Homeಮುಖಪುಟನವೆಂಬರ್ ಇರಾನ್ ನಿರ್ಬಂಧಗಳು ಮತ್ತು ತೈಲ ಬೆಲೆಯ ಬಿಕ್ಕಟ್ಟುಗಳು!

ನವೆಂಬರ್ ಇರಾನ್ ನಿರ್ಬಂಧಗಳು ಮತ್ತು ತೈಲ ಬೆಲೆಯ ಬಿಕ್ಕಟ್ಟುಗಳು!

- Advertisement -
- Advertisement -

ಪೆಟ್ರೋಲ್ ಬೆಲೆ 150 ರೂ. ಆದರೂ ಪರವಾಗಿಲ್ಲ. ನಾನು ನಡೆದುಕೊಂಡೇ ಹೋಗಿ ಮೋದಿಗೇ ಓಟು ಹಾಕುತ್ತೇನೆ’ ಎಂಬ ಒಂದು ‘ಜೋಕ್’ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಈ ಭಾವನೆಯು ಇಂದಿನ ಜನಸಾಮಾನ್ಯರ ಅನಿಸಿಕೆಯೋ ಅಥವಾ ಬಿಜೆಪಿ ಐಟಿ ಸೆಲ್‍ನ ಸೃಷ್ಟಿಯೋ ಎಂಬ ಮಾತು ಬೇರೆ. ಆದರೆ, ಜಾಗತಿಕ ತೈಲ ರಾಜಕಾರಣದ ಸ್ಥಿತಿಯನ್ನು ನೋಡಿದರೆ ತೈಲ ಬೆಲೆಯು ಮತ್ತಷ್ಟು ಏರಲಿದೆ ಎಂಬುದರಲ್ಲಿ ಸಂಶಯವಿಲ್ಲ.
ಕೆಲವು ಸಂದರ್ಭ ಬಿಟ್ಟರೆ ಮೋದಿ ಸರ್ಕಾರವು ತಾನು ಬಂದಾಗಿನಿಂದ ತೈಲಬೆಲೆಯನ್ನು ಏರಿಸುತ್ತಲೇ ಇದೆ. ಆಗಸ್ಟ್ 2014ರ ನಂತರ ಅಂತರ್ರಾಷ್ಟ್ರೀಯ ಕಚ್ಚಾ ತೈಲದ ಬೆಲೆಯು ಅತೀ ಕೆಳಗೆ ಇಳಿದುದ್ದರ ಹೊರತಾಗಿಯೂ ಈ ಏರಿಕೆ ನಡೆಯುತ್ತಿದೆ. ಯುಪಿಎ 1 ಮತ್ತು ಯುಪಿಎ 2ರ ಅವಧಿಯಲ್ಲಿ ಕಚ್ಚಾ ತೈಲದ ಸರಾಸರಿ ಬೆಲೆ ಬ್ಯಾರೆಲ್‍ಗೆ 98 ಡಾಲರ್‍ಗಳಾಗಿದ್ದವು. ಎನ್‍ಡಿಎ ಅವಧಿಯಲ್ಲಿ ಇದು ಬ್ಯಾರೆಲ್‍ಗೆ 45 ಡಾಲರ್‍ಗಳು. ಅಂದರೆ ಅರ್ಧಕ್ಕಿಂತ ಕಡಿಮೆ. ಈಗ ಅದು ಬ್ಯಾರೆಲ್‍ಗೆ 74 ಡಾಲರ್‍ಗಳು. ಮನಮೋಹನಸಿಂಗರ ಆಡಳಿತದ ಸಂದರ್ಭದಲ್ಲಿ ಬಿಜೆಪಿಯು ವಿರೋಧ ಪಕ್ಷವಾಗಿ ಎಲ್‍ಪಿಜಿ ಮತ್ತು ಪೆಟ್ರೋಲ್ ಬೆಲೆಗಳ ಏರಿಕೆಯ ಬಗ್ಗೆ ದೊಡ್ಡ ಗಂಟಲಿನಲ್ಲಿ ಮಾತನಾಡುತ್ತಿತ್ತು. ಆದ್ದರಿಂದಲೇ, ಈಗ ತನ್ನದೇ ಅವಧಿಯಲ್ಲಿ ಕೇಂದ್ರ ಸರ್ಕಾರ ಇಂಧನ ಬೆಲೆಯಲ್ಲಿ ಮಾಡುತ್ತಿರುವ ಅಗಾಧ ಏರಿಕೆಯ ವಿಚಾರ ಯಾಕೆ ಬಿಜೆಪಿಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದೆ ಎಂಬುದು ಅರ್ಥವಾಗದ ವಿಚಾರವೇನಲ್ಲ!
