ ಚದುರವಳ್ಳಿಯ ಶ್ರೀ ಭಾರತಿ ವಿದ್ಯಾನಿಕೇತನ ಹೈಸ್ಕೂಲಿಗೆ ಸೇರಿಸಿದ್ದರೋ? ರಾಮಚಂದ್ರಪುರ ಮಠ ಅಪಾರ ಭಯ ಭಕ್ತಿಯಲ್ಲಿ ನಡೆದುಕೊಳ್ಳುವ ಪ್ರಬಲಾಳ ಪಾಲಕರು ರಾಘು ಸ್ವಾಮಿ ತಮ್ಮ ಮನೆ ಮಗಳನ್ನು ಕಾಳಜಿಯಿಂದ ಕಾಪಾಡುತ್ತಾರೆಂದು ನಂಬಿದ್ದರು. ಆದರೆ ತೆವಲುಗಾರ ರಾಘುನಿಂದ ಆಗಿದ್ದು ಮಾತ್ರ ಘನಘೋರ ವಿಶ್ವಾಸ ದ್ರೋಹ!! ಎಂಟನೇ ತರಗತಿ ಕಲಿಯುವಾಗಲೇ ಈ ಅಮಾಯಕ ಬಾಲಕಿ ಮೇಲೆ ಕಾಮುಕ ರಾಘುನ ಕೆಟ್ಟ ದೃಷ್ಟಿ ಬಿದ್ದಿತ್ತು. ಪ್ರಬಲಾಳ ಮೈ-ಕೈ ಮುಟ್ಟಿ ವಿಕೃತಾನಂದ ಅನುಭವಿಸುತ್ತಿದ್ದ.
ಆಗಾಕೆ 9ನೇ ತರಗತಿಯಲ್ಲಿದ್ದಳು. 2006ನೇ ಸಾಲಿನಲ್ಲಿ ನಡೆದ ಚಾತುರ್ಮಾಸಕ್ಕೆ ಗುರು ಸೇವೆಗೆಂದು ಬಂದಿದ್ದ ಹೈಸ್ಕೂಲು ಹುಡುಗಿಯರ ತಂಡದಲ್ಲಿ ಪ್ರಬಲಾಳೂ ಇದ್ದಳು. ಆಕೆಯನ್ನು ಒಂದು ದಿನ ಸಂಜೆ ಉಪಾಯವಾಗಿ ತನ್ನ ಏಕಾಂತದ ಕೊಠಡಿಗೆ ಕರೆಸಿಕೊಂಡಿದ್ದ ರಾಘು-“ಈಗ ನಾವು ಚಾತುರ್ಮಾಸ ವ್ರತದಲ್ಲಿದ್ದೇವೆ. ಈಗ ನಾವೆಲ್ಲವನ್ನು ರಾಮನ ಪ್ರೇರಣೆಯಿಂದಲ್ಲೇ ಮಾಡುತ್ತೇವೆ ಶ್ರೀರಾಮನ ಅವತಾರವೇ ಆಗಿರುತ್ತೇವೆ. ರಾಮನ ಅಪ್ಪಣೆಯಂತೆಯೇ ನಾವೀಗ ನಿನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದೇಕೆಂದರೆ, ನಿನ್ನ ಜಾತಕದಲ್ಲಿ ದೋಷಗಳಿವೆ. ಅದನ್ನು ಪರಿಹರಿಸಲು ರಾಮ ಪ್ರೇರೃಪಿಸಿದ್ದಾನೆ…………” ಎನ್ನುತ್ತ ದಾಳಿ ಮಾಡಿದ್ದಾನೆ! ಹೆದರಬೇಡ ರಾಮನೇ ಹಾಗೆಲ್ಲ ಮಾಡುತ್ತಿದ್ದಾನೆ….. ನೀನು ಪ್ರತಿರೋಧ ಒಡ್ಡದೆ ಸಹಕರಿಸಿದರೆ ಮಾತ್ರ ಜಾತಕ ದೋಷ ಪರಿಹಾರ ಆಗುತ್ತದೆ…!! ಎಂದೆಲ್ಲಾ ಹೇಳಿದ್ದಾನೆ.
