Homeಕರ್ನಾಟಕರಾಹುಲ್ ಗಾಂಧಿ ಹೋರಾಟವನ್ನು ಮಣ್ಣುಗೂಡಿಸಿದ ರಾಜ್ಯ ಸರ್ಕಾರ! ಕಾರಣ ಜೆಡಿಎಸ್ಸೋ? ಕಾಂಗ್ರೆಸ್ಸೋ?

ರಾಹುಲ್ ಗಾಂಧಿ ಹೋರಾಟವನ್ನು ಮಣ್ಣುಗೂಡಿಸಿದ ರಾಜ್ಯ ಸರ್ಕಾರ! ಕಾರಣ ಜೆಡಿಎಸ್ಸೋ? ಕಾಂಗ್ರೆಸ್ಸೋ?

- Advertisement -
- Advertisement -

| ನೀಲಗಾರ |

ಯಾವುದನ್ನು ರಾಹುಲ್ ಗಾಂಧಿ ಕಾಯ್ದೆ ಎಂದು ಹೇಳಲಾಗುತ್ತದೋ, ಯಾವುದನ್ನು ಮುಂದಿಟ್ಟುಕೊಂಡು ದೇಶಾದ್ಯಂತ ರೈತರು ಹೋರಾಟ ಮಾಡಿ ನರೇಂದ್ರ ಮೋದಿ ಸರ್ಕಾರವನ್ನು ಮಣಿಸಿದ್ದರೋ, ಆ ವಿಚಾರದಲ್ಲಿ ರಾಹುಲ್ ಗಾಂಧಿ ಪ್ರತಿಪಾದಿಸಿದ ಆಶಯವನ್ನೇ ರಾಜ್ಯ ಸರ್ಕಾರವು ಮಣ್ಣುಗೂಡಿಸಿದೆ. ಇನ್ನೂ ಆಶ್ಚರ್ಯದ ಸಂಗತಿಯೆಂದರೆ, ಸಮ್ಮಿಶ್ರ ಸರ್ಕಾರದ ಎರಡೂ ಅಂಗಪಕ್ಷಗಳ ವಕ್ತಾರರನ್ನು ‘ಪತ್ರಿಕೆ’ಯು ಮಾತನಾಡಿಸಿತು. ಕಾಂಗ್ರೆಸ್‍ನ ವಕ್ತಾರರಿಗೆ ಇಂತಹದೊಂದು ಬೆಳವಣಿಗೆ ಆಗಿರುವುದರ ಕುರಿತು ಮಾಹಿತಿಯೇ ಇಲ್ಲ! ಮಾಹಿತಿ ಹೊಂದಿರುವ ಜೆಡಿಎಸ್‍ನ ವಕ್ತಾರರು, ಸಮಸ್ಯೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಂದಾಯ ಮಂತ್ರಿ ದೇಶಪಾಂಡೆಯ ಮೇಲೆ ದೋಷ ಹೊರಿಸಿದರು.

ಸ್ವತಃ ತಮ್ಮ ಮೈತ್ರಿಕೂಟದ ನೀತಿಗಳಿಗೇ ಬದ್ಧರಾಗಿರದ ಈ ಪಕ್ಷಗಳ ಸ್ಥಳೀಯ ನಾಯಕರುಗಳು ಬಿಜೆಪಿಯ ನೀತಿಗಳ ವಿರುದ್ಧ ಕಾಟಾಚಾರಕ್ಕೆ ಮಾತ್ರ ಪ್ರತಿಭಟನೆ ಮಾಡುತ್ತಾರೆಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ, ಈ ಎರಡೂ ಪಕ್ಷಗಳ ಸ್ಥಳೀಯ ನಾಯಕರುಗಳು ಈ ಹಿಂದೆ ಮೋದಿ ಸರ್ಕಾರದ ಸದರಿ ತಿದ್ದುಪಡಿಯ ವಿರುದ್ಧ ಕರ್ನಾಟಕದಲ್ಲೂ ಪ್ರತಿಭಟನೆ ನಡೆಸಿದ್ದರು!! ಇದೀಗ ಅದನ್ನೇ ತಾವೂ ಜಾರಿಗೆ ತರಲು ಹೊರಟಿದ್ದಾರೆ.