ಕೈಗಾರಿಕೀಕರಣದ ಆರಂಭದ ದಿನಗಳಲ್ಲಿ ಮೊದಲ ವಾಹಕವಾಗಿ ಬಳಕೆಯಲ್ಲಿದ್ದದ್ದು ಕಲ್ಲಿದ್ದಲು. ನಂತರ ಕಚ್ಚಾ ತೈಲ. ಈಗ ಅಣುಶಕ್ತಿ ಹಾಗೂ ಬೇರೆ ಬಗೆಯ ಪುನಶ್ಚೇತನಗೊಳ್ಳಬಲ್ಲ ಶಕ್ತಿಮೂಲಗಳ ಮೇಲೆ ಹೆಚ್ಚಿನ ಭರವಸೆ ವ್ಯಕ್ತವಾಗುತ್ತಿದೆ. ಕೈಗಾರಿಕಾ ಜನಗತ್ತಿನ ಸೃಷ್ಟಿಯು, ಅಗಾಧ ಪ್ರಮಾಣದ ಕಚ್ಚಾತೈಲದ ಲಭ್ಯತೆಯಿಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂಬ ಜನಪ್ರಿಯ ವಾದವೊಂದು ಚಲಾವಣೆಯಲ್ಲಿದೆ. ಜಗತ್ತಿನಾದ್ಯಂತ ತೈಲವೊಂದು ಪ್ರಧಾನವಾದ ಸರಕು ಸಾಮಗ್ರಿಯಾಗಿ ಬೆಳೆದಿದ್ದು, ಯಾವುದೇ ದೇಶದ ಪ್ರಗತಿ, ಬೆಳವಣಿಗೆ ಮತ್ತು ಅದರ ಒಟ್ಟಾರೆ ಆರ್ಥಿಕತೆಯ ಶಕ್ತಿಯನ್ನು ಅಳೆಯುವುದು ಇದೇ ಆಧಾರದ ಮೇಲೆ ಎಂಬಂತಾಗಿದೆ.