ಇಲ್ಲಿ ನಡೆದದ್ದು ಯಾರಿಗಾದರೂ ಹೇಳಿದರೆ ರಾಮನ ಶಾಪ ಖಂಡಿತ ತಟ್ಟುತ್ತದೆಂದು ದೈವ ಭೀತಿಯ ಬ್ಲಾಕ್‍ಮೇಲ್ ಮಾಡಿದ್ದಾನೆ. ನಂಬಿದ ಗುರುವೇ ಅತ್ಯಾಚಾರ ಮಾಡಿದಾಗಿಂದ ಪ್ರಬಲಾ ಮಾನಸಿಕ-ದೈಹಿಕವಾಗಿ ಹೈರಾಣಾಗಿ ಹೋಗಿದ್ದಾಳೆ. ತನಗಾದ ಆಘಾತ ಯಾರಿಗೂ ಹೇಳಲಾಗಲಿಲ್ಲ. ಹೇಳಿದರೆ ನಂಬುವವರ್ಯಾರು? ತನ್ನ ಜೀವದ ಗತಿಯೇನು? ಮನೆಗೆ ಹೋಗೋಣವೆಂದರೆ ಬಡತನ. ಗುರು ಶಾಪ ಕುಟುಂಬಕ್ಕೆ ತಾಕುವ ಭಯ. ಮಠದ ತಾಲಿಬಾನಿಗಳ ಹಲ್ಲೆಯ ಆತಂಕ. ಹುಡುಗಿ ನಿಧಾನಕ್ಕೆ ಖಿನ್ನತೆಗೆ ಜಾರಿದ್ದಾಳೆ. ಮಾನಸಿಕವಾಗಿ ಜರ್ಜರಿತಳಾದ ಪ್ರಬಲಾ ಆಗಾಗ ಪ್ರಜ್ಞೆ ತಪ್ಪುವ ಸ್ಥಿತಿ ತಲುಪಿದಳು. ಆಗ ರಾಘು ಕಂಗಾಲು ಬಿದ್ದ. ಆಕೆ ಚದುರವಳ್ಳಿ ಶಾಲೆಯಲ್ಲೇ ಇದ್ದರೆ ತನ್ನ ಬಂಡವಾಳ ಬಯಲಾಗುತ್ತದೆಂದು ಕೇರಳದ ನದಿಯಡ್ಕದ ಮುಂಜುಗಾವಿನ ಮಠದ ಶಾಲೆಗೆ ರವಾನಿಸಿದ. ಅಲ್ಲಿ ಆಕೆಗೆ ‘ಹಳೆಯದನ್ನು’ ಮರೆಯುವ ಹಿಂಸಾತ್ಮಕ ಟ್ರೀಟ್‍ಮೆಂಟ್ ಮಾಡಿದ್ದಾನೆಂಬ ಪುಕಾರೆದ್ದಿತ್ತು. ರಾಘುನ ಪರಮಾಪ್ತೆಯೂ ಮಠಬಾನಿಗಳ ಮಹಿಳಾ ವಿಂಗ್‍ನ ಲೇಡಿಲಾಡೆನ್ ಎಂಬ ನಾಮಾಂಕಿತಳೂ ಆಗಿದ್ದ ಈಶ್ವರಿ ಬೇರ್ಕಡವು ಎಂಬ ವ್ಯಕ್ತಿಯ ಉಸ್ತುವಾರಿಯಲ್ಲಿ ಪ್ರಬಲಾಳನ್ನು ರಾಘು ಇಟ್ಟಿದ್ದ.