ನಿನ್ನೆ (ಜೂನ್ 10ರಂದು) ರಾಜ್ಯದ ವಿವಿಧ ಭಾಗಗಳಲ್ಲಿ ರೈತಸಂಘವು ಇದನ್ನು ಖಂಡಿಸಿ ಹೆದ್ದಾರಿ ತಡೆಯನ್ನು ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯು ರಾಜ್ಯ ಸರ್ಕಾರದ ವಿರುದ್ಧ ಆಗಿದ್ದರಿಂದ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಬೇಕಿತ್ತು. ಆದರೆ, ಅದರ ಹಿಂದೆ ನರೇಂದ್ರ ಮೋದಿ ಸರ್ಕಾರದ ನಿಲುವನ್ನೂ ವಿರೋಧ ಮಾಡುವುದರಿಂದ ಯಾವ ಟಿವಿ ಚಾನೆಲ್‍ಗೂ ಅದೊಂದು ದೊಡ್ಡ ಸುದ್ದಿ ಎನಿಸಲಿಲ್ಲ. ಅದರ ಜೊತೆಗೆ ಗಿರೀಶ್ ಕಾರ್ನಾಡರ ನಿಧನದ ಕಾರಣಕ್ಕೂ ಮಾಧ್ಯಮಗಳು ಅದರ ಕಡೆಗೆ ಗಮನ ಕೊಡಲಿಲ್ಲ. ಆದರೆ, ರಾಜ್ಯದ ಸಮ್ಮಿಶ್ರ ಸರ್ಕಾರದ ಅತೀ ದೊಡ್ಡ ತಪ್ಪು ನೀತಿಯ ವಿರುದ್ಧ ನಡೆದ ಮಹತ್ವದ ಪ್ರತಿಭಟನೆ ಇದಾಗಿದೆ.

2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ದೇಶಾದ್ಯಂತ ಅದು ರೈತರ ಪ್ರತಿಭಟನೆಯನ್ನು ಎದುರಿಸಬೇಕಾಗಿ ಬಂದಿತ್ತು. ಅದಕ್ಕೆ ಕಾರಣ ಭೂಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ತಂದ ತಿದ್ದುಪಡಿ. ಈ ಭೂಸ್ವಾಧೀನ ಕಾಯ್ದೆಯು ಯುಪಿಎ ಸರ್ಕಾರದಲ್ಲಿ ಜಾರಿಗೆ ಬಂದಿತ್ತು. ವಾಸ್ತವದಲ್ಲಿ ಭಾರತದಲ್ಲಿ ರೈತರ ಭೂಮಿಯನ್ನು ವಿವಿಧ ಯೋಜನೆಗಳಿಗಾಗಿ ಸರ್ಕಾರವು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದರೆ 1894ರಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ ಭೂಸ್ವಾಧೀನ ಕಾಯ್ದೆಯನ್ನೇ ಬಳಸಲಾಗುತ್ತಿತ್ತು. ಅದು ಏಕಪಕ್ಷೀಯವಾಗಿದ್ದು, ರೈತವಿರೋಧಿಯಾಗಿತ್ತು.

ಅದರ ಪರಿಣಾಮವಾಗಿ ದೇಶದ ವಿವಿಧ ಭಾಗಗಳಲ್ಲಿ ‘ಅಭಿವೃದ್ಧಿಯ ಹೆಸರಿನಲ್ಲಿ’ ಸರ್ಕಾರಗಳು ಭೂಸ್ವಾಧೀನಕ್ಕೆ ಮುಂದಾದಾಗಲೆಲ್ಲಾ ಭಾರೀ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತಿತ್ತು. ದಿನೇ ದಿನೇ ಅವುಗಳ ತೀವ್ರತೆ ಮತ್ತು ಪ್ರಮಾಣ ಹೆಚ್ಚಾಗುತ್ತಲೆ ಬಂದಿತ್ತು. ಒರಿಸ್ಸಾದ ಕಾಶೀಪುರ, ನಿಯಮಗಿರಿ, ಕಳಿಂಗ ಇತ್ಯಾದಿಗಳೆಡೆ ನಡೆದ ಪ್ರತಿಭಟನೆಗಳು ಮತ್ತು ಪಶ್ಚಿಮ ಬಂಗಾಳದ ಸಿಂಗೂರು ಮತ್ತು ನಂದಿಗ್ರಾಮಗಳಲ್ಲಿ ನಡೆದ ಪ್ರತಿಭಟನೆಗಳು ಹಿಂಸಾರೂಪವನ್ನು ತಳೆದಿದ್ದವು. ಏಕೆಂದರೆ, ಅದೇನೇ ಆದರೂ ಭೂಮಿಯನ್ನು ವಶಪಡಿಸಿಕೊಂಡೇ ತೀರುತ್ತೇವೆಂದು ಸರ್ಕಾರಗಳು ಹೊರಟು, ಅನಿವಾರ್ಯವಾಗಿ ರೈತರು ತಿರುಗಿಬಿದ್ದಿದ್ದರು.