ತೈಲಮೂಲಗಳನ್ನು ನಿಯಂತ್ರಿಸುವ ದುರಾಸೆಯ ಸ್ಫರ್ಧೆಯಲ್ಲಿ, ಮಧ್ಯಪ್ರಾಚ್ಯವು ಭೂಗರ್ಭ ರಾಜಕಾರಣದ ಚೆಸ್ ಮಣೆಯಾಗಿ ಪರಿವರ್ತನೆಯಾಗಿದೆ. ಯುಎಸ್‍ಎಸ್‍ಆರ್‍ನ ಪತನದ ನಂತರ ಮಧ್ಯಪ್ರಾಚ್ಯದ ಸಮೃದ್ಧ ತೈಲ ನಿಕ್ಷೇಪದ ಅವಿರೋಧ ಅಧಿಪತಿ ಯಾರಾಗಿರಬೇಕೆಂಬ ವಿಚಾರದಲ್ಲಿ ಏರ್ಪಟ್ಟಿರುವ ಸ್ಫರ್ಧೆಯಿಂದಾಗಿ ನಿರಂತರ ಯುದ್ಧಗಳು ನಡೆಯುತ್ತಿದೆ. ವಿಶೇಷವಾಗಿ ತನ್ನ ಯುದ್ಧಕೋರ ಸ್ಫರ್ಧೆಯ ಕಾರಣಕ್ಕೆ ಅಮೇರಿಕಾದ ಕೈವಾಡ ಬಲವಾಗಿರುವ ಈ ಬೆಳವಣಿಗೆಗಳಿಂದಾಗಿ ಆ ದೇಶಗಳ ಜನರಿಗೆ ನಿರಂತರ ಸಂಕಷ್ಟ ಮತ್ತು ಗೊಂದಲವನ್ನು ಎದುರಿಸಬೇಕಾಗಿ ಬಂದಿದೆ. ಮಧ್ಯಪ್ರಾಚ್ಯದಲ್ಲಿ ಆರಿಸಲ್ಪಟ್ಟ ಸರ್ಕಾರಗಳನ್ನು ಉರುಳಿಸುವ ಮತ್ತು ಪ್ರಜಾಪ್ರಭುತ್ವದ ಸ್ಥಾಪನೆಯ ಹೆಸರಿನಲ್ಲಿ ಅಮೇರಿಕಾದ ಕೈಗೊಂಬೆ ಸರ್ಕಾರಗಳನ್ನು ಕೂರಿಸಲು ಆಂತರಿಕ ದಂಗೆಗಳನ್ನು ಹುಟ್ಟುಹಾಕುವ ಮೂಲಕ ಆ ದೇಶಗಳನ್ನು ಅಸ್ಥಿರಗೊಳಿಸಿ ಅಲ್ಲಿ ಅರಾಜಕ ವಾತಾವರಣವನ್ನು ಹುಟ್ಟುಹಾಕಲಾಗಿದೆ. ಇತಿಹಾಸದಲ್ಲಿ, ಇಂತಹ ಸಾಮ್ರಾಜ್ಯಶಾಹಿ ಪ್ರಯತ್ನಗಳನ್ನು ಎದುರಿಸುವ ಧೈರ್ಯವನ್ನು ತೋರಿರುವುದು ಕೆಲವೆ ಸರ್ಕಾರಗಳು ಮಾತ್ರ. 1979ರಲ್ಲಿ ಅಮೇರಿಕಾ ಬೆಂಬಲಿತ ಶಾ ಆಳ್ವಿಕೆಯ ವಿರುದ್ಧ ಇರಾನಿನಲ್ಲಿ ನಡೆದ ಪ್ರಜಾದಂಗೆಯು ಕಚ್ಚಾತೈಲದ ಬೆಲೆ ಬ್ಯಾರಲ್‍ಗೆ 128 ಡಾಲರ್‍ಗೆ ಏರುವಂತೆ 1980ರಲ್ಲಿ ಬಹುದೊಡ್ಡ ತೈಲ ಬಿಕ್ಕಟ್ಟಿಗೆ ಕಾರಣವಾಯಿತು.