ಮಠದ ಪೆದ್ದುಮಾಣಿಗಳಿಗೆ ತಾನು ಬಳಸಿದ ಹುಡುಗಿಯರನ್ನು ಮದುವೆ ಮಾಡಿಸಿ ಬೇಕಾದಾಗ ಬಳಸಿಕೊಳ್ಳುವ ತಂತ್ರಗಾರಿಕೆ ರಾಘು ಮಾಡುತ್ತಿದ್ದಾನೆಂಬುದು ಹವ್ಯಕರ ವಲಯದಲ್ಲಿ ಬಹಿರಂಗ ರಹಸ್ಯ. ಈ ಮಠ ನೀತಿಯಂತೆ ರಾಘು ಉಪಾಯವಾಗಿ ಪ್ರಬಲಾಳನ್ನು ಭಟ್ಕಳದ ಮಾರಿಕೇರಿಯ ಮಂಜುನಾಥ ಹೆಬ್ಬಾರ್ ಎಂಬ ಎಡವಟ್ಟು ಮಾಣಿಗೆ ಕಟ್ಟಿದ್ದಾನೆ. ಪ್ರಬಲಾಳ ತಾಯ್ತಂದೆಯರ ವಿರೋಧವನ್ನೂ ಲೆಕ್ಕಿಸದೇ ಮದುವೆ ಮಾಡಿದ್ದಾನೆ. ಮದುವೆಗೆ ಒಪ್ಪದಿದ್ದರೆ ಗುರು ಶಾಪಕ್ಕೆ ಒಳಾಗಾಗುವ ಬೆದರಿಕೆ ಹಾಕಿದ್ದಾನೆ. ಹೆಬ್ಬಾರ್ ಗುರುಗಳಿಗೆ ಸಹಕರಿಸು ಎಂದು ಹೆಂಡತಿಗೆ ಹೇಳಿ ಮಠಕ್ಕೆ ಕಳಿಸುತ್ತಿದ್ದ. ಇದೆಲ್ಲ ಸಹಿಸಿಕೊಳ್ಳಲಾಗದೆ ಪ್ರಬಲಾ ವಿವಾಹ ವಿಚ್ಚೇದನಕ್ಕೆ ಕೋರ್ಟ್ ಕಟ್ಟೆ ಹತ್ತುತ್ತಾಳೆ. ಈ ಡೈವೋರ್ಸ್ ಕೇಸ್ ಇತ್ಯರ್ಥಕ್ಕೆಂದು ಪ್ರಬಲಾಳ ಕರೆಸಿಕೊಂಡು ರಾಘು ಆಗಲೂ ಅತ್ಯಾಚಾರ ನಡೆಸಿದ್ದಾನೆ.
ಪ್ರಬಲಾ ರಾಘುನ ಕಾಮ ಕೂಪದಿಂದ ಹೇಗ್ಹೇಗೋ ತಪ್ಪಿಸಿಕೊಂಡು ಯಕ್ಷಗಾನ-ಟಿವಿ ಸೀರಿಯಲ್ ಕಲಾವಿದೆಯಾಗಿ ಜೀವನ ನಡೆಸುತ್ತಿದ್ದಳು. ತನ್ನ ಪಾಡಿಗೆ ತಾನಿದ್ದ ಪ್ರಬಲಾಳಿಗೆ ಮಠ ಮಾಫಿಯಾ ಪ್ರೇಮಲತಾ ಪ್ರಕರಣದ ನಂತರ ಬೆನ್ನುಬಿದ್ದು ಕಾಡತೊಡಗಿತು. ಸಿಐಡಿಯು ರಾಘುನ ಏಕಾಂತ ದರ್ಶನ, ಗೃಹಿಣಿ ಸಂದರ್ಶನ, ಕನ್ಯಾ ಸಂಸ್ಕಾರಕ್ಕೆ ಬಲಿಯಾದ ಅನುಮಾನದಲ್ಲಿ ಹಲವು ಹೆಂಗಸರ ವಿಚಾರಣೆ ನಡೆಸುತ್ತಿದ್ದಾಗ ರಾಘು ರೌಡಿ ಪಡೆ ಚಡಪಡಿಕೆಗೆ ಬಿದ್ದಿತ್ತು. ಪ್ರಬಲಾ ಎಲ್ಲಿ ಸಿಐಡಿ ಎದುರು ಈತನ ವೃತ್ತಾಂತ ಬಿಚ್ಚಿಡುತ್ತಾಳೋ ಎಂಬ ಅನುಮಾನ ಮಠ ಮಾಫಿಯಾದಾಗಿತ್ತು. ರಾಘೂನ ತಾಲಿಬಾನಿ ತಂಡದ ಖತರ್‍ನಾಕ್ ಶಿಷ್ಯರು ಪ್ರಬಲಾಳಿಗೆ ಬೆದರಿಕೆ ಹಾಕತೊಡಗಿದ್ದರು.