ಇವುಗಳ ಪರಿಣಾಮವಾಗಿ ಭೂಸ್ವಾಧೀನದಲ್ಲಿನ ಸಮಸ್ಯೆಗಳಿಂದಾಗಿ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿದ್ದವು. ಯುಪಿಎ -2ರ ಸಂದರ್ಭದಲ್ಲಿ ಇದನ್ನು ಪರಿಶೀಲಿಸಿದ ಸರ್ಕಾರವು ಭೂಸ್ವಾಧೀನ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ತರಲು ಹೊರಟಿತು. ಆಗ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್‍ಗಾಂಧಿ ಅದರಲ್ಲಿ ನೇರವಾಗಿ ಮಧ್ಯಪ್ರವೇಶಿಸಿದರು. ಊಹೆಗೆ ನಿಲುಕದಷ್ಟು ಪ್ರಮಾಣದಲ್ಲಿ ಸದರಿ ಕಾಯ್ದೆಯನ್ನು ರೈತಪರವಾಗಿಸಲಾಯಿತು. ಅಂತಿಮವಾಗಿ ಭೂಸ್ವಾಧೀನ ಕಾಯ್ದೆ ಎಂಬ ಹೆಸರನ್ನೇ ಬದಲಿಸುವಷ್ಟು ಮಟ್ಟಿಗೆ ಅದು ಜನಪರವಾಗಿತ್ತು. ಅದರ ಹೊಸ ಹೆಸರು ‘ಭೂಸ್ವಾಧೀನ ಮಾಡಿಕೊಳ್ಳುವಾಗ ನ್ಯಾಯಯುತವಾದ ಪರಿಹಾರ ನೀಡುವುದು ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳುವ ಕಾಯ್ದೆ’ ಎಂದಾಗಿತ್ತು! ಹಾಗಾಗಿಯೇ ಇದನ್ನು ರಾಹುಲ್‍ಗಾಂಧಿ ಕಾಯ್ದೆ ಎಂದೂ ಕೆಲವು ಕಾಂಗ್ರೆಸ್ ನಾಯಕರು ಹೇಳುತ್ತಿದ್ದುದುಂಟು.

ಇಂತಹ ಹಲವಾರು ಜನಪರ ಕ್ರಮಗಳಂತೆ, ಇದರ ಬಗ್ಗೆಯೂ ಯುಪಿಎ ಸರ್ಕಾರವು ಹೆಚ್ಚೇನೂ ಪ್ರಚಾರ ಮಾಡಿಕೊಳ್ಳಲಿಲ್ಲ. ಇದರ ಬಗ್ಗೆ ಜನರಿಗೆ ಗೊತ್ತಾಗಿದ್ದು, ಯುಪಿಎ ಸೋತು ಎನ್‍ಡಿಎ ಅಧಿಕಾರಕ್ಕೆ ಬಂದ ಮೇಲೆ. ಈ ಕಾಯ್ದೆಯಿದ್ದರೆ ಭೂಸ್ವಾಧೀನ ಸಾಧ್ಯವೇ ಇಲ್ಲ ಎಂದು ಬಗೆದ ಮೋದಿ ಸರ್ಕಾರವು 2014ರಲ್ಲೇ ಸದರಿ ಕಾಯ್ದೆಗೆ ಗಂಭೀರ ತಿದ್ದುಪಡಿಗಳನ್ನು ಸುಗ್ರೀವಾಜ್ಞೆಯ ಮೂಲಕ ತರಲು ಹೊರಟಿತು. ಇದಕ್ಕೆ ದೇಶದ ಎಲ್ಲೆಡೆ ತೀವ್ರವಾದ ಪ್ರತಿಭಟನೆಗಳು ಶುರುವಾದವು. ಸ್ವತಃ ಬಿಜೆಪಿಯ ರೈತ ವಿಭಾಗವಾದ ಭಾರತೀಯ ಕಿಸಾನ್ ಸಂಘವೂ ವಿರೋಧಿಸಿತು. ಸುಗ್ರೀವಾಜ್ಞೆಯ ಅವಧಿ ಮುಗಿಯುತ್ತಾ ಬಂದಂತೆ, ಅದರ ನವೀಕರಣವಾಗುವ ಹೊತ್ತಿಗೆ ಪ್ರತಿಭಟನೆಗಳು ತಾರಕಕ್ಕೇರಿದವು. ತನ್ನ ಹಲವು ನಾಯಕರನ್ನು ವಿವಿಧ ಕಡೆಗೆ ಕಳಿಸಿ, ಜಿಲ್ಲಾ ಮಟ್ಟದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಬಿಜೆಪಿಯು ಹಮ್ಮಿಕೊಂಡಿತು. ಆದರೂ ವಿರೋಧ ಕಡಿಮೆಯಾಗಲಿಲ್ಲ.