ಇರಾನ್ ರೂಪಿಸಿಕೊಂಡ ಅಣ್ವಸ್ತ್ರ ನೀತಿಯನ್ನು ಸಹಿಸಲಾರದೆ ಅಮೇರಿಕಾ ತನ್ನ ನಿರ್ಭಂಧಗಳ ಮೂಲಕ ಆ ದೇಶವನ್ನು ಅಂಗವೈಕಲ್ಯಕ್ಕೆ ತಳ್ಳಿತು. ಕೊನೆಗೆ, 2014ರಲ್ಲಿ ಒಬಾಮಾ ಸರ್ಕಾರ ಕೊನೆಯ ಹಂತದಲ್ಲಿದ್ದಾಗ, ಚೀನಾ, ರಷ್ಯಾ, ಫ್ರಾನ್ಸ್, ಜರ್ಮನಿ ಮತ್ತು ಇಂಗ್ಲೆಂಡ್ ಸೇರಿದಂತೆ ಎಲ್ಲರೂ ಸೇರಿ ‘ಜಂಟಿ ಸಮಗ್ರ ಕಾರ್ಯನೀತಿ’ ಎಂಬ ಹೆಸರಿನಲ್ಲಿ ‘ಇರಾನ್ ಅಣ್ವಸ್ತ್ರ ಒಪ್ಪಂದ’ದ ಅಡಿಯಲ್ಲಿ ಮಾತುಕತೆಗೆ ಬಂದರು. ಇದರ ಪ್ರಕಾರ ಇರಾನ್ ತನ್ನ ಸ್ವಂತ ಅಣ್ವಸ್ತ್ರ ನೀತಿಯನ್ನು ಕೈಬಿಟ್ಟು ಅಂತರಾಷ್ಟ್ರೀಯ ಆಣು ಶಕ್ತಿ ಸಂಸ್ಥೆ(ಐಎಇಎ)ಯ ನಿಬಂಧನೆಗಳಿಗೆ ಒಳಪಡುವುದಾದಲ್ಲಿ ಹಲವಾರು ಆರ್ಥಿಕ ಮತ್ತು ವ್ಯಾಪಾರಿ ನಿರ್ಭಂಧಗಳನ್ನು ತೆಗೆದು ಹಾಕುವುದಾಗಿ ಹೇಳಲಾಗಿತ್ತು. ಇರಾನ್ ಒಪ್ಪಿತು. ನಿರ್ಭಂಧಗಳು ಸಡಿಲಾದವು, ಇರಾನ್‍ನ ವ್ಯಾಪಾರ ವಹಿವಾಟು ಹೆಚ್ಚಿತು ಮತ್ತು ಆರ್ಥಿಕತೆ ವೃದ್ಧಿಸತೊಡಗಿತು. ಮಧ್ಯಪ್ರಾಚ್ಯದುದ್ದಕ್ಕೂ ಪಸರಿಸತೊಡಗಿದ ಇರಾನಿನ ಪ್ರಭಾವವು ಅಮೇರಿಕದ ಆಡಳಿತಕ್ಕೆ ಸಹ್ಯವಾಗಲಿಲ್ಲ. ತನ್ನ ‘ದೊಡ್ಡಣ್ಣ’ ದಬ್ಬಾಳಿಕೆಯ ನಿರ್ದಿಷ್ಟ ರೀತಿಯಲ್ಲಿ ಇರಾನ್ ಅಣ್ವಸ್ತ್ರ ಒಪ್ಪಂದವನ್ನು ಟ್ರಂಪ್ ಸರ್ಕಾರ ಏಕಪಕ್ಷೀಯವಾಗಿ ಮೇ 8, 2018ರಲ್ಲಿ ರದ್ದು ಮಾಡಿತು. ಅಷ್ಟೇ ಅಲ್ಲದೆ ವ್ಯಾಪಾರಿ ನಿರ್ಭಂಧಗಳನ್ನು ಮತ್ತೆ ಹೇರಿದ್ದಲ್ಲದೆ ಅಕ್ಕಪಕ್ಕದ ದೇಶಗಳು ನವೆಂಬರ್ 4ರ ನಂತರ ಇರಾನ್ ಜೊತೆಗೆ ವಹಿವಾಟು ನಡೆಸಬಾರದೆಂದೂ, ನಡೆಸಿದ್ದೇ ಆದಲ್ಲಿ ಅಮೇರಿಕಾ ತನ್ನ ರೀತಿಯಲ್ಲಿ ವರ್ತಿಸಬೇಕಾಗುತ್ತದೆಂದು (ವ್ಯಾಪಾರಿ ನಿರ್ಭಂಧಗಳ ರೂಪದಲ್ಲಿ) ಆ ದೇಶಗಳಿಗೆ ಎಚ್ಚರಿಕೆ ನೀಡಲಾಯಿತು.