ಈ ಪಂಚ ಪಾತಕಿಗಳು 2015ರ ಸೆಪ್ಟೆಂಬರ್ 13ರಂದು ತವರಿನಲ್ಲಿದ್ದ ಪ್ರಬಲಾಳನ್ನು ಇನ್ನೋವಾ ಕಾರಿನಲ್ಲಿ ತುಂಬಿ ಕೆಕ್ಕಾರು ಮಠದಲ್ಲಿದ್ದ ರಾಘುವಿನ ಬಳಿಗೆ ತಂದಿದ್ದರು. ಪ್ರಬಲಾಳ ಕಂಡದ್ದೇ ಉರಿದುಬಿದ್ದ ಈ ಕಳ್ಳ ಸ್ವಾಮಿ ‘ನೀನು ಸಿಐಡಿ ಎದುರು ನನ್ನ ವಿರುದ್ಧ ಏನಾದರು ಹೇಳಿದರೆ ನಿನ್ನ ಬದುಕು ಸರ್ವನಾಶ ಮಾಡ್ತೇನೆ… ನಿನ್ನ ಮತ್ತು ನಿನ್ನ ತಂದೆ ಇಬ್ಬರನ್ನೂ ಕೊಲೆ ಮಾಡಿಸ್ತೇನೆ… ಹಿಂದೆ ನಡೆದ `ಕತೆ’ ಹೇಳಬೇಡ. ನನ್ನ ಪರವೇ ಮಾತಾಡು’ ಎಂದು ತಾಕೀತು ಮಾಡಿದ್ದಾನೆ. ಪಂಚ ಪಾಪಿಗಳೂ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಪ್ರಬಲಾ ಸಿಐಡಿ ವಿಚಾರಣೆಗೆ ಹಾಜರಾಗುವ ಕೆಲವೇ ನಿಮಿಷದ ಮೊದಲು ಮಠದ `ದಿವಾನ’ನಂತೆ ಮೆರೆಯುತ್ತಿರುವ ರಾಘುನ ಸಂಬಂಧಿಯೊಬ್ಬ ಪ್ರಬಲಾಗೆ ಫೋನಾಯಿಸಿ ಧಮಕಿ ಹಾಕಿದ್ದ. ಇದರಿಂದ ತೃಪ್ತನಾಗದ ಆತ ಬೆದರಿಕೆಯ ವ್ಯಾಟ್ಸಪ್ ಮೆಸೇಜನ್ನೂ ಕಳಿಸಿದ್ದ.
ಪ್ರಬಲಾ ಇವರೆಲ್ಲರ ಮೇಲೂ ಕಂಪ್ಲೇಂಟು ಕೊಟ್ಟು, ರಾಘು ರೇಪ್ ರಾದ್ಧಾಂತದ ದೂರು ದಾಖಲಿಸಿದ್ದಳು. ಜನವಾದಿ ಮಹಿಳಾ ಸಂಘಟನೆ ಆಕೆಯ ಬೆನ್ನಿಗೆ ನಿಂತಿತ್ತು. ಮೂರು ವರ್ಷಗಳ ಕಾಲ ತನಿಖೆ ನಡೆಸಿದ ಸಿಐಡಿ ಈಗ ಚಾರ್ಜ್‍ಶೀಟ್ ಹಾಕಿದೆ. ತರತರದ ತಂತ್ರಗಾರಿಕೆ ಮಾಡಿ, ನ್ಯಾಯಾಲಯಗಳಲ್ಲೂ ದಿಕ್ಕು ತಪ್ಪಿಸಲು ನಾಟಕ ನಡೆಸಿ ಪ್ರೇಮಲತಾ ಪ್ರಕರಣದಲ್ಲಿ ಪಾರಾಗಿರುವ ರಾಘುಗೆ ಈ ಬಾರಿಯಾದರೂ ಕೋಳ ಬೀಳಬಹುದಾ? ರಾಘು ಜೈಲಲ್ಲಿ ಮುದ್ದೆ ಮುರಿಯುವಂತಾಗಲು ಇನ್ನೆಷ್ಟು ಪಾಪದ ಹವ್ಯಕ ಹುಡುಗೀರ ಬದುಕು ಬರ್ಬಾದಾಗಬೇಕು? ರಾಘು ಜತೆ ಸಾಫ್ಟಾಗಿದ್ದಾರೆಂದು ಭಾವಿಸಲಾಗಿರುವ ಸಿಎಂ ಕುಮಾರಸ್ವಾಮಿ ಸಿಐಡಿಗೆ ಅಡ್ಡ ಬಾರದಿರಲಿ ಅಂತ ರಾಘುನ ಅನಾಚಾರ ಮಹಿಮೆ ಬಲ್ಲವರು ಹೇಳುತ್ತಿದ್ದಾರೆ.