ಅಂತಿಮವಾಗಿ ಮೋದಿ ಸರ್ಕಾರವು ಸದರಿ ತಿದ್ದುಪಡಿಯ ಪ್ರಯತ್ನವನ್ನು ಕೈಬಿಟ್ಟಿತು. ‘ರಾಜ್ಯ ಸರ್ಕಾರಗಳು ತಮಗೆ ಬೇಕಾದ ರೀತಿಯಲ್ಲಿ ಮಾಡಿಕೊಳ್ಳಲಿ’ ಎಂದು ಕೇಂದ್ರವು ಹೇಳಿತು. ಆದರೆ, ಕೆಲವು ಬಿಜೆಪಿ ಆಡಳಿತದ ಸರ್ಕಾರಗಳೂ ಒಳಗೊಂಡಂತೆ, ಬಿಜೆಪಿಯೇತರ ಪಕ್ಷಗಳಿದ್ದ ಸರ್ಕಾರಗಳು ಅಂತಹ ತಿದ್ದುಪಡಿಗಳನ್ನು ತಂದಿರಲಿಲ್ಲ. ಆದರೆ, ಕರ್ನಾಟಕದಲ್ಲಿ ಅಂತಹ ಪ್ರಯತ್ನಕ್ಕೆ ಮುಂದಾಗಲಾಗಿದೆ. ಅದೂ ಸ್ವತಃ ಕಾಂಗ್ರೆಸ್ ಮತ್ತು ಅದರ ಮೈತ್ರಿಪಕ್ಷ ಜೆಡಿಎಸ್ ಅಧಿಕಾರದಲ್ಲಿದ್ದಾಗ!

2019ರ ಫೆಬ್ರವರಿಯಲ್ಲಿ ರೈತರ ಪಾಲಿಗೆ ಕರಾಳ ಶಾಸನವಾಗಿರುವ ದೊಡ್ಡ ಬಂಡವಾಳದಾರರು, ಬಹುರಾಷ್ಟ್ರೀಯ ಸಂಸ್ಥೆಗಳ ಲೂಟಿಗೆ ನೆರವಾಗುವ ಈ ಕಾಯ್ದೆಯನ್ನು ರಾಜ್ಯ ಸರ್ಕಾರವು ತಂದಿತು. ‘ಭೂ ಸ್ವಾಧೀನ, ಪುನರ್ವಸತಿ ಹಾಗೂ ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಹಕ್ಕು ಕರ್ನಾಟಕ ತಿದ್ದುಪಡಿ ಮಸೂದೆ -2019’ ಯನ್ನು ವಿಧಾನಸಭೆಯು ಅಂಗೀಕರಿಸಿತು.

ಫೆಬ್ರವರಿ 6 ರಿಂದ 13 ರವರೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಏನೊಂದು ಚರ್ಚೆ ಮಾಡದೇ, ಬಿಜೆಪಿಯ ಸಭಾತ್ಯಾಗದಿಂದುಂಟಾದ ಪರಿಸ್ಥಿತಿಯನ್ನು ವಿಧಾನಸಭೆಯಲ್ಲಿ ದುರುಪಯೋಗಪಡಿಸಿಕೊಂಡು ಸರ್ಕಾರ ಈ ಮಸೂದೆ ಅಂಗೀಕರಿಸಿತು. ರೈತರ ಮತ್ತು ರೈತಸಂಘಗಳ ಜೊತೆ ಚರ್ಚೆ ನಡೆಸುವ ಸೌಜನ್ಯವನ್ನು ಸಹಾ ಸರಕಾರ ತೋರದಿರುವುದು ದುರಾದೃಷ್ಟಕರವಾಗಿದೆ.