ಅಮೇರಿಕಾ, ಚೀನಾ, ಭಾರತ, ಜಪಾನ್ ಮತ್ತು ರಷ್ಯಾ ದೇಶಗಳು ಕಚ್ಚಾತೈಲದ ಅತಿದೊಡ್ಡ ಗ್ರಾಹಕರಾಗಿವೆ. ಅಮೇರಿಕಾ, ಸೌದಿ, ರಷ್ಯಾ, ಕೆನಡಾ, ಇರಾಕ್, ಇರಾನ್‍ಗಳು ಅತಿದೊಡ್ಡ ತೈಲ ಉತ್ಪಾದಕ ದೇಶಗಳು. 2008ರ ಆರ್ಥಿಕ ಕುಸಿತದ ನಂತರ ಅಮೇರಿಕಾ ‘ಫ್ರಾಕಿಂಗ್’ (ನೆಲದೊಳಗೆ ಅತ್ಯಧಿಕ ಒತ್ತಡದಲ್ಲಿ ದ್ರವವನ್ನು ನುಗ್ಗಿಸಿ, ಸುತ್ತಲಿನ ಭೂಪದರಗಳನ್ನು ಸ್ಫೋಟಿಸಿ ಆ ಮಣ್ಣಿನ ಮಡಿಕೆಗಳಡಿ ಶೇಖರವಾಗಿರಬಹುದಾದ ನಿಕ್ಷೇಪಗಳನ್ನೂ ಬಿಡದೆ ಗಣಿಗಾರಿಕೆ ಮಾಡುವ ವಿನಾಶಕಾರಿ ವಿಧಾನ-ಅದು) ವಿಧಾನದ ಮೂಲಕ ಹೆಚ್ಚೆಚ್ಚು ಪ್ರಮಾಣದ ಕಚ್ಚಾತೈಲವನ್ನು ಉತ್ಪಾದಿಸಲಾರಂಭಿಸಿತು ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆಯನ್ನು ಹೆಚ್ಚಿನ ಮಟ್ಟದಲ್ಲೇ ಆಗಸ್ಟ್ 2014ರವರೆಗೂ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹಾಗೆಯೇ, ರಷ್ಯಾ, ಚೀನಾ ಮತ್ತು ಇರಾನ್‍ಗಳನ್ನು ತೈಲಮಾರುಕಟ್ಟೆಯಿಂದ ಹೊರನೂಕುವ ಕುತಂತ್ರಗಳನ್ನೂ ಅಮೇರಿಕಾ ಪೋಣಿಸಲಾರಂಭಿಸಿತು. ಈ ದೇಶಗಳು ಆರ್ಥಿಕ ನಿರ್ಭಂಧ ಮತ್ತು ತೈಲ ಯುದ್ಧಗಳನ್ನು ಎದುರಿಸಿ ನಿಂತಿವೆಯಾದರೂ, ಕಳೆದ 4 ದಶಕಗಳಲ್ಲಿ ಒಳಗೊಳಗೇ ಹೆಪ್ಪುಗಟ್ಟುತ್ತಿರುವ ಬಿಕ್ಕಟ್ಟು ಯಾವಾಗ ಬೇಕಾದರೂ ಸ್ಫೋಟಕ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಒಂದು ವೇಳೆ ಹಾಗಾದಲ್ಲಿ, ಅದು 1980ರ ಇರಾನ್ ಬಿಕ್ಕಟ್ಟಿಗಿಂತ ಬಹಳ ಗಂಭೀರವಾದ ಪರಿಣಾಮಗಳನ್ನು ಜಾಗತಿಕ ಸಂರಚನೆಯ ಮೇಲೆ ಬೀರಬಲ್ಲದು.