ಆತ್ಮ`ಹತ್ಯೆ’ ಕೇಸ್ ಕೀರ್ತಿ!!
ಮಠವೊಂದರ ಪೀಠದಲ್ಲಿ ಸ್ವಾಮಿಯಾಗಿರುವ ನೈತಿಕತೆ ಒಂಚೂರು ಇಲ್ಲದ ಕಪಟ ಸನ್ಯಾಸಿ ರಾಘುನ ಪಾಪದ ಕೊಡಗಳು ಒಂದೊಂದಾಗಿ ಭರ್ತಿಯಾಗುತ್ತಿವೆ! ರಾಮಚಂದ್ರಾಪುರದ ಮಠದ ಅನುಯಾಯಿಗಳಾದ ಹವ್ಯಕರು ತಲೆತಗ್ಗಿಸಿ ನಿಲ್ಲುವಂತೆ ಮಾಡಿರುವ ಈ ಸ್ವಾಮಿಯ ಮೇಲಾಗಿರುವ ನಾನಾ ನಮೂನೆಯ ಕೇಸ್‍ಗಳ ಚಾರ್ಜ್‍ಶೀಟ್‍ಗಳನ್ನು ಒಂದರ ಹಿಂದೊಂದರಂತೆ ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸತೊಡಗಿದೆ. ಯಡ್ಡಿ ಸಿಎಂ ಆಗಿದ್ದಾಗ ಅಕ್ರಮವಾಗಿ ರಾಘು ಜೋಳಿಗೆಗೆ ಹಾಕಿಕೊಂಡಿದ್ದ ಗೋಕರ್ಣ ದೇಗುಲವನ್ನು ಹೈಕೋರ್ಟು ಸರ್ಕಾರದ ಸುಪರ್ದಿಗೆ ವಹಿಸುತ್ತಿದ್ದಂತೆಯೇ, ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆತನನ್ನು ಆರೋಪಿಯೆಂದು ಸಿಐಡಿ ಚಾರ್ಜ್‍ಶೀಟ್ ಹಾಕಿದೆ. ಅದರ ವಾರೊಪ್ಪತ್ತಿನಲ್ಲೇ ಪುತ್ತೂರಿನ ಶ್ಯಾಮಪ್ರಸಾದ್ ಶಾಸ್ತ್ರಿ ಕೇಸ್‍ನಲ್ಲಿ ರಾಘು ಮತ್ತಾತನ ಅನಾಹುತಕಾರಿ ಶಿಷ್ಯೋತ್ತಮ ಕಲ್ಲಡ್ಕ ಪ್ರಭಾಕರ ಭಟ್ಟನ ಕಿತಾಪತಿಯಿದೆಯೆಂದು ಸಿಐಡಿ ಆರೋಪ ಪಟ್ಟಿಯಲ್ಲಿ ಸ್ಪಷ್ಟಪಡಿಸಿದೆ.