ಏನೇನು ತಿದ್ದುಪಡಿಗಳಿವೆ?
ರೈತರ ಜಮೀನುಗಳನ್ನು ಯಾವುದೇ ಒಪ್ಪಿಗೆಯಿಲ್ಲದೇ ಭೂಮಿ ಪಡೆಯಬಹುದು. ಭೂಸ್ವಾಧೀನದಿಂದ ಸಮಾಜ ಹಾಗೂ ಪರಿಸರದ ಮೇಲಾಗುವ ಪರಿಣಾಮಗಳನ್ನಾಗಲೀ ಮತ್ತು ದೇಶದ, ರಾಜ್ಯದ ಆಹಾರ ಭದ್ರತೆ ಹಾಗೂ ಆಹಾರದ ಸ್ವಾವಲಂಬನೆಯ ಮೇಲಾಗುವ ದುಷ್ಪರಿಣಾಮಗಳನ್ನಾಗಲೀ ಪರಿಗಣಿಸದೇ, ಪುನರ್ವಸತಿ ಕ್ರಮಗಳನ್ನು ದುರ್ಬಲಗೊಳಿಸುವ ಹಾಗೂ ಬೇಕಾಬಿಟ್ಟಿ ದರಕ್ಕೆ ಸ್ವಾಧೀನ ಮಾಡುವ ದುರುದ್ದೇಶವನ್ನು ಹೊಂದಿದೆ. ಇದು ಈ ಹಿಂದೆ ಕೇಂದ್ರದ ನರೇಂದ್ರ ಮೋದಿ ಸರಕಾರ ಮೂರು ಬಾರಿ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಲು ಯತ್ನಿಸಿದುದರ ಪಡಿಯಚ್ಚಾಗಿದೆ.

ಕಾಯ್ದೆಯಲ್ಲಿ ಈ ಮೊದಲು ಭೂಸ್ವಾಧೀನಕ್ಕೆ ಶೇ.80 ರಷ್ಟು ರೈತರ ಒಪ್ಪಿಗೆ ಪಡೆಯಬೇಕಿತ್ತು, ಕೈಗಾರಿಕಾ ಪ್ರದೇಶಾಭಿವೃದ್ಧಿ, ನಗರೀಕರಣ, ರಸ್ತೆಗೆ ಸೇರಿದಂತೆ 6 ಅಂಶಗಳಿಗೆ ಮಾತ್ರ ಭೂಸ್ವಾಧೀನಕ್ಕೆ ಅವಕಾಶ ಇತ್ತು. ಆದರೀಗ ಉದ್ದೇಶಿತ ತಿದ್ದುಪಡಿ ಈ 6 ಅಂಶಗಳನ್ನು ಸೇರಿಸಿಲ್ಲ. ಅಂದರೆ, ಯಾವುದಕ್ಕೆ ಬೇಕಾದರೂ ಸ್ವಾಧೀನ ಮಾಡಬಹುದು ಎಂದರ್ಥ.

ದುರಂತವೆಂದರೆ, ಕಾಂಗ್ರೆಸ್ ವಕ್ತಾರರನ್ನು ಈ ಕುರಿತು ಮಾತನಾಡಿಸಿದಾಗ ಅವರಿಗೆ ಇದರ ಅರಿವಿದ್ದಂತಿರಲಿಲ್ಲ. ಇನ್ನು ಜೆಡಿಎಸ್ ವಕ್ತಾರರು ಸಮಸ್ಯೆ ತಮ್ಮ ಪಕ್ಷದ್ದಲ್ಲವೆಂತಲೂ, ತಾನು ವ್ಯಕ್ತಿಗತವಾಗಿ ವಿರೋಧಿಸುತ್ತೇನೆಂದೂ ಹೇಳಿದರು. ರಮೇಶ್ ಬಾಬು ಅವರ ವ್ಯಕ್ತಿಗತ ನಿಲುವನ್ನು ನಾವು ಸ್ವಾಗತಿಸಬಹುದಾದರೂ, ಅವರ ಪಕ್ಷ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು. (ಬಾಕ್ಸ್‍ಗಳನ್ನು ನೋಡಿ).
ಇಂತಹ ಸರ್ಕಾರದಿಂದ ಏನು ನಿರೀಕ್ಷಿಸಬಹುದು ಎಂಬುದು ಓದುಗರ ನಿರ್ಧಾರಕ್ಕೆ ಬಿಟ್ಟಿದ್ದು.