ಭಾರತದಂತಹ ಅಭಿವೃದ್ಧಶೀಲ ದೇಶದ ಆರ್ಥಿಕತೆಯು ತಾನು ಬಳಸುವ ತೈಲದ ಮೇಲೆ ಮತ್ತು ಆ ತೈಲದ ಬೆಲೆಯ ಮೇಲೆ ನೇರವಾಗಿ ಅವಲಂಬಿಸಿರುತ್ತದೆ. ತನ್ನ ಶಕ್ತಿಮೂಲಗಳ ವಿಚಾರದಲ್ಲಿ ಭಾರತವು ಸ್ವಯಂಪೂರ್ಣತೆಯನ್ನು ಸಾಧಿಸಿಲ್ಲ. ತನಗೆ ಬೇಕಿರುವ ಕಚ್ಚಾತೈಲದ ಪ್ರಮಾಣದಲ್ಲಿ ಕೇವಲ 17%ರಷ್ಟನ್ನು ಮಾತ್ರ ಭಾರತ ಉತ್ಪಾದಿಸುತ್ತದೆ ಹಾಗೂ ಉಳಿದ ಶೇ 83ರಷ್ಟನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. 2006ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಸುಮಾರು 71 ಡಾಲರ್/ಬ್ಯಾರಲ್ ಇತ್ತು ಮತ್ತು ಆ ಸಂದರ್ಭದಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ಸುಮಾರು 50ರೂ/ಲೀಟರ್ ಇತ್ತು. ಆ ನಂತರ ಕಚ್ಚಾತೈಲದ ಬೆಲೆ ಒಂದಷ್ಟು ಕುಸಿದಾಗಲೂ ಮತ್ತು ಈಗ ಸ್ಥಿರವಾಗಿ ಅಷ್ಟೇ ಇರುವಾಗಲೂ ಭಾರತದ ಆಂತರಿಕ ಬಳಕೆಯ ಪೆಟ್ರೋಲ್ ಬೆಲೆ ಮಾತ್ರ 84ರೂ/ಲೀಟರ್ ಆಗಿದೆ. ಕೆಲವು ನಗರಗಳಲ್ಲಿ ಅದು ಲೀಟರ್‍ಗೆ 92ರೂ ತಲುಪುವ ಹಂತದಲ್ಲಿದೆ. ತಮಾಷೆಯ ಸಂಗತಿಯೆಂದರೆ, ಭಾರತ ತಾನು ತರಿಸಿಕೊಂಡ ಕಚ್ಚಾತೈಲದಿಂದ ಅಕ್ಕಪಕ್ಕದ ರಾಷ್ಟ್ರಗಳಾದ ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ ಮೊದಲಾದವುಗಳಿಗೆ ಒಂದಷ್ಟು ಭಾಗವನ್ನು ರಫ್ತು ಮಾಡುತ್ತದೆ. ಆದರೆ, ಈ ದೇಶಗಳಿಗೆ ತೈಲ ರಫ್ತು ಮಾಡುವ ಬೆಲೆಗಿಂತ ಹೆಚ್ಚು ಬೆಲೆಗೆ ತನ್ನದೇ ದೇಶದಲ್ಲಿ ತೈಲವನ್ನು ಮಾರುತ್ತಿದೆ! ಇಂತಹ ಗಂಭೀರ ವಿಚಾರವನ್ನು ಸರಿಯಾದ ರೀತಿಯಲ್ಲಿ ಎತ್ತಿಕೊಂಡು ಹೋರಾಡುವಲ್ಲಿ ಒಂದೆಡೆ ವಿರೋಧ ಪಕ್ಷಗಳು ವಿಫಲವಾಗುತ್ತಿದ್ದಾವೆ ಹಾಗೂ ಮತ್ತೊಂದೆಡೆ ಸಾಮಾನ್ಯ ಜನರನ್ನು ಅತಿಯಾಗಿ ಬಾಧಿಸುವ ಈ ವಿಚಾರವನ್ನಿಟ್ಟುಕೊಂಡು ಸರ್ಕಾರವನ್ನು ಪ್ರಶ್ನಿಸಬೇಕಾದ ಮಾಧ್ಯಮಗಳು ಸರ್ಕಾರದ ಪರ ವಕೀಲಿಕೆ ಮಾಡಲು ತುದಿಗಾಲಿನಲ್ಲಿ ನಿಂತಿವೆ.
ಚಾರಿತ್ರಿಕವಾಗಿ, ಈ ವಿಚಾರದಲ್ಲಿ ಇರಾನ್ ಮತ್ತು ಭಾರತ ಸ್ನೇಹಯುತವಾದ ಬಾಂಧವ್ಯವನ್ನು ಹೊಂದಿವೆ ಹಾಗೂ ಸಂದರ್ಭ ಬಂದಾಗೆಲ್ಲ ಪರಸ್ಪರರಿಗೆ ನೆರವಾಗಿವೆ. ಆದರೆ, ಈಗ ದೊಡ್ಡಣ್ಣ ಅಮೇರಿಕಾದ ವ್ಯಾಪಾರ ನಿರ್ಭಂಧದ ಬೆದರಿಕೆಯ ಅಡಿಯಲ್ಲಿ, ಇರಾನ್ ಜೊತೆಗೆ ತೈಲ ವಹಿವಾಟು ಮುಂದುವರೆಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬೇಕಾದ ಇಕ್ಕಟ್ಟಿಗೆ ಭಾರತ ಸಿಲುಕಿದೆ. ಇದುವರೆಗೆ ಈ ವಿಚಾರ ಬಂದಾಗೆಲ್ಲ ಭಾರತ ಮಿಶ್ರ ಪ್ರತಿಕ್ರಿಯೆ ನೀಡುತ್ತಾ ಬಂದಿದೆ. ತಾನು ಇರಾನ್ ಜೊತೆಗೆ ವ್ಯಾಪಾರ ಮುಂದುವರೆಸುತ್ತೇನೆ; ಆದರೆ ಡಾಲರ್‍ಗಳಲ್ಲಲ್ಲ, ಬದಲಿಗೆ ಮನಮೋಹನ್ ಸಿಂಗ್ ಸರ್ಕಾರ ಆಗಿನ ನಿರ್ಭಂಧಗಳನ್ನು ಮೀರಲು ಉಪಾಯ ಮಾಡಿದಂತೆ ಭಾರತದ್ದೇ ಆದ ಯೂಕೋ ಬ್ಯಾಂಕುಗಳ ಮೂಲಕ ರುಪಾಯಿಯಲ್ಲಿ’ ಎಂಬಂತಹ ಸಂದೇಶ ನೀಡುತ್ತಿದೆ. ಇನ್ನೂ ಕೆಲವು ವರದಿಗಳಲ್ಲಿ ಭಾರತ, ಅಮೇರಿಕಾದ ಒತ್ತಡದ ಕಾರಣಕ್ಕೆ ತಾನು ಇರಾನ್ ಜೊತೆ ವ್ಯಾಪಾರ ಸಂಬಂಧ ಕಡಿದುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತಿದೆಯೇನೋ ಎಂಬ ಆತಂಕವನ್ನೂ ಕೂಡಾ ವ್ಯಕ್ತಪಡಿಸಿದೆ; ಇದು ಒಂದೇ ಹಂತದಲ್ಲಿ ಅಥವಾ ಹಂತ ಹಂತವಾಗಿ ನಡೆಯಬಹುದು ಎಂದೂ ಸೂಚಿಸುತ್ತದೆ. ಇರಾನಿನಿಂದ ತರಿಸಿಕೊಳ್ಳುತ್ತಿದ್ದ ಒಟ್ಟು ತೈಲ ಆಮದಿನ 12%ರಷ್ಟನ್ನು ಸೌದಿಯಿಂದ ತರಿಸಿಕೊಳ್ಳುವ ಬಗ್ಗೆ ಆಲೋಚಿಸುತ್ತಿದೆಯೆಂದು ವರದಿಗಳು ಹೇಳುತ್ತವೆ. ಆದರೆ ಇದರಿಂದ ಬಿಕ್ಕಟ್ಟೇನೂ ಬಗೆಹರಿಯುವುದಿಲ್ಲ. ಒಟ್ಟು ತೈಲ ಸರಪಳಿಯ ಶೇ.5ರಷ್ಟನ್ನು