ಅದು 2014ರ ಸೆಪ್ಟೆಂಬರ್ 1ನೇ ತಾರೀಖಿನ ದಿನ. ಪುತ್ತೂರು ತಾಲ್ಲೂಕಿನ ಕೆದಿಲ ಗ್ರಾಮದ ಅಮಾಯಕ ಶ್ಯಾಮಶಾಸ್ತ್ರಿ ಮನೆಯಲ್ಲಿದ್ದ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಘು, ಆರೆಸ್ಸೆಸ್‍ನ ಕಲ್ಲಡ್ಕ ಭಟ್ಟ ಕೊಡುತ್ತಿದ್ದ ಚಿತ್ರಹಿಂಸೆ ತಾಳಲಾರದೆ ಶ್ಯಾಮಪ್ರಸಾದ್ ಸಾವಿಗೆ ಶರಣಾಗಿದ್ದಾರೆ ಎನ್ನುವುದು ಆಗ ಎದ್ದ ಗುಮಾನಿಯಾಗಿತ್ತು. ಈ ಶ್ಯಾಮಶಾಸ್ತ್ರಿ ಬೇರ್ಯಾರೂ ಅಲ್ಲ;
ರಾಘುನಿಂದ ನಿರಂತರವಾಗಿ ಬಳಸಲ್ಪಟ್ಟಿದ್ದ ರಾಮಕಥಾ ಗಾಯಕಿ ಪ್ರೇಮಲತಾರ ಗಂಡನ ಖಾಸಾ ತಮ್ಮ. ಪತ್ರಿಕಾಗೋಷ್ಠಿ ಕರೆದು ‘ಅತ್ತಿಗೆಯೇ ಸರಿಯಿಲ್ಲ. ಆಕೆ ನಡತೆಗೆಟ್ಟವಳು… ಗುರುಗಳು ಸಚ್ಚಾರಿತ್ರ್ಯವಂತರು…, ಅತ್ಯಾಚಾರ, ಅನಾಚಾರವೇನೂ ಮಠದಲ್ಲಿ ನಡೆದಿಲ್ಲ…’ ಎಂದು ಹೇಳಿಕೆ ಕೊಡುವಂತೆ ಶ್ಯಾಮಶಾಸ್ತ್ರಿ ಮೇಲೆ ಹಲವು ದಿನಗಳಿಂದ ಇವರು ಒತ್ತಡ, ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿತ್ತು.
ಈ ಸುಳ್ಳು ಮಾತುಗಾರಿಕೆಗೆ ಸಿದ್ಧರಿಲ್ಲದ ಶ್ಯಾಮಶಾಸ್ತ್ರಿ ನಾಡಕೋವಿಯಿಂದ ಆತ್ಮ`ಹತ್ಯೆ’ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲಿಗೆ ಕಾಮಕಾಂಡದಿಂದ ಕೊಳಕಾಗಿದ್ದ ರಾಮಚಂದ್ರಾಪುರದ ಮಠ ಪೀಠಕ್ಕೆ ರಕ್ತದ ಕಲೆಯೂ ಢಾಳಾಗಿ ಅಂಟಿತ್ತು.
ರಾಘು ಸ್ವಾಮಿ ಹೊನ್ನಾವರದ ಕೆಕ್ಕಾರ ಮಠದಲ್ಲಿ ಚತು`ರ್ಮೋಸ’ದಲ್ಲಿದ್ದಾಗ, ಆತನನ್ನು ಭೇಟಿಯಾಗಿದ್ದ ಆರೆಸ್ಸೆಸ್‍ನ ದತ್ತಾತ್ರೇಯ ಹೊಸಬಾಳೆ, ಕೃಷ್ಣಶಾಸ್ತ್ರಿ (ದಿವಾಕರ ಶಾಸ್ತ್ರಿ ದೊಡ್ಡಣ್ಣ) ನಿಯೋಗ ‘ನೀನು ಬ್ರಹ್ಮಚರ್ಯೆ ಪಾಲಿಸುತ್ತಿಲ್ಲ. ತಕ್ಷಣ ಪೀಠ ಖಾಲಿಮಾಡು’ ಎಂದಿದ್ದರು. ತನ್ನ ಮೇಲೆ ಪ್ರೇಮಲತಾ ಅತ್ಯಾಚಾರದ ಕೇಸು ಜಡಿಯುತ್ತಾರೆಂಬುದು ಆಗಲೇ ರಾಘುಗೆ ಅರ್ಥವಾಗಿತ್ತು. ಆತ ಅದಕ್ಕೂ ಮೊದಲೇ ಪ್ರೇಮಲತಾ ಮತ್ತಾಕೆಯ ಗಂಡ ದಿವಾಕರ ಶಾಸ್ತ್ರಿ `ಮೂರು ಕೋಟಿ ಕೊಡುವಂತೆ ತನಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ’ ಎಂದು ತನ್ನ ಶಿಷ್ಯನೊಬ್ಬನಿಂದ ಕಂಪ್ಲೇಂಟು ಕೊಡಿಸಿದ್ದ. ತನ್ನ ತಾಯ್ತಂದೆಯನ್ನು ಸುಳ್ಳು ಆರೋಪದಲ್ಲಿ ಪೊಲೀಸರು ಬಂಧಿಸುತ್ತಿದ್ದಂತೆಯೇ ಪ್ರೇಮಲತಾರ ಮಗಳು ಬೆಂಗಳೂರು ಗಿರಿನಗರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಕೇಸು ಹಾಕಿದ್ದರು. ತನ್ನ ತಾಯಿ ಮೇಲೆ ರಾಘು ಸ್ವಾಮಿ ಅತ್ಯಾಚಾರ ನಡೆಸಿದ್ದಾನೆಂದು ಆಕೆ ಕಂಪ್ಲೇಂಟಲ್ಲಿ ಹೇಳುತ್ತಿದ್ದಂತೆಯೇ ರಾಘುನ ದುಷ್ಟತನ ಜಗಜ್ಜಾಹೀರಾಗಿತ್ತು! ಕಂಗಾಲಾಗಿದ್ದ ರಾಘು ತನ್ನ ಪರವಾಗಿ ಶ್ಯಾಮಶಾಸ್ತ್ರಿಯನ್ನು ಬಳಸಿಕೊಳ್ಳಲು ಹವಣಿಸಿದ್ದ. ಆದರೆ ಬುರ್ನಾಸ್ ರಾಘು ಪರವಾಗಿ ಮಾತನಾಡಲು ಶ್ಯಾಮಶಾಸ್ತ್ರಿ ಆತ್ಮಸಾಕ್ಷಿ ಒಪ್ಪಲಿಲ್ಲ. ಆತ ಗುಂಡು ಹಾರಿಸಿಕೊಂಡು ಜೀವಬಿಟ್ಟಿದ್ದರು.
ನಿಷ್ಪಾಪಿ ಶ್ಯಾಮಶಾಸ್ತ್ರಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ರಾಘು, ಕಲ್ಲಡ್ಕ ಭಟ್ಟ ಮತ್ತು ಶಿವಶಂಕರ ಭಟ್ಟನ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅನ್ವಯ ಸಿಐಡಿ ಪೊಲೀಸರು ಚಾರ್ಜ್‍ಶೀಟ್ ಹಾಕಿದ್ದಾರೆ. ರಾಘುನ ಮೇಲೆ ಸರಣಿ ಚಾರ್ಜ್‍ಶೀಟ್ ಬೀಳುತ್ತಿರೋದು ಸಾತ್ವಿಕ ಹವ್ಯಕ ಸಮುದಾಯವನ್ನು ದಿಗ್ಬ್ರಾಂತಗೊಳಿಸಿಬಿಟ್ಟಿದೆ. ಇಂತಹ ಕ್ರಿಮಿನಲ್ ತಮ್ಮ ಮಠದ ಸ್ವಾಮಿಯಾಗಿರುವುದು ಬೇಡವೆಂದು ಹವ್ಯಕರು ಹೇಳುತ್ತಿದ್ದಾರೆ. ಆದರೆ ರಾಘು ಮಾತ್ರ ಮೂರೂ ಬಿಟ್ಟು ಪೀಠಕ್ಕೆ ಫೆವಿಕಾಲ್ ಹಾಕಿಕೊಂಡು ಕುಂತೇ ಇದ್ದಾನೆ. ರಾಘು ಜೈಲುಪಾಲಾಗುವ ಮೊದಲೇ ಪೀಠಕ್ಕೆ ಉತ್ತರಾಧಿಕಾರಿ ನೇಮಿಸಿಕೊಂಡರೆ ಹವ್ಯಕರ ಮಾನ ಉಳಿಯುತ್ತದೆ.
– ಶುದ್ದೋಧನ