ವೈಯಕ್ತಿಕ ವಿರೋಧವಿದೆ, ಮುಖ್ಯಮಂತ್ರಿಯವರ ಗಮನಕ್ಕೂ ತರುತ್ತೇನೆ

ರಮೇಶ್ ಬಾಬು, ಜೆಡಿಎಸ್ ವಕ್ತಾರರು

2013ರಲ್ಲಿ ಯುಪಿಎ ಸರ್ಕಾರ ಭೂಸ್ವಾಧೀನ ಕಾಯ್ದೆ ತಂದಿತ್ತು. ಅದು ರೈತರ ಹಿತದೃಷ್ಟಿಯಿಂದ ಬಹಳ ಒಳ್ಳೆಯ ಕಾಯ್ದೆ, ಅದನ್ನು ಸ್ವಾಗತಿಸಲೇಬೇಕು. ಆದರೆ ಸರ್ಕಾರದ ಖಜಾನೆಯ ಹಣವೆಲ್ಲವೂ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಕೊಡಬೇಕಾಗುತ್ತದೆ ಎಂಬ ಭಾವನೆಯಲ್ಲಿ ಕರ್ನಾಟಕದಲ್ಲಿ ಅಧಿಕಾರಿಗಳು ಪರಿಹಾರ ಕೊಡುವ ವಿಷಯದಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಇದರಿಂದಾಗಿ ಸಮ್ಮಿಶ್ರ ಸರ್ಕಾರವಿದ್ದರೂ ಸಹ ದೇಶಪಾಂಡೆಯವರು ಕಂದಾಯ ಸಚಿವರಾಗಿ ತಿದ್ದುಪಡಿ ತಂದಿದ್ದಾರೆ. ದುರಂತವೆಂದರೆ ಸದನದಲ್ಲಿ ಚರ್ಚೆಯಾಗದೆ ತಿದ್ದುಪಡಿ ಅಂಗೀಕಾರ ಮಾಡಿದ್ದಾರೆ. ಹಾಗಾಗಿ ಅಧಿಕಾರದಲ್ಲಿರುವ ಎರಡೂ ಪಕ್ಷಗಳು ಅದರ ಜವಾಬ್ದಾರಿ ಹೊತ್ತುಕೊಳ್ಳಬೇಕು. ಈ ತಿದ್ದುಪಡಿ ರೈತರ ಹಿತಕ್ಕೆ ಮಾರಕವಾಗಿದ್ದು, ಅದನ್ನು ವೈಯಕ್ತಿಕವಾಗಿ ನಾನು ವಿರೋಧಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ.
– ರಮೇಶ್ ಬಾಬು, ಜೆಡಿಎಸ್ ವಕ್ತಾರರು.

ಈ ಕಾಯ್ದೆಯ ಹಿಂದೆ ದೊಡ್ಡ ಉದ್ದಿಮೆಪತಿಗಳಿದ್ದಾರೆ

ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ

ಮಣ್ಣಿನ ಮಕ್ಕಳೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಬಾಯಿಗೆ ಮಣ್ಣಾಕುವ ಸಂಚು ಹೆಣೆದಿದ್ದಾರೆ. ಅವರ ಹಿಂದೆ ದೊಡ್ಡ ದೊಡ್ಡ ಉದ್ಯಮಪತಿಗಳು ನಿಂತಿದ್ದಾರೆ. ಅವರ ಹಿತಕ್ಕಾಗಿ ರೈತ ಪರಿಹಾರ ಕಾಯ್ದೆಯನ್ನು ತಿರುಚಿ ರೈತರ ಹಕ್ಕುಗಳನ್ನು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಕಂದಾಯ ಸಚಿವ ದೇಶಪಾಂಡೆ, ಹಿಂದಿನ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದರು. ಅವರಿಗೆ ಬಂಡವಾಳಿಗರ ಸ್ನೇಹ ಚೆನ್ನಾಗಿದೆ. ಅವರ ಹಿತಕ್ಕಾಗಿ ಡಿಕೆಶಿ ಜೊತೆಸೇರಿ ಈ ತಿದ್ದುಪಡಿಯನ್ನು ಜಾರಿಗೆ ತಂದಿದ್ದಾರೆ. ರೈತರ ಮರಣ ಶಾಸನವನ್ನು ಜಾರಿ ಮಾಡಿದ್ದೇ ಆದರೆ ರೈತರು ಅವರನ್ನು ರಾಜಕೀಯವಾಗಿ ಮಣಿಸುತ್ತಾರೆ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸುತ್ತೇವೆ.
ಸದರಿ ಕಾಯ್ದೆಯು ಎರಡೂ ಸದನಗಳಲ್ಲಿ ಅಂಗೀಕೃತವಾಗಿ ರಾಜ್ಯಪಾಲರ ಅನುಮೋದನೆಗೆ ಹೋಗಿದೆ. ಅದು ಇನ್ನೂ ಸದನದಲ್ಲಿ ಚರ್ಚೆಗೆ ಬಂದಿಲ್ಲ ಎನ್ನುವ ಕಾಂಗ್ರೆಸ್ ವಕ್ತಾರರು ಬಹುಶಃ ಎಲ್ಲಿದ್ದಾರೋ ಗೊತ್ತಿಲ್ಲ.
ಕೋಡಿಹಳ್ಳಿ ಚಂದ್ರಶೇಖರ್,
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ.