ಇರಾನ್ ಒಂದೇ ಉತ್ಪಾದಿಸುತ್ತಿದೆ. ಉಳಿದ ಎಲ್ಲ ತೈಲ ಉತ್ಪಾದಕ ದೇಶಗಳೂ ತಮ್ಮ ಸಾಮಥ್ರ್ಯವೆಷ್ಟಿದೆಯೋ ಅಷ್ಟೂ ಸಂಪೂರ್ಣ ತೈಲವನ್ನು ಈಗಾಗಲೇ ಉತ್ಪಾದಿಸುತ್ತಿವೆ. ಇರಾನನ್ನು ಈ ಸರಪಳಿಯಿಂದ ಹೊರಗಿಟ್ಟಿದ್ದೇ ಆದರೆ ಅದರಿಂದ ಉಂಟಾಗಬಹುದಾದ ಶೇ.5ರಷ್ಟು ಕೊರತೆಯನ್ನು ಪೂರೈಸಲು ಈ ಯಾವ ದೇಶಗಳೂ ಕೂಡಾ ಹೆಚ್ಚುವರಿ ಉತ್ಪಾದನೆ ಮಾಡುವ ಸ್ಥಿತಿಯಲ್ಲಿಲ್ಲ! ಆಗ ಮತ್ತೆ ಇನ್ನೊಂದು ಬಿಕ್ಕಟ್ಟಿಗೆ ಇದು ದಾರಿ ಮಾಡಿಕೊಡಬಲ್ಲದು.
ಒಟ್ಟಿನಲ್ಲಿ, ಯಾವ ರೀತಿಯಿಂದ ನೋಡಿದರೂ ಭಾರತವು ಕಚ್ಚಾತೈಲದ ಬೆಲೆಯ ವಿಚಾರದಲ್ಲಿ ಬಿಕ್ಕಟ್ಟೊಂದರೊಳಕ್ಕೆ ಪ್ರವೇಶಿಸುತ್ತಿದೆಯೆಂಬುದು ಖಚಿತ. ಈಗಾಗಲೇ ಏರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆಗಳು ನವೆಂಬರ್ ವೇಳೆಗೆ ಇನ್ನಷ್ಟು ಏರಲಿರುವ ಸೂಚನೆಗಳೇ ಕಾಣುತ್ತಿವೆ. ಬಹುಶಃ ಇದನ್ನು ಪ್ರಧಾನಿಯವರು ‘ದೀಪಾವಳಿಗೆ ದೇಶವಾಸಿಗಳಿಗೆ ನಮ್ಮ ಕೊಡುಗೆ’ ಎಂದೂ ಹೇಳಬಹುದೇನೋ! ಮೋದಿ ಆಡಳಿತಾವಧಿಯಲ್ಲಿ ಹೆಚ್ಚುತ್ತಿರುವ ಬೆಲೆಗಳು-ನಿರುದ್ಯೋಗ, ಕೋಮು ಸಂಘರ್ಷಗಳು, ಅಸ್ಥಿರಗೊಂಡಿರುವ ಆರ್ಥಿಕತೆಯೊಂದಿಗೆ ಜನಸಾಮಾನ್ಯರು ಆಳವಾದ ಸಾಮಾಜಿಕ, ಆರ್ಥಿಕ, ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಇನ್ನುಮುಂದೆ ಜನಸಾಮಾನ್ಯರನ್ನು ಸಂಬೋಧಿಸುವಾಗ ಪ್ರಧಾನಿಯವರು ಆಲೋಚಿಸಬೇಕು. ಏಕೆಂದರೆ ಅವರು ಈಗ `ಮಿತ್ರೋಂ’ ಆಗಿ ಉಳಿದಿಲ್ಲ.

– ಭರತ್ ಹೆಬ್ಬಾಳ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...