ಕಾಯ್ದೆಯಿನ್ನೂ ಸದನದಲ್ಲಿ ಚರ್ಚೆಗೇ ಬಂದಿಲ್ಲ; ತಿದ್ದುಪಡಿ ಮಾಡುವುದಾದರೆ ಅದು ದೇಶಪಾಂಡೆ ಅವರ ವ್ಯಕ್ತಿಗತ ಅಭಿಪ್ರಾಯ

ನಟರಾಜ್ ಗೌಡ, ಕಾಂಗ್ರೆಸ್ ವಕ್ತಾರರು

2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ ಜಾರಿಗೆ ತಂದ ಕಾಯಿದೆ ಭೂಸ್ವಾಧೀನ ಪರಿಹಾರ ಕಾಯಿದೆ. ಇದನ್ನು ಹಾಗೆಯೇ ಉಳಿಸಿಕೊಳ್ಳುವುದು ಕಾಂಗ್ರೆಸ್‍ನ ಜವಾಬ್ದಾರಿಯೂ ಕೂಡ. ರಸ್ತೆ ಅಗಲೀಕರಣ, ವಿದ್ಯುತ್ ವ್ಯವಸ್ಥೆ ಮತ್ತು ಅಣೆಕಟ್ಟು ನಿರ್ಮಾಣ ಈ ಮೂರು ವಿಷಯಗಳಲ್ಲಿ ರೈತರಿಂದ ಭೂಮಿಯನ್ನು ಅವರ ಅನುಮತಿ ಇಲ್ಲದೆ, ನಿರ್ದಿಷ್ಟ ಪರಿಹಾರ ಕೊಟ್ಟು ಭೂಮಿಯನ್ನು ಪಡೆದುಕೊಳ್ಳಬಹುದು. ಇನ್ನಾವುದೇ ಉದ್ದೇಶಕ್ಕೆ ಅನುಮತಿ ಇಲ್ಲದೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಇಂದು ಚರ್ಚೆಯಾಗುತ್ತಿರುವ ತಿದ್ದುಪಡಿಯ ವಿಚಾರ ದೇಶಪಾಂಡೆಯವರ ಅಭಿಪ್ರಾಯವಿರಬಹುದೇ ಹೊರತು, ಅದು ಸರ್ಕಾರದ್ದಾಗಲು ಸಾಧ್ಯವಿಲ್ಲ. ಆ ವಿಚಾರ ಇನ್ನೂ ಸದನದಲ್ಲಿ ಚರ್ಚೆಯೂ ಆಗಿಲ್ಲ. ಒಂದು ವೇಳೆ ರೈತರಿಗೆ ತೊಂದರೆ ಕೊಡುವಂತಹ ತಿದ್ದುಪಡಿಗಳೊಂದಿಗೆ ಸದನದಲ್ಲಿ ಚರ್ಚೆಗೆ ಬಂದರೆ ಈ ತಿದ್ದುಪಡಿಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಈ ಕಾಯ್ದೆಯಿಂದ ರೈತರಿಗೆ ತೊಂದರೆಯಾಗಲು ನಾವು ಬಿಡುವುದಿಲ್ಲ.
– ನಟರಾಜ್ ಗೌಡ, ಕಾಂಗ್ರೆಸ್ ವಕ್ತಾರರು